ADVERTISEMENT

ಕಾರ್ಕಳದ ಬಾಹುಬಲಿ

ಸಿದ್ಧಾಪುರ ವಾಸುದೇವ ಭಟ್ಟ
Published 20 ಜುಲೈ 2011, 19:30 IST
Last Updated 20 ಜುಲೈ 2011, 19:30 IST

ಕಾರ್ಕಳ ಎಂದಾಕ್ಷಣ ನೆನಪಿಗೆ ಬರುವುದು ಅಲ್ಲಿನ ಬಾಹುಬಲಿಯ ವಿರಾಟ್ ಮೂರ್ತಿ. ಇಲ್ಲಿನ ಗೊಮ್ಮಟ ಬೆಟ್ಟದ ವೀರ ಬಾಹುಬಲಿಯ ವಿಗ್ರಹ ಅತ್ಯಂತ ಸುಂದರ. ಈ ಮೂರ್ತಿಯಿಂದಾಗಿ ಕಾರ್ಕಳ ದೇಶದ ಜೈನ ಸಮುದಾಯದವರ ಗಮನ ಸೆಳೆದಿದೆ.

ಜೈನರಷ್ಟೇ ಅಲ್ಲ ಎಲ್ಲ ಧರ್ಮಗಳ ಜನರೂ ಬಾಹುಬಲಿ ಮೂರ್ತಿ ದರ್ಶನಕ್ಕೆ ಕಾರ್ಕಳಕ್ಕೆ ಬರುತ್ತಾರೆ. ಇಲ್ಲಿನ ಬಾಹುಬಲಿ ಮೂರ್ತಿ 42 ಅಡಿ ಎತ್ತರದ ಏಕಶಿಲಾ ವಿಗ್ರಹ.

ಕಾರ್ಕಳ ಪ್ರದೇಶವನ್ನಾಳಿದ ಸೋಮವಂಶದ ಭೈರರಸರ ಮಗನಾದ ವೀರ ಪಾಂಡ್ಯರಾಜ ತನ್ನ ಗುರುಗಳಾದ ಲಲಿತಕೀರ್ತಿ ಮುನಿಗಳ ಉಪದೇಶದಂತೆ ಈ ಬಾಹುಬಲಿ ವಿಗ್ರಹವನ್ನು ಕೆತ್ತಿಸಿ 1432ರಲ್ಲಿ ಪ್ರತಿಷ್ಠಾಪಿದರು.

ಈ ಬಾಹುಬಲಿಯ ಪ್ರತಿಷ್ಠಾಪನೆಯ ಸುಂದರ ವರ್ಣನೆಯನ್ನು ಚದುರ ಚಂದ್ರಮ ಎಂಬ ಕವಿ ತನ್ನ `ಕಾರ್ಕಳ ಗೊಮ್ಮಟೇಶ್ವರ ಚರಿತ್ರೆ~ ಎಂಬ ಕೃತಿಯಲ್ಲಿ ಸೊಗಸಾಗಿ ವರ್ಣಿಸಿದ್ದಾನೆ. ಸ್ಥಳೀಯ ತುಳು ಪಾಡ್ದನಗಳಲ್ಲೂ  ಬಾಹುಬಲಿಯ ಕಥಾ ವಿವರಗಳು ಬರುತ್ತವೆ.

ಕಪ್ಪುಕಲ್ಲಿನ ಬಾಹುಬಲಿ ಮೂರ್ತಿ ಆಜಾನುಬಾಹು, ಗುಂಗುರು ಕೂದಲು, ನಾಸಾಗ್ರದಲ್ಲಿ ಸಮದೃಷ್ಟಿ, ಅಗಲ ಹಣೆ, ವಿಶಾಲ ಭುಜಗಳು, ಪ್ರಮಾಣ ಬದ್ಧ ನಿಲುವು, ಧ್ಯಾನ, ಶಾಂತರಸವನ್ನು ಸೂಚಿಸುವ ನಗುಮೊಗದಿಂದ ಕೂಡಿದ್ದು ಆಕರ್ಷಕವಾಗಿದೆ.

ಬಾಹುಬಲಿ ಮಂದಿರದ ಹೊರಪಾರ್ಶ್ವದ ಇಕ್ಕೆಲಗಳಲ್ಲಿ ಶೀತಲನಾಥ ಸ್ವಾಮಿ (10ನೇ ತೀರ್ಥಂಕರ) ವಿಗ್ರಹ ಹಾಗೂ ಚಿಂತಾಮಣಿ ಪಾರ್ಶ್ವನಾಥ ಸ್ವಾಮಿ (23ನೇ ತೀರ್ಥಂಕರ) ವಿಗ್ರಹಗಳಿವೆ. ಗೊಮ್ಮಟಬೆಟ್ಟದ ವೀರ ಬಾಹುಬಲಿಯ ಎದುರು ಒಂದು ಬ್ರಹ್ಮ ಸ್ಥಂಭವಿದೆ.

ಅದರ ತುದಿಯಲ್ಲಿ ಬ್ರಹ್ಮ ತನ್ನೆರಡು ಕೈಗಳಲ್ಲಿ ವಜ್ರಾಯುಧ ಹಾಗೂ ಬಹುಬೀಜ ಫಲ ಹಿಡಿದು ಸುಖಾಸೀನ ಭಂಗಿಯಲ್ಲಿದ್ದಾನೆ. ಇದೊಂದು ಅಪೂರ್ವ ಕಲಾತ್ಮಕ ಕೆತ್ತನೆ. ಬಾಹುಬಲಿ ಬೆಟ್ಟ ಏರುತ್ತಿದ್ದಂತೆ ಮಧ್ಯೆ ಎಡಭಾಗದಲ್ಲಿ  ಪದ್ಮಾವತಿ ಅಮ್ಮನವರ ಬಸದಿಯಿದೆ.

ಮಾಘಮಾಸದ ಹುಣ್ಣಿಮೆಯಂದು ಬಾಹುಬಲಿ ಬೆಟ್ಟದಲ್ಲಿ ರಥೋತ್ಸವ ನಡೆಯುತ್ತದೆ. ಈ ಸಂದರ್ಭಕ್ಕೆ ಸಾವಿರಾರು ಜನರು ಸಾಕ್ಷಿಯಾಗುತ್ತಾರೆ. ಈ ಸಂದರ್ಭದಲ್ಲಿ ಸ್ಥಳೀಯ ಜೈನಧರ್ಮ ಜೀರ್ಣೋದ್ಧಾರಕ ಸಂಘ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.

ಸೇವೆ: ಇಲ್ಲಿ ನಿತ್ಯ ಬೆಳಿಗ್ಗೆ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ನಡೆಯುತ್ತದೆ. ಭಕ್ತರು ಬಾಹುಬಲಿಯ ಸನ್ನಿಧಿಯಲ್ಲಿ ಪಾದಾಭಿಷೇಕ ಸೇವೆ ಮಾಡಬಹುದು. ಈ ಸೇವೆಗೆ ಐದು ನೂರು ರೂಪಾಯಿ ಸೇವಾ ಶುಲ್ಕ ನಿಗದಿ ಮಾಡಲಾಗಿದೆ.

ಬಾಹುಬಲಿ ಮೂರ್ತಿಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ.  2002ರಲ್ಲಿ ಮಹಾಮಸ್ತಕಾಭಿಷೇಕ ನಡೆದಿತ್ತು.

ಗೊಮ್ಮಟಬೆಟ್ಟ ಸಮುದ್ರಮಟ್ಟದಿಂದ ಸುಮಾರು ನೂರು ಮೀಟರ್ ಎತ್ತರದಲ್ಲಿದೆ. ಕಾರ್ಕಳ ಬಸ್ ನಿಲ್ದಾಣದಿಂದ ಬಾಹುಬಲಿ ಬೆಟ್ಟಕ್ಕೆ 1.5 ಕಿಮೀ  ದೂರವಿದೆ. ಇನ್ನೂರು ಮೆಟ್ಟಿಲುಗಳನ್ನು ಹತ್ತಿ  ಬಾಹುಬಲಿ ಸ್ವಾಮಿಯ ದರ್ಶನ ಪಡೆಯಬಹುದು.

ಅಶಕ್ತರು ಹಾಗೂ ವೃದ್ಧರಿಗೆ ಬಾಹುಬಲಿ ದರ್ಶನಕ್ಕೆ ತೆರಳಲು ವಾಹನ ಮಾರ್ಗವೂ ಇದೆ.  ಕಾರ್ಕಳಕ್ಕೆ ಬರಲು ಮಂಗಳೂರು ಹಾಗೂ ಉಡುಪಿ ಎರಡೂ ಕಡೆಗಳಿಂದ ಸಾಕಷ್ಟು ಬಸ್ ವ್ಯವಸ್ಥೆಯಿದೆ.

ಉಡುಪಿಯಿಂದ ಧರ್ಮಸ್ಥಳಕ್ಕೆ ಸಾಗುವ ಹೆಚ್ಚಿನ ರಾಜ್ಯ ರಸ್ತೆ ಸಾರಿಗೆಯ ಬಸ್‌ಗಳು ಕಾರ್ಕಳ ಮಾರ್ಗವಾಗಿ ಸಾಗುತ್ತವೆ. ದೂರದ ಸ್ಥಳಗಳಿಂದ ಬರುವ ಯಾತ್ರಿಗಳು ಉಳಿದುಕೊಳ್ಳಲು ವ್ಯವಸ್ಥೆಯಿದೆ. 

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ನಂಬರ್: 08258- 233099.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.