ಘೇರಂಡ ಎಂದರೆ ಘೇರಂಡಸಂಹಿತೆ ಗ್ರಂಥ ರಚಿಸಿದ ಋಷಿಯ ಹೆಸರು. ಈ ಆಸನವು ಆ ಋಷಿಗೆ ಮೀಸಲಾಗಿದೆ. ಪಾದಾಂಗುಷ್ಠ ಧನುರಾಸನ ಮತ್ತು ಬೇಕಾಸನಗಳನ್ನು ಒಳಗೊಂಡು ಅಭ್ಯಾಸ ನಡೆಯುತ್ತದೆ. ದೇಹದ ಒಂದು ಭಾಗದ ಕಾಲು ಮತ್ತು ಕೈಗಳು ಧುನುರಾಸನವನ್ನು, ಮಗದೊಂದು ಭಾಗದ ಕೈ, ಕಾಲುಗಳು ಬೇಕಾಸನವನ್ನು ಹೋಲುತ್ತವೆ.
ಅಭ್ಯಾಸಕ್ರಮ
ಹೊಟ್ಟೆಯನ್ನು ನೆಲಕ್ಕೊರಗಿಸಿ ಕಾಲುಗಳನ್ನು ಚಾಚಿಟ್ಟು ಮಲಗಿ. ಉಸಿರನ್ನು ಹೊರ ಹಾಕುತ್ತಾ ಎಡ ಮಂಡಿಯನ್ನು ಬಾಗಿಸಿ ಪಾದವನ್ನು ಎಡ ಸೊಂಟದ ಬಳಿಗೆ ತಂದಿರಿಸಿ. ಎಡಗೈನಿಂದ ಎಡ ಪಾದವನ್ನು ಹಿಡಿದು, ಮೊಳಕೈಯನ್ನು ಮೇಲ್ಭಾಗಕ್ಕೆ ತಿರುಗಿಸುತ್ತಾ, ಅಂಗೈಯನ್ನು ಪಾದದ ಮೇಲ್ಭಾಗಕ್ಕೆ ತನ್ನಿ. ಅಂಗೈನಿಂದ ಪಾದವನ್ನು ನೆಲದತ್ತ ಒತ್ತುತ್ತಾ, ಎದೆಯನ್ನು ಮೇಲಕ್ಕೆತ್ತಿ. ಈ ಹಂತದಲ್ಲಿ ಒಂದೆರೆಡು ಸರಳ ಉಸಿರಾಟ ನಡೆಸಿ.
ಬಳಿಕ, ಬಲಕಾಲನ್ನು ಮಡಚಿ ಬಲಗೈನಿಂದ ಅಂಗುಷ್ಠವನ್ನು ಹಿಡಿಯಿರಿ. ಮೊಳಕೈಯನ್ನು ವೃತ್ತಾಕಾರವಾಗಿ ತಿರುಗಿಸಿ ಹಿಂದೆ ತಂದು ಕೈ ಹಿಡಿತ ಬಿಗಿಗೊಳಿಸಿ ಕಾಲನ್ನು ಮೇಲಕ್ಕೆ ಎಳೆದು ನಿಲ್ಲಿಸಿ. ಅಂತಿಮ ಸ್ಥಿತಿಯಲ್ಲಿ ಸರಳ ಉಸಿರಾಟ ನಡೆಸುತ್ತಾ ಹೊಟ್ಟೆಯ ಮೇಲೆ ದೇಹವನ್ನು ಸಮತೋಲನಗೊಳಿಸಿ 20ರಿಂದ 30 ಸೆಕೆಂಡು ನೆಲೆಸಿ. ನಂತರ ವಿರುದ್ಧ ದಿಕ್ಕಿನಲ್ಲಿ ಅಭ್ಯಾಸ ನಡೆಸಿ.
ಫಲಗಳು
*ಜೀರ್ಣ ಶಕ್ತಿ ವೃದ್ಧಿಸುತ್ತದೆ.
*ಕಿಬ್ಬೊಟ್ಟೆಯಲ್ಲಿನ ಶುದ್ಧರಕ್ತನಾಳಕ್ಕೆ ಹೆಚ್ಚಿನ ಒತ್ತಡ ಉಂಟಾಗುವುದರಿಂದ ಈ ಭಾಗದಲ್ಲಿ ಉತ್ತಮ ರಕ್ತ ಪರಿಚಲನೆಗೆ ನೆರವಾಗುತ್ತದೆ.
*ಬೆನ್ನುದಂಡಿಯ ಎಲುಬುಗಳು ಆರೋಗ್ಯ ಸ್ಥಿತಿಯನ್ನು ಪಡೆದು, ಇಡೀ ದೇಹವನ್ನು ಹೇಗೆಂದರೆ ಹಾಗೆ ಮಣಿಸಲು ಮತ್ತು ತಿರುಗಿಸುವ ಶಕ್ತಿಯನ್ನು ಪಡೆಯುತ್ತದೆ.
*ಕೀಲುಗಳ ಪೆಡಸು ನಿವಾರಣೆಯಾಗುತ್ತದೆ.
*ಹಿಮ್ಮಡಿ ನೋವು, ಚಪ್ಪಟೆ ಪಾದವನ್ನು ಸರಿಪಡಿಸುತ್ತದೆ.
*ಮಂಡಿ ಮತ್ತು ಕೀಲುಗಳಲ್ಲಿನ ನೋವು ನಿವಾರಿಸುತ್ತದೆ.
*ಹೆಗಲಿನ ಎಲುಬುಗಳು ಹೆಚ್ಚಾಗಿ ಹಿಗ್ಗುತ್ತವೆ.
* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.