‘ಉಸಿರಿನಿಂದ ಕೊರೊನಾ ವೈರಸ್ ಹರಡುವುದಿಲ್ಲ. ವೈರಸ್ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಹೊರಬೀಳುವ ಸೋಂಕುಭರಿತ ತುಂತುರು ಹನಿಯಿಂದ ಮಾತ್ರ ವೈರಸ್ ಹರಡುತ್ತದೆ..’
ಹೀಗೆಹತ್ತಾರು ಜನರ ಆತಂಕಗಳಿಗೆ ಸ್ಪಷ್ಟ ಉತ್ತರ ನೀಡಿದವರು ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ ಮತ್ತು ಆರೋಗ್ಯ) ಡಾ.ರವಿಕುಮಾರ್ ಸುರಪುರ. ‘ಪ್ರಜಾವಾಣಿ’ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಫೋನ್‌ಇನ್ ಕಾರ್ಯಕ್ರಮದಲ್ಲಿ ಅವರು ಹಲವರ ಸಂಶಯಗಳನ್ನು ನಿವಾರಿಸಿದರು.
‘ಸೋಂಕು ಇರುವ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ತುಂತುರು ಬೀಳುತ್ತದೆ. ಆ ತುಂತುರು ಹನಿಯನ್ನು ವ್ಯಕ್ತಿಯೊಬ್ಬರು ಕೈಯಿಂದ ಮುಟ್ಟಿ, ಆ ಕೈಯನ್ನು ಕಣ್ಣು, ಮೂಗು, ಬಾಯಿಗೆ ಸ್ಪರ್ಶಿಸಿದಾಗ ಸೋಂಕು ಆತನ ದೇಹವನ್ನು ಪ್ರವೇಶಿಸುತ್ತದೆ. ಸಾಬೂನು, ಸಾಬೂನು ದ್ರಾವಣ ಅಥವಾ ಸೋಂಕು ನಿವಾರಕ ದ್ರಾವಣದಿಂದ (ಸ್ಯಾನಿಟೈಸರ್) ಕೈಯನ್ನು ಆಗಾಗ ತೊಳೆಯುತ್ತಿದ್ದರೆ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಬಹುದು. ಹೀಗಾಗಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿಯೇ ಇದೆ’ ಎಂದು ಎಂಬುದಾಗಿ ರವಿಕುಮಾರ್ ವಿವರಿಸಿದರು.
ಹೇಗೆ ಹರಡುತ್ತದೆ?:
‘ಕೊರೊನಾ ಸೋಂಕು ಇರುವ ವ್ಯಕ್ತಿ ಜನಜಂಗುಳಿ ಪ್ರದೇಶದಲ್ಲಿ ಇದ್ದಾಗ ಆತನಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆತ/ಆಕೆ ಚಿತ್ರಮಂದಿರಕ್ಕೆ ಹೋಗಿದ್ದರೆ, ಮಾಲ್‌ಗೆ ಹೋಗಿದ್ದರೆ, ಮದುವೆ, ಜಾತ್ರೆಯಲ್ಲಿ ಪಾಲ್ಗೊಂಡಿದ್ದರೆ ದೊಡ್ಡ ಪ್ರಮಾಣದಲ್ಲಿ ರೋಗ ಹರಡುವುದಕ್ಕೆ ಕಾರಣ ಆಗಬಹುದು. ಹೀಗಾಗಿ ಸೋಂಕು ಲಕ್ಷಣ ಇರುವವರಿಗೆ ಮನೆಯಲ್ಲೇ ‘ಪ್ರತ್ಯೇಕ ವಾಸ’ದ ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್ಲರೂ ಕಡ್ಡಾಯವಾಗಿ ಮಾಡಿದ್ದೇ ಆದರೆ ಕೊರೊನಾ ನಿಯಂತ್ರಣ ಕಷ್ಟವೇನಲ್ಲ’ ಎಂದರು.
‘ಕೋವಿಡ್–19 ಕಾಯಿಲೆಗೆ ಕಾರಣವಾಗುವ ವೈರಸ್ ನಮ್ಮ ದೇಶದ್ದಲ್ಲ. ವಿದೇಶದಿಂದ ಆಮದಾಗಿರುವ ವೈರಸ್ ಇದು. ಹಾಗಾಗಿ ವಿದೇಶದಿಂದ ಬಂದವರಿಂದಷ್ಟೇ ಸದ್ಯ ಸೋಂಕು ಹರಡುತ್ತಿದೆ. ಆದರೆ ಬೆಂಗಳೂರಿನಲ್ಲಿ ಇದು ಇನ್ನೂ ಸಾಮುದಾಯಿಕವಾಗಿ ಹರಡಿಲ್ಲ. ವಿದೇಶ ಪ್ರಯಾಣ ಮಾಡಿ ಬಂದವರ ಮೇಲೆ ನಿಗಾ ವಹಿಸುವುದರಿಂದ ಬಹುಮಟ್ಟಿಗೆ ಸೋಂಕನ್ನು ತಡೆಗಟ್ಟಲು ಸಾಧ್ಯವಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕಾಗುತ್ತದೆ. ಸಮುದಾಯಗಳ ನಡುವೆ ಸೋಂಕು ಹರಡದಂತೆ ತಡೆಯಲು ನಾವೆಲ್ಲ ಈಗಿನಿಂದಲೇ ಪ್ರಯತ್ನ ಮಾಡಲೇಬೇಕಾಗಿದೆ’ ಎಂದು ಡಾ.ರವಿಕುಮಾರ್ ವಿವರಿಸಿದರು.
ರೋಗ ಲಕ್ಷಣವಿದ್ದವರಿಗಷ್ಟೇ ಮಾಸ್ಕ್: ‘ಮುಖಗವಸು (ಮಾಸ್ಕ್) ಹಾಕಿಕೊಂಡರೆ ಕೊರೊನಾ ವೈರಸ್ ನಮ್ಮನ್ನು ತಟ್ಟುವುದಿಲ್ಲ ಎಂಬ ಭಾವನೆ ಬೇಡ. ಸೋಂಕು ಲಕ್ಷಣ ಇದ್ದವರು ಇದನ್ನು ತೊಟ್ಟರೆ ಅವರು ಸೀನಿದಾಗ, ಕೆಮ್ಮಿದಾಗ ತುಂತುರು ಹನಿ ಇನ್ನೊಬ್ಬರ ಮೇಲೆ ಬೀಳದಂತೆ ತಡೆಯಲು ಮಾಸ್ಕ್ ನೆರವಿಗೆ ಬರುತ್ತದೆ. ಕೊರೊನಾ ವೈರಸ್ ಗಾಳಿಯಲ್ಲಿ ಹರಡುವುದಿಲ್ಲವಾದ ಕಾರಣ ಮಾಸ್ಕ್ ಧರಿಸುವುದರಿಂದ ಯಾವುದೇ ಪ್ರಯೋಜನವೂ ಇಲ್ಲ. ಮಾಸ್ಕ್ ಅನ್ನು ಸಹ 6ರಿಂದ 8 ಗಂಟೆ ಮಾತ್ರ ಬಳಸಬಹುದು. ಬಳಿಕ ಅದನ್ನು ಬದಲಿಸಬೇಕಾಗುತ್ತದೆ. ವೈದ್ಯರು, ದಾದಿಯರು ಮಾಸ್ಕ್ ಬಳಸಲೇಬೇಕು. ಏಕೆಂದರೆ ಅವರು ಇತರರಿಂದ ಸೋಂಕಿಗೆ ಒಳಗಾಗುವ ಸಾಧ್ಯತೆ ಅಧಿಕ. ಹೀಗಾಗಿ ಸಾರ್ವಜನಿಕರು ಅನಗತ್ಯವಾಗಿ ಮಾಸ್ಕ್‌ಗೆ ಮುಗಿಬೀಳುವ ಅಗತ್ಯ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ವಿದೇಶ ಪ್ರಯಾಣ: 14 ದಿನ ಪ್ರತ್ಯೇಕ ವಾಸ ಕಡ್ಡಾಯ
‘ನಿಮ್ಮ ಮನೆಯಲ್ಲಿ ಇತ್ತೀಚೆಗೆ ವಿದೇಶಕ್ಕೆ ಪ್ರಯಾಣಿಸಿದವರಿದ್ದರೆ ಅವರಿಗೆ ಕೆಮ್ಮು, ನೆಗಡಿ, ಜ್ವರದ ಲಕ್ಷಣ ಇರಲಿ, ಇಲ್ಲದಿರಲಿ, ಅವರು ಕಡ್ಡಾಯವಾಗಿ 14 ದಿನ ಪ್ರತ್ಯೇಕ ವಾಸ ಮಾಡಲೇಬೇಕು. ಈ ಅವಧಿಯಲ್ಲಿ ಅವರಿಗೆ ಈ ಮೂರೂ ಲಕ್ಷಣ ಅಥವಾ ಯಾವುದಾದರೂ ಒಂದು ಲಕ್ಷಣ ಕಾಣಿಸಿದರೂ ತಕ್ಷಣ 104 ಸಹಾಯವಾಣಿಗೆ ಕರೆ ಮಾಡಬೇಕು. ಅವರು ಸಂಪರ್ಕಿಸಬೇಕಾದ ರೆಫರಲ್ ಆಸ್ಪತ್ರೆಯ ವಿವರ ತಿಳಿಸುತ್ತಾರೆ.
ರೆಫರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಪರೀಕ್ಷೆ ನಡೆಸುತ್ತಾರೆ.ಅಗತ್ಯ ಇದ್ದರೆ ಗಂಟಲ ದ್ರವ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡುತ್ತಾರೆ. ಕೊರೊನಾ ಸೋಂಕು ಇರುವುದು ಪರೀಕ್ಷೆಯಲ್ಲಿ ಖಚಿತಪಟ್ಟರೆ ನಿರ್ದಿಷ್ಟ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸುತ್ತಾರೆ. ಸೋಂಕು ಇಲ್ಲವಾದರೆ ಯಾವುದೇ ಸಮಸ್ಯೆ ಇಲ್ಲ. ಆದರೂ 14 ದಿನ ಮತ್ತು ಅಗತ್ಯ ಬಿದ್ದರೆ ಇನ್ನೂ 14 ದಿನಗಳ ಕಾಲ ಮನೆಯಲ್ಲಿ ಉಳಿದುಕೊಳ್ಳುವ ಅಗತ್ಯವಿದೆ.
ಸೋಂಕು ಹರಡುವುದು ಹೀಗೆ
ನೀವು ಮೆಟ್ರೊದಲ್ಲಿ ಸಂಚರಿಸುತ್ತೀರಿ ಎಂದಿಟ್ಟುಕೊಳ್ಳಿ, ಸೋಂಕು ಇರುವ ವ್ಯಕ್ತಿ ಸೀನಿದಾಗ ಬೀಳುವ ತುಂತುರು ಎಸ್ಕಲೇಟರ್‌ನ ರೇಲಿಂಗ್ ಮೇಲೆ ಬಿದ್ದಿರಬಹುದು, ಮೆಟ್ರೊದ ಒಳಗೆ ಕಂಬಕ್ಕೆ ಅಂಟಿಕೊಂಡಿಬಹುದು, ಮೇಲೆ ಹಿಡಿಕೆಯಲ್ಲಿ ಸೇರಿಕೊಳ್ಳಬಹುದು. ಅದನ್ನು ಮುಟ್ಟಿದಾಗ ನಿಮ್ಮ ಕೈಯನ್ನು ಸೇರುತ್ತದೆ. ನಿಮ್ಮ ಅರಿವು ಇಲ್ಲದೆಯೇ ನೀವು ನಿಮ್ಮ ಕೈಯಿಂದ ನಿಮ್ಮ ಕಣ್ಣು, ಬಾಯಿ, ಮೂಗು ಮುಟ್ಟಿಕೊಳ್ಳುತ್ತೀರಿ. ಆಗ ವೈರಸ್ ನಿಮ್ಮ ದೇಹವನ್ನು ಸೇರುತ್ತದೆ.
ಚಿತ್ರಮಂದಿರಕ್ಕೆ ಹೋಗಿದ್ದೀರಿ ಎಂದಿಟ್ಟುಕೊಳ್ಳಿ, ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಬಿದ್ದ ತುಂತುರು ಸೀಟಿಗೆ ಬಿದ್ದಿರಬಹುದು. ಅದೇ ಸೀಟಲ್ಲಿ ನೀವು ಮತ್ತೆ ಹೋಗಿ ಕುಳಿತುಕೊಂಡಾಗ ನಿಮ್ಮ ಕೈಗೆ ಆ ತುಂತುರು ಅಂಟಿಕೊಂಡು, ನೀವು ಕೈ, ಕಣ್ಣು ಅಥವಾ ಬಾಯಿ ಮುಟ್ಟಿಕೊಂಡರೆ ಸೋಂಕು ದೇಹ ಪ್ರವೇಶಿಸುತ್ತದೆ. ಮಾಲ್‌ಗಳಲ್ಲಿನ ಎಸ್ಕಲೇಟರ್, ಲಿಫ್ಟ್, ಮದುವೆ, ಜಾತ್ರೆ, ದೇವಸ್ಥಾನ ಸಹಿತ ಜನಸಂದಣಿ ಸೇರುವ ಜಾಗದಿಂದಲೂ ಕೊರೊನಾ ವೈರಸ್ ಹರಡುವ ಸಾಧ್ಯತೆ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.