ADVERTISEMENT

ಫ್ರಾನ್ಸ್‌ನಲ್ಲೂ ಕರ್ನಾಟಕ ವೈಭವ

ವಸಂತ ಹೊಸಬೆಟ್ಟು
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST
ಫ್ರಾನ್ಸ್‌ನಲ್ಲಿ ಕರ್ನಾಟಕದ ಕಂಪು ಸೂಸಿರುವ ಜ್ಹೀಲ್ ಗಿಯೋ
ಫ್ರಾನ್ಸ್‌ನಲ್ಲಿ ಕರ್ನಾಟಕದ ಕಂಪು ಸೂಸಿರುವ ಜ್ಹೀಲ್ ಗಿಯೋ   

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನೀವು ಕುವೆಂಪು, ಶಿವರಾಮ ಕಾರಂತ, ಡಾ. ಅನಂತಮೂರ್ತಿ, ಅರವಿಂದ ಅಡಿಗ, ಕರ್ನಾಟಕ ಸಂಗೀತಗಾರರ ಹೆಸರನ್ನು ಫ್ರೆಂಚ್ ಪ್ರಜೆಯಿಂದ ನಿರೀಕ್ಷಿಸಬಹುದೇ? ಇದೆಂಥ ಪ್ರಶ್ನೆ ಎಂದು ಕೇಳಬೇಡಿ. ನೀವು ಅಲ್ಲಿಗೆ ಹೋದರೆ ಕನ್ನಡ ಪ್ರಖ್ಯಾತ ಸಾಹಿತಿಗಳ ಪರಿಚಯ, ಕನ್ನಡ ಸಂಸ್ಕೃತಿಯ ದರ್ಶನ, ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದರೂ ನೀವು ಕಂಡರಿಯದ ಅಪೂರ್ವ ಸ್ಥಳಗಳ ಪರಿಚಯ ಎಲ್ಲವೂ ಅಲ್ಲಿ ನಿಮಗೆ ಲಭ್ಯ!

ದೂರದ ಫ್ರಾನ್ಸ್‌ನಲ್ಲೂ ಕರ್ನಾಟಕದ ದರ್ಶನ ಮಾಡಿರುವ ಕೀರ್ತಿ ಅಲ್ಲಿಯವರೇ ಆದ ಜ್ಹೀಲ್ ಗಿಯೋ ಅವರದ್ದು. ಕನ್ನಡಿಗರೆಲ್ಲ ಪಾಶ್ಚಿಮಾತ್ಯ ಸಂಸ್ಕೃತಿಯ ಸೆಳೆತಕ್ಕೆ ಒಳಗಾಗುತ್ತಿದ್ದಾರೆ ಎಂಬ ನೋವಿನ ದನಿ ಎಲ್ಲೆಲ್ಲೂ ಕೇಳಿ ಬರುತ್ತಿರುವ ಮಧ್ಯೆಯೇ, ವಿದೇಶಿಯೊಬ್ಬ ಇಲ್ಲಿಯ ಭವ್ಯ ಸಂಸ್ಕೃತಿಯ ಪರಿಚಯವನ್ನು ಅಲ್ಲಿ ಮಾಡಿಸುತ್ತಿದ್ದಾರೆ!

ಕನ್ನಡ ಪ್ರೇಮಿ
ಜ್ಹೀಲ್ ಗಿಯೋ ಒಬ್ಬರು ಕನ್ನಡ ಪ್ರೇಮಿ. ಭಾರತಕ್ಕೆ ಫ್ರೆಂಚ್ ಪ್ರವಾಸಿಗರನ್ನು ತಂದು ಇಲ್ಲಿಯ ಸಂಸ್ಕೃತಿಯನ್ನು ಪರಿಚಯಿಸುವುದು ಅವರಿಗೆ ತುಂಬಾ ಇಷ್ಟ. ಭಾರತದಲ್ಲಿನ ವ್ಯಾಪಾರ, ವಹಿವಾಟು ಎಲ್ಲವನ್ನೂ ಪರಿಚಯಿಸುವ ವೆಬ್‌ಸೈಟ್ ಒಂದನ್ನು ಇವರು ತೆರೆದಿದ್ದಾರೆ. ಇದಕ್ಕೆ ಪ್ರತಾಪ್ ಲಾಲ್ ಎಂಬುವವರೂ ಪಾಲುದಾರರು. ಪ್ರತಾಪ್ ಲಾಲ್ ಒಡಿಶಾದಲ್ಲಿ ಹುಟ್ಟಿದವರು. ಫ್ರೆಂಚ್ ವಸಾಹತುವಾಗಿದ್ದ ಪಾಂಡಿಚೇರಿಯಲ್ಲಿ ಬೆಳೆದವರು. ಇಪ್ಪತ್ತು ವರ್ಷದಿಂದಲೂ ಈ ಉದ್ದಿಮೆಯನ್ನು ನಡೆಸುತ್ತಿರುವುದರಿಂದ ಭಾರತದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಇವರಿಬ್ಬರೂ ಭಾರತಕ್ಕೆ ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಬರುತ್ತಾರೆ.

ಜ್ಹೀಲ್ ಅವರ ಭಾರತದ ನಂಟು ಆರಂಭವಾದದ್ದು ಬಹಳ ಹಿಂದೆಯೇ. ಒಮ್ಮೆ ಭಾರತಕ್ಕೆ ಬಂದಾಗ ಭಾರತೀಯ ಸನಾತನ ಸಂಸ್ಕೃತಿಗೆ ಮಾರುಹೋದರು. ಇಲ್ಲಿನ ನಾರಾಯಣ ಗುರುಕುಲದಲ್ಲಿ ವ್ಯಾಸಂಗ ಮಾಡಿದರು. ಈ ಪೈಕಿ ಬೆಂಗಳೂರು ಸಮೀಪದ ಸೋಮನಹಳ್ಳಿಯೂ ಒಂದು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನೆಲೆಸಿ `ಶ್ರಾದ್ಧ' ಮಾಡುವುದನ್ನೂ ಇವರು ಕಲಿತಿದ್ದಾರೆ. ಇವರಿಗೆ ಕನ್ನಡ ಕೂಡ ಅರ್ಥವಾಗುತ್ತದೆ. ಕನ್ನಡದಲ್ಲಿ ಸರಿಸುಮಾರು ಮಾತು ಕೂಡ ಆಡಬಲ್ಲರು.

ಸಾಹಿತ್ಯಾಸಕ್ತಿ
`ಸಾಹಿತ್ಯ - ಸಂಗೀತ, ಲಲಿತಕಲೆಗಳಲ್ಲಿ ನನಗೆ ಅಗಾಧ ಆಸಕ್ತಿ. ತತ್ವಶಾಸ್ತ್ರ ಹಾಗೂ ಧರ್ಮಶಾಸ್ತ್ರದಲ್ಲಿ ಅಧ್ಯಯನ ಮಾಡಿದ್ದೇನೆ. ಸಾಹಿತ್ಯ, ಸಂಗೀತ ಹಾಗೂ ಪ್ರವಾಸ ನನ್ನ ಹವ್ಯಾಸ' ಎನ್ನುತ್ತಾರೆ ಜ್ಹೀಲ್. ಡಾ. ಅನಂತಮೂರ್ತಿಯವರ `ಸಂಸ್ಕಾರ'ವನ್ನು ಇಂಗ್ಲಿಷ್ ಅನುವಾದದ ಮೂಲಕ ಓದಿಕೊಂಡಿರುವ ಇವರು ಪ್ಯಾರಿಸ್‌ನಲ್ಲಿ ಡಾ. ಅನಂತಮೂರ್ತಿಯವರೊಂದಿಗೆ ನಡೆಸಿದ ಸಂವಾದದ ದಿನವನ್ನು ನೆನಪು ಮಾಡಿಕೊಳ್ಳುತ್ತಾರೆ.

ಪ್ಯಾರಿಸ್‌ನಲ್ಲಿರುವ ಕನ್ನಡಿಗರ ಅಧ್ಯಯನವನ್ನು ಅವರು ಮಾಡಿದ್ದಾರೆ. `1930ರಲ್ಲಿ ಫ್ರಾನ್ಸ್‌ಗೆ ಬಂದ ಹಾಸನ ರಾಜರಾವ್, ಕನ್ನಡದ ಮೊದಲ ಆಂಗ್ಲ ಸಾಹಿತಿ. ಅವರ ಮೊದಲ ಪತ್ನಿ ಫ್ರೆಂಚ್ ಪ್ರಜೆ ಆಗಿದ್ದರು. ಹಾಸನ ರಾಜರಾವ್ ಜಯಕರ್ನಾಟಕ ಕನ್ನಡ ಪತ್ರಿಕೆಗೂ ಬರೆದಿದ್ದಾರೆ. `ಕಾಂತಾಪೂರ' ಕಾದಂಬರಿ ಮೂಲಕ ವಿಶ್ವಖ್ಯಾತಿ ಗಳಿಸಿದ್ದಾರೆ' ಎಂದು ಕರ್ನಾಟಕ ಮತ್ತು ಫ್ರಾನ್ಸ್‌ಗೆ ಇರುವ ನಂಟಿನ ಬಗ್ಗೆ ವಿವರಿಸುತ್ತಾರೆ.

ಭಾರತದಲ್ಲಿ `ವೈದಿಕ' ಅಧ್ಯಯನ ಕಲಿಯುವುದಕ್ಕಾಗಿ ಮಾಂಸಾಹಾರವನ್ನು ಇವರು ತ್ಯಜಿಸಿದ್ದಾರೆ. `ಇದು ನಾನು ಕಲಿತ ವಿದ್ಯೆಗೆ ಕೊಡುವ ಗೌರವ' ಎನ್ನುವ ವ್ಯಾಖ್ಯಾನ ಅವರದ್ದು. ಕರ್ನಾಟಕದ ಹಲವು ಸಂಗೀತಗಾರರನ್ನು ಪ್ಯಾರಿಸ್‌ಗೆ ಕರೆಸಿ ಸಂಗೀತ ಕಛೇರಿ ನಡೆಸಿಕೊಟ್ಟಿದ್ದಾರೆ ಇವರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.