ಶಿಷ್ಯ: ಗುರುಗಳೆ, ತಾಯಿ ಪೂಜೆಗೆ ಬನ್ನಿ ಪತ್ರೆ ತರುವಂತೆ ಹೇಳಿದ್ದಾಳೆ. ಎಲ್ಲಿದೆ ಆ ಮರ?
ಗುರು: ಸ್ವಲ್ಪ ದೂರ ನಡೆ ಮುಂದಿದೆ. ಅಲ್ಲಿ ಬಯಲೂ ಇದೆ. ಅಲ್ಲಿಯೇ ಕೆಲ ಆಸನಗಳ ಅಭ್ಯಾಸ ನಡೆಸೋಣ ನಡೆಯಿರಿ.
ಶಿಷ್ಯ: ಈ ಮರದ ವಿಶೇಷ ವೇನು?
ಗುರು: ಇದಕ್ಕೆ ಶಮಿ ವೃಕ್ಷವೆನ್ನುತ್ತಾರೆ. ಪಾಂಡವರು ಬಿಲ್ಲು, ಬಾಣ, ಗದೆ ಸೇರಿದಂತೆ ತಮ್ಮ ಆಯುಧಗಳನ್ನು ಶಮಿ ವೃಕ್ಷದಲ್ಲಿ ಇರಿಸಿದ್ದರಂತೆ. ವಿಜಯ ದಶಮಿಯಂದು ಇದಕ್ಕೆ ವಿಶೇಷ ಪೂಜೆ ಸಲ್ಲಿಸಿ, ನಿಮ್ಮ ‘ಬಾಳು ಬಂಗಾರವಾಗಲಿ’ ಎಂದು ಒಬ್ಬರಿಗೊಬ್ಬರು ಬನ್ನಿಯನ್ನು ಕೊಟ್ಟು ಶುಭ ಕೋರುತ್ತಾರೆ.
**
ಅರ್ಜುನನ ಬಿಲ್ವಿದ್ಯೆಗೆ ಯಾರೂ ಸರಿಸಾಟಿಯಿಲ್ಲ. ಏಕಲವ್ಯ ಶಬ್ಧವೇದಿ ವಿದ್ಯೆಯ ಪಾರಂಗತನಾದದ್ದು ಬಿಲ್ಲುಗಾರಿಕೆ ಕಲಿಯಬೇಕೆಂಬ ಅತೀವ ಆಸಕ್ತಿ, ಕುತೂಹಲದಿಂದಲೇ. ಪ್ರಸ್ತುತ ‘ಆರ್ಚರಿ’ ಹೆಸರಿನಲ್ಲಿ ಬಿಲ್ವಿದ್ಯೆ ಸ್ಪರ್ಧೆಗಳು ನಡೆಯುತ್ತಿವೆ.
ಅಂದಹಾಗೆ ಬಿಲ್ಲಿಗೆ ಧನು, ಧನಸ್ಸು ಎಂಬ ಹೆಸರಿವೆ. ಇದನ್ನು ಹೋಲುವ ‘ಧನುರಾಸನ’ ರೂಢಿಯಲ್ಲಿದೆ. ಬಿಲ್ಲನ್ನು ಎದೆಗೇರಿಸಿ, ಬಾಣ ಹೂಡಿ ಗುರಿಯತ್ತ ದೃಷ್ಟಿ ನೆಟ್ಟು, ಗುರಿಗೆ ಹೊಡೆಯಲು ದಾರವನ್ನು ಮೀಟಿದಾಗ ಬಿಲ್ಲು ಭಾಗಿದ ರೀತಿಯಲ್ಲಿ ದೇಹವನ್ನು ಎಳೆದು ನಿಲ್ಲಿಸುವುದೇ ಧನುರಾಸನ.
ಅಭ್ಯಾಸ ಕ್ರಮ: ಕಾಲುಗಳನ್ನು ನೀಳವಾಗಿ ಚಾಚಿ ಬೆನ್ನು ಮೇಲೆ ಮಾಡಿ ಮಲಗಿ. ಕಾಲುಗಳನ್ನು ಮಡಿಚಿ ಕೈಗಳಿಂದ ಕಾಲಿನ ಮಣಿಗಂಟನ್ನು ಬಿಗಿಯಾಗಿ ಹಿಡಿದುಕೊಳ್ಳಿ. ಉಸಿರನ್ನು ತೆಗೆದುಕೊಳ್ಳುತ್ತಾ ಎದೆ, ತೊಡೆಯ ಭಾಗವನ್ನು ನೆಲದಿಂದ ಮೇಲೆತ್ತಿ. ಕೈಗಳು ನೇರವಾಗಿದ್ದು, ಬೆನ್ನನ್ನು ಬಿಲ್ಲಿನಂತೆ ಭಾಗಿಸಿ ಮೇಲಕ್ಕೆಳೆದುಕೊಳ್ಳಿ.ಅಂತಿಮ ಸ್ಥಿತಿಯಲ್ಲಿ ಇಡೀ ದೇಹದ ಭಾರ ಹೊಟ್ಟೆಯ ಮೇಲಿರುತ್ತದೆ.
ಮಂಡಿಗಳು ಕೂಡಿದ್ದಾಗ ದೇಹವನ್ನು ಮೇಲೆಳೆಯುವುದು ಕಷ್ಟ ಎನಿಸಿದರೆ ಮಂಡಿಗಳ ಮಧ್ಯೆ ಒಂದು ಅಡಿಯಷ್ಟು ಅಂತರ ಬರುವಂತೆ ಬಿಡಿಸಿ ಮೇಲೆಳೆಯಿರಿ. ಮುಖ ಮೇಲೆ ನೋಡುತ್ತಿರಲಿ. ಸಾಮಾನ್ಯ ಉಸಿರಾಟ ನಡೆಸುತ್ತಾ ಅಂತಿಮ ಸ್ಥಿತಿಯಲ್ಲಿ 8ರಿಂದ 10 ಸೆಕೆಂಡು ನೆಲೆಸಿ ವಿರಮಿಸಿ. ನಾಲ್ಕಾರು ಬಾರಿ ಪುನರಾವರ್ತನೆ ಮಾಡಿ. ಸಮಯವನ್ನು ನಿಮಿಷಗಳ ವರೆಗೆ ವಿಸ್ತರಿಸಬಹುದು.
ಫಲಗಳು: ಸೊಂಟ ನೋವು ನಿವಾರಣೆ. ಎದೆಯು ವಿಶಾಲವಾಗಿ ಹಿಗ್ಗುವುದು. ಗೂನು ಬೆನ್ನಿನ ದೋಷ ಸರಿಪಡಿಸಲು ಅತ್ಯುತ್ತಮ ಆಸನ. ಜೀರ್ಣ ಶಕ್ತಿ ವೃದ್ಧಿಸಿ, ಉದರ ದೋಷ, ಹೆಚ್ಚಿನ ಕೊಬ್ಬು ನಿವಾರಣೆ. ಭುಜ, ತೋಳು, ತೊಡೆಗೆ ಉತ್ತಮ ವ್ಯಾಯಮ ದೊರೆತು ಶಕ್ತಿ ವೃದ್ಧಿ.
ಇದರಲ್ಲಿ ಮುಂದುವರಿದ ಹಂತಗಳು
1) ಪಾರ್ಶ್ವ ಧನುರಾಸನ
2) ಪಾದಂಗುಷ್ಠ ಧನುರಾಸನ
3)ಆಕರ್ಣಧನುರಾಸನ
* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.