ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಭಟ್ಕಳದತ್ತ ಹೆದ್ದಾರಿಯಲ್ಲಿ ಪಯಣಿಸಿದರೆ ಸಮುದ್ರದಿಂದ ಬೀಸುವ ತಂಗಾಳಿ... ತೆಂಗಿನ ತೋಟ, ತರಕಾರಿ, ಮೀನು ಮಾರುಕಟ್ಟೆ, ಹೆಂಚಿನ ಮನೆಗಳ ನೋಟ ಸಾಮಾನ್ಯ.
ಶಿರಾಲಿ, ವೆಂಕಟಾಪುರ ದಾಟಿ ಭಟ್ಕಳ ಹತ್ತಿರವಾಗುತ್ತಿದ್ದಂತೆ ಈ ಚಿತ್ರಣ ಬದಲು. ಹೆಂಚಿನ ಮನೆಗಳ ಬದಲಾಗಿ ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡ, ಬೆಂಗಳೂರನ್ನು ನಾಚಿಸುವ ಭವ್ಯ ಬಂಗಲೆಗಳು ಹೆದ್ದಾರಿಯ ಆಸುಪಾಸು ಕಾಣಸಿಗುತ್ತವೆ. ಚೌಕುಳಿ ಲುಂಗಿ, ತಲೆಗೆ ಟೋಪಿ ಧರಿಸಿದ ಜನ ಕಣ್ಣಿಗೆ ಬೀಳುತ್ತಾರೆ. ಕೊಂಕಣಿ ಮಿಶ್ರಿತ ವಿಶಿಷ್ಟ ಭಾಷೆ ಕಿವಿಗೆ ಬೀಳುತ್ತದೆ. ಅದು ನವಾಯತಿ ಭಾಷೆ. ಭಟ್ಕಳ ಮತ್ತು ಸುತ್ತಲಿನ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವ ನವಾಯತ್ ಮುಸ್ಲಿಂ ಸಮುದಾಯದವರ ಭಾಷೆ ಅದು.
ಸಹ್ಯಾದ್ರಿಯ ಬೆಟ್ಟಸಾಲು, ಕಣಿವೆಯ ತೆಂಗಿನ ತೋಟಗಳು, ಸುಂದರ ಕಡಲ ತೀರ... ಭಟ್ಕಳದ ಎಣೆಯಿಲ್ಲದ ಪ್ರಕೃತಿ ಸೌಂದರ್ಯ ಮನಸ್ಸನ್ನು ಮೂಕವಾಗಿಸುತ್ತದೆ.ಆದರೆ ಈ ಊರು ಈಗ ಹೆಸರಾಗಿರುವುದು ಅದರ ಪ್ರಕೃತಿ ಸೌಂದರ್ಯದಿಂದ ಅಲ್ಲ. ಸುವಾಸನೆ ಬೀರುವ ‘ಭಟ್ಕಳ ಮಲ್ಲಿಗೆ’ ಅಥವಾ ರುಚಿಯಾದ ಮೀನಿನಿಂದ ಅಲ್ಲ. ಅಲ್ಲಿನ ವಿಶಿಷ್ಟ ಸಂಸ್ಕೃತಿಯಿಂದಲೂ ಅಲ್ಲ.
ಕನ್ನಡನಾಡಿನ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿರುವ ಕರಾವಳಿಯ ಈ ಪುಟ್ಟ ಪಟ್ಟಣಕ್ಕೆ ಈಗ ಭಯೋತ್ಪಾದನೆಯ ಅಪಖ್ಯಾತಿ. ಉಗ್ರರ ಅಡಗು ತಾಣ, ದೇಶವಿದ್ರೋಹಿ ಚಟುವಟಿಕೆಗಳ ಕೇಂದ್ರ ಎಂಬ ಕಳಂಕ. ಮಿನಿ ಕಾಶ್ಮೀರ, ಮಿನಿ ಪಾಕಿಸ್ತಾನ ಇತ್ಯಾದಿ ಅಡ್ಡ ಹೆಸರು.
ಭಟ್ಕಳದವರು ಅಂದರೆ ದೆಹಲಿ, ಮುಂಬೈ, ಬೆಂಗಳೂರಿನಂತಹ ನಗರಗಳಲ್ಲಿ ಹೋಟೆಲ್ ರೂಮ್ ಪಡೆಯುವುದು ಕಷ್ಟ. ಪಾಸ್‌ಪೋರ್ಟ್ ಪಡೆಯುವುದು ಇನ್ನೂ ಕಷ್ಟ. ವಿಮಾನ ನಿಲ್ದಾಣಗಳಲ್ಲಿ ಭಟ್ಕಳದವರ ಮೇಲೆ ಅನುಮಾನದ ಕಣ್ಣು.ಕಚ್ಚಾ ಬಾಂಬ್ ತಯಾರಿಸುವ ಸ್ಫೋಟಕ ಸಾಮಗ್ರಿ ಕಲೆ ಹಾಕಿದ್ದ ಆರೋಪದ ಮೇಲೆ ಜನವರಿ ಮೊದಲ ವಾರದಲ್ಲಿ ಭಟ್ಕಳದ ನಾಲ್ವರು ಯುವಕರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ ಮೇಲೆ ಎಲ್ಲರ ಕಣ್ಣು ಮತ್ತೆ ಅತ್ತ ನೆಟ್ಟಿದೆ.
ಶಂಕಿತ ಉಗ್ರರಾದ ಸೈಯದ್ ಇಸ್ಮಾಯಿಲ್ ಅಫಾಕ್ (34), ಸದ್ದಾಂ ಹುಸೇನ್ (35) ಮತ್ತು ಅಬ್ದುಸ್ ಸಬುರ್ (24) ಹಾಗೂ ರಿಯಾಜ್ ಅಹಮದ್ ಸಯೀದ್ (32) ನಿಷೇಧಿತ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಜತೆ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಭಟ್ಕಳದ ಮುಸ್ಲಿಮರು ಎಂಬ ಕಾರಣಕ್ಕೆ ತಮ್ಮ ಮಕ್ಕಳ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಲಾಗಿದೆ ಎಂದು ಈ ಯುವಕರ ಪಾಲಕರು ಕಣ್ಣೀರು ಹಾಕಿದ್ದಾರೆ. ಬಂಧಿತರಲ್ಲಿ ಮುಖ್ಯ ಆರೋಪಿಯಾಗಿರುವ ಸೈಯದ್ ಅಫಾಕ್ ಹೋಮಿಯೋಪತಿ ವೈದ್ಯ. ಆತನ ಚಿಕ್ಕಮ್ಮನ ಮಗ ಅಬ್ದುರ್ ಸಬುರ್ ಎಂಬಿಎ ವಿದ್ಯಾರ್ಥಿ.
ಪೊಲೀಸರು ಭಟ್ಕಳದ ಜತೆ ಭಯೋತ್ಪಾದನೆಯನ್ನು ತಳಕು ಹಾಕಿದ್ದು ಇದೇ ಮೊದಲಲ್ಲ. ಮೀನು, ಮಲ್ಲಿಗೆಯ ಊರಿಗೆ ಈ ಕಳಂಕ ಅಂಟಿ ದಶಕ ಕಳೆಯಿತು.
ಇಂಡಿಯನ್ ಮುಜಾಹಿದೀನ್‌ಎಂಬ ‘ದೇಸಿ ಭಯೋತ್ಪಾದನಾ’ ಸಂಘಟನೆಯ ಹುಟ್ಟಿಗೆ ಕಾರಣರಾದ ದೇಶದ ‘ಮೋಸ್ಟ್ ವಾಂಟೆಡ್’ ಉಗ್ರರ ಪಟ್ಟಿಯಲ್ಲಿರುವ ರಿಯಾಜ್ ಶಾಬಂದ್ರಿ, ಇಕ್ಬಾಲ್ ಶಾಬಂದ್ರಿ ಹಾಗೂ ಪ್ರಸ್ತುತ ತಿಹಾರ್ ಜೈಲಿನಲ್ಲಿ ಬಂಧಿತನಾಗಿರುವ ಮೊಹಮ್ಮದ್ ಜರಾರ್ ಸಿದ್ದಿಬಾಪಾ ಇಲ್ಲಿಯವರಾಗಿರುವುದು ಇದಕ್ಕೆ ಕಾರಣ.
ಅರಬ್ ದೇಶಗಳು, ಮುಂಬೈ, ಚೆನ್ನೈ ಮತ್ತಿತರ ನಗರಗಳಿಗೆ ವ್ಯಾಪಾರಕ್ಕಾಗಿ ತೆರಳುವ, ಅಲ್ಲಿ ನೆಲೆಸಿರುವ ನವಾಯತರನ್ನು ಸಾಮಾನ್ಯವಾಗಿ ‘ಭಟ್ಕಳಿ’ ಎಂದು ಕರೆಯಲಾಗುತ್ತದೆ. ನವಾಯತರು ತಮ್ಮನ್ನು ಪರಿಚಯಿಸಿಕೊಳ್ಳುವುದು ‘ಭಟ್ಕಳಿ’ ಎಂದೇ. ಆ ಕಾರಣಕ್ಕಾಗಿಯೋ ಏನೋ ಈ ಮೂವರನ್ನು ತನಿಖಾ ಸಂಸ್ಥೆಗಳು ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್ ಹಾಗೂ ಯಾಸೀನ್ ಭಟ್ಕಳ್ ಎಂಬ ಹೆಸರಿನಿಂದ ಗುರುತಿಸುತ್ತವೆ.
ಭಟ್ಕಳ ಯುವಕರು ಉಗ್ರರಾದದ್ದು ಹೇಗೆ?
ರಿಯಾಜ್ ಭಟ್ಕಳ್ ಅಲಿಯಾಸ್ ರಿಯಾಜ್ ಇಸ್ಮಾಯಿಲ್ ಶಾಬಂದ್ರಿಯ ತಂದೆ ಇಸ್ಮಾಯಿಲ್ ಶಾಬಂದ್ರಿ 70ರ ದಶಕದಲ್ಲೇ ಮುಂಬೈಗೆ ತೆರಳಿ ಪರ್ಸ್ ತಯಾರಿಸುವ ಸಣ್ಣ ಉದ್ಯಮದಲ್ಲಿ ತೊಡಗಿಕೊಂಡಿದ್ದರು. ಕುರ್ಲಾದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಮಾಡುವಾಗ ರಿಯಾಜ್ ‘ಸಿಮಿ’ (ಸ್ಟುಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ)ಯ ಸದಸ್ಯನಾಗಿದ್ದ. ಮುಂಬೈನ ಪುಟ್ಟ ಮನೆಯಲ್ಲಿ ಓದಲು ಜಾಗವಿಲ್ಲದ ಕಾರಣ ‘ಸಿಮಿ’ಯ ಗ್ರಂಥಾಲಯಕ್ಕೆ ಆತ ಓದಲು ಹೋಗುತ್ತಿದ್ದ ಎನ್ನಲಾಗಿದೆ.
ಆತ ‘ಸಿಮಿ’ಗೆ ಸೇರುವ ಹೊತ್ತಿಗೆ ಆ ಸಂಘಟನೆ ಹೋಳಾಗಿತ್ತು. ಉಗ್ರಗಾಮಿ ಸಿದ್ಧಾಂತಗಳನ್ನು ಬೋಧಿಸುತ್ತಿದ್ದ ಕ್ರಾಂತಿಕಾರಿ ಘಟಕದ ಜತೆ ರಿಯಾಜ್ ಗುರುತಿಸಿಕೊಂಡ. ಪ್ರಚೋದನಾಕಾರಿ ಭಾಷಣಗಳನ್ನು ಮಾಡತೊಡಗಿದ್ದ. ಇಸ್ಲಾಂ ಕುರಿತು ಉಗ್ರ ಭಾಷಣಗಳನ್ನು ಮಾಡುವ ಡಾ. ಝಕೀರ್ ನಾಯ್ಕ್ ಅಭಿಮಾನಿಯಾಗಿದ್ದ.
ನ್ಯೂಯಾರ್ಕ್‌ನಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ 2001ರ ಸೆಪ್ಟೆಂಬರ್ 11ರಂದು ಅಲ್ ಖೈದಾ ಉಗ್ರರ ದಾಳಿ ನಡೆದ ಮೇಲೆ ಹಲವು ಸಂಘಟನೆಗಳ ಮೇಲೆ ನಿಷೇಧ ಹೇರಲಾಯಿತು. ಅವುಗಳಲ್ಲಿ ‘ಸಿಮಿ’ ಸಹ ಒಂದು. ‘ಸಿಮಿ’ಯ ಮುಂಬೈ ಕಚೇರಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ನಂತರ ಬೆದರಿದ ರಿಯಾಜ್ ಮತ್ತು ಆತನ ಪಾಲಕರು ಕರ್ನಾಟಕಕ್ಕೆ ವಾಪಸಾದರು. ಮಂಗಳೂರು ಬಳಿಯ ಉಲ್ಲಾಳದಲ್ಲಿ ನೆಲೆಸಿದ್ದರು.
2002ರ ಗುಜರಾತ್ ಕೋಮುಗಲಭೆ ರಿಯಾಜ್ ಮತ್ತು ಆತನ ಸ್ನೇಹಿತರನ್ನು ಮತ್ತಷ್ಟು ಕೆರಳಿಸಿತ್ತು. ಅಂಥದ್ದೇ ಒಂದು ದಿನ ಆತ ಮನೆಯಿಂದ ನಾಪತ್ತೆಯಾದ.
ಭದ್ರತಾ ಸಂಸ್ಥೆಗಳು ಹೇಳುವ ಪ್ರಕಾರ, ಈ ಸಮಯದಲ್ಲಿ ರಿಯಾಜ್ ‘ಇಂಡಿಯನ್ ಮುಜಾಹಿದೀನ್’ ಸಹ ಸಂಸ್ಥಾಪಕರಾದ ಅಬ್ದುಲ್ ಸುಭಾನ್ ಖುರೇಷಿ, ಸಾಧಿಕ್ ಶೇಖ್ ಅವರೊಂದಿಗೆ ಗುರುತಿಸಿಕೊಂಡ. ಜಿಹಾದಿಯಾಗಿ ಬದಲಾಗಿದ್ದ ಗುಜರಾತ್ ಮೂಲದ ಭೂಗತ ಪಾತಕಿ ಅಮೀರ್ ರಜಾ ಖಾನ್‌ನ ಸಂಪರ್ಕವೂ ಏರ್ಪಟ್ಟಿತ್ತು. ಅಮೀರ್ ಮತ್ತು ರಿಯಾಜ್ ಭಟ್ಕಳ್ ಇತರ ಗೆಳೆಯರೊಂದಿಗೆ ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿದರು. ಇವರೆಲ್ಲ ಲಷ್ಕರ್–ಎ–ತೈಯಬಾ ಸಂಘಟನೆಯ ಶಿಬಿರದಲ್ಲಿ ಶಸ್ತ್ರಾಸ್ತ್ರ ನಿರ್ವಹಣೆ, ಸ್ಫೋಟಕಗಳನ್ನು ಜೋಡಿಸುವ ತರಬೇತಿ ಪಡೆದರು. ಅಮೀರ್ ರಜಾ ಖಾನ್ ಇದಕ್ಕೆಲ್ಲ ಹಣ ಒದಗಿಸತೊಡಗಿದ.
ಪಾಕಿಸ್ತಾನದಿಂದ ಬಂದ ಮೇಲೆ ರಿಯಾಜ್ ಭಟ್ಕಳದ ಜಾಲಿ, ತೆಂಗಿನಗುಂಡಿ ಸಮುದ್ರ ತೀರದಲ್ಲಿ ತನ್ನ ತಂಡದವರಿಗೆ ಶಸ್ತ್ರಾಸ್ತ್ರ ನಿರ್ವಹಣೆ ತರಬೇತಿ ನೀಡಿದ್ದ. ‘ಇಂಡಿಯನ್ ಮುಜಾಹಿದೀನ್’ ಸ್ಥಾಪನೆಗೆ ಪೂರ್ವಭಾವಿ ಮಾತುಕತೆ, ತರಬೇತಿ ಭಟ್ಕಳದಲ್ಲಿ ನಡೆದಿತ್ತು ಎಂದು ಭದ್ರತಾ ಸಂಸ್ಥೆಗಳು ಹೇಳಿವೆ.
ಭಟ್ಕಳದ ಸಮುದ್ರ ತೀರದಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆಯುತ್ತಿದ್ದುದನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಧೃಡಪಡಿಸಿದ್ದಾರೆ.
‘ಸಿಮಿ’ಯನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಮೇಲೆ, ಆ ಸಂಘಟನೆಯ ದೊಡ್ಡ ನಾಯಕರನ್ನೆಲ್ಲ ಬಂಧಿಸಲಾಯಿತು. ‘ಸಿಮಿ’ಯಲ್ಲಿದ್ದ ಯುವಕರು, ಎರಡನೇ ಹಂತದ ನಾಯಕರು ‘ಇಂಡಿಯನ್ ಮುಜಾಹಿದೀನ್’ ಸ್ಥಾಪನೆಗೆ ಕಾರಣರಾದರು ಎನ್ನಲಾಗುತ್ತಿದೆ.
‘ಇಂಡಿಯನ್ ಮುಜಾಹಿದೀನ್’ ಸಂಘಟನೆ 2005ರಿಂದ 2012ರವರೆಗೆ ಜೈಪುರ, ವಾರಾಣಸಿ, ಅಹಮದಾಬಾದ್, ಹೈದರಾಬಾದ್ ಸೇರಿದಂತೆ ದೇಶದ 13ಕ್ಕೂ ಹೆಚ್ಚು ಕಡೆ ಸ್ಫೋಟಗಳನ್ನು ಮಾಡಿದ್ದು, 344 ಜನ ಬಲಿಯಾಗಿದ್ದಾರೆ.
ಈ ಎಲ್ಲ ಸ್ಫೋಟದ ಘಟನೆಗಳಲ್ಲೂ ಸಾಮ್ಯತೆ ಇದ್ದು, ನಟ್, ಬೋಲ್ಟ್, ಆರ್‌ಡಿಎಕ್ಸ್ ಇತ್ಯಾದಿ ಕಚ್ಚಾ ಸಾಮಗ್ರಿಗಳನ್ನು ಟಿಫಿನ್ ಬಾಕ್ಸ್, ಕುಕ್ಕರ್, ಗ್ಯಾಸ್ ಸಿಲಿಂಡರ್‌ಗಳಲ್ಲಿ ಅದುಮಿಟ್ಟು ಸೈಕಲ್‌ಗೆ ಕಟ್ಟಿ ಸಿಡಿಸಲಾಗಿತ್ತು.
ಪುಣೆಯಲ್ಲಿ 2011ರಲ್ಲಿ ನಡೆದಿದ್ದ ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ, ಈ ಸ್ಫೋಟದ ಘಟನೆಗಳಲ್ಲಿ ಇರುವ ಸಾಮ್ಯತೆಯನ್ನು ಪತ್ತೆ ಹಚ್ಚಿ ‘ಇಂಡಿಯನ್ ಮುಜಾಹಿದೀನ್’ ಸಂಘಟನೆಯ ಕಾರ್ಯವಿಧಾನ ಇದು ಎಂದು ಸ್ಪಷ್ಟಪಡಿಸಿತು. ‘ಐಎಂ’ ಸಂಸ್ಥಾಪಕರಲ್ಲಿ ಒಬ್ಬನಾದ ರಿಯಾಜ್ ಭಟ್ಕಳ್ ಪಾಕಿಸ್ತಾನದಲ್ಲಿದ್ದಾನೆ ಎಂದೂ ಗುಪ್ತಚರ ದಳಗಳು ಹೇಳಿವೆ.
ರಿಯಾಜ್‌ನನ್ನು ಹುಡುಕಿಕೊಂಡು ಬಂದ ಪೊಲೀಸರು ಒಮ್ಮೆ ಸಹೋದರ ಇಕ್ಬಾಲ್‌ನನ್ನು ಬಂಧಿಸಿ ಒಯ್ದಿದ್ದರು. ಎಲ್ಲಿಯೇ ಸ್ಫೋಟ ನಡೆದರೂ ರಿಯಾಜ್‌ನನ್ನು ಹುಡುಕಿಕೊಂಡು ಭಟ್ಕಳಕ್ಕೆ ಪೊಲೀಸರು ಎಡತಾಕುವುದು, ಆತನ ಕುಟುಂಬದವರನ್ನು ಪ್ರಶ್ನಿಸುವುದು ಸಾಮಾನ್ಯವಾಯಿತು. ಆತನ ಸಹೋದರ ಇಕ್ಬಾಲ್ ಸಹ ಈಗ ನಾಪತ್ತೆಯಾಗಿದ್ದಾನೆ. ಪೊಲೀಸರು ರಿಯಾಜ್ ಜತೆ ಇಕ್ಬಾಲ್‌ಗೂ ಉಗ್ರನ ಪಟ್ಟ ಕಟ್ಟಿದ್ದಾರೆ.
ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಜಾಡು ಹಿಡಿದು ದೇಶಾದ್ಯಂತ ದೇಸಿ ಉಗ್ರರಿಗೆ ಬಲೆ ಬೀಸಿದ್ದ ಪೊಲೀಸರಿಗೆ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತೆ ಬಿಹಾರ –ನೇಪಾಳ ಗಡಿಯಲ್ಲಿ 2013ರ ಆಗಸ್ಟ್‌ನಲ್ಲಿ ಯಾಸಿನ್ ಭಟ್ಕಳ್ ಸೆರೆಸಿಕ್ಕಿದ.
ಪಾಕಿಸ್ತಾನದ ಮತಾಂಧ ಉಗ್ರ ಸಂಘಟನೆಗಳಾದ ಲಷ್ಕರ್–ಎ–ತೈಯಬಾ, ತಾಲಿಬಾನ್ ಸಂಘಟನೆಗಳ ಸಿದ್ಧಾಂತಕ್ಕೆ ಮಾರುಹೋಗಿ ರಿಯಾಜ್ ಶಾಬಂದ್ರಿ ಮತ್ತು ಗೆಳೆಯರು ಸ್ಥಾಪಿಸಿದ್ದ ಇಂಡಿಯನ್ ಮುಜಾಹಿದೀನ್‌ಸಂಘಟನೆಯಲ್ಲಿ ಭಟ್ಕಳ ಮೂಲದ ಇತರ ಯುವಕರು ಪಾಲ್ಗೊಂಡಿರುವ ಅಂಶವೂ ಆಗ ಸ್ಪಷ್ಟಗೊಂಡಿತು.
ಯಾಸಿನ್ ‘ಐಎಂ’ನ ಪ್ರಮುಖ ಕಮಾಂಡರ್. ಎಲ್ಲೇ ಸ್ಫೋಟ ನಡೆಯಲಿ ಸ್ಫೋಟಕಗಳನ್ನು ಪೂರೈಸುವ ಕೆಲಸ ಈತನೇ ಮಾಡುತ್ತಿದ್ದ ಎಂದು ಪೊಲೀಸರು ಹೇಳುತ್ತಾರೆ. ಪುಣೆಯ ಜರ್ಮನ್ ಬೇಕರಿ, ಹೈದರಾಬಾದ್‌ನ ದಿಲ್‌ಸೂಖ್ ನಗರಗಳಲ್ಲಿ ಸ್ಫೋಟ ನಡೆಯುವ ಮುಂಚೆ ಈತ ಓಡಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು. ಸದ್ಯ ಈತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಸರ್ಪಗಾವಲಿನಲ್ಲಿ ಇಡಲಾಗಿದೆ.
ಯಾಸಿನ್ ಭಟ್ಕಳ್ ಅಲಿಯಾಸ್ ಮೊಹಮ್ಮದ್ ಸಿದ್ದಿಬಾಪಾ ಕಥೆ ರಿಯಾಜ್ ಕಥೆಗಿಂತ ಭಿನ್ನ. ಸಿದ್ದಿಬಾಪಾ ಮನೆತನ ಭಟ್ಕಳದಲ್ಲಿ ಗೌರವಾನ್ವಿತವಾದದ್ದು. ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲೇ ಎಸ್‌ಎಸ್‌ಎಲ್‌ಸಿ ಪೂರೈಸಿದ್ದ ಮೊಹಮ್ಮದ್ ಸಿದ್ದಿಬಾಪಾ ನಂತರ ಅಪ್ಪನ ವ್ಯವಹಾರದಲ್ಲಿ ಕೈಜೋಡಿಸಲು ದುಬೈಗೆ ತೆರಳಿದ್ದ. ಅಪ್ಪನ ಜತೆ ಜಗಳವಾಡಿ ಮಾತುಬಿಟ್ಟು ಕೆಲ ವರ್ಷಗಳ ಕಾಲ ಮನೆಮಂದಿಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದ. 2013ರಲ್ಲಿ ಪೊಲೀಸರು ಆತನನ್ನು ಉಗ್ರನೆಂದು ಬಂಧಿಸಿದಾಗ ಅವರಿಗೆ ಆಘಾತ.
ಪೊಲೀಸರ ವಿರುದ್ಧ ಆಕ್ರೋಶ
ಭಟ್ಕಳದ ಕೆಲ ಯುವಕರು ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಭದ್ರತಾ ಸಂಸ್ಥೆಗಳು ಹೇಳಿದ್ದರೂ ಅವರ ಕುಟುಂಬದವರು ಮಾತ್ರ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ.
ಭಟ್ಕಳದ ತೆಂಗಿನಗುಂಡಿ ರಸ್ತೆಯಲ್ಲಿರುವ ಹಳೆಯ ಮನೆಯಲ್ಲಿ ಆತಂಕದಿಂದ ದಿನ ದೂಡುತ್ತಿರುವ ರಿಯಾಜ್ ಭಟ್ಕಳ್ ಪಾಲಕರು, ‘ನಮ್ಮ ಮಕ್ಕಳು ಉಗ್ರರಲ್ಲ. ಅವರು ಪೊಲೀಸರಿಗೆ ಹೆದರಿ ನಾಪತ್ತೆಯಾಗಿದ್ದಾರೆ. ಇಲ್ಲವೇ ಪೊಲೀಸರೇ ಅವರನ್ನು ಕೊಂದು ಹಾಕಿರಬೇಕು’ ಎನ್ನುತ್ತಾರೆ.
ಯಾಸೀನ್ ಭಟ್ಕಳ್ ಅಲಿಯಾಸ್ ಮೊಹಮ್ಮದ್ ಸಿದ್ದಿಬಾಪಾನ ಅತ್ತೆ ಹಲೀಮಾ ಸಾದಿಯಾಗೆ ಪೊಲೀಸರು, ಮಾಧ್ಯಮದವರ ಮೇಲೆ ತೀವ್ರ ಆಕ್ರೋಶ. ‘ಮೊಹಮ್ಮದ್ ಮೃದು ಸ್ವಭಾವದವ. ಮದುವೆಯಾಗಿ ಎಂಟು ವರ್ಷಗಳ ಮೇಲೆ ಹುಟ್ಟಿದ ಅಪರೂಪದ ಮಗು ಆತ. ಆತ ಬಾಂಬ್ ಸಿಡಿಸಿ ಜನರನ್ನು ಕೊಂದಿದ್ದಾನೆ ಅಂದರೆ ನಂಬಲು ಸಾಧ್ಯವೇ? ಪ್ರತಿ ಸಲ ಎಲ್ಲಿಯೇ ಬಾಂಬ್ ಸ್ಫೋಟವಾಗಲಿ, ಮೊಹಮ್ಮದ್ ಮುಖವನ್ನು ನೇಣಿನ ಕುಣಿಕೆಯೊಳಗೆ ತೋರಿಸುತ್ತಾರೆ.
ಇಲ್ಲಿರುವ ನಮಗೆ ಏನಾಗಬೇಡ ಹೇಳಿ. ಪೊಲೀಸರು, ಮೊಹಮ್ಮದ್ ಮಾತ್ರವಲ್ಲ, ಅವನ ತಮ್ಮ ಅಬ್ದುಲ್ ಸಮದ್‌ಗೂ ಕಾಟ ಕೊಟ್ಟಿದ್ದಾರೆ. ಮೂರು ವರ್ಷಗಳ ಹಿಂದೆ ದುಬೈನಿಂದ ಹೊರಟಿದ್ದ ಆತನನ್ನು ಮನೆಗೆ ಕರೆತರಲು ಮಂಗಳೂರು ವಿಮಾನ ನಿಲ್ದಾಣಕ್ಕೆ ನಾನೇ ಹೋಗಿದ್ದೆ. ದುಬೈನಲ್ಲಿ ವಿಮಾನ ಹತ್ತಿದ್ದು ಗೊತ್ತು. ಇಲ್ಲಿ ನಿಲ್ದಾಣದಿಂದ ಹೊರಬರಲೇ ಇಲ್ಲ. ಪೊಲೀಸರು ಆತನಿಗೆ ಚಿತ್ರಹಿಂಸೆ ನೀಡಿದರು. ಆತ ಮುಗ್ಧ ಎಂದು ಖಾತ್ರಿಯಾದ ಮೇಲೆ ಬಿಟ್ಟರು. ದೈತ್ಯನಂತಿದ್ದ ನಮ್ಮ ಮಗ ಜೈಲಿನಿಂದ ಬರುವಾಗ ಹಂಚಿಕಡ್ಡಿಯಂತಾಗಿದ್ದ. ಈಗಲೂ ತಿಂಗಳಿಗೊಮ್ಮೆ ಮುಂಬೈ ಕೋರ್ಟ್‌ಗೆ ವಿಚಾರಣೆಗೆ ಹೋಗುತ್ತಾನೆ. ಪೊಲೀಸರ ವಿರುದ್ಧ ರೊಚ್ಚಿಗೆದ್ದು ಆತನೂ ಉಗ್ರನಾದರೆ ಏನು ಮಾಡಬೇಕು? ಮಹಾರಾಷ್ಟ್ರ ಪೊಲೀಸರು ನಮ್ಮ ಮೇಲೆ ಸೇಡು ತಿರಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಹಲೀಮಾ.
‘ಇದೆಲ್ಲ ಆದ ಮೇಲೆ ನಮ್ಮ ಮನೆಗೆ ನೆಂಟರು ಬರುತ್ತಿಲ್ಲ. ಯಾರೂ ಫೋನ್ ಮಾಡುವುದಿಲ್ಲ. ಮೊಹಮ್ಮದ್ (ಯಾಸೀನ್) ತಂಗಿ ಪದವಿ ಮುಗಿಸಿದ್ದಾಳೆ. ಆಕೆಯನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ. ಮನೆಗೆ ಗ್ರಹಣ ಹಿಡಿದಿದೆ’ ಎಂದು ವಿಷಾದಿಸುತ್ತಾರೆ ಅವರು.
ಧರ್ಮ ರಾಜಕಾರಣಕ್ಕೆ ಮುನ್ನುಡಿ
ಭಟ್ಕಳದ ಹೆಸರು ಭಯೋತ್ಪಾದನೆಯ ಜತೆ ತಳಕು ಹಾಕಿಕೊಂಡಿರುವುದು ಇಲ್ಲಿನ ಸಾಮಾನ್ಯರಿಗೆ ತಲೆನೋವು ತಂದಿದೆ ನಿಜ. ಆದರೆ, ಈ ಊರಿನ ಇತ್ತೀಚಿನ ನಾಲ್ಕು ದಶಕಗಳ ಇತಿಹಾಸ ಗಮನಿಸಿದರೆ ಇಂಥದ್ದೊಂದು ವೇದಿಕೆ ಅಲ್ಲಿ ನಿಧಾನವಾಗಿ ಸಿದ್ಧವಾಗಿತ್ತು ಎಂಬ ಅಂಶವೂ ಮನದಟ್ಟಾಗುತ್ತದೆ.
90ರ ದಶಕದಲ್ಲೇ ಭಟ್ಕಳಕ್ಕೆ ಕೋಮು ಸೂಕ್ಷ್ಮ ಪ್ರದೇಶ ಎಂಬ ವಿಶೇಷಣ ಅಂಟಿಕೊಂಡಿತ್ತು. ಅದಕ್ಕೂ ಮುನ್ನ ಇಲ್ಲಿ ಹೇರಳವಾಗಿ ಸಿಗುತ್ತಿದ್ದ ವಿದೇಶಿ ವಸ್ತುಗಳಿಂದಾಗಿ ಭಟ್ಕಳ, ಕರಾವಳಿ ಭಾಗದಲ್ಲಿ ಸಾಕಷ್ಟು ಪ್ರಸಿದ್ಧವಾಗಿತ್ತು. ‘ಮಿನಿ ದುಬೈ’ ಎಂಬ ಅಡ್ಡ ಹೆಸರೂ ಇತ್ತು.
70–80ರ ದಶಕಗಳಲ್ಲಿ ವಿದೇಶಿ ಸುಗಂಧ ದ್ರವ್ಯ, ವಿದೇಶಿ ಬಟ್ಟೆ, ಅಗ್ಗದ ಎಲೆಕ್ಟ್ರಾನಿಕ್ಸ್ ಸಾಮಗ್ರಿ, ಆಟಿಕೆಗಳನ್ನು ಖರೀದಿಸಲು ಉತ್ತರ ಕನ್ನಡ ಹಾಗೂ ಪಕ್ಕದ ಉಡುಪಿ ಜಿಲ್ಲೆಯ ಜನ ಇಲ್ಲಿಗೆ ಮುಕುರುತ್ತಿದ್ದರು. ಎಲ್ಲ ಬಗೆಯ ‘ಮೇಡ್ ಇನ್ ಜಪಾನ್’ ವಸ್ತುಗಳು ಭಟ್ಕಳದಲ್ಲಿ ಸಿಗುತ್ತಿದ್ದವು. ಕಳ್ಳಸಾಗಾಣಿಕೆಯ ಮಾರ್ಗವಾಗಿ ಚಿನ್ನದ ಗಟ್ಟಿಗಳು ಬರುತ್ತಿದ್ದವು.
ಭಟ್ಕಳದ ಹವಾಮಾನ, ಇಲ್ಲಿ ಸಿಗುತ್ತಿದ್ದ ವಿಲಾಸಿ ವಸ್ತುಗಳಿಂದಾಗಿ 80ರ ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ನೌಕರರೆಲ್ಲ ಭಟ್ಕಳಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ಹಾತೊರೆಯುತ್ತಿದ್ದರು.
ಭಟ್ಕಳದ ನವಾಯತ ಮುಸ್ಲಿಮರು ಮೂಲತಃ ವ್ಯಾಪಾರಿ ಸಮುದಾಯದವರು. ಅರಬ್ಬಿ ಸಮುದ್ರದ ಮತ್ತೊಂದು ದಡದಲ್ಲಿರುವ ಬಹರೇನ್, ಕುವೈತ್, ಕತಾರ್, ಸೌದಿ ಅರೇಬಿಯಾ ಇತ್ಯಾದಿ ಕೊಲ್ಲಿ ದೇಶಗಳ ಜತೆ ಅವರಿಗೆ ವ್ಯಾಪಾರ–ವಹಿವಾಟಿನ ನಂಟು ಶತಮಾನಗಳಿಂದ ಇದೆ.
ಕೊಲ್ಲಿ ದೇಶಗಳು ತೈಲ ವಹಿವಾಟಿನಿಂದ ಸಿರಿವಂತವಾಗುವ ಮೊದಲು 1920–30ರ ದಶಕದಲ್ಲೇ ನವಾಯತರು ಆ ದೇಶಗಳಿಗೆ ಹೋಗಿ ನೆಲೆಸಿದ್ದರು. ಆ ದೇಶಗಳಲ್ಲಿ ಕಟ್ಟಡ ನಿರ್ಮಾಣ, ಬಟ್ಟೆ ವ್ಯಾಪಾರ, ಚಿನ್ನದ ವಹಿವಾಟು, ಸುಗಂಧ ದ್ರವ್ಯಗಳ ಮಾರಾಟ, ಸಾಂಬಾರ ಪದಾರ್ಥಗಳ ಮಾರಾಟ ಸೇರಿದಂತೆ ಬಹುತೇಕ ಎಲ್ಲ ಬಗೆಯ ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು.
ಕೊಲ್ಲಿ ರಾಷ್ಟ್ರಗಳಲ್ಲಿ ದುಡಿದು ತಂದ ಹಣದಲ್ಲಿ ನವಾಯತ ಮುಸ್ಲಿಮರು ಭಟ್ಕಳದಲ್ಲಿ ದೊಡ್ಡ ದೊಡ್ಡ ಬಂಗ್ಲೆಗಳನ್ನು ಕಟ್ಟಿದರು. ಸುತ್ತಲಿನ ಕೃಷಿ ಭೂಮಿಗಳನ್ನು ಖರೀದಿಸತೊಡಗಿದರು. ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಿ ಇಲ್ಲಿಯೂ ಬಿಸಿನೆಸ್ ಆರಂಭಿಸಿದರು.
ಭಟ್ಕಳ ಪಟ್ಟಣದಲ್ಲಿ ಮುಸ್ಲಿಮರ ಬಾಹುಳ್ಯ ಹೆಚ್ಚಿದ್ದರೂ ಸುತ್ತಲಿನ ಹಳ್ಳಿಗಳಲ್ಲಿ, ಭಟ್ಕಳ ತಾಲ್ಲೂಕಿನಲ್ಲಿ ಹಿಂದೂಗಳೇ ಬಹುಸಂಖ್ಯಾತರು.
ಭಟ್ಕಳದ ಆರ್ಥಿಕ ಚಟುವಟಿಕೆ, ಮಾರುಕಟ್ಟೆ ನಿಯಂತ್ರಣ, ರಾಜಕೀಯ ಅಧಿಕಾರ ನವಾಯತರ ಕೈಯಲ್ಲಿ ಉಳಿದರೆ, ಗಾರೆ ಕೆಲಸ, ಬಡಗಿ ಕೆಲಸ, ತೋಟ, ಗದ್ದೆಗಳ ಕೆಲಸ ಸೇರಿದಂತೆ ನವಾಯತರ ಮನೆಗಳಲ್ಲಿ ಕೆಲಸ ಮಾಡುವವರು ಮಾತ್ರ ತಳ ಸಮುದಾಯಕ್ಕೆ ಸೇರಿದ ಹಿಂದೂಗಳು. ಇದು ಹಿಂದೂಗಳಲ್ಲಿ ಕಂಡೂಕಾಣದ ಅಸಮಾಧಾನಕ್ಕೆ ಕಾರಣವಾಗಿತ್ತು.
1977ರಲ್ಲಿ ತುರ್ತು ಪರಿಸ್ಥಿತಿಯ ನಂತರ ಜನಸಂಘ ಪ್ರಬಲವಾಗತೊಡಗಿದಾಗ ಭಟ್ಕಳದ ಹಿಂದೂಗಳಲ್ಲಿ ಇದ್ದ ಈ ಅಸಮಾಧಾನವನ್ನು ಅದು ಸಮರ್ಥವಾಗಿ ಬಳಸಿಕೊಂಡಿತು. ಬಿಜೆಪಿಯ ಮಾತೃಪಕ್ಷವಾದ ಜನಸಂಘ ಇತರ ಕಾಂಗ್ರೆಸ್ ವಿರೋಧಿ ಪಕ್ಷಗಳೊಂದಿಗೆ ಸೇರಿ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿತ್ತು. 1980ರ ಹೊತ್ತಿಗೆ ಜನಸಂಘವು ಜನತಾ ಪಕ್ಷದಿಂದ ಹೊರಬಂದು ಬಿಜೆಪಿಯಾಗಿ ಪುನರ್‌ರೂಪಗೊಂಡಿತ್ತು.
ಆದರೆ, ಅಷ್ಟು ಹೊತ್ತಿಗೆ ಭಟ್ಕಳದ ಹಿಂದೂಗಳಲ್ಲಿ ರಾಜಕೀಯ ಶಕ್ತಿಯಾಗಿ ಒಗ್ಗೂಡುವ ಕನಸನ್ನು ಅದು ಬಿತ್ತಿತ್ತು. 1983ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುಂಡೂರಾವ್ ಸಂಪುಟದಲ್ಲಿ ಸಚಿವರೂ ಆಗಿದ್ದ ನವಾಯತರ ಎಸ್. ಎಂ. ಯಾಹ್ಯಾ ಅವರನ್ನು ಜನತಾ ಪಕ್ಷದ ಆರ್. ಎನ್. ನಾಯ್ಕ್ ಸೋಲಿಸಿದರು. 1985ರ ಚುನಾವಣೆಯಲ್ಲೂ ಜನತಾ ಪಕ್ಷದಿಂದ ಆಯ್ಕೆಯಾದ ಆರ್. ಎನ್, ನಾಯ್ಕ್ 1989ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಿಂತು ಗೆಲುವು ಸಾಧಿಸಿದರು.
ಕದಡಿದ ಸಾಮರಸ್ಯ, ಒಡೆದ ಮನಸ್ಸು
1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಂಡಾಗ ಇಡೀ ದೇಶದಾದ್ಯಂತ ಕೋಮು ಗಲಭೆಗಳು ನಡೆದಿದ್ದವು. ಮಸೀದಿ ಧ್ವಂಸ ಪ್ರಕರಣ ಖಂಡಿಸಿ ಮುಸ್ಲಿಂ ಸಮುದಾಯದವರು ಮೆರವಣಿಗೆಗಳನ್ನು ನಡೆಸಿದ್ದರು. ಆದರೆ, ಭಟ್ಕಳ ಆಗಲೂ ಶಾಂತವಾಗಿತ್ತು.
ಮಾರುತಿ ಅಥವಾ ಹನುಮಂತ ಭಟ್ಕಳದ ಗ್ರಾಮ ದೇವತೆ. ಪ್ರತಿ ವರ್ಷ ರಾಮ ನವಮಿಯ ದಿನ ಇಲ್ಲಿನ ಚೆನ್ನಪಟ್ಟಣ ಮಾರುತಿ ದೇವಸ್ಥಾನದ ರಥೋತ್ಸವ ನಡೆಯುತ್ತದೆ. 1993ರ ಏಪ್ರಿಲ್ 1ರಂದೂ ರಥೋತ್ಸವ ನಡೆದಿತ್ತು. ತೇರು ರಥಬೀದಿಯಲ್ಲಿ ಒಂದು ಸುತ್ತುಹಾಕಿ ಬಂದಿತ್ತು ಅಷ್ಟೇ. ನವಾಯತ ಮುಸ್ಲಿಮರ ಮನೆಯ ಕಡೆಯಿಂದ ರಥಕ್ಕೆ ಕಲ್ಲು ಬಿತ್ತು ಎಂಬ ವದಂತಿ ಹರಡಿತು.
ಬಿದ್ದಿದ್ದು ಬಾಳೆಹಣ್ಣೋ, ಕಲ್ಲೋ ಸ್ಪಷ್ಟವಾಗಿರದಿದ್ದರೂ ವದಂತಿ ಮಾತ್ರ ಕಾಳ್ಗಿಚ್ಚಿನಂತೆ ಹಬ್ಬಿತು. ಆ ರಾತ್ರಿ ಹಬ್ಬಿದ ಕಿಚ್ಚು ನೂರಾರು ವರ್ಷಗಳ ಸಹಬಾಳ್ವೆ, ನೆಮ್ಮದಿ, ಸಾಮರಸ್ಯವನ್ನು ಕದಡಿ ಹಾಕಿತು. ರಾಮನವಮಿಯ ರಾತ್ರಿ ಆರಂಭವಾದ ಕೋಮುಗಲಭೆ ನಿಂತು ಶಾಂತವಾಗಲು ಏಳೆಂಟು ತಿಂಗಳು ಬೇಕಾಯ್ತು. ಕುದಿಮೌನ, ತ್ವೇಷದ ವಾತಾವರಣ ತಿಂಗಳುಗಟ್ಟಲೇ ಮುಂದುವರಿಯಿತು. ಬಿಟ್ಟು, ಬಿಟ್ಟು ಕರ್ಫ್ಯೂ ವಿಧಿಸಲಾಗುತ್ತಿತ್ತು. ಈ ಹಗೆಗೆ 12 ಹಿಂದೂಗಳು, 7 ಜನ ಮುಸ್ಲಿಮರು ಬಲಿಯಾದರು.
ರಾಮಮಂದಿರ ನಿರ್ಮಾಣ ನೆಪವಾಗಿಟ್ಟುಕೊಂಡು ಹಿಂದೂ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದ ಬಿಜೆಪಿ ಹಾಗೂ ಸಂಘಪರಿವಾರದ ನಾಯಕರು ಭಟ್ಕಳದತ್ತ ಕಣ್ಣುನೆಟ್ಟರು. ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್, ಆರ್‌ಎಸ್‌ಎಸ್ ಭಟ್ಕಳದಲ್ಲಿ ಶಾಖೆ ಆರಂಭಿಸಿದವು.
1994ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕ ಡಾ. ಯು. ಚಿತ್ತರಂಜನ್ ಶಾಸಕರಾಗಿ ಆಯ್ಕೆಯಾದರು. ಶಾಸಕರಾಗಿ ಎರಡು ವರ್ಷವಾಗಿತ್ತು ಅಷ್ಟೆ. 1996ರ ಏಪ್ರಿಲ್‌ನಲ್ಲಿ ರಾತ್ರಿ ಊಟ ಮುಗಿಸಿ ಟಿವಿ ನೋಡುತ್ತಿದ್ದ ಅವರನ್ನು ಮನೆಯಲ್ಲಿಯೇ ಹತ್ಯೆ ಮಾಡಲಾಯಿತು.
ಅವರ ಹತ್ಯೆಯಲ್ಲಿ ಏ.ಕೆ. 47 ಬಳಕೆಯಾಗಿತ್ತು. ಶಾರ್ಪ್ ಶೂಟರ್ ಕರೆಯಿಸಿ ಸುಪಾರಿ ನೀಡಲಾಗಿತ್ತು ಎಂಬ ವದಂತಿಗಳೂ ಕೇಳಿಬಂದವು. ಚಿತ್ತರಂಜನ್ ಕೊಲೆ ಪ್ರಕರಣದ ತನಿಖೆಯನ್ನು ಸಿಓಡಿಗೆ ಆನಂತರ ಸಿಬಿಐಗೆ ವಹಿಸಲಾಗಿತ್ತಾದರೂ ಕೊಲೆಯ ಹಿಂದೆ ಯಾರ ಕೈವಾಡವಿತ್ತು ಎಂಬುದನ್ನು ಪತ್ತೆ ಹಚ್ಚಲು ತನಿಖಾ ತಂಡಗಳಿಗೆ ಸಾಧ್ಯವಾಗಲೇ ಇಲ್ಲ.
ಅಲ್ಲಿಂದ ಮುಂದೆ ಭಟ್ಕಳದಲ್ಲಿ ಚಿಕ್ಕ, ಪುಟ್ಟ ಗಲಭೆಗಳು ನಡೆಯುತ್ತಲೇ ಇದ್ದವು. ಗಣೇಶೋತ್ಸವ, ರಾಮನವಮಿ, ಈದ್ ಸಂದರ್ಭಗಳಲ್ಲಿ ಇಲ್ಲಿಗೆ ಹೆಚ್ಚಿನ ಪೊಲೀಸ್ ತುಕಡಿಗಳನ್ನು ನೇಮಿಸುವುದು ಸಾಮಾನ್ಯವಾಯಿತು.
ಭಟ್ಕಳದ ನೆಮ್ಮದಿ 2004ರಲ್ಲಿ ಮತ್ತೊಮ್ಮೆ ಕದಡಿಹೋಯಿತು. 2004ರ ಮೇ 1ರ ರಾತ್ರಿ ಐಸ್‌ಕ್ರೀಂ ಪಾರ್ಲರ್ ಮುಚ್ಚಿ ಮನೆಗೆ ಬರುತ್ತಿದ್ದ ಸ್ಥಳೀಯ ಬಿಜೆಪಿ ನಾಯಕ ತಿಮ್ಮಪ್ಪ ನಾಯ್ಕ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಂದರು. ದಶಕ ಉರುಳಿದರೂ ಈ ಕೊಲೆ ಪ್ರಕರಣದ ತನಿಖೆಯೂ ಪೂರ್ಣಗೊಂಡಿಲ್ಲ.
1993ರ ಕೋಮುಗಲಭೆಯ ತನಿಖೆ ನಡೆಸಲು ನ್ಯಾಯಮೂರ್ತಿ ಕೆ. ಜಗನ್ನಾಥ್ ಶೆಟ್ಟಿ ಅವರ ಏಕಸದಸ್ಯ ಆಯೋಗ ರಚಿಸಲಾಗಿತ್ತು.
ಆಯೋಗದ ವರದಿಯಲ್ಲಿ ಹಿಂದೂ–ಮುಸ್ಲಿಂ ಸಾಮರಸ್ಯವನ್ನು ಮತ್ತಷ್ಟು ಕದಡುವ ಅಂಶಗಳಿವೆ ಎಂಬ ಕಾರಣಕ್ಕೆ ಜೆ. ಎಚ್. ಪಟೇಲ್ ಸರ್ಕಾರ, ಎಸ್.ಎಂ. ಕೃಷ್ಣ ಸರ್ಕಾರ ಅದನ್ನು ಒಪ್ಪಿಕೊಳ್ಳಲಿಲ್ಲ. ಯಡಿಯೂರಪ್ಪ ಸಿ.ಎಂ ಆಗಿದ್ದಾಗ ವರದಿ ಒಪ್ಪಿಕೊಳ್ಳುವಂತೆ ಸ್ಥಳೀಯ ಬಿಜೆಪಿ ನಾಯಕರು ಒತ್ತಡ ಹಾಕಿದ್ದು ಫಲ ನೀಡಲಿಲ್ಲ.
‘ಜಗನ್ನಾಥ್ ಶೆಟ್ಟಿ ಆಯೋಗದ ವರದಿಯಲ್ಲಿ ಭಟ್ಕಳದಲ್ಲಿ ಉಗ್ರರ ಸ್ಲೀಪರ್ ಸೆಲ್ ಇರುವುದನ್ನು ಉಲ್ಲೇಖಿಸಲಾಗಿದೆ. ಅದು ಸತ್ಯ ಎಂಬುದು ಈಗ ಸಾಬೀತಾಗಿದೆ’ ಎಂದು ಶ್ರೀರಾಮ ಸೇನೆ ನಾಯಕ ಸುರೇಶ್ ನಾಯ್ಕ್ ಆರೋಪಿಸುತ್ತಾರೆ.
ಬಾಹ್ಯ ಶಕ್ತಿಗಳ ಕೈವಾಡ?
‘93ರ ಗಲಭೆಯಲ್ಲಿ ನಮ್ಮವರು ಭಾಗಿಯಾಗಿರಲಿಲ್ಲ. ಹೊರಗಿನಿಂದ ಬಂದ ಶಕ್ತಿಗಳು ಇಲ್ಲಿ ಗೊಂದಲ ಸೃಷ್ಟಿಸಿದ್ದವು. ಈಗ ಯುವಕರು ಯಾವುದೋ ಸಿದ್ಧಾಂತಕ್ಕೆ ಮರುಳಾಗಿ ಇಂಥ ಕೆಲಸ ಮಾಡಿರಬಹುದು. ನಾವೆಲ್ಲ ಶಾಂತಿಪ್ರಿಯ ಜನ. ಈದ್ ನಂತರದ ಇಫ್ತಾರ್ ಕೂಟಗಳಲ್ಲಿ ಹಿಂದೂ ಜನರೇ ಕಾಣುತ್ತಾರೆ. ಬಡ ಹಿಂದೂಗಳ ಮದುವೆಗೆ ಸಹಾಯ ಮಾಡುವುದು ನವಾಯತರ ರಕ್ತದಲ್ಲೇ ಹರಿದುಬಂದಿದೆ’ ಎನ್ನುತ್ತಾರೆ ಭಟ್ಕಳದ ಮಸೀದಿಗಳ ಆಡಳಿತ ನೋಡಿಕೊಳ್ಳುವ ಜಮಾತ್ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮೋತೆಶಾಂ.
93ರ ಗಲಭೆಯಲ್ಲಿ ಅಕ್ಕಪಕ್ಕದ ಜಿಲ್ಲೆಗಳ, ಪಕ್ಕದ ತಾಲ್ಲೂಕುಗಳ ಕೋಮುವಾದಿಗಳು ಭಾಗಿಯಾಗಿದ್ದು ಸತ್ಯ ಎಂಬುದನ್ನು ಭಟ್ಕಳದಲ್ಲೇ ಕೆಲಸ ಮಾಡಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.
ಮೂಲಭೂತವಾದದ ಗಾಳಿ
ಭಟ್ಕಳದ ಧರ್ಮ ರಾಜಕಾರಣಕ್ಕೆ ಮತ್ತೊಂದು ಮುಖವೂ ಇದೆ. ಭಟ್ಕಳದಲ್ಲಿ ನವಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ದಖ್ಖನಿ ಎಂದು ಕರೆಯುವ ಇತರ ಮುಸ್ಲಿಮರು ಸಹ ಇಲ್ಲಿ ನೆಲೆಸಿದ್ದಾರೆ.
ಶತಮಾನಗಳಿಂದ ಭಟ್ಕಳದಲ್ಲಿ ಎರಡು ಜಮಾತ್‌ಗಳಿವೆ. ಎರಡೂ ಜಮಾತ್‌ಗಳ ಹಿಡಿತದಲ್ಲಿ ಹಲವು ಮಸೀದಿಗಳಿವೆ. ಕೆಲ ವಿಚಾರಗಳಲ್ಲಿ ಈ ಜಮಾತ್‌ಗಳ ನಡುವೆ ಭಿನ್ನಾಭಿಪ್ರಾಯ ಇದ್ದರೂ ಈದ್ಗಾ ಮೈದಾನದಲ್ಲಿ ಒಟ್ಟಿಗೆ ನಮಾಜ್ ಮಾಡಲಾಗುತ್ತದೆ.
ಉತ್ತರ ಭಾರತದಲ್ಲಿ ಹುಟ್ಟಿದ್ದ ‘ಜಮಾತ್–ಎ– ಇಸ್ಲಾಮಿ ಹಿಂದ್’ 70ರ ದಶಕದ ಹೊತ್ತಿಗೆ ಭಟ್ಕಳಕ್ಕೆ ಕಾಲಿಟ್ಟಿತ್ತು. ಸೈದ್ಧಾಂತಿಕವಾಗಿ ಉಗ್ರವಾಗಿರುವ ‘ಜಮಾತ್–ಎ– ಇಸ್ಲಾಂ’ ಅನ್ನು ಜಾತ್ಯತೀತ ಮುಸ್ಲಿಮರು ಹಾಗೂ ಸುಧಾರಣಾವಾದಿಗಳು ಮೊದಮೊದಲಿಗೆ ಖಂಡಿಸಿದ್ದರು.
ಭಟ್ಕಳದ ನವಾಯತರಲ್ಲಿ ಸಮಾಜದ ಆಗುಹೋಗುಗಳನ್ನು ನೋಡಿಕೊಳ್ಳಲು ತಂಝೀಮ್ ಎಂದು ಕರೆಯುವ ಉಸ್ತುವಾರಿ ಸಮಿತಿ ಇದೆ. ‘ಮಜ್ಲೀಸ್–ಎ–ಇಸ್ಲಾಹ್–ಒ–ತಂಝೀಮ್’ ಕರೆಯಲಾಗುವ ಈ ಸಮಿತಿ ಈಚೆಗಷ್ಟೇ ಶತಮಾನೋತ್ಸವ ಆಚರಿಸಿಕೊಂಡಿದೆ.
ತಂಝೀಮ್‌ನಲ್ಲಿ ಕ್ರೀಡಾ ಸಮಿತಿ, ಆರೋಗ್ಯ ಸಮಿತಿ, ಶಿಕ್ಷಣ ಸಮಿತಿ, ಸಾಂಸ್ಕೃತಿಕ ಸಮಿತಿ, ರಾಜಕೀಯ ಸಮಿತಿ ಇತ್ಯಾದಿ ಉಪಸಮಿತಿಗಳಿವೆ. ನವಾಯತರ ನಡುವೆ ಆಸ್ತಿ ವಿವಾದ ಅಥವಾ ಇನ್ಯಾವುದೇ ಸಿವಿಲ್ ವಿವಾದ ನಡೆದಲ್ಲಿ ಅದು ಕೋರ್ಟ್ ಮೆಟ್ಟಿಲು ಏರುವುದಿಲ್ಲ. ತಂಝೀಮ್‌ನ ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಲಾಗುತ್ತದೆ.
ಭಟ್ಕಳದ ಪಟ್ಟಣ ಪಂಚಾಯಿತಿಯ 21 ವಾರ್ಡ್‌ಗಳ ಪೈಕಿ 14 ವಾರ್ಡ್‌ಗಳಲ್ಲಿ ನವಾಯತರು ಬಹುಸಂಖ್ಯಾತರು. ಈ ವಾರ್ಡ್‌ಗಳಲ್ಲಿ ಚುನಾವಣೆಗೆ ನಿಲ್ಲುವವವರು ತಂಝೀಮ್ ಅನುಮತಿ ಪಡೆಯಲೇಬೇಕು.
ಭಟ್ಕಳದಲ್ಲಿ ಪ್ರಭಾವಶಾಲಿಯಾಗಿರುವ ಮತ್ತೊಂದು ಸಂಸ್ಥೆ ಅಂಜುಮನ್ ಶಿಕ್ಷಣ ಸಂಸ್ಥೆ. 1919ರಲ್ಲೇ ಆರಂಭವಾಗಿರುವ ‘ಅಂಜುಮನ್ ಹಮಿ–ಎ–ಮುಸ್ಲಿಮೀನ್’ ಎಂಜನಿಯರಿಂಗ್ ಕಾಲೇಜು, ಮ್ಯಾನೇಜ್‌ಮೆಂಟ್ ಕಾಲೇಜು ಸೇರಿದಂತೆ ಭಟ್ಕಳದಲ್ಲಿ ಹಲವು, ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ.
ಕ್ರಮೇಣ ಭಟ್ಕಳದಲ್ಲಿ ‘ಜಮಾತ್–ಎ– ಇಸ್ಲಾಂ’ ಪ್ರಭಾವ ಹೆಚ್ಚತೊಡಗಿತು. ಅಷ್ಟೇ ಅಲ್ಲ ತಂಝೀಮ್ ಹಾಗೂ ಅಂಜುಮನ್ ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲೂ ‘ಜಮಾತ್–ಎ– ಇಸ್ಲಾಂ’ನ ಮುಖಂಡರು ಮೇಲುಗೈ ಸಾಧಿಸತೊಡಗಿದರು.
ಭಟ್ಕಳ ಕೋಮು ಸೂಕ್ಷ್ಮ ಪ್ರದೇಶ ಎಂದು ಹೆಸರಾದ ಮೇಲೆ ‘ಅಹ್ಲೆ–ಹದೀಸ್’ ಎಂಬ ಮತ್ತೊಂದು ಪಂಥ ಸಹ ಇಲ್ಲಿ ನೆಲೆಯೂರತೊಡಗಿತು. ಸರಳವಾಗಿ ಹೇಳುವುದಾದರೆ ಇವರನ್ನು ಇಸ್ಲಾಂನ ಸನಾತನವಾದಿಗಳು ಎನ್ನಬಹುದು.
ಪ್ರಾರ್ಥನಾ ವಿಧಾನ, ಉಡುಗೆ–ತೊಡುಗೆ, ವೈವಾಹಿಕ ಸಂಬಂಧಗಳಲ್ಲಿ ‘ಅಹ್ಲೆ–ಹದೀಸ್’ರು ಕಟ್ಟುನಿಟ್ಟು ಅನುಸರಿಸುತ್ತಾರೆ.
ಮುಸ್ಲಿಮರೇ ಆದರೂ ತಮ್ಮ ವಾದವನ್ನು ಒಪ್ಪದಿದ್ದ ಪಕ್ಷದಲ್ಲಿ ಅವರ ಮೇಲೆ ಹಲ್ಲೆ ನಡೆಸಬಹುದು ಎಂಬ ಉಗ್ರ ಸಿದ್ಧಾಂತವನ್ನು ಈ ಪಂಥ ಪ್ರತಿಪಾದಿಸುತ್ತದೆ.
ಸೌದಿ ಅರೇಬಿಯಾ, ದುಬೈ, ಬಹರೇನ್‌ಗಳಲ್ಲಿ, ‘ಅಹ್ಲೆ–ಹದೀಸ್’ ಪಂಥ ಅಪ್ಪಿಕೊಂಡವರು ಹೆಚ್ಚಿದ್ದಾರೆ. ಸೌದಿ ಅರೇಬಿಯಾದ ಬಹುಸಂಖ್ಯಾತ ಮುಸ್ಲಿಮರು ಅನುಸರಿಸುವ ವಹಾಬಿ ಪಂಥ ಹಾಗೂ ‘ಅಹ್ಲೆ–ಹದೀಸ್’ ನಡುವೆ ಸಾಕಷ್ಟು ಸಾಮ್ಯತೆಯಿದೆ.
ಆದರೆ, ಭಟ್ಕಳಕ್ಕೆ ಈ ಪಂಥ ಕಾಲಿಟ್ಟಿದ್ದು ಬನಾರಸ್‌ನ (ವಾರಾಣಸಿ) ‘ಜಾಮಿಯಾ ಸಲಫಿಯಾ’ ಮೂಲಕ. ಇಲ್ಲಿಂದ ಲಖನೌ, ವಾರಾಣಸಿ ಮುಂತಾದ ಕಡೆ ಧಾರ್ಮಿಕ ಅಧ್ಯಯನ ಮಾಡಲು ತೆರಳಿದ್ದ ಕೆಲವರು ಈ ಸಿದ್ಧಾಂತದಿಂದ ಪ್ರಭಾವಿತರಾಗಿ ಅದನ್ನು ಇಲ್ಲಿ ಆರಂಭಿಸಿದರು. ಸೌದಿ, ದುಬೈ, ಬಹರೇನ್‌ಗಳಲ್ಲಿ ನೆಲೆಸಿದ್ದವರಿಂದ ಆರ್ಥಿಕ ನೆರವೂ ಹರಿದುಬಂತು.
‘ಜಮಾತ್–ಎ–ಇಸ್ಲಾಂ’ ಹಾಗೂ ‘ಅಹ್ಲೆ ಹದೀಸ್’ ಪಂಥದವರನ್ನು ಎಲ್ಲ ನವಾಯತರು ಬಹಿರಂಗವಾಗಿ ವಿರೋಧಿಸದಿದ್ದರೂ ಎಂ.ಎಂ. ಇದ್ರೀಸ್ ಎಂಬುವವರು ಈ ಎರಡೂ ಪಂಥಗಳ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡುತ್ತಿದ್ದಾರೆ.
‘ಇವರಿಂದಾಗಿ ಭಟ್ಕಳದಲ್ಲಿ ಮೂಲಭೂತವಾದ ತಲೆಎತ್ತಿದೆ. ನಮ್ಮ ಯುವಕರು ದೇಶ ವಿರೋಧಿ ಭಾವನೆ, ಹಿಂದೂ ವಿರೋಧಿ ಭಾವನೆ ತಲೆತುಂಬಿಕೊಳ್ಳುತ್ತಿದ್ದಾರೆ’ ಎಂದು ಇದ್ರೀಸ್ ದೂರುತ್ತಾರೆ.
‘ಭಯೋತ್ಪಾದನೆಗೆ ನೇರವಾಗಿ ಯಾರೂ ಕರೆ ನೀಡುತ್ತಿಲ್ಲ ನಿಜ. ಆದರೆ, ಈ ಎರಡೂ ಪಂಥದ ಸಿದ್ಧಾಂತಗಳು ಇಸ್ಲಾಂ ಹೊರತಾಗಿ ಬೇರೆ ಯಾವುದೇ ಧರ್ಮಕ್ಕೆ ಮಾನ್ಯತೆ ನೀಡುವುದಿಲ್ಲ. ಕುರಾನ್, ಹದಿತ್‌ಗಳನ್ನು ತಿರುಚಿ ಬೋಧಿಸಲಾಗುತ್ತದೆ.’
‘ಯಾವುದೇ ಕೆಲಸ ಮಾಡದೇ ಇದ್ದರೂ ಈ ಸಂಘಟನೆಯ ಸದಸ್ಯರ ಜೇಬು ತುಂಬಿರುತ್ತದೆ. ಕೊಲ್ಲಿ ರಾಷ್ಟ್ರಗಳಲ್ಲಿ ಇರುವವರು ಇವರಿಗೆ ಹಣದ ಹೊಳೆ ಹರಿಸುತ್ತಾರೆ’ ಎಂದೂ ಇದ್ರೀಸ್ ದೂರುತ್ತಾರೆ.
‘ಮೂರು ವರ್ಷಗಳ ಹಿಂದೆ ಸ್ಥಳೀಯರ ವಿರೋಧದ ನಡುವೆಯೂ ‘ಜಮಾತ್–ಎ–ಇಸ್ಲಾಂ’ ವಕ್ಫ್ ಮಂಡಳಿ ಮೇಲೆ ಒತ್ತಡ ತಂದು ಪ್ರತ್ಯೇಕ ಮಸೀದಿ ನಿರ್ಮಿಸಿಕೊಂಡಿದೆ. ‘ಅಹ್ಲೆ–ಹದೀಸ್’ ಪಂಥದವರು ಈದ್ ದಿನ ಪ್ರತ್ಯೇಕವಾಗಿ ನಮಾಜು ಮಾಡಿದ್ದಾರೆ. ಭಟ್ಕಳದಿಂದ ಈ ಪಂಥದವರನ್ನು ಹೊರಹಾಕಬೇಕು’ ಎಂದೂ ಅವರು ಒತ್ತಾಯಿಸುತ್ತಾರೆ.
ಭಟ್ಕಳಕ್ಕೆ ಹೊಂದಿಕೊಂಡಂತೆ ಇರುವ ಶಿರಾಲಿಯಲ್ಲಿ ವೈದ್ಯರಾಗಿರುವ ಡಾ. ರಮೇಶ್ ಸರಾಫ್, ‘ಇಲ್ಲಿ ಹಿಂದೂ– ಮುಸ್ಲಿಮರ ಮನಸ್ಸು ಕೂಡಬೇಕಾದರೆ ಪ್ರಚೋದನಾಕಾರಿ ಭಾಷಣ ಮಾಡುವವರಿಗೆ ಭಟ್ಕಳಕ್ಕೆ ಕಾಲಿಡಲು ಅವಕಾಶ ನೀಡಬಾರದು. ನವಾಯತರು ಹಾಗೂ ಹಿಂದೂಗಳ ಮನಸ್ಸು ಒಡೆಯಲು 1993ರ ಗಲಭೆ ಕಾರಣ. ಆ ಗಲಭೆಯಲ್ಲಿ ಆರೋಪಿತರ ಪಟ್ಟಿಯಲ್ಲಿ ಇದ್ದವರು ಕೋರ್ಟಿಗೆ ಅಲೆದಲೆದು ಹೈರಾಣಾದರು. ಈಗ ಅವರೆಲ್ಲ ತಣ್ಣಗಾಗಿದ್ದಾರೆ.
ಆದರೆ, ಈಗ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದವರು ಹೊಸ ರಕ್ತದವರು. ಮುಸ್ಲಿಮರು ಕನ್ನಡ ಕಲಿಯದೇ ಇರುವುದು ಸಹ ಅವರು ಮತ್ತು ಹಿಂದೂಗಳ ನಡುವೆ ಗೋಡೆ ಕಟ್ಟಿದಂತಾಗಿದೆ. ನವಾಯತರಲ್ಲಿ ಶೇ 90ರಷ್ಟು ಜನರಿಗೆ ಕನ್ನಡ ಬಾರದು. ಕನ್ನಡ ಬರುವ ಶೇ 10ರಷ್ಟು ಜನರಲ್ಲಿ ಶೇ 5ರಷ್ಟು ಮಂದಿ ಮಾತ್ರ ಸ್ವಚ್ಛ ಕನ್ನಡ ಮಾತನಾಡಬಲ್ಲರು’ ಎಂದು ವಿಷಾದಿಸುತ್ತಾರೆ ಡಾ. ಸರಾಫ್
ಅಭಿವೃದ್ಧಿಗೆ ಮಾರಕ
‘ಭಟ್ಕಳಕ್ಕೆ ಅಂಟಿರುವ ಕಳಂಕದಿಂದಾಗಿ ಇಲ್ಲಿ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ಹೀಗೆ ಆದ್ರೆ ಇಲ್ಲಿ ಇಂಡಸ್ಟ್ರಿ ಬರಲ್ಲ. ಒಳ್ಳೆ ಆಸ್ಪತ್ರೆಗಳಿವೆ, ಡಾಕ್ಟ್ರಿಲ್ಲ. ಟೀಚರ್ಸ್ ಬರಲ್ಲ’ ಎಂಬ ಆತಂಕ ವ್ಯಕ್ತಪಡಿಸುತ್ತಾರೆ ವಕೀಲರೂ ಆಗಿರುವ ಜೈನ್ ಮಿಲನದ ಅಧ್ಯಕ್ಷ ಧನ್ಯಕುಮಾರ್ ಜೈನ್.
ಭಟ್ಕಳ ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೃಷ್ಣಾ ನಾಯ್ಕ್, ‘ಭಟ್ಕಳದಲ್ಲಿ ಉಗ್ರರು ಇದ್ದಾರೆ. ಇಲ್ಲಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆ ನಡೆಯುತ್ತಿದೆ. ಪಾಕಿಸ್ತಾನದ ಐ.ಎಸ್.ಐ. ಪ್ರಭಾವವೂ ಇಲ್ಲಿದೆ ಎಂದು ನಾವು ಹತ್ತು ವರ್ಷದಿಂದ ಹೇಳುತ್ತ ಬಂದಿದ್ದೆವು. ಈಗ ನಮ್ಮ ಮಾತು ನಿಜವಾಗಿದೆ’ ಎನ್ನುತ್ತಾರೆ.
‘ಉಗ್ರರ ಚಟುವಟಿಕೆಯ ಹೊರತಾಗಿಯೂ ಇಲ್ಲಿ ಹಿಂದೂಗಳು ಬದುಕಲು ಅಸಾಧ್ಯವಾದ ವಾತಾವರಣವಿದೆ. ಅಪ್ಪಿತಪ್ಪಿ ಅಪಘಾತ ನಡೆದಲ್ಲಿ, ಹಿಂದೂಗಳ ವಾಹನ ಮುಸ್ಲಿಮರ ವಾಹನಕ್ಕೆ ಗುದ್ದಿದಲ್ಲಿ ಸಾವಿರ ಜನ ಒಮ್ಮೆಲೇ ಮುತ್ತುತ್ತಾರೆ.
‘ಇತ್ತೀಚೆಗೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಮುಸ್ಲಿಮರನ್ನು ತೆರವುಗೊಳಿಸಲು ಅರಣ್ಯಾಧಿಕಾರಿ ತೆರಳಿದಾಗ 15 ಸಾವಿರಕ್ಕೂ ಹೆಚ್ಚು ಮುಸ್ಲಿಮರು ಜಮಾಯಿಸಿದರು. ಅಧಿಕಾರಿಗಳನ್ನು ಬೆದರಿಸಿ ಓಡಿಸಿದರು. ಇಲ್ಲಿ ಪ್ರಜಾಪ್ರಭುತ್ವ ಇದೆಯೇ’ ಎಂದೂ ನಾಯ್ಕ್ ಪ್ರಶ್ನಿಸುತ್ತಾರೆ
ದ್ವೇಷ ಕಾರುತ್ತಿರುವ ಎಟಿಎಸ್
ತಂಝೀಮ್ ಪದಾಧಿಕಾರಿಯಾಗಿರುವ ವೈದ್ಯ ಡಾ. ಎಂ. ಎಂ. ಹನೀಫ್ ಶಬಾಬ್ ಅಭಿಪ್ರಾಯವೇ ಬೇರೆ.
‘ಭಟ್ಕಳದ ಯುವಕರ ಮೇಲೆ ಮಹಾರಾಷ್ಟ್ರದ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ದ್ವೇಷ ಸಾಧಿಸುತ್ತಿದೆ. ಇಲ್ಲಿನವರಿಗೆ ಉಗ್ರರು ಎಂಬ ಪಟ್ಟ ಕಟ್ಟಿದ್ದೂ ಅದೇ. ದೇಶದ ಹಲವೆಡೆ ಮುಸ್ಲಿಂ ಯುವಕರನ್ನು ಭಯೋತ್ಪಾದನೆ ಆರೋಪ ಹೊರಿಸಿ ಎಳೆದು ಒಯ್ಯಲಾಗುತ್ತಿದೆ. ಆದರೆ, ಯಾವ ಕೋರ್ಟ್‌ನಲ್ಲೂ ಪೊಲೀಸರಿಗೆ ಆರೋಪ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ವಿಚಾರಣೆಯ ಸಂದರ್ಭದಲ್ಲಿ ನೀಡುವ ಹಿಂಸೆಗೆ ಹೆದರಿ ನಮ್ಮ ಮಕ್ಕಳು ನಿಜವಾಗಿಯೂ ಉಗ್ರರಾದಲ್ಲಿ ಏನು ಮಾಡಬೇಕು?’
‘ನಮ್ಮ ಮನೆಗಳಲ್ಲಿ ಕೆಲಸ ಮಾಡುವವರೆಲ್ಲ ಹಿಂದೂ ಹುಡುಗಿಯರು, ಬೆಳಗಿನಿಂದ ರಾತ್ರಿಯ ತನಕ ಇಲ್ಲಿಯೇ ಇರುತ್ತಾರೆ. ಇಲ್ಲಿ ಉಗ್ರಗಾಮಿ ಚಟುವಟಿಕೆ ನಡೆಯುತ್ತಿದೆ ಎಂದಾದಲ್ಲಿ ಅವರಿಗೆ ಸ್ವಲ್ಪವಾದರೂ ಸುಳಿವು ದೊರೆಯಬೇಕಿತ್ತಲ್ಲ’ ಎಂದು ಪ್ರಶ್ನಿಸುತ್ತಾರೆ.
‘ಮುಸ್ಲಿಮರು ಅಂದರೆ ಭಯೋತ್ಪಾದಕರು ಎಂಬಂತೆ ನೋಡುತ್ತಿದ್ದಾರೆ. ಸಾಧ್ವಿ ಪ್ರಗ್ಯಾ, ಅಸೀಮಾನಂದ, ಕರ್ನಲ್ ಪುರೋಹಿತ್ ತರಹದ ಹಿಂದೂ ಉಗ್ರರು ಬಗ್ಗೆ ಯಾರೂ ಮಾತನಾಡುತ್ತಿಲ್ಲ ಏಕೆ?’ ಎಂಬ ವಾದವನ್ನೂ ಅವರು ಮಂಡಿಸುತ್ತಾರೆ.
ಈ ಊರಿಗೆ ಅಂಟಿಕೊಂಡಿರುವ ಕಳಂಕದ ಹೊರತಾಗಿಯೂ ಇಲ್ಲಿನ ಸಾಮರಸ್ಯದ ಕುರಿತು ಮಾತನಾಡುತ್ತಾರೆ ಹಿಂದೂ ಸಮಾಜದ ಮುಖಂಡ ಸುರೇಂದ್ರ ಶಾನಭಾಗ್. ಅವರು ಚೆನ್ನಪಟ್ಟಣ ಮಾರುತಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರೂ ಹೌದು.
‘ಭಟ್ಕಳಕ್ಕೆ ಭಯೋತ್ಪಾದಕರ ನೆಲೆವೀಡು ಎಂಬ ಕಳಂಕ ಮೆತ್ತಿರುವುದು ದುರಂತ. ಆಗಾಗ್ಗೆ ನಡೆಯುವ ಕೋಮುಗಲಭೆಯ ಹೊರತಾಗಿಯೂ ನಾವು ಸೌಹಾರ್ದದಿಂದಲೇ ಇದ್ದೇವೆ. ಪ್ರತಿವರ್ಷ ಮಾರುತಿ ದೇವಸ್ಥಾನ ರಥೋತ್ಸವಕ್ಕೆ ಮುನ್ನ ನವಾಯತರ ಶಾಬಂದ್ರಿ ಮನೆತನದವರಿಗೆ ಓಲಗದೊಂದಿಗೆ ಹೋಗಿ ವೀಳ್ಯದೆಲೆ ನೀಡಿ ಮೊದಲ ಆಹ್ವಾನ ಪತ್ರ ನೀಡಲಾಗುತ್ತದೆ. 150 ವರ್ಷಗಳ ಹಿಂದೆ ರಥ ದುರ್ಬಲವಾಗಿದೆ ಎಂಬ ನೆಪವೊಡ್ಡಿ ಬ್ರಿಟಿಷರು ಅನುಮತಿ ನೀಡಿರಲಿಲ್ಲ. ಆಗ ಶಾಬಂದ್ರಿ ಕುಟುಂಬದ ಹಿರಿಯರು ಊರ ಹಬ್ಬ ನಿಲ್ಲಬಾರದು ಎಂಬ ಕಾರಣಕ್ಕೆ ರಥ ಎಳೆಯಲು ತಾವು ಖಾತ್ರಿ ನೀಡುತ್ತೇವೆ ಎಂದು ಬ್ರಿಟಿಷರಿಗೆ ಲಿಖಿತವಾಗಿ ಬರೆದುಕೊಟ್ಟರು. ಅವರು ನೀಡಿದ ಭರವಸೆಯ ನಂತರ ರಥೋತ್ಸವ ಸಾಂಗವಾಗಿ ನಡೆಯಿತು. ಕೇವಲ ಈ ಕುಟುಂಬದವರಷ್ಟೇ ಅಲ್ಲ, ಒಬ್ಬ ಜೈನ, ಕ್ರೈಸ್ತ ಕುಟುಂಬಕ್ಕೂ ವೀಳ್ಯ ನೀಡಲಾಗುತ್ತದೆ. ಇದು ಇಲ್ಲಿರುವ ಹೊಂದಾಣಿಕೆಗೆ ಸಾಕ್ಷಿ’ ಎನ್ನುತ್ತಾರೆ ಅವರು.
ಮುಸ್ಲಿಂ ಗೆಳೆಯರನ್ನು ಹೆಚ್ಚಾಗಿ ಹೊಂದಿರುವ ಸುರೇಂದ್ರ ಶಾನಭಾಗ್, ಹಿಂದೂಗಳ ಹಿತಕ್ಕಾಗಿಯೇ ಚಿಂತಿಸುವ ಅಬ್ದುಲ್ ರೆಹಮಾನ್ ಮೋತೆಶಾಂ, ಮುಸ್ಲಿಂ ಯುವಕರಲ್ಲಿ ಹೆಚ್ಚುತ್ತಿರುವ ಮೂಲಭೂತವಾದವನ್ನು ವಿರೋಧಿಸುವ ಇದ್ರೀಸ್ ತರಹದವರು ಇರುವವರಗೆ ಮಲ್ಲಿಗೆಯ ಊರಿನ ಸಾಮರಸ್ಯದ ಘಮ ಮಾಸಲಾರದು.
ಭಟ್ಟಾಕಳಂಕನ ಊರು
ಚೆನ್ನಪಟ್ಟಣ ಎಂಬ ಮೂಲ ಹೆಸರಿನ ಭಟ್ಕಳದಲ್ಲಿ ಜೈನರೇ ಬಹುಸಂಖ್ಯೆಯಲ್ಲಿ ಇದ್ದರು. ಬೀಳಗಿ ಅರಸರ ಆಸ್ಥಾನದಲ್ಲಿ ಇದ್ದ ಕನ್ನಡ ವ್ಯಾಕರಣ ಗ್ರಂಥ ರಚಿಸಿರುವ ಜೈನ ವಿದ್ವಾಂಸ ‘ಭಟ್ಟಾಕಳಂಕ’ ಇಲ್ಲಿ ನೆಲೆಸಿದ್ದ. ಈತನಿಂದಾಗಿ ಚೆನ್ನಪಟ್ಟಣಕ್ಕೆ ಭಟ್ಕಳ ಎಂಬ ಹೆಸರು ಬಂತು.
ವಿಜಯನಗರ ಅರಸರ ಕಾಲದಿಂದಲೂ ಭಟ್ಕಳ ಈ ಭಾಗದ ದೊಡ್ಡ ಬಂದರು ಪಟ್ಟಣವಾಗಿತ್ತು. ಅರಬಸ್ತಾನದ ಕುದುರೆಗಳು ಈ ಮೂಲಕವಾಗಿಯೇ ವಿಜಯನಗರಕ್ಕೆ ತಲುಪುತ್ತಿದ್ದವು. 16ನೇ ಶತಮಾನದಲ್ಲಿ ಗೋವಾಕ್ಕೆ ಕಾಲಿಟ್ಟ ಪೋರ್ಚುಗೀಸರು ಭಟ್ಕಳದ ಮೇಲೆ ಕಣ್ಣಿಟ್ಟಿದ್ದರು. ಶತಮಾನಗಳ ಕಾಲ ಕೆಳದಿ ಅರಸರ ಹಿಡಿತದಲ್ಲಿದ್ದ ಭಟ್ಕಳ, ಅವರಿಂದ ಹೈದರ್ ಅಲಿ ಹಾಗೂ ಟಿಪ್ಪು ಸುಲ್ತಾನ್ ವಶಕ್ಕೆ ಬಂತು. 1799ರಲ್ಲಿ ಟಿಪ್ಪು ಮರಣದ ನಂತರ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು.
ನವಾಯತರ ವಿಶಿಷ್ಟ ಸಂಸ್ಕೃತಿ
ನವಾಯತರ ಇತಿಹಾಸದ ಬಗ್ಗೆ ಬಗೆಬಗೆಯ ಅಭಿಪ್ರಾಯಗಳಿವೆ. 9–10ನೇ ಶತಮಾನದ ಹೊತ್ತಿಗೆ ಕೊಲ್ಲಿ ದೇಶಗಳಿಂದ ಕರ್ನಾಟಕದ ಕರಾವಳಿಗೆ ವ್ಯಾಪಾರಕ್ಕಾಗಿ ಬಂದ ಅರಬ್ ವ್ಯಾಪಾರಿಗಳು ಇಲ್ಲಿಯೇ ನೆಲೆಸಿದರು. ಸ್ಥಳೀಯ ಮಹಿಳೆಯರನ್ನು ಮದುವೆಯಾದರು ಎಂಬ ಐತಿಹ್ಯ ಇದೆ.
‘ನವಾಯತ’ ಅಂದರೆ ಸಂಸ್ಕೃತದಲ್ಲಿ ಹೊಸದಾಗಿ ಬಂದವರು ಎಂದರ್ಥ. ಭಟ್ಕಳ ಹೊರತಾಗಿ ನವಾಯತರು ಭಟ್ಕಳ ತಾಲ್ಲೂಕಿನ ಮುರುಡೇಶ್ವರ, ಶಿರಾಲಿ, ಉಡುಪಿ ಜಿಲ್ಲೆಯ ಬೈಂದೂರು, ಬಾರ್ಕೂರು, ಬಸ್ರೂರು, ಗಂಗೊಳ್ಳಿಗಳಲ್ಲಿಯೂ ನೆಲೆಸಿದ್ದಾರೆ.
ಹೆಚ್ಚಾಗಿ ಬಂದರು ಪ್ರದೇಶ ಹಾಗೂ ನದಿ ಅಳಿವೆಯ ಪಕ್ಕ ಅವರ ವಸತಿ ಪ್ರದೇಶವಿರುತ್ತದೆ. ಹೊನ್ನಾವರದ ಶರಾವತಿ ನದಿ ದಡದ ಎಡದಂಡೆಯ ಹೊಸಪಟ್ಟಣದಲ್ಲಿ ನವಾಯತರು ಮೊದಲಿಗೆ ನೆಲೆಸಿದ್ದರು. 16ನೇ ಶತಮಾನದಲ್ಲಿ ಪೋರ್ಚುಗೀಸ್ ಸೈನಿಕರ ದಾಳಿಯ ಕಾರಣಕ್ಕೋ ಅಥವಾ ಸ್ಥಳೀಯ ಹಿಂದೂಗಳ ವಿರೋಧದಿಂದಾಗಿಯೋ ನವಾಯತರು ಹೊನ್ನಾವರದ ಹೊಸಪಟ್ಟಣ ಬಿಟ್ಟು ಭಟ್ಕಳದಲ್ಲಿ ನೆಲೆಸಿದರು.
ಯುದ್ಧದಲ್ಲಿ ವಿಧವೆಯರಾದ ಜೈನ ಮಹಿಳೆಯರನ್ನು ವ್ಯಾಪಾರಕ್ಕಾಗಿ ಬಂದ ಅರಬರು ಮದುವೆಯಾದರೋ ಅಥವಾ ಇವರಿಂದ ಪ್ರಭಾವಿತರಾಗಿ ಜೈನರು ಅವರ ಧರ್ಮಕ್ಕೆ ಮತಾಂತರಗೊಂಡರೋ ಸ್ಪಷ್ಟವಾಗಿಲ್ಲ. ಹಿರಿಯ ತಲೆಮಾರಿನ ನವಾಯತರು ಈಗಲೂ ಸಂಜೆ ಆರು ಗಂಟೆಯ ನಂತರ ಆಹಾರ ಸೇವಿಸುವುದಿಲ್ಲ. ಅಲ್ಲದೇ ಇಂತಹ ಕಟ್ಟುಪಾಡನ್ನು ಮಹಿಳೆಯರೇ ಹೆಚ್ಚಾಗಿ ಅನುಸರಿಸುತ್ತಾರೆ.
ಕರಾವಳಿಯ ಭಾಗದಲ್ಲಿ ಶತಮಾನಗಳ ಹಿಂದೆ ಚಾಲ್ತಿಯಲ್ಲಿ ಇದ್ದ ಅಳಿಯ ಕಟ್ಟಿನ (ಮದುವೆಯಾದ ಮೇಲೆ ಅಳಿಯ ಮಾವನ ಮನೆಯಲ್ಲಿರುವುದು) ಪದ್ಧತಿಯ ಪ್ರಭಾವವೂ ನವಾಯತರಲ್ಲಿ ಕಾಣುತ್ತದೆ. ಸಾಮಾನ್ಯವಾಗಿ ನವಾಯತರ ಹೆಣ್ಣುಮಕ್ಕಳು ಮದುವೆಯಾಗಿ ಒಂದೆರಡು ಮಕ್ಕಳಾಗುವವರೆಗೂ ತವರು ಮನೆಯಲ್ಲಿಯೇ ಇರುತ್ತಾರೆ.
ವಿಶಿಷ್ಟ ಭಾಷೆ: ನವಾಯತರ ಭಾಷೆಯೂ ಅಷ್ಟೇ ವಿಶಿಷ್ಟ, ವಿಭಿನ್ನ. ಫಕ್ಕನೆ ಕೇಳಿದರೆ ಕೊಂಕಣಿಯಂತೆ ಕೇಳಿಸುವ ಈ ಭಾಷೆಯಲ್ಲಿ ಶೇ 90ರಷ್ಟು ಕೊಂಕಣಿ ಶಬ್ದಗಳಿವೆ. ಕ್ರಿಯಾಪದಗಳು ಕೊಂಕಣಿಯದ್ದೇ. ಆದರೆ, ಮಧ್ಯೆ ಅರೇಬಿಕ್, ಪರ್ಷಿಯನ್ ಶಬ್ದಗಳು ಸೇರಿಕೊಂಡಿವೆ.
ನವಾಯತರ ಮಧ್ಯಾಹ್ನದ ಊಟ ಮೀನಿಲ್ಲದೇ ಸಾಗಲಾರದು. ನವಾಯತ ಹೆಂಗಸರು ಬೆಳಗಿನ ಉಪಾಹಾರಕ್ಕೆ 250 ಬಗೆಯ ವೈವಿಧ್ಯಮಯ ತಿಂಡಿಗಳನ್ನು ಸಿದ್ಧಪಡಿಸಬಲ್ಲರು. ಅದರಲ್ಲೂ ಜೈನರ ಪಾಕ ವಿಧಾನದ ಪ್ರಭಾವ ಎದ್ದುಕಾಣುತ್ತದೆ.
ಮೈದಾ, ಸಕ್ಕರೆ, ಬಾದಾಮಿ, ಪಿಸ್ತಾ ಸೇರಿಸಿ ತಯಾರಿಸುವ ಭಟ್ಕಳ ಹಲ್ವಾ, ಭಟ್ಕಳ ಲುಂಗಿ ಎಂದೇ ಹೆಸರಾಗಿರುವ ಚೌಕುಳಿ ಲುಂಗಿ ಇತ್ಯಾದಿಗಳಿಂದಲೂ ಭಟ್ಕಳ ಹೆಸರಾಗಿದೆ.
ಭಟ್ಕಳದ ಮಲ್ಲಿಗೆಯಿಲ್ಲದೇ ನವಾಯತರ ಮದುವೆ ಸಾಗದು. ನವಾಯತ ವಧುವಿಗೆ ತಲೆ ತುಂಬ ಭಟ್ಕಳದ ಮಲ್ಲಿಗೆಯ ಅಲಂಕಾರ ಇರಲೇಬೇಕು. ಇದನ್ನು ಬೆಳೆಯುವವರು, ಮಾರಾಟ ಮಾಡುವವರು ಮಾತ್ರ ಹಿಂದೂಗಳು.
ಶಾಪವಾದ ವೈವಾಹಿಕ ಸಂಬಂಧ
ಭಟ್ಕಳದ ನವಾಯತ ಯುವಕರು ಪಾಕಿಸ್ತಾನದ ಕೆಲ ಯುವತಿಯರನ್ನು ಮದುವೆಯಾಗಿರುವುದು ಸಹ ಭದ್ರತಾ ಸಂಸ್ಥೆಗಳು ಈ ಪಟ್ಟಣವನ್ನು ಅನುಮಾನದಿಂದ ನೋಡಲು ಕಾರಣವಾಗಿದೆ. ಸ್ವಾತಂತ್ರ್ಯಪೂರ್ವದಲ್ಲೇ ಭಟ್ಕಳದ ಕೆಲ ನವಾಯತ ಕುಟುಂಬಗಳು ಕರಾಚಿಯಲ್ಲಿ ವ್ಯಾಪಾರ, ವಹಿವಾಟು ಮಾಡಿಕೊಂಡಿದ್ದವು. ದೇಶ ವಿಭಜನೆಯಾದಾಗ ಅವರು ವ್ಯವಹಾರ ಬಿಟ್ಟು ಮೂಲ ಊರಿಗೆ ಮರಳಲಿಲ್ಲ. ಆ ಹದಿನೈದಿಪ್ಪತ್ತು ಕುಟುಂಬಗಳ ಹೆಣ್ಣುಮಕ್ಕಳನ್ನು ಇಲ್ಲಿನ ನವಾಯತ ಯುವಕರು ವರಿಸುವುದು ಮಾಮೂಲು. ಹಾಗೆಯೇ ಇಲ್ಲಿನ ಹೆಣ್ಣು ಮಕ್ಕಳನ್ನು ಅಲ್ಲಿಗೆ ಮದುವೆ ಮಾಡಿ ಕೊಡಲಾಗಿದೆ.
ಇಲ್ಲಿಗೆ ಮದುವೆಯಾಗಿ ಬರುವ ಪಾಕಿಸ್ತಾನದ ಹೆಣ್ಣುಮಕ್ಕಳಿಗೆ ಭಾರತೀಯ ಪೌರತ್ವ ಸಿಗದಿದ್ದಲ್ಲಿ ವೀಸಾ ವಿಸ್ತರಿಸಿಕೊಳ್ಳುತ್ತ ಇಲ್ಲೇ ಇರುತ್ತಾರೆ. ಅವರ ಸಂಬಂಧಿಗಳು ಆಗಾಗ ಇಲ್ಲಿಗೆ ಬರುತ್ತಾರೆ. ಈ ನಂಟು ಭಟ್ಕಳದ ನವಾಯತರಿಗೆ ಶಾಪವಾಗಿದೆ.
ಜನವರಿ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಬಂಧಿಸಲಾಗಿರುವ ಡಾ. ಸೈಯದ್ ಅಫಾಕ್ ಪತ್ನಿ ಸಹ ಪಾಕಿಸ್ತಾನದವಳು. ಸೈಯದ್ ಪಾಕಿಸ್ತಾನಕ್ಕೆ ಒಂದೆರಡು ಬಾರಿ ಹೋಗಿಬಂದಿದ್ದ. ಅಲ್ಲಿಗೆ ಪದೇಪದೇ ದೂರವಾಣಿ ಕರೆ ಮಾಡುತ್ತಿದ್ದ. ಅಲ್ಲಿನ ಉಗ್ರರ ನಂಟಿರಬೇಕು ಎಂಬ ಆರೋಪವನ್ನೂ ಪೊಲೀಸರು ಮಾಡಿದ್ದಾರೆ.
ಸ್ಲೀಪರ್ ಸೆಲ್ ಅಂದರೆ ಏನು?
ಯಾವುದೋ ಉಗ್ರಗಾಮಿ ಸಂಘಟನೆಗೆ, ಉಗ್ರಗಾಮಿ ನಾಯಕನಿಗೆ ಕೆಲಸ ಮಾಡುವ ಜನ ಸಾಮಾನ್ಯ ಜನರಂತೆ ಬದುಕುತ್ತ ಇರುತ್ತಾರೆ. ಸಂಘಟನೆಯಿಂದ, ನಾಯಕನಿಂದ ಸೂಚನೆ ಬಂದಾಗ ಮಾತ್ರ ಕಾರ್ಯ ಪ್ರವೃತ್ತರಾಗುತ್ತಾರೆ. ಉದಾ: ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವಾತ ಟಿಕೆಟ್ ಒದಗಿಸಿಕೊಡುತ್ತಾನೆ. ಮತ್ತ್ಯಾರೋ ಫೋನ್, ಸಿಮ್‌ಕಾರ್ಡ್‌ಗೆ ವ್ಯವಸ್ಥೆ ಮಾಡುತ್ತಾರೆ. ಇನ್ಯಾರೋ ಶಸ್ತ್ರಾಸ್ತ್ರ ಒದಗಿಸುತ್ತಾರೆ.
ಕೆಟ್ಟಪಟ್ಟಣವಾದ ಚೆನ್ನಪಟ್ಟಣ
ಇಲ್ಲಿನ ಅಂಜುಮಾನ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಪ್ರಾಂಶುಪಾಲರಾಗಿ ನಿವೃತ್ತರಾಗಿರುವ ಕವಿ ಡಾ. ಸೈಯದ್ ಝಮೀರುಲ್ಲಾ ಷರೀಫ್ ಭಟ್ಕಳದ ಸನ್ನಿವೇಶವನ್ನು ವಿಶ್ಲೇಷಿಸುವುದು ಬೇರೆ ರೀತಿ. ತುಮಕೂರು ಜಿಲ್ಲೆಯವರಾದ ಡಾ. ಸೈಯದ್ ಮೂರೂವರೆ ದಶಕಗಳಿಂದ ಇಲ್ಲಿ ನೆಲೆಸಿದ್ದಾರೆ.
‘ಭಟ್ಕಳ ತನ್ನ ಮೂಲ ಹೆಸರಿನಂತೆ ಚೆನ್ನಪಟ್ಟಣವಾಗಿತ್ತು. ಈಗ ಭಯೋತ್ಪಾದನೆಯ ಕಳಂಕ ಮೆತ್ತಿ ಕೆಟ್ಟ ಪಟ್ಟಣವಾಗಿದೆ. ಈ ಊರಿನವ್ರು ಅಂದ್ರೆ ಬೇರೆ ಊರಿನ ಜನ ಅನುಮಾನ ಪಡ್ತಾರೆ. ಲಾಡ್ಜ್‌ಗಳಲ್ಲಿ ರೂಮ್ ಕೊಡೋದಿಲ್ಲ. ಇತ್ತೀಚೆಗೆ ಕಾರ್ಯನಿಮಿತ್ತ ದೆಹಲಿಗೆ ಹೋದಾಗ ಭಟ್ಕಳ ಅಂದ ತಕ್ಷಣ ಹೋಟೆಲ್‌ನಲ್ಲಿ ರೂಮ್ ಕೊಡೋದಿಲ್ಲ ಅಂದ್ರು. ನಿಮ್ಮ ಡಿಟೇಲ್ಸ್ ಐ.ಬಿ.ಯವರಿಗೆ ಕೊಡ್ತೇವೆ ಅಂದ್ರು. ಗೆಳೆಯರೊಬ್ಬರು ನನ್ನ ಸಹಾಯಕ್ಕೆ ಬಂದ್ರು. ಇದಕ್ಕಿಂತ ದುರಂತ ಬೇಕೇ’ ಎಂದು ಪ್ರಶ್ನಿಸುತ್ತಾರೆ ಡಾ. ಷರೀಫ್.
‘ಇಲ್ಲಿನ ಜನ (ನವಾಯತರು) ಕನ್ನಡ ಕಲಿಯುವುದಿಲ್ಲ. ಈ ನಾಡಿನ ಭಾಷೆಯನ್ನು ಕಲಿಯದ ಹೊರತೂ ಇದು ನಮ್ಮ ನಾಡು, ನಮ್ಮ ನೆಲ, ನಮ್ಮ ದೇಶ ಎಂಬ ಪ್ರೀತಿ ಉಕ್ಕದು. ಅಲ್ಲದೇ ಕೊಲ್ಲಿ ರಾಷ್ಟ್ರಗಳಿಗೆ ಹೋಗಿ ದುಡಿಯುತ್ತಾರೆ. ಅಲ್ಲಿ ದುಡಿದು ನಾವು ಹಣ ಗಳಿಸುತ್ತೇವೆ. ಇಲ್ಲಿಂದ ನಾವೇನು ಪಡೆಯುತ್ತೇವೆ ಎಂಬ ಅಹಂಕಾರವೂ ಇರುತ್ತದೆ. ಈ ಪ್ರತ್ಯೇಕತಾ ಭಾವ ಹೋಗದ ಹೊರತೂ ಪರಿಸ್ಥಿತಿ ಸುಧಾರಿಸದು.
ಬೇರೆ ಬೇರೆ ಜಾತಿ, ಧರ್ಮದವರು ಒಟ್ಟಿಗೆ ವಾಸಿಸಿದಾಗ ಭಾವೈಕ್ಯ ಬೆಳೆಯುತ್ತದೆ. ಪ್ರತ್ಯೇಕವಾಗಿ ವಾಸಿಸಿದ ತಕ್ಷಣ ಆಯಾ ಜಾತಿ, ಧರ್ಮದ ನಾಯಕರು ಅಲ್ಲಿ ತಲೆ ಎತ್ತುತ್ತಾರೆ. ಆಗ ಬೇಡವೆಂದರೂ ಧಾರ್ಮಿಕ ವಾದ ತಲೆ ಎತ್ತುತ್ತದೆ. ಇಲ್ಲಿ ಕೋಮುವಾದ ಬೆಳೆದಿರುವುದು. ಇತ್ತೀಚಿನ ವರ್ಷಗಳಲ್ಲಿ ಯುವಕರು ಮತಾಂಧತೆಯತ್ತ ವಾಲುತ್ತಿರುವುದು ಇದೇ ಕಾರಣಕ್ಕೆ’ ಎಂದು ವಿಶ್ಲೇಷಿಸುತ್ತಾರೆ
ಡಾ. ಸೈಯದ್.
ಪೂರಕ ಮಾಹಿತಿ: ರಾಘವೇಂದ್ರ ಭಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.