ಮೊದಲ ದಿನ ಮನಸ್ಸಿಟ್ಟು, ಎರಡನೇ ದಿನ ಕೈ ಮುಟ್ಟಿ, ಮೂರನೇ ದಿನ ಕಾಲಿನಿಂದ ಮುಟ್ಟಿ ಆಟವಾಡುತ್ತಾರೆ…. ಈ ಬಗೆಯ ಮನಸ್ಥಿತಿ ಕ್ರೀಡಾಪಟುಗಳಲ್ಲಿ ಹಾಗೂ ವ್ಯಾಯಾಮಗಳ ಮತ್ತು ದೈಹಿಕ ಕಸರತ್ತಿನಲ್ಲಿ ತೊಡಗುವವರಲ್ಲಿ ಮನೆ ಮಾಡಿರುತ್ತದೆ. ಇಂತಹ ಪ್ರವೃತ್ತಿ, ಆಲಸ್ಯ, ನಿರಾಸಕ್ತಿಗಳನ್ನು ಬದಿಗಿಟ್ಟು ಚೈತನ್ಯದ ಚಿಲುಮೆಯಂತೆ ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಇದಕ್ಕೆ ಒಂದಷ್ಟು ಪೂರ್ವ ತಯಾರಿ ಬೇಕು. ಯೋಗ ಕಲಿಕೆಯಲ್ಲಿ ತಪ್ಪುಗಳಾಗದಂತೆ ಎಚ್ಚರಿಕೆ ಹಾಗೂ ಜಾಗೃತಿ ವಹಿಸಬೇಕು. ನುರಿತ ಗುರು ಮುಖೇನ ಕಲಿಕೆ ನಡೆಸಬೇಕು.
‘ಯೋಗ’ ಮತ್ತು ‘ಯೋಗಾಸನ’ ವ್ಯತ್ಯಾಸದ ಸ್ಪಷ್ಟ ಅರಿವಿರಬೇಕು. ಯೋಗ ಎಂಬುದು ಸಮಗ್ರವಾದುದು ಹಾಗೂ ಅಷ್ಠಾಂಗ ಯೋಗಗಳನ್ನು ಒಳಗೊಂಡಿದೆ. ಯೋಗ+ಆಸನ = ಯೋಗಾಸನ. ಇದು ಅಷ್ಠಾಂಗ ಯೋಗದ ಮೂರನೇ ಹಂತ. ದೇಹವು ವಿವಿಧ ಭಂಗಿಗಳಲ್ಲಿ ನೆಲೆಗೊಳ್ಳುವುದು ಹಾಗೂ ದೇಹವನ್ನು ಮಣಿಸುವ ಮೂಲಕ ದೇಹ ಮತ್ತು ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಇರುವ ಮೆಟ್ಟಿಲು.
ಯೋಗಾಭ್ಯಾಸಕ್ಕೂ ಮೊದಲು ಅನುಸರಿಸಬೇಕಾದ ಕೆಲ ಸರಳ ನಿಯಮಗಳು:
‘ಯೋಗೇನ ಚಿತ್ತಸ್ಯ ಪದೇನ ವಾಚಾಂ
ಮಲಂ ಶರೀರಚ್ಚಶ್ಯ ವೈದ್ಯಕೇನ
ಯೋಪಾ ಕರೋಕ್ತಂ ಪ್ರವರಂ ಮುನೀನ
ಪತಂಜಲಿಂ ಪ್ರಾಂಜಲಿನ್ ರಾನತೋಸ್ಮಿ’ ಎಂಬ ಶ್ಲೋಕ ಪಠಣದ ಮೂಲಕ ಯೋಗಾಭ್ಯಾಸ ಆರಂಭವಾಗುತ್ತದೆ.
ಈ ಶ್ಲೋಕದ ಅರ್ಥ ಹೀಗಿದೆ: ಯೋಗದ ಮೂಲಕ ಚಂಚಲ ಮನಸ್ಸನ್ನು ನಿಯಂತ್ರಿಸುವ, ವಾಕ್ ಶುದ್ಧಿಯನ್ನು ತಂದುಕೊಡುವ, ದೇಹದಲ್ಲಿ ಚಯಾಪಚಯ ಕ್ರಿಯೆ ಸಕ್ರಿಯವಾಗಿದ್ದು, ಮಲ, ಮೂತ್ರ ವಿಸರ್ಜನೆಗಳು ಕ್ರಮಬದ್ಧವಾಗಿ ನಡೆಯಲು ಪೂರಕವಾದ ಯೋಗ ವೈದ್ಯಶಾಸ್ತ್ರವನ್ನು ರಚಿಸಿದ ಪತಂಜಲಿ ಮಹಾಮುನಿಯೇ ನಿಮಗೆ ಪ್ರಾತಃಕಾಲದ ನಮನಗಳು...
–ಯೋಗಾಭ್ಯಾಸದಲ್ಲಿ ತೊಡಗುವ ಪ್ರತಿಯೊಬ್ಬರೂ ಈ ಶ್ಲೋಕ ಉಚ್ಛಾರಣೆಯೊಂದಿಗೆ ವಾಕ್ ಶುದ್ಧಿಯನ್ನು ಪಡೆಯುತ್ತಲೇ ಯೋಗಶಾಸ್ತ್ರದ ಪಿತಾಮಹ ಪತಂಜಲಿ ಮಹಾಮುನಿಗೆ ಶುಭೋದಯದ ಪ್ರಣಾಮಗಳನ್ನು ಸಲ್ಲಿಸಿ ಮುಂದಿನ ಯೋಗಾಭ್ಯಾಸದ ಹಂತಗಳಲ್ಲಿ ತೊಡಗುತ್ತಾರೆ.
* ಬೆಳಿಗ್ಗೆ 5ರಿಂದ 7 ಮತ್ತು ಸಂಜೆ 5ರಿಂದ 7 ಅಭ್ಯಾಸಕ್ಕೆ ಸೂಕ್ತ. ಧ್ಯಾನ ಅಭ್ಯಾಸಕ್ಕೆ ಪ್ರಾಂತಃಕಾಲ(ಬೆಳಗಿನ ಜಾವ 4.30ರಿಂದ 5.30 ಪ್ರಶಾಂತ ಸಮಯ) ಅತ್ಯಂತ ಸೂಕ್ತವಾದುದು.
* ನಿತ್ಯಕರ್ಮಗಳನ್ನು ಮುಗಿಸಿಯೇ ಅಭ್ಯಾಸಕ್ಕೆ ತೊಡಗಬೇಕು. ದೇಹದೊಳಗೆ ಕಲ್ಮಶ/ತ್ಯಾಜ್ಯ(ಮಲ, ಮೂತ್ರ)ಇರಿಸಿಕೊಂಡು ಎಂದೂ ಅಭ್ಯಾಸಕ್ಕಿಳಿಯಬಾರದು. ಇದನ್ನು ಪಾಲಿಸದಿದ್ದರೆ ತ್ಯಾಜ್ಯದಿಂದ ವಿಷಾಣು ಉತ್ಪತ್ತಿಯಾಗಿ ಇರುವ ಆರೋಗ್ಯವನ್ನೂ ಕೆಡಿಸುತ್ತದೆ.
* ಅಭ್ಯಾಸ ಆರಂಭಿಸುವ 10 ನಿಮಿಷ ಮೊದಲು ಒಂದೆರೆಡು ಲೋಟ ನೀರು ಸೇವಿಸಿ.
* ಶುದ್ಧ ಗಾಳಿ, ಸ್ಪಷ್ಟ ಬೆಳಕು ಇರುವ ಸ್ಥಳ ಆಯ್ಕೆ ಮಾಡಿಕೊಳ್ಳಿ. ಅತಿಯಾದ ಮತ್ತು ಶೀತ ಗಾಳಿ ಬೀಸುವ, ಪ್ರಖರ ಬಿಸಿಲಿನಿಂದ ಕೂಡಿದ ಸ್ಥಳ ಬೇಡ.
* ಸಮತಟ್ಟಾದ ನೆಲವಿದ್ದು, ಶುಚಿಯಾಗಿರಲಿ.
* ಕೈ, ಕಾಲುಗಳನ್ನು ಚಾಚಿಟ್ಟು ಮಲಗಿದಾಗ ಅಂಗಗಳು ನೆಲದಮೇಲೆ ಹೋಗದಷ್ಟು ಉದ್ದ ಮತ್ತು ಅಗಲವಾದ(5×4, 6×4) ನೆಲಹಾಸು ಇರಲಿ. ಜಮಖಾನೆ, ಚಾಪೆ, ಮ್ಯಾಟ್ ಬಳಸಬಹುದು.
* ಸಡಿಲವಾದ ಉಡುಪು ಇರಲಿ. ಅತಿ ಬಿಗಿಯಾದ, ಕಿರಿಕಿರಿ ಉಂಟು ಮಾಡುವ ಮತ್ತು ದಪ್ಪನೆಯ ಉಡುಪು ಬೇಡ.
* ಮನಸ್ಸಿಗೆ ಆನಂದ ಉಂಟುಮಾಡುವ ತಿಳಿಯಾದ ಸುವಾಸನೆ ಗಾಳಿಯಲ್ಲಿ ಸುಳಿದಾಡುವಂತೆ ಬಳಸಬಹುದು. ಆದರೆ, ಘಾಟು ಎನಿಸುವ ಪರ್ಫ್ಯೂಮ್‌ಗಳು ಬೇಡ.
* ಅಭ್ಯಾಸಕ್ಕೆ ಹಿನ್ನೆಲೆಯಾಗಿ ಅಬ್ಬರವಿಲ್ಲದ ಲಘು ಸಂಗೀತ (ವೀಣಾವಾದನ, ಕೊಳಲುವಾದನ, ‘ಓಂ’ಕಾರ) ಬಳಸಬಹುದು.
* ಬೆಳಿಗ್ಗೆ ಲಘು ಉಪಹಾರ ಸೇವಿಸಿದ್ದರೆ ಕನಿಷ್ಠ ಒಂದು ತಾಸು, ಮಧ್ಯಾಹ್ನ ಊಟ ಮಾಡಿದ ನಂತರ ಕನಿಷ್ಠ ಮೂರು ತಾಸು ಅಂತರವಿರುವಂತೆ ನೋಡಿಕೊಳ್ಳಿ. ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಒಳಿತು.
* ಅಭ್ಯಾಸ ಮುಗಿದ ತಕ್ಷಣ ಆಹಾರ ಸೇವಿಸಬೇಡಿ, 35ರಿಂದ 45ನಿಮಿಷ ಅಂತರವಿರಲಿ.
* ಅಭ್ಯಾಸ ಮುಗಿದ ತಕ್ಷಣ ಸ್ನಾನ ಬೇಡ. 35ರಿಂದ 45ನಿಮಿಷದ ಅಂತರವಿರಲಿ. ಕಾರಣ: ಬಿಸಿಯಾದ ದೇಹದ ಉಷ್ಣ ಸಾಮಾನ್ಯ ಸ್ಥಿತಿಗೆ ಬರಬೇಕು.
ಕ್ರಮ
* ಪ್ರಾರ್ಥನೆ
* ಲಘು ವ್ಯಾಯಾಮ(ದೇಹಕ್ಕೆ ಬಿಸಿಯುಟ್ಟಿಸುವ ಚಟುವಟಿಕೆಗಳು).
* ಸೂರ್ಯನಮಸ್ಕಾರ
* ಗುರುನಮಸ್ಕಾರ
* ಸರಳ, ಮಧ್ಯಮ, ಕ್ಲಿಷ್ಟ ಆಸನಗಳು(ಸರಳತೆಯಿಂದ ಸಂಕೀರ್ಣದೆಡೆಗೆ)
* ಮುಂದೆ ಬಾಗುವ, ಹಿಂದೆ ಬಾಗುವ, ಪಕ್ಕಕ್ಕೆ ತಿರುಚುವ, ಕುಳಿತು ಮಾಡುವ, ಕೈಗಳ ಮೇಲೆ, ಕಾಲಿನ ಮೇಲೆ ಸಮತೋಲನ ಕಾಯ್ದುಕೊಳ್ಳುವ ಆಸನಗಳು.
* ಶವಾಸನ
* ಪ್ರಾಣಾಯಾಮ
* ಧ್ಯಾನ
ಅಷ್ಠಾಂಗ ಯೋಗದ ಪಾಲನೆಯೇ ಪರಿಪೂರ್ಣವಾಗಿ ‘ಯೋಗ’ ಎನಿಸಿಕೊಳ್ಳುತ್ತದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಇವು ಅಷ್ಠಾಂಗ ಯೋಗಗಳು.
* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.