ADVERTISEMENT

ಆಹಾ...! ಮಠದ ಈ ನೋಟ...!

ಪ್ರಜಾವಾಣಿ ಚಿತ್ರ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ಅಲ್ಲಿ ಭಯಂಕರ ಡೈನೋಸಾರಸ್‌ಗಳಿವೆ. ಬಾಯಿ ಬಿಟ್ಟು ನುಂಗುವಂತೆ ನೋಡುತ್ತಿರುವ ಮೊಸಳೆಗಳಿವೆ. ಇನ್ನೇನು ದಾಳಿ ನಡೆಸಲು ಬಂದೇ ಬಿಟ್ಟಿತು ಎನ್ನುವ ಕಾಡಾನೆಗಳಿವೆ. ಅಷ್ಟೇ ಧಾವಂತದಲ್ಲಿ ಓಡಿ ಬರುತ್ತಿರುವ ಹಿಮಕರಡಿಗಳಿವೆ. ಇವೆಲ್ಲ ಭಯಾನಕಗಳ ನಡುವೆಯೇ ಜಿಗಿಯುತ್ತಿರುವ ಜಿಂಕೆ ಮನಸ್ಸು ತಣಿಸಿದರೆ, ಮುಗಿಲೆತ್ತರಕ್ಕೆ ತಲೆ ಎತ್ತಿ ನಿಂತ ಜಿರಾಫೆಗಳು ಸ್ವಾಗತ ಕೋರುತ್ತವೆ. ಅಷ್ಟೇ ಏಕೆ, ಎತ್ತು ಎಮ್ಮೆಗಳು, ಆಡು ಕುರಿಗಳು ಅಲ್ಲಿಯೇ ಇರುವ ಹೊಲದಲ್ಲಿ ಆನಂದದಿಂದ ಮೇಯುತ್ತಿದ್ದರೆ ಒಂಟೆ, ಕುದುರೆ, ಆನೆ, ಜಿಂಕೆ, ನವಿಲು ಉಷ್ಟ್ರಪಕ್ಷಿ ಎಲ್ಲವೂ ಸಂತಸದಿಂದ ನಗೆಬೀರಿವೆ.

ಇಂಥ ಒಂದು ವೈವಿಧ್ಯಮಯ ದೃಶ್ಯ ನೋಡಬೇಕೆಂದರೆ ನೀವೊಮ್ಮೆ ಚಿತ್ರದುರ್ಗದ ಮುರುಘಾ ಮಠಕ್ಕೆ ಬರಬೇಕು. ಇವೆಲ್ಲ ಕಾಡು-ನಾಡು ಪಶು- ಪಕ್ಷಿಗಳು ನಿಮ್ಮ ಬರುವಿಕೆಯನ್ನೇ ಸ್ವಲ್ಪವೂ ಕದಲದೇ ಕಾಯುತ್ತಿವೆ ಅಲ್ಲಿ. ಅಂದಹಾಗೆ ಇವೆಲ್ಲ ಮೌನವಾಗಿ ನಿಂತಿರುವುದು ಮಠದ ಆವರಣದಲ್ಲಿನ `ಥೀಮ್ ಪಾರ್ಕ್'ನಲ್ಲಿ. 

ಏನುಂಟು, ಏನಿಲ್ಲ...?
ಅಬ್ಬಾ... ಎನ್ನುವಷ್ಟರ ಮಟ್ಟಿಗೆ, ನೈಜ ಎಂದೇ ತಿಳಿಯಬಹುದಾದಂಥ ಕಲಾಕೃತಿಗಳು ಇಲ್ಲಿವೆ. ಆದಿಮಾನವನ ಜೀವನ ಕ್ರಮವಿದೆ. ಸರ್ವ ಧರ್ಮಗಳ ಧರ್ಮ ಗುರುಗಳಿದ್ದಾರೆ. ವೃತ್ತಿನಿರತ ವಚನಕಾರರ ಮನೆಗಳಿವೆ, ಬ್ರಿಟಿಷರೊಂದಿಗೆ ಹೋರಾಡುವ ಕಿತ್ತೂರು ಚೆನ್ನಮ್ಮನಿದ್ದಾಳೆ. ಒನಕೆ ಹಿಡಿದ ಓಬವ್ವಳಿದ್ದಾಳೆ, ಊರ ಮುಂದೆ ಕಟ್ಟೆಯಲ್ಲಿ ಕೂತು ಮಾತನಾಡುವ ಜನರಿದ್ದಾರೆ. ಭಕ್ತಿಯ ಜೊತೆಗೆ ಮನರಂಜನೆಯನ್ನೂ ನೀಡುವ ಧ್ಯೇಯ ಈ ವನದ್ದು. ಇಲ್ಲಿ ನೈಸರ್ಗಿಕವಾಗಿ ಬೆಳೆದ ಮರಗಿಡಗಳಿಂದಾಗಿ ಕಾಡು ಹೊಕ್ಕ ಅನುಭವವಾಗುತ್ತದೆ. ಈ ವನದಿಂದಾಗಿ ಮುರುಘಾ ಮಠಕ್ಕೆ ಮತ್ತೊಂದು ಹೊಸ ಕಳೆ ಬಂದಿದೆ. ಪ್ರವೇಶ ಶುಲ್ಕ ದೊಡ್ಡವರಿಗೆ 20 ಹಾಗೂ ಮಕ್ಕಳಿಗೆ 10 ರೂಪಾಯಿ.                                          

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.