‘ಈ ಇಂಜಿನಿಯರಿಂಗ್ ಕೋರ್ಸ್‌ಗೆ ಸೇರಿದ್ದು ಸರಿಯಾಯಿತೇ? ಅಥವಾ ಮೆಡಿಕಲ್ ಮಾಡಬೇಕಿತ್ತೇ?’, ‘ನನ್ನ ಫೇಸ್‍ಬುಕ್ ಪ್ರೊಫೈಲ್ ಪಿಕ್ಚರ್ ಯಾವುದು ಹಾಕಿದರೆ ಹೆಚ್ಚು ಲೈಕ್ಸ್ , ಕಮೆಂಟ್ಸ್ ಬರಬಹುದು?’ ‘ಮುಂದೆ ಜೀವನದಲ್ಲಿ ಸಾಕಷ್ಟು ದುಡ್ಡು ಮಾಡುವುದು ಹೇಗೆ?'’ ‘ಮದುವೆ ಈಗಲೇ ಅಥವಾ ಇನ್ನೂ ತಡವಾಗಿ ಆಗಲೇ?' – ಇಪ್ಪತ್ತರಿಂದ ಮೂವತ್ತರ ವಯಸ್ಸಿನಲ್ಲಿ ಮೂಡುವ ನೂರಾರು ಪ್ರಶ್ನೆಗಳಲ್ಲಿ ಇಂಥವು ಕೆಲವು ಉದಾಹರಣೆಗಳಷ್ಟೇ.
ಹದಿಹರೆಯವೇನೋ ಮುಗಿಯುವುದಕ್ಕೆ ಬಂದಿರುತ್ತದೆ. ಹಾಗೆಂದು ಜೀವನ ಪೂರ್ತಿ ‘ಸೆಟಲ್’ ಆಗಿರುವುದಿಲ್ಲ. ಎಲ್ಲರೂ ಹದಿಹರೆಯದ ಬಗ್ಗೆಯೇ ಯೋಚಿಸುತ್ತಾರೆ. ಹದಿಹರೆಯದ ಮಕ್ಕಳ ಭಾವನೆಗಳು, ಅವರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ. ಹಾಗೆಂದು ಹತ್ತೊಂಬತ್ತು ದಾಟಿ ಇಪ್ಪತ್ತಕ್ಕೆ ಕಾಲಿಟ್ಟ ತಕ್ಷಣ, ಜೀವನ-ಜಗತ್ತು ಸುಂದರವಾಗುತ್ತದೆಯೇ? ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತದೆಯೇ? ಖಂಡಿತ ಇಲ್ಲ. ಹೊಸ ಜಾಗ, ಹೊಸ ಚಾಲೆಂಜ್, ಹೊಸ ಕೋರ್ಸ್, ಹೊಸ ಉದ್ಯೋಗ, ಹೊಸ ಸಂಬಂಧ; ಎಷ್ಟೊಂದು ಬದಲಾವಣೆಗಳು!
ವಿಜ್ಞಾನ, ಕಾಮರ್ಸ್ ಅಥವಾ ಕಲೆ ಯಾವುದೇ ಕೋರ್ಸ್‌ನಲ್ಲಿ ಸೇರಿದ್ದರೂ, ಪದವಿ ಸಿಗುತ್ತಿದ್ದಂತೆ, ಮುಂದೇನು ಎಂಬ ಪ್ರಶ್ನೆ. ಸ್ನಾತಕೋತ್ತರ ಪದವಿ ಮಾಡುವುದು ಉತ್ತಮವೋ, ಅಥವಾ ಪೂರ್ತಿ ವಿಷಯವನ್ನೇ ಬದಲಾಯಿಸಬೇಕೋ ಎಂಬ ಗೊಂದಲ.
ಓದೇನೋ ಆಯಿತು. ಯಾವ ಕೆಲಸಕ್ಕೆ ಸೇರುವುದು? ನನ್ನ ಯೋಗ್ಯತೆಗೆ ಈ ಕೆಲಸ ಕಡಿಮೆಯೇನೋ! ಬೆಂಗಳೂರಿನಂಥ ದೊಡ್ಡ ಊರುಗಳಿಗೆ ಹೋಗಬೇಕೇ? ಉದ್ಯೋಗಕ್ಕೆ ಸಂಬಂಧಪಟ್ಟಂತೆ ಕಾಡುವ ಸಂದಿಗ್ಧತೆಗಳು.
ಹದಿವಯಸ್ಸಿನಲ್ಲಿ ಮನೆಯವರ ಹಿಡಿತ ಸ್ವಲ್ಪ ಕಡಿಮೆಯೇ ಎನ್ನಬಹುದು. ಫೇಸ್‍ಬುಕ್, ಇನ್‍ಸ್ಟಾಗ್ರಾಂ ನೋಡಲು ಯಾರ ತಕರಾರೂ ಇಲ್ಲ. ಓದಲು, ಕೆಲಸ ಮಾಡಲು ಹಾಸ್ಟೆಲ್ /ಪಿ.ಜಿ.ಗಳಲ್ಲಿರಬೇಕಾದರೆ ಬೆಳಿಗ್ಗೆಯಿಂದ ಸಂಜೆಯ ತನಕ ಬಿಜಿಯಾಗಿರುವುದು, ರೂಮ್‌ಗೆ ಬಂದಾಕ್ಷಣ ಈ ಸಾಮಾಜಿಕ ಜಾಲತಾಣಗಳೇ ಆಪ್ತ ಸ್ನೇಹಿತರಂತೆ. ಡಿಪಿ ಬದಲಿಸುವುದು, ಅದಕ್ಕೆ ಬರುವ ಲೈಕ್ಸ್ / ಕಮೆಂಟ್ಸ್ ನೋಡಿ ಆನಂದಿಸುವುದು, ವಾಟ್ಸ್‌ಆ್ಯಪ್ ಚಾಟ್ ಮಾಡುವುದು. ಇವೆಲ್ಲದರಲ್ಲಿ ಹೊತ್ತು ಹೋಗುವುದೇ ತಿಳಿಯದು.
ಹದಿಹರೆಯದಲ್ಲಿ ಪ್ರೀತಿಸಿದರೆ ಕೇವಲ ‘ಇನ್‌ಫ್ಯಾಚ್ಯುಯೇಷನ್’ ಎನ್ನುತ್ತಾರೆ. ಅದೇ ಇಪ್ಪತ್ತರ ದಶಕದಲ್ಲಿ ಪ್ರೀತಿಸಿದರೆ ನಿಜವಾದ ಪ್ರೀತಿಯೇ? ಗೊತ್ತಿಲ್ಲ. ಕೆಲವರು ತಮ್ಮ ಆತ್ಮದ ಗೆಳತಿ /ಗೆಳೆಯನ ಶೋಧ ನಡೆಸಬಹುದು. ಇನ್ನೊಬ್ಬರು, ಅಪ್ಪ-ಅಮ್ಮ ಹೇಳಿದವಳನ್ನೇ/ಹೇಳಿದವನನ್ನೇ ಮದುವೆ ಆಗುತ್ತೇನೆಂದು ಕಾಯುತ್ತಿರಬಹುದು. ಮತ್ತೊಬ್ಬರು ಇಷ್ಟು ಬೇಗ ಮದುವೆಯೇ ಬೇಡವೆಂದು ನಿರ್ಧರಿಸಿರಬಹುದು. ಮಗದೊಬ್ಬರಿಗೆ ಪ್ರೀತಿಸಿದ ಗೆಳತಿ/ಗೆಳೆಯ ಕೈಕೊಟ್ಟು, ಮದುವೆಯ ಸಹವಾಸವೇ ಬೇಡವೆನ್ನಿಸಬಹುದು.
ದಾರಿದೀಪಗಳು
ಇಪ್ಪತ್ತರ ಈ ಚಿಂತೆಗಳು, ಗೊಂದಲಗಳಿಗೆ ಪರಿಹಾರ ಉಂಟು. ಕೆಲವೊಂದು ಅನುಭವಗಳು, ಕೆಲವೊಂದು ವ್ಯಕ್ತಿಗಳು, ದಾರಿದೀಪಗಳಾಗಿ ಒದಗಬಹುದು.
l ನಿಮಗೆ ವಿಶ್ವಾಸ ಇರುವ ಒಂದು ವ್ಯಕ್ತಿಯೊಡನೆ ನಿಮ್ಮ ಈ ಎಲ್ಲಾ ಗೊಂದಲಗಳನ್ನೂ, ಅದರ ಹಿಂದಿರುವ ಮತ್ತು ಅದರಿಂದುಂಟಾಗುವ ಭಾವನೆಗಳನ್ನೂ ಹಂಚಿಕೊಳ್ಳಿ. ಆ ವ್ಯಕ್ತಿ ನಿಮಗಿಂತ ಹಿರಿಯರಾಗಿದ್ದಲ್ಲಿ, ಅವರ ಅನುಭವದ ಮಾತುಗಳು ನಿಮಗೆ ಸಾಂತ್ವನ ನೀಡಬಹುದು.
l ಓದು ಮತ್ತು ಅಧ್ಯಯನಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು, ಅದೇ ಕಾರ್ಯಕ್ಷೇತ್ರದಲ್ಲಿರುವವರೊಂದಿಗೆ ಮಾತನಾಡಿ. ನಿಮ್ಮ ಸಾಮರ್ಥ್ಯ-ಶ್ರಮಪಡುವ ಗುಣ ಮತ್ತು ಆದ್ಯತೆಗಳ ಮೇರೆಗೆ ಒಂದು ನಿರ್ಧಾರಕ್ಕೆ ಬನ್ನಿ.
l ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರ ಅತ್ಯಗತ್ಯ. ಬಳಕೆಯ ಸಮಯದ ಪರಿಮಿತಿಯನ್ನು ನಾವೇ ಹಾಕಿಕೊಳ್ಳಬೇಕು. ನೈಜ ಜೀವನದಲ್ಲಿ ಸಂಬಂಧಿಕರೊಂದಿಗೆ ಮಾತನಾಡುವುದಕ್ಕೆ, ಬೆರೆಯುವುದಕ್ಕೆ, ಕುಟುಂಬದ ಕಾರ್ಯಕ್ರಮಗಳಿಗೆ ಹೋಗುವುದಕ್ಕೆ ಈ ಸಾಮಾಜಿಕ ಜಾಲತಾಣಗಳು ಬದಲೀ ವ್ಯವಸ್ಥೆಗಳಲ್ಲ ಎಂಬುದನ್ನು ಮನಗಾಣಬೇಕು.
l ಗಂಡು ಮಕ್ಕಳಾಗಲೀ-ಹೆಣ್ಣು ಮಕ್ಕಳಾಗಲೀ ಓದಿ ಆರ್ಥಿಕವಾಗಿ ಸ್ವತಂತ್ರರಾಗದ ಹೊರತು, ಸಂಸಾರ ಸಾಗರದಲ್ಲಿ ಬಿದ್ದರೆ, ಸ್ವಲ್ಪ ಕಷ್ಟವೇ ಸರಿ. ಪ್ರೀತಿ-ಪ್ರೇಮದಲ್ಲಿ ಸಿಲುಕಿದ್ದರೂ, ದೈಹಿಕ ದೌರ್ಜನ್ಯ–ಲೈಂಗಿಕ ದೌರ್ಜನ್ಯಕ್ಕೆ ಒಳಗಾಗದ ಹಾಗೆ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಅತ್ಯಗತ್ಯ.
ಇಪ್ಪತ್ತರ ಸಮಸ್ಯೆಗಳನ್ನು ಎದುರಿಸುವ ವಿಧಾನಗಳನ್ನು ಕುರಿತಂತೆ ಪ್ರೇರಣೆ ನೀಡುವ ಹಲವಾರು ಪುಸ್ತಕಗಳಿವೆ. ಹೊಸ ಆಲೋಚನೆಗಳನ್ನು ಹುಟ್ಟು ಹಾಕುವಂತ ಟೆಡ್‍ಟಾಕ್‍ಗಳಿವೆ. ಒಳ್ಳೆಯ ವೆಬ್‍ಸೈಟ್‍ಗಳಿವೆ. ಇವೆಲ್ಲದರಿಂದ ಉಪಯೋಗ ಪಡೆದುಕೊಳ್ಳಿ.
ನಿರ್ಧಾರ ಮಾಡಲಾಗದೇ ತುಂಬಾ ಚಿಂತೆಯಾಗಿ, ಗೊಂದಲದಲ್ಲಿದ್ದಾಗ ಒಳ್ಳೆಯ ಹಾಡೊಂದನ್ನು ಕೇಳಿ. ಪ್ರಾಣಾಯಾಮ, ಧ್ಯಾನದಂತಹ ಕ್ರಿಯೆಗಳನ್ನು ಮಾಡಿ. ಮನಸ್ಸು ಸ್ವಲ್ಪ ಉಲ್ಲಸಿತವಾಗಬಹುದು.
ಒಂದು ನೆನಪಿಡಿ: ಗೊಂದಲಗಳ ಗೂಡಾಗಿರುವ ಈ ನಿಮ್ಮ ಮನಸ್ಸಿನ ಸ್ಥಿತಿ ತಾತ್ಕಾಲಿಕವಷ್ಟೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.