ADVERTISEMENT

PV Web Exclusive: ಮಿನುಗುತಿರಲಿ ದೇಹದ ದೀಪಗಳು...

ಕಣ್ಣ ಕಾಂತಿಗೆ...

ಸುಶೀಲಾ ಡೋಣೂರ
Published 3 ಫೆಬ್ರುವರಿ 2021, 10:26 IST
Last Updated 3 ಫೆಬ್ರುವರಿ 2021, 10:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಣ್ಣುಗಳು ದೇಹದ ದೀಪಗಳಿದ್ದಂತೆ. ಅವು ಒಳಗಿನಿಂದ ಆರೋಗ್ಯಪೂರ್ಣವಾಗಿರುವುದು ಎಷ್ಟು ಮುಖ್ಯವೊ ಹೊರನೋಟದಲ್ಲೂ ಹಾಗೇ ಹೊಳೆಯುತಿರಬೇಕು ಎನ್ನುವುದು ಅಪೇಕ್ಷಣೀಯ. ನೇತ್ರತಜ್ಞರು ಕಣ್ಣಿನ ಒಳಗುಣದ ಬಗ್ಗೆ ಮಾತ್ರ ಹೆಚ್ಚಿನ ಆಸಕ್ತಿ ಹೊಂದಿದ್ದರೆ, ಸೌಂದರ್ಯ ತಜ್ಞರು ಕಣ್ಣಿನ ಹೊರನೋಟವೂ ಮನೋಹರವಾಗಿರಲಿ ಎಂದು ಹೇಳುತ್ತಾರೆ. ಆದರೆ ದೇಹದ ಈ ಎರಡು ದೀಪಗಳ ಒಡೆಯರೂ, ಒಡನಾಡಿಗಳೂ ಆಗಿರುವ ನಾವು ನೇತ್ರಗಳ ಹೊರ–ಒಳ ಎರಡನ್ನೂ ಅಷ್ಟೇ ಅಕ್ಕರೆಯಿಂದ ನೋಡಬೇಕಾಗುತ್ತದೆ...

ಕಣ್ಣಿನ ಹೊರನೋಟದ ಅಂದವನ್ನು ಹೆಚ್ಚಿಸಿಕೊಳ್ಳುವ ಬಗೆ ಹೇಗೆ, ಅದಕ್ಕಾಗಿ ಅನುಸರಿಸಬಹುದಾದ ಕೆಲವು ಸುಲಭ ಮಾರ್ಗಗಳು ಯಾವವು ಎನ್ನುವ ಬಗ್ಗೆ ಮಾತನಾಡಿದ್ದಾರೆ ಅಪೊಲೊ ಕ್ಲೀನಿಕ್ಸ್‌ನ ಕಾಸ್ಮೆಟಾಲಜಿಸ್ಟ್‌ ಡಾ.ದೀಪಾ ಕೆ.

‘ಡಾರ್ಕ್ ಸರ್ಕಲ್’ ಕಣ್ಗಗಳ ಸುತ್ತಲಿನ ಕಪ್ಪು ಕಲೆಗಳಿಗೆ ಸೋತು ಸುಸ್ತಾಗದವರೇ ಇಲ್ಲ. ಇದು ನಿಮ್ಮ ಅಂದಕ್ಕೆ ಕುಂದು ತರುವುದಷ್ಟೇ ಅಲ್ಲ, ನಿಮ್ಮ ಅನಾರೋಗ್ಯದ ಕೈಗನ್ನಡಿಯೂ ಆಗಿರುತ್ತದೆ. ಹೌದು, ಸುಸ್ತು, ಆಯಾಸ, ಬಳಲಿಕೆ, ಒತ್ತಡದಂತಹ ಎಲ್ಲಾ ವ್ಯತ್ಯಾಸಗಳನ್ನು ಮೊದಲು ತೋರ್ಪಡಿಸುವುದು ಈ ಕಣ್ಣುಗಳೇ. ಅಷ್ಟೇ ಅಲ್ಲ, ಬಳಲುವ ಕಣ್ಗಳು ನಿಮ್ಮನ್ನು ಹತ್ತಾರು ವರ್ಷ ಮುಂಚೆಯೇ ವಯೋವೃದ್ಧರ ಸಾಲಿನಲ್ಲಿ ನಿಲ್ಲಿಸುವ ಜೊತೆಗೆ ನಿಮ್ಮ ದೇಹದಲ್ಲೇನೊ ಕೊರತೆ

ADVERTISEMENT

ಇದೆ, ಯಾವುದೊ ಒಂದು ಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎನ್ನುವುದನ್ನು ಸಾರುತ್ತವೆ. ಆದರೆ ಇದಕ್ಕಾಗಿ ಮಾನಸಿಕ ತೊಳಲಾಟಕ್ಕೆ ಬಿದ್ದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಬೇಕಾದ ಅಗತ್ಯವೇನೂ ಇಲ್ಲ. ಸಮಸ್ಯೆ ಇದ್ದಲ್ಲಿ ಪರಿಹಾರವೂ ಇರುತ್ತದೆ ಎನ್ನುವ ಹಾಗೆ ಡಾರ್ಕ್‌ ಸರ್ಕಲ್‌ ಚಿಂತೆಗೂ ಮುಕ್ತಿ ಇದೆ, ಅದು ನಿಮ್ಮ ಕೈಯಲ್ಲೇ, ನಿಮ್ಮ ಮನೆಯಲ್ಲೇ ಇದೆ ಎನ್ನುವುದು ಸಮಾಧಾನದ ಸಂಗತಿ ಎನ್ನುತ್ತಾರೆ ಡಾ.ದೀಪಾ.

ಡಾ.ದೀಪಾ

ಡಾರ್ಕ್ ಸರ್ಕಲ್‌ನಕಾರಣಗಳು:

*ಅನುವಂಶೀಯತೆ

*ನಿದ್ರೆಯ ಕೊರತೆ

* ಕಣ್ಣಿನ ಒತ್ತಡ

* ಅಲರ್ಜಿಗಳು

* ಅತಿಯಾದ ಸೂರ್ಯನ ಕಿರಣಗಳು

* ವಯಸ್ಸು

* ಕೆಲವು ಔಷಧಿಗಳು

* ಕೆಲವು ಚಿಕಿತ್ಸೆಗಳು

ಪರಿಹಾರಗಳು

ಉತ್ತಮ ನಿದ್ರೆ: ಕನಿಷ್ಠ 8 ಗಂಟೆ ನಿದ್ದೆಯ ಅಗತ್ಯವಿರುತ್ತದೆ. ಅಗತ್ಯ ಪ್ರಮಾಣದ ನಿದ್ದೆಯಿಂದ ಕಣ್ಣುಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಕಣ್ಣುಗಳು ಆರೋಗ್ಯಪೂರ್ಣವಾಗಿ ಕಾಣುತ್ತವೆ. ಕಣ್ಣಿನ ಸುತ್ತ ಮೂಡಿದ ಕಪ್ಪು ವರ್ತುಲ ಕಿರಿದಾಗುತ್ತ ಬರುತ್ತದೆ. ಹಾಗೆಯೇ ನಿದ್ರೆಯ ಗುಣಮಟ್ಟವೂ ಸಹ ಬಹಳ ಮುಖ್ಯ. ಮಲಗುವ ವಿಧಾನವನ್ನು ಬದಲಿಸುವುದರಿಂದಲೂ ಕಣ್ಣಿನ ಅಂದ ಹೆಚ್ಚುತ್ತದೆ. ಕೆಲವರಿಗೆ ತುಂಬಾ ಎತ್ತರದ ದಿಂಬಿನಿಂದ ಕಣ್ಣು ಊದಿದಂತೆ ಕಾಣುವ ಸಾಧ್ಯತೆ ಇರುತ್ತದೆ. ಅಂಥವರು ಸರಿಯಾದ ದಿಂಬಿನ ಆಯ್ಕೆ ಮಾಡಿಕೊಳ್ಳಬೇಕು. ಹಾಗೆಯೇ ಸರಿಯಾದ ವಿಧಾನದಲ್ಲಿ ಮಲಗುವುದನ್ನು ರೂಢಿಸಿಕೊಳ್ಳಬೇಕು.

ಕಂಪ್ಯುಟರ್‌ ಸ್ಕ್ರೀನ್: ಕಣ್ಣಿನ ಸುತ್ತ ಕಪ್ಪು ವರ್ತುಲ ಕಾಣಲು ಕಂಪ್ಯುಟರ್‌ ಸ್ಕ್ರೀನ್‌ ಸಹ ಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ ಸ್ಕ್ರೀನ್‌ ಟೈಮ್ ಕಡಿಮೆ ಮಾಡಿಕೊಳ್ಳಿ. ಕೆಲಸ ಮುಗಿದ ನಂತರವೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ ಕಳೆಯುವುದುಂಟು, ಇನ್ನೂ ಕೆಲವರು ಅದರಲ್ಲಿಯೇ ವಿಂಡೊ ಶಾಪಿಂಗ್‌, ಗೇಮಿಂಗ್‌, ಸಿನಿಮಾ ನೋಡುವುದು ಮಾಡುತ್ತಾರೆ. ಇದನ್ನೆಲ್ಲಾ ತಪ್ಪಿಸುವುದರಿಂದ ಕಣ್ಣಿನ ಅಂದವನ್ನು ಕಾಪಾಡಿಕೊಳ್ಳಬಹುದು. ಹಾಗೆಯೇ ಕೆಲಸದ ಅವಧಿಯಲ್ಲಿ ಆಗಾಗ್ಗೆ ಪುಟ್ಟ ಬ್ರೇಕ್‌ಗಳನ್ನು ತೆಗೆದುಕೊಳ್ಳುವ ಮೂಲಕ ಕಣ್ಣಿಗೆ ವಿಶ್ರಾಂತಿ ನೀಡುವುದು ಒಳ್ಳೆಯದು.

ಧೂಮಪಾನ, ಆಲ್ಕೋಹಾಲ್‌ನಿಂದ ದೂರವಿರಿ: ಆಲ್ಕೋಹಾಲ್ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ, ಇದು ಕಣ್ಣನ್ನು ಕಳಾಹೀನಗೊಳಿಸುತ್ತದೆ. ಹಾಗೆಯೇ ಧೂಮಪಾನವು ಸಹ ದೇಹದ ಆಂಟಿ ಆಕ್ಸಿಡೆಂಟ್ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಇದರಿಂದಲೂ ಕಣ್ಣಿನ ಸುತ್ತ ಕಪ್ಪು ವರ್ತುಲ ಮೂಡುತ್ತದೆ.

ಮೇಕಪ್‌: ರಾತ್ರಿ ಮಲಗುವ ಮುನ್ನ ಮೇಕಪ್ ಅನ್ನು ಪೂರ್ತಿಯಾಗಿ ಸ್ವಚ್ಛಗೊಳಿಸಿಕೊಳ್ಳುವ ರೂಢಿ ಮಾಡಿಕೊಳ್ಳಿ. ಮೇಕಪ್ ಉತ್ಪನ್ನಗಳು ಅಲರ್ಜಿಗೆ ಕಾರಣವಾಗುತ್ತವೆ. ಆದ್ದರಿಂದ ಮಲಗುವ ಮುನ್ನ ಮುಖವನ್ನು ಚೆನ್ನಾಗಿ ತೊಳಿಯಿರಿ.

ಕೋಲ್ಡ್ ಕಂಪ್ರೆಸ್‌ಗಳು: ಐಸ್ ಕ್ಯೂಬ್‌ಗಳನ್ನು ಒಂದು ಬಟ್ಟೆಯಲ್ಲಿ ಮುಚ್ಚಿ ಕಣ್ಣಿನ ಸುತ್ತ ಮಸಾಜ್ ಮಾಡಿ. ಕಣ್ಣಿನ ಸುತ್ತ ರಕ್ತಪರಿಚಲನೆಯನ್ನು ಸುಧಾರಿಸಲು ಮತ್ತು ರಕ್ತನಾಳಗಳನ್ನು ಕುಗ್ಗಿಸುವಲ್ಲಿ ಇದು ಸಹಾಯ ಮಾಡುತ್ತದೆ, ಇದರಿಂದ ಕಣ್ಣುಗಳ ಉಬ್ಬರ ಕಡಿಮೆಯಾಗುತ್ತದೆ.

ಗ್ರೀನ್ ಟೀ ಬ್ಯಾಗ್‌ಗಳು: ಐಸ್ ಕ್ಯೂಬ್‌ಗಳನ್ನು ಒಂದು ಬಟ್ಟೆಯಲ್ಲಿ ಮುಚ್ಚಿ ಕಣ್ಣಿನ ಸುತ್ತ ಮಸಾಜ್ ಮಾಡಿ. ಕಣ್ಣಿನ ಸುತ್ತ ರಕ್ತಪರಿಚಲನೆಯನ್ನು ಸುಧಾರಿಸಲು ಮತ್ತು ರಕ್ತನಾಳಗಳನ್ನು ಕುಗ್ಗಿಸುವಲ್ಲಿ ಇದು ಸಹಾಯ ಮಾಡುತ್ತದೆ, ಇದರಿಂದ ಕಣ್ಣುಗಳ ಉಬ್ಬರ ಕಡಿಮೆಯಾಗುತ್ತದೆ. ಗ್ರೀನ್ ಟೀ ಬ್ಯಾಗ್‌ಗಳು: ಚಹಾದಲ್ಲಿರುವ ಕೆಫೀನ್ ಪ್ರಬಲ ಆಂಟಿ ಆಕ್ಸಿಡೆಂಟುಗಳನ್ನು ಒಳಗೊಂಡಿರುತ್ತದೆ ಮತ್ತು ಇದು ಚರ್ಮಕ್ಕೆ ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಯುವಿ ಕಿರಣಗಳಿಂದ ರಕ್ಷಣೆ ನೀಡುವುದಲ್ಲದೆ, ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಬಳಸಿದ ಗ್ರೀನ್ ಟೀ ಬ್ಯಾಗ್‌ಗಳನ್ನು 20 ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿಟ್ಟು ತಣ್ಣಗಾಗಲು ಬಿಡಿ. ನಂತರ ಅದನ್ನು ಕಣ್ಣಿನ ಕೆಳಗಿನ ಭಾಗದಲ್ಲಿ ಇಟ್ಟುಕೊಂಡು, ಟೀ ಬ್ಯಾಗ್‌ಗಳನ್ನು 15 ರಿಂದ 30 ನಿಮಿಷ ಹಾಗೆಯೇ ಬಿಡಿ.

ಹಣ್ಣುಗಳು ಮತ್ತು ತರಕಾರಿಗಳು: ಸೌತೆಕಾಯಿ, ಆಲೂಗಡ್ಡೆ, ಟೊಮೆಟೊ ಮತ್ತು ಕಿತ್ತಳೆ ರಸವನ್ನು ಕಣ್ಣಿನ ಸುತ್ತ ಮಸಾಜ್ ಮಾಡುವುದರಿಂದ ಕಪ್ಪು ವರ್ತುಲ ಕಡಿಮೆಯಾಗುತ್ತವೆ. ಕಣ್ಣಿನ ಹೊಳಪು ಹೆಚ್ಚುತ್ತದೆ.

ಸನ್ ಸ್ಕ್ರೀನ್: ಯಾವುದೇ ಕಾರಣಕ್ಕೂ ಕಣ್ಣುಗಳ ಸುತ್ತ ಸನ್‌ಸ್ಕ್ರೀನ್ ಹಚ್ಚುವುದನ್ನು ಮರೆಯಬೇಡಿ. ಸನ್‌ಸ್ಕ್ರೀನ್‌ಗಳು ಯುವಿಎ ಮತ್ತು ಯುವಿಬಿಯಿಂದ ರಕ್ಷಣೆ ನೀಡುತ್ತವೆ.

ಆಹಾರ ಕ್ರಮ: ಆಹಾರದಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿರಲಿ. ಪಪ್ಪಾಯಿ, ಕ್ಯಾರೆಟ್, ದಾಳಿಂಬೆ, ಕಿತ್ತಳೆ ಮುಂತಾದ ಹಣ್ಣುಗಳಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳಿದ್ದು, ಇದು ಆರೋಗ್ಯಕರ ಮತ್ತು ಕಾಂತಿಯುತ ಚರ್ಮಕ್ಕೆ ಅಗತ್ಯವಾಗಿದೆ. ನಿಮ್ಮ ಆಹಾರ ಕ್ರಮದಲ್ಲಿ ಇವೆಲ್ಲವೂ ಖಡ್ಡಾಯವಾಗಿ ಸೇರಿರಲಿ.

ಕಣ್ಣಿನ ಆರೋಗ್ಯದಲ್ಲಿ, ಅಂದದಲ್ಲಿ ವ್ಯತ್ಯಾಸ ಕಂಡುಬಂದರೆ ಆರಂಭದ ಹಂತದಲ್ಲಿರುವಾಗಲೇ ಕಾರ್ಯಪ್ರವೃತ್ತರಾಗಿ. ಅದು ಹೆಚ್ಚಾಗಲು ಅವಕಾಶ ಕೊಡಬೇಡಿ. ಚಿಕ್ಕದಿರುವಾಗಲೇ ಆರೈಕೆ ಆರಂಭಿಸಿದರೆ ಪರಿಹಾರ ಸುಲಭ. ಡಾರ್ಕ್‌ ಸರ್ಕಲ್‌ ಎಂದು ಕುಗ್ಗುವುದೂ ಬೇಡ, ಹಾಗೆಯೇ ಅದಕ್ಕೆ ಹೊಂದಿಕೊಂಡು, ಅದರೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳುವುದೂ ಸಹ ಉತ್ತಮ ಆಯ್ಕೆ ಅಲ್ಲ. ಕಂಡುಬಂದೊಡನೆ ಸೂಕ್ತ ರೀತಿಯಲ್ಲಿ ನಿರ್ವಹಿಸಿದರೆ ನಿಮ್ಮ ಅಂದವೂ–ಆರೋಗ್ಯವೂ ವೃದ್ಧಿಸುವುದರಲ್ಲಿ ಅನುಮಾನವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.