ಅದೊಂದು ಪಶ್ಚಿಮ ಘಟ್ಟದ ಸಾಲಿನ ಅಭೇದ್ಯ ದುರ್ಗಮ ಕಾಡು. ಆ ಕಾಡಿನ ನಡುವೆ ಕರಿಕಾನ ಹೆಸರಿನ ಬೆಟ್ಟ. ಸಮುದ್ರಮಟ್ಟದಿಂದ ಸುಮಾರು 800 ಅಡಿ ಎತ್ತರದ ಈ ಬೆಟ್ಟದ ಶೃಂಗ ಸ್ಥಳದಲ್ಲಿ ನೆಲೆಸಿದ್ದಾಳೆ ಶ್ರೀಮಾತೆ ಪರಮೇಶ್ವರಿ.
ಈ ಒಂದು ರುದ್ರರಮಣೀಯ ದೃಶ್ಯ ಇರುವುದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಿಂದ ಸುಮಾರು 12 ಕಿ. ಮೀ. ದೂರದಲ್ಲಿ. ಹೊನ್ನಾವರದಿಂದ ಸುಮಾರು 7 ಕಿ. ಮೀ. ದೂರದ ಅರೇಅಂಗಡಿ ಗ್ರಾಮದಲ್ಲಿ ದೇಗುಲದ ಮಹಾದ್ವಾರವಿದ್ದು ಅಲ್ಲಿಂದ 5 ಕಿ. ಮೀ. ದೂರ ಘಟ್ಟ ಪ್ರದೇಶದ ಬೆಟ್ಟದ ತುದಿಗೆ ಈ ಸುಂದರ ದೇಗಲುವಿದೆ. ನಿತ್ಯ ಕುಂಕುಮಾರ್ಚನೆ, ಅರಿಶಿನ ಲೇಪನ, ದುರ್ಗಾ ಸಪ್ತಶತಿ ಪಾರಾಯಣ ಈ ದೇವಿಯ ವಿಶೇಷ. ಕೇಳಿದ್ದನ್ನು ನೀಡುವಾಕೆ ಎಂದೇ ಜನಜನಿತರಾಗಿರುವ ಈಕೆಗೆ ಬಳೆ, ಅರಿಶಿನ ಪುಡಿ, ಅರಿಶಿನ ಕೊಂಬು, ಕುಂಕುಮ, ಪಟ್ಟೆ- ಪೀತಾಂಬರದ ಸೀರೆ, ರವಿಕೆ ಪೀಸು , ಹಾಲು, ಬೆಣ್ಣೆ, ತುಪ್ಪ ಹಾಗೂ ಆಕಳ ಕರುಗಳ ಹರಕೆಯ ಮಹಾಪೂರವೇ ಹರಿದು ಬರುತ್ತದೆ.
ಪ್ರತಿ ವರ್ಷ ದೀಪಾವಳಿ ಮರುದಿನ ನೀಲಕೋಡು ಮತ್ತು ವಂದೂರು ಗ್ರಾಮಸ್ಥರು, ಫೆಬ್ರುವರಿ ಎರಡನೇ ವಾರದ ಶುಕ್ರವಾರದಂದು ಸಾಲಕೋಡು ಹಾಗೂ ಹೊಸಾಕುಳಿ ಗ್ರಾಮಸ್ಥರು ದೇವಿ ಆರಾಧನೆಯ ದೇವಕಾರ್ಯ ನಡೆಸುತ್ತಾರೆ. ದೇವಾಲಯ ನಿರ್ಮಾಣಕ್ಕೆ ಭಗವಾನ್ ಶ್ರೀಧರ ಸ್ವಾಮಿಗಳು ಸಂಕಲ್ಪ ಮಾಡಿದ ನೆನಪಿಗಾಗಿ ಪ್ರತಿ ವರ್ಷ ಅಕ್ಷಯ ತದಿಗೆಯಂದು ವಿಶೇಷಪೂಜೆ ನಡೆಸಲಾಗುತ್ತದೆ.
ಅದೇ ಕಾರಣಕ್ಕೆ ವಿವಿಧ ಭಾಗಗಳಿಂದ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗುತ್ತದೆ. ಬೇರೆಯ ದಿನಗಳಲ್ಲಿ ದೇಗುಲ ತಲುಪಲು ಬಸ್ ಸೌಕರ್ಯವಿಲ್ಲದ ಕಾರಣ ಅರೇಅಂಗಡಿ ವೃತ್ತದಿಂದ ಖಾಸಗಿ ವಾಹನ ಅಥವಾ ಕಾಲ್ನಡಿಗೆ ಮೂಲಕ ಜನ ಸಾಗಿ ಬರಬೇಕು.
ಕುತೂಹಲ ಚರಿತ್ರೆ
ಈ ದೇವಿಯ ಚರಿತ್ರೆ ಕೂಡ ಅಷ್ಟೇ ಕುತೂಹಲ. ಹೊನ್ನಾವರದಿಂದ 2 ಕಿ. ಮೀ. ದೂರದಲ್ಲಿರುವ ಅರಬ್ಬೀಸಮುದ್ರದ ಬಸವರಾಜ ದ್ವೀಪದಲ್ಲಿ ಈಕೆಯ ದೇಗುಲವಿತ್ತು. ಪರಕೀಯರ ದಾಳಿಯಿಂದ ಹಿಂದೂ ಧರ್ಮವನ್ನು ಸಂರಕ್ಷಿಸುವ ಉದ್ದೇಶದಿಂದ ಪಶ್ಚಿಮ ಕರಾವಳಿ ಮಂಡಲಾಧೀಶ್ವರ ಅರಿಕೇಸರಿ ಬಸವರಾಜ ಈ ದ್ವೀಪದಲ್ಲಿ ಕೋಟೆ ಹಾಗೂ ಅರಮನೆ ನಿರ್ಮಿಸಿ ಆಡಳಿತ ನಡೆಸುತ್ತಿದ್ದ ಎನ್ನುವುದು ಇತಿಹಾಸ.
ಆಳರಸ ಬಸವರಾಜ ರಾಜಧಾನಿಯಾಗಿಸಿಕೊಂಡ ಕಾರಣ ಈ ದ್ವೀಪಕ್ಕೆ ಬಸವರಾಜ ಗುಡ್ಡವೆಂದು ಹೆಸರಾಯಿತು. ಈತ ಕೋಟೆ ಹಾಗೂ ಧರ್ಮ ಸಂರಕ್ಷಣೆಗೆ ಶ್ರೀಮೂಕಾಂಬಿಕೆಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆಗೆ ವ್ಯವಸ್ಥೆ ಮಾಡಿಸಿದನಂತೆ. ಆತನ ಮರಣಾನಂತರ ಆಳ್ವಿಕೆಗೆ ಬಂದ ಉತ್ತರಾಧಿಕಾರಿಗಳು ಧರ್ಮಬಾಹಿರರಾಗಿ ಹಲವು ವ್ಯಭಿಚಾರಗಳಲ್ಲಿ ತೊಡಗಿದ್ದರಿಂದ ದೇವಿ ಆ ಪ್ರದೇಶದಿಂದ ಹೊರ ಹೊರಟು ಪೂರ್ವಾಭಿಮುಖವಾಗಿ ಚಲಿಸುತ್ತಾ ಸಾಗಿದಳಂತೆ.
ಅದೇ ಸಂದರ್ಭದಲ್ಲಿ ಶಾಪಗ್ರಸ್ಥರಾದ ಯಕ್ಷ ಸಹೋದರರು `ಭಂಡಾಸುರ' ಮತ್ತು `ಮಲ್ಲಾಸುರ' ಎಂಬ ಹೆಸರುಗಳಿಂದ ರಾಕ್ಷಸರಾಗಿ ಜನಿಸಿ ಜನ ಪೀಡೆಯಲ್ಲಿ ತೊಡಗಿದ್ದರಂತೆ. ಸರ್ವಾಭರಣ ಸುಂದರಿಯಾದ ದೇವಿ ಈ ಮಾರ್ಗದಲ್ಲಿ ಬರುತ್ತಿರುವಾಗ ಅವಳನ್ನು ಮೋಹಿಸಲು ಯತ್ನಿಸಿದ. ದೇವಿ ಚಂಡಿಯಾಗಿ, ದುರ್ಗೆಯಾಗಿ ಕಾದಾಡಿ ಮಲ್ಲಾಸುರನ ರುಂಡ ಚೆಂಡಾಡಿದಳು, ಆ ಸ್ಥಳ `ಮಲ್ಲಾರಮಕ್ಕಿ' ಎಂದು ಹೆಸರಾಯಿತು. ಸಹೋದರನ ಹತ್ಯೆಯಿಂದ ಕುಪಿತನಾದ ಭಂಡಾಸುರ ಘೋರ ಕಾಳಕ್ಕೆ ಆಹ್ವಾನಿಸಿದಾಗ ಈಗಿನ ನೀಲಕೋಡು ಗ್ರಾಮದ ಬಳಿ ಆತನನ್ನು ವಧಿಸಿದಳು. ಆದುದರಿಂದ ಭಂಡಾರಮಕ್ಕಿ ಎಂದು ಹೆಸರಾಯಿತು.
ಮಂತ್ರಾಶಕ್ತಿಯಿಂದ ನೆಲೆಸಿದ ದೇವಿ
ಈ ಸ್ಥಳದಲ್ಲಿ ಹಲವು ಕಾಲ ನೆಲೆಸಿ ಭಕ್ತರ ಇಷ್ಟ ನೆರವೇರಿಸುತ್ತಿದ್ದಳು. ಆದರೆ ಸುತ್ತಲಿನ ಪರಿಸರದಲ್ಲಿ ಪ್ರಾಣಿವಧೆ, ಮೈಲಿಗೆ ಪೂಜೆಗಳು ನಡೆದು ಅಪವಿತ್ರತೆ ಉಂಟಾಯಿತೆಂದು ಕೋಪಗೊಂಡು ಎತ್ತರದ ಸಹ್ಯಾದ್ರಿ ಶ್ರೇಣಿಯ ತುದಿಗೆ ಈಗಿರುವ ಸ್ಥಳಕ್ಕೆ ಬಂದು ಬಂಡೆಗಲ್ಲಿನಲ್ಲಿ ನೆಲೆಸಿದಳಂತೆ. ನೀಲಕೋಡು ಗ್ರಾಮದ ಗುಬ್ಬಿಮನೆಯ ಕರು ಹಾಕಿದ ಕೌಲೆ ಹಸುವೊಂದು ಮೇಯಲು ಬಿಟ್ಟಾಗ ಬೆಟ್ಟದ ತುದಿಗೆ ಹೋಗಿ ದೇವಿ ಇರುವ ಬಂಡೆಗಲ್ಲಿಗೆ ಹಾಲು ಸುರಿಸಿ ಬರುತ್ತಿತ್ತಂತೆ. ಇದನ್ನು ಹಿಂಬಾಲಿಸಿ ವೀಕ್ಷಿಸಿದಾಗ ಅಚ್ಚರಿ ಮೂಡಿ ದೇವಿ ನೆಲೆಸಿರುವುದು ವೇದ್ಯವಾಯಿತು. ಈ ಸ್ಥಳದ ಎಲ್ಲಾ ಬಂಡೆಗಲ್ಲುಗಳು ದೇವಿಯ ಶಕ್ತಿಯಿಂದ ಕೂಡಿತ್ತು.
ವರದಾಪುರದ ಶ್ರೀಧರ ಸ್ವಾಮಿಗಳು ಪ್ರರಿವ್ರಾಜಕರಾಗಿ 1955ರಲ್ಲಿ ನೀಲಕೋಡಿಗೆ ಆಗಮಿಸಿದಾಗ ಈ ವಿಷಯ ತಿಳಿದು ಅಬೇಧ್ಯ ಕಾಡಿನಲ್ಲಿ ಕಾಲು ಹಾದಿ ನಿರ್ಮಿಸಿ ದೇವಿಯ ಸನ್ನಿಧಾನ ತಲುಪಿದರು. ಮಂತ್ರ ಶಕ್ತಿಯಿಂದ ನಿರ್ದಿಷ್ಟ ಶಿಲಾಬಂಡೆಯಲ್ಲಿ ದೇವಿ ಶಕ್ತಿಯಾಗಿ ನೆಲಸುವಂತೆ ಮಾಡಿ ಬಂಡೆಗಲ್ಲಿನ ಇಳಿಜಾರಿನ ಈ ಸ್ಥಳದಲ್ಲಿ ದೇಗುಲ, ಅರ್ಚಕರ ವಸತಿ ನಿಲಯ ಇತ್ಯಾದಿಗಳಿಗೆ ಅನುವು ಮಾಡಿಸಿದರು. ಈ ದೇವಾಲಯದ ಸುತ್ತ ಪ್ರದೇಶದ ಕಾಡಿನಲ್ಲಿ ಹುಲಿ, ಚಿರತೆ, ಕಾಳಿಂಗ ಸರ್ಪ ಇತ್ಯಾದಿ ಉಗ್ರ ಪ್ರಾಣಿಗಳಿದ್ದರೂ ಭಕ್ತರಿಗೆ ಯಾವುದೇ ಕೇಡು ಮಾಡಿಲ್ಲದಿರುವುದು ವಿಶೇಷವಾಗಿದೆ.
ಮುಂಭಾಗದಲ್ಲಿ ಹುಲಿರಾಯನ ಕಟ್ಟೆ, ಸರ್ಪ ಕಟ್ಟೆ ಹಾಗೂ ಸುಮಾರು 1 ಕಿ. ಮೀ. ದೂರದಲ್ಲಿ ವಂದಡಿಕೆ ಶಿವ ದೇವಾಲಯಗಳಿವೆ. ಚಾರಣಿಗರಿಗೆ ಪ್ರಕೃತಿ ರಮಣೀಯ ಸ್ಥಳವಾದ ಇದು ಆಸ್ತಿಕರಿಗೆ ಶ್ರದ್ಧಾ ಭಕ್ತಿಯ ನೆಲವಾಗಿದೆ. ಈ ದೇವಾಲಯದ ಮುಂಭಾಗದಿಂದ ಅರಬ್ಬೀಸಮುದ್ರ ಮತ್ತು ಹೊನ್ನಾವರ, ಕುಮಟಾ, ಭಟ್ಕಳ, ಮುರುಡೇಶ್ವರ, ಹಳದೀಪುರ, ಅಗ್ರಹಾರ, ಕರ್ಕಿ, ನವಿಲಗೋಣು, ಚಂದಾವರ , ಕೆಕ್ಕಾರು, ಸಾಲಕೋಡು , ಹೊಸಾಕುಳಿ, ಕವಲಕ್ಕಿ ಮುಂತಾದ ಗ್ರಾಮಗಳನ್ನು ವೀಕ್ಷಿಸಬಹುದು. ಮಾಹಿತಿಗೆ 9448482591.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.