ದೇಹ ರಚನೆ ಮತ್ತು ದೈಹಿಕ ಕಾರ್ಯಕ್ಷಮತೆ ವಿಷಯದಲ್ಲಿ ಮಹಿಳೆ ಮತ್ತು ಪುರಷರಲ್ಲಿ ಸಾಕಷ್ಟು ವ್ಯತ್ಯಾಸಗಳಿರುವ ಕಾರಣ, ಯೋಗ ಮತ್ತು ದೈಹಿಕ ಕಸರತ್ತಿನ ಚಟುವಟಿಕೆ ಹಾಗೂ ಆಟೋಟಗಳಲ್ಲಿ ತೊಡಗುವಾಗ ಮಹಿಳೆಯರು ಕೆಲವು ಮುನ್ನೆಚ್ಚರಿಕೆ ಅನುಸರಿಸುವುದ ಅತ್ಯಗತ್ಯ. ಪುರುಷ ಹಾಗೂ ಮಹಿಳೆಯರು ಯಾವುದೇ ತಾರತಮ್ಯ ಇಲ್ಲದೆ ಯೋಗಾಸನ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡಬಹುದು. ಆದರೆ, ವಿಶೇಷವಾಗಿ ಮಹಿಳೆಯರು ಯಾವೆಲ್ಲಾ ಸಮಯದಲ್ಲಿ ಏನೆಲ್ಲಾ ಕ್ರಮ ಅನುಸರಿಸಬೇಕು ಎಂಬುದು ಅತ್ಯಂತ ಮಹತ್ವದ್ದು. ಅವುಗಳನ್ನು ಇಲ್ಲಿ ವಿವರಿಸಲಾಗಿದೆ.
ಋತುಸ್ರಾವ ವೇಳೆ
* ಮಹಿಳೆಯರು ಮಾಸಿಕ ಋತು ಸ್ರಾವ ವೇಳೆ ಮೂರರಿಂದ ನಾಲ್ಕು ದಿನ ಆಸನಗಳ ಅಭ್ಯಾಸಕ್ಕೆ ತೊಡಗದಿರುವುದು ಒಳಿತು.
* ಆದರೆ, ರಕ್ತಸ್ರಾವ ಎಂದಿಗಿಂತಲೂ ಹೆಚ್ಚಾಗಿದ್ದರೆ ಬದ್ಧಕೋನಾಸನ, ಉಪವಿಷ್ಟ ಕೋನಾಸನ, ಪಶ್ಚಿಮೋತ್ತಾನಾಸನ, ಜಾನುಶೀರ್ಷಾಸನ, ವೀರಾಸನ, ಉತ್ಥಾನಾಸನಗಳ ಅಭ್ಯಾಸ ಉತ್ತಮ ಫಲ ನೀಡುತ್ತವೆ.
* ಋತುಶ್ರಾವಾದ ನಾಲ್ಕರಿಂದ ಐದು ದಿನ ಶೀರ್ಷಾಸನವನ್ನು ಎಂದಿಗೂ ಅಭ್ಯಾಸಿಸಬಾರದು.
ಗರ್ಭಿಣಿಯರಿಗೆ
* ಗರ್ಭಧರಿಸಿದ ಮೊದಲ ಮೂರು ತಿಂಗಳು ಎಲ್ಲಾ ಬಗೆಯ ಆಸನಗನ್ನು ಅಭ್ಯಾಸಿಸಬಹುದು. ನಿಂತು ಮಾಡುವ ಇಲ್ಲವೇ ಮುಂದಕ್ಕೆ ಬಾಗುವ ಸರಳ ಚಲನೆಗಳೊಂದಿಗೆ ಅಭ್ಯಾಸ ಮಾಡಬಹುದು.
* ಗರ್ಭಧಾರಣೆ ವೇಳೆ ಬೆನ್ನು ಹುರಿಗೊಳ್ಳಬೇಕಿರುವುದರಿಂದ ಸರಳ ಅಭ್ಯಾಸ ಅಗತ್ಯ. ಆದರೆ, ಹೊಟ್ಟೆಯ ಮೇಲೆ ಯಾವುದೇ ಒತ್ತಡ ಬೀಳಬಾರದು.
* ಗರ್ಭಧರಿಸಿದಾಗ ಉಪವಿಷ್ಟಕೋನಾಸನ, ಬದ್ಧಕೋನಾಸನಗಳನ್ನು ದಿನದ ಯಾವುದೇ ವೇಳೆಯಲ್ಲಿ (ಊಟವಾದ ಬಳಿಕವೂ) ಅಭ್ಯಾಸಿಸಲು ಅಡ್ಡಿಯಿಲ್ಲ.ಇವುಗಳು ಮಹಿಳೆಯರ ಕಿರುಬೆನ್ನು, ವಸ್ತಿಕುಹರ ಭಾಗದ ಮಾಂಸಖಂಡಗಳಿಗೆ ಬಲ ತುಂಬಿ, ಪ್ರಸವವೇದನೆಯನ್ನು ಕಡಿಮೆ ಮಾಡುತ್ತವೆ.
* ಕುಂಭಕ (ಉಸಿರನ್ನು ಒಳಗೆ ತಡೆದು ನಿಲ್ಲಿಸುವುದು) ರಹಿತ ಸರಳ ಪ್ರಾಣಾಯಾಮಗಳ ಕ್ರಮಬದ್ಧ ಅಭ್ಯಾಸ ಸುಖಪ್ರಸವಕ್ಕೆ ನೆರವಾಗುತ್ತದೆ.
* ಶಿಶು ಜನನದ ಬಳಿಕ ಸ್ತ್ರೀಯರುಒಂದು ತಿಂಗಳ ಕಾಲ ಆಸನಗಳ ಅಭ್ಯಸಕ್ಕೆ ತೊಡಗಕೂಡದು. ಬಳಿಕ, ಸರಳವಾದ ಆಸನ ಅಭ್ಯಾಸಿಸಬಹುದು. ಮೂರು ತಿಂಗಳ ನಂತರ ಎಲ್ಲಾ ಆಸನಗಳನ್ನು ಅಭ್ಯಾಸ ಮಾಡಬಹುದು.
ಪ್ರಾಣಾಯಾಮ ಅಭ್ಯಾಸದಲ್ಲಿ
* ಮಹಿಳೆಯರು ಗರ್ಭಧರಿಸಿದಾಗ ಕಪಾಲಭಾತಿ, ಭಸ್ತ್ರಿಕಾ ಪ್ರಾಣಾಯಾಮ ಹಾಗೂ ವಿಷಮವೃತ್ತಿ, ಅಂತರ ಕುಂಬಕ, ಉಡ್ಡಿಯಾನ ಸಹಿತ ಬಾಹ್ಯ ಕುಂಬಕ ಪ್ರಾಣಾಯಾಮಗಳ ಅಭ್ಯಾಸ ಮಾಡಕೂಡದು. ಉಳಿದಂತೆ ಸರಳ ಪ್ರಾಣಾಯಾಗಳನ್ನು ಅವರವರ ದೈಹಿಕ ಸಾಮರ್ಥ್ಯ ಅರಿತು ಅಭ್ಯಾಸಿಸಬಹುದು.
* ಹೆರಿಗೆಯಾದ ನಂತರ ಒಂದು ತಿಂಗಳು ಪ್ರಾಣಾಯಾಮ ಅಭ್ಯಾಸ ಬೇಡ.
* ಮಾಸಿಕ ಋತು ಸ್ರಾವ ಆದಾಗ ಅಭ್ಯಾಸ ನಡೆಸಬಹುದು. ಉತ್ತಮ ಲಾಭವೂ ಲಭ್ಯವಾಗುತ್ತದೆ. ಈ ವೇಳೆ ಉಡ್ಡಿಯಾನ ಬಂಧ ಬೇಡ.
ಸೂರ್ಯನಮಸ್ಕಾರ ಅಭ್ಯಾಸದಲ್ಲಿ
* ಸ್ತ್ರೀ–ಪುರುಷರಾದಿಯಾಗಿ ಎಲ್ಲರೂ ಸೂರ್ಯನಮಸ್ಕಾರ ಅಭ್ಯಾಸ ಮಾಡಲು ಯಾವ ಅಭ್ಯಂತರವೂ ಇಲ್ಲ.
* 8 ಮತ್ತು 9ನೇ ವಯಸ್ಸಿನಿಂದ 12–13ನೇ ವಯೋಮಾನದ ಬಾಲಕಿಯರು 20ರಿಂದ 30 ಸುತ್ತು(12 ಹಂತಗಳನ್ನು ಪೂರ್ಣಗೊಳಿಸಿದಾಗ ಒಂದು ಸುತ್ತು), 13ರಿಂದ 18–20ನೇ ವಯೋಮಾನದವರು 25 ರಿಂದ 50 ಸುತ್ತು ಸೂರ್ಯ ನಮಸ್ಕಾರ ಅಭ್ಯಾಸ ಮಾಡಬಹುದು.
* ಮತ್ಸ್ಯಾಸನ ಅಭ್ಯಾಸದಿಂದ ಕುತ್ತಿಗೆಯು ಹಿಗ್ಗುವುದರಿಂದ ಗೋಮಾಳ ಭಾಗದ ಥೈರಾಯಿಡ್ ಉತ್ತಮ ಪ್ರಯೋಜನ ಹೊಂದಿ, ಸರಿಯಾಗಿ ಕಾರ್ಯನಿರ್ವಹಿಸುವುದು. ಈ ಮೂಲಕ ಮಹಿಳೆಯರಲ್ಲಿನ ಗರ್ಭಧಾರಣೆಗೆ ತೊಡಕಾಗಿರುವ ಥೈರಾಯಿಡ್ ಸಮಸ್ಯೆಯಿಂದ ಹೊರ ಬರಲು ನೆರವಾಗುತ್ತದೆ.
ಋತುಸ್ರಾವ ಹಾಗೂ ಅಂಡಕೋಶ ಸಮಸ್ಯೆ ನಿವಾರಕ ಆಸನಗಳು
* ಶೀರ್ಷಾಸನ, ಸರ್ವಾಂಗಾಸನ, ಬದ್ಧಪದ್ಮಾಸನ, ಉತ್ತಾನಾಸನ, ಪರ್ವತಾಸನ, ಪಶ್ಚಿಮೋತ್ತಾನಾಸನ, ಅಧೋಮುಖ ಸ್ವಾನಾಸನ, ಕೂರ್ಮಾಸನ, ಮತ್ಸ್ಯಾಸನ, ವೀರಾಸನ, ಸೂಪ್ತವೀರಾಸನ, ಯೋಗನಿದ್ರಾಸನ, ಪರ್ಯಂಕಾಸನ, ಪಾಶಾಸನ, ಅರ್ಧಮತ್ಸ್ಯೇಂದ್ರಾಸನ, ಊರ್ಧ್ವಧನುರಾಸನಗಳು ಹಾಗೂ ನಾಡಿಶೋಧನ ಪ್ರಾಣಾಯಾಮ ಮತ್ತು ಉಡ್ಡಿಯಾನ.
ಬಂಜೆತನ ನಿವಾರಿಸುವ ಆಸನಗಳು
* ಶೀರ್ಷಾಸನ, ಸರ್ವಾಂಗಾಸನ, ಬದ್ಧ ಕೋನಾಸನ, ಪಶ್ಚಿಮೋತ್ತಾನಾಸನ, ಮೂಲಬಂಧಾಸನ, ಕಂದಾಸನ ಹಾಗೂ ಉಜ್ಜಾಯೀ ಮತ್ತು ನಾಡಿಶೋಧನ ಪ್ರಾಣಾಯಾಮಗಳನ್ನು 2-3ತಿಂಗಳ ಕಾಲ ಕುಂಭಕ ರಹಿತ, ನಂತರ ಕುಂಭಕ ಸಹಿತ ಅಭ್ಯಾಸಿಸಬೇಕು.
ಶೀರ್ಷಾಸನದಿಂದ ಮಹಿಳೆಗಾಗುವ ಪ್ರಯೋಜನ
* ಶೀರ್ಷಾಸನ ಹಾಗೂ ಸರ್ವಾಂಗಾಸನಗಳು ಸರ್ವ ರೋಗಗಳಿಗೂ ದಿವ್ಯ ಔಷಧವಿದ್ದಂತೆ. ಆದ್ದರಿಂದ, ಇದಕ್ಕೆ ಆಸನಗಳ ತಂದೆ/ರಾಜ, ತಾಯಿ/ರಾಣಿ ಎಂದು ಹೆಸರಿಸಲಾಗಿದೆ.
* ಮೂತ್ರಕೋಶ ತೊಂದರೆ, ಸೊಂಟದ ವಾತರೋಗ ನಿವಾರಣೆ.
* ಮಾಸಿಕ ಋತುಸ್ರಾವದ ತೊಂದರೆ ನಿವಾರಿಸುವುಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವುದು ಜತಗೆ, ಸ್ತ್ರೀಯರಲ್ಲಿನ ಅಂಡಕೋಶ ತೊಂದರೆ, ನರದೌರ್ಬಲ್ಯ, ಮೂಲವ್ಯಾಧಿ, ಜನನಾಂಗ ತೊಂದರೆ ನಿವಾರಿಸುವುದು.
* ಗರ್ಭಕೋಶ ಸ್ಥಾನಪಲ್ಲಟ ಸಮಸ್ಯೆ ನಿವಾರಿಸಲು ನೆರವಾಗುವುದು.
*ಗರ್ಭಧಾರಣ ಶಕ್ತಿನಾಶ ತಡೆ/ಬಂಜೆತನ ನಿವಾರಣೆಗೆ ಸಹಕಾರಿ.
ಸೂಚನೆ: ಹೆಚ್ಚಿನ ರಕ್ತದೊತ್ತಡ ಇರುವವರು ಶೀರ್ಷಾಸನ ಅಭ್ಯಾಸಕ್ಕೆ ತೊಡಗಬಾರದು. ಕಡಿಮೆ ರಕ್ತದೊತ್ತಡ ಇದ್ದವರು ಅಭ್ಯಾಸಿಸಬಹುದು
* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.