ADVERTISEMENT

ಸರ್ವ ರೋಗಗಳಿಗೂ ಮದ್ದು ಸರ್ವಾಂಗಾಸನ

ಜಿ.ಎನ್.ಶಿವಕುಮಾರ
Published 19 ಜೂನ್ 2019, 16:37 IST
Last Updated 19 ಜೂನ್ 2019, 16:37 IST
ಆಸನ
ಆಸನ   

ಶಿಷ್ಯ: ದೇಹವೇ ಭಾರ ಎನಿಸುತ್ತಿದೆ. ಏನೊಂದೂ ಕೆಲಸ, ಓದು ಯಾವುದರಲ್ಲೂ ಆಸಕ್ತಿ ಮೂಡುತ್ತಿಲ್ಲ. ಮೈ ಕೈ ಎಲ್ಲಾ ಜಡವಾಗಿದೆ. ನರ ನಾಡಿಗಳು ಸೆಳೆಯುತ್ತಿವೆ. ಇದಕ್ಕೊಂದು ಪರಿಹಾರ ಸೂಚಿಸಿ ಗುರುಗಳೆ.

ಗುರು: ಮನಸ್ಸು ಮತ್ತು ದೇಹದ ಸರ್ವ ರೋಗಕ್ಕೂ 'ಅಷ್ಟಾಂಗ ಯೋಗ' ದಿವ್ಯ ಔಷಧವಿದ್ದಂತೆ. ಆದ್ದರಿಂದ ನೀನು ದೇಹದ ಜಡತ್ವವನ್ನು ಕಿತ್ತೊಗೆಯಲು ಯೋಗದ ಮೂರನೇ ಹಂತ ‘ಆಸನ’ದಲ್ಲಿ ವಿವರಿಸಿರುವ ವಿವಿಧ ಆಸನಗಳನ್ನು ಅಭ್ಯಸಿಸು.

ಶಿಷ್ಯ: ಮೊದಲು ಯಾವ ಆಸನ ಅಭ್ಯಾಸ ಮಾಡಬೇಕು? ಕ್ರಮದ ಬಗ್ಗೆ ವಿವರಿಸಿ.

ADVERTISEMENT

ಗುರು: ‘ಆಸನಗಳ ತಾಯಿ’ ಎನಿಸಿರುವ ಸರ್ವಾಂಗಾಸನ ಕಲಿತುಕೊ. ಸಮತಟ್ಟಾದ ನೆಲದ ಮೇಲೆ ಜಮಖಾನ ಅಥವಾ ಮ್ಯಾಟ್, ಚಾಪೆ ಹಾಸಿ ಅಭ್ಯಾಸ ಮಾಡು. ಸರ್ವಾಂಗ ಎಂದರೆ ದೇಹದ ಎಲ್ಲಾ ಅವಯವ ಅಥವಾ ಭಾಗಗಳು. ಈ ಆಸನ ಭಂಗಿಯಿಂದ ಶರೀರದ ಎಲ್ಲಾ ಅಂಗಗಳಿಗೆ ವ್ಯಾಯಾಮ ಒದಗುವುದರಿಂದ ಸರ್ವಾಂಗಾಸನ ಎಂಬ ಹೆಸರಿದೆ. ದೇಹ, ಮನಸ್ಸಿನ ರೋಗಗಳಿಗೆ ಸಿದ್ಧೌಷಧಿಯಂತೆ ಕಾರ್ಯ ನಿರ್ವಹಿಸುವುದರಿಂದ ಇದಕ್ಕೆ ‘ಆಸನಗಳ ತಾಯಿ’ ಎಂಬ ಸ್ಥಾನವೂ ಇದೆ.
ಕೈಗಳ ಆಶ್ರಯದಿಂದ ಕುತ್ತಿಗೆ, ಭುಜಗಳ ಮೇಲೆ ನೆಲೆಸುವ ಈ ಆಸನ ಸಾಲಂಬ ಸರ್ವಾಂಗಾಸನ ಎಂದೂ ಕರೆಯಲ್ಪಡುತ್ತದೆ.

ಅಭ್ಯಾಸ ಕ್ರಮ

ಹಂತ 1: ಕಾಲುಗಳನ್ನು ನೀಳವಾಗಿ ಚಾಚಿ ಬೆನ್ನು ಕೆಳಗೆ ಮಾಡಿ ಮೇಲ್ಮುಖವಾಗಿ ಮಲಗಿ. ಕೈಗಳು ತೊಡೆಯ ಪಕ್ಕ ಮೇಲ್ಮುಖವಾಗಿರಲಿ.

ಮಂಡಿಗಳನ್ನು ಕೂಡಿಸಿ, ಪಾದಗಳನ್ನು ಚೂಪಾಗಿಸಿ ಸ್ವಲ್ಪ ಬಿಗಿಗೊಳಿಸಿ. ಉಸಿರನ್ನು ಹೊರ ಹಾಕುತ್ತಾ ಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಿ.

ನೆಲದಿಂದ 30 ಡಿಗ್ರಿ ಕೋನದಲ್ಲಿ 10 ಸೆಕೆಂಡು, 60 ಡಿಗ್ರಿ ಕೋನದಲ್ಲಿ 10 ಸೆಕೆಂಡು, 90 ಡಿಗ್ರಿ ಕೋನದಲ್ಲಿ 10 ಸೆಕೆಂಡು ನಿಲ್ಲಿಸಿ. ಸೊಂಟ ಭಾಗವನ್ನು ಮೇಲೆತ್ತಿ ಕಾಲುಗಳನ್ನು ತಲೆ ಇರುದ ದಿಕ್ಕಿನತ್ತ ಚಾಚಿ. ಕೈಗಳನ್ನು ಸೊಂಟಕ್ಕೆ ಆಧಾರವಾಗಿಸಿ, ಒತ್ತಿಕೊಳ್ಳುತ್ತಾ ಕಾಲುಗಳನ್ನು ಮೇಲಕ್ಕೆತ್ತಿ ನೇರವಾಗಿ ನಿಲ್ಲಿಸಿ.

ಮುಂಡಭಾಗ, ತೊಡೆ, ಮೀನಖಂಡ, ಪಾದ ಒಂದೇ ನೇರಕ್ಕೆ ಬರುವಂತೆ ಸಮತೋಲನ ಸಾಧಿಸಿ. ಎದೆಯನ್ನು ಹಿಗ್ಗಿಸಿ ಗದ್ದಕ್ಕೆ ತಾಗುವಂತಿರಿಸಿ, ಪಾದದ ಹೆಬ್ಬೆರಳನ್ನು ನೋಡುತ್ತಾ ಗಮನ ಕೇಂದ್ರೀಕರಿಸಿ.

ಅಂತಿಮ ಸ್ಥಿತಿಯಲ್ಲಿ ಒಂದರಿಂದ ಐದು ನಿಮಿಷದವರೆಗೆ ನಿಮ್ಮ ಸಾಮರ್ಥ್ಯ ಅರಿತು ದೇಹವನ್ನು ಅತ್ತಿತ್ತ ಅಲುಗಾಡದಂತೆ ಸ್ಥಿರವಾಗಿ ನಿಲ್ಲಿಸಿ. ಸರಳವಾದ ಉಸಿರಾಟ ನಡೆಸಿ.

ಅಂತಿಮ ಸ್ಥಿತಿ ತಲುಪಿದ ಕ್ರಮದಲ್ಲಿಯೇ ನಿಧಾನವಾಗಿ ಅವರೋಹಣ ಮಾಡಿ. ನೆಲದ ಮೇಲೆ ಕಾಲುಗಳನ್ನು ನೀಳವಾಗಿ ಚಾಚಿ ದೀರ್ಘ ಉಸಿರಾಟ ನಡೆಸಿ ಒಂದು ನಿಮಿಷ ವಿರಮಿಸಬೇಕು. ತಕ್ಷಣ ಮೇಲೇಳಬೇಡಿ.

ಫಲಗಳು

* ದೇಹಸಂಬಂಧಿತ ಎಲ್ಲಾ ಕಾಯಿಲೆಗಳ ಪರಿಹಾರಕ್ಕೆ ಸಹಕಾರಿ

* ಸರಾಗ ರಕ್ತ ಪರಿಚಲನೆ ಉಂಟಾಗಿ ಮೆದುಳಿಗೆ ಹೆಚ್ಚಿನ ಶುದ್ಧ ರಕ್ತ ಪೂರೈಕೆಗೆ ಸಹಾಯ

* ನೆನಪಿನ ಶಕ್ತಿ ಹೆಚ್ಚಳ

* ಕುತ್ತಿಗೆ, ಗಂಟಲು ಭಾಗಕ್ಕೆ ಉತ್ತಮ ವ್ಯಾಯಾಮ ದೊರೆತು ಥೈರಾಯಿಡ್ ಹಾಗೂ ಪ್ಯಾರಾಥೈರಾಯಿಡ್ ಗ್ರಂಥಿಗಳ ಸರಿಯಾದ ಕಾರ್ಯ ನಿರ್ವಹಣೆಗೆ ನೆರವಾಗುತ್ತದೆ.

* ಉಸಿರಾಟ, ಶ್ವಾಸನಾಳ ತೊಂದರೆ, ಗಂಟಲುಬೇನೆ, ವೇಗವಾದ ಎದೆಬಡಿತ, ಅರ್ಧತಲೆನೋವು ನಿವಾರಣೆ.

* ನರಗಳು ಮತ್ತು ಸ್ನಾಯು ಸೆಳೆತ ನಿವಾರಿಸಿ, ನಿರ್ನಿದ್ರೆ ಸಮಸ್ಯೆ ಇಲ್ಲವಾಗಿಸುತ್ತದೆ.

* ಕಿಬ್ಬೊಟ್ಟೆಯ ಅಂಗಗಳ ಮೇಲೆ ಪರಿಣಾಮ, ಮೂತ್ರ ವಿಸರ್ಜನೆ ತೊಂದರೆ ಹಾಗೂ ಮಹಿಳೆಯರ ಮಾಸಿಕ ಸ್ರಾವದ ತೊಂದರೆ, ಹೊಟ್ಟೆ, ಕುರುಳುಹುಣ್ಣು, ದೊಡ್ಡಕರುಳಿನ ಊತ ನಿವಾರಣೆ.

* ಮೂರ್ಛೆರೋಗ, ರಕ್ತಕ್ಷಯ ನಿವಾರಿಸುತ್ತದೆ.

ಸೂಚನೆ: ಹೆಚ್ಚು ರಕ್ತದೊತ್ತಡ ಸಮಸ್ಯೆ ಇರುವವರು ಹಲಾಸನದ ಸಾಧನೆ ಬಳಿಕ ಸರ್ವಾಂಗಾಸನ ಅಭ್ಯಸಿಸಬೇಕು.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.