ADVERTISEMENT

ಫೋನಿನ ಬ್ಯಾಟರಿ ಹೀಗೆ ಉಳಿಸಿ

ಗುಲ್‌ಮೊಹರು

ಸವಿತಾ ಬೆಂಗಳೂರು
Published 6 ಏಪ್ರಿಲ್ 2015, 19:30 IST
Last Updated 6 ಏಪ್ರಿಲ್ 2015, 19:30 IST
ಫೋನಿನ ಬ್ಯಾಟರಿ ಹೀಗೆ ಉಳಿಸಿ
ಫೋನಿನ ಬ್ಯಾಟರಿ ಹೀಗೆ ಉಳಿಸಿ   

ಈಗ ಮೊಬೈಲ್ ಕೇವಲ ಕರೆ ಮಾಡುವ, ಸ್ವೀಕರಿಸುವ ವಸ್ತುವಾಗಿ ಉಳಿದಿಲ್ಲ. ಬದಲಿಗೆ ಇಡೀ ಜಗತ್ತನ್ನೇ ಕಾಣುವ ಸಾಧನವಾಗಿದೆ. ಇಂಟರ್‌ನೆಟ್‌‌, ವ್ಯಾಟ್ಸ್ ಆ್ಯಪ್, ಅದೂ ಇದೂ ಅಂತೆಲ್ಲ ಒಂದೇ ಫೋನ್ ಸಾಕಷ್ಟು ಉಪಯೋಗಕ್ಕೆ  ಬರುತ್ತಿದೆ. ಬಳಕೆ ಹೆಚ್ಚಿದಂತೆ ಬ್ಯಾಟರಿ ಬ್ಯಾಕಪ್ ಕಡಿಮೆ ಬರುವುದು ಸಹಜ. ಪೂರ್ಣ ಚಾರ್ಜ್ ಮಾಡಿದ ಕೆಲವೇ ಗಂಟೆ ಗಳಲ್ಲಿ ಅದು ಶೇ 10-15ಕ್ಕೆ ಬಂದು ಇಳಿಯುತ್ತದೆ.

ಬಳಕೆ ಹೆಚ್ಚು ಮಾಡುತ್ತಿದ್ದರೆ ಬ್ಯಾಟರಿಯನ್ನು ದೀರ್ಘವಾಗಿ ಉಳಿಸಿಕೊಳ್ಳಲು ಆಗುವುದಿಲ್ಲ ಎನ್ನುವ ಮಾತು ಎಷ್ಟು ನಿಜವೋ, ಈ ಕೆಳಗಿನ ಟಿಪ್ಸ್‌ ಅಳವಡಿಸಿಕೊಂಡರೆ, ತಕ್ಕಮಟ್ಟಿಗಾದರೂ ಬ್ಯಾಟರಿ ಉಳಿಸಿಕೊಳ್ಳಬಹುದು ಎನ್ನುವುದೂ ಅಷ್ಟೇ ದಿಟ.

*ಹಣ ಉಳಿಸುವ ಸಲುವಾಗಿ ಕಡಿಮೆ ಬೆಲೆಯ, ಕಳಪೆ ಗುಣಮಟ್ಟದ ಬ್ಯಾಟರಿ ಖರೀದಿ ಮಾಡಿದರೆ ಅದರ ರಿಪೇರಿಗೆ ಮೂರ್ನಾಲ್ಕು ಪಟ್ಟು ಹಣವನ್ನು ಖರ್ಚು ಮಾಡಬೇಕಾದೀತು.
*ಜಿಪಿಎಸ್, ಬ್ಲ್ಯೂಟೂತ್, ಎನ್ಎಫ್‌ಸಿ,
ವೈ-ಫೈ ಮತ್ತು ಮೊಬೈಲ್ ಡೇಟಾ ಇತ್ಯಾದಿಗಳನ್ನು ಅಗತ್ಯವಿದ್ದಾಗಷ್ಟೇ ಬಳಸಿ. ಇಂಟರ್‌ನೆಟ್ ಕನೆಕ್ಷನ್ ಸಾಧ್ಯವಾದಷ್ಟು ಆಫ್ ಆಗಿರಲಿ. ಇಲ್ಲದಿದ್ದರೆ ಇದು ಹೆಚ್ಚಿನ ಬ್ಯಾಟರಿ ಶಕ್ತಿಯನ್ನು ಎಳೆದುಕೊಳ್ಳುತ್ತದೆ.

*ಈಗ ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್‌ ಫೋನುಗಳದ್ದು ಅಮೋಲೆಡ್ ಸ್ಕ್ರೀನ್ ಆಗಿರುತ್ತದೆ. ನಿಮ್ಮ ಫೋನ್ ಕೂಡ ಇದೇ ಆಗಿದ್ದಲ್ಲಿ ಕಪ್ಪು ಬಣ್ಣದ ಸ್ಕ್ರೀನ್ ಆಯ್ದುಕೊಳ್ಳಿ. ಆಗ ಬ್ಯಾಟರಿ ಸ್ವಲ್ಪ ಹೆಚ್ಚಿಗೆ ಬಾಳಿಕೆ ಬರುತ್ತದೆ. ಕಪ್ಪು ಬಣ್ಣ ಇಷ್ಟ ಇಲ್ಲ ಎಂದಾದಲ್ಲಿ ಕಡು ಗಾಢ ಬಣ್ಣಗಳನ್ನು ಬಳಸಿದರೆ ಉತ್ತಮ. ಫೋನಿನ ಬ್ಯಾಕ್‌ಗ್ರೌಂಡ್ ಮತ್ತು ಥೀಮ್ ಗಾಢವಾಗಿದ್ದರೆ ಬ್ಯಾಟರಿ ಪ್ರಮಾಣ ಅಧಿಕವಾಗಿರುತ್ತದೆ.
*ಫೋನನ್ನು ವೈಬ್ರೇಟ್ ಮೋಡಿನಲ್ಲಿ ಇಟ್ಟರೆ ಬ್ಯಾಟರಿ ಶಕ್ತಿಯನ್ನು ಹೆಚ್ಚಿಗೆ ಎಳೆದುಕೊಳ್ಳುತ್ತದೆ.

*ಎಲ್ಲ ಮೊಬೈಲ್‌ಗಳಲ್ಲಿ ‘ಆಟೊ  ಡಿಸ್ಪ್ಲೇ ಬ್ರೈಟ್ನೆಸ್’ ಇರುತ್ತದೆ. ಅಂದರೆ ಮೊಬೈಲಿನ ಸ್ಕ್ರೀನ್ ಎಷ್ಟು ಬ್ರೈಟ್ ಆಗಿ ಕಾಣಬೇಕು ಎಂಬುದನ್ನು ಡಿಫಾಲ್ಟ್ ಆಗಿ ಅಳವಡಿಸಲಾಗಿರುತ್ತದೆ.  ಆದ್ದರಿಂದ ಸೆಟ್ಟಿಂಗ್‌ಗೆ ಹೋಗಿ ಇದರ ಬ್ರೈಟ್‌ನೆಸ್‌ ಕಡಿಮೆ ಮಾಡಿಕೊಳ್ಳಿ. ಬ್ರೈಟ್‌ನೆಸ್‌ ಕಡಿಮೆಯಾದಷ್ಟು ಬ್ಯಾಟರಿ ಬಾಳಿಕೆ ಅಧಿಕವಾಗಿ ಬರುತ್ತದೆ.
*ಫೋನ್ ಆನ್ ಮಾಡಿದ ನಂತರ ಡಿಫಾಲ್ಟ್ ಆಗಿ ಕೆಲವೊಂದು ನಿಮಿಷಗಳ ನಂತರ ಆಫ್‌ ಆಗುತ್ತದೆ. ಇದನ್ನು ಕಡಿಮೆ ಅವಧಿಗೆ ಮಾಡಿ ಕೊಳ್ಳಲು ಸೆಟ್ಟಿಂಗ್ಸ್‌ಗೆ ಹೋಗಿ ‘ಡಿಸ್ಪ್ಲೇ ಸ್ಕ್ರೀನ್ ಟೈಮ್ ಔಟ್’ ಬದಲಾಯಿಸಿಕೊಳ್ಳಬಹುದು. ಆದಷ್ಟು ಕಡಿಮೆ ಅವಧಿಯನ್ನು ಇಟ್ಟುಕೊಂಡರೆ ಉತ್ತಮ.

ನೀರಿನಲ್ಲಿ ಬಿದ್ದರೆ...
ಫೋನ್‌ ನೀರಿನಲ್ಲಿ ಬಿದ್ದಾಗ ಅದಕ್ಕೂ ಹೀಗೆಲ್ಲಾ ಪ್ರಥಮ ಚಿಕಿತ್ಸೆ ಮಾಡಬಹುದು.  ಫೋನ್ ನೀರಿನಲ್ಲಿ ಬಿದ್ದ ತಕ್ಷಣ ಅದು ಸ್ವಿಚ್ ಆಫ್ ಆದರೆ ಸರಿ. ಒಂದು ವೇಳೆ ಹಾಗೆ ಆಗದಿದ್ದರೆ ನೀವೇ ಆಫ್ ಮಾಡಿ ಅದರ ತಲೆಯನ್ನು ಕೆಳಕ್ಕೆ ಮಾಡಿ ಹಿಡಿದು ಕೊಳ್ಳಿ. ಇದರಿಂದ ನೀರು ಎಲ್ಲೆಡೆ  ಹರಡುವುದು ತಪ್ಪುತ್ತದೆ. ತಕ್ಷಣ ಫೋನಿನ ಕವರನ್ನು ತೆಗೆದು ಅದರಲ್ಲಿರುವ ಮೆಮೊರಿ ಕಾರ್ಡ್ ಹಾಗೂ ಮತ್ತು ಸಿಮ್ ಕಾರ್ಡ್‌ ತೆಗೆದಿಡಿ. ಬ್ಯಾಟರಿ ತೆಗೆಯಲು ಬರುವಂತಿದ್ದರೆ ಕೂಡಲೇ ಅದನ್ನೂ ತೆಗೆದುಬಿಡಿ.

ಎಲ್ಲವನ್ನೂ ತೆಗೆದ ಮೇಲೆ ಒಣ ಬಟ್ಟೆಯಿಂದ ಚೆನ್ನಾಗಿ ಒಳಭಾಗವನ್ನೆಲ್ಲ ಒರೆಸಿ. ಅನುಕೂಲವಿದ್ದರೆ  ವ್ಯಾಕ್ಯೂಮ್ ಬಳಸಿಯೂ ನೀರು ಹೀರುವಂತೆ ಮಾಡಿ. ಹೀಗೆ ಮಾಡಿದರೆ ತುಂಬಾ ಆಳಕ್ಕೆ ಹೋಗಿ ರುವ ನೀರನ್ನು ವ್ಯಾಕ್ಯೂಮ್ ಹೀರಿಕೊಂಡು ನಿಮ್ಮ ಫೋನಿಗೆ ಮರುಜೀವ ತುಂಬಲು ಸಾಧ್ಯವಾಗುತ್ತದೆ. ಫೋನ್ ಡ್ರೈಯಿಂಗ್ ಪೌಚ್ ಕೂಡ ಈಗ ಲಭ್ಯವಿದೆ. ಇದನ್ನೂ ಬಳಸಿದರೆ ಉತ್ತಮ.

ಒಳಗೆ ನೀರು ಇನ್ನೂ ಇರಬಹುದು ಎಂಬ ಸಂದೇಹವಿದ್ದರೆ ಅರ್ಧಂಬರ್ಧ ಬೆಂದಿರುವ ಅಕ್ಕಿಯಲ್ಲಿ ಫೋನ್ ಇಡಿ. ಹೀಗೆ ಮಾಡಿದರೆ ಅಕ್ಕಿ ನೀರನ್ನು ಹೀರಿಕೊಳ್ಳುತ್ತದೆ. ಕೂಡಲೇ ಅದನ್ನು ಬಳಸಬೇಡಿ. ಹಾಗೆಯೇ ಸಂಪೂರ್ಣ ನೀರನ್ನು ಒಣಗಲು ಬಿಡಿ. ಒಂದೆರಡು ದಿನಗಳ ನಂತರ ಬ್ಯಾಟರಿ ಹಾಕಿ ಫೋನ್ ಆರಂಭಿಸಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.