ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿಯ ಶ್ರೀಅಯ್ಯಪ್ಪನ ಸನ್ನಿಧಾನದಲ್ಲಿ ನಾಳೆ ವಿಜೃಂಭಣೆಯ ಉತ್ಸವ. ಶಬರಿಮಲೆಯಲ್ಲಿ ನಡೆಯುವಂತೆ ಸರ್ವರೀತಿಯ ಪೂಜೆ, ಉತ್ಸವಗಳು ಇಲ್ಲಿ ವಿಧಿವತ್ತಾಗಿ ನಡೆಯುತ್ತದೆ. ಆ ದಿನ ಹೋಮ– ಹವನ, ಮಹಾ ಮಂಗಳಾರತಿ, ನೈವೇದ್ಯ ಸಮರ್ಪಣೆ ಇತ್ಯಾದಿಗಳು ಜರುಗುತ್ತವೆ.
ದೇವಸ್ಥಾನದಲ್ಲಿ ಆಗಮ ಶಾಸ್ತ್ರದ ಪ್ರಕಾರ ಶ್ರೀಅಯ್ಯಪ್ಪಸ್ವಾಮಿ ದೇವರು, ಶಕ್ತಿ ಗಣಪತಿ ಹಾಗೂ ಭಗವತಿ ಅಮ್ಮನವರ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ. ಧ್ವಜಾಯದಲ್ಲಿ ಈ ಮೂರು ಗರ್ಭಗುಡಿಗಳೂ ಒಂದೇ ಸ್ಥಳದಲ್ಲಿ ಇರುವುದರಿಂದ ಇದು ಶಬರಿ ಮಲೆಯಂತೆ ತ್ರಿಕೂಟಾಚಲ ಕ್ಷೇತ್ರವಾಗಿದೆ. ಗರ್ಭಗುಡಿಯ ಒಳಗೆ ಅಯ್ಯಪ್ಪಸ್ವಾಮಿಯ ವಿಶೇಷ ಕಥಾ ಮಾಲಿಕೆಯ ಚಿತ್ರಗಳನ್ನು ಚಿತ್ರಿಸಲಾಗಿದ್ದು ಭಕ್ತರಲ್ಲಿ ಪುಳಕ ಹರಿಸುವಂತಿದೆ.
ದೇವಾಲಯದ ರಕ್ಷಣೆಗೆ ಕ್ಷೇತ್ರ ಗಣಗಳು ಹಾಗೂ ಗುರುಸ್ವಾಮಿಯ ರಕ್ಷಣೆಗೆ ಮಂತ್ರಗಣಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇಗುಲದ ಬಾಗಿಲಿನ ಎದುರು ದ್ವಾರ ಪಾಲಕರಂತೆ ಕ್ಷೇತ್ರಗಣಗಳಾದ ಕರುಪ್ಪಸ್ವಾಮಿ, ಕುರುಪ್ಪಮಾಯಿ ಮತ್ತು ಗರುಡ ಗಣಗಳ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ದೇಗುಲದ ಎದುರು ನಾಗಬನ ಸಹ ಇದ್ದು, ನಾಗರ ಹಾವು ಸದಾ ಓಡಾಡುತ್ತಾ ಇರುವುದು ವಿಶೇಷ.
ಸಿಗಂದೂರಲ್ಲಿ ಸಡಗರ
ಶರಾವತಿಗೆ ನಿರ್ಮಿಸಲಾದ ಲಿಂಗನಮಕ್ಕಿ ಅಣೆಕಟ್ಟಿಯ ಹಿನ್ನೀರಿನ ನಡುವೆ ದ್ವೀಪದಂತಾದ ತುಮರಿ ಪ್ರದೇಶದಲ್ಲಿ ನೆಲೆಯಾಗಿರುವ ಸಿಗಂದೂರಿನ ಶ್ರೀದೇವಿಯ ಸನ್ನಿಧಿಯಲ್ಲೀಗ ಜಾತ್ರೆಯ ಸಡಗರ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೇಂದ್ರದಿಂದ ೪೫ ಕಿ.ಮೀ. ದೂರದ ಈ ದೇಗುಲ ತಲುಪಲು ಶರಾವತಿ ಹಿನ್ನೀರಿನಲ್ಲಿ ವಿಶೇಷ ಹಡಗಿನ (ಬಾರ್ಜ್) ವ್ಯವಸ್ಥೆ ಇದೆ. ಕಾರ್ಗಲ್-ಕೋಗಾರು ಮೂಲಕ ಹಾಗೂ ಕೊಲ್ಲೂರು ನಿಟ್ಟೂರುಗಳ ಮೂಲಕ ರಸ್ತೆ ಸಂಪರ್ಕವಿದ್ದು ಅದು ತೀರಾ ದೂರದ ಪ್ರಯಾಣ ಆಗುವ ಕಾರಣ ಈ ಬಾರ್ಜ್ ವ್ಯವಸ್ಥೆ. ಇದರ ಮೂಲಕ ತೆರಳುವಾಗ ಆವಿನಹಳ್ಳಿ, ಹುಲಿದೇವರ ಬನಗಳ ದಟ್ಟ ಕಾಡು, ಅಲ್ಲಲ್ಲಿ ಕಂಡು ಬರುವ ನೀರ ನಡುವಿನ ಗುಡ್ಡ ರೋಮಾಂಚನದ ಪ್ರವಾಸದ ಅನುಭವ ನೀಡುತ್ತದೆ.
ವಿವಾಹ, ಸಂತಾನ ಪ್ರಾಪ್ತಿ, ರೋಗ ನಿವಾರಣೆ, ಆಸ್ತಿ ರಕ್ಷಣೆ, ವಿವಾದ, ಕಳೆದ ವಸ್ತುವಿನ ಪ್ರಾಪ್ತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ವೃದ್ಧಿ ಮುಂತಾದ ಬೇಡಿಕೆಗಳನ್ನು ಈಡೇರಿಸುವ ದೇವತೆ ಈಕೆ ಎಂದು ಪ್ರಸಿದ್ಧಿ ಪಡೆದಿದ್ದಾಳೆ ಇಲ್ಲಿಯ ಶ್ರೀದೇವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.