ADVERTISEMENT

ದೌರ್ಜನ್ಯ ಮುಕ್ತ ಕನಸಿನ ರಾಜ್ಯಕ್ಕೆ ಅಡಿಪಾಯ ಬೇಕು

ಆರ್.ಇಂದಿರಾ
Published 24 ನವೆಂಬರ್ 2016, 5:03 IST
Last Updated 24 ನವೆಂಬರ್ 2016, 5:03 IST
ದೌರ್ಜನ್ಯ ಮುಕ್ತ ಕನಸಿನ ರಾಜ್ಯಕ್ಕೆ ಅಡಿಪಾಯ ಬೇಕು
ದೌರ್ಜನ್ಯ ಮುಕ್ತ ಕನಸಿನ ರಾಜ್ಯಕ್ಕೆ ಅಡಿಪಾಯ ಬೇಕು   

ಭಾರತದ ಸ್ವಾತಂತ್ರ ಸಂಗ್ರಾಮವಷ್ಟೇ ಅಲ್ಲ ಈ ನಾಡಿನ ಆತ್ಮಾಭಿಮಾನಕ್ಕೆ ಧಕ್ಕೆ ಬರುವಂಥ ಯಾವುದೇ ಸಂದರ್ಭ ಬಂದಾಗ ಮಹಿಳೆಯರು ಅದನ್ನೆದುರಿಸಲು ಯಾವುದೇ ಹಿಂಜರಿಕೆ ತೋರಲಿಲ್ಲ. ರಾಣಿ ಅಬ್ಬಕ್ಕ, ಕಿತ್ತೂರ ರಾಣಿ ಚನ್ನಮ್ಮ, ಒನಕೆ ಓಬವ್ವ ಮುಂತಾದ ಅನೇಕ ಸಾಹಸಿ ಮಹಿಳೆಯರು ಹಾಗೂ ಸಹಸ್ರಾರು ಅಗೋಚರ ಹೋರಾಟಗಾರ್ತಿಯರು ಕರ್ನಾಟಕದ ಕ್ರಾಂತಿ ಕಹಳೆಯನ್ನು ಮೊಳಗಿಸಿದ್ದಾರೆ, ಇತಿಹಾಸದ ಪುಟಗಳಲ್ಲಿ ಅಮರರಾಗಿದ್ದಾರೆ. ಆದರೆ ಇತಿಹಾಸದ ಗುಂಗಿನಲ್ಲೇ ನಾವು ಬದುಕಲು ಸಾಧ್ಯವಿಲ್ಲವಲ್ಲ. ರಾಜ್ಯದ ಮಹಿಳೆಯರು ಸಬಲರು, ಧ್ಯೆರ್ಯಶಾಲಿಗಳು ಎಂಬ ಹೆಮ್ಮೆ - ಹೆಗ್ಗಳಿಕೆ ಇದೆಯೇನೋ ನಿಜ. ಆದರೆ ಅವರ ಇಂದಿನ ಪರಿಸ್ಥಿತಿ ಹೇಗಿದೆ?

ಪ್ರಜಾಪ್ರಭುತ್ವದಲ್ಲಿ ಯಾವುದೇ ಗುಂಪಿನ ಸಾಮಾಜಿಕ - ಆರ್ಥಿಕ ಪರಿಸ್ಥಿತಿಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಅಗತ್ಯವಾದದ್ದು ನೀತಿಗಳು. ಅಂಥ ಲಿಂಗಸೂಕ್ಷ್ಮ ನೀತಿಗಳು ರಾಜ್ಯದಲ್ಲಿ ರೂಪಿತವಾಗಿವೆಯೇ, ಆಗಿದ್ದರೂ ಅನುಷ್ಠಾನವಾಗಿದೆಯೇ- ಇಂಥ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನ ಇಲ್ಲಿದೆ.

ಕರ್ನಾಟಕದ ಮಹಿಳೆಯರ ನಾಳೆಗಳ ಬಗ್ಗೆ ಚಿಂತಿಸುತ್ತಾ ಹೊರಟಾಗ ಕಾಳಜಿ ವಹಿಸಬೇಕಾದ ವಿಷಯಗಳಲ್ಲಿ ಮುಂದೆ ಬಂದು ನಿಲ್ಲುವಂತಹುದು ರಾಜ್ಯದ ಬದಲಾಗುತ್ತಿರುವ ಜನಸಂಖ್ಯಾ ರಚನೆ. ಒಂದಡೆ ಹೆಚ್ಚುತ್ತಿರುವ ಹಿರಿಯರು (60+ ವಯೋಗುಂಪಿಗೆ ಸೇರಿದವರು) ಮತ್ತೊಂದೆಡೆ ನಮ್ಮ ಮಧ್ಯದಿಂದ ಕಣ್ಮರೆಯಾಗುತ್ತಿರುವ ಹೆಣ್ಣುಮಕ್ಕಳು- ಇದು ಭವಿಷ್ಯದಲ್ಲಿ ಕರ್ನಾಟಕವನ್ನು ಬಾಧಿಸಲಿರುವ ಬಹುದೊಡ್ಡ ಸಮಸ್ಯೆ. ಇಡೀ ಜಗತ್ತಿನಲ್ಲೇ ಕಂಡು ಬರುತ್ತಿರುವಂಥ ಜನಸಂಖ್ಯಾ ಪ್ರವೃತ್ತಿ ಎಂದರೆ ದಿನೇ ದಿನೇ ಏರುತ್ತಿರುವ ಹಿರಿಯರ ಸಂಖ್ಯೆ. ಇದಕ್ಕೆ ಕರ್ನಾಟಕ ರಾಜ್ಯವೂ ಹೊರತಾಗಿಲ್ಲ.

ರಾಜ್ಯದ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇಕಡಾ 8 ರಷ್ಟಿದ್ದು 2016 ರ ವೇಳೆಗೆ ಇದು ಶೇಕಡಾ 15ಕ್ಕೆ ಏರಲಿದೆ ಎಂಬುದು ಒಂದು ಅಂದಾಜು. ಈ ಗುಂಪಿನಲ್ಲಿ ಮಹಿಳೆಯರೇ ಹೆಚ್ಚಿದ್ದು ಅವರು ಎದುರಿಸುತ್ತಿರುವ ಪರಿಸ್ಥಿತಿಗಳಲ್ಲಿ ಪ್ರಮುಖವಾದುವು ಆರ್ಥಿಕ ಅಭದ್ರತೆ, ಅನಕ್ಷರತೆ,  ವಯೋಸಂಬಂಧಿ ಆರೋಗ್ಯ ಸಮಸ್ಯೆಗಳು. ವೈಧವ್ಯ, ಕುಟುಂಬಗಳ ರಚನೆಯಲ್ಲಿ ಸಂಭವಿಸುತ್ತಿರುವ ಮಾರ್ಪಾಡುಗಳು, ಬದಲಾಗುತ್ತಿರುವ ಉದ್ಯೋಗ ರಚನೆ ಮುಂತಾದುವು.

ಸಂತಾನೋತ್ಪತ್ತಿಯ ವಯಸ್ಸನ್ನು ದಾಟಿದ ಮೇಲೆ ಮಹಿಳೆಯರ ಜೀವಿತಾವಧಿ ಹೆಚ್ಚುತ್ತದೆ ನಿಜ, ಆದರೆ ಗುಣಮಟ್ಟದ ಜೀವನವನ್ನು ನಡೆಸಲು ಅವರಲ್ಲನೇಕರಿಗೆ ಸಾಧ್ಯವಿಲ್ಲ. ಉದ್ಯೋಗದಲ್ಲಿದ್ದು ಪಿಂಚಣಿ ಬರುವಂತಹವರು ಅಥವಾ ಕುಟುಂಬ ಮೂಲಗಳಿಂದ ಆರ್ಥಿಕ ಬೆಂಬಲ ಪಡೆಯುವಂಥ ಮಹಿಳೆಯರದು ಒಂದು ಸಣ್ಣ ವರ್ಗ. ಇವರಲ್ಲಿ ಬಹುತೇಕರು ಸರ್ಕಾರಿ ಅಥವಾ ನಾಗರಿಕ ಸಂಸ್ಥೆಗಳನ್ನು ಅವಲಂಬಿಸಬೇಕು, ಇಲ್ಲ ಆಶ್ರಯಕ್ಕಾಗಿ ಅಲೆಯುತ್ತಾ ಪರಾವಲಂಬಿತನದ ವಲಯಕ್ಕೆ ಜಾರಬೇಕು.

ಲಿಂಗ ಮತ್ತು ಬಡತನ ಒಂದೆಡೆ ಸೇರಿದಾಗ ಅದರ ಹೊಡೆತವನ್ನು ತೀವ್ರವಾಗಿ ಅನುಭವಿಸುವವರು ಮಹಿಳೆಯರು. ಬದುಕಿಡೀ ಕುಟುಂಬದ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತಾ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಅಥವಾ ಸಮಯವೇ ಇಲ್ಲದ ಅನೇಕ ಮಹಿಳೆಯರು ಆಶ್ರಯರಹಿತರಾದಾಗ ಹೋಗುವದೆಲ್ಲಿಗೆ? ಆರ್ಥಿಕ ಅನುಕೂಲವಿರುವವರು ಹಿರಿಯರಿಗಾಗಿಯೇ ನಿರ್ಮಿಸಲ್ಪಟ್ಟ ಗೃಹ ಸಮಚ್ಚಯಗಳಲ್ಲಿ ಸ್ವಇಚ್ಛೆಯಿಂದಲೋ ಆಯ್ಕೆಯಿಂದಲೋ ಬದುಕು ಕಟ್ಟಕೊಳ್ಳಲು ಮುಂದಾಗಿದ್ದಾರೆ, ಆದರೆ ಇಂಥ ಮಹಿಳೆಯರ ಪ್ರಮಾಣ ತೀರಾ ಕಡಿಮೆಯಿದೆ.

ರಾಜ್ಯಾದ್ಯಂತ ಹಿರಿಯ ಮಹಿಳೆಯರಿಗೆ ಸುರಕ್ಷಿತವಾದ ಗುಣಮಟ್ಟದ ಜೀವನ ನಡೆಸಲು ಅವಶ್ಯವಾದ ಆಹಾರ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವಂಥ ವ್ಯವಸ್ಥೆಯನ್ನು ಸೃಷ್ಟಿಸಲು ರಾಜ್ಯಮಟ್ಟದ ನೀತಿ ರೂಪಿತವಾಗಬೇಕು, ಈಗ ಹಿರಿಯರ ಕಲ್ಯಾಣಕ್ಕಾಗಿ ರೂಪಿತವಾಗಿರುವ ರಾಷ್ಟೀಯ ಹಿರಿಯ ನಾಗರಿಕರ ನೀತಿಯಾಗಲಿ, ಬಡ ಮಹಿಳೆಯರಿಗೆ ನೀಡುತ್ತಿರುವ ವೃದ್ಧಾಪ್ಯ ವೇತನವಾಗಲಿ ಹಿರಿಯ  ನಾಗರಿಕರ ಬದುಕಿನ ಬವಣೆಗಳಿಗೆ ಸ್ಪಂದಿಸುತ್ತಿಲ್ಲವೆಂಬುದು ಒಂದು ಸತ್ಯ.

ಹಿರಿಯರ ಸಂಖ್ಯೆ ಹೆಚ್ಚುತ್ತಿರುವುದು ಒಂದೆಡೆ ಅಭಿವೃದ್ಧಿಯ ದೃಷ್ಟಿಯಿಂದ ಸಕಾರಾತ್ಮಕವಾದ ಬೆಳವಣಿಗೆಯೇ ಸರಿ. ಆದರೆ ನಮ್ಮ ಮಧ್ಯದಿಂದ ಕಾಲಕ್ರಮೇಣ ಮಾಯವಾಗುತ್ತಿರುವ ಹೆಣ್ಣು ಮಕ್ಕಳು ಎಲ್ಲಿ ಹೋಗುತ್ತಿದ್ದಾರೆ? 0–6 ವಯೋಗುಂಪಿನ ಹೆಣ್ಣು ಮಕ್ಕಳ ಸಂಖ್ಯೆ ರಾಜ್ಯದಲ್ಲಿ ಒಂದು ಜನಗಣತಿಯಿಂದ ಮತ್ತೊಂದು ಜನಗಣತಿಗೆ ಇಳಿಮುಖವಾಗುತ್ತಿದೆ. 2011ರ ಜನಗಣತಿಯ ಪ್ರಕಾರ ಪ್ರತಿ 1000 ಗಂಡು ಮಕ್ಕಳಿಗೆ 943 ಹೆಣ್ಣು ಮಕ್ಕಳು ಮಾತ್ರವಿದ್ದು ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಲಿಂಗಾನುಪಾತ ಕಡಿಮೆಯಾಗಿದೆ. ವಿಶೇಷವಾಗಿ ಈ ಇಳಿಕೆ ಕಂಡುಬರುತ್ತಿರುವುದು ಬೆಳಗಾವಿ (933) ಬಾಗಲಕೋಟೆ (926) ವಿಜಯಪುರ (930) ಕಲಬುರಗಿ (935) ಬಿದರ್ (935) ಚಿತ್ರದುರ್ಗ (933) ದಾವಣಗೆರೆ (931) ಮತ್ತು ಮಂಡ್ಯ (934) ಜಿಲ್ಲೆಗಳಲ್ಲಿ ಜನನಪೂರ್ವ

ಶಿಕ್ಷಣದಲ್ಲಿ ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ - ಸ್ಥಾನ ಬದಲಾವಣೆಯ ಸೂಚಕವೇ?
ಕನ್ನಡ ನಾಡಿನ ಉದಯದ ಸಂದರ್ಭದಲ್ಲಿ ಶೇಕಡ 9 ರಷ್ಟಿದ್ದ ಸ್ತ್ರೀ ಸಾಕ್ಷರತೆಯ ಪ್ರಮಾಣ ಇಂದು 68.1 ಕ್ಕೇರಿರುವುದು ಸಕಾರಾತ್ಮಕ ಬೆಳವಣಿಗೆಯೇ ಸರಿ. ಕಳೆದ 60 ವರ್ಷಗಳಲ್ಲಿ ಸ್ತ್ರೀ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸಮಾಧಾನಕರವಾದ ಸಾಧನೆಗಳನ್ನು ಮಾಡಿದೆ, ಕೆಲ ವಿಚಾರಗಳಲ್ಲಂತೂ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಮುಂದಿದ್ದಾರೆ.

ಆದಾಗ್ಯೂ ಶಿಕ್ಷಣದ ಸಾಫಲ್ಯವನ್ನು ಕೇವಲ ಸಂಖ್ಯೆಗಳಿಂದ ಅಳೆಯಲು ಸಾಧ್ಯವಿಲ್ಲ. ಏಕೆಂದರೆ ಸಾಕ್ಷರತೆಯ ಪ್ರಮಾಣದಲ್ಲಿ ಪ್ರಾದೇಶಿಕ ಭಿನ್ನತೆಗಳು ಕಂಡು ಬರುತ್ತಿರುವುದು ಕರ್ನಾಟಕದ ಶಿಕ್ಷಣದ ಒಂದು ಮುಖವಾದರೆ, ಸಂಖ್ಯಾತ್ಮಕ ಹೆಚ್ಚಳ ಪುರುಷ ಪ್ರಧಾನ ಮೌಲ್ಯಗಳ ಆಚರಣೆಯನ್ನು ಕಡಿಮೆ ಮಾಡಿಲ್ಲ ಎನ್ನುವುದು ಮತ್ತೊಂದು ಮುಖ. ಬಾಗಲಕೋಟೆ, ಬಳ್ಳಾರಿ, ವಿಜಯಪುರ, ಚಾಮರಾಜನಗರ, ಕಲಬುರಗಿ, ಕೊಪ್ಪಳ, ರಾಯಚೂರು, ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸ್ತ್ರೀ ಸಾಕ್ಷರತೆಯ ಪ್ರಮಾಣ ರಾಜ್ಯದ ಸಾಕ್ಷರತೆಯ ಮಟ್ಟಕ್ಕಿಂತ ಕೆಳಮಟ್ಟದಲ್ಲಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ದಾಖಲಾತಿ ಹೆಚ್ಚು- ಕಡಿಮೆ ಸಮ ಪ್ರಮಾಣದಲ್ಲಿದ್ದು, ಅವರ ಶಾಲಾ ಬಿಡುವಿಕೆಯು ಕ್ರಮೇಣ ಇಳಿಮುಖವಾಗುತ್ತಿದೆ.

ಹಾಗೆ ನೋಡಿದರೆ ಶಾಲೆಯಿಂದ ಹೊರಗಿರುವ ಮಕ್ಕಳಲ್ಲಿ (6–14 ವಯೋಗುಂಪು) ಗಂಡು ಮಕ್ಕಳೇ ಹೆಣ್ಣು ಮಕ್ಕಳಿಗಿಂತ ಹೆಚ್ಚಾಗಿದ್ದಾರೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ದಾಖಲಾತಿಗಳಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಶೇಕಡ 48.30 ರಷ್ಟಿದೆ. ಸರ್ವ ಶಿಕ್ಷ ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮಗಳು ವಿಶೇಷವಾಗಿ ಗ್ರಾಮೀಣ, ಬಡ ಹಾಗು ವಂಚಿತ ವರ್ಗಗಳಿಂದ ಬಂದ ಹೆಣ್ಣು ಮಕ್ಕಳನ್ನೇ ಗುರಿಯಿಟ್ಟಿದ್ದರಿಂದ ಅವರ ದಾಖಲಾತಿ- ಹಾಜರಾತಿಗಳು ಹೆಚ್ಚಾದವು. ಹಾಗೆ ನೋಡಿದರೆ ಪ್ರತಿ ಹಂತದಲ್ಲೂ ಕಳೆದ ಹತ್ತು ವರ್ಷಗಳಲ್ಲಿ ಹೆಣ್ಣು ಮಕ್ಕಳ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ.

ಈ ಹೊತ್ತು ಬಹುತೇಕ ಕಾಲೇಜುಗಳಲ್ಲಿ, ವಿಶ್ವ ವಿದ್ಯಾನಿಲಯಗಳಲ್ಲಿ ಹೆಣ್ಣು ಮಕ್ಕಳ ಗೋಚರತೆ ಹೆಚ್ಚಾಗುತ್ತಿದೆ. ಇದನ್ನು ಅವರ ಸಬಲೀಕರಣದ ಸಂಕೇತ ಎಂದು ಅರ್ಥೈಸಲಾಗುತ್ತಿದೆ. ಆದರೆ ಶಿಕ್ಷಣ ಮುಗಿಸಿದ ನಂತರ ಅವರಲ್ಲಿ ಎಷ್ಟು ಮಂದಿ ಉದ್ಯೋಗವನ್ನು ಅರಸುತ್ತಾರೆ? ಈ ವಿಷಯದಲ್ಲಿ ಅವರಿಗೆ ಆಯ್ಕೆಯ ಸ್ವಾತಂತ್ರ್ಯವಿದೆಯೇ? ಉದ್ಯೋಗ ಪಡೆದರೂ ಕುಟುಂಬ ವಲಯದಲ್ಲಿ ತಮ್ಮ ಬದುಕಿನ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಸ್ವಾತಂತ್ರ್ಯವಿದೆಯೇ? ವಿದ್ಯಾವಂತರಾಗಿದ್ದು ಪುರುಷಪ್ರಧಾನ ಮೌಲ್ಯಗಳಿಗೆ ಬಲಿಯಾಗಿ ಆತ್ಮಹತ್ಯೆ, ವಿವಾಹ ವಿಚ್ಛೇದನ ಅಥವಾ ಕೌಟುಂಬಿಕ ಹಿಂಸೆ ಮುಂತಾದ ಪರಿಸ್ಥಿತಿಗಳಿಗೆ ಸಿಲುಕಿ ಹಾಕಿ ಕೊಂಡಿರುವರೆಷ್ಟು? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಈಗ ಹುಡುಕಬೇಕಾಗಿದೆ.

ಶಿಕ್ಷಣ ಉದ್ಯೋಗಕ್ಕೆ ಪರಿವರ್ತಿತವಾಗುತ್ತಿದೆಯೇ?
ಶಿಕ್ಷಣದ ಎಲ್ಲಾ ಮಟ್ಟದಲ್ಲೂ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಅದು ಉದ್ಯೋಗವಾಗಿ ಬಹುತೇಕ ಹೆಣ್ಣು ಮಕ್ಕಳ ವಿಚಾರದಲ್ಲಿ ಪರಿವರ್ತಿತವಾಗುತ್ತಿಲ್ಲ. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಮಹಿಳೆಯರ ಉದ್ಯೋಗ ಕ್ಷೇತ್ರ ಪ್ರವೇಶ ಕಡಿಮೆಯಾಗುತ್ತಿದೆ.

ಉದ್ಯೋಗಳಲ್ಲಿರುವವರಲ್ಲಿಯೂ ಗ್ರಾಮೀಣ ಮಹಿಳೆಯರಲ್ಲಿ ಎರಡನೇ ಮೂರು ಭಾಗ ಮತ್ತು ನಗರದಲ್ಲಿರುವವರಲ್ಲಿ ಒಂದನೆ ಮೂರು ಭಾಗ ಅಸಂಘಟಿತ (ಕಾರ್ಮಿಕ ಕಾನೂನುಗಳಿಂದ ರಕ್ಷಣೆ ಪಡೆಯದ) ಕ್ಷೇತ್ರದಲ್ಲಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಕಾಯಿದೆ ಇದ್ದಾಗ್ಯೂ ಈ ಕ್ಷೇತ್ರದಲ್ಲಿ ವೇತನ ತಾರತಮ್ಯವಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ, ಪುರುಷರಿಗೆ ಬರುವ ವೇತನದಲ್ಲಿ ಶೇಕಡ 65 ಹಾಗೂ ನಗರ ಪ್ರದೇಶಗಳಲ್ಲಿ ಶೇಕಡ 55 ರಷ್ಟು ಮಾತ್ರ ಸಲ್ಲುತ್ತದೆ. ರಾಜ್ಯದಲ್ಲಿ ಐಟಿ- ಬಿಟಿ ವಲಯ ವಿಸ್ತಾರವಾಗಿದ್ದು ಈ ಕ್ಷೇತ್ರದಲ್ಲಿ ಅನೇಕ ಮಹಿಳೆಯರು ಸೇರಿದ್ದಾರೆ ಎಂಬುದು ಭ್ರಮೆ. ಕೇವಲ ಶೇ 25 ಮಹಿಳೆಯರು ವೃತ್ತಿಗಳು ಎಂದು ಗುರುತಿಸಲ್ಪಡುವ ಉದ್ಯೋಗಗಳಲ್ಲಿದ್ದಾರಷ್ಟೆ.

ಉದ್ಯೋಗ ಕ್ಷೇತ್ರದ ತಾರತಮ್ಯದಿಂದ ಮಹಿಳೆಯರು ಬಡತನದ ವಲಯದಲ್ಲಿ ಹೆಚ್ಚು-ಹೆಚ್ಚು ಸಿಲುಕುತ್ತಿದ್ದಾರೆ. ರಾಜ್ಯದಲ್ಲಿ 250ಕ್ಕು ಹೆಚ್ಚು ಮಹಿಳಾ ಅಭಿವೃದ್ಧಿ ಯೋಜನೆಗಳಿವೆ ಎಂದು ಹೇಳಲಾಗುತ್ತಿದೆ. ಈ ಯೋಜನೆಗಳ ಕಾರ್ಯವೈಖರಿ ಬಗ್ಗೆ ಅಲ್ಲೊಂದು ಇಲ್ಲೊಂದು ಅಧ್ಯಯನ, ಮೌಲ್ಯಮಾಪನ ನಡೆಯುತ್ತಿದೆ. ಅದು ಸಾಕೆ? ಈಗಾಗಲೇ ನಡೆದು ಹೋಗಿರುವ ಅಧ್ಯಯನಗಳ ಆಧಾರದ ಮೇಲೆ ಕೈಗೊಂಡಿರುವ ಕ್ರಮಗಳೇನು? ಈ ಯೋಜನೆಗಳಿಗೆ ವ್ಯಯವಾದ  ಹಣಕಾಸು ಸಂಪನ್ಮೂಲಗಳಿಗೆ ಲೆಕ್ಕವಿದೆಯೇ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಸಂಬಂಧಿಸಿದ ಇಲಾಖೆಗಳು ಈಗಲಾದರೂ ನೀಡಬೇಕಲ್ಲವೇ?  

ಇನ್ನು ಮುಂದಾಗಬೇಕಿರುವುದೇನು?
ಮುಂಬರುವ ವರ್ಷಗಳಲ್ಲಿ ಕರ್ನಾಟಕಕ್ಕೆ ಮಹಿಳಾ ಅಭಿವೃದ್ಧಿಯಲ್ಲಿ ನಿಜವಾದ ಆಸಕ್ತಿಯಿದ್ದರೆ ಈ ಕೆಳಕಂಡಂಥ ಕ್ರಮಗಳನ್ನು ಕೈಗೊಳ್ಳಬೇಕು:
ಮೊದಲಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಮಹಿಳಾಪರ ನೀತಿಗಳನ್ನು, ಕಳೆದ ಹತ್ತು ವರ್ಷಗಳಿಂದೀಚೆಗೆ ಬಂದಿರುವ ಎಲ್ಲ ಅಧ್ಯಯನ ವರದಿಗಳನ್ನು, ಸುಮಾರು 25 ಇಲಾಖೆಗಳಲ್ಲಿ ಜಾರಿಗೆ ಬಂದಿರುವ ಎಲ್ಲ ಮಹಿಳಾ ಅಭಿವೃದ್ಧಿ ಯೋಜನೆಗಳನ್ನು ಮರು ಮೌಲ್ಯಮಾಪನಕ್ಕೆ ಒಳಪಡಿಸಿ, ಆಗಿರುವುದೇನು, ಆಗದೇ ಇರುವುದೇನು ಮತ್ತು ಆಗಬೇಕಾಗಿರುವುದೇನು ಎಂಬುದನ್ನು ಗುರುತಿಸುವ ಕೆಲಸವಾಗಬೇಕಿದೆ.

ಮಹಿಳೆಯರ ಬದುಕನ್ನು ನೇರವಾಗಿ ಪ್ರಭಾವಿಸುವ ಆರೋಗ್ಯ, ಆಹಾರ, ಶಿಕ್ಷಣ, ಉದ್ಯೋಗ, ರಾಜಕೀಯ ಭಾಗವಹಿಸುವಿಕೆ ಮುಂತಾದ ಕ್ಷೇತ್ರಗಳಲ್ಲಿ ಅವರ ಪರಿಸ್ಧಿತಿಯನ್ನು ಕುರಿತು ಮಾಹಿತಿ ಲಭ್ಯವಾಗಬೇಕು. ಇದು ವಾರ್ಷಿಕ ಅಭ್ಯಾಸವಾಗಬೇಕು.

ಎಲ್ಲ ಬಗೆಯ ಮಹಿಳಾ ವಿಚಾರಗಳನ್ನು ನಿರ್ವಹಿಸಿ, ನಿರ್ದೇಶಿಸುವಂಥ ಒಂದು ಲಿಂಗ ನೀತಿ (ಜೆಂಡರ್ ಪಾಲಿಸಿ)ಯ ಅಗತ್ಯ ಈ ರಾಜ್ಯಕ್ಕಿದೆ. ಇದರ ಮೂಲಕ ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಸಂಪನ್ಮೂಲಗಳನ್ನು ನಿಗದಿಪದಿಸುವುದು, ವಿವಿಧ ಯೋಜನೆಗಳ ಅನುಷ್ಠಾನವನ್ನು ನಿರ್ದಿಷ್ಟ ಸಂಸ್ಥೆಗಳ ಜವಾಬ್ದಾರಿಯನ್ನಾಗಿ ಮಾಡುವುದು ಹಾಗೂ ನಿಗದಿತ ಜವಾಬ್ದಾರಿಗಳನ್ನು ನಿರ್ವಹಿಸದಿದ್ದಾಗ ಅದಕ್ಕೆ ಹೊಣೆಯಾದವರ ಮೇಲೆ ಕ್ರಮ ಕೈಗೊಳ್ಳುವುದು- ಇವು ಈ ನೀತಿಯಲ್ಲಿ ಅಡಕವಾಗಬೇಕು.

ಭಾರತದ ಅನೇಕ ರಾಜ್ಯಗಳಿಗೆ ಹೋಲಿಸಿದಾಗ ಮಹಿಳಾ ಅಭಿವೃದ್ಧಿಯ ವಿಚಾರದಲ್ಲಿ ಕರ್ನಾಟಕದ ಪರಿಸ್ಥಿತಿ ಹೆಚ್ಚು ಸಮಾಧಾನಕರವಾಗಿದೆ ಎನ್ನುವುದು ಸ್ವಲ್ಪಮಟ್ಟಿನ ಸಾಂತ್ವನವನ್ನು ನೀಡಿದರೂ ಭವಿಷ್ಯದಲ್ಲಿ ನೀತಿಗಳು ಮತ್ತು ಸಾಂಸ್ಥಿಕ ವ್ಯವಸ್ಥೆ - ಇವುಗಳೆರಡರ ನಡುವೆ ಸಮನ್ವಯ ಸಾಧಿಸುವಂಥ ಕೆಲಸ ಅತ್ಯಂತ ತ್ವರಿತವಾಗಿ ಆಗಬೇಕು.

ದೌರ್ಜನ್ಯಮುಕ್ತ ರಾಜ್ಯ ಕಟ್ಟಬೇಕಾಗಿದೆ
ನಮ್ಮ ರಾಜ್ಯದಲ್ಲಿ ದೌರ್ಜನ್ಯದ ಪ್ರಮಾಣ ತೀರಾ ಕಡಿಮೆ, ಅಂಥ ಪ್ರವೃತ್ತಿಗಳೆಲ್ಲ ಉತ್ತರ ಭಾರತದಲ್ಲಿ ಕಾಣುವಂತಹುದು ಎಂದು ಹೇಳುತ್ತಿದ್ದ ಕಾಲವೊಂದಿತ್ತು. ರಾಷ್ಟ್ರೀಯ ಅಪರಾಧ ದಾಖಲಾತಿ ಪ್ರಾಧಿಕಾರದ ಪ್ರಕಾರ 1999 ರಲ್ಲಿ ಭಾರತದಲ್ಲಿ ಮಹಿಳೆಯರ ವಿರುದ್ಧ ಸಂಭವಿಸುವ ದೌರ್ಜನ್ಯ ಪ್ರಕರಣಗಳಲ್ಲಿ ಕರ್ನಾಟಕದ ಪಾಲು ಶೇಕಡ 4.1 ರಷ್ಟಿದ್ದು  ರಾಷ್ಟ್ರ ಮಟ್ಟದಲ್ಲಿ ರಾಜ್ಯ 18ನೇ ಸ್ಥಾನದಲ್ಲಿತ್ತು, ಆದರೆ ಹತ್ತೇ ವರ್ಷಗಳಲ್ಲಿ ಕರ್ನಾಟಕ 9ನೇ ಸ್ಥಾನಕ್ಕೆ ಹೋಗಿತ್ತು ಎಂದರೆ ರಾಜ್ಯದಲ್ಲಿ ಮಹಿಳೆಯರೆಷ್ಟು ಸುರಕ್ಷಿತರು ಎಂಬುದು ತಿಳಿದು ಬರುತ್ತದೆ. ಶಿಕ್ಷಣ ಮಟ್ಟ ಹೆಚ್ಚಾದಂತೆ ಆಧುನಿಕ ಮನೋಭಾವ ಬೆಳೆದಂತೆ ಹೆಣ್ಣು ಮಕ್ಕಳ ವಿರುದ್ಧ ನಡೆಯುತ್ತಿರುವ ಅಪರಾಧಗಳು ಕಡಿಮೆಯಾಗಬೇಕು ಎಂಬುದು ನಮ್ಮ ಆಶಯ. ಆದರೆ ಹಾಗಾಗಲಿಲ್ಲ .

ಜಾಗತೀಕರಣ ತಂದಂಥ ಹೊಸ ಉದ್ಯೋಗಾವಕಾಶಗಳು ಹಣದ ಹೊಳೆಯನ್ನೇನೋ ಹರಿಸಿದವು, ಸಾವಿರಾರು ಹೆಣ್ಣು ಮಕ್ಕಳು ಹೊರಬಂದು ಆರ್ಥಿಕ ಪರಾವಲಂಬಿತನದಿಂದ ಮುಕ್ತಿಯನ್ನು ಪಡೆಯಲು ಸಾಧ್ಯವಾಯಿತು. ಸಿದ್ಧ ಉಡುಪು ತಯಾರಿಕಾ ಘಟಕಗಳು, ಬೃಹತ್ ಮಾಲುಗಳು , ಹೋಟೆಲ್ ಉದ್ಯಮ, ಮನರಂಜನಾ ಉದ್ದಿಮೆ- ಇಲ್ಲೆಲ್ಲಾ ತೆರೆದುಕೊಂಡ ಉದ್ಯೋಗಾವಕಾಶಗಳಿಂದ ಹೆಣ್ಣು ಮಕ್ಕಳ ಬದುಕು ಬದಲಾಗಿದೆ ಎಂದು ಜನ ಭಾವಿಸಲಾರಂಭಿಸಿದರು. ಆದರೆ ಇದು ಸಾಮಜಿಕ ಬದಲಾವಣೆಯ ಒಂದು ಮುಖವಷ್ಟೆ. ಹೆಣ್ಣಿನ ಮೇಲೆ ಹೊಸ ಹೊಸ ಬಗೆಯ ದೌರ್ಜನ್ಯಗಳು ಆರಂಭವಾದವು. ಪಿತೃಪ್ರಧಾನ ಮೌಲ್ಯಗಳು ಬದಲಾಗದಿದ್ದರೆ ಯಾವ ಉದ್ಯೋಗವಾದರೇನು? ಎಷ್ಟು ವಿದ್ಯೆಯಿದ್ದರೇನು? ಉದಾಹರಣೆಗೆ ಬೆಂಗಳೂರು ನಗರವನ್ನೇ ತೆಗೆದುಕೊಳ್ಳೋಣ.

ಹೆಣ್ಣಿನ ವಿರುದ್ಧ ನಡೆಯುವ ದೌರ್ಜನ್ಯಗಳು ಅಧಿಕವಾಗಿ ನಡೆಯುವ ರಾಜಧಾನಿಗಳ ಪಟ್ಟಿಯಲ್ಲಿ ಬೆಂಗಳೂರಿಗೆ 3 ನೇ ಸ್ಥಾನ! ರಾಜ್ಯದಲ್ಲಿ ಅತಿ ಕಡಿಮೆ ಲಿಂಗಾನುಪಾತವಿರುವ ಜಿಲ್ಲೆ ಬೆಂಗಳೂರು. ಇಲ್ಲಿ ಪ್ರತಿ 1000 ಪುರುಷರಿಗೆ ಕೇವಲ 908 ಸ್ತ್ರೀಯರಿದ್ದಾರೆ. ದೇಶದ ಐಟಿ- ಬಿಟಿ ಕೇಂದ್ರ ಸ್ಥಾನ, ಸಿಂಗಾಪುರ, ಸಿಲಿಕಾನ್ ವ್ಯಾಲಿ ಎಂಬೆಲ್ಲಾ ಬಿರುದುಗಳಿಂದ ಅಲಂಕೃತವಾಗಿರುವ ಈ ನಗರದಲ್ಲಿ ಕೌಟುಂಬಿಕ ಹಿಂಸೆ, ಅತ್ಯಾಚಾರ, ಉದ್ಯೋಗ ಸ್ಥಳಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿದೆ. ಇವಿಷ್ಟೇ ಸಾಲದೇ ಹೊರ ನೋಟಕ್ಕೆ ಕಾಣುವ ಆಧುನಿಕತೆ, ಆಡಂಬರ ಹೆಣ್ಣನ್ನು ಕುರಿತ ಧೋರಣೆಗಳಲ್ಲಿ ಬದಲಾವಣೆಯ ಸಂಕೇತವಲ್ಲ ಎಂದು ತಿಳಿಯಲು?

ಕರ್ನಾಟಕದ ಸ್ತ್ರೀ ವಿರೋಧಿ ದೌರ್ಜನ್ಯಗಳ ಚಿತ್ರಣ ಹೆಚ್ಚು- ಹೆಚ್ಚು ಆತಂಕಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಹೆಣ್ಣಿನ ವಿರುದ್ಧ ನಡೆಯುತ್ತಿರುವ ಹಿಂಸಾ ಪ್ರಕರಣಗಳ ಅಂಕಿ- ಅಂಶಗಳ ಪ್ರಕಾರ ಇಲ್ಲಿ ದೈಹಿಕ ದೌರ್ಜನ್ಯಕ್ಕೆ ತುತ್ತಾಗುತ್ತಿರುವ ಮಹಿಳೆಯರ ಪ್ರಮಾಣ 21.3%. ಇದರಲ್ಲಿ ವರದಕ್ಷಿಣೆ ಸಾವುಗಳು, ಆಸಿಡ್ ದಾಳಿ, ಕೌಟುಂಬಿಕ ಹಿಂಸೆ, ಅತ್ಯಾಚಾರ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವಂಥವು. ಇದಲ್ಲದೆ ದೇವದಾಸಿ ಪದ್ಧತಿ. ಜಾತಿ ಆಧಾರಿತ ಹಿಂಸೆ, ಹೆಣ್ಣು ಮಕ್ಕಳ ಸಾಗಾಣಿಕೆ (ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾಗಾಣಿಕೆ ನಡೆಯುವ ರಾಜ್ಯಗಳಲ್ಲಿ ಕರ್ನಾಟಕದ ಪಾಲು ಶೇಕಡಾ 27 ಎಂದು ಹೇಳಲಾಗುತ್ತಿದೆ), ತೃತೀಯ ಲಿಂಗಿಗಳ ಮೇಲೆ ನಡೆಯುವ ದೌರ್ಜನ್ಯಗಳು ಮತ್ತು ಮರ್ಯಾದೆಯ ಹೆಸರಿನಲ್ಲಿ ನಡೆಯುವ ಹತ್ಯೆಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು ಪೋಲಿಸ್ ದಾಖಲೆಗಳಿಗೂ ವಾಸ್ತವದಲ್ಲಿ ನಡೆಯುತ್ತಿರುವ ಅಪರಾಧಗಳ ಸಂಖ್ಯೆಗೂ  ವ್ಯತ್ಯಾಸವಿದೆ.

ದೌರ್ಜನ್ಯಮುಕ್ತವಾದ ರಾಜ್ಯದ ಕಲ್ಪನೆ ಸಾಕಾರವಾಗಬೇಕಾದರೆ ಮಹಿಳೆಯರ ವಿರುದ್ಧ ನಡೆಯುವ ಎಲ್ಲ ದೌರ್ಜನ್ಯಗಳನ್ನು ಕುರಿತ ದೂರುಗಳನ್ನು ದಾಖಲಿಸಲು ಒಂದು ಏಕ ಗವಾಕ್ಷಿ ವ್ಯವಸ್ಥೆ ಸೃಷ್ಟಿಯಾಗಬೇಕು. ಈಗಾಗಲೇ ಜಾರಿಯಲ್ಲಿರುವ ಕಾಯಿದೆಗಳ ಅನುಷ್ಠಾನವಾಗುತ್ತಿದೆಯೇ ಇಲ್ಲವೆ ಎಂದು ಅಳೆಯಲು ಪೋಲಿಸ್ ಠಾಣೆಗಳ ಮಟ್ಟದಲ್ಲಿ ಒಂದು ವರ್ಷದಲ್ಲಿ ಅವರಿಗೆ ಬರುವ ದೂರುಗಳೆಷ್ಟು, ದಾಖಲಾದವುಗಳೆಷ್ಟು ಮತ್ತು ದೂರಿನ ಮೇಲೆ ಕೈಗೊಂಡ ಕ್ರಮವೇನು- ಈ  ಮೂರು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಅಧ್ಯಯನಗಳನ್ನು ಸಮರ್ಥ ವ್ಯಕ್ತಿಗಳು/ಸಂಸ್ಥೆಗಳು ಕೈಗೊಳ್ಳುವಂಥ ಒಂದು ವ್ಯವಸ್ಥೆಯನ್ನು ಸರ್ಕಾರ ರಾಜ್ಯ ಮಟ್ಟದಲ್ಲಿ ಸೃಷ್ಟಿ ಮಾಡಿ ಅಧ್ಯಯನದ ಫಲಿತಾಂಶಗಳ ಮೇಲೆ ಕ್ರಮ ಕೈಗೊಂಡರೆ ಮಾತ್ರ ಮಹಿಳೆಯರ ವಿರುದ್ಧದ ದೌರ್ಜನ್ಯಗಳಿಗೆ ಸರಿಯಾದ ಉತ್ತರ ದೊರೆಯಬಹುದೇನೋ.

ಬದುಕು ಅರಳುವ ಮೊದಲೇ ಬದುಕು ಕಳೆದುಕೊಳ್ಳುತ್ತಿರುವ ಹೆಣ್ಣು ಮಕ್ಕಳು
0–6 ವಯೋಗುಂಪಿನಲ್ಲಿ ಸಾಂಸ್ಕೃತಿಕ- ಆರ್ಥಿಕ ತಾರತಮ್ಯಗಳಿಗೆ ಒಳಗಾಗಿ ಅನೇಕ ಹೆಣ್ಣು ಮಕ್ಕಳು ಸಾವನ್ನಪ್ಪುತ್ತಿದ್ದರೆ ಬದುಕುಳಿದ ಅನೇಕ ಹೆಣ್ಣು ಮಕ್ಕಳು ಸಣ್ಣ ವಯಸ್ಸಿನಲ್ಲೇ ವಿವಾಹದ ಬಂಧನಕ್ಕೆ ಸಿಲುಕಿ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಬಾಲ್ಯ ವಿವಾಹವನ್ನು ತಡೆಗಟ್ಟುವ ಕಾಯಿದೆಗೆ ಸಂಬಂಧಿಸಿದ ನಿಯಮಗಳನ್ನು ಕರ್ನಾಟಕ 2008 ರಲ್ಲೇ ರಚಿಸಿದ್ದರೂ ಕರ್ನಾಟಕದಲ್ಲಿ ಬಾಲ್ಯ ವಿವಾಹದ ಪ್ರಮಾಣ ಭಯ ಹುಟ್ಟಿಸುತ್ತಿದೆ. 2005 ಕರ್ನಾಟಕ ಮಾನವಾಭಿವೃದ್ಧಿ ವರದಿಯ ಪ್ರಕಾರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಾಲ್ಯ ವಿವಾಹದ ಪ್ರಮಾಣ ಶೇ 45 ರಿಂದ 68 ರಷ್ಟಿದ್ದು, ಇಂದಿಗೂ ಈ ಪ್ರವೃತ್ತಿ ಹೆಚ್ಚು ಕಡಿಮೆ ಮುಂದುವರೆದಿದೆ. ಇಂದಿಗೂ ಬಾಗಲಕೋಟೆ (43.6%) ಬೆಳಗಾವಿ (42.6%), ಬಳ್ಳಾರಿ (34.8%), ವಿಜಯಪುರ (38.4%), ಗದಗ (33%), ಕಲಬುರಗಿ (41%), ಕೊಪ್ಪಳ (41.5%), ಮತ್ತು ರಾಯಚೂರು (35.3%) ಜಿಲ್ಲೆಗಳಲ್ಲಿ 18 ವರ್ಷಕ್ಕೂ ಮುನ್ನ ವಿವಾಹವಾಗುವ ಹೆಣ್ಣು ಮಕ್ಕಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ.

ಅಪ್ರಾಪ್ತ ವಯಸ್ಸಿನಲ್ಲೇ ತಾಯ್ತನ, ನಿರಂತರ ದುಡಿಮೆ, ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಕಂಡು ಬರುವ ತಾರತಮ್ಯ ಹಾಗೂ ಬಡತನ ಈ ಹೆಣ್ಣು ಮಕ್ಕಳ ಜೀವಿತಾವಧಿಯನ್ನೇ ಕಡಿಮೆ ಮಾಡುತ್ತಿದ್ದು ಇದನ್ನು ಸರಿಪಡಿಸುವತ್ತ ರಾಜ್ಯ ಗಮನಹರಿಸಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.