ADVERTISEMENT

ಪ್ರಸವೋತ್ತರ ಸಮಸ್ಯೆಗೆ ‘ಯೋಗ’ ಪರಿಹಾರ

ಪ್ರಜಾವಾಣಿ ವಿಶೇಷ
Published 17 ಜೂನ್ 2023, 0:53 IST
Last Updated 17 ಜೂನ್ 2023, 0:53 IST
   

ತಾಯ್ತನವೆನ್ನುವುದು ಹೆಣ್ಣಿಗೆ ನಿಸರ್ಗದತ್ತವಾದ ವರ. ಮೊದಲನೇ ತ್ರೈಮಾಸಿಕದಿಂದ ಬಾಣಂತನದ ನಂತರವೂ ಅನೇಕ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗದ ಒತ್ತಡಗಳಿಂದಾಗಿ ತಾಯ್ತನವನ್ನು ನೋಡುವ ರೀತಿಯೇ ಬದಲಾಗಿದೆ.

ಪ್ರಸವ ನಂತರ ಬದಲಾಗುವ ದೇಹದ ಆಕಾರ, ಹಾರ್ಮೋನ್‌ಗಳ ಏರಿಳಿತ, ಸ್ನಾಯುಗಳ ದುರ್ಬಲದಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಪ್ರಮುಖವಾಗಿರುವುದು ಪೆಲ್ವಿಕ್‌ ಪ್ಲೋರ್‌ ಮಸಲ್‌ ವೀಕ್‌ನೆಸ್‌ (Pelvic floor muscle weakness), ‌ದೇಹದ ತೂಕ ಹೆಚ್ಚಳ ಹಾಗೂ ಮಾನಸಿಕವಾಗಿ ಖಿನ್ನತೆಯ ಭಾವ ಬರುವ ಸಾಧ್ಯತೆ ಇರುತ್ತದೆ. ಗರ್ಭಾವಸ್ಥೆಯಲ್ಲಿ ಪೆಲ್ವಿಕ್‌ ಮೇಲೆ ಒತ್ತಡ, ಸಹಜ ಹೆರಿಗೆಯಲ್ಲಿ ಅತಿಯಾಗಿ ವಿಸ್ತರಿಸಿದ ಸ್ನಾಯುಗಳು ಹಾಗೂ ದೀರ್ಘಕಾಲದ ಮಲಬದ್ಧತೆ ಯಿಂದ ಈ ಸಮಸ್ಯೆ ಉಂಟಾಗಬಹುದು.

ಇನ್ನು ಗರ್ಭಾವಸ್ಥೆಯಲ್ಲಿ ಹೆಚ್ಚುವ ದೇಹದ ತೂಕ ಪ್ರಸವದ ನಂತರವೂ ಕೆಲವು ತಿಂಗಳು ಹಾಗೇ ಇರುತ್ತದೆ. ಅಷ್ಟೆ ಅಲ್ಲದೆ ದೀರ್ಘಕಾಲ ಕುಳಿತು ಸ್ತನ್ಯಪಾನ ಮಾಡಿಸುವುದು, ನಿದ್ರಾಹೀನತೆ, ಬಾಣಂತಿಯ ಆರೈಕೆಗಳಿಂದ ಇನ್ನಷ್ಟು ತೂಕ ಹೆಚ್ಚುವ ಸಾಧ್ಯತೆ ಇದೆ. ಈ ಬದಲಾವಣೆ ಸಾಮಾನ್ಯವಾಗಿದ್ದು, ದೇಹ ಮೊದಲಿನಂತೆ ಆಗಲು ಸಮಯ ತೆಗೆದುಕೊಳ್ಳುತ್ತದೆ. ಈ ಹೆಚ್ಚುವರಿ ತೂಕವನ್ನು 6 ರಿಂದ 12 ತಿಂಗಳ ಒಳಗೆ ಇಳಿಸಿಕೊಳ್ಳುವುದು ಒಳಿತು.

ADVERTISEMENT

ನವಜಾತ ಶಿಶುವಿನ ಆರೈಕೆಯಲ್ಲಿ ತೊಡಗಿಸಿಕೊಳ್ಳುವ ತಾಯಂದಿರಿಗೆ ಅವಶ್ಯಕ ವಿಶ್ರಾಂತಿ ದೊರೆಯುವುದಿಲ್ಲ. ಪ್ರಸವದ ನೋವು, ಸುಸ್ತು, ಹೆಚ್ಚಾದ ಜವಾಬ್ದಾರಿ, ತಾಯ್ತನದಿಂದ ಹೆಚ್ಚಿರುವ ನಿರೀಕ್ಷೆಗಳು ದೈಹಿಕ ಹಾಗೂ ಮಾನಸಿಕ ಒತ್ತಡಗಳನ್ನು ಉಂಟು ಮಾಡುತ್ತವೆ. ದೈಹಿಕ ಆರೋಗ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೋ ಬಾಣಂತಿಯ ಮಾನಸಿಕ ಆರೋಗ್ಯಕ್ಕೆ ಒತ್ತು ಕೊಡುವುದು ಅಷ್ಟೆ ಮುಖ್ಯ.

ದೈಹಿಕ ಒತ್ತಡದಂತೆ, ಮಾನಸಿಕ ಒತ್ತಡವು ಸಾಮಾನ್ಯವಾಗಿದ್ದು, ಇದು ಮೂಡ್‌ನಲ್ಲಿ ಏರಿಳಿತ, ಕೋಪ, ಅನುಮಾನ, ನಕಾರಾತ್ಮಕ ಭಾವನೆ, ಕಿರಿಕಿರಿ, ಗೊತ್ತಿಲ್ಲದಂತೆ ಸುಮ್ಮನೆ ಅಳುವುದು ತೋರಬಹುದು.

ತಾಯಿಯನ್ನು ಕಾಡುವ ದುಃಖ, ಒಂಟಿತನದ ಭಾವನೆಯನ್ನು ‘ಬೇಬಿ ಬ್ಲ್ಯೂಸ್‌’ ಎಂದು ಕರೆಯಬಹುದು. ಹೆರಿಗೆಯಾದ ಒಂದೆರಡು ದಿನಗಳಿಂದ ಎರಡು ವಾರಗಳವರೆಗೂ ಕಾಡಬಹುದು. ಎರಡೂ ವಾರಗಳಿಗಿಂತ ಹೆಚ್ಚಾಗಿ ಕಂಡುಬಂದರೆ ಇದು ಪ್ರಸವ ನಂತರದ ಖಿನ್ನತೆ ಎಂದು ಕರೆಯುತ್ತಾರೆ. ಪ್ರಸವ ನಂತರ ಖಿನ್ನತೆ ಹೆಚ್ಚಾದಂತೆ ಆತ್ಮಹತ್ಯೆಯ ದಾರಿ ಹಿಡಿಯಬಹುದು. ನಿರ್ಲಕ್ಷ್ಯ ಮಾಡದೇ ತಜ್ಞ ವೈದ್ಯರನ್ನು ಸಂಪರ್ಕಿಸಿ.

ವಿಪರೀತಕರ್ಣಿ ಮಾಡುವ ಬಗೆ
ಯೋಗ ಮ್ಯಾಟ್ ಅನ್ನು ಗೋಡೆಯ ಸಮೀಪ ಹಾಕಿಕೊಳ್ಳಿ. ಗೋಡೆಯ ಪಕ್ಕ ನೇರವಾಗಿ ಮಲಗಿ. ದೇಹಕ್ಕೂ ಗೋಡೆಗೂ ಯಾವುದೇ ಅಂತರ ಇರಬಾರದು. ಆರಾಮಾಗಿ ಉಸಿರಾಡುತ್ತ ಕಾಲುಗಳನ್ನು ಒಂದೊಂದಾಗಿ ಗೋಡೆಯ ಮೇಲೆ ಸರಿಸಿ. ಏಕಕಾಲದಲ್ಲಿ ದೇಹವನ್ನು ಸರಿಸಿ, ‘ಎಲ್‌’ ಆಕಾರಕ್ಕೆ ತನ್ನಿ. ಕೈಗಳನ್ನು ಪಕ್ಕದಲ್ಲಿ ಚಾಚಿ. ಹಸ್ತಗಳು ಮೇಲ್ಮುಖವಾಗಿರಲಿ. ದೀರ್ಘವಾಗಿ ಉಸಿರಾಡುತ್ತ ಹೊಟ್ಟೆಯ ಭಾಗವನ್ನು ಗಮನಿಸಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚುವುದಲ್ಲದೇ ಮಾನಸಿಕ ದೃಢತೆಯನ್ನು ಪಡೆಯಬಹುದು.
ಪರಿಹಾರ ಏನು ?
ಸರಿಯಾದ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡುವುದರಿಂದ ಬಾಣಂತಿಯರನ್ನು ಕಾಡುವ ಈ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹೆರಿಗೆಯ ನಂತರ ಮಾಡುವ ಯೋಗಾಭ್ಯಾಸವನ್ನು ಪೋಸ್ಟ್‌ಪಾರ್ಟಮ್‌ ಯೋಗಾಭ್ಯಾಸ ಎನ್ನಲಾಗುತ್ತದೆ. ಹೆರಿಗೆಯಾದ ಆರರಿಂದ 8 ವಾರಗಳ ನಂತರ ಪ್ರಾರಂಭಿಸಬಹುದು.

ಪೆಲ್ವಿಕ್‌ ಫ್ಲೋರ್‌ ಸ್ನಾಯುಗಳನ್ನು ಬಲಪಡಿಸಲು: ಸೇತುಬಂಧಾಸನ, ಅಶ್ವಿನಿ ಮುದ್ರ, ಮೂಲಬಂಧ.

ತೂಕ ಕಳೆದುಕೊಳ್ಳಲು: ಮಾರ್ಜರಿಯಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ.

ಮಾನಸಿಕ ಆರೋಗ್ಯಕ್ಕೆ: ಬಾಲಾಸನ, ವಿಪರೀತಕರ್ಣಿ, ಶವಾಸನ. ಇದರ ಜತೆಗೆ ಪ್ರಾಣಾಯಾಮ, ಯೋಗಿಕ್‌ ಬ್ರೀದಿಂಗ್‌, ನಾಡಿಶೋಧನ, ಭ್ರಮರಿಯನ್ನು ನಿತ್ಯ ಅಭ್ಯಾಸ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

(

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.