ಯೋಗಾ ಯೋಗ
ಸಮುದ್ರ, ನದಿ, ಕೆರೆ, ಹಳ್ಳಗಳಲ್ಲಿನ ಮೀನು ಹಲವರಿಗೆ ಆಹಾರ. ಮೀನನ್ನು ಬಲೆ, ಗಾಳ ಹಾಕಿ ಹಿಡಿದು ಮಾರುವವರಿಗೆ ಆದಾಯದ ಮೂಲ. ಬಣ್ಣ ಬಣ್ಣದ ಮೀನುಗಳನ್ನು ಅಕ್ವೇರಿಯಂನಲ್ಲಿಟ್ಟರೆ ಅವು ಅತ್ತಿತ್ತ ಚಲಿಸುತ್ತಾ ನೋಡುಗರ ಮನಕ್ಕೆ ಮುದ ನೀಡುತ್ತವೆ.
ಅಂದಹಾಗೆ ಈ ಮೀನಿಗೆ ಮತ್ಸ್ಯ ಎಂಬ ಇನ್ನೊಂದು ಹೆಸರೂ ಇದೆ. ಯೋಗದಲ್ಲಿ ಹೇಳಲಾದ ಆಸನಗಳಲ್ಲಿ ಈ ಮತ್ಸ್ಯವನ್ನು ಹೋಲುವ ಮತ್ಸ್ಯಾಸನವೂ ಇದೆ. ಎದೆ, ಕುತ್ತಿಗೆ ಹಾಗೂ ಸೊಂಟ ಭಾಗದಲ್ಲಿನ ಅವಯವಗಳಿಗೆ ಉತ್ತಮ ವ್ಯಾಯಾಮ ಒದಗಿಸುವ ಇದು ದೇಹ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತದೆ.
ಪುರಾಣಗಳಲ್ಲಿ ಉಲ್ಲೇಖವಿರುವ ವಿಷ್ಣುವಿನ ದಶಾವತಾರಗಳಲ್ಲಿ ಪ್ರಥಮ ಮತ್ಸ್ಯಾವತಾರಕ್ಕೆ ಈ ಆಸನ ಮೀಸಲಾಗಿದೆ ಎಂದು ಹೇಳಲಾಗಿದೆ.
ಅಭ್ಯಾಸಕ್ರಮ
ಕಾಲುಗಳನ್ನು ನೀಳವಾಗಿ ಚಾಚಿ ಕುಳಿತು ಪದ್ಮಾಸನ ಹಾಕಿ. ಕೈಗಳ ಸಹಾಯದಿಂದ ಬೆನ್ನನ್ನು ನೆಲಕ್ಕೊರಗಿಸಿ. ಬಳಿಕ, ಎರಡೂ ಅಂಗೈಗಳನ್ನು ತಲೆಯ ಪಕ್ಕದಲ್ಲಿ ಬೆರಳುಗಳನ್ನು ಬೆನ್ನಿನ ಭಾಗಕ್ಕೆ ಮುಖಮಾಡಿರುವಂತೆ ಇರಿಸಿ. ಬೆನ್ನನ್ನು ಮೇಲಕ್ಕೆತ್ತುತ್ತಾ ಎದೆಯನ್ನು ಹಿಗ್ಗಿಸಿ. ಕೈಗಳ ಮೇಲೆ ಭಾರ ಹಾಕಿ ತಲೆಯನ್ನು ನೆಲದಿಂದ ಬಿಡಿಸಿ ನಡುನೆತ್ತಿಯನ್ನು ನೆಲಕ್ಕೂರಿ. ಬಳಿಕ ಕೈಗಳನ್ನು ತಲೆಯ ಮೇಲೆ ನೀಳವಾಗಿ ಚಾಚಿ ನೇರವಾಗಿಸಿ ತಂದು ಎರಡೂ ಕಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಿ. ಎದೆಯನ್ನು ಮತ್ತಷ್ಟು ಹಿಗ್ಗಿಸುತ್ತಾ ಕೈಗಳ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿ ಮೊಳಕೈಗಳನ್ನು ನೆಲಕ್ಕೆ ತಾಗಿಸಿ. ಈ ವೇಳೆ ಉಸಿರಾಟ ವೇಗದಿಂದ ಕೂಡಿರುತ್ತದೆ. ಅಂತಿಮ ಸ್ಥಿತಿಯಲ್ಲಿ 15ರಿಂದ 20 ಸೆಕೆಂಡು ನೆಲೆಸಿ, ವಿರಮಿಸಿ. ಅವರೋಹಣ ಮಾಡುವಾಗ ಕೈಗಳ ಸಹಾಯದಿಂದ ಮೊದಲು ತಲೆಯನ್ನು ಬಿಡಿಸಿ ಮೆಲ್ಲಗೆ ಭುಜ ಮತ್ತು ತಲೆಯನ್ನು ನೆಲಕ್ಕೊರಗಿಸಿ. ಕನಿಷ್ಠ 30 ಸೆಕೆಂಡು ವಿಶ್ರಾಂತಿ ಪಡೆದ ಬಳಿಕ ಮೇಲೆದ್ದು ಕಾಲುಗಳನ್ನು ಬಿಡಿಸಿ. ಬಳಿಕ, ಪುನರಾವರ್ತನೆ ಅಭ್ಯಾಸ ನಡೆಸಬಹುದು.
ಸೂಚನೆ
ಅಭ್ಯಾಸ ವೇಳೆ ಉಸಿರನ್ನು ಬಿಗಿ ಹಿಡಿಯಬೇಡಿ. ಸರಾಗವಾದ ಉಸಿರಾಟ ನಡೆಯುತ್ತಿರಬೇಕು. ಅಂತಿಮ ಸ್ಥಿತಿಯಲ್ಲಿ ಕತ್ತನ್ನು ಅತ್ತಿತ್ತ ಹೊರಳಿಸಬಾರದು. ಕತ್ತು ಸೂಕ್ಷ್ಮವಾದ್ದರಿಂದ ತೊಂದರೆ ತಂದುಕೊಳ್ಳಬೇಡಿ.
ಫಲಗಳು
* ಎದೆಯು ವಿಶಾಲವಾಗುತ್ತದೆ.
* ಬೆನ್ನಿನ ಭಾಗ ಹಿಗ್ಗುವುದು, ನರಗಳು ಸಡಿಲಗೊಳ್ಳುತ್ತವೆ.
* ಕುತ್ತಿಗೆಯು ಹಿಗ್ಗುವುದರಿಂದ ಗೋಮಾಳ ಭಾಗದಲ್ಲಿನ ಥೈರಾಯಿಡ್ ಗೆ ಉತ್ತಮ ವ್ಯಾಯಾಮ ದೊರೆತು, ಸಮಸ್ಯೆ ದೂರವಾಗುತ್ತವೆ.
* ತುಂಬಿದ ಉಸಿರಾಟ ನಡೆಯಲು ಸಹಕಾರಿಯಾಗುವುದು.
* ವಸ್ತಿಕುಹರ ಭಾಗದ ಕೀಲುಗಳು ಸ್ಥಿತಿಸ್ಥಾಪಕತ್ವ ಹೊಂದುತ್ತವೆ.
* ಭುಜ ಮತ್ತು ತೋಳುಗಳಿಗೆ ಉತ್ತಮ ವ್ಯಾಯಾಮ ಲಭಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.