ಸೂರ್ಯನಿಗೆ ಅಭಿಮುಖವಾಗಿ ನಿಂತು ನಮಸ್ಕಾರ ಮಾಡುವ ವಿಧಾನವೇ ಸೂರ್ಯ ನಮಸ್ಕಾರ. ಜತೆಗೆ, ಪ್ರತಿ ಸುತ್ತಿಗೂ ಸೂರ್ಯನ ವಿವಿಧ ಹೆಸರುಗಳ ಪಠಣ ಮಾಡುವ ಪದ್ಧತಿ ಇದರಲ್ಲಿ ಅನುಸರಿಸುತ್ತಾ ಬರಲಾಗಿದೆ. ಆದರೆ, ಇಲ್ಲಿ ಸೂರ್ಯನಿಗೇ ಏಕೆ ನಮಸ್ಕಾರ ಮಾಡಬೇಕು? ಶ್ಲೋಕಗಳನ್ನೇಕೆ ಪಠಣ ಮಾಡಬೇಕು ಎಂಬ ಪ್ರಶ್ನೆಗಳೇಳುತ್ತವೆ. ಇವುಗಳ ತಿಳಿವಳಿಕೆ ಅಗತ್ಯವಾಗಿದೆ.
ಸೂರ್ಯನಿಗೇಕೆ ನಮಸ್ಕಾರ ಮಾಡಿದರು?
ಆಕಾಶ ಕಾಯದಲ್ಲಿ ನಡೆದ ಮಹಾಸ್ಫೋಟದಿಂದಾಗಿ ಭೂಮಿಯ ರಚನೆಯಾಗಿದೆ ಎಂದು ಖಗೋಳ ಶಾಸ್ತ್ರಜ್ಞರು ಪ್ರತಿಪಾದಿಸಿದ್ದಾರೆ. ಈ ಭೂಮಿಯ ಎಲ್ಲಾ ಚಟುವಟಿಕೆಗಳಿಗೆ ಅಂದರೆ, ಗಾಳಿ, ಬೆಳಕು, ನೀರು, ಕಾಡು-ಮೇಡು, ಜೀವಿಗಳ ಹುಟ್ಟು, ಮಾನವ ಜೀವಿಯ ವಿಕಾಸದ ಹಾದಿ ಇದೆಲ್ಲದಕ್ಕೂ ಮೂಲ ಕಾರಣ ಸೂರ್ಯನ ಇರುವಿಕೆ ಎಂಬುದನ್ನು ವಿಜ್ಞಾನ ಒಪ್ಪಿಕೊಂಡಿದೆ. ವಿಜ್ಞಾನದ ಪ್ರಕಾರ ಸೂರ್ಯ ಒಂದು ಬೆಂಕಿ ಚೆಂಡು ಎಂದಾದರೂ ಸೂರ್ಯನ ಬೆಳಕಿಲ್ಲದೆ ವಿಶ್ವದ ಚಟುವಟಿಕೆ ನಡೆಯಲಾರದು. ಇದನ್ನೇ ಸಾವಿರಾರು ವರ್ಷಗಳ ಹಿಂದೆ ಮನಗಂಡಿದ್ದ ನಮ್ಮ ಹಿರಿಯರು ಪ್ರಕೃತಿಯ ಆರಾಧನೆಯ ಜತೆಗೆ ಸೂರ್ಯ, ಚಂದ್ರರನ್ನೂ ಪೂಜಿಸಿದರು. ತಮ್ಮ ಇರುವಿಕೆಗೆ ಕಾರಣನಾದ ಸೂರ್ಯನಿಗೆ ದೇವರ ಸ್ಥಾನ ನೀಡಿದರು.
ಜೀವನ ಕ್ರಮದಲ್ಲಿ ಯೋಗವನ್ನು ಅಳವಡಿಸಿಕೊಂಡ ಜನ ನಿತ್ಯ ತಮ್ಮ ದೇಹವನ್ನು ದಂಡಿಸುವ ಮೂಲಕ ಸೂರ್ಯೋದಯದ ಮತ್ತು ಸೂರ್ಯಾಸ್ತದ ವೇಳೆ ಸೂರ್ಯನಿಗೆ ನಮಸ್ಕಾರಗೈಯುತ್ತಾ ಬಂದರು. ಸೂರ್ಯನ ರಶ್ಮಿಗೆ ಮೈಯೊಡ್ಡಿ 'ಸೂರ್ಯಸ್ನಾನ' ಮಾಡಿದರು.
1)ಪ್ರಶಾಂತ ವಾತಾವರಣದಲ್ಲಿ ಸೂರ್ಯೋದಯ ನೋಡುವುದರಿಂದ ಮನಸ್ಸಿನಲ್ಲಿ ಹೊಸ ಚೈತನ್ಯ ಚಿಗುರೊಡೆಯುತ್ತದೆ.
2)ಸೂರ್ಯನಿಗೆ ಅಭಿಮುಖವಾಗಿ ನಿಂತು ಸೂರ್ಯನನ್ನು ತದೇಕ ಚಿತ್ತದಿಂದ ನೋಡುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ(ಬೆಳಿಗ್ಗೆ ಮತ್ತು ಸಂಜೆ ಪ್ರಖರ ಬಿಸಿಲು ಇಲ್ಲದಿದ್ದಾಗ ಒಂದೆರೆಡು ನಿಮಿಷ).
3)ಸೂರ್ಯಸ್ನಾನದಿಂದ ಚರ್ಮರೋಗ ನಿವಾರಣೆ
4) ಸೂರ್ಯನ ರಶ್ಮಿಯಿಂದ ದೇಹ ಹೊಸ ಚೈತನ್ಯ ಪಡೆಯುತ್ತದೆ.
ಎಲ್ಲದಕ್ಕೂ ಮೇಲಾಗಿ ನಮ್ಮ ಇರುವಿಕೆಗೆ ಸೂರ್ಯನೇ ಮೂಲ ಕಾರಣ. 'ಸೂರ್ಯನಿಲ್ಲದ ಬದುಕು ಬರೀ ಕತ್ತಲೆ' ಎಂಬುದನ್ನು ಮನಗಂಡ ಪೂರ್ವಜರು ಸೂರ್ಯ ನಮಸ್ಕಾರ ರೂಢಿಸಿಕೊಂಡು ಬಂದರು. ದೇಹಕ್ಕೆ ಕ್ರಮಬದ್ಧವಾದ ಚಲನೆ ನೀಡುವ ಮೂಲಕ ನಮಸ್ಕಾರ ಮಾಡುವ ವೇಳೆ ಸೂರ್ಯನ ವಿವಿಧ ಹೆಸರುಗಳಾದ ಮಿತ್ರಾಯ ನಮಃ, ರವಯೇಯ ನಮಃ, ಸೂರ್ಯಾಯ ನಮಃ, ಭಾಸ್ಕರಾಯ ನಮಃ, ಖಘಾಯ ನಮಃ, ಸವಿತ್ರೇಯ ನಮಃ, ಪೂಷ್ಣೇಯ ನಮಃ, ಅರ್ಖಾಯ ನಮಃ(ಇಲ್ಲಿ ನಮಃ ಎಂದರೆ ನಮಿಸು ಅಥವಾ ನಮಸ್ಕಾರ ಎಂದರ್ಥ) ಎಂಬಿತ್ಯಾದಿಗಳಿಂದ ಕರೆಯುವ ಮೂಲಕ ನಮಸ್ಕಾರ ಮಾಡಿದರು. ಅದೇ ಸೂರ್ಯ ನಮಸ್ಕಾರ.
* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.