ಶಿಷ್ಯ: ಕೀಟಗಳ ಹಿಂಡು ಜಮೀನಿನತ್ತ ಹಾರಿ ಹೋಗುತ್ತಿದೆ. ಇಗೋ ನನ್ನ ಭುಜದ ಮೇಲೊಂದು ಕೀಟ ಬಂದು ಕುಳಿತಿದೆ. ಅದರ ಕಾಲಿನಲ್ಲಿ ಮುಳ್ಳುಗಳೂ ಇವೆ. ಇವು ಬೆಳೆಗೆ ಹಾನಿ ಮಾಡುತ್ತವೆಯೇ?
ಗುರು: ಇದು ಮಿಡತೆ. ತನ್ನ ಆಹಾರಕ್ಕಾಗಿ ಮೊಳಕೆಯೊಡೆದು ಭೂಮಿಯಿಂದ ಹೊರ ಬರುವ ಸಸಿಗಳನ್ನು ಬುಡದಲ್ಲೇ ತುಂಡರಿಸಿ ಹಾಕುತ್ತದೆ. ಕೆಲವೊಂದು ವೇಳೆ ಸಮೃದ್ಧ ಬೆಳೆಗಳಿಗೆ ದಾಳಿ ಮಾಡಿದ್ದೂ ಇದೆ. ಇದನ್ನು ಶಲಭ ಎಂಬ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ. ಇದನ್ನು ಹೋಲುವ ಶಲಭಾಸನವೂ ಇದೆ.
ಅಭ್ಯಾಸ ಕ್ರಮ: ಬೆನ್ನು ಮೇಲುಮಾಡಿ ಕಾಲ್ಬೆರಳುಗಳನ್ನು ಚೂಪಾಗಿಸಿ ನೀಳವಾಗಿ ಚಾಚಿ ಮಲಗಿ. ಗದ್ದವನ್ನು ನೆಲಕ್ಕೂರಿ. ದೃಷ್ಟಿ ಮುಂದೆ ನೋಡುತ್ತಿರಲಿ. ಕೈಗಳನ್ನು ತೊಡೆಯ ಪಕ್ಕ ತಂದು ಮುಷ್ಟಿ ಮಾಡಿ ಹೊಟ್ಟೆಯ ಕೆಳಗೆ ಒಂದಕ್ಕೊಂದು ತಾಗುವಂತಿರಿಸಿ. ತೊಡೆ, ಮಂಡಿ, ಪಾದಗಳನ್ನು ಜೋಡಿಸಿ ತುಸು ಬಿಗಿಗೊಳಿಸಿ. ಉಸಿರನ್ನು ತೆಗೆದುಕೊಳ್ಳುತ್ತ ಸೊಂಟದ ಕೆಳ ಭಾಗವನ್ನು ಮೇಲಕ್ಕೆತ್ತಿ ನಿಲ್ಲಿಸಿ. ಮಂಡಿಗಳು ಬಾಗದಂತೆ ಎಚ್ಚರವಹಿಸಿ. ಸರಳ ಉಸಿರಾಟ ನಡೆಯುತ್ತಿರಲಿ.
ಅಂತಿಮ ಸ್ಥಿತಿಯಲ್ಲಿ 10ರಿಂದ 20 ಸೆಕೆಂಡು ನೆಲೆಸಿ; ವಿಶ್ರಾಂತಿ ನೀಡಿ. ಬಳಿಕ ಆರೇಳುಬಾರಿ ಪುನರಾವರ್ತನೆ ಮಾಡಿ.
ಏಕೈಕ ಪಾದ ಶಲಭಾಸನ: ಅಭ್ಯಾಸ ವೇಳೆ ಎರಡೂ ಕಾಲುಗಳನ್ನು ಏಕ ಕಾಲಕ್ಕೆ ಮೇಲೆತ್ತುವ ಬದಲು ಒಂದೊಂದೇ ಕಾಲನ್ನು ಮೇಲೆತ್ತಿ ನಿಲ್ಲಿಸಿ ಅಭ್ಯಾಸ ನಡೆಸುವ ಕ್ರಮ ಇದಾಗಿದೆ. ಇಲ್ಲಿಯೂ ಅದೇ ಫಲಗಳು ಲಭಿಸುತ್ತವೆ.
ಫಲಗಳು: ಜೀರ್ಣಶಕ್ತಿ ವೃದ್ಧಿ. ಬೆನ್ನು ನೋವು ನಿವಾರಕ. ಹೊಟ್ಟೆ ಸ್ನಾಯುಗಳಿಗೆ ಶಕ್ತಿ ಲಭ್ಯ. ಪಾದ, ಕಾಲು, ತೊಡೆ, ಸೊಂಟಕ್ಕೆ ಉತ್ತಮ ವ್ಯಾಯಾಮ ದೊರೆಯುತ್ತದೆ.
* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.