1979ರ ಸುಮಾರಿಗೆ ನನ್ನ ಪ್ರಾಕೃತಿಕ ಶೋಧಗಳ ಸಾಲಿನಲ್ಲಿ ಆಕಸ್ಮಿಕವಾಗಿ ಜಾಂಬ್ರಿಯ ಗುಹೆಯನ್ನೂ ನಾನು ಮನುಷ್ಯಮಿತಿಯಲ್ಲಿ ಪೂರ್ಣ ಹೊಕ್ಕು ಹೊರಟವ. ಈ ವಲಯದ ಮೂವತ್ತಕ್ಕೂ ಮಿಕ್ಕು ಇಂಥವೇ ಮುರಕಲ್ಲ ಹಾಸಿನ ಸಹಜ ಪೊಳ್ಳುಗಳನ್ನು ನೋಡಿದ ಅನುಭವದಲ್ಲಿ ಜಾಂಬ್ರಿಗೆ ಯಾವ ಮಹತ್ವವೂ ಇಲ್ಲ. ಇದನ್ನು 1981ರ ಸಾಂಪ್ರದಾಯಿಕ ಗುಹಾಪ್ರವೇಶದ ವೇಳೆ ನಾನು ಅನಿವಾರ್ಯವಾಗಿ ಪತ್ರಿಕಾ ಲೇಖನವಾಗಿಯೂ ಬರೆದಿದ್ದೆ. (ಅದನ್ನು ನನ್ನ ಜಾಲತಾಣದಲ್ಲಿ ಪರಿಷ್ಕರಿಸಿ ಹೀಗೆ ಪ್ರಕಟಿಸಿದ್ದೇನೆ, ನೋಡಿ: bit.ly/2rvymAC) ಸಾರಾಂಶ ಇಷ್ಟೇ:
ನಾನು ಆರು ಜನರ ತಂಡ ಕಟ್ಟಿದೆ. ವಿಷವಾಯು ಪರೀಕ್ಷೆಗೆ ದೀಪ, ಆಪತ್ತಿನಲ್ಲಿ ಹೊರಗೆಳೆಯಲು ಹಗ್ಗ, ಕತ್ತಲು ಬಿರಿಸಲು ಟಾರ್ಚು, ಹರಿವ ಜಂತುಗಳಿಂದ ರಕ್ಷಿಸಿಕೊಳ್ಳಲು ಮಣಿಗಂಟು ಮುಚ್ಚುವ ಬೂಟು, ಗಾಬರಿಯಿಂದ ಆಕ್ರಮಣ ಎಸಗಬಹುದಾದ ಪುಟ್ಟ ಪ್ರಾಣಿಗಳನ್ನು ವಿರೋಧಿಸಲು ಕತ್ತಿ, ದೊಣ್ಣೆಗಳಿಂದ ಸಜ್ಜಾಗಿದ್ದೆವು. ಮುರಕಲ್ಲಿನ ಮಂಡೆಯಿರುವ ಗುಡ್ಡೆಯ ಮೇಲ್ಬದಿಯಲ್ಲಿ ಒಂದು ಸಣ್ಣ ತಗ್ಗಿನಲ್ಲಿರುವ ಹರಕು ಪೊಳ್ಳು ಸ್ವಯಂ ಭೂಗುಹೆ. ಗುಹೆಯ ಒಳಗಿನಿಂದ ಒಂದು ಗಟ್ಟಿ ಗಿಡ ಹೊರಗೆ ತಲೆ ಚಾಚಿದೆ. ಅದನ್ನು ಆಧರಿಸಿಯೋ ಗುಹೆಯ ಅಂಚಿನಲ್ಲಿ ಕೈತೊಡಗಿಸಿಯೋ ಒಳಕ್ಕೆ ದೇಹ ನೇತುಬಿಟ್ಟು ಹಾರಿದೆವು.
ಸುಮಾರು ಏಳೆಂಟಡಿ ಆಳದ ಪ್ರವೇಶ. ಸುತ್ತ ಕತ್ತಲ ಮಾಟೆ. ಜಿಗುಟು ಮಣ್ಣಿನ ನೆಲ. ಮುರಕಲ್ಲಿನ ಒರಟು ಚಪ್ಪರ ನೀರು ಸತತ ನೀರು ಜಿನುಗಿಸಿ ಮುಳ್ಳು ಮುಳ್ಳಾಗಿತ್ತು. ಸ್ವಲ್ಪ ಬದಿಗೆ ಸರಿದು ಕಣ್ಣು ಕತ್ತಲಿಗೆ ಹೊಂದಿದ ಮೇಲೆ ಟಾರ್ಚು ಉರಿಸಿದೆವು. ಪ್ರವೇಶದಿಂದ ಹತ್ತಿಪ್ಪತ್ತಡಿ ಅಂತರದಲ್ಲಿ ಎಲ್ಲ ದಿಕ್ಕಿಗೂ ಗುಹೆಯ ಚಪ್ಪರ ನೆಲದೊಡನೆ ಸ್ವಾಭಾವಿಕವಾಗಿ ಸೇರಿದಂತಿತ್ತು. ಒಂದು ಮೂಲೆಯಲ್ಲಿ ಮಾತ್ರ ಸ್ವಲ್ಪ ಇಳಿಜಾರು. ಅಲ್ಲಿ ಕುಳಿತು ಅಂಡೆಳೆಯುವಷ್ಟೇ ಅವಕಾಶ.
ನೀರಪಸೆ, ನುಸುಲು ಮಣ್ಣು ದಾಟಿದರೆ ಮೂಲೆಯಲ್ಲಿ ದೊಡ್ಡ (ಮುರಕಲ್ಲ) ಬಂಡೆ ಗುಂಡುಗಳ ಸಡಿಲ ಒಟ್ಟಣೆ. ಎಲ್ಲ ಅಸ್ಥಿರ, ಹುಶಾರು ತಪ್ಪಿದರೆ ಜೀವಂತ ಸಮಾಧಿ. (ಇಂದಿನ ಅರಿವಿನಲ್ಲಿ ಸೇರಿಸಬಹುದಾದ್ದು, ಹೊರಗಿನ ಲೋಕಕ್ಕೆ ಜಾಂಬ್ರಿ ಮಹಾತ್ಮೆಗೆ ಹೊಸತೊಂದು ಸೇರ್ಪಡೆ) ಆ ಗುಂಡುಗಳ ಸಂದಿನಲ್ಲಿ ಹತ್ತಡಿ ಆಳಕ್ಕಿಳಿದರೆ ಮತ್ತೊಂದು ಹಂತದ ನೆಲ.
ಅದು ಮುಂದುವರಿಯುತ್ತ ಸುಮಾರು ಏಳಡಿ ಎತ್ತರ ಎರಡಡಿ ಅಗಲದ ಓಣಿಯಂತಿತ್ತು. ಕೊನೆಯಲ್ಲಿ ಅದು ವಿಸ್ತಾರವಾಯ್ತು. ಅಲ್ಲಿ ಮತ್ತೆ ಕೆಲವು ಪುಡಿ ಬಂಡೆಗಳು, ಎಡೆಯಲ್ಲಿ ಮತ್ತೂ ಆಳಕ್ಕಿಳಿದ ಮಾಟೆ. ಕೆಳಗಿನ ನೆಲ ಮೂರಡಿ ಅಂತರದಲ್ಲೇ ಕಾಣುತ್ತದಾದರೂ ನುಗ್ಗುವುದು ಕಷ್ಟ. ಹಾಗಾಗಿ ಮಾಟೆಯ ಅಂಚಿನಲ್ಲಿ ಮೈಚಾಚಿ ತಲೆ ಒಳಕ್ಕೆ ಸರಿಸಿ ಹಣಿಕಿದೆವು. ಪುಟ್ಟ ಜಾಗ, ಮೂಲೆಯ ಗೋಡೆಯಲ್ಲಿ ತೋಳ್ದಪ್ಪದ ನೀರ ತೂಂಬು ಅಷ್ಟೆ.
ಪ್ರವೇಶದ ಬಳಿ ನೆಲದಲ್ಲಿ ಹೊರಗಿನಿಂದ ಭಕ್ತಾದಿಗಳು ಎಸೆದ ಚಿಲ್ಲರೆ ಕಾಸು ಬಿದ್ದಿದ್ದವು. ಎರಡನೇ ಹಂತದಲ್ಲಿ ಕೆಲವು ಹಣತೆಗಳು ಇದ್ದವು. ಎಲ್ಲ ಹಂತಗಳ ಮೂಲೆಗಳಲ್ಲೂ ಮಳೆಗಾಲದ ನೀರು ತಂದು ಪೇರಿಸಿದ ಕಸ ಕಡ್ಡಿ, ಪ್ರಾಣಿ ಅವಶೇಷ ಯಥೇಚ್ಛ. ಇಷ್ಟು ನೋಡಿ ಬರಲು ನಿಧಾನದಲ್ಲೂ ಮುಕ್ಕಾಲು ಗಂಟೆ ಸಾಕಾಯ್ತು. ನೇರ ಆಳದಲ್ಲಿ ಸುಮಾರು ನಲ್ವತ್ತಡಿ ಮಾತ್ರ ಸ್ವಯಂಭೂ.
ಶಂಖಪಾಲ/ಸಂಕವಾಳ ಕಾಳಿಂಗಸರ್ಪದ ಪರ್ಯಾಯ ಹೆಸರುಗಳು. ಧಾರಾಳ ನೀರು, ದಟ್ಟ ಕಾಡು ಬಯಸುವ ಕಾಳಿಂಗ ಇಲ್ಲಿ ಹಿಂದೆಲ್ಲೋ ಸುಳಿದದ್ದಿರಬಹುದು, ನೆಲೆ ನಿಂತಿರುವುದು ಸುಳ್ಳು. ಬಿಳಿಯಾಮೆ, ಚಿನ್ನದ ಒಂಟಿಯ ಮೀನು ಇತ್ಯಾದಿ ‘ಸಾಕ್ಷಿ’ಗಳು, ಅಸಂಖ್ಯ ಐತಿಹ್ಯಗಳು ಗುಹಾಪ್ರವೇಶವೆಂಬ ಆಚರಣೆಯ ಮೂಲಕ ಎಲ್ಲ ಜೀವಗಳ ಪ್ರಾಕೃತಿಕ ಮೂಲವನ್ನು ಸಂಕೇತಿಸುವುದಿರಬಹುದು. ಜಾತ್ರೆಯ ಮರುಳಿನಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ‘ಮಂತ್ರ’ಕ್ಕಿಂತ ಹೆಚ್ಚಿಗೆ ‘ಉಗುಳಿಗೆ’ ಮುಗಿಬೀಳುತ್ತಿರುವವರು (ಇದರಲ್ಲಿ ಮಾಧ್ಯಮಗಳ ಕೊಡುಗೆ ತುಂಬಾ ದೊಡ್ಡದು!) ಹೆಚ್ಚಾಗುತ್ತಿರುವುದು ಶೋಚನೀಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.