ಸುತ್ತಲೂ ತುಂಬಿರುವ ವನರಾಶಿಗಳ ನಡುವಿರುವ ವಿಹಂಗಮ ದಾರಿಯಲ್ಲಿ ಸಾಗುತ್ತಿದ್ದರೆ ‘ಆನಂದಮಯ ಈ ಜಗಹೃದಯ...’ ಎನ್ನುವ ಸೊಲ್ಲು ಮನಪಟದಲ್ಲಿ ಹಾದು ಹೋಗುತ್ತದೆ.
ದೂರದೂರದವರೆಗೆ ಹಸಿರಿನಿಂದ ಹೊದ್ದು ಮಲಗಿರುವ ಬೆಟ್ಟವನ್ನು ನೋಡಿದಾಗ ಚಾರಣದ ಆಸೆಯಾಗುತ್ತದೆ, ಒಮ್ಮೆಯಾದರೂ ಆ ಬೆಟ್ಟ ಹತ್ತಿ ಅದನ್ನು ಮುಟ್ಟಿ ಬರಬೇಕು ಎಂಬ ಬಯಕೆ ಉಂಟಾಗುತ್ತದೆ.
ಇದೇ ಕುಂದಾದ್ರಿ ಬೆಟ್ಟ. ಮಲೆನಾಡಿನ ಮಳೆಯ ಸೂರು ಆಗುಂಬೆಯ ಸೌಂದರ್ಯದ ಮರೆಯಲ್ಲಿ ಎದೆ ಸೆಟೆದು ನಿಂತ ಚೆಂದುಳ್ಳಿ ಕುಂದಾದ್ರಿ ದಿಗಿಲು ಹುಟ್ಟಿಸುವ ನೆತ್ತಿಯ ಮೇಲಿನ ಮೋಡಗಳನ್ನು ಬೊಗಸೆಯಲ್ಲಿ ತುಂಬಿಕೊಳ್ಳುವ ಭೂರಮೆಯ ಸ್ವರ್ಗ ತಾಣ.
ಜೈನರ ಪವಿತ್ರ ಸ್ಥಳ
ಕುಂದಾದ್ರಿ ಬೆಟ್ಟದಲ್ಲಿರುವ ಕುಂದಾದ್ರಿ ದೇವಸ್ಥಾನ ಜೈನರ ಪೂಜನೀಯ ತಾಣ. ಜೈನ ಮುನಿ ಕುಂದ ಕುಂದಾಚಾರ್ಯರು ಹಿಂದೆ ಇಲ್ಲಿ ನೆಲೆಸಿದ್ದರಿಂದ ಈ ಸ್ಥಳಕ್ಕೆ ಪವಿತ್ರತೆ ಒದಗಿದೆ. ಈ ಬೆಟ್ಟದ ಮೇಲಿರುವ ಪಾರ್ಶ್ವನಾಥ ಮೂರ್ತಿ ಜೈನರ ಮೂಲ ಶಕ್ತಿ. ಜನವರಿಯಲ್ಲಿ ಇಲ್ಲಿ ಸಂಭ್ರಮದ ಜಾತ್ರೆ ನವಿರೇಳುತ್ತದೆ. ಹೊಂಬುಜ ಜೈನ ಮಠದ ಆಶ್ರಯದಲ್ಲಿ ನಿರ್ಮಾಣಗೊಂಡ ಈ ಬಸದಿ ಧಾರ್ಮಿಕ ಸ್ಥಳಕ್ಕಿಂತ ಪಾಕೃತಿಕ ಸೌಂದರ್ಯದ ಆಡೊಂಬೋಲವಾಗಿಯೇ ಮೆರೆದದ್ದು ಜಾಸ್ತಿ. ಕುಂದಾದ್ರಿ ಎಂದರೆ ಆಸ್ತಿಕರಿಗೆ ಭಕ್ತಿಯ ಪರಿಮಳ, ನಾಸ್ತಿಕರಿಗೆ ಪಚ್ಚೆ ಚೆಲುವಿನ ರಸಕವಳ. ಏಕಾಂತವೆಂದರೆ ನನಗಿಷ್ಟ ಎಂದು ಮೌನದಲ್ಲೇ ಕಳೆದುಹೋಗುವ ಮಂದಿಗೆ ಇದೊಂದು ಧ್ಯಾನಸ್ಥ ಪೀಠ. ಒಟ್ಟಾರೆ ಸಹಜ ಪ್ರಶಾಂತ ಮೌನದಲ್ಲೇ ಏನನ್ನೋ ಕಲಿಸಿಕೊಡುವ ಕುಂದಾದ್ರಿ ಏಕಾಂತವಾಸಿಗಳಿಗೆ ಹೇಳಿ ಮಾಡಿಸಿದ ತಂಗುದಾಣ.
ಬೆಟ್ಟದ ತುದಿಯಲ್ಲಿ...
ಆಗುಂಬೆಯ ಪೇಟೆಯಿಂದ ಸುಮಾರು 14 ಕಿ.ಮೀ ದೂರವಿರುವ ಕುಂದಾದ್ರಿ ಬೆಟ್ಟದ ಸುತ್ತಿ ಬಳಸಿದ ಹಸಿರ ಹಾದಿ ಹಿಡಿದು, ಸವೆದ ಹೆಜ್ಜೆ ಹೆಜ್ಜೆಯೂ ಅನೂಹ್ಯ. ದಾರಿ ಸಾಗುತ್ತಲೇ ಇದ್ದ ಹಾಗೇ ಎತ್ತರೆತ್ತರಕ್ಕೆ ಇನ್ನೂ ಹತ್ತಿರವಾದಂತೆನ್ನಿಸುತ್ತದೆ. ಅಂತೂ ಹಾವಿನಂತ ರಸ್ತೆ ದಾಟಿ ಕುಂದಾದ್ರಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆಯೇ, ತಣ್ಣನೆಯ ತಂಗಾಳಿಗೆ ಮೈ ಗೆಜ್ಜೆ ಕಟ್ಟಿ ಕುಣಿದೀತು. ಮಲೆನಾಡಿನ ಪ್ರೇಕ್ಷಣೀಯ ಸ್ಥಳಗಳ ಪೈಕಿ ಕುಂದಾದ್ರಿಗೂ ಅದರದ್ದೇ ಗತ್ತಿರುವುದರಿಂದ, ಈ ಬೆಟ್ಟಕ್ಕೆ ಸೈಕಲ್ ತುಳಿದೇ ಹೋಗಬೇಕು ಅನ್ನುವ ಹುಚ್ಚಿನಲ್ಲೇ ಪೆಡಲ್ ತುಳಿದು ನಿಟ್ಟುಸಿರು ಬಿಡುವವರು ಬರುತ್ತಾರೆ. ‘ಕಾಲ್ನಡಿಗೆಯಲ್ಲೇ ಬೆಟ್ಟವೇರುವ ಬಾರಾ...’ ಎಂದು ಹುಮ್ಮಸ್ಸಿನಿಂದ ಜೀಕುತ್ತಾ ಬೆಟ್ಟದ ಜೋಕಾಲಿಗಳಾಗುವವರೂ ಆಗೊಮ್ಮೆ ಈಗೊಮ್ಮೆ ಇಲ್ಲಿ ಬರುವುದುಂಟು. ಕುಂದಾದ್ರಿ ಬೆಟ್ಟದ ತುದಿ ತಲುಪುತ್ತಿದ್ದಂತೆಯೇ ಮಲೆನಾಡಿನ ಹಸಿರ ಸಿರಿ ಮೈಯೇರಿ ಬರುತ್ತದೆ. ದೂರದಿಂದ ಕಾಣುವ ವನರಾಶಿಗಳ ಸ್ನಿಗ್ಧ ಸೌಂದರ್ಯಕ್ಕೆ ಕಣ್ಣು ಕ್ಯಾಮೆರಾವಾಗುವ ಖುಷಿಯೇ ಅನನ್ಯ. ಬೆಳಿಗ್ಗೆ ಬಂದರೆ ಮಂಜಿನ ನಗರಿ, ಸಂಜೆಗೆ ಬಂದರೆ ಬಾನೆಲ್ಲಾ ಕೆಂಪಾಗಿ ಕಿತ್ತಳೆ ಮರಿ. ಕುಂದಾದ್ರಿ ಸೂರ್ಯೋದಯ ಬಣ್ಣಿಸುವುದಕ್ಕಿಂತಲೂ ಸ್ವತಃ ಬಂದು ಕಣ್ತುಂಬಿಕೊಂಡರೇನೇ ಚೆಂದ.
‘ಮೂಡಾಣ ಬೈಲಿಂದ ಮೇಲಕ್ಕೆ ಹಾರಿ... ದೂರಾದ ಮಲೆಯ ತಲೆಯನೇ ಏರಿ... ನೇಸಾರಾ ನೋಡು ನೇಸರ ನೋಡು...’ ಎನ್ನುವ ಹಾಡಿಗೆ ಅರ್ಥ ಬರುವುದು ಕುಂದಾದ್ರಿಯಲ್ಲಿ ಸೂರ್ಯೋದಯ ನೋಡುತ್ತಿದ್ದಾಗ. ಬೆಟ್ಟದ ತುದಿಯಲ್ಲಿ ಕೂತು ಆ ಕೆಂಬಣ್ಣದ ಕ್ಷಣಕ್ಕೆಂದೇ ಕಾದು ಕೂರುವ ಮಂದಿಗಳಿಗೆ ಕುಂದಾದ್ರಿ ಬಿಟ್ಟೆನೆಂದರೂ ಬಿಡದ ಮಾಯೆ. ಕುಂದಾದ್ರಿ ದೇವಸ್ಥಾನದ ಆಚೆಗಿರುವ ಸ್ವಚ್ಛಂದ ಕೆರೆಗೆ ವರ್ಷದ 365 ದಿನವೂ ತುಂಬು ಯೌವನ. ಆ ನೀರಿನಲ್ಲೇ ಬದುಕು ಸವೆಸುವ ವಿಚಿತ್ರ ಮೀನನ್ನು ನೋಡುವ ಖುಷಿಯೇ ಅನಂತ. ಅದಕ್ಕೆ ಹಿನ್ನೆಲೆಯಾಗಿ ಕಾಣುವ ಪಶ್ಚಿಮ ಘಟ್ಟದ ಸೊಬಗು ನಯನ ಮನೋಹರ. ಇಲ್ಲಿ ಯಾವ ನೋಟಗಳಿಂದ ನೋಡಿದರೂ ಕಾಣುವುದು ಅಪ್ಪಟ ಚೆಲುವೇ. ಈ ವಿಹಂಗಮ ಸೌಂದರ್ಯವೇ ಕನ್ನಡ ಸೇರಿದಂತೆ ಹಿಂದಿ ಸಿನಿಮಾದಲ್ಲೂ ಮೇಳೈಸಿದೆ.
ಹಾಂ! ಬೆಟ್ಟ ತುಂಬಾ ಚೆನ್ನಾಗಿದೆ ಅಂತ ಮೈ ಮರೆತರೆ ಜಾರಿ ಬಿದ್ದು ಜೀವಕ್ಕೆ ಸಂಚಕಾರ ಒದಗುವುದು ಗ್ಯಾರೆಂಟಿ. ಕೆಲವೊಮ್ಮೆ, ಯಾವುದೇ ಆರೈಕೆಯಿಲ್ಲದೇ ಬಡವಾಗುತ್ತಿರುವ ಈ ತಾಣದ ಬಗ್ಗೆ ಸಣ್ಣಗಿನ ಬೇಸರ ಹುಟ್ಟುವುದೂ ಸಹಜವೇ. ಆದರೂ ಸುಮ್ಮನೆ ಬೆಟ್ಟದ ತುದಿಯಲ್ಲಿ ದೊರೆಯುವ ಅನುಪಮ ಆನಂದವನ್ನು, ವಿಹಂಗಮ ನೋಟಗಳನ್ನು ಕಣ್ಣ ತುಂಬಾ ಬೇಟೆಯಾಡುತ್ತಾ, ಮಲೆನಾಡಿನ ಸಹಜ ಸೌಂದರ್ಯವನ್ನು ತುಂಬಿಕೊಳ್ಳುವುದೇ ಆನಂದ ಪರಮಾನಂದ ಎನ್ನುವವರು ಕುಂದಾದ್ರಿಗೊಮ್ಮೆ ಏರಿ ಬನ್ನಿ ಅಷ್ಟೆ.
ಹೋಗೋದು ಹೇಗೆ?
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಿಂದ ಸುಮಾರು 15 ಕಿ.ಮೀ ದೂರವಿರುವ ಕುಂದಾದ್ರಿಯನ್ನು ಗುಡ್ಡಕೇರಿ ಅನ್ನೋ ಪುಟ್ಟ ಊರನ್ನು ದಾಟಿ ಹೋಗಬೇಕು. ಬೆಟ್ಟಕ್ಕೆ ಸ್ವಂತ ಗಾಡಿ ಮಾಡಿ ಹೋಗಬಹುದು, ಟ್ಯಾಕ್ಸಿ ಕಾರುಗಳಲ್ಲೂ ಬೆಟ್ಟದ ದಾರಿ ಏರಬಹುದಾದರೂ, ಬೈಕ್‌ನಲ್ಲಿ ಏರಿ ಹೋಗುವ ಮಜಾವೇ ಬೇರೆ, ಹಾಗೇ ನಡೆಯುತ್ತಾ ಹೋದರೂ ಸಿಗುವ ಚೈತನ್ಯ ಅಗಾಧ. ಕಾಡಿನ ದಾರಿಯಾದ್ದರಿಂದ ಬೆಳಗಾತ ಹೊರಟು ಸಾಯಂಕಾಲದ ಒಳಗೆ ವಾಪಾಸಾದರೆ ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.