ADVERTISEMENT

ಉಳಿಸುವುದು ಹೇಗೆ ಗಡಿಯಲ್ಲಿ ಕನ್ನಡ ಶಾಲೆ?

ಕೆ.ನರಸಿಂಹ ಮೂರ್ತಿ
Published 21 ಡಿಸೆಂಬರ್ 2015, 19:52 IST
Last Updated 21 ಡಿಸೆಂಬರ್ 2015, 19:52 IST

ಕನ್ನಡ ಶಾಲೆ ಎಂದ ಕೂಡಲೇ ಕರ್ನಾಟಕದ ಶಾಲೆಗಳು ಮಾತ್ರ ಬಹಳ ಮಂದಿಯ ಕಣ್ಮುಂದೆ ಬರುತ್ತವೆ. ಆದರೆ ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಿರುವ ಅನಂತಪುರ ಮತ್ತು ಕರ್ನೂಲು ಜಿಲ್ಲೆಗಳಲ್ಲೂ ಕನ್ನಡ ಶಾಲೆಗಳ ಲೋಕವೊಂದಿದೆ. ಕನ್ನಡ–ತೆಲುಗು ದ್ವಿಭಾಷಿಕ ಪರಿಸರದಲ್ಲಿರುವ ಅಲ್ಲಿನ ಕನ್ನಡಿಗರು ಆಂಧ್ರದ ದೃಷ್ಟಿಯಲ್ಲಿ ಭಾಷಿಕ ಅಲ್ಪಸಂಖ್ಯಾತರು. ಕರ್ನಾಟಕದ ಕಣ್ಣಿಗೆ ಹೊರಗಿನವರು. ಸಾವಿರಾರು ಮಕ್ಕಳಿರುವ ಈ ಶಾಲೆಗಳ ಒಳಗೆ ಹೊಕ್ಕರೆ ಕನ್ನಡಾಭಿಮಾನ ಹೊಳೆಯುತ್ತದೆ. ಅಭಿಮಾನವೇ ಅವರ ಸಂಕಟವೂ ಆಗಿರುವ ಕಟು ವಾಸ್ತವದ ಲೋಕವೂ ಅನಾವರಣಗೊಳ್ಳುತ್ತದೆ.

ನಮ್ಮದು ಯಾವ ರಾಜ್ಯ ಸಾರ್‌?
ಕರ್ನಾಟಕ ಏಕೀಕರಣಕ್ಕೆ ಮುಂಚಿನ ಹಳೇ ಬಳ್ಳಾರಿಯ ಡಿ.ಹಿರೇಹಾಳು ಗ್ರಾಮದ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಯೊಬ್ಬ ಕೆಲವು ವರ್ಷಗಳ ಹಿಂದೆ ಶಿಕ್ಷಕ ಮೀನಹಳ್ಳಿ ಗಿರಿಜಾಪತಿ ಮಠ ಅವರನ್ನು ಹೀಗೆ ಕೇಳಿದ್ದ.

ಆಂಧ್ರದ ಅನಂತಪುರ ಜಿಲ್ಲಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷರೂ ಆಗಿರುವ ಅವರು ಆತನಿಗೆ ‘ನಮ್ಮದು ಕರ್ನಾಟಕ’ ಎಂದು ಹೇಳುವಂತಿಲ್ಲ. ಅಚ್ಚಗನ್ನಡ ಪ್ರದೇಶವಾದ ಡಿ.ಹಿರೇಹಾಳು ಆಂಧ್ರಪ್ರದೇಶಕ್ಕೆ ಸೇರಿ ಹಲವು ದಶಕಗಳಾಗಿವೆ. ಆದರೆ ಅವರು ಕನ್ನಡ ಭಾಷಾ ಪಠ್ಯಪುಸ್ತಕವನ್ನು ತೆರೆದಾಗ ಮೊದಲ ಪುಟದಲ್ಲೇ ‘ಸವಿ ಕನ್ನಡ’, ‘ತಿಳಿ ಕನ್ನಡ’ ಕಾಣುತ್ತದೆ. ಅವರು ‘ನಮ್ಮ ಕನ್ನಡ ನಾಡು’ ಎಂದೇ ಪಾಠವನ್ನು ಆರಂಭಿಸಬೇಕಾಗುತ್ತದೆ!

‘ತೆಲುಗುನಾಡಿಗೆ ಸೇರಿರುವ ಈ ಕನ್ನಡ ಶಾಲೆಗಳ ಮುಗ್ಧ ಮಕ್ಕಳಿಗೆ ಕನ್ನಡನಾಡಿನ ಏಕೀಕರಣದ ಚರಿತ್ರೆಯನ್ನು, ಅಪ್ಪಟ ಕನ್ನಡದ ಪ್ರದೇಶಗಳು ಕನ್ನಡ ನಾಡಿನಿಂದ ಬೇರ್ಪಟ್ಟ ಸಂಕಟದ ವಿಚಾರಗಳನ್ನು ವಿವರಿಸುವುದಾದರೂ ಹೇಗೆ?’ ಎಂದು ಶಾಲೆ ಮೈದಾನದ ಮರದ ನೆರಳಿನಲ್ಲಿ ಕುಳಿತು ಅವರು ತಮ್ಮ ಸಂಕಟವನ್ನು ಬಿಚ್ಚಿಟ್ಟರು.

‘ಅಂದು ಆ ವಿದ್ಯಾರ್ಥಿಗೆ ನೀವು ಏನು ಉತ್ತರ ಕೊಟ್ಟಿರಿ?’ ಎಂದಿದ್ದಕ್ಕೆ, ‘ಮೊದಲಿಗೆ ನಾವು ಕನ್ನಡ ನಾಡವರು. ಈಗ ಆಂಧ್ರದವರು ಎಂದು ಹೇಳಿದರೆ, ವಿದ್ಯಾರ್ಥಿಗಳು ಹಾಗೆಂದರೇನು ಎನ್ನುತ್ತಾರೆ. ಈ ಮಕ್ಕಳಿಗೆ ಭಾಷೆ ಮತ್ತು ಚರಿತ್ರೆಯ ಹಳೆಯ ಪಾಠಗಳನ್ನು ಹೇಳುವುದು ಹೇಗೆ? ಈ ಶಾಲೆಗಳಲ್ಲಿ ಶಿಕ್ಷಕರಾಗುವುದು ಎಂದರೆ ಬಲು ಕಷ್ಟ’ ಎಂದರವರು.

ಕೊಠಡಿಗಳ ಕೊರತೆಯಿಂದಾಗಿ ಶಾಲೆಯ ಮೈದಾನದ ಅಲ್ಲಲ್ಲಿ, ಮರದ ನೆರಳಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದ ಶಾಲೆಯ ನೂರಾರು ವಿದ್ಯಾರ್ಥಿಗಳ ಕಡೆಗೆ ಅವರ ನೋಟವಿತ್ತು. ಅವರು ಕುಳಿತಿದ್ದ ಜಾಗದಿಂದ ತುಸು ದೂರದಲ್ಲೇ, 1958ರಲ್ಲಿ ನಿರ್ಮಾಣವಾಗಿ, ಬಹುತೇಕ ಶಿಥಿಲಗೊಂಡಿರುವ ‘ಜಿಲ್ಲಾ ಪರಿಷದ್‌ ಪ್ರೌಢಶಾಲೆಯ’ ಕಟ್ಟಡದಲ್ಲಿ, ದಾನಿಗಳು ನೀಡಿದ ಆರ್ಓ ನೀರಿನ ಘಟಕ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದೆ.

‘ಮಾ ತೆಲುಗು ತಲ್ಲಿಕಿ ಮಲ್ಲೆ ಪೂದಂಡಾ, ಮಾ ಕನ್ನ ತಲ್ಲಿಕಿ ಮಂಗಳಾರತುಲು’ (ನಮ್ಮ ತೆಲುಗು ತಾಯಿಗೆ ಮಲ್ಲಿಗೆಯ ಮಾಲೆ, ನಮ್ಮ ಹೆತ್ತ ತಾಯಿಗೆ ಮಂಗಳಾರತಿಯು), ಈ ಶಾಲೆಯ ಮಕ್ಕಳೂ ಸೇರಿದಂತೆ, ಆಂಧ್ರದ ನೆಲದ ಕನ್ನಡ ಶಾಲೆಗಳಲ್ಲಿರುವ ಸುಮಾರು 20 ಸಾವಿರಕ್ಕೂ ಹೆಚ್ಚಿನ ಮಕ್ಕಳು ಹಾಡುವ ತೆಲುಗು ನಾಡ ಗೀತೆ ಇದು. ಅವರು ಹುಟ್ಟಿದ್ದು ಆಂಧ್ರದಲ್ಲೇ. ವಾಸ ಅಲ್ಲಿಯೇ. ಅವರೆಲ್ಲರ ಮನೆ ಮನದಲ್ಲಿ ಕನ್ನಡವೇ ಬೇರು-ಬದುಕು. ಅಂತರಂಗದಲ್ಲಿ ಜಯಹೇ ಕರ್ನಾಟಕ ಮಾತೆ. ಬಹಿರಂಗದಲ್ಲಿ ಮಾ ತೆಲುಗು ತಲ್ಲಿ. ಬಹುಸಂಖ್ಯಾತರಾದ ತೆಲುಗುಭಾಷಿಕರ ಮಕ್ಕಳ ನಡುವಿನ ಅಲ್ಪಸಂಖ್ಯಾತ ಕನ್ನಡಿಗರ ಮಕ್ಕಳು ತೆಲುಗು ನಾಡಗೀತೆಯನ್ನೇ ಹಾಡಬೇಕು. ರಾಜ್ಯ ಧರ್ಮದ ಮುಂದೆ ಉಳಿದೆಲ್ಲವೂ ಗೌಣ.

ನಾಲ್ಕು ವರ್ಷದ ಹಿಂದೆ...
ರಾಯಚೂರು ಜಿಲ್ಲೆಗೆ ಹೊಂದಿಕೊಂಡ, ಆಂಧ್ರಪ್ರದೇಶದ ಮೆಹಬೂಬ್‌ ನಗರ ಜಿಲ್ಲೆಯ ಮಾಗನೂರು ಮಂಡಳದ 13 ಗ್ರಾಮಗಳ ಕನ್ನಡಿಗರು ‘ಕನ್ನಡವನ್ನು ಬಿಡೋಣ, ತೆಲುಗಲ್ಲೇ ಓದೋಣ’ (ಕನ್ನಡ ಚದುವು ವದ್ದು, ತೆಲುಗು ಚದುವು ಮುದ್ದು) ಎಂಬ ಘೋಷಣೆಯೊಂದಿಗೆ ಅಲ್ಲಿನ ಕನ್ನಡ ಶಾಲೆಗಳಿಗೆ ಬೀಗ ಹಾಕಿ ಪ್ರತಿಭಟಿಸಿದ್ದರು. ಈ ಶಾಲೆಗಳನ್ನು ಕರ್ನಾಟಕ ಸರ್ಕಾರ ನಿರ್ಲಕ್ಷಿಸಿದೆ ಎಂಬುದು ಅವರ ದೂರಾಗಿತ್ತು. ಆ ಕನ್ನಡಿಗರ ಮನವಿಗೆ ಸ್ಪಂದಿಸಿದ ರಾಯಚೂರಿನ ಅಂದಿನ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ಅವರು ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಗಣಿಸಿದ ಕರ್ನಾಟಕ ಸರ್ಕಾರವು ಆ ಗ್ರಾಮಗಳನ್ನು ಹೊರನಾಡು ಕನ್ನಡ ಗ್ರಾಮಗಳೆಂದು ಪರಿಗಣಿಸಿ ಆದೇಶ ಹೊರಡಿಸಿತ್ತು.

ಅದೇ ಆದೇಶವನ್ನು ಬಳ್ಳಾರಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕರ್ನೂಲು ಜಿಲ್ಲೆಯ ಆದೋನಿ, ಹೊಳಲಗುಂದಿ, ಹಾಲಹರವಿ ಮತ್ತು ಕೌತಾಳಂ ಮಂಡಳಗಳ 30 ಗ್ರಾಮಗಳಿಗೂ ಅನ್ವಯಿಸುವಂತೆ ಶಿಫಾರಸು ಮಾಡಬೇಕು. ಕರ್ನಾಟಕ ಸರ್ಕಾರದ ಆಡಳಿತದ ವಿಸ್ತರಣೆ ಈ ಶಾಲೆಗಳವರೆಗೂ ಆಗಬೇಕು ಎಂದು ಕೋರಿ ಹೊಳಲಗುಂದಿಯ ಕನ್ನಡ ಯುವಕ ಸಂಘದ ಸದಸ್ಯರು ಬಳ್ಳಾರಿಯ ಜಿಲ್ಲಾಧಿಕಾರಿ ಅಮ್ಲನ್‌ ಆದಿತ್ಯ ಬಿಸ್ವಾಸ್‌ ಅವರಿಗೆ ಮೂರು ವರ್ಷದ ಹಿಂದೆ ಮನವಿ ಸಲ್ಲಿಸಿದ್ದರು. ಆ ಮನವಿಯು ಸರ್ಕಾರಕ್ಕೆ ತಲುಪಿತೇ ಎಂದು ಸಂಘದ ಮುಖಂಡರು ಈಗಲೂ ಕಾಯುತ್ತಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲು ಜಿಲ್ಲೆಯಲ್ಲಿ ಕನ್ನಡ–ತೆಲುಗು ದ್ವಿಭಾಷಿಕ ಪರಿಸರದಲ್ಲಿ ಬದುಕುತ್ತಿರುವ ಕನ್ನಡ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂಘಟನೆಗಾರರದು ನಿರಂತರ ಕಾಯುವಿಕೆಯ ಮತ್ತು ಹೋರಾಟದ ಬದುಕು.

ಕರ್ನಾಟಕ ಏಕೀಕರಣಕ್ಕೂ ಮುನ್ನ ಆಂಧ್ರಪ್ರದೇಶ ರಚನೆಯಾದ ಕಾಲಘಟ್ಟದಲ್ಲಿ, ಬಳ್ಳಾರಿ ಜಿಲ್ಲೆಗೆ ಸೇರಿದ್ದ ಎರಡೂ ಜಿಲ್ಲೆಗಳ ಅಚ್ಚಗನ್ನಡದ ಗ್ರಾಮಗಳು ಆಂಧ್ರದ ಪಾಲಾಗುವ ಸಮಯದಲ್ಲಿ ‘ನಮ್ಮನ್ನೂ ಕರ್ನಾಟಕಕ್ಕೆ ಸೇರಿಸಿ’ ಎಂಬ ಹೋರಾಟ ಈ ನೆಲದಲ್ಲಿ ನಡೆದಿತ್ತು.

ಏಕೀಕರಣದ ಬಳಿಕ, ಅಲ್ಲಿನ ಕನ್ನಡಿಗರು ‘ನಮ್ಮನ್ನೂ ನಿಮ್ಮವರೆಂದು ಪರಿಗಣಿಸಿ, ಏಕೆಂದರೆ ನಮ್ಮ ಮಕ್ಕಳು ಕನ್ನಡ ಶಾಲೆಗಳಲ್ಲಿ ಓದಿದ್ದಾರೆ. ಅವರ ಭವಿಷ್ಯಕ್ಕೆ ದಾರಿ ತೋರಿಸಿ’ ಎಂಬ ಹಕ್ಕೊತ್ತಾಯ ಮಾಡುತ್ತಲೇ ಇದ್ದಾರೆ.

ಕನ್ನಡ ಶಾಲೆಗಳು ಹೇಗಿವೆ? ತೆಲುಗು ಶಾಲೆಗಳ ನಡುವೆ ಹೇಗೆ ಕಾರ್ಯ ನಿರ್ವಹಿಸುತ್ತವೆ? ಕನ್ನಡ–ತೆಲುಗು ಮಾಧ್ಯಮದ ವಿದ್ಯಾರ್ಥಿಗಳ ಕಲಿಕೆಯ ಮಟ್ಟವೇನು? ಪ್ರತಿಭಾ ವಿಲಾಸವೇನು? ಎಂಬ ವಿಷಯಗಳ ಕುರಿತು ಮಾತನಾಡಲು ಅವರಿಗೆ ಆಸಕ್ತಿ ಕಡಿಮೆ. ಆಂಧ್ರದ ಜೊತೆಗಾಗಲೀ, ಕರ್ನಾಟಕದ ಜೊತೆಗಾಗಲೀ ಬಹುನಿರೀಕ್ಷೆಯ ಶೈಕ್ಷಣಿಕ ಸಮಾನತೆಯ ಸಂಬಂಧವೊಂದು ಇನ್ನೂ ಏರ್ಪಟ್ಟಿಲ್ಲ ಎಂಬುದು ಅವರ ಪ್ರಮುಖ ಆಕ್ಷೇಪ. ಏಕೆಂದರೆ ಹೊರನಾಡ ಕನ್ನಡಿಗರ ಮನೆ ಮಕ್ಕಳ ಅಭಿವೃದ್ಧಿಯ ಪ್ರಮುಖ ಸೂಚ್ಯಂಕವಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವು ಇಲ್ಲಿ ದಶಕಗಳಿಂದಲೂ ನೆಲದ ಕಡೆಗೇ ನೋಡುತ್ತಿದೆ.

ನಮ್ಮದು ಗಡಿನಾಡೇ? ಹೊರನಾಡೇ?
ತಾವು ಇರುವ ನಾಡು ಗಡಿನಾಡೇ ಅಥವಾ ಹೊರನಾಡೇ ಎಂಬ ಪ್ರಶ್ನೆ ಇಲ್ಲಿ ಎಲ್ಲರನ್ನೂ ಕಾಡುತ್ತಿದೆ. ಈ ಶಾಲೆಗಳನ್ನು ಅವಲಂಬಿಸಿರುವ ಎಲ್ಲ ಕನ್ನಡಿಗರ ಅಸ್ತಿತ್ವದ ಪ್ರಶ್ನೆಯಾಗಿಯೂ ಇದು ಗಮನ ಸೆಳೆಯುತ್ತದೆ. ಹೀಗಾಗಿಯೇ ಕನ್ನಡ ಶಾಲೆಗಳ ಸ್ಥಿತಿ–ಗತಿಯ ಕುರಿತು ಮಾತಿಗಿಳಿದರೆ, ತಾವು ಓದಿದ ಶಾಲೆಗಳಲ್ಲಿಯೇ ಶಿಕ್ಷಕರಾಗಿರುವ ಹಳೇ ವಿದ್ಯಾರ್ಥಿಗಳು ಮತ್ತು ಪೋಷಕರು, ಶಾಲೆಗಳಲ್ಲಿ ಓದಿದವರ ಭವಿಷ್ಯದ ಕಡೆಗೆ ಗಮನ ಸೆಳೆಯುತ್ತಾರೆ. ಆಂಧ್ರಪ್ರದೇಶದಲ್ಲಿರುವ ಕನ್ನಡಿಗರನ್ನು ಕರ್ನಾಟಕ ಸರ್ಕಾರವು ಇದುವರೆಗೂ ‘ಹೊರನಾಡು ಕನ್ನಡಿಗರು’ ಎಂದಾಗಲೀ, ‘ಗಡಿನಾಡು ಕನ್ನಡಿಗರು’ ಎಂದಾಗಲೀ ಪರಿಗಣಿಸಿಲ್ಲ. ಹೀಗಾಗಿ ಇಲ್ಲಿನ ಕನ್ನಡಿಗರದು ಅತಂತ್ರ ಬದುಕು.

‘ಕೇರಳದ ಕಾಸರಗೋಡು ಜಿಲ್ಲೆಯ ಕಾಸರಗೋಡು ಹಾಗೂ ಹೊಸದುರ್ಗ ತಾಲ್ಲೂಕುಗಳನ್ನು, ಮಹಾರಾಷ್ಟ್ರದ ಅಕ್ಕಲಕೋಟೆ, ಜತ್‌, ಗಡಹಿಂಗ್ಲಜ್‌. ದಕ್ಷಿಣ ಸೊಲ್ಲಾಪುರ ತಾಲ್ಲೂಕುಗಳನ್ನು ಗಡಿ ತಾಲ್ಲೂಕುಗಳೆಂದು ಘೋಷಿಸಿರುವ ಕರ್ನಾಟಕ ಸರ್ಕಾರವು ಹಲವು ದಶಕಗಳಿಂದ ಮೀಸಲು ಸೌಲಭ್ಯವನ್ನು ಒದಗಿಸಿದೆ. ಆದರೆ ಆಂಧ್ರದ ಕರ್ನೂಲ್‌, ಮೆಹಬೂಬ್‌ ನಗರ, ಅನಂತಪುರ, ಮೇದಕ್‌ ಜಿಲ್ಲೆಗಳಲ್ಲಿ ಕನ್ನಡ ಮಾಧ್ಯಮದ ಹೆಚ್ಚು ಶಾಲೆಗಳಿದ್ದರೂ ಇಲ್ಲಿನ ಗ್ರಾಮಗಳನ್ನು ಗಡಿನಾಡು ಅಥವಾ ಹೊರನಾಡು ಗ್ರಾಮಗಳೆಂದು ಗುರ್ತಿಸಿಲ್ಲ’ ಎನ್ನುತ್ತಾರೆ ಹೊಳಲಗುಂದಿ ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕ ಜಿ.ದೊಡ್ಡಬಸಪ್ಪ.

‘ಅದರ ಪರಿಣಾಮವಾಗಿಯೇ ಹಲವು ಕನ್ನಡ ಶಾಲೆಗಳು ತೆಲುಗು ಮಾಧ್ಯಮದ ಶಾಲೆಗಳಾಗಿ ಪರಿವರ್ತನೆಗೊಂಡಿವೆ’ ಎಂಬುದು ಅವರ ಪ್ರತಿಪಾದನೆ.

‘ಕನ್ನಡ ಶಾಲೆಗಳ ಉಳಿವು ಕರ್ನಾಟಕಕ್ಕೇ ಬೇಡ ಎಂದಾದರೆ, ಆಂಧ್ರ ಸರ್ಕಾರವೇಕೆ ಸುಮ್ಮನೇ ತಲೆಕೆಡಿಸಿಕೊಳ್ಳುತ್ತದೆ?’ ಇದು ಕಟು ವಾಸ್ತವದ ಕುರಿತು ಅವರ ವ್ಯಾಖ್ಯಾನ. ಈ ಶಾಲೆಗಳ ಅಂಗಳದಲ್ಲಿ ಯಾರನ್ನೇ ಮಾತನಾಡಿಸಿದರೂ, ಕನ್ನಡ ಶಾಲೆಗಳು ಎಲ್ಲಿಯೇ ಇದ್ದರೂ ಅವುಗಳನ್ನು ಉಳಿಸಿಕೊಳ್ಳಬೇಕಾದ್ದು, ಕನ್ನಡ ಅಧಿಕೃತ ಭಾಷೆಯಾಗಿರುವ ಕರ್ನಾಟಕ ಸರ್ಕಾರದ ಮೊದಲ ಜವಾಬ್ದಾರಿಯೆಂದೇ ಮಾತು ಆರಂಭಿಸುತ್ತಾರೆ.

ಭಾಷಿಕ ಅಲ್ಪಸಂಖ್ಯಾತರಾಗಿ ತಮಗೆ ಬೇಕಾದ ಚಿಕ್ಕ ಮತ್ತು ದೊಡ್ಡ ಅವಕಾಶಗಳಿಗಾಗಿ ಅವರು ನಡೆಸಿರುವ ಪ್ರಯತ್ನ ಮತ್ತು ಅವುಗಳಿಗೆ ಎರಡೂ ಸರ್ಕಾರಗಳ ಪ್ರತಿಸ್ಪಂದನೆಯು ಜನ ಭಾಷೆ ಮತ್ತು ಪ್ರಭುತ್ವದ ಭಾಷೆ ನಡುವಿನ ಸಂಘರ್ಷದಂತೆಯೂ ಕಾಣುತ್ತದೆ. ಈ ಕನ್ನಡ ಶಾಲೆಗಳಲ್ಲಿ ಓದಿದವರಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರಕುತ್ತಿಲ್ಲ ಎಂಬ ಕಾರಣಕ್ಕಾಗಿ ಹಲವು ಶಿಕ್ಷಕರು ಕನ್ನಡ ಬೋಧನೆಯನ್ನು ಬಿಟ್ಟುಕೊಡುವ ಬಗ್ಗೆಯೂ ಯೋಚಿಸುತ್ತಿದ್ದಾರೆ.

‘ಕರ್ನಾಟಕದಲ್ಲಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಆದರೆ, ಇಲ್ಲಿ ಹಲವು ಕಷ್ಟಗಳ ನಡುವೆ ಐದಾರು ದಶಕದಿಂದ ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸುವ ಪ್ರಯತ್ನ ಮಾಡುತ್ತಿದ್ದೇವೆ. ಅದಕ್ಕಾಗಿ ಕರ್ನಾಟಕ ಸರ್ಕಾರ ಏನು ಕೊಟ್ಟಿದೆ?’ ಹಿರೇಹಾಳು ಮಂಡಳದ ಕೋಟೆ ಪ್ರದೇಶದ ಪ್ರಾಥಮಿಕ ಶಾಲೆಯ ಶಿಕ್ಷಕ ಬಾಲರಾಜ್ ನೇರವಾಗಿ ಕೇಳುತ್ತಾರೆ.

ಕರ್ನಾಟಕದಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿ ಏನಾಗಿದೆ ಎಂಬುದರ ಅರಿವು ಅವರಿಗಿದೆ. ಹೀಗಾಗಿಯೇ ಅವರು ಕನ್ನಡ ಅಧಿಕೃತ ಭಾಷೆಯಾಗಿರುವ ಕರ್ನಾಟಕ ಮತ್ತು ತೆಲುಗು ಆಡಳಿತ ಭಾಷೆಯಾಗಿರುವ ಆಂಧ್ರದ ಕನ್ನಡ ಶಾಲೆಗಳನ್ನು ಹೋಲಿಸಬಲ್ಲರು.

‘ವರ್ಷಕ್ಕೊಮ್ಮೆ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಪಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಗಳಿಗೆ ಶಿಕ್ಷಕರು ಅಲೆದಾಡುವುದು ತಪ್ಪಿಲ್ಲ. ಹತ್ತನೇ ತರಗತಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕನ್ನಡ ಶಾಲೆಗಳ ಮಕ್ಕಳಿಗೆ ಮೂರು ವರ್ಷಗಳಿಂದ ಪೋತ್ಸಾಹಧನ ನೀಡುತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮ ಬಿಟ್ಟರೆ ಬೇರೆ ಯಾವ ಅನುಕೂಲವೂ ಇಲ್ಲ’– ಮತ್ತೊಬ್ಬ ಶಿಕ್ಷಕ ಎಲ್‌.ಶ್ರೀನಾಥ್‌ ಅವರ ಅಸಹನೆ ಇದು.

‘ದಶಕಗಳಿಂದ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕರ್ನಾಟಕವು ಕೊಡುವ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿರುವ ಕನ್ನಡ ಭಾಷೆ, ಸಾಹಿತ್ಯ, ಚರಿತ್ರೆಯನ್ನು ನಾವೇಕೆ ಮಕ್ಕಳಿಗೆ ಹೇಳಿಕೊಡಬೇಕು? ತೆಲುಗು ಭಾಷೆ, ಸಾಹಿತ್ಯ, ಚರಿತ್ರೆಯನ್ನೇ ಹೇಳಿಕೊಡುತ್ತೇವೆ. ಹಾಗೆಂದು ಆಂಧ್ರ ಸರ್ಕಾರಕ್ಕೆ ಪತ್ರವನ್ನು ಕೊಡುವವರಿದ್ದೇವೆ’ ಎಂದು ಅವರು ತಮ್ಮ ನಿರ್ಧಾರವನ್ನೂ ಪ್ರಕಟಿಸಿದರು.

‘ಮದ್ರಾಸ್ ಸರ್ಕಾರವೇ ಇದ್ದಿದ್ದರೆ ಈ ಶಾಲೆಗಳು ಯಾವತ್ತೋ ಮುಚ್ಚಿಹೋಗುತ್ತಿದ್ದವು. ನಮಗೆ ಯಾವುದೇ ಅನುದಾನ, ನೆರವು, ಪಠ್ಯಪುಸ್ತಕ, ಪ್ರೋತ್ಸಾಹಧನ ಬೇಡ. ಇಲ್ಲಿನ ಕನ್ನಡ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಶೇ 5ರಷ್ಟು ಮೀಸಲಾತಿ ನೀಡಿ ಆದೇಶ ಹೊರಡಿಸಲಿ ಸಾಕು’ ಇವು ಅವರ ಎದೆಯಾಳದ ಮಾತುಗಳು.

ಈ ಇಬ್ಬರ ಎದುರು ಕುಳಿತಿದ್ದ ಮುಖ್ಯಶಿಕ್ಷಕ ತಿಪ್ಪೇಸ್ವಾಮಿ, ‘ರಾಯದುರ್ಗ ತಾಲ್ಲೂಕಿನ ಹೊಸಗುಡ್ಡಂ, ಚರ್ಲೊಪಲ್ಲಿ, ಉಡೆಗೋಳದಲ್ಲಿದ್ದ ಹತ್ತಾರು ಕನ್ನಡ ಶಾಲೆಗಳು ಮುಚ್ಚಿವೆ. ಮಂಡಲ್ ಕೇಂದ್ರ ಸ್ಥಾನದಲ್ಲಿ ತೆಲುಗು ಪ್ರೌಢಶಾಲೆ ಇರಬೇಕು ಎಂಬ ಪ್ರಸ್ತಾವನೆ ಸರ್ಕಾರದ ಮುಂದಿದೆ. ಕನ್ನಡಿಗರು, ಕರ್ನಾಟಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಾದ ಕಾಲ ಇದು. ಇಲ್ಲದಿದ್ದರೆ ಇನ್ನೊಂದು ವರ್ಷದಲ್ಲಿ ಈ ಮಂಡಳದ ಕನ್ನಡ ಶಾಲೆಗಳು ತೆಲುಗು ಶಾಲೆಗಳಾಗುತ್ತವೆ. ನೋಡ್ತಾ ಇರಿ’ ಎಂದು ಭವಿಷ್ಯ ನುಡಿದರು.

ಆಂಧ್ರಪ್ರದೇಶ ವಿಭಜನೆಯಾಗಿ ಒಂದು ವರ್ಷ ಕಳೆದರೂ ಆ ಶಾಲೆಯ ಗೋಡೆಗಳ ಮೇಲೆ ಹೊಸ ಭೂಪಟ ಮೂಡಿಲ್ಲ. ಬಿರುಕುಬಿಟ್ಟ ಹಳೇ ಗೋಡೆಗಳೇ ಶಾಲೆಯ ಜೀವಾಳದಂತೆ ಕಾಣುತ್ತವೆ. ಏನುಂಟು ಏನಿಲ್ಲ? ಕನ್ನಡ ಶಾಲೆಗಳ ಈಗಿನ ವಿದ್ಯಾರ್ಥಿಗಳಿಗೆ ಇಂಥ ಸಂಕಟಗಳ ಅರಿವಿಲ್ಲ, ಅವರು ಮುಗ್ಧರು. ಅವರು ಕಂದೆಲುಗು (ಕನ್ನಡ –ತೆಲುಗು) ಮಾತನಾಡುತ್ತಲೇ, ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ, ‘ನೀನೇಕೆ ಕನ್ನಡ ಶಾಲೆ ಸೇರಿದೆ?’ ಎಂದರೆ ಅವರ ಉತ್ತರ, ‘ಅಪ್ಪ, ಅಮ್ಮ ಸೇರಿಸಿದರು’ ಎಂಬುದಷ್ಟೇ.

ಹಳೆ ದಾಖಲೆಗಳ ಪ್ರಕಾರ ಬಳ್ಳಾರಿಯಲ್ಲಿ ನೋಂದಣಿಯಾಗಿರುವ ಈ ಶಾಲೆಗಳಲ್ಲಿ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ದೊರಕಬೇಕು ಎಂಬ ಆಶಯ ಮತ್ತು ತ್ರಿಭಾಷಾ ಸೂತ್ರಕ್ಕೆ ಅನುಗುಣವಾಗಿ ಇಲ್ಲಿನ ಮಕ್ಕಳು 1ರಿಂದ 5ನೇ ತರಗತಿವರೆಗೆ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿಯನ್ನು ಕಲಿಯುತ್ತಿದ್ದಾರೆ. 6ರಿಂದ 10ನೇ ತರಗತಿವರೆಗೂ ತೆಲುಗನ್ನು ಕಡ್ಡಾಯ ದ್ವಿತೀಯ ಭಾಷೆಯಾಗಿ, ಇಂಗ್ಲಿಷ್‌ ಅನ್ನು ತೃತೀಯ ಭಾಷೆಯಾಗಿ ಕಲಿಯುತ್ತಾರೆ. ಐದಾರು ವರ್ಷಗಳ ಹಿಂದಿನವರೆಗೂ ಈ ತರಗತಿಗಳಲ್ಲಿ ಹಿಂದಿ ದ್ವಿತೀಯ ಭಾಷೆಯಾಗಿತ್ತು. ಈಗ ರಾಜ್ಯ ಭಾಷೆಯು ರಾಷ್ಟ್ರಭಾಷೆಯನ್ನು ಹಿಂದಿಕ್ಕಿದೆ.

ಕೆಲವೊಮ್ಮೆ ಒಂದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳಿದರೂ, ಒಂದೇ ಮೈದಾನದಲ್ಲಿ ಆಟವಾಡಿದರೂ, ತೆಲುಗು–ಕನ್ನಡ ವಿದ್ಯಾರ್ಥಿಗಳ ನಡುವೆ ತರಗತಿ ಸಂಬಂಧಗಳನ್ನು ಹೊರತುಪಡಿಸಿದರೆ ಬೇರೆ ಸಂಬಂಧಗಳ ಬೆಸುಗೆ ಏರ್ಪಟ್ಟಿಲ್ಲ.

ಒಂದೇ ಸುತ್ತುಗೋಡೆಯ ನಡುವೆ ತೆಲುಗು ಮತ್ತು ಕನ್ನಡ ಮಾಧ್ಯಮದ ಶಾಲೆಗಳಿರುವೆಡೆಯಾಗಲೀ, ಕನ್ನಡ ಮಾಧ್ಯಮವೊಂದೇ ಇರುವ ಶಾಲೆಯಾಗಲೀ ಕೊಠಡಿಗಳ ಕೊರತೆ, ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಕೊರತೆ ಎಂಬುದು ಕಾಡುವ ಸಂಗತಿಯೇ ಆಗಿದೆ. ತರಗತಿಗಳು ಮರದ ನೆರಳಲ್ಲಿಯೂ ನಡೆಯುತ್ತವೆ. ಕನ್ನಡ, ತೆಲುಗು ಮಾಧ್ಯಮದ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಸೇರಿಸಿ ಶಿಕ್ಷಕರು ಪಾಠ ಮಾಡುತ್ತಾರೆ. ಪರೀಕ್ಷೆ ಸಮಯದಲ್ಲಂತೂ ಶಾಲಾ ಮೈದಾನವೇ ಬೃಹತ್‌ ಪರೀಕ್ಷಾ ಕೊಠಡಿಯಾಗಿ ಮಾರ್ಪಡುತ್ತದೆ.

ಶಿಕ್ಷಕರ ಕೊರತೆ: 1995ರಲ್ಲಿ ಕರ್ನೂಲು ಜಿಲ್ಲೆಯಲ್ಲಿ ಕನ್ನಡ ಶಿಕ್ಷಕರ ನೇಮಕಾತಿ ನಡೆದ ವೇಳೆ ಖಾಲಿ ಇದ್ದ 25 ಹುದ್ದೆಗಳ ಪೈಕಿ ಭರ್ತಿಯಾಗಿದ್ದು ಕೇವಲ ಏಳೆಂಟು ಹುದ್ದೆ. ಆಗ ಆಯ್ಕೆಯಾದವರಲ್ಲಿ ಆಲೂರು ವಿಭಾಗದ ಹೊಳಲಗುಂದಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶಾಂತವೀರಮೂರ್ತಿ ಅವರೂ ಒಬ್ಬರು. ‘ಈಗ ಡಿ.ಇಡಿ. ಬಿ.ಇಡಿ. ಶಿಕ್ಷಣ ಪಡೆದವರು ನೂರಾರು ಮಂದಿ ಇರಬಹುದು. ಆದರೆ ಜಿಲ್ಲಾ ಆಯ್ಕೆ ಸಮಿತಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗುವವರು ಬೆರಳೆಣಿಕೆಯಷ್ಟು ಮಂದಿ’ ಎಂದು ಅವರು ನಿಟ್ಟುಸಿರು ಬಿಡುತ್ತಾರೆ. 

ಕರ್ನಾಟಕದಲ್ಲಿ ಹಲವೆಡೆ ಇರುವಂತೆ ಒಬ್ಬ ಶಿಕ್ಷಕರಷ್ಟೇ ಇರುವ, ಒಂದೇ ಕೊಠಡಿಯಲ್ಲಿ ನಾಲ್ಕೈದು ತರಗತಿಗಳ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶಾಲೆಗಳೂ ಇಲ್ಲಿ ಇವೆ. ಕನ್ನಡ ಶಿಕ್ಷಕರಷ್ಟೆ ಅಲ್ಲದೆ, ತೆಲುಗು ಭಾಷಾ ಶಿಕ್ಷಕರ ಕೊರತೆಯೂ ಉಂಟು. ಇಂಥ ಶಾಲೆಗಳಲ್ಲಿ ಕನ್ನಡ ಶಿಕ್ಷಕರು ತೆಲುಗು ಪಾಠವನ್ನು, ತೆಲುಗು ಶಿಕ್ಷಕರು ಕನ್ನಡ ಪಾಠವನ್ನೂ ಮಾಡುತ್ತಾರೆ.

ತೆಲುಗು ಮಾಧ್ಯಮದ ಶಾಲೆಗಳಲ್ಲಿ ತೆಲುಗು ಶಿಕ್ಷಕರ ಹುದ್ದೆ ಮಂಜೂರಾದಂತೆ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ತೆಲುಗು ಶಿಕ್ಷಕರ ಹುದ್ದೆಗಳು ಮಂಜೂರಾಗುವುದಿಲ್ಲ. ಹೀಗಾಗಿಯೇ ಹಿರೇಹಾಳು ಮಂಡಳದ ಮಡೇನಹಳ್ಳಿ, ಓಬಳಾಪುರ ಮತ್ತು ಸಿದ್ದಾಪುರ ಶಾಲೆಗಳಲ್ಲಿ ತೆಲುಗು ಪಾಠಗಳನ್ನು ಈಗಲೂ ಕನ್ನಡ ಶಿಕ್ಷಕರು ಹೇಳಿಕೊಡುತ್ತಿದ್ದಾರೆ.

ಇಂಥ ಸನ್ನಿವೇಶದಲ್ಲೇ, ಎರಡೂವರೆ ದಶಕಕ್ಕೂ ಹಿಂದೆ, ಕನ್ನಡ ಶಾಲೆಗಳಿಗೆ ಆಂಧ್ರ ಸರ್ಕಾರವು ತೆಲುಗು ಶಿಕ್ಷಕರನ್ನು ವರ್ಗಾಯಿಸುತ್ತಿದ್ದ ನಡೆಯನ್ನು ಮತ್ತು ಅದಕ್ಕೆ ಎದುರಾಗಿದ್ದ ಪ್ರತಿರೋಧವನ್ನು ಅವಲೋಕಿಸಬೇಕು. ಮೆಹಬೂಬ್ ನಗರ ಜಿಲ್ಲೆಯ ಕೃಷ್ಣ ಪ್ರದೇಶದ ಕನ್ನಡ ಶಾಲೆಗಳನ್ನು ಮುಚ್ಚಿ, ತೆಲುಗು ಶಾಲೆಗಳನ್ನು ತೆರೆಯುವ ನಿರ್ಧಾರದ ಕುರಿತು 1988ರಲ್ಲಿ ಕನ್ನಡ ಸಂರಕ್ಷಣೆ ಮತ್ತು ಗಡಿ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ಪಾಟೀಲ ಪುಟ್ಟಪ್ಪನವರು ಆಂಧ್ರದ ಅಂದಿನ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರಿಗೆ ಪತ್ರವೊಂದನ್ನು ಬರೆದಿದ್ದರು.

ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ತೆಲುಗು ಕಲಿಕೆಯನ್ನು ಹೇರುವ ನಿರ್ಧಾರವನ್ನು ಪುಟ್ಟಪ್ಪ ಕಟು ಶಬ್ದಗಳಲ್ಲಿ ಖಂಡಿಸಿದ್ದರು. ‘ಹೆಚ್ಚು ಕನ್ನಡ ಶಾಲೆಗಳಿಗಾಗಿ ಕೃಷ್ಣಾ ಪ್ರದೇಶದ ಕನ್ನಡಿಗರು ಆಗ್ರಹಿಸುತ್ತಿರುವಾಗ, ಕನ್ನಡ ಮಾಧ್ಯಮ ಶಾಲೆಗಳಿಗೆ ತೆಲುಗು ಶಿಕ್ಷಕರನ್ನು ವರ್ಗಾಯಿಸುತ್ತಿರುವುದು, ಕನ್ನಡ ಶಾಲೆಗಳ ಕತ್ತು ಹಿಸುಕುವ ಹುನ್ನಾರ. ಭಾಷಿಕ ಅಲ್ಪಸಂಖ್ಯಾತರಾದ ಕನ್ನಡಿಗರು ಆಂಧ್ರಕ್ಕೆ ಸೇರಿದವರು. ಕರ್ನಾಟಕದಲ್ಲಿ ಅಲ್ಪಸಂಖ್ಯಾತರಾದ ತೆಲುಗರಿಗೆ ನಮ್ಮ ರಾಜ್ಯವು ಸೌಲಭ್ಯಗಳನ್ನು ನೀಡಿದ ರೀತಿಯಲ್ಲೇ ನೀವು ಕನ್ನಡಿಗ ಅಲ್ಪಸಂಖ್ಯಾತರಿಗೂ ಸೌಲಭ್ಯಗಳನ್ನು ಕೊಡಬೇಕು’ ಎಂದು ಅವರು ಆಗ್ರಹಿಸಿದ್ದರ ಪರಿಣಾಮ, ಶಾಲೆಗಳನ್ನು ಮುಚ್ಚುವ ಪ್ರಯತ್ನಕ್ಕೆ ತಡೆ ಬಿದ್ದಿತ್ತು.

‘ಈಗಲೂ ಕನ್ನಡ ಶಾಲೆಗಳಿಗೆ ಆದೋನಿ ಭಾಗದಲ್ಲಿ ಬೇಡಿಕೆ ಇದೆ. ಆ ಭಾಗದ ಮಾರ್ಲಮಡಿಕಿ ಗ್ರಾಮದಲ್ಲಿ ಕೆಲವು ವರ್ಷಗಳ ಹಿಂದೆ ಕನ್ನಡ ಶಾಲೆ ಮುಚ್ಚಿದ ಬಳಿಕ ಅಲ್ಲಿನ ನೂರಾರು ಮಕ್ಕಳು ಸಮೀಪದಲ್ಲೇ ಇರುವ ಸಿರುಗುಪ್ಪ ತಾಲ್ಲೂಕಿನ ಮಾಟಸೂಗೂರು ಗ್ರಾಮದ ಶಾಲೆಗೆ ಸೇರಿದರು. ಮಾರ್ಲಮಡಿಕಿಯಲ್ಲಿ ಮತ್ತೆ ಕನ್ನಡ ಶಾಲೆಯನ್ನು ತೆರೆಯಬೇಕು ಎಂಬ ಹತ್ತಾರು ಮನವಿಗಳಿಗೆ ಆಂಧ್ರ ಸರ್ಕಾರ ಸ್ಪಂದಿಸಿಲ್ಲ’ ಎನ್ನುತ್ತಾರೆ ಶಾಂತವೀರಮೂರ್ತಿ.

ಪ್ರಶ್ನೆ ಪತ್ರಿಕೆ ಚೌಕಾಸಿ...
‘ಮಿಕ್ಕೆಲ್ಲ ಪಠ್ಯಗಳಿಗೆ ಮುದ್ರಿತ ಪ್ರಶ್ನೆಪತ್ರಿಕೆಯನ್ನು ವಿತರಿಸುವ ಆಂಧ್ರ ಸರ್ಕಾರವು 1ರಿಂದ 8ನೆ ತರಗತಿವರೆಗೆ ಕೈ ಬರಹದಲ್ಲಿ ಸಿದ್ಧಪಡಿಸಿದ ಕನ್ನಡ ಭಾಷಾ ಪ್ರಶ್ನೆಪತ್ರಿಕೆಯನ್ನು ಜೆರಾಕ್ಸ್ ಹಾಳೆಗಳ ರೂಪದಲ್ಲಿ ಈಗಲೂ ವಿತರಿಸುತ್ತದೆ ಎಂಬ ವಿಚಿತ್ರ ನಿಮಗೆ ಗೊತ್ತೆ’ ಎಂದು ಜಿ.ದೊಡ್ಡಬಸಪ್ಪ ನಗುತ್ತಲೇ ಕೇಳುತ್ತಾರೆ.

‘ನಾವು ಇದನ್ನೂ ಸಹಿಸಿಕೊಂಡಿದ್ದೇವೆ. ಕನ್ನಡವೆಂದರೆ ಇಲ್ಲಿನ ಸರ್ಕಾರಕ್ಕೆ ಕೇವಲ ಎಂಬುದನ್ನು ತೋರಿಸಲು ಇದಕ್ಕಿಂತ ಉದಾಹರಣೆ ಬೇಕೆ’ ಎನ್ನುತ್ತಾರೆ ಅವರು. ಕನ್ನಡ ಭಾಷಾ ಪಠ್ಯಪುಸ್ತಕಗಳಿಗಾಗಿ ಹಲವು ವರ್ಷ ನಡೆಸಿದ ಹೋರಾಟದ ಬಗ್ಗೆ ಇಲ್ಲಿನ ಶಿಕ್ಷಕರು ದಿನಗಟ್ಟಳೆ ವಿವರಿಸಬಲ್ಲರು. ಈ ಶಾಲೆಗಳ ಈಗಿನ ವಿದ್ಯಾರ್ಥಿಗಳ ಹೆಗಲಚೀಲದಲ್ಲಿ ಆಂಧ್ರ ಸರ್ಕಾರದ ತೆಲುಗು ಪಠ್ಯಪುಸ್ತಕಗಳ ಕನ್ನಡ ಅವತರಣಿಕೆಗಳಿವೆ. ಅವುಗಳೊಂದಿಗೆ ಕರ್ನಾಟಕದ ಕನ್ನಡ ಭಾಷಾ ಪಠ್ಯಪುಸ್ತಕವಿದೆ. ಆದರೆ ಈಗ ಶಿಕ್ಷಕರಾಗಿರುವ, ಹಳೇ ವಿದ್ಯಾರ್ಥಿಗಳು ಓದುವ ಕಾಲಕ್ಕೆ ಕನ್ನಡ ಪುಸ್ತಕಗಳನ್ನು ಯಾರೂ ಕೊಟ್ಟಿರಲಿಲ್ಲ. ತೆಲುಗು ಪುಸ್ತಕಗಳಲ್ಲಿದ್ದ ಪಾಠಗಳನ್ನು ಶಿಕ್ಷಕರು ಕನ್ನಡದಲ್ಲಿ ಹೇಳಿದ್ದರು.

ಕನ್ನಡದಲ್ಲೇ ಪಠ್ಯಪುಸ್ತಕಗಳನ್ನು ಕೊಡಿ ಎಂಬ ಆಗ್ರಹ ನಿರ್ಮಾಣವಾದ ಸಂದರ್ಭದಲ್ಲಿ ತೆಲುಗು ಪಠ್ಯಪುಸ್ತಕಗಳನ್ನು ಅನುವಾದ ಮಾಡುವವರು ಯಾರು ಎಂಬ ಆಂಧ್ರ ಸರ್ಕಾರದ ಪ್ರಶ್ನೆಗೆ ಉತ್ತರವಾಗಿ ಸಿಕ್ಕವರು ಕನ್ನಡ ಶಾಲೆಗಳ ದ್ವಿಭಾಷಾ ಸಾಮರ್ಥ್ಯದ ಶಿಕ್ಷಕರು. ಈ ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ ದೊರಕುವುದು ತೆಲುಗು ಮಾಧ್ಯಮದಲ್ಲೇ!

ಹಿರೇಹಾಳ್‌ನಲ್ಲಿರುವ ಗಡಿನಾಡು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶೆಟ್ರು ಸುರೇಶ್‌ ಅವರ ಬಳಿ ಇರುವ ಎರಡೂವರೆ ದಶಕದ ಹಿಂದಿನ ಒಂದು ಪತ್ರವು, ಕನ್ನಡ ಶಾಲೆಗಳ ಕುರಿತು ಆಂಧ್ರ ಮತ್ತು ಕರ್ನಾಟಕದ ಧೋರಣೆಗಳಿಗೆ ಕನ್ನಡಿ ಹಿಡಿಯುವಂತಿದೆ.

80ರ ದಶಕದಲ್ಲಿ 3ರಿಂದ 7ನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಕನ್ನಡದಲ್ಲಿ ಮುದ್ರಿಸಿಕೊಡಲು ಆಂಧ್ರಪ್ರದೇಶ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ಹಣ ನೀಡುತ್ತಿತ್ತು. ಆದರೆ ಒಮ್ಮೆ ಹಣ ಕೊಡಲಿಲ್ಲ ಎಂಬ ಕಾರಣದಿಂದ ಕರ್ನಾಟಕ ಸರ್ಕಾರವು ಪಠ್ಯಪುಸ್ತಕಗಳನ್ನು ಮುದ್ರಿಸಿ ಕೊಟ್ಟಿರಲಿಲ್ಲ. ಆಗ ಸುರೇಶ್ ಸಂಗಡಿಗರು, ಅಂದಿನ ಕೊಪ್ಪಳ ಕ್ಷೇತ್ರದ ಸಂಸದರಾಗಿದ್ದ ಎಚ್.ಜಿ.ರಾಮುಲು ಅವರ ಗಮನ ಸೆಳೆದ ಪರಿಣಾಮ, ಅವರು 1987ರ ಆಗಸ್ಟ್ 21ರಂದು ಆಂಧ್ರದ ಶಿಕ್ಷಣ ಸಚಿವರಿಗೆ ಪತ್ರವನ್ನು ಬರೆದಿದ್ದರು, ನಂತರ ಹಣ ಬಿಡುಗಡೆಯಾಗಿತ್ತು.

ಕಟ್ಟಡ ಸೌಕರ್ಯ ವಿಷಯಕ್ಕೆ ಬಂದರೆ, ಕನ್ನಡ, ತೆಲುಗು ಶಾಲೆಗಳ ನಡುವೆ ವ್ಯತ್ಯಾಸಗಳೇನೂ ಹೆಚ್ಚು ಕಂಡುಬರುವುದಿಲ್ಲ. ದಶಕಗಳ ಹಿಂದಿನ ಹಳೇ ಕಟ್ಟಡಗಳ ಜೊತೆಗೆ, ಸರ್ವಶಿಕ್ಷಣ ಅಭಿಯಾನದ ಅಡಿ ನಿರ್ಮಿಸಲಾಗಿರುವ ಹೊಸ ಕಟ್ಟಡಗಳಲ್ಲಿ ತರಗತಿಗಳು ನಡೆಯುತ್ತಿವೆ.

‘ಎಲ್ಲ ಮಕ್ಕಳಿಗೂ ಯೂನಿಫಾರ್ಮ್‌, ಬಿಸಿಯೂಟ, ಪಠ್ಯಪುಸ್ತಕ ಎಲ್ಲವನ್ನೂ ಆಂಧ್ರ ಸರ್ಕಾರವೇ ಕೊಡುತ್ತಿದೆ. ಆದರೆ ಕನ್ನಡ ಗ್ರಂಥಾಲಯವಿಲ್ಲ. ಒಂಬತ್ತು ಮತ್ತು ಹತ್ತನೇ ತರಗತಿಯ ಇಂಗ್ಲಿಷ್‌, ತೆಲುಗು ಮಾಧ್ಯಮದ ಮಕ್ಕಳಿಗೆ ಮಾತ್ರ ದಾನಿಗಳು ಅಧ್ಯಯನ ಸಾಮಗ್ರಿಗಳನ್ನು ಕೊಡುತ್ತಾರೆ. ಪ್ರತಿ ವರ್ಷವೂ ಕನ್ನಡದ ಮಕ್ಕಳು ಅದನ್ನು ಬಿಡುಗಣ್ಣಿನಲ್ಲಿ ನೋಡುತ್ತಿರುತ್ತಾರೆ. ಅವರಿಗೆ ಕನ್ನಡದ ಅಧ್ಯಯನ ಸಾಮಗ್ರಿಗಳನ್ನು ಕೊಡೋರೇ ಇಲ್ಲ’ ಎಂದು ಆದೋನಿ ಮಂಡಳದ ಕೌತಾಳಂ ಗ್ರಾಮದ ಕನ್ನಡ, ತೆಲುಗು ಹಾಗೂ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಎಂ.ಶಿವಣ್ಣ ಕೊರತೆಯ ಕಡೆಗೆ ಗಮನ ಸೆಳೆಯುತ್ತಾರೆ.

‘ಏಕಾಂಗಿ ಸ್ಥಿತಿಯಲ್ಲೇ ಮುಂದುವರಿಯುತ್ತಿರುವ ಕನ್ನಡ ಶಾಲೆಗಳಿಗೆ ಕರ್ನಾಟಕ ಸರ್ಕಾರ ಗ್ರಂಥಾಲಯ ಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ಕೊಡಲು ಮನಸ್ಸು ಮಾಡಬೇಕು’ ಎನ್ನುತ್ತಾರೆ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ.ಚೆನ್ನಬಸವಣ್ಣ.

ಭರ್ತಿ ಮಕ್ಕಳಿರುವ ಕನ್ನಡ ಶಾಲೆಗಳಲ್ಲಿ ಸ್ಥಳೀಯ ತೆಲುಗು ಅಭಿಮಾನಿಗಳೇ ದೊಡ್ಡ ತೊಡಕುಗಳನ್ನು ಸೃಷ್ಟಿಸುವ ಸನ್ನಿವೇಶಗಳೂ ಇಲ್ಲಿ ಉಂಟು. ‘ಆಂಧ್ರ ಸರ್ಕಾರದ ಹಣದಲ್ಲಿ ನಡೆಯುತ್ತಿರುವ ಶಾಲೆಗಳ ಫಲಕವನ್ನು ಕನ್ನಡದಲ್ಲಿ ಬರೆಸಿ ನೀವು ತೆಲುಗು ವಿರೋಧಿಗಳಾಗಿದ್ದೀರಿ’ ಎಂಬ ಸ್ಥಳೀಯರಾದ ಕೆಲವು ತೆಲುಗು ಅಭಿಮಾನಿಗಳು ಶಾಲೆ ಬಳಿ ಬಂದು ಜೋರು ಮಾತನಾಡಿದ್ದ ಘಟನೆಯನ್ನು ಹಿರೇಹಾಳು ಮಂಡಳದ ಮಡೇನಹಳ್ಳಿಯ ಮಂಡಲ್‌ ಪರಿಷತ್‌ ಉನ್ನತ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಜಿ.ಬಸನ್ನ ಇನ್ನೂ ಮರೆತಿಲ್ಲ.

‘ಇದು ಕನ್ನಡ ಶಾಲೆ. ಕನ್ನಡದಲ್ಲೇ ಫಲಕ ಇರಬೇಕು. 6ರಿಂದ 8ನೇ ತರಗತಿವರೆಗೆ ಈ ಶಾಲೆಯಲ್ಲಿ ಹತ್ತು ವರ್ಷದಿಂದ ಒಬ್ಬ ತೆಲುಗು ಶಿಕ್ಷಕರು ಇಲ್ಲದಿದ್ದರೂ ನಾವೇ ತೆಲುಗಿನ ಪಾಠವನ್ನೂ ಮಾಡುತ್ತಿದ್ದೇವೆ, ನಮ್ಮನ್ನು ಹೇಗೆ ತೆಲುಗು ದ್ವೇಷಿಗಳೆಂದು ಕರೆಯುತ್ತೀರಿ’ ಎಂದು ಅವರು ಕೇಳಿದ್ದಾರೆ.

ಇದೇ ವೇಳೆ, ಹಲವು ಪೋಷಕರು ಈಗಲೂ ತೆಲುಗು ನಾಡಿನ ಕನ್ನಡ ಶಾಲೆಗಳಿಂದ ತಮ್ಮ ಮಕ್ಕಳನ್ನು ದೂರವೇ ಇಟ್ಟಿದ್ದಾರೆ, ಅವರಿಗೆ ಬಳ್ಳಾರಿಯೇ ಆಪ್ತ. ಕೋಟೆ ಪ್ರದೇಶದ ಗಿರಿಮಲ್ಲಿಕಾರ್ಜುನ ಅವರ ಮಗಳು ಬಳ್ಳಾರಿಯ ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ, ಮಗ 8ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಕ್ಕಳನ್ನು ಎಳೆಯ ವಯಸ್ಸಿನಲ್ಲೇ ಮಲ್ಲಿಕಾರ್ಜುನ ಅವರು ಬಳ್ಳಾರಿಗೆ ಬಿಟ್ಟು ಬಂದಿದ್ದಾರೆ.

ನೆಂಟರು ಮತ್ತು ಹಾಸ್ಟೆಲ್‌ಗಳ ಆಶ್ರಯದಲ್ಲಿ ಬೆಳೆಯುತ್ತಿರುವ ಮಕ್ಕಳು ಕರ್ನಾಟಕದಲ್ಲೇ ಶಿಕ್ಷಣ ಪಡೆದು ಉದ್ಯೋಗಸ್ಥರಾಗಲಿ ಎಂಬ ಆಸೆ ಅದಕ್ಕೆ ಕಾರಣ. ಆದರೆ ಅವರಂತೆ ಸ್ಥಿತಿವಂತರಲ್ಲದವರು ಮಾತ್ರ, ತಾವು ಇದ್ದಲ್ಲೇ ಕನ್ನಡ ಅಥವಾ ತೆಲುಗು ಶಾಲೆಗೆ ಸೇರಿಸಿ ಸುಮ್ಮನಾಗಿದ್ದಾರೆ. ಲಿಂಗಪ್ಪ ಅಂಥ ಪೋಷಕರಲ್ಲಿ ಒಬ್ಬರು. ಅವರ ಮೂರನೇ ಮಗಳು 9ನೇ ತರಗತಿಯಲ್ಲಿ, ಮಗ 6ನೇ ತರಗತಿಯಲ್ಲಿ ಹಿರೇಹಾಳ್‌ನಲ್ಲೇ ಓದುತ್ತಿದ್ದಾರೆ. 

ಹಿರೇಹಾಳ್ ಗ್ರಾಮದಲ್ಲಿ ಸಿಕ್ಕ ಯುವಕ ಗಂಗಣ್ಣ ಕೆಣಕುವಂತೆ ಹೇಳಿದ್ದ ಮಾತಿನಿಂದ ಈ ವಿಷಯವನ್ನು ಮುಂದುವರಿಸಬಹುದು. ‘ಇಲ್ಲಿ ಕನ್ನಡ ಶಾಲೆಗಳ ಸ್ಥಿತಿ-–ಗತಿ ಕುರಿತು ಮಾತನಾಡೋದು ಏನೂ ಇಲ್ಲ. ಎಲ್ಲ ಸರ್ಕಾರಿ ಶಾಲೆಗಳಂತೆಯೇ ಇವು ಕೂಡ. ಆದರೆ ಇಲ್ಲಿ ಕಲಿತವರ ಪಾಡೇನು ಎಂದು ಕೇಳಿ. ಆಗ ಈ ಶಾಲೆಗಳ ಭವಿಷ್ಯ ಏನು ಎಂದು ಅರ್ಥವಾಗುತ್ತದೆ’ ಹತ್ತನೇ ತರಗತಿ ಬಳಿಕ ಬಳ್ಳಾರಿಗೆ ಬಂದು ಪಿಯುಸಿ ಓದಿ, ಹಿರೇಹಾಳಿಗೆ ಸಮೀಪದಲ್ಲೇ ಇರುವ, ಚಿತ್ರದುರ್ಗ ಜಿಲ್ಲೆಯ ರಾಂಪುರದಲ್ಲಿ ಐಟಿಐ ಓದಿರುವ ಅವರದು ಗ್ರಾಮದಲ್ಲೇ ಮೋಟರ್ ರಿವೈಂಡಿಂಗ್ ಕೆಲಸ. ಅವರಂತೆ ಐಟಿಐ ಓದಿ ಹಳ್ಳಿಯಲ್ಲೇ ಉಳಿದವರು ನೂರಾರು ಮಂದಿ. ಹತ್ತನೇ ತರಗತಿಗೇ ಶಾಲೆ ಬಿಟ್ಟವರ ಸಂಖ್ಯೆ ಇನ್ನೂ ದೊಡ್ಡದು.

ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿವರೆಗೆ ಓದಿದ ಮಕ್ಕಳಿಗೆ ಅದೇ ಮಾಧ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಸೇರಿದಂತೆ ಯಾವುದೇ ಉನ್ನತ ಶಿಕ್ಷಣದ ವ್ಯವಸ್ಥೆಯು ಆಂಧ್ರದ ನೆಲದಲ್ಲಿ ಇಲ್ಲ. ತೆಲುಗು ಮಾಧ್ಯಮದಲ್ಲೇ ಶಿಕ್ಷಣವನ್ನು ಮುಂದುವರಿಸಬೇಕೆಂದರೂ ಅವರು 50–100 ಕಿ.ಮೀ ದೂರದ ರಾಯದುರ್ಗ, ಅನಂತಪುರ, ಕಲ್ಯಾಣದುರ್ಗ, ಕರ್ನೂಲು, ಗುಂತಕಲ್‌ವರೆಗೂ ಹೋಗಬೇಕು. ಕನ್ನಡ ಮಾಧ್ಯಮದವರು ಎಂಬ ಕಾರಣಕ್ಕೆ ಅಲ್ಲಿಯೂ ಅವರಿಗೆ ಆದ್ಯತೆ, ಅವಕಾಶ ಕಡಿಮೆ. ಸಿಕ್ಕರೂ ತೆಲುಗು ಮಾಧ್ಯಮದಲ್ಲೇ ಓದಬೇಕು.

ಹೀಗಾಗಿ ಕೆಲವೇ ವಿದ್ಯಾರ್ಥಿಗಳು ಹತ್ತಿರದ ಬಳ್ಳಾರಿ, ಸಿರುಗುಪ್ಪ, ರಾಂಪುರಕ್ಕೆ ಪಿಯುಸಿ, ಡಿ.ಇಡಿ, ಬಿ.ಇಡಿ, ಐಟಿಐ ಓದಲು ಹೋಗುತ್ತಾರೆ. ಉಳಿದವರು ಅರೆ ಕುಶಲ ಉದ್ಯೋಗಿಗಳಾಗುತ್ತಾರೆ. ಡಿ.ಇಡಿ, ಬಿ,ಇಡಿ ಪ್ರಶಿಕ್ಷಣ ಪೂರೈಸಿದವರು ಮತ್ತೆ ತಮ್ಮ ಹುಟ್ಟೂರಿಗೆ ಬಂದು ಶಿಕ್ಷಕರ ಕೆಲಸಕ್ಕಾಗಿ ಕಾಯುತ್ತಾರೆ. ಹತ್ತನೇ ತರಗತಿವರೆಗೂ ಓದಿದ ಬಾಲಕಿಯರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಾರೆ. ಬಹುತೇಕರಿಗೆ ಪೋಷಕರು ಬೇಗ ಮದುವೆ ಮಾಡುತ್ತಾರೆ.

ಈ ಸನ್ನಿವೇಶವನ್ನು ಹಲವು ದಶಕಗಳಿಂದ ನೋಡುತ್ತಿರುವ ಆದೋನಿಯ ಕನ್ನಡಪರ ಹೋರಾಟಗಾರ ಬ.ರ.ದತ್ತಾತ್ರೇಯಗೌಡ ಅವರದೊಂದು ಭಿನ್ನ ನಿಲುವಿದೆ. ‘ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿರುವುದರಿಂದ, ಕರ್ನಾಟಕದಲ್ಲಿ ಮೀಸಲಾತಿ ದೊರಕದೇ ಇರುವುದರಿಂದ ಉದ್ಯೋಗ ದೊರಕಿಲ್ಲ ಎಂದು ಹೇಳುವ ಹೊರನಾಡ ಕನ್ನಡಿಗರು, ತೆಲುಗು ಮಾಧ್ಯಮದಲ್ಲಿ ಓದಿದವರೆಲ್ಲರಿಗೂ ಆಂಧ್ರಪ್ರದೇಶದಲ್ಲಿ ಉದ್ಯೋಗ ದೊರಕಿದೆಯೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು’ ಎನ್ನುತ್ತಾರೆ ಅವರು.

ಕನ್ನಡ ಶಾಲೆಗಳಿಗಾಗಿ ತಮ್ಮ ನೆಲ, ತನು, ಮನ, ಧನವನ್ನು ಧಾರಾಳವಾಗಿ ವಿನಿಯೋಗಿಸಿರುವ ಕುಟುಂಬಕ್ಕೆ ಸೇರಿದ ಅವರು, ‘ಅಭಿಮಾನವನ್ನಷ್ಟೇ ಪರಿಗಣಿಸಿದರೆ ಕನ್ನಡ ಶಾಲೆಗಳು ಉಳಿಯುವುದು ಕಷ್ಟ. ಕನ್ನಡ ಶಾಲೆಯಾಗಲೀ, ಯಾವುದೇ ಶಾಲೆಯಾಗಲೀ, ಅಲ್ಲಿ ಕಲಿಯುವವರಿಗೆ ಜೀವನ ಮತ್ತು ವೃತ್ತಿಕೌಶಲಗಳನ್ನು ಹೇಳಿಕೊಡಬೇಕು. ಬಹುಭಾಷೆಯ ಪ್ರವೀಣರನ್ನಾಗಿಸಬೇಕು. ರಾಜ್ಯಗಳ ಗಡಿ ಮೀರಿ, ಜಾಗತಿಕ ಸನ್ನಿವೇಶದಲ್ಲಿ ಬೇಕಾದ ಅರ್ಹತೆಗಳನ್ನು ಗಳಿಸುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೆರವಾಗಬೇಕು’ ಎನ್ನುತ್ತಾರೆ.

ವರದಿಯ ಸಾಲು...
2001ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಲ್ಲಿಸಿದ್ದ ಶಿಕ್ಷಣ ಮತ್ತು ಮಾಧ್ಯಮ - ನೀತಿ ನಿರೂಪಣಾ ವರದಿಯ 14ನೇ ಶಿಫಾರಸು ಹೀಗಿದೆ: ಗಡಿನಾಡು ಮತ್ತು ಹೊರನಾಡಿನ ಕನ್ನಡಿಗರ ಸಮಸ್ಯೆಗಳ ಚರ್ಚೆಗೆ ಗಡಿಭಾಗದ ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಸಂಸ್ಕೃತಿ ಸಚಿವರು, ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳು, ಇತರೆ
ವರಿಷ್ಠಾಧಿಕಾರಿಗಳು ಭಾಷಾಭಿವೃದ್ಧಿಗೆ ಸಂಬಂಧಿಸಿದ ಅಧಿಕೃತ ವರಿಷ್ಠರು- ವರ್ಷಕ್ಕೆ ಎರಡು ಬಾರಿಯಾದರೂ ಸೇರಿ ಚರ್ಚಿಸುವ ವ್ಯವಸ್ಥೆ ಮಾಡಬೇಕು. ಅದಕ್ಕೆ ಕರ್ನಾಟಕ ಸರ್ಕಾರವೇ ನೇತೃತ್ವ ವಹಿಸಿ ಮುಂದಾಗಬೇಕು.

ಗಡಿನಾಡು ಮತ್ತು ಹೊರನಾಡಿನವರು 1ರಿಂದ 10ನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ, ಅಂಥವರಿಗೆ ಕರ್ನಾಟಕದೊಳಗಿನ ಅಭ್ಯರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಮುಕ್ತವಾಗಿ ನೀಡಬೇಕು. ಇಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವುದೊಂದೇ ಮಾನದಂಡವಾಗಬೇಕು.

ಆದರೆ ಒಂದೂವರೆ ದಶಕ ಕಳೆದರೂ ಈ ಶಿಫಾರಸುಗಳು ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. 2011ರಲ್ಲಿ ಮೆಹಬೂಬ್‌ ನಗರದ ಗ್ರಾಮಗಳನ್ನು ಹೊರನಾಡ ಕನ್ನಡ ಗ್ರಾಮಗಳೆಂದು ಘೋಷಿಸಿದ ಸಮಯದಲ್ಲೇ, ದೇಶದ ಯಾವುದೇ ಭಾಗದಲ್ಲಿ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕೈಗಾರಿಕೆ ತರಬೇತಿ, ಡಿಪ್ಲೊಮಾ ಕೋರ್ಸ್ ಕಾಲೇಜುಗಳಲ್ಲಿ, ತಾಂತ್ರಿಕ ಸಂಸ್ಥೆ, ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರವೇಶ ಪಡೆಯಲು ಗಡಿನಾಡು/ಹೊರನಾಡು ಕನ್ನಡಿಗರ ಮೀಸಲಾತಿ ಅಡಿಯಲ್ಲಿ ಅವಕಾಶ ಕಲ್ಪಿಸಿ ಆದೇಶವನ್ನು ಹೊರಡಿಸಲಾಗಿತ್ತು.

ಆದರೆ, ‘ಈ ಆದೇಶ ನಮಗೆ ಬಂದಿಲ್ಲ’ ಎಂದು ಆಂಧ್ರದ ಕನ್ನಡಿಗರ ಅಭ್ಯರ್ಥಿತನವನ್ನೇ ನಿರಾಕರಿಸುವ ಘಟನೆಗಳು ಕರ್ನಾಟಕದಲ್ಲಿ ನಡೆಯುತ್ತಲೇ ಇವೆ. ಅಭ್ಯರ್ಥಿಗಳೇ ಆದೇಶದ ಪ್ರತಿಯನ್ನು ನೀಡಿದರೂ ಅಧಿಕಾರಿಗಳು ಒಪ್ಪುವುದಿಲ್ಲ. ಹೀಗಾಗಿ ಪ್ರತಿ ವರ್ಷವೂ ಅಭ್ಯರ್ಥಿಗಳು ಮತ್ತು ಅವರ ಪೋಷಕರು ಅಸಹಾಯಕರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೆಟ್ಟಿಲು ಸವೆಸುತ್ತಾರೆ.

ಈ ಕನ್ನಡ ಶಾಲೆಗಳ ಭವಿಷ್ಯವು ಅಲ್ಲಿ ಓದಿದವರಿಗೆ ದೊರಕುವ ಭವಿಷ್ಯವನ್ನು ಆಧರಿಸಿದೆಯಲ್ಲವೇ ಎಂದು ಯೋಚಿಸುತ್ತಾ ಮಡೇನಹಳ್ಳಿಯ ಶಾಲೆಯ ವಿದ್ಯಾರ್ಥಿಗಳ ಗುಂಪಿನೆದುರು ನಿಂತಿದ್ದಾಗ ತಲೆ ಕೆದರಿದ, ಬಟ್ಟೆ ಮಾಸಿದ ಎಂಟನೇ ತರಗತಿಯ ಹುಡುಗಿ ಕಂಡಳು. ‘ಏನು ಆಗಬೇಕಂತಿದ್ದೀಯಮ್ಮಾ’ ಎಂದು ಕೇಳಿದಾಗ, ‘ಕಲೆಕ್ಟರ್ ಆಗಬೇಕಂತಿದ್ದೀನಿ’ ಎಂದಳು. 

ಮೀಸಲಾತಿ ನಿರೀಕ್ಷೆಯಲ್ಲಿ... ‘ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದಲ್ಲಿ ನೀಡಲಾಗುವ ಶೇ5ರಷ್ಟು ಮೀಸಲಾತಿ ಸೌಲಭ್ಯವನ್ನು ನೆರೆ ರಾಜ್ಯಗಳ ಕನ್ನಡ ಶಾಲೆಗಳಲ್ಲಿ ಓದಿದವರಿಗೂ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್‌.ಹನುಮಂತಯ್ಯ ಅವರ ಭರವಸೆ ನುಡಿಗಳು ನಿಜವಾಗಲಿ’ ಎಂಬ ಆಶಯದಿಂದ ಹೊರನಾಡಿನ ಸಾವಿರಾರು ಮಂದಿ ಕಾಯುತ್ತಿದ್ದಾರೆ.

ADVERTISEMENT

ಡಿ.ಹಿರೇಹಾಳು ಗ್ರಾಮದಲ್ಲಿ, ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭದಲ್ಲಿ  ಮಾತನಾಡಿದ್ದ ಹನುಮಂತಯ್ಯ ಹೊಸ ಕನಸು ಮತ್ತು ಭರವಸೆ ಬಿತ್ತಿ ಹೋಗಿದ್ದಾರೆ. ‘ಮೀಸಲಾತಿ ಸೌಲಭ್ಯ ನೀಡಲು ಮುಖ್ಯಮಂತ್ರಿಗಳು ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಆ ಕುರಿತ ಆದೇಶ  ಕೆಲವೇ ದಿನಗಳಲ್ಲಿ ಹೊರಬೀಳುವ ಸಾಧ್ಯತೆ ಇದೆ’ ಎಂದು ಹನುಮಂತಯ್ಯ ಹೇಳಿದ್ದರು. ‘ಅವರ ಮಾತು ಕನ್ನಡಿಗರ ಆದಷ್ಟು ಬೇಗ ನಿಜವಾಗಲಿ’ ಎಂಬುದು ಬಹುತೇಕರ ಆಸೆ.

***
ರೈತನ ಕೈಯಲ್ಲಿ ಶಬ್ದಮಣಿ ದರ್ಪಣ
ಹೊಳಲಗುಂದಿ ಮಂಡಳದ ಎಳ್ಳಾರ್ತಿ ಗ್ರಾಮದ ಪ್ರೌಢಶಾಲೆಯಲ್ಲಿ ಗ್ರಾಮದ ರೈತ, ಹರಿಕಥೆ ಕಲಾವಿದ ಜಿ.ಪ್ರಹ್ಲಾದ್ ಕನ್ನಡದ ವ್ಯಾಕರಣ ಪಾಠ ಮಾಡುತ್ತಾರೆ. ಅದಕ್ಕೆ ಅವರು ಕೇಶಿರಾಜನ ‘ಶಬ್ದ ಮಣಿ ದರ್ಪಣಂ’ ಕೃತಿಯನ್ನು ಪರಾಮರ್ಶನ ಮಾಡುತ್ತಾರೆ. ಅವರು ಓದಿರುವುದು 5ನೇ ತರಗತಿ ಮಾತ್ರ!
*
10ನೇ ತರಗತಿ ಪಠ್ಯಪುಸ್ತಕದಲ್ಲಿನ ಕುಮಾರವ್ಯಾಸನ ‘ಕರ್ನಾಟಕ ಭಾರತ ಕಥಾ ಮಂಜರಿ’ ಕಾವ್ಯದ ಭಾಗವೊಂದನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವ ಸಲುವಾಗಿ ಅವರು ಪೂರ್ತಿ ಕಾವ್ಯವನ್ನೇ ಓದುತ್ತಿದ್ದಾರೆ. ಅವರಿಗೆ, ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಾಜಿ ದೇವೇಂದ್ರಪ್ಪ ನೆರವಾಗಿದ್ದಾರೆ.
*
ಕನ್ನಡ ಶಾಲೆಯಲ್ಲೇ ಓದಿದೆ. ಬಳ್ಳಾರಿಯಲ್ಲಿ ಡಿ.ಇಡಿ ಕೋರ್ಸ್‌ ಆಗಿದೆ. ಆದರೆ ಕೆಲಸಕ್ಕೆ ಅರ್ಜಿ ಹಾಕಿದರೆ ಕರ್ನಾಟಕದಲ್ಲೂ ಸಿಗುತ್ತಿಲ್ಲ. ಆಂಧ್ರದಲ್ಲೂ ಸಿಗುತ್ತಿಲ್ಲ
–ಚಂದ್ರಕಲಾ,
ಡಿ.ಹಿರೇಹಾಳ್ ಶಾಲೆಯ ಹಳೇ ವಿದ್ಯಾರ್ಥಿನಿ, (ಡಿ.ಇಡಿ)
*
ಒಂದೇ ಕಡೆ ಹತ್ತು ವರ್ಷ ಓದಿದರೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಸಲೀಸಾಗಿ ದೊರಕುತ್ತದೆ ಎಂಬ ಕಾರಣಕ್ಕೆ ನನ್ನ ಇಬ್ಬರು ಮಕ್ಕಳನ್ನು 1ನೇ ತರಗತಿಯಿಂದ ಬಳ್ಳಾರಿಯಲ್ಲೇ ಓದಿಸುತ್ತಿದ್ದೇನೆ. ಆಂಧ್ರದಲ್ಲಿ ವಾಸವಿದ್ದರೂ ನಾವು ಕರ್ನಾಟಕದವರೇ ಆಗಿದ್ದೇವೆ
ಗಿರಿಮಲ್ಲಿಕಾರ್ಜುನ,
ಪೋಷಕರು, 
ಡಿ.ಹಿರೇಹಾಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.