ADVERTISEMENT

ಚೆಂದದ ನಾಳೆಗಳು ಖಂಡಿತ ಬರಲಿವೆ

ನಂದನ ರೆಡ್ಡಿ
Published 27 ನವೆಂಬರ್ 2016, 19:56 IST
Last Updated 27 ನವೆಂಬರ್ 2016, 19:56 IST
ನಂದನಾ ರೆಡ್ಡಿ, ಸಾಮಾಜಿಕ ಕಾರ್ಯಕರ್ತೆ
ನಂದನಾ ರೆಡ್ಡಿ, ಸಾಮಾಜಿಕ ಕಾರ್ಯಕರ್ತೆ   

ಪಂಚಾಯತ್ ರಾಜ್ ವಿಚಾರದಲ್ಲಿ ಕರ್ನಾಟಕದ ನಾಳೆಗಳು ಹೇಗಿರಬೇಕು ಎಂಬುದನ್ನು ಬರೆಯಲು ನನಗೆ ಸೂಚಿಸಲಾಗಿದೆ. ಇದನ್ನು ಬರೆಯಲು ಆರಂಭಿಸುವ ಮುನ್ನ ನಾನು ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಮತ್ತು ಯು.ಆರ್. ಅನಂತಮೂರ್ತಿ ಅವರು ‘ಹಿಂದುತ್ವ ಮತ್ತು ಹಿಂದ್ ಸ್ವರಾಜ್’ ಪುಸ್ತಕದಲ್ಲಿ ಹೇಳಿರುವ ಬರಹಗಳನ್ನು ಓದಿಕೊಂಡೆ. ರಮೇಶ್ ಕುಮಾರ್ ಸಮಿತಿ ಸಿದ್ಧಪಡಿಸಿದ್ದ ವರದಿ ಹಾಗೂ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಯನ್ನು ಓದಿಕೊಂಡೆ. ಆ ವರದಿ ಹಾಗೂ ಮಸೂದೆ ಸಿದ್ಧಪಡಿಸುವ ಕಾರ್ಯದಲ್ಲಿ ನಾನೂ ಭಾಗಿಯಾಗಿದ್ದೆ.

ಇದು ಊಹೆಯ ಆಧಾರದಲ್ಲಿ ಮಾಡುವ ಕೆಲಸ ಆಗಿದ್ದಿದ್ದರೆ, ಮುಂದಿನ ನಲವತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ಗ್ರಾಮ ಸ್ವರಾಜ್ಯ ಹೇಗಾಗಬೇಕು ಎಂಬುದನ್ನು ಬಹಳ ಸುಲಭವಾಗಿ ಚಿತ್ರಿಸಿಕೊಳ್ಳಬಹುದಿತ್ತು. ‘ಸ್ವಾತಂತ್ರ್ಯವೆಂಬುದು ತಳಮಟ್ಟದಿಂದ ಆರಂಭವಾಗಬೇಕು. ಪ್ರತಿ ಹಳ್ಳಿಯೂ ಗಣರಾಜ್ಯವಾಗಿರುತ್ತದೆ ಅಥವಾ ಪಂಚಾಯಿತಿಗಳಿಗೆ ಎಲ್ಲ ಬಗೆಯ ಅಧಿಕಾರ ಇರುತ್ತದೆ. ಹಾಗಾಗಿ ಪ್ರತಿ ಹಳ್ಳಿಯೂ ಸುಸ್ಥಿರ ಆಗಬೇಕು. ತನಗೆ ಸಂಬಂಧಿಸಿದ ವ್ಯವಹಾರಗಳನ್ನೆಲ್ಲ ತಾನೇ ನೋಡಿಕೊಳ್ಳುವಂತೆ ಆಗಬೇಕು. ವಿಶ್ವದ ಯಾವುದೇ ಶಕ್ತಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವಂತೆ ಇರಬೇಕು’ ಎಂದು ಮಹಾತ್ಮ ಗಾಂಧಿ ಹೇಳಿದ ಮಾದರಿಯಲ್ಲಿ ಹಾಗೂ ಅರವತ್ತು ವರ್ಷಗಳಲ್ಲಿ ನಾವು ಪಡೆದ ಅನುಭವಗಳನ್ನು ಆಧರಿಸಿ ನಾಡಿನ ನಾಳೆಗಳನ್ನು ರೂಪಿಸಬೇಕು.

ಗ್ರಾಮ ಸ್ವರಾಜ್ಯ ಕಾಯ್ದೆ
ಈ ಕೆಲಸವನ್ನು ಗ್ರಾಮ ಪಂಚಾಯಿತಿಗಳ ವಿಚಾರದಲ್ಲಿ ನಾವು ಈಗಾಗಲೇ ಮಾಡಿದ್ದೇವೆ. ನಾವು ಮಾಡಿರುವುದು ಊಹೆಗಳ ಆಧಾರದಲ್ಲಿ ಅಲ್ಲ. 20 ವರ್ಷಗಳ ಅವಧಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಕಂಡುಕೊಂಡ ಕುಂದುಕೊರತೆಗಳನ್ನು, ಶಾಸಕರ ಹಾಗೂ ಸಂಸದರ ಪ್ರತಿರೋಧಗಳನ್ನು, ಗ್ರಾಮಸಭೆಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಅಭಿಪ್ರಾಯಗಳನ್ನು ಆಲಿಸಿ, ರಮೇಶ್ ಕುಮಾರ್ ಸಮಿತಿಯ ಸದಸ್ಯರಾದ ನಾವು 1993 ಗ್ರಾಮ ಪಂಚಾಯಿತಿ ಕಾಯ್ದೆಗೆ ತಿದ್ದುಪಡಿಗಳನ್ನು ಸೂಚಿಸಿದೆವು, ವರದಿಯೊಂದನ್ನು ಸಲ್ಲಿಸಿದೆವು. ಈ ತಿದ್ದುಪಡಿಯನ್ನು ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳು ಅನುಮೋದಿಸಿದವು. ‘ಗ್ರಾಮ ಸ್ವರಾಜ್ಯ’ ಕಾಯ್ದೆ ಜಾರಿಗೆ ಬಂತು. ಆದರೆ ಅಧಿಕಾರದಾಹಿ ರಾಜಕಾರಣಿಗಳ ಧೋರಣೆ, ಸ್ಥಾಪಿತ ಹಿತಾಸಕ್ತಿಗಳ ಮೋಸ ನಮಗೆ ಅಸಮಾಧಾನ ತಂದಿತು.

ADVERTISEMENT

ಅಂದುಕೊಂಡಿದ್ದನ್ನು ನಾವು ಸಾಧಿಸಿದೆವು, ನಮ್ಮ ಕನಸು ರೂಪ ಪಡೆದುಕೊಳ್ಳುತ್ತಿದೆ ಎಂದು ನಮ್ಮಲ್ಲಿ ಕೆಲವರು ಅಂದುಕೊಳ್ಳುತ್ತಿದ್ದ ಹೊತ್ತಲ್ಲೇ, ಅದೆಲ್ಲವೂ ಅಧಿಕಾರಶಾಹಿಯ ಗೋಜಲುಗಳಿಗೆ ಸಿಲುಕಿ ಮುಳುಗಿಹೋಯಿತು. ಗ್ರಾಮ ಸ್ವರಾಜ್ಯ ಕಾಯ್ದೆಯನ್ನು ಜನಪ್ರತಿನಿಧಿಗಳು ಸೋಲಿಸಲಿಲ್ಲ. ಆದರೆ, ವಿಧಾನ ಮಂಡಲದ ಸದನಗಳು ಅದನ್ನು ಅನುಮೋದಿಸಿದ ನಂತರ, ಆಡಳಿತಾತ್ಮಕ ಏಟಿನ ಮೂಲಕ ಕಾಯ್ದೆಯನ್ನು ಸೋಲಿಸಲಾಯಿತು. ಹಾಗೆ ಸೋಲಿಸುವಂತಹ ಯೋಜನೆ ರೂಪಿಸಿದ್ದು ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು.

ಒಮ್ಮೆ ಹೀಗೆ ಯೋಚಿಸೋಣ
ಆದರೆ, ಸರ್ಕಾರವು ಗ್ರಾಮ ಸ್ವರಾಜ್ಯ ಕಾಯ್ದೆಗೆ ಬದ್ಧತೆ ತೋರಿಸುತ್ತದೆ ಎಂದು ಅರೆಕ್ಷಣ ನಂಬೋಣ. ಅಂಥದ್ದೊಂದು ಸನ್ನಿವೇಶದಲ್ಲಿ, ಎಲ್ಲ ಇಲಾಖೆಗಳು ಪಂಚಾಯತ್ ಪ್ರದೇಶಗಳಿಗೆ ನಿಗದಿ ಮಾಡುವ ಅನುದಾನವನ್ನು ಲೆಕ್ಕಹಾಕಿ, ‘ತಳಮಟ್ಟದಿಂದ ಯೋಜನೆ ರೂಪಿಸುವ ಪದ್ಧತಿ’ ಅನುಷ್ಠಾನಕ್ಕೆ ತರಲು ಮೊದಲ ಐದು ವರ್ಷಗಳ ಅವಧಿ ಬೇಕಾಗುತ್ತಿತ್ತು. ಫಲಾನುಭವಿಗಳನ್ನು ಗುರುತಿಸಲು ತೀರಾ ಸೀಮಿತವಾದ ಚೌಕಟ್ಟು ಹೊಂದಿರುವ, ಆಡಳಿತ ಕೇಂದ್ರದಿಂದ ಯೋಜನೆಗಳು ರೂಪುಗೊಳ್ಳುವ ವ್ಯವಸ್ಥೆಯೊಂದರಿಂದ ಹೊರಬಂದಂತೆ ಆಗುತ್ತಿತ್ತು. ಹೊಸ ವ್ಯವಸ್ಥೆಯಲ್ಲಿ, ಹೆಚ್ಚು ವಿಕೇಂದ್ರೀಕರಣ, ಜನರ ಪಾಲ್ಗೊಳ್ಳುವಿಕೆ ಇರುತ್ತಿತ್ತು. ಪಂಚಾಯತ್‌ಗಳಿಗೆ ಹಣ ನೀಡಿ, ಅಲ್ಲಿನ ವಿವಿಧ ಸಮುದಾಯಗಳಿಗೆ ಅಗತ್ಯವಿರುವ ಹಣ ಎಷ್ಟು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಪಂಚಾಯತ್‌ಗಳಿಗೇ ಕೊಡಬಹುದಿತ್ತು. ಇದು ಅಧಿಕಾರದ ವಿಕೇಂದ್ರೀಕರಣದ ಮೊದಲ ಸಂಕೇತವಾಗುತ್ತಿತ್ತು.

ಹೊಸ ವ್ಯವಸ್ಥೆಯಲ್ಲಿ ಜವಾಬ್ದಾರಿಗಳ ಹಂಚಿಕೆ ಇರುತ್ತಿತ್ತು. ಗ್ರಾಮ ಸಭೆಗಳಿಂದ ಆರಂಭವಾಗಿ ಪ್ರತಿ ಹಂತಕ್ಕೂ ತನ್ನದೇ ಆದ ಹಕ್ಕುಗಳು, ಜವಾಬ್ದಾರಿಗಳು ಇರುತ್ತಿದ್ದವು. ಪ್ರತಿ ಹಂತವೂ ತನ್ನ ಹಕ್ಕುಗಳನ್ನು, ಇನ್ನೊಂದು ಅಂಗದ ಒತ್ತಡಕ್ಕೆ ಒಳಗಾಗದೆಯೇ, ಚಲಾಯಿಸಬಹುದಿತ್ತು.

ತಮ್ಮ ಭವಿಷ್ಯ ತಾವೇ ರೂಪಿಸಬಹುದಿತ್ತು

ಐದು ವರ್ಷಗಳಿಗೆ ಸಂಬಂಧಿಸಿದ ಯೋಜನೆ ಹಾಗೂ ವಾರ್ಷಿಕ ಯೋಜನೆಗಳ ಮೂಲಕ ನಾಗರಿಕರಿಗೆ (ಗ್ರಾಮ ಸಭೆಗಳ ಸದಸ್ಯರು) ತಮ್ಮ ಅಭಿಲಾಷೆಗಳಿಗೆ ಸ್ಪಷ್ಟ ರೂಪ ಕೊಡಲು ಆಗುತ್ತಿತ್ತು. ಅದನ್ನು ಮುಂದಿನ ಐದು ವರ್ಷಗಳಲ್ಲಿ ಸಾಧಿಸುವುದು ಹೇಗೆ ಎಂಬುದನ್ನು ಆಲೋಚಿಸಲು ಸಾಧ್ಯವಾಗುತ್ತಿತ್ತು. ಎಲ್ಲ ಇಲಾಖೆಗಳ ಅನುದಾನ ಪಂಚಾಯತ್‌ಗಳ ಬಳಿ ಇರುತ್ತಿದ್ದ ಕಾರಣ, ಸ್ಥಳೀಯರು ತಮ್ಮ ಪ್ರದೇಶದ ಅಗತ್ಯಗಳಿಗೆ ಅನುಗುಣವಾಗಿ ಆ ಹಣವನ್ನು ಆದ್ಯತೆಯ ಮೇಲೆ ಖರ್ಚು ಮಾಡಲು ಸಾಧ್ಯವಾಗುತ್ತಿತ್ತು. ಹಣವನ್ನು ಎಲ್ಲಿ, ಯಾವುದಕ್ಕೆ ಖರ್ಚು ಮಾಡಿದರೆ ಹೆಚ್ಚು ಪ್ರಯೋಜನಕಾರಿ ಎಂಬುದು ಸ್ಥಳೀಯ ಮಟ್ಟದಲ್ಲಿ ನಿರ್ಧಾರವಾಗುತ್ತಿತ್ತು. ಆವಾಗ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಮಾತ್ರ ಗ್ರಾಮ ಸಭೆಗಳ ಕೆಲಸ ಆಗಿರುತ್ತಿರಲಿಲ್ಲ. ಬದಲಿಗೆ, ತಮ್ಮ ಗ್ರಾಮ ಹೇಗಿರಬೇಕು ಎಂಬುದನ್ನು ತಾವೇ ನಿರ್ಧರಿಸುವ ಶಿಲ್ಪಿಗಳಾಗುತ್ತಿದ್ದವು ಗ್ರಾಮ ಸಭೆಗಳು. ಉದ್ಯೋಗ ಸೃಷ್ಟಿಯ, ಕೈಗಾರಿಕೆಗಳಿಗೆ ಉತ್ತೇಜನ ನೀಡುವ, ಅಂಗನವಾಡಿ ಅಥವಾ ಶಿಶುಪಾಲನಾ ಕೇಂದ್ರಗಳ ನಿರ್ವಹಣೆ ನಡೆಸುವ, ಸ್ತ್ರೀಶಕ್ತಿ ಸಂಘಗಳ ಯೋಜನೆಗಳನ್ನು ರೂಪಿಸುವ, ಶ್ರದ್ಧಾ ಕೇಂದ್ರಗಳ ಉಸ್ತುವಾರಿ ನಡೆಸುವ, ಬಡತನ ನಿರ್ಮೂಲನೆ ಮಾಡುವ, ಶುಲ್ಕ ವಸೂಲಿ ಮಾಡುವ, ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಒದಗಿಸುವ ಹೊಣೆಗಾರಿಗೆ ಗ್ರಾಮ ಪಂಚಾಯತ್‌ಗಳ ಮೇಲೆ ಇರುತ್ತಿತ್ತು. ಅಷ್ಟೇ ಅಲ್ಲ, ನೀರಿನ ಕೊರತೆ ಎದುರಾದಾಗ ಪರಿಸ್ಥಿತಿ ನಿಭಾಯಿಸುವ, ಬರಗಾಲದ ಸಂದರ್ಭದಲ್ಲಿ ಮೇವು, ಇಂಧನ ಒದಗಿಸುವ, ಮಳೆ ನೀರಿನ ಸಂಗ್ರಹಕ್ಕೆ ಮಾದರಿಗಳನ್ನು ರೂಪಿಸುವ ಹೊಣೆಗಾರಿಕೆಗಳೂ ಪಂಚಾಯತ್‌ಗಳ ಮೇಲೇ ಇರುತ್ತಿದ್ದವು.

ಮೊದಲ ಐದು ವರ್ಷಗಳ ಅವಧಿ ಪೂರ್ಣಗೊಳ್ಳುವ ಹೊತ್ತಿಗೆ, ಚುನಾಯಿತ ಪ್ರತಿನಿಧಿಗಳಿಗೆ ತಮ್ಮ ಸಾಮರ್ಥ್ಯ, ಹಕ್ಕು, ಜವಾಬ್ದಾರಿಗಳು ಏನು ಎಂಬುದು ಗೊತ್ತಾಗಿರುತ್ತಿತ್ತು. ಈ ತಿಳಿವಳಿಕೆ ಹಾಗೂ ಸಾಮರ್ಥ್ಯ ಹೊಂದಿರುವ ಚುನಾಯಿತ ಪ್ರತಿನಿಧಿಗಳಲ್ಲಿ ಸಾರ್ಥಕ್ಯ ಹಾಗೂ ಸಾಧನೆಯ ಭಾವ ಮೂಡುತ್ತಿತ್ತು. ಗ್ರಾಮ ಸಭೆಗಳ ತೀರ್ಮಾನಗಳನ್ನು ಇನ್ನಷ್ಟು ವಿಸ್ತೃತವಾಗಿ ತಾವು ಅನುಷ್ಠಾನಕ್ಕೆ ತರಬಲ್ಲೆವು ಎಂಬುದು ಅವರಿಗೆ ಗೊತ್ತಾಗಿರುತ್ತಿತ್ತು.

ಆದರೆ, ಮೊದಲ ಐದು ವರ್ಷಗಳ ಅವಧಿಯಲ್ಲಿ ಹಣಕಾಸಿನ ವಿಕೇಂದ್ರೀಕರಣದ ಆರಂಭ ಮಾತ್ರ ಆಗಿರುತ್ತಿತ್ತು. ಗ್ರಾಮ ಸ್ವರಾಜ್ಯ ಕಾಯ್ದೆಯಲ್ಲಿ ಹೇಳಿದಂತೆ, ಕೆಲಸಗಳ ಹಾಗೂ ಕೆಲಸ ನಿರ್ವಹಿಸುವ ಹೊಣೆ ಹೊತ್ತಿರುವವರ ಅಧಿಕಾರ ವಿಕೇಂದ್ರೀಕರಣ ಆಗಿರುತ್ತಿರಲಿಲ್ಲ. ಹಾಗಾಗಿ, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಂತಹ ಸರ್ಕಾರದ ಸಂಸ್ಥೆಗಳಲ್ಲಿನ ಅಧಿಕಾರವನ್ನು ಗ್ರಾಮ ಪಂಚಾಯತ್‌ಗಳಿಗೆ, ಜಿಲ್ಲಾ ಪಂಚಾಯತ್‌ಗಳಿಗೆ ಹಂಚಬೇಕಾಗುತ್ತಿತ್ತು.  ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಸ್ತ್ರೀ ಶಕ್ತಿ ಇವು ಇಲಾಖೆಯ ಪ್ರಮಖ ಯೋಜನೆಗಳು. ಅದೇ ರೀತಿ ಶಿಕ್ಷಣ, ಗ್ರಾಮೀಣ ವಸತಿ, ನೀರು ಮತ್ತು ನೈರ್ಮಲ್ಯ, ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ನೀರಾವರಿ ಮತ್ತು ಪಡಿತರ ವ್ಯವಸ್ಥೆಗಳನ್ನೂ ಪಂಚಾಯತ್‌ಗಳಿಗೆ ವರ್ಗಾಯಿಸಲು ಆಗುತ್ತಿತ್ತು. ಹೀಗೆ ಮಾಡುವುದರಿಂದ ಈ ಯೋಜನೆಗಳ ಸಿಬ್ಬಂದಿಯನ್ನು ಸಂಬಂಧಪಟ್ಟ ಪಂಚಾಯತ್‌ ಹಂತಗಳಲ್ಲಿ ನಿಯೋಜಿಸಬೇಕಾಗುತ್ತಿತ್ತು. ಹಣ ಪಂಚಾಯತ್‌ಗಳ ನಿಧಿಯಲ್ಲಿ ಇರುತ್ತಿತ್ತು. ‘ದೊಡ್ಡಣ್ಣ’ನ ಕಣ್ಗಾವಲು ಇರುತ್ತಿರಲಿಲ್ಲ. ಗ್ರಾಮ ಸಭೆಗಳೇ ಈ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡುವ ಸಂಸ್ಥೆ ಆಗಿರುತ್ತಿದ್ದವು.

ಮಾದರಿ ಆಗುತ್ತಿದ್ದೆವು
ಇವೆಲ್ಲವುಗಳ ಪರಿಣಾಮ ಎಂಬಂತೆ, ಹತ್ತು ವರ್ಷಗಳ ನಂತರದ ಕಾಲಘಟ್ಟದಲ್ಲಿ ಕರ್ನಾಟಕವು ಇಡೀ ದೇಶಕ್ಕೆ ಗ್ರಾಮ ಸ್ವರಾಜ್ಯದ ಅನುಕರಣೀಯ ಮಾದರಿ ರಾಜ್ಯ ಆಗಿರುತ್ತಿತ್ತು. ಇದು ಸಾಧ್ಯವಾದ ನಂತರ, ಮುಂದಿನ ಹತ್ತು ವರ್ಷಗಳ ಅವಧಿಯನ್ನು ರಾಜ್ಯದ ಆಡಳಿತ ಸ್ವರೂಪದ ಪುನರ್‌ ವಿನ್ಯಾಸಕ್ಕೆ ಮುಡಿಪಾಗಿಡಬಹುದು. ಅಧಿಕಾರದ ಕೇಂದ್ರದಿಂದ ಕಾರ್ಯಕ್ರಮ ರೂಪಿಸುವ ವ್ಯವಸ್ಥೆಯ ಬದಲು, ಎಲ್ಲ ಅಂಗಗಳೂ ಒಂದು ಸಮಪಾತಳಿಯಲ್ಲಿ ನಿಂತು ಯೋಜನೆಗಳನ್ನು ರೂಪಿಸುವ ವ್ಯವಸ್ಥೆಯೆಡೆ ಹೊರಳಿಕೊಳ್ಳಬಹುದು. ಸಂಸತ್ತು ಹಾಗೂ ವಿಧಾನಸಭೆಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಗ್ರಾಮ ಸಭೆಗಳಿಗೂ ಅಧಿಕಾರ ಇರುವ ವ್ಯವಸ್ಥೆಯೊಂದನ್ನು ರೂಪಿಸಬಹುದು. ಗ್ರಾಮಸಭೆಗಳು ನೀಡುವ ಯೋಜನೆಗಳನ್ನು ಆಧರಿಸಿ ಪಂಚವಾರ್ಷಿಕ ಯೋಜನೆ ರೂಪಿಸುವ ಹಾಗೂ ಬಜೆಟ್‌ ಸಿದ್ಧಪಡಿಸುವ ವ್ಯವಸ್ಥೆ ಕಟ್ಟಬಹುದು. ಪ್ರಜೆಗಳನ್ನು ಚುನಾಯಿತ ಪ್ರತಿನಿಧಿಗಳು ಗೌರವದಿಂದ ಕಾಣುವಂತೆ ಮಾಡಬಹುದು.

ಇಪ್ಪತ್ತು ವರ್ಷಗಳ ಅವಧಿಯಲ್ಲಿ ಇದನ್ನು ಸಾಧಿಸಲು ಸಾಧ್ಯವಾದರೆ, ಜನರ ಯೋಚನಾಕ್ರಮ ಹಾಗೂ ವರ್ತನೆಗಳಲ್ಲಿ ಆಗುವ ಬದಲಾವಣೆಗಳನ್ನು ಊಹಿಸಿಕೊಳ್ಳಬಹುದು. ಜನ ತಮ್ಮ ಹಣೆಬರಹವನ್ನು ಪಂಚಾಯತ್‌ಗಳ ಮೂಲಕ ತಾವೇ ನಿರ್ಧರಿಸಿಕೊಳ್ಳುವ ಸ್ಥಾನದಲ್ಲಿ ಇರುತ್ತಾರೆ. ಇದರ ನಂತರ, ಒಂದರ್ಥದಲ್ಲಿ ಎಲ್ಲವನ್ನೂ ಸಾಧಿಸುವ ಸ್ಥಿತಿಯಲ್ಲಿ ನಾವಿರುತ್ತೇವೆ. ನಾವು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ನೋಡುವ ಕ್ರಮದಲ್ಲೂ ಮೂಲಭೂತ ಬದಲಾವಣೆ ಆಗುತ್ತದೆ. ಈ ವ್ಯವಸ್ಥೆಗಳನ್ನು ಪುನರ್‌ ರೂಪಿಸಲು ಸಹ ಸಾಧ್ಯವಾಗುತ್ತದೆ. ಇವು ವಿಸ್ತೃತ ಪರಿಣಾಮಗಳನ್ನು ಹೊಂದಿರುವ, ಆಶ್ಚರ್ಯ ತರಿಸುವ ಸಾಧ್ಯತೆಗಳು!

ಮಹಾತ್ಮನಲ್ಲಿ ನಂಬಿಕೆ
ಆದರೆ ನಾನು ಸಿನಿಕಳಾಗಿಲ್ಲ. ಪ್ರಯತ್ನ ಕೈಬಿಡುವುದಿಲ್ಲ. ‘ಬದ್ಧತೆ, ನಂಬಿಕೆ ಇರುವ ಕೆಲವು ಜನ ಇತಿಹಾಸದ ಪಥ ಬದಲಿಸಬಲ್ಲರು’ ಎಂದು ಮಹಾತ್ಮ ಗಾಂಧಿ ಹೇಳಿದ್ದನ್ನು ನಂಬುವವಳು ನಾನು. ಅಷ್ಟೇ ಅಲ್ಲ, ರಾಜ್ಯದ ಹಳ್ಳಿಗರ ಬಗ್ಗೆ ನನಗೆ ನಂಬಿಕೆ ಇದೆ. ಗಟ್ಟಿಯಾದ ಸ್ಥಳೀಯ ಆಡಳಿತ ಸಂಸ್ಥೆಗಳನ್ನು ಹೊಂದಿದ್ದ ಇತಿಹಾಸ ಕರ್ನಾಟಕಕ್ಕೆ ಇದೆ. ಹಳ್ಳಿ ಮಟ್ಟದ ಆಡಳಿತ ಸಂಸ್ಥೆಗಳು ಸ್ವಾಯತ್ತವಾಗಿದ್ದವು, ಬಲಾಢ್ಯವಾಗಿದ್ದವು ಎಂಬುದನ್ನು ಕ್ರಿ.ಶ. 1005ನೇ ಇಸವಿಯ ಶಾಸನಗಳು ಹೇಳುತ್ತವೆ. 16ನೇ ಶತಮಾನದ ಅಂತ್ಯದ ವೇಳೆಗೆ ಈ ಹಳ್ಳಿಗಳು ತಮ್ಮದೇ ಆದ ಆರ್ಥಿಕ ಮೂಲವನ್ನು ಬೆಳೆಸಿಕೊಂಡು ಸಾಮ್ರಾಜ್ಯದಂತೆ ಬೆಳೆದಿದ್ದವು.

ಮಾರ್ಗದರ್ಶಕ ವ್ಯಕ್ತಿತ್ವ ಹೊಂದಿದ್ದ ಅಬ್ದುಲ್‌ ನಜೀರ್ ಸಾಬ್, ರಾಮಕೃಷ್ಣ ಹೆಗಡೆ, ಎಂ.ವೈ. ಘೋರ್ಪಡೆ ಅವರಂತಹ ಹಿರಿಯರು ಅಧಿಕಾರವನ್ನು ಮತ್ತೆ ಜನರ ಕೈಯಲ್ಲಿಡಲು ಶ್ರಮಿಸಿದರು. ಪ್ರಜಾತಾಂತ್ರಿಕ ಅಧಿಕಾರವನ್ನು ಕೆಳಗಿನ ಹಂತಕ್ಕೆ ವಿಕೇಂದ್ರೀಕರಿಸುವಲ್ಲಿ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿತ್ತು. ಇವೆಲ್ಲ ಕುಸಿತ ಕಂಡಿದ್ದು ಕಳೆದ 20 ವರ್ಷಗಳ ಅವಧಿಯಲ್ಲಿ. ಇತಿಹಾಸದಿಂದ ಪಾಠ ಕಲಿಯುವ ಬದಲು ಕರ್ನಾಟಕವು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹಾಳು ಮಾಡಿದೆ.

ಅವರು ಎಲ್ಲವನ್ನೂ ಸೋಲಿಸಬಲ್ಲರು
ಆದರೆ ಅತ್ಯುತ್ತಮ ಎನ್ನಬಹುದಾದ, ಆಳವಾಗಿ ಆಲೋಚಿಸಿ ರೂಪಿಸಿದ ಯೋಜನೆಗಳನ್ನೂ ನಮ್ಮ ಹಿತ ಕಾಯಬೇಕಾದ ಜನಪ್ರತಿನಿಧಿಗಳೇ ಸೋಲಿಸಬಲ್ಲರು. ಗ್ರಾಮ ಸ್ವರಾಜ್ಯ ಕಾಯ್ದೆ ಈಗ ‘ಬಯಕೆಗಳ ಪಟ್ಟಿ’ಯಂತೆ ಆಗಿಬಿಟ್ಟಿದೆ. ಜನರ ಕಾನೂನುಬದ್ಧ ಹಕ್ಕು ಹಾಗೂ ಪ್ರಜಾತಂತ್ರವನ್ನು ಬುಡಮೇಲು ಮಾಡುವ ಉದ್ದೇಶದಿಂದ ರಾಜಕಾರಣಿಗಳು ಅಧಿಕಾರಶಾಹಿ ಜೊತೆ ಒಂದಾಗಿ ನಡೆಸಿದ ಕೃತ್ಯದಿಂದ ಹೀಗಾಗಿದೆ.

ಮೂರು ಬಲವಾದ ಏಟುಗಳು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹಾಳು ಮಾಡಿವೆ. 1) ‘ಜವಾಬ್ದಾರಿಗಳ ಪಟ್ಟಿ’ಯನ್ನು ತಿದ್ದುಪಡಿ ಕಾಯ್ದೆಯಲ್ಲಿ ಅಡಕ ಮಾಡಲು ವಿಫಲವಾಗಿರುವುದು. 2) ಕಾಯ್ದೆಗೆ ವಿರುದ್ಧವಾದ ಸರ್ಕಾರಿ ಆದೇಶಗಳನ್ನು ಹೊರಡಿಸಿದ್ದು, ಅವನ್ನು ಅನುಷ್ಠಾನಕ್ಕೆ ತಂದಿದ್ದು. 3) ₹ 2,000 ಕೋಟಿ ವೆಚ್ಚದ ಸಾಮರ್ಥ್ಯ ವರ್ಧನೆ ಕಾರ್ಯಕ್ರಮ ಅನುಷ್ಠಾನದ ಕೆಲಸವನ್ನು ಅಬ್ದುಲ್‌ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ (ಎಎನ್‌ಎಸ್‌ಎಸ್‌ಐಆರ್‌ಡಿ) ನೀಡಿ, 1993 ನಿಷ್ಫಲ ಕಾಯ್ದೆ ಆಧರಿಸಿ ತಪ್ಪುತಪ್ಪಾಗಿ ರೂಪಿಸಿದ ಯೋಜನಾ ಪ್ರಕ್ರಿಯೆಯನ್ನು ಅನುಸರಿಸಲು ಅವರಿಗೆ ಅವಕಾಶ ನೀಡಿರುವುದು.

ಬದಲಾವಣೆಯ ಉದ್ದೇಶದಿಂದ ಯಾವುದೇ ಕಾರ್ಯಕ್ರಮ ರೂಪಿಸುವಾಗ ಅಧಿಕಾರದಾಹಿ, ಭ್ರಷ್ಟ ರಾಜಕಾರಣಿಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಬದಲಾವಣೆ ತನ್ನಿ ಎಂದು ಸೂಚಿಸಿದ ಸರ್ಕಾರ, ಬದಲಾವಣೆಗಳನ್ನು ಜಾರಿಗೆ ತರುತ್ತದೆ ಎಂದು ರಮೇಶ್ ಕುಮಾರ್ ಸಮಿತಿಯ ನಾವು ಮುಗ್ಧವಾಗಿ ನಂಬಿದೆವು. ಈಚಿನ ದಿನಗಳಲ್ಲಿ ಕರ್ನಾಟಕದ ಯಾವ ಪಕ್ಷವೂ ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಬದ್ಧತೆ ತೋರಿದ್ದಿಲ್ಲ

ಕನಸಿನ ಭಾರತವನ್ನು ಕಟ್ಟಿಕೊಡುತ್ತೇವೆ ಎನ್ನುತ್ತ ರಾಜಕಾರಣಿಗಳು ರಹಸ್ಯವಾಗಿ ನಿರ್ದಿಷ್ಟ ದಾಳಿ ನಡೆಸುತ್ತಾರೆ. ಈ ಸಂದರ್ಭದಲ್ಲಿ ಬಡವರು ಮತ್ತು ದನಿ ಇಲ್ಲದವರು ಅನುಭವಿಸುವ ಕಷ್ಟಗಳನ್ನು ‘ಸಹಜ ನಷ್ಟ’ ಎಂದುಬಿಡಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ರೈತರಿಗೆ ಬೆಳೆಗೆ ಉಣಿಸಲು ನೀರೇ ಇಲ್ಲದ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ₹ 1,800 ಕೋಟಿ ವೆಚ್ಚದಲ್ಲಿ ಉಕ್ಕಿನ ಸೇತುವೆ ಯೋಜನೆ ರೂಪಿಸಲಾಯಿತು. ಉತ್ತರದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಅರ್ಧ ಬೆಳೆದಿರುವ ಜೋಳದ ಬೆಳೆ ನೀರಿಲ್ಲದೆ ಒಣಗಿ ನಿಂತಿದೆ. ಈರುಳ್ಳಿ ಬೆಲೆ ಕಟಾವಿಗೆ ಆಗುವ ಖರ್ಚಿಗಿಂತಲೂ ಕಡಿಮೆಯಾಗಿದೆ. 4–5 ಎಕರೆ ಜಮೀನನ್ನು ತೊರೆದು ನೂರಾರು ಕುಟುಂಬಗಳು ದಿನಗೂಲಿಗೆ ಬೆಂಗಳೂರಿಗೆ ವಲಸೆ ಹೋಗುತ್ತಿವೆ.

ಅವರಿಗೆ ದಿನಕ್ಕೆ ₹ 300 ಕೂಲಿಯ ಭರವಸೆ ನೀಡಲಾಗಿದೆ. ಇದಾಗಿದ್ದು ಕಳೆದ ತಿಂಗಳಲ್ಲಿ. ಈಗ ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದಾದ ನಂತರ, ಅಸಂಘಟಿತ ವಲಯದ ಮೇಲೆ ಭಾರಿ ಏಟು ಬಿದ್ದಿದೆ. ದಿನಗೂಲಿ ನೌಕರರಿಗೆ ಎಲ್ಲಿಗೆ ಹೋಗಬೇಕು ಎಂಬುದು ಗೊತ್ತಾಗುತ್ತಿಲ್ಲ. ಈ ಸಮಸ್ಯೆಯ ನಿವಾರಣೆಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತಿಲ್ಲ. ಸಮಸ್ಯೆ ನಿವಾರಿಸುವ ಸ್ಥಿತಿಯಲ್ಲಿ ಪಂಚಾಯತ್‌ಗಳು ಇಲ್ಲ.

ಹಳ್ಳಿಗಳಿಂದ ನಗರಗಳ ಕಡೆ ಜನ ವಲಸೆ ಹೋಗುತ್ತಿರುವುದು ಅಪಾಯಕಾರಿ ಮಟ್ಟ ತಲುಪಿದೆ ಎಂಬುದನ್ನು ಈಚಿನ ಜನಗಣತಿ ತೋರಿಸಿಕೊಟ್ಟಿದೆ. ನಗರ ಪ್ರದೇಶಗಳಲ್ಲಿ ಮೂಲಸೌಕರ್ಯಗಳು ತೀರಾ ಕಡಿಮೆ ಪ್ರಮಾಣದಲ್ಲಿವೆ. ನೀರು, ಸ್ವಚ್ಛತೆ, ವಸತಿ, ಉದ್ಯೋಗ ಮತ್ತು ಈಗ ನಗದು ಹಣ ಕೂಡ ಸೂಕ್ತ ಪ್ರಮಾಣದಲ್ಲಿ ಸಿಗುತ್ತಿಲ್ಲ. ಪ್ರತಿಭಟನೆ ತೀವ್ರಗೊಳ್ಳಲು ಇನ್ನೊಂದೇ ಹೆಜ್ಜೆ ಬಾಕಿ ಇದೆಯೇನೋ ಎಂಬಂತಿದೆ ಪರಿಸ್ಥಿತಿ. ನಾಗರಿಕ ಅಸಹಕಾರವೂ ದೊಡ್ಡ ಪ್ರಮಾಣದಲ್ಲಿ ನಡೆದೀತು.

ಬಂದೇ ಬರುತ್ತದೆ ಬದಲಾವಣೆ
ಆದರೆ, ಬದಲಾವಣೆ ಬಂದೇ ಬರುತ್ತದೆ. ನಜೀರ್ ಸಾಬ್ ಅವರ ‘ಹಳ್ಳಿಯಿಂದ ದಿಲ್ಲಿಗೆ’ ಹೇಳಿಕೆ ಉಲ್ಲೇಖಿಸಿ ಹೇಳುವುದಾದರೆ, ಪ್ರಜಾತಂತ್ರದ ಬಲವರ್ಧನೆಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲೇಬೇಕು.

ಇದು ತಳಹಂತದ ಕ್ರಾಂತಿಯಿಂದ ಆಗುತ್ತದೆ. ಜನ ತಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಬೇಡಿ ಎನ್ನುತ್ತಾರೆ. ಆಗ ಗ್ರಾಮ ಸ್ವರಾಜ್ಯ ಕಾಯ್ದೆಯು ಮಾರ್ಗದರ್ಶಕನ ರೀತಿ ಕೆಲಸ ಮಾಡುತ್ತದೆ.

ಆದಾದ ಅಂದಾಜು 20 ವರ್ಷಗಳ ನಂತರ ವಲಸೆಯ ಪಥ ಬದಲಾಗುತ್ತದೆ. ನಗರವಾಸಿಗಳು ತಮ್ಮ ಸುಂದರ, ಆರೋಗ್ಯಕರ ಹಳ್ಳಿಗಳಿಗೆ ಮರಳುತ್ತಾರೆ.
ಹಾಗಾದಾಗ, ಕರ್ನಾಟಕಕ್ಕೆ 100 ವರ್ಷಗಳು ತುಂಬುವ ಹೊತ್ತಿನಲ್ಲಿ ಬೇರೆ ರಾಜ್ಯಗಳಿಗೂ ಅನುಕರಣೀಯ ಎಂಬ ಮಾದರಿ ಇಲ್ಲಿ ರೂಪುಗೊಂಡಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.