ದೈಹಿಕ ಸದೃಢತೆ ನೀಡುವ ಹಾಗೂ ಆಸನಗಳ ತಾಯಿ ಎನಿಸಿರುವ ಸರ್ವಾಂಗಾಸನದ ಮೊದಲ ಮೂರು ಹಂತಗಳು ಹಾಗೂ ಪ್ರಯೋಜನಗಳ ಬಗ್ಗೆ ತಿಳಿದಿದ್ದೇವೆ.
ಸರ್ವಾಂಗಾಸನದಲ್ಲಿ ಹಲವು ಹಂತಗಳಿದ್ದು, ಅವುಗಳ ಪರಿಚಯವನ್ನು ಇಲ್ಲಿ ಮಾಡಿಕೊಡಲಾಗಿದೆ. ಇಲ್ಲಿ ಎಲ್ಲಾ ಹಂತಗಳೂ ಮೂಲ ಸರ್ವಾಂಗಾಸನದ ಮೂಲಕವೇ ನಡೆಯುತ್ತವೆ. ಅವುಗಳಿಂದಾಗುವ ಪ್ರಯೋಜನಗಳ ವಿಷಯಕ್ಕೆ ಬಂದಾಗ ಪ್ರತಿ ಹಂತದಲ್ಲೂ ಹೆಚ್ಚು ಹೆಚ್ಚು ಲಾಭ ಪಡೆಯುತ್ತಾ ಸಾಗುತ್ತೇವೆ. ಎಲ್ಲ ಹಂತಗಳ ಸಂಕ್ಷಿಪ್ತ ಪರಿಚಯ ಮತ್ತು ಅಭ್ಯಾಸ ಕ್ರಮವನ್ನು ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ.
1) ಏಕಪಾದ ಸರ್ವಾಂಗಾಸನ:
ಒಂದು ಪಾದ ನೆಲಕ್ಕೆ ತಾಗಿದ್ದು, ಮತ್ತೊಂದು ಕಾಲು ಮೇಲಕ್ಕೆ ನೇರವಾಗಿದ್ದು ಅಭ್ಯಾಸ ನಡೆಯುವುದರಿಂದ ಏಕಪಾದ ಸರ್ವಾಂಗಾಸನ ಎಂದು ಹೆಸರಿಸಲಾಗಿದೆ.
ಅಭ್ಯಾಸಕ್ರಮ: ಸರ್ವಾಂಗಾಸನ ಸ್ಥಿತಿಗೆ ದೇಹವನ್ನು ನಿಲ್ಲಿಸಿ. ಸರಳ ಉಸಿರಾಟ ನಡೆಸುತ್ತಾ, ತೊಡೆ, ಮಂಡಿ, ಮೀನಖಂಡಗಳನ್ನು ತುಸು ಬಿಗಿಗೊಳಿಸಿ ಒಂದು ಕಾಲವನ್ನು ನೇರವಾಗಿಟ್ಟು, ಮತ್ತೊಂದು ಕಾಲನ್ನು ಕೆಳಗಿಳಿಸಿ ಪಾದವನ್ನು ನೆಲಕ್ಕೆ ತಾಗಿಸಿಡಿ. ಮಂಡಿಗಳು ಬಾಗದಂತೆ ನೋಡಿಕೊಂಡು ಸರಳ ಉಸಿರಾಟ ನಡೆಸಿ.
2) ಪಾರ್ಶ್ವೈಕಪಾದ ಸರ್ವಾಂಗಾಸನ:
ದೇಹ ಸರ್ವಾಂಗಾಸನ ಸ್ಥಿತಿಯಲ್ಲಿದ್ದು, ಪಾದವೊಂದು ಪಕ್ಕದಲ್ಲಿ ನೆಲಕ್ಕೆ ತಾಗಿದ್ದು, ಮತ್ತೊಂದು ಕಾಲನ್ನು ಮೇಲಕ್ಕೆ ನೇರವಾಗಿರಿಸಿ ಅಭ್ಯಾಸ ನಡೆಯುವುದರಿಂದ ಪಾರ್ಶ್ವೈಕಪಾದ ಸರ್ವಾಂಗಾಸನ ಎಂದು ಹೆಸರಿಸಲಾಗಿದೆ..
ಅಭ್ಯಾಸಕ್ರಮ: ಸರ್ವಾಂಗಾಸನ ಸ್ಥಿತಿಯಲ್ಲಿ ದೇಹವನ್ನು ನಿಲ್ಲಿಸಿ. ನಂತರ, ತೊಡೆ, ಮಂಡಿ, ಮೀನಖಂಡಗಳನ್ನು ತುಸು ಬಿಗಿಗೊಳಿಸಿ ಎಡ ಕಾಲನ್ನು ನೇರವಾಗಿಟ್ಟು, ಬಲ ಕಾಲನ್ನು ಪಕ್ಕಕ್ಕೆ ಕೆಳಗಿಳಿಸಿ ಪಾದವನ್ನು ನೆಲಕ್ಕೆ ತಾಗಿಸಿಡಿ. ಮಂಡಿಗಳು ಬಾಗದಂತೆ ಗಮನವಿರಿಸಿ. ನೆಲಕ್ಕೆ ತಾಗಿಸಿರುವ ಕಾಲು ಪಕ್ಕದಿಂದ ಮುಂಡದ ಸಮ ರೇಖೆಯಲ್ಲಿ ಬರುವಂತಿರಬೇಕು.
3) ಪಾರ್ಶ್ವ ಸರ್ವಾಂಗಾಸನ:
ಪಾರ್ಶ್ವ ಎಂದರೆ ಪಕ್ಕ ಎಂದರ್ಥ. ಈ ಆಸನದಲ್ಲಿ ಮುಂಡವು ಪಕ್ಕಕ್ಕೆ ತಿರುಗಿದ್ದು, ಕೈಯೊಂದರ ಮೇಲೆ ದೇಹದ ಹೆಚ್ಚಿನ ಭಾರವಿದ್ದು ಅಭ್ಯಾಸ ನಡೆಯು ವುದರಿಂದ ಪಾರ್ಶ್ವ ಸರ್ವಾಂಗಾಸನ ಎಂದು ಹೆಸರಿಸಲಾಗಿದೆ.
ಅಭ್ಯಾಸಕ್ರಮ: ಸರ್ವಾಂಗಾಸನ ಸ್ಥಿತಿಗೆ ದೇಹವನ್ನು ನಿಲ್ಲಿಸಿ, ಕೈಗಳನ್ನು ಸೊಂಟಕ್ಕೆ ಆಧಾರವಾಗಿಟ್ಟು, ಸೊಂಟ, ಕಾಲುಗಳನ್ನು ಬಲ ಪಕ್ಕಕ್ಕೆ ತಿರುಗಿಸಿ. ಎಡ ಅಂಗೈ ಮೇಲೆ ಎಡ ಸೊಂಟದ ಕಾಕ್ಸಿಲ್ ಎಲುಬಿನ ಭಾಗವನ್ನು ಇರಿಸಿ ಸೊಂಟ ಹಾಗೂ ಕಾಲುಗಳ ಭಾರವನ್ನು ಮಣಿಕಟ್ಟು ಮತ್ತು ಮೊಳಕೈ ಮೇಲೆ ಹಾಕುತ್ತಾ ಕಾಲುಗಳನ್ನು ಪಕ್ಕಕ್ಕೆ ಬಾಗಿಸಿ(ತೊಡೆ, ಮಂಡಿ, ಪಾದಗಳನ್ನು ತುಸು ಬಿಗಿಗೊಳಿಸಿ ಕೂಡಿಸಿಟ್ಟು, ನೇರವಾಗಿರಿಸಿ ಅಭ್ಯಾಸ ನಡೆಸಿ). ಕೈ ಮೇಲೆ ದೇಹವನ್ನು ಸಮತೋಲನಗೊಳಿಸಿ ಸರಳ ಉಸಿರಾಟ ನಡೆಸಿ. ಬಳಿಕ, ಕಾಲನ್ನು ಮೇಲಕ್ಕೆತ್ತುತ್ತಾ ಸರ್ವಾಂಗಾಸನ ಸ್ಥಿತಿಗೆ ತನ್ನಿ.
ಸೂಚನೆ: ಒಂದೇ ಬಾರಿಗೆ ಎಡ–ಬಲ ಪಕ್ಕಕ್ಕೆ ಅಭ್ಯಾಸ ಶ್ರಮವೆನಿಸಿದರೆ ತುಸು ವಿಶ್ರಾಂತಿ ನೀಡಿ ಮತ್ತೊಂದು ಪಾರ್ಶ್ವಕ್ಕೆ ಅಭ್ಯಾಸಿಸಿ.
4) ಸರ್ವಾಂಗಾಸನದಲ್ಲಿ ಊರ್ಧ್ವಪದ್ಮಾಸನ
ಊರ್ಧ್ವ ಎಂದರೆ ಮೇಲೆ ಎಂದರ್ಥ. ಪದ್ಮ ಎಂದರೆ ಕಮಲ ಎಂದರ್ಥ. ಸರ್ವಾಂಗಾಸನ ಅಭ್ಯಾಸದಲ್ಲಿ ಕಾಲುಗಳು ಮೇಲಕ್ಕಿರುತ್ತವೆ. ಅದೇ ಸ್ಥಿತಿಯಲ್ಲಿ ಕಾಲುಗಳನ್ನು ಪದ್ಮಾಸನ ಹಾಕಿ ಅಭ್ಯಾಸ ನಡೆಸುವುಯುವುದು ಹಾಗೂ ಪದ್ಮಾಸನವು ಊರ್ಧ್ವ ಮುಖವಾಗಿರುತ್ತದೆ. ಆದ್ದರಿಂದ ಇದಕ್ಕೆ ಊರ್ಧ್ವಪದ್ಮಾಸನ ಅಥವಾ ಪದ್ಮ ಸರ್ವಾಂಗಾಸನ ಎಂದು ಹೆಸರಿಸಲಾಗಿದೆ.
ಅಭ್ಯಾಸಕ್ರಮ: ಸರ್ವಾಂಗಾಸನ ಸ್ಥಿತಿಯಲ್ಲಿದ್ದು, ಮಂಡಿಗಳನ್ನು ಬಾಗಿಸಿ ಪಾದಗಳನ್ನು ಕೆಳಕ್ಕೆ ತಂದು ತೊಡೆಯ ಮೇಲಿರಿಸಿ(ಎಡ ಪಾದ ಬಲ ತೊಡೆಯ ಮೇಲೆ, ಬಲ ಪಾದ ಎಡ ತೊಡೆಯ ಮೇಲೆ) ಪದ್ಮಾಸನ ಹಾಕಿ. ಪದ್ಮಾಸನವು ಹಿಂದೆ-ಮುಂದೆ ಬಾಗದಂತೆ ನೇರವಾಗಿರಿಸಿ. ಅಂತಿಮ ಸ್ಥಿತಿಯಲ್ಲಿ ದೃಷ್ಟಿಯನ್ನು ಪದ್ಮಾಸದ ಮೇಲಿರಿಸಿ.
* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.