ADVERTISEMENT

ಕೋಣಗಳ ರಾಜವೈಭವ

ಸಂತೋಷ್ ರಾವ್ ಪೆರ್ಮುಡ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST
ಕೋಣಗಳ ರಾಜವೈಭವ
ಕೋಣಗಳ ರಾಜವೈಭವ   

ಕರಾವಳಿಯಲ್ಲಿ ಈಗ ಕಂಬಳ ಕ್ರೀಡೆಯ ಕಲರವ. ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ನಿರ್ದಿಷ್ಟ ಮಟ್ಟಕ್ಕೆ ನೀರನ್ನು ತುಂಬಿ ಅದರಲ್ಲಿ ಬಲಿಷ್ಠ ಕೋಣಗಳನ್ನು ಓಡಿಸುವ ಈ ಸ್ಪರ್ಧೆಯ ರೋಚಕತೆಗೆ ಮನ ಸೋಲದವರು ಯಾರು?

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗಗಳಲ್ಲಿ ಪ್ರಮುಖ ಆಹಾರ ಬೆಳೆಯಾದ ಭತ್ತದ ಕೊಯ್ಲಿನ ನಂತರ ಮತ್ತು ಭತ್ತದ ಗದ್ದೆಯ ಉಳುಮೆಯ ನಂತರ ಬಿತ್ತನೆಯನ್ನು ನಡೆಸುವ ಪೂರ್ವದಲ್ಲಿ ಏರ್ಪಡಿಸುವ ಕ್ರೀಡೆ ಇದು. ತುಳುನಾಡಿನಲ್ಲಿ ಭೂತಾರಾಧನೆಗೆ ಅಗ್ರ ಪ್ರಾಶಸ್ತ್ಯ. ಭೂತಕ್ಕಾಗಿ ಗದ್ದೆಗಳೂ ಮೀಸಲಿದ್ದವು. ಈ ಗದ್ದೆಯ ಉಳುಮೆಯ ಅಂತ್ಯದಲ್ಲಿ ಬಳಸಲಾದ ಕೋಣಗಳನ್ನು ಮನರಂಜನೆಗಾಗಿ ಓಡಿಸುತ್ತಿದ್ದರು. ಈ ಪದ್ಧತಿಯು ಇಂದು ಜನಪದ ಕ್ರೀಡೆಯಾಗಿ ಮಾರ್ಪಾಡುಗೊಂಡಿದೆ.

ಬಯಲು ಸೀಮೆಯಲ್ಲಿ ಕೃಷಿ ಭೂಮಿಯ ಉಳುಮೆಗಾಗಿ ಎತ್ತುಗಳನ್ನು ಬಳಸುವುದು ಸರ್ವೇಸಾಮಾನ್ಯ. ಆದರೆ ಕರಾವಳಿ ಭಾಗದ ಜಮೀನು ವಿಭಿನ್ನವಾಗಿದ್ದು ಉಳುಮೆ ಅತ್ಯಂತ ಕಠಿಣ. ಈ ಕಾರಣದಿಂದಲೇ ಇಲ್ಲಿನ ಉಳುಮೆಗಾಗಿ ಬಲಿಷ್ಠವಾದ ಕೋಣಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ಕಂಬಳದಲ್ಲಿ ಕೋಣಗಳೇ ಪ್ರಮುಖ ಆಕರ್ಷಣೆ.

ADVERTISEMENT

ಒಂದು ಊರು ಅಥವಾ ಹಳ್ಳಿಯಲ್ಲಿರುವ ಅಷ್ಟೂ ಕೋಣಗಳ ಪೈಕಿ ಅತ್ಯಂತ ಸಮರ್ಥ ಹಾಗೂ ಬಲಿಷ್ಠವಾದವುಗಳನ್ನು ಆಯ್ಕೆ ಮಾಡಿ ಅವುಗಳ ಮಧ್ಯೆ ನಿರ್ದಿಷ್ಟವಾದ ಗದ್ದೆಯಲ್ಲಿ ಓಟದ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತವಾದ ಕೋಣಗಳ ಮಾಲೀಕರನ್ನು ಸನ್ಮಾನಿಸುವುದರ ಹಿಂದೆ ಕೃಷಿಗೆ ಉತ್ತೇಜನ ನೀಡುವ ಉದ್ದೇಶವೂ ಇದೆ. ನವೆಂಬರ್‌ನಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ ಈ ಕ್ರೀಡೆಯನ್ನು ಆಯೋಜಿಸಲಾಗುತ್ತದೆ.

ಕಂಬಳದ ಕೋಣಗಳು: ಕೋಣಗಳನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆ ವಹಿಸಲಾಗುತ್ತದೆ. ಉತ್ತಮ ತಳಿಯ ಮತ್ತು ಆರೋಗ್ಯವಂತ ಎಳೆ ವಯಸ್ಸಿನ ಕೋಣಗಳನ್ನು ಲಕ್ಷಗಟ್ಟಲೆ ರೂಪಾಯಿ ವ್ಯಯಿಸಿ ಖರೀದಿಸಲಾಗುತ್ತದೆ.

ಇವುಗಳ ಆರೈಕೆಯಂತೂ ರಾಜಮರ್ಯಾದೆಯಿಂದ ನಡೆಯುತ್ತದೆ. ಅದಕ್ಕಾಗಿ ಒಬ್ಬ ನಿರ್ದಿಷ್ಟ ಅನುಭವಿ ಕೆಲಸಗಾರನ ಸೇವೆ ಬೇರೆ. ಇವುಗಳನ್ನು ವಿಶೇಷ ಕೊಟ್ಟಿಗೆಯಲ್ಲಿ ಕಟ್ಟಿ ಅವುಗಳಿಗೆ ಎ.ಸಿ ವ್ಯವಸ್ಥೆಯನ್ನು ಮಾಡಿರುವ ಅದೆಷ್ಟೋ ಕಂಬಳಪ್ರಿಯ ಕುಟುಂಬಗಳನ್ನು ತುಳುನಾಡಿನಲ್ಲಿ ಕಾಣಬಹುದು. ಕೋಣಗಳು ಹೆಚ್ಚಾಗಿ ನೀರಲ್ಲಿರಲು ಇಷ್ಟಪಡುವುದರಿಂದ ಕೋಣಗಳಿಗಾಗಿಯೇ ವಿಶೇಷ ಈಜುಕೊಳಗಳನ್ನು ನಿರ್ಮಿಸಿದ ಮನೆತನಗಳು ಇವೆ.

ಕೋಣಗಳ ಮಾಲೀಕ ಮತ್ತು ಆರೈಕೆದಾರ ಹಾಗೂ ಓಡಿಸುವವನ ಹೊರತಾಗಿ ಉಳಿದವರಿಗೆ ಓಟದ ಕೋಣಗಳನ್ನು ಮುಟ್ಟಲೂ ಅವಕಾಶವನ್ನು ನೀಡುವುದಿಲ್ಲ.

ಇಂತಹ ಕೋಣಗಳನ್ನು ಓಟಕ್ಕೆ ಬೇಕಾದ ತಯಾರಿಯೊಂದಿಗೆ ತರಬೇತಿ ನೀಡಿ ಪಂದ್ಯಕ್ಕೆ ಸಿದ್ಧಪಡಿಸುವುದರ ಹಿಂದೆಯೂ ಬದ್ಧತೆ ಮತ್ತು ತಾಳ್ಮೆ ಬಹಳ ಮುಖ್ಯ (ಅದೆಷ್ಟೋ ಬಾರಿ ಕೋಣಗಳು ತಿವಿಯುವ ಸಂಭವವೂ ಇರುತ್ತದೆ).

ಕಂಬಳದ ಕೋಣಗಳ ನಿರ್ವಹಣೆ ಮಾಲೀಕರಿಗೆ ಬಲು ಖರ್ಚಿನ ಬಾಬ್ತು ಆಗಿದ್ದರೂ ಈ ಕ್ರೀಡೆ ಇಂದು ಪ್ರತಿಷ್ಠೆಯ ಪ್ರಶ್ನೆಯಾಗಿ ಬೆಳೆದಿದೆ. ಓಟದ ಕೋಣಗಳನ್ನು ನಿತ್ಯ ತಣ್ಣೀರಿನಲ್ಲಿ ಸ್ನಾನ ಮಾಡಿಸಿ ಎಣ್ಣೆ ಮಸಾಜ್ ಮಾಡಲಾಗುತ್ತದೆ. ಗುಣಮಟ್ಟದ ಹಸಿರು ಮತ್ತು ಒಣ ಹುಲ್ಲು ಹಾಗೂ ಬೇಯಿಸಿದ ಹುರುಳಿಯನ್ನು ಇವುಗಳಿಗೆ ನೀಡಲಾಗುತ್ತದೆ. ಕಂಬಳಕ್ಕೆ ಯೋಗ್ಯ ಕೋಣಗಳಿಗೆ ಮಾರುಕಟ್ಟೆಯಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ಲಕ್ಷ ರೂಪಾಯಿವರೆಗೂ ಬೆಲೆಯಿದೆ ಎನ್ನುತ್ತಾರೆ ಹಿರಿಯ ಕಂಬಳ ತಜ್ಞರು.

ಕೋಣಗಳ ವೇಗಕ್ಕೆ ಸಮಾನವಾಗಿ ಕೆಸರು ತುಂಬಿದ ಗದ್ದೆಯಲ್ಲಿ ಓಡುವುದು ಸಾಮಾನ್ಯದ ಮಾತಲ್ಲ. ಇಂದು ಕರಾವಳಿಯಲ್ಲಿ ಕೇವಲ ಬೆರಳೆಣಿಕೆಯಷ್ಟೇ ಮಂದಿ ಕಂಬಳದ ಗದ್ದೆಯಲ್ಲಿ ಕೋಣಗಳೊಂದಿಗೆ ಓಡುವ ಓಟಗಾರರಿದ್ದಾರೆ.



ಕಂಬಳದ ಗದ್ದೆ ಹೇಗಿರುತ್ತದೆ?

ಹಿಂದೆ ಭತ್ತದ ಕಟಾವು ನಡೆದ ನಂತರ ಖಾಲಿ ಗದ್ದೆ ಅಥವಾ ಬಳಸದೇ ಬಿಟ್ಟ ಗದ್ದೆಗಳಲ್ಲಿ (ಹಡೀಲು ಗದ್ದೆ; ತುಳುವಿನಲ್ಲಿ ಪಡೀಲ್ ಕಂಡ) ಕಂಬಳವನ್ನು ಬಹುವಾಗಿ ಏರ್ಪಡಿಸಲಾಗುತ್ತಿತ್ತು. ಆದರೆ, ಇಂದು ಕಂಬಳಕ್ಕಾಗಿಯೇ ವಿಶೇಷವಾಗಿ ಗದ್ದೆಗಳನ್ನು ಶಾಶ್ವತವಾಗಿ ನಿರ್ಮಿಸಲಾಗಿದೆ. ಓಟದ ಅಂಕಣ ನೂರೈವತ್ತರಿಂದ ಇನ್ನೂರೈವತ್ತು ಮೀಟರ್ ಉದ್ದವಿರುತ್ತದೆ. ಹದ ಮಾಡಲಾದ ಗದ್ದೆಯ ಮಣ್ಣಿಗೆ ಅದು ಜಿಗುಟಾಗದಂತೆ ಸೂಕ್ತ ಪ್ರಮಾಣದಲ್ಲಿ ಮರಳನ್ನು ಸೇರಿಸಿ ಅದರ ಮೇಲೆ ನಿಗದಿತ ಪ್ರಮಾಣದ ನೀರನ್ನು ತುಂಬಲಾಗಿರುತ್ತದೆ. ಸಾಮಾನ್ಯವಾಗಿ ಈ ಅಂಕಣ ಭೂಮಿಯ ಮಟ್ಟಕ್ಕಿಂತ 4ರಿಂದ 5 ಅಡಿಗಳಷ್ಟು ಆಳದಲ್ಲಿರುತ್ತದೆ. ಓಟ ಪ್ರಾರಂಭವಾಗುವ ಪ್ರದೇಶ ಇಳಿಜಾರಾಗಿದ್ದು ಕೋಣಗಳನ್ನು ಸಲೀಸಾಗಿ ಅಂಕಣದೊಳಗೆ ಇಳಿಸಲು ಸಾಧ್ಯವಾಗುವಂತೆ ಇರುತ್ತದೆ. ಆರಂಭದ ಮತ್ತು ಅಂತ್ಯದ ಗೆರೆಗಳಲ್ಲಿ ಮಾವಿನ ತೋರಣವನ್ನು ಕಟ್ಟಿರಲಾಗುತ್ತದೆ. ಅಂಕಣ ಮುಕ್ತಾಯದ ಭಾಗ ಸ್ವಲ್ಪ ಏರು ರೀತಿಯಲ್ಲಿ ಇರುತ್ತದೆ. ಆ ಪ್ರದೇಶವೇ ‘ಮಂಜೋಟ್ಟಿ’. ಏಕೆಂದರೆ ಅತ್ಯಂತ ವೇಗವಾಗಿ ಓಡಿಕೊಂಡು ಬರುವ ಬಲಿಷ್ಠ ಕೋಣಗಳು ಎತ್ತರ ಪ್ರದೇಶವಾದ ಮಂಜೋಟ್ಟಿ ತಲುಪುತ್ತಿದ್ದಂತೆ ವೇಗವನ್ನು ಕಳೆದುಕೊಳ್ಳುತ್ತವೆ. ಇಲ್ಲಿ ಯುವಕರು ಆ ಕೋಣಗಳನ್ನು ಹಿಡಿದು ನಿಯಂತ್ರಿಸುತ್ತಾರೆ.

ವಿವಿಧ ಸ್ಪರ್ಧೆಗಳು: ಕಂಬಳ ವಿಶೇಷವಾಗಿ ಎರಡು ಕೋಣಗಳನ್ನು ಅಕ್ಕಪಕ್ಕ ನಿಲ್ಲಿಸಿ ಅವುಗಳ ಕುತ್ತಿಗೆಗೆ ನೊಗವನ್ನು ಕಟ್ಟಿ ಓಡಿಸುವಾತನೂ ಜತೆ ಸೇರಿದರೆ ಒಂದು ಜೋಡಿ ಸ್ಪರ್ಧಿಗಳೆಂದು ಪರಿಗಣಿಸಲಾಗುತ್ತದೆ. ಹೀಗೆ ಒಂದು ಬಾರಿಗೆ ಸಾಮಾನ್ಯವಾಗಿ ಎರಡು ಜೋಡಿಗಳ ಮಧ್ಯೆ ಸ್ಪರ್ಧೆ ನಡೆಯುತ್ತಿದ್ದು, ಇಂತಹ ಸ್ಪರ್ಧೆಯಲ್ಲಿ ನೂರಾರು ಜೋಡಿಗಳು ಭಾಗವಹಿಸುತ್ತವೆ.

ಹಗ್ಗದ ಓಟ, ನೇಗಿಲು ಓಟ, ಅಡ್ಡಹಲಗೆ ಓಟ, ಕೆನೆಹಲಗೆ ಓಟ –ಹೀಗೆ ನಾಲ್ಕು ವಿಧದಲ್ಲಿ ಸ್ಪರ್ಧೆ ನಡೆಯುತ್ತದೆ. ಮೊದಲಿನ ಮೂರು ಪ್ರಕಾರಗಳ ಓಟಗಳಲ್ಲಿ ವೇಗಕ್ಕೆ ಪ್ರಾಶಸ್ತ್ಯ. ಯಾವ ಜೋಡಿ ಮೊದಲಾಗಿ ಗುರಿ ಮುಟ್ಟುವುದೋ ಆ ಜೋಡಿಯೇ ಗೆದ್ದಂತೆ. ಆದರೆ ಕೆನೆ ಹಲಗೆ ಓಟ ಭಿನ್ನ. ಗದ್ದೆಯ ಮೇಲ್ಭಾಗದಲ್ಲಿ ವಿವಿಧ ಎತ್ತರದಲ್ಲಿ ಕಟ್ಟಲಾದ ಪತಾಕೆಗಳ ಪೈಕಿ ಅತ್ಯಂತ ಎತ್ತರದ ಪತಾಕೆಗೆ ಯಾವ ಜೋಡಿ ನೀರನ್ನು ಚಿಮ್ಮಿಸುತ್ತದೆಯೋ ಅದನ್ನು ವಿಜೇತ ಜೋಡಿಯೆಂದು ಘೋಷಿಸಲಾಗುತ್ತದೆ. ಕಂಬಳದ ಭಾಷೆಯಲ್ಲಿ ಈ ಎತ್ತರವನ್ನು ಕೋಲು ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ಇದು 6.5 ಕೋಲು ಎತ್ತರದಿಂದ ಆರಂಭವಾಗಿ 8.5 ಕೋಲು, 9.5 ಕೋಲು, 10 ಕೋಲು ಹೀಗೆ ವಿವಿಧ ಎತ್ತರಗಳಿಗೆ ಪತಾಕೆಗಳನ್ನು ಕಟ್ಟುತ್ತಾರೆ (ಒಂದು ಕೋಲು ಅಂದರೆ 2.5 ಅಡಿ ಎಂದರ್ಥ).

ಸಾಮಾನ್ಯವಾಗಿ ಲೀಗ್, ಸೆಮಿಫೈನಲ್ ಮತ್ತು ಫೈನಲ್ ಹಂತದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಸ್ಪರ್ಧೆಯಲ್ಲಿ ವಿಜೇತವಾದ ಜೋಡಿಗೆ ಟ್ರೋಫಿಯೊಂದಿಗೆ ₹ 5 ಲಕ್ಷದಿಂದ ₹ 10 ಲಕ್ಷದವರೆಗೆ ಪುರಸ್ಕಾರವನ್ನೂ ನೀಡಲಾಗುತ್ತದೆ. ಕಂಬಳ ಅರಂಭವಾಗುತ್ತಿದ್ದಂತೆ ಓಟ ಆರಂಭದ ಸ್ಥಳದಲ್ಲಿ ಕೋಣಗಳನ್ನು ಗದ್ದೆಗೆ ಇಳಿಸಿ ಪ್ರಾರಂಭದ ತೋರಣದ ಕೆಳಗೆ ನಿಲ್ಲಿಸಲಾಗುತ್ತದೆ. ಕೋಣಗಳನ್ನು ನಿಲ್ಲಿಸಿ ಓಟಕ್ಕೆ ಸಮರ್ಪಕವಾಗಿ ಅಣಿಗೊಳಿಸುವುದೇ ಒಂದು ವಿಶೇಷ ಕಸರತ್ತು. ಹಟಮಾರಿ ಕೋಣಗಳು ಅದೆಷ್ಟೋ ಬಾರಿ ಓಟಕ್ಕೆ ಅಣಿಯಾಗದೇ ಮುಖ ತಿರುಗಿಸಿಬಿಡುತ್ತವೆ.

ಇವುಗಳನ್ನು ಓಡಿಸುವಾತ ಮತ್ತು ಸಹಾಯಕರು ಸೇರಿ ಎರಡೂ ಅಂಕಣಗಳಲ್ಲಿ ಅಣಿಗೊಳಿಸುತ್ತಿದ್ದಂತೆ ಕೆಂಪು ಬಾವುಟ ತೋರಿ ಓಟವನ್ನು ಪ್ರಾರಂಭಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಓಡಿಸುವಾತ ಕೋಣಗಳ ಬೆನ್ನಿಗೆ ಛಡಿಯೇಟು ನೀಡುತ್ತಾನೆ. ಛಡಿಯೇಟು, ಓಡಿಸುವಾತನ ಪ್ರೋತ್ಸಾಹದ ಕೇಕೆ ಮತ್ತು ಪ್ರೇಕ್ಷಕರ ಹರ್ಷೋದ್ಗಾರಗಳಿಂದ ರೊಚ್ಚಿಗೇಳುವ ಕೋಣಗಳು ಎರಡರಿಂದ ಮೂರು ನಿಮಿಷದಲ್ಲಿ ನೂರೈವತ್ತರಿಂದ ಇನ್ನೂರೈವತ್ತು ಮೀಟರ್ ದೂರದ ಅಂತಿಮ ತೋರಣವನ್ನು ದಾಟಿ ಮಂಜೋಟ್ಟಿಯನ್ನು ತಲುಪಿರುತ್ತವೆ. ಈ ವೇಳೆಗೆ ಓಟದ ಫಲಿತಾಂಶ ಪ್ರಕಟಗೊಂಡು ದಾಖಲೀಕರಣ ಗೊಳ್ಳುತ್ತದೆ. ಫಲಿತಾಂಶ ನಿರ್ಧರಿಸಲು ಕ್ಯಾಮೆರಾ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗುತ್ತಿದೆ.

ಕಂಬಳ ಶುರುವಾಗುವುದು ಬೆಳಗಿನ ಹೊತ್ತು. ಆ ದಿನ ರಾತ್ರಿಯಿಡೀ ನಡೆದು ಮಾರನೆಯ ದಿನ ಸಂಜೆಯ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳುತ್ತದೆ. ರಾತ್ರಿಯ ಹೊತ್ತು ಪ್ರಕಾಶಮಾನವಾದ ಫ್ಲಡ್‍ಲೈಟ್‌ನ ಬೆಳಕಿನ ಮಳೆಯಲ್ಲಿ ಈ ಕ್ರೀಡೆಯನ್ನು ನೋಡುವುದೇ ಅದ್ಭುತ ಅನುಭವ. ಕೋಣಗಳನ್ನು ವಿಶೇಷವಾಗಿ ಅಲಂಕರಿಸಿದ ಲಾರಿಯಲ್ಲಿ ತಂದು ಅವುಗಳನ್ನು ಕಂಬಳದ ಅಂಕಣಕ್ಕೆ ಇಳಿಸುವಾಗ ಚೆಂಡೆ, ಡೋಲು ಮತ್ತು ವಾಲಗಗಳೊಂದಿಗೆ ಭರ್ಜರಿಯಾಗಿ ಸ್ವಾಗತಿಸಲಾಗುತ್ತದೆ. ಗದ್ದೆಯ ಇಕ್ಕೆಲಗಳಲ್ಲಿ ಓಡಾಡುವ ನಾಗರಬೆತ್ತ ಹಿಡಿದ ಕೋಣಗಳ ಮಾಲೀಕರು, ಕಟ್ಟುಮಸ್ತಾದ ಓಟಗಾರರು ಮತ್ತು ಸಹಾಯಕರು ಪ್ರೇಕ್ಷಕರ ಕೇಂದ್ರ ಬಿಂದುಗಳಾಗಿರುತ್ತಾರೆ.

ಕಂಬಳದ ಗದ್ದೆಗಳು

ಕಂಬಳದ ಗದ್ದೆಯಲ್ಲಿ ಎರಡು ವಿಧಗಳಿದ್ದು ಅವುಗಳೆಂದರೆ ‘ಒಂಟಿ ಗದ್ದೆ ಕಂಬಳ’ ಮತ್ತು ‘ಜೋಡಿ ಗದ್ದೆ ಕಂಬಳ’ (ಇದನ್ನೇ ಜೋಡು ಕೆರೆ ಕಂಬಳ ಎನ್ನುತ್ತಾರೆ)

ಒಂಟಿ ಗದ್ದೆ ಕಂಬಳ: ಒಂಟಿಗದ್ದೆ ಕಂಬಳ ವಿಶಿಷ್ಟವಾದ ‘ಕೆನೆ ಹಲಗೆ’ ಓಟವನ್ನು ನಡೆಸುವಾಗ ಬಳಸಲಾಗುತ್ತದೆ. ಇಲ್ಲಿ ಎರಡು ಜೋಡಿಗಳ ಪೈಪೋಟಿಗೆ ಬದಲಾಗಿ ಕೇವಲ ಒಂದೇ ಜೋಡಿಯನ್ನು ಓಡಿಸಲಾಗುತ್ತದೆ.

ಜೋಡು ಕೆರೆ ಕಂಬಳ: ಈ ವಿಧದ ಕಂಬಳದಲ್ಲಿ ಅಕ್ಕಪಕ್ಕದಲ್ಲಿ ಎರಡು ಕಂಬಳದ ಅಂಕಣಗಳಿದ್ದು ಏಕಕಾಲಕ್ಕೆ ಎರಡೂ ಅಂಕಣಗಳಲ್ಲಿ ತಲಾ ಒಂದೊಂದು ಜೋಡಿಯನ್ನು ಓಡಿಸಲಾಗುತ್ತದೆ. ಅತ್ಯಂತ ವೇಗವಾಗಿ ಮಂಜೋಟ್ಟಿ ತಲುಪುವ ಜೋಡಿಗೆ ಗೆಲುವಿನ ಪಟ್ಟ.

ಹೆಚ್ಚಾಗಿ ಜೋಡು ಕೆರೆ ಕಂಬಳದ ಗದ್ದೆಗಳಿಗೆ ಜಾನಪದ ಪುರಾಣದಲ್ಲಿ ಸಿಗುವ ಅವಳಿ ಜವಳಿ ಅಥವಾ ಜೋಡುನುಡಿ ಪದಗಳನ್ನಿಡುವುದು ಸಾಮಾನ್ಯ. ಕರಾವಳಿಯ ಪ್ರಮುಖ ಜೋಡು ಕೆರೆ ಕಂಬಳದ ಗದ್ದೆಗಳೆಂದರೆ:

* ಸೂರ್ಯ-ಚಂದ್ರ ಕಂಬಳ (ಬಾರಾಡಿ ಬೀಡು-ವೇಣೂರಿನಲ್ಲಿ ಮತ್ತು ಶಿರ್ವದಲ್ಲಿ, ಬಂಗಾಡಿಯ ಕೊಲ್ಲಿಯಲ್ಲಿ, ತಲಪಾಡಿಯಲ್ಲಿ ನಡೆಸಲಾಗುತ್ತದೆ)

* ನೇತ್ರಾವತಿ-ಫಲ್ಗುಣಿ ಕಂಬಳ (ಪಿಲಿಕುಳ)

* ಜಯ-ವಿಜಯ ಕಂಬಳ (ಕಾರ್ಕಳದ ಈದು ಮತ್ತು ಜಪ್ಪಿನಮೊಗ್ರು)

* ಲವ-ಕುಶ ಕಂಬಳ (ಕಾರ್ಕಳದ ಮೀಯ್ಯಾರು)

* ಮೂಡು-ಪಡು ಕಂಬಳ (ಮುಲ್ಕಿ ಮತ್ತು ಕಟಪಾಡಿ)

* ಮೂಡೂರು-ಪಡೂರು ಕಂಬಳ (ಬಂಟ್ವಾಲದ ಕಾವಳ ಕಟ್ಟೆ)

* ಮತ್ಸ್ಯೇಂದ್ರನಾಥ-ಗೋರಖನಾಥ ಕಂಬಳ (ಮಂಗಳೂರಿನ ಕದ್ರಿ)

* ಕೋಟಿ-ಚೆನ್ನಯ್ಯ ಕಂಬಳ (ಮೂಡಬಿದ್ರೆ ಪುತ್ತೂರು)

* ಕಾಂತಬಾರೆ-ಬೂದಬಾರೆ ಕಂಬಳ (ಐಕಳ)

* ವಿಜಯ-ವಿಕ್ರಮ ಕಂಬಳ (ಉಪ್ಪಿನಂಗಡಿಯ ನೇತ್ರಾವತಿ ನದಿತಟ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.