ಪ್ರಸ್ತುತ ವರ್ಷ ಉತ್ತರ ಭಾರತದಲ್ಲಿನ ಸ್ಥಿತಿಯನ್ನು ಸರಿಗಟ್ಟುವಷ್ಟರ ಮಟ್ಟಿಗೆ ಚಳಿ ಇದೆ. ಚಳಿಗೆ ಬೆಚ್ಚಗೆ ಹೊದ್ದು ಮಲಗಿದರೆ ಸೂರ್ಯ ನೆತ್ತಿಯ ಮೇಲೆ ಬಂದರೂ ಏಳಲು ಮನಸ್ಸಾಗುವುದಿಲ್ಲ. ದೇಹವನ್ನು ಬೆಚ್ಚಗಿಡದೆ ಚಳಿಗೆ ಮೈಯೊಡ್ಡಿದರೆ ನಿದ್ರೆಯೂ ಬಾರದು. ಸಾಮಾನ್ಯ ಚಳಿಯನ್ನೇ ಸಹಿಸಲಾರದೆ ನಡುಗುತ್ತೇವೆ. ಇನ್ನು ಚಳಿಗಾಲದಲ್ಲಿ ಉತ್ತರ ಭಾರತದ ಜನರದ್ದು ಮಂಜು/ಹಿಮದಿಂದಾಗಿ ಹೇಳತೀರದ ಕಡುಕಷ್ಟದ ದಿನಗಳು. ಹಿಮಪರ್ವತಗಳ ಜನರ ಬದುಕು ಇನ್ನೂ ದುಸ್ತರ.
ಇಂತಹ ಚಳಿ, ಹಿಮಪರ್ವತಗಳಲ್ಲಿ ತಪಸ್ಸು ಮಾಡಿದ ಅನೇಕ ಸಾಧಕರಿದ್ದಾರೆ. ಅವರೆಲ್ಲ ದೇಹವನ್ನು ಬೆಚ್ಚಗಿಡಲು ಬೆಂಕಿ, ಬಿಸಿ ಆಹಾರ ಸೇವನೆ, ಪ್ರಾಣಿಗಳ ತುಪ್ಪಳಗಳುಳ್ಳ ಉಡುಪುಗಳ ಮೊರೆಹೋದರು. ಇನ್ನು ಅನೇಕರು ದೇಹವನ್ನು ದಂಡಿಸುವ ಮೂಲಕ ದೇಹದ ಬಿಸಿಯನ್ನು ಕಾಯ್ದುಕೊಂಡರು.
ಚಳಿಗಾಲದ ಇಂತಹ ಸಂದರ್ಭದಲ್ಲಿ ಯೋಗಿಗಳು ಕಂಡುಕೊಂಡದ್ದು ತನ್ನ ದೇಹದೊಳಗೇ ಶಾಖ ಉತ್ಪತ್ತಿ ಮಾಡುವ ಯೋಗನಿದ್ರಾಸನದಂತಹ ಆಸನಗಳು ಮತ್ತು ಕುಂಭಕ ಸಹಿತ ಪ್ರಾಣಾಯಾಮಗಳನ್ನು ಹತ್ತಾರು ಪ್ರಯೋಜನಗಳನ್ನು ನೀಡುವ ಜತೆಗೆ ದೇಹವು ಬಲುಬೇಗ ಶಾಖಗೊಳ್ಳುವಂತೆ ಮಾಡುವ ಯೋಗನಿದ್ರಾಸನ ಚಳಿಗಾಲಕ್ಕೆ ಹೆಚ್ಚು ಸೂಕ್ತವಾದುದು.
ಯೋಗನಿದ್ರೆ ಎಂದರೇನು?
ನಿದ್ರೆ ಎಂದರೆ ಯಾವುದರ ಅರಿವೂ ಇಲ್ಲದ ಅಂದರೆ ಎಚ್ಚರವಿಲ್ಲದ ಸ್ಥಿತಿ. ಯೋಗನಿದ್ರೆ ಎಂದರೆ; ನಿದ್ರೆ ಹಾಗೂ ಎಚ್ಚರಗಳ ನಡುವಣ ಸ್ಥಿತಿ. ಆದರೆ, ಕನಸಿನ(ಸ್ವಪ್ನ)ಸ್ಥಿತಿ ಅಲ್ಲ. ಅಗೋಚರ ಚೈತನ್ಯ ಅರಿಯುವ ಎಚ್ಚರ ಮತ್ತು ಪ್ರಾಪಂಚಿಕ ವ್ಯವಹಾರದ ಮರೆವು. ಇದೇ ಯೋಗನಿದ್ರೆ. ದೇಹ ಮತ್ತು ಮನಸ್ಸಿಗೆ ಆಂತರಿಕ ಜಾಗೃತಿಯೊಂದಿಗೆ ವಿಶ್ರಾಂತಿಯನ್ನು ಒದಗಿಸುತ್ತದೆ. ಸುಖನಿದ್ರೆಯ ಅನುಭವನ್ನು ಉಂಟುಮಾಡುತ್ತದೆ. ಆದರೆ, ನಿದ್ರೆಗೆ ಜಾರುವುದಿಲ್ಲ. ಯೋಗನಿದ್ರಾಸನ ಅಭ್ಯಾಸದ ಮೂಲಕ ಈ ಅಂಶಗಳು ಅರಿವಿಗೆ ಬರುತ್ತವೆ.
ಯೋಗನಿದ್ರಾಸನ
ಕಾಲುಗಳು ತಲೆಯ ಹಿಂಬದಿಗಿದ್ದು, ಕೈಗಳು ಬೆನ್ನಹಿಂದೆ ಹೆಣೆದಿಟ್ಟು, ತೊಡರಿಸಿಟ್ಟ ಪಾದಗಳು ತಲೆಗೆ ದಿಂಬಾಗಿಯೂ, ಬೆನ್ನು ಹಾಸಿಗೆಯಾಗಿಯೂ ಇದ್ದು; ದೇಹವು ಬಲುಬೇಗ ಶಾಖವನ್ನು ಹೊಂದುವ ಮೂಲಕ ಅಭ್ಯಾಸ ನಡೆಯುತ್ತದೆ.
ಅಭ್ಯಾಸಕ್ರಮ: ನೆಲಕ್ಕೆ ಬೆನ್ನೊರಗಿಸಿ ಮಲಗಿ. ಕಾಲುಗಳನ್ನು ಮಡಿಚಿ, ಕೈಗಳಿಂದ ಬಲ ಕಾಲ್ಗಿಣ್ಣನ್ನು ಹಿಡಿದು, ಭುಜವನ್ನು ಸುತ್ತುವರಿದು ತಲೆಯ ಹಿಂಬದಿಗೆ ತಂದು ಇರಿಸಿ. ಬಳಿಕ, ಅದೇ ಕ್ರಮದಲ್ಲಿ ಎಡಗಾಲನ್ನು ತಲೆಯ ಹಿಂಬದಿಗೆ ತಂದು ಮೊದಲು ಇರಿಸಿದ್ದ ಕಾಲಿನ ಹಿಂದೆ ಕೂರಿಸಿ. ಕೈಗಳ ನೆರವಿನಿಂದ ಪಾದಗಳನ್ನು ತೊಡರಿಸಿ, ಕಾಲುಗಳನ್ನು ತುಸು ಕೆಳಕ್ಕೊತ್ತಿ ಭುಜ, ಎದೆ, ತಲೆಯನ್ನು ಮೇಲಕ್ಕೆ ಸೆಳೆಯಿರಿ. ತೊಡರಿಸಿಟ್ಟ ಕಾಲುಗಳ ಮೇಲೆ ತಲೆಯನ್ನೊರಗಿಸಿಟ್ಟು ದಿಂಬಿನಂತೆ ಆಸರೆ ಪಡೆಯಿರಿ. ಕೈಗಳನ್ನು ಚಾಚಿ ಬೆನ್ನಿನ ಕೆಳಗೆ ತಂದು ಬೆರಳುಗಳನ್ನು ಹೆಣೆದಿಡಿ. ಹಾಸಿಗೆಯಂತೆ ನೆಲಕ್ಕೊರಗಿರುವ ಬೆನ್ನಿನ ಮೇಲೆ ದೇಹ ನೆಲೆಸಿದ್ದು, ವಿಶ್ರಾಂತಿ ಪಡೆಯುತ್ತದೆ.
ಅಂತಿಮ ಸ್ಥಿತಿಯಲ್ಲಿ ಸರಳ ಉಸಿರಾಟ ನಡೆಸುತ್ತಾ 30 ಸೆಕೆಂಡಿನಿಂದ ಒಂದು ನಿಮಿಷದ ವರೆಗೆ ನೆಲೆಸಿ. ಅವರೋಹಣ ಮಾಡುವಾಗ ಕೈಗಳ ನೆರವಿನಿಂದ ಕಾಲುಗಳನ್ನು ಬಿಡಿಸಿಟ್ಟು, ವಿರಮಿಸಿ. ಬಳಿಕ, ವಿರುದ್ಧ ದಿಕ್ಕಿನಲ್ಲಿ
(ಕಾಲುಗಳ ತೊಡರುವಿಕೆಯನ್ನು ಮೇಲು-ಕೆಳಗೆ ಮಾಡಿ) ಅಭ್ಯಾಸಿಸಿ.
ಫಲಗಳು
* ಬೆನ್ನು ಹೆಚ್ಚು ಹಿಗ್ಗುವ ಮೂಲಕ ಉತ್ತಮ ವಿಶ್ರಾಂತಿ ಪಡೆದು, ಹೆಚಿನ ಸುಖಾನುಭವ ನೀಡುತ್ತದೆ.
*ದೇಹವು ಬಹುಬೇಗ ಶಾಖೋತ್ಪತ್ತಿಯನ್ನು ಮಾಡುತ್ತದೆ. ಚಳಿಯಿಂದ ದೇಹವನ್ನು ರಕ್ಷಿಸುತ್ತದೆ.
* ಶ್ವಾಸಕೋಶ, ಕಿಬ್ಬೊಟ್ಟೆ ಅವಯವಗಳು ಹೆಚ್ಚು ಹಿಗ್ಗುತ್ತವೆ.
* ಮೂತ್ರಪಿಂಡ, ಪಿತ್ತಕೋಶ, ಗುಲ್ಮ ಹಾಗೂ ಜನನೇಂದ್ರಿಯಗಳ ಗ್ರಂಥಿಗಳು ಹುರುಪು ಪಡೆದು ಸರಿಯಾದ ಕಾರ್ಯನಿರ್ವಹಣೆಗೆ ನೆರವಾಗುತ್ತದೆ.
* ಕಿಬ್ಬೊಟ್ಟೆಯ ರೋಗಗಳ ನಿವಾರಣೆಗೆ ಸಹಕಾರಿ.
* ನರಮಂಡಲಕ್ಕೆ ಉತ್ತಮ ವಿಶ್ರಾಂತಿ ಲಭಿಸಿ, ದೇಹದಲ್ಲಿ ಹೆಚ್ಚು ಶಕ್ತಿ ಸಂಗ್ರಹವಾಗುತ್ತದೆ.
* ಬುದ್ಧಿಶಕ್ತಿ ಹಾಗೂ ಕ್ರಿಯಾಶೀಲ ಕಾರ್ಯ ನಿರ್ವಹಣೆ ವೃದ್ಧಿಗೆ ನೆರವು ನೀಡುತ್ತದೆ.
* ನಿದ್ರಾಹೀನತೆಯನ್ನು ತೊಡೆಯುತ್ತದೆ.
ಚಳಿ, ನೆಗಡಿ ತಡೆಯುವ ಇತರ ಆಸನಗಳು
* ಸರ್ವಾಂಗಾಸನ ಮತ್ತು ಶೀರ್ಷಾಸನ ಹಾಗೂ ಅದರ ಮುಂದುವರಿದ ಹಂತಗಳು.
* ಪಶ್ಚಿಮೋತ್ತಾನಾಸನ
* ಅರ್ಧಮತ್ಸ್ಯೇಂದ್ರಾಸನ
* ಉತ್ತಾನಾಸನ
* ಪಾಶಾಸನ
* ಊರ್ದ್ವಧನುರಾಸನ
* ಕೂರ್ಮಾಸನ ಹಾಗೂ ಸೂಪ್ತ ಕೂರ್ಮಾಸನ
ಪ್ರಾಣಾಯಾಮ
* ಉಜ್ಜಾಯೀ ಹಾಗೂ ಅದರ ಪರಿಚ್ಛೇದಗಳು
* ಭಸ್ತ್ರಿಕಾ (ಹೆಚ್ಚಿನ ರಕ್ತದೊತ್ತಡ ಹಾಗೂ ಕಡಿಮೆ ರಕ್ತದೊತ್ತಡ ಇರುವವರು ಹಾಗೂ ಕಣ್ಣಿನ ತೊಂದರೆ, ಕಿವಿ ನೋವು ಇರುವವರು ಭಸ್ತ್ರಿಕಾ ಪ್ರಾಣಾಯಾಮ ಅಭ್ಯಾಸಕ್ಕೆ ತೊಡಗದಿರುವುದು ಒಳಿತು)
* ನಾಡಿಶೋಧನ
* ಸೂರ್ಯಭೇದನ ಪ್ರಾಣಾಯಾಮ
* ಕುಂಭಕ ಸಹಿತ ಸರಳ ಪ್ರಾಣಾಯಾಮಗಳು
ನೀರು ಸೇವಿಸಿ: ಚಳಿ ಇದೆ ಎಂದು ನೀರು ಸೇವನೆಯ ಬಗ್ಗೆ ನಿರ್ಲಕ್ಷ್ಯವಹಿಸದೆ ಅಗತ್ಯ ನೀರು ಸೇವಿಸುತ್ತಾ ಬನ್ನಿ. ಚಳಿಗಾಲದಲ್ಲಿ ಉಂಟಾಗುವ ಚರ್ಮದ ಸುಕ್ಕನ್ನು ತಡೆಯುತ್ತದೆ.
* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.