ಯೋಗ ಕಲಿಕೆಯಲ್ಲಿ ಸೂರ್ಯ ನಮಸ್ಕಾರ ಆಚರಣೆ ಏಕೆ? ಅದರಿಂದಾಗುವ ಪ್ರಯೋಜನಗಳೇನು? ಎಂಬುದರ ಬಗ್ಗೆ ತಿಳಿದಿದ್ದೇವೆ. ಹನ್ನೆರೆಡು ಹಂತಗಳನ್ನೊಳಗೊಂಡ ಸೂರ್ಯ ನಮಸ್ಕಾರ ಆಚರಣೆಯ ವಿವರಣೆಯನ್ನು ಇಲ್ಲಿ ನೀಡಲಾಗಿದೆ.
ಲಘು ವ್ಯಾಯಾಮದ ಬಳಿಕ, ಅಭ್ಯಾಸಕ್ಕೂ ಮುನ್ನ ಸಮಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಪಾದದ ಅಂಗುಷ್ಠದಿಂದ ಮಂಡಿ, ತೊಡೆ, ಬೆನ್ನು, ಕುತ್ತಿಗೆ ಹಾಗೂ ಶಿರಸ್ಸು ಒಂದೇ ನೇರಕ್ಕಿರುವಂತೆ ನಿಂತುಕೊಳ್ಳುವುದೇ ಸಮಸ್ಥಿತಿ.
* ಹಂತ 1: ನಮಸ್ಕಾರಾಸನ: ಪಾದದ ಅಂಗುಷ್ಠದಿಂದ ಶಿರಸ್ಸಿನವರೆಗೆ ಸಮರೇಖೆಯಲ್ಲಿ ಬರುವಂತೆ ನಿಂತುಕೊಳ್ಳಬೇಕು. ಎರಡೂ ಕೈಗಳ ಹಸ್ತಗಳನ್ನು ಜೋಡಿಸಿ ಎದೆಯ ಮುಂದೆ ತಂದು ನಮಸ್ಕಾರ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು. ಈ ವೇಳೆ ಶ್ವಾಸವನ್ನು ಒಳಕ್ಕೆ(ಪೂರಕ) ತೆಗೆದುಕೊಳ್ಳುತ್ತಾ ಎದೆಯನ್ನು ಸ್ವಲ್ಪ ಮುಂದಕ್ಕೆ ಹಿಗ್ಗಿಸಿ, ಹೊಟ್ಟೆಯನ್ನು ಒಳಕ್ಕೆ ಎಳೆದುಕೊಳ್ಳಬೇಕು. ದೃಷ್ಟಿ ಸೂರ್ಯನತ್ತ ನೆಟ್ಟಿರಬೇಕು. ಮನಸ್ಸಿನಲ್ಲಿ ಸೂರ್ಯ ಬಿಂಬದ ಧ್ಯಾನ ಮಾಡಬೇಕು. ಮನಸ್ಸನ್ನು ಏಕಾಗ್ರಗೊಳಿಸಿ.
ಫಲ: ತೋಳು ಮತ್ತು ಎದೆಯ ಶಕ್ತಿ ವೃದ್ಧಿಸುತ್ತದೆ.
* ಹಂತ 2: ಊರ್ಧ್ವಾಸನ: ನಮಸ್ಕಾರಾಸನ ಸ್ಥಿತಿಯಿಂದ ಕೈಗಳನ್ನು ಬಿಡಿಸಿ ತೊಡೆಯ ಪಕ್ಕಕ್ಕೆ ಬರುವಂತೆ ಕೆಳಕ್ಕೆ ತಂದು ಅಲ್ಲಿಂದ ನಿಧಾನವಾಗಿ ತಲೆಯ ಮೇಲೆ ಬರುವಂತೆ ನೇರವಾಗಿ ತೆಗೆದುಕೊಂಡು ಹೋಗಿ. ತೊಳುಗಳು ಕಿವಿಗೆ ತಾಗುವಂತೆ ಹಾಗೂ ಕೈಬೆರಳುಗಳನ್ನು ನೇರವಾಗಿರುವಂತೆ ನೋಡಿಕೊಂಡು ಮತ್ತಷ್ಟು ಶ್ವಾಸವನ್ನು ತೆಗೆದುಕೊಳ್ಳುತ್ತಾ(ಪೂರಕ) ಸೊಂಟದ ಮೇಲ್ಬಾಗವನ್ನು ಹಿಂದಕ್ಕೆ ಬಾಗಿಸಿ. ಸೊಂಟದಿಂದ ಕೆಳಭಾಗದ ತೊಡೆ, ಮೊಣಕಾಲು, ಪಾದ ಬಾಗದಂತೆ ನೇವಾಗಿರಿಸಿ.
ಫಲ: ಬೆನ್ನುಮೂಳೆ, ಕತ್ತು, ಎದೆ, ತೋಳಿಗೆ ವ್ಯಾಯಾಮ.
* ಹಂತ 3: ಹಸ್ತಪಾದಾಸನ: ಊರ್ಧ್ವಾಸನ ಸ್ಥಿತಿಯಿಂದ ಮರಳಿ ಬರುತ್ತಾ ಶ್ವಾಸವನ್ನು ಹೊರ(ರೇಚಕ) ಹಾಕುತ್ತಾ ಮುಂದೆ ಬಾಗಬೇಕು. ಹಸ್ತಗಳನ್ನು ಎರಡೂ ಪಾದದ ಪಕ್ಕ ಇರಿಸಿ. ಹಸ್ತಗಳ ಮಧ್ಯೆ 12 ಇಂಚುಗಳ(ಒಂದು ಮೊಳ) ಅಂತರವಿರಲಿ. ಕೈ ಬೆರಳುಗಳು ಬಿಡಿಬಿಡಿಯಾಗದಂತೆ ಜೋಡಿಸಿಡಿ. ಮುಖವನ್ನು ಮಂಡಿಗೆ ತಾಗಿಸಿ ಕೆಲ ಹೊತ್ತು ಅದೇ ಸ್ಥಿತಿಯನ್ನು ಕಾಯ್ದುಕೊಳ್ಳಿ. ಈ ವೇಳೆ ಮೊಣಕಾಲು ಬಾಗದಂತೆ ನೋಡಿಕೊಳ್ಳಿ. ಆರಂಭದಲ್ಲಿ ಕಷ್ಟವೆನಿಸುತ್ತದೆ. ಕ್ರಮೇಣ ಸಾಧನೆಯಿಂದ ಸಾಧ್ಯವಾಗುತ್ತದೆ.
ಫಲ: ಹೊಟ್ಟೆ, ಸೊಂಟ ಭಾಗದ ಕೊಬ್ಬು ನಿವಾರಣೆ.
* ಹಂತ 4: ಏಕಪಾದ ಪ್ರಸರಣಾಸನ: ಹಸ್ತಪಾದಾಸನ ಸ್ಥಿತಿಯಿಂದ ಮುಂದುವರಿಯುತ್ತಾ ತೋಳುಗಳನ್ನು ಬಗ್ಗಿಸದೆ ನಿಧಾನವಾಗಿ ಶ್ವಾಸವನ್ನು ಒಳಗೆ ತೆಗೆದುಕೊಳ್ಳುತ್ತಾ(ಪೂರಕ)ಬಲಗಾಲನ್ನು ಹಿಂದಕ್ಕೆ ಚಾಚಿ ಮಂಡಿಯನ್ನು ನೆಲಕ್ಕೂರಿ. ಎಡಗಾಲು ಮಂಡಿ
ಯನ್ನು ಮಡಿಚುತ್ತಾ ಮುಖವನ್ನು ಮೇಲೆತ್ತಿ. ಎಡ ಮಂಡಿ ಹಾಗೂ ಹಿಮ್ಮಡಿ ಒಂದೇ ನೇರಕ್ಕಿರಲಿ. ದೃಷ್ಟಿ ನೇರವಾಗಿದ್ದು, ಮುಂದೆ ನೊಡುತ್ತಿರಿ. ಎಡ ತೊಡೆಯ ಮೇಲೆ ಎದೆ ತಾಗಿಕೊಂಡಿರುತ್ತದೆ. (ಸೂಚನೆ: ಮತ್ತೊಂದು ಸುತ್ತು ಮಾಡುವಾಗ ಎಡ ಕಾಲನ್ನು ಹಿಂದಕ್ಕೆ ಚಾಚಿ ಅಥವಾ ಇದೇ ಆವೃತ್ತಿಯಲ್ಲಿ ಅವರೋಹಣ(ಹಿಂದಿನ ಸ್ಥಿತಿಗೆ) ಮಾಡುವಾಗ ಬಲ ಕಾಲನ್ನು ಮುಂದಕ್ಕೆ ತನ್ನಿ. ಇದನ್ನು ಅನುಸರಿಸುವಿಕೆಯಿಂದ ಸಮಾನ ವ್ಯಾಯಾಮ ಸಾಧ್ಯವಾಗುತ್ತದೆ.)
ಫಲ: ಬೆನ್ನುಹುರಿ, ಕುತ್ತಿಗೆಗೆ ವ್ಯಾಯಾಮ.
* ಹಂತ 5: ದ್ವಿಪಾದ ಪ್ರಸರಣಾಸನ: ಏಕಪಾದ ಪ್ರಸರಣಾಸನ ಸ್ಥಿತಿಯಿಂದ ಮತ್ತೊಂದು ಕಾಲನ್ನು ಹಿಂದಕ್ಕೆ ಚಾಚುತ್ತಾ ಈ ಮೊದಲೇ ಚಾಚಿದ್ದ ಕಾಲಿನ ಪಾದದ ಜತೆ ಜೋಡಿಸಬೇಕು. ಈ ವೇಳೆ ಮತ್ತಷ್ಟು ಶ್ವಾಸವನ್ನು ತೆಗೆದುಕೊಳ್ಳುತ್ತಾ(ಪೂರಕ) ಮೊದಲು ನೆಲಕ್ಕೂರಿದ್ದ ಮಂಡಿಯನ್ನು ಮೇಲೆತ್ತಬೇಕು. ತೋಳುಗಳು ನೇರವಾಗಿರಲಿ. ಹಸ್ತ ಹಾಗೂ ಪಾದಗಳ ಸ್ಥಳ ಬದಲಾಗದಂತೆ ನೋಡಿಕೊಳ್ಳಿ. ಉಸಿರನ್ನು ಒಳಗೆ ನಿಲ್ಲಿಸಿ(ಕುಂಭಕ) ಹಿಮ್ಮಡಿ, ಮಂಡಿ, ಸೊಂಟ, ಬೆನ್ನು, ಕುತ್ತಿಗೆ ಹಾಗೂ ತಲೆ ಒಂದೇ ರೇಖೆಯಲ್ಲಿ ಬರುವಂತೆ ದಂಡೋಪಾದಿಯಲ್ಲಿ ದೇಹವನ್ನು ನಿಲ್ಲಿಸಿ.
ಫಲ: ಚುರುಕುತನ ವೃದ್ಧಿಯಾಗುತ್ತದೆ.
* ಹಂತ 6: ಸಾಷ್ಟಾಂಗ ಪ್ರಣೀಪಾತಾಸನ: ಎರಡು ಪಾದ, ಎರಡು ಮಂಡಿ, ಎರಡು ಹಸ್ತ, ಎದೆ ಹಾಗೂ ಹಣೆ ಶರೀರದ ಈ ಎಂಟು(ಅಷ್ಟ) ಅಂಗಳನ್ನು ಭೂಮಿಗೆ ತಾಗಿಸಿ ನಮಿಸುವುದೇ ಸಾಷ್ಟಾಂಗ ಪ್ರಣೀಪಾತಾಸನ. ಶ್ವಾಸವನ್ನು ಹೊರ ಹಾಕುತ್ತಾ ದ್ವಿಪಾದ ಪ್ರಸರಣಾಸನ ಸ್ಥಿತಿಯಿಂದ ಮುಂದುವರಿದು ಶ್ವಾಸವನ್ನು ತೆಗೆದುಕೊಳ್ಳುತ್ತಾ(ಪೂರಕ) ಎರಡೂ ಮಂಡಿಗಳನ್ನು ನೆಲಕ್ಕೂರಿ. ಮೊಳಕೈಗಳನ್ನು ಮಡಿಸುತ್ತಾ ಪೃಷ್ಠಭಾಗವನ್ನು ಸ್ವಲ್ಪ ಮೇಲೆತ್ತಿ. ಎರಡೂ ಹಸ್ತಗಳ ಮಧ್ಯೆ ಎದೆಯನ್ನು ನೆಲಕ್ಕೂರಿ. ಹಣೆಯನ್ನು ಭೂಮಿಗೆ ತಾಗಿಸಿ ನಮಿಸಿ. ಶ್ವಾಸವನ್ನು ತೆಗೆದುಕೊಳ್ಳದೆ ಕುಂಭಕ(ಶ್ವಾಸವನ್ನು ತಡೆದು ನಿಲ್ಲಿಸಿ) ಅನುಸರಿಸಿ. ಹೊಟ್ಟೆ ಭಾಗ ನೆಲಕ್ಕೆ ತಾಗದಂತೆ ನೊಡಿಕೊಳ್ಳಿ. ಮುಖವನ್ನು ಮೇಲೆತ್ತಿ ಶ್ವಾಸ ಹೊರ ಹಾಕುತ್ತಾ ಮುಂದಿನ ಹಂತಕ್ಕೆ ಹೋಗಿ.
ಫಲ: ಸುಂದರ ವ್ಯಾಯಾಮ ಲಭಿಸುತ್ತದೆ.
7: ಭುಜಂಗಾಸನ:ಭುಜಂಗ ಎಂದರೆ ಸರ್ಪ ಅಥವಾ ಹಾವು. ಹಂತ 7ರಿಂದ ಶ್ವಾಸವನ್ನು ತೆಗೆದುಕೊಳ್ಳುತ್ತಾ ದೇಹವನ್ನು ಮುಂದಕ್ಕೆ ಚಲಿಸಿ ಸರ್ಪದಂತೆ ಮೇಲೆದ್ದು, ಎದೆಯನ್ನು ವಿಶಾಲವಾಗಿ ಹಿಗ್ಗಿಸಿ. ಆಕಾಶದತ್ತ ಮುಖಮಾಡಿ ಮೇಲೆ ನೋಡಿ. ಶ್ವಾಸವನ್ನು ಹೊರ ಬಿಡದೆ ಅಲ್ಲಿಯೇ ಹಿಡಿದು ನಿಲ್ಲಿಸಿ(ಕುಂಭಕ). ಫಲ: ಕತ್ತು, ಮೇರುದಂಡ(ಬೆನ್ನುಹುರಿ), ಸೊಂಟಕ್ಕೆ ಉತ್ತಮ ವ್ಯಾಯಾಮ.
8: ಬೂಧರಾಸನ:ಭುಜಂಗಾಸನದಿಂದ ಮುಂದುವರಿದು, ಕೈಗಳು ಹಾಗೂ ಪಾದಗಳ ಸ್ಥಾನಗಳನ್ನು ಬದಲಿಸದೆ ಪೃಷ್ಠವನ್ನು ಮೇಲೆತ್ತುತ್ತಾ, ಹಿಂದಿನ ಹಂತದಲ್ಲಿ ಕುಂಭಕ ಮಾಡಿದ್ದ ಶ್ವಾಸವನ್ನು ಹೊರ ಹಾಕುತ್ತಾ ಬನ್ನಿ. ಹಿಮ್ಮಡಿಗಳನ್ನು ನೆಲಕ್ಕೊರಗಿಸಬೇಕು. ತೋಳು, ಕೈಗಳನ್ನು ಒಳಕ್ಕೆಳೆದುಕೊಳ್ಳುತ್ತಾ ಎದೆಯ ಭಾಗವನ್ನು ಒಳಕ್ಕೆ ಒತ್ತಬೇಕು. ಮಂಡಿಗಳು ಭಾಗದಂತೆ ನೋಡಿಕೊಂಡು, ಕತ್ತನ್ನು ಭಾಗಿಸಿ ಮುಖವನ್ನು ಒಳಕ್ಕೆ ತನ್ನಿ. ಗೋಪುರಾಕೃತಿಗೆ ದೇಹವನ್ನು ತಂದು ನಿಲ್ಲಿಸಿ. ಫಲ: ಮೀನುಖಂಡ ಬಲಗೊಳ್ಳುತ್ತವೆ. ಹೊಟ್ಟೆ, ರಟ್ಟೆಗೆ ಶಕ್ತಿ ವೃದ್ಧಿ.
9: ಏಕಪಾದ ಪ್ರಸರಣಾಸನ:ಬೂಧರಾಸನ ಸ್ಥಿತಿಯಿಂದ ಅವರೋಹಣ ಮಾಡುತ್ತಾ ಬಲಗಾಲನ್ನು ಮುಂದೆ ತಂದು ಪಾದವನ್ನು ಕೈ ಪಕ್ಕಕ್ಕೆ ಇರಿಸಿ.ಮಂಡಿಯನ್ನು ಮಡಿಚುತ್ತಾಶ್ವಾಸವನ್ನು ತೆಗೆದುಕೊಳ್ಳುತ್ತಾ(ಪೂರಕ) ಮುಖವನ್ನು ಮೇಲೆತ್ತಿ. ಬಲ ಮಂಡಿ, ಹಿಮ್ಮಡಿ ಒಂದೇ ನೇರಕ್ಕಿರಲಿ. ದೃಷ್ಟಿ ನೇರವಾಗಿದ್ದು, ಮುಂದೆ ನೊಡುತ್ತಿರಿ. ಎಡ ತೊಡೆಯ ಮೇಲೆ ಎದೆ ತಾಗಿಕೊಂಡಿರುತ್ತದೆ. ಸೂಚನೆ: ಮತ್ತೊಂದು ಸುತ್ತು ಅಭ್ಯಾಸದಲ್ಲಿ ಎಡ–ಬಲ ಕಾಲುಗಳ ಚಲನೆಯನ್ನು ಬದಲಿಸಿಕೊಳ್ಳಿ. (ಹಂತ: 9ರಿಂದ 12ರವರೆಗೆ ಅವರೋಹಣ (ಹಿಮ್ಮರಳುವಿಕೆ) ನಡೆಯುತ್ತದೆ)
10: ಹಸ್ತಪಾದಾಸನ:ಏಕಪಾದ ಪ್ರಸರಣಾಸನದಲ್ಲಿ ಹಿಂದೆ ಚಾಚಿದ್ದ ಇನ್ನೊಂದು ಕಾಲನ್ನು ನೇರವಾಗಿಸಿ ಶ್ವಾಸವನ್ನು ಹೊರ(ರೇಚಕ) ಹಾಕುತ್ತಾ ಕೈ ಪಕ್ಕದಲ್ಲಿ ಈ ಮೊದಲೇ ಇರಿಸಿದ್ದ ಕಾಲಿನ ಜತೆ ಜೋಡಿಸಿ. ಮುಖವನ್ನು ಮಂಡಿಗೆ ತಾಗಿಸಿ ಕೆಲ ಹೊತ್ತು ಅದೇ ಸ್ಥಿತಿಯನ್ನು ಕಾಯ್ದುಕೊಳ್ಳಿ. ಈ ವೇಳೆ ಮೊಣಕಾಲು ಬಾಗದಂತೆ ನೋಡಿಕೊಳ್ಳಿ.
11: ಊರ್ಧ್ವಾಸನ:ಹಸ್ತಪಾದಾಸನ ಸ್ಥಿತಿಯಿಂದ ಮುಂದುವರಿದು ಕೈಗಳನ್ನು ನೆಲದಿಂದ ಬಿಡಿಸಿ, ಶ್ವಾಸವನ್ನು ತೆಗೆದುಕೊಳ್ಳುತ್ತಾ(ಪೂರಕ) ಕತ್ತನ್ನು ನೇರವಾಗಿಸಿ. ಕಿವಿಗಳಿಗೆ ತೋಳುಗಳು ಹೊಂದಿಕೊಂಡಂತೆ ಇರಿಸಿ, ಕೈಗಳನ್ನು ನೀಳವಾಗಿ ಚಾಚಿ ಮೇಲೇಳಿ. ತಲೆಯ ಮೇಲೆ ಬರುವಂತೆ ಕೈ ನೇರವಾಗಿಸಿ. ತೊಳುಗಳು ಕಿವಿಗೆ ತಾಗುವಂತೆ, ಕೈಬೆರಳು ನೇರವಾಗಿರಲಿ. ಮತ್ತಷ್ಟು ಶ್ವಾಸ ತೆಗೆದುಕೊಳ್ಳುತ್ತಾ ಸೊಂಟದ ಮೇಲ್ಭಾಗವನ್ನು ಹಿಂದಕ್ಕೆ ಬಾಗಿಸಿ. ಸೊಂಟದಿಂದ ಕೆಳಭಾಗದ ತೊಡೆ, ಮೊಣಕಾಲು, ಪಾದ ಬಾಗದಂತೆ ನೇವಾಗಿರಿಸಿ.
12: ನಮಸ್ಕಾರಾಸನ:ಊರ್ಧ್ವಾಸನದಿಂದ ಶ್ವಾಸವನ್ನು ಹೊರ(ರೇಚಕ) ಹಾಕುತ್ತಾ ಹಿಂತಿರುಗಿ ಬನ್ನಿ.ಪಾದದ ಅಂಗುಷ್ಠದಿಂದ ಶಿರಸ್ಸಿನವರೆಗೆ ಸಮರೇಖೆಯಲ್ಲಿ ಬರುವಂತೆ ನಿಂತುಕೊಳ್ಳಿ. ಹಸ್ತಗಳನ್ನು ಜೋಡಿಸಿ ಎದೆಯ ಮುಂದೆ ತಂದು ನಮಸ್ಕಾರ ಸ್ಥಿತಿಯಲ್ಲಿರಿಸಿ. ಈ ವೇಳೆ ಶ್ವಾಸವನ್ನು ಒಳಕ್ಕೆ(ಪೂರಕ) ತೆಗೆದುಕೊಳ್ಳುತ್ತಾ ಎದೆಯನ್ನು ಸ್ವಲ್ಪ ಮುಂದಕ್ಕೆ ಹಿಗ್ಗಿಸಿ, ಹೊಟ್ಟೆಯನ್ನು ತುಸು ಒಳಕ್ಕೆಳೆಯಿರಿ. ದೃಷ್ಟಿ ಸೂರ್ಯನತ್ತ ನೆಡಿ. ಮನಸ್ಸಿನಲ್ಲಿ ಸೂರ್ಯ ಬಿಂಬದ ಧ್ಯಾನ ಮಾಡಬೇಕು. ಮನಸ್ಸನ್ನು ಏಕಾಗ್ರಗೊಳಿಸಿ. ಸೂರ್ಯೋಪಾಸನೆ ಅಥವಾ ಸೂರ್ಯನ ನಾಮಾವಳಿಯನ್ನು ಪಠಿಸಿ. ಸಮಸ್ಥಿತಿಗೆ ಬನ್ನಿ.
ಅಭ್ಯಾಸ ಮತ್ತು ಇತಿ–ಮಿತಿ
* ಜಾತಿ ಮತ, ಭೇದವಿಲ್ಲದೆ ಸ್ತ್ರೀಪುರುಷರಾದಿಯಾಗಿ ಎಲ್ಲರೂ ಸೂರ್ಯನಮಸ್ಕಾರ ಅಭ್ಯಾಸ ಮಾಡಲು ಯಾವ ಅಭ್ಯಂತರವೂ ಇಲ್ಲ.
* 8 ಮತ್ತು 9ನೇ ವಯಸ್ಸಿನಿಂದ 12–13ನೇ ವಯೋಮಾದ ಬಾಲಕರು 25ರಿಂದ 50ಸುತ್ತು(ಬಾಲಕಿಯರು 15ರಿಂ 25)(12 ಹಂತಗಳನ್ನುಪೂರ್ಣಗೊಳಿಸಿದಾಗ ಒಂದು ಸುತ್ತು), 13ರಿಂದ 18–20ನೇ ವಯೋಮಾನದ ಯುವಕರು105 ಸುತ್ತು,ಯುವತಿಯರು, ಸ್ತ್ರೀಯರು 25ರಿಂದ 30 ಸುತ್ತು ಅಭ್ಯಾಸಿಸಬಹುದು. ಇಲ್ಲಿ ಎಲ್ಲವೂ ಅವರವ ದೈಹಿಕ ಸಾಮರ್ಥ್ಯದ ಆಧಾರದ ಮೇಲೆ ನಡೆಯಬೇಕು.
* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.