ಕನ್ನಡ ರಾಜ್ಯೋತ್ಸವದ ವಜ್ರ ಮಹೋತ್ಸವದ ಸಂದರ್ಭದಲ್ಲೇ ಹೊರ ಬಿದ್ದ ವಿಶ್ವಬ್ಯಾಂಕ್‌ನ ವರದಿಯೊಂದು ರಾಜ್ಯ ಸರ್ಕಾರದ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಕೈಗಾರಿಕೆ ಮತ್ತು ಉದ್ದಿಮೆ ಗಳನ್ನು ಆರಂಭಿಸಲು ‘ಉದ್ಯಮ ಸ್ನೇಹಿ’ ಪೂರಕ ಪರಿಸರ ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಡುವ ವಿಚಾರದಲ್ಲಿ, ಕರ್ನಾಟಕ 13ನೇ ಸ್ಥಾನದಲ್ಲಿ ಇದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವಬ್ಯಾಂಕ್ ಹಾಗೂ ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಗಳು (ಡಿಐಪಿಪಿ) 350ಕ್ಕೂ ಅಧಿಕ ಮಾನದಂಡಗಳನ್ನು ಆಧರಿಸಿ ನಡೆಸಿದ ಅಧ್ಯಯನದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.
ಮೈಸೂರು ಮಹಾರಾಜರ ದಿವಾನರು ಮಾಡಿದ್ದ ಅಮೋಘ ಕೆಲಸದಿಂದಾಗಿ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿಯೇ ರಾಜ್ಯವು ಕೈಗಾರಿಕಾ ಕ್ಷೇತ್ರದಲ್ಲಿ ಭಾರಿ ಪ್ರಗತಿಯ ಲಕ್ಷಣಗಳನ್ನು ತೋರಿಸಿತ್ತು. ಅದರ ಫಲವಾಗಿಯೇ ರಾಜ್ಯಗಳ ಪುನರ್‌ವಿಂಗಡನೆಯಾದ ಆರಂಭದ ದಶಕಗಳಲ್ಲಿ ರಾಜ್ಯದ ಕೈಗಾರಿಕಾ ಪ್ರಗತಿ ಉತ್ತಮ ಮಟ್ಟವನ್ನೇ ಕಾಯ್ದುಕೊಂಡಿತ್ತು.ಆದರೆ, ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಅದೇ ವೇಗವನ್ನು ಕಾಯ್ದುಕೊಂಡು ಹೋಗಲು ವಿಫಲವಾದವು.
ಮುಖ್ಯವಾಗಿ ಸರಕುಗಳ ತಯಾರಿಕಾ ಕ್ಷೇತ್ರದಲ್ಲಿ ಹೆಚ್ಚು , ಹೆಚ್ಚು ಖಾಸಗಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ರಾಜ್ಯವು ನಿರಂತರವಾಗಿ ವಿಫಲವಾಗುತ್ತಲೇ ಹೋಯಿತು. ಇದರ ಫಲವಾಗಿಯೇ ಕೆಲವು ವರ್ಷಗಳಿಂದೀಚೆಗೆ ರಾಜ್ಯದ ಒಟ್ಟಾರೆ ಆಂತರಿಕ ಉತ್ಪಾದನಾ ಪ್ರಮಾಣ (ಜಿಎಸ್‌ಡಿಪಿ) ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಮಟ್ಟಕ್ಕೆ ಕುಸಿದಿದೆ.
ರಾಜ್ಯದತ್ತ ಅದರಲ್ಲೂ ಮುಖ್ಯವಾಗಿ ತಯಾರಿಕಾ ಕ್ಷೇತ್ರದತ್ತ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವಂತೆ ಮಾಡುವುದೇ ರಾಜ್ಯವು ಸದ್ಯಕ್ಕೆ ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿದೆ. ಮೇಲ್ನೋಟಕ್ಕೆ ಇದೊಂದು ತುಂಬ ಸರಳ ಎಂಬಂತೆ ಕಂಡರೂ, ಬಹಳ ಕಠಿಣವಾದ ಏರು ಹಾದಿ ಇದಾಗಿದೆ. ಎಲ್ಲ ಹಂತಗಳಲ್ಲೂ ಎದುರಾಗುತ್ತಿರುವ ಅಧಿಕಾರಶಾಹಿಯ ಉದಾಸೀನ ಮತ್ತು ದೊಡ್ಡಸ್ತಿಕೆ ತೋರುವ ಧೋರಣೆಯನ್ನು ಕಂಡಾಗ ಈ ಹಾದಿ ಇನ್ನಷ್ಟು ಕಠಿಣವೆಂದೇ ಭಾಸವಾಗುತ್ತಿದೆ.
ಬಂಡವಾಳ ಹೂಡಿಕೆಯಲ್ಲಿನ ತುಣುಕನ್ನು ಕಸಿದುಕೊಳ್ಳಲು ಹಲವು ದೇಶಗಳು ಮತ್ತು ರಾಜ್ಯಗಳು ಇಂದು ಪರಸ್ಪರ ಸ್ಪರ್ಧೆಗೆ ಇಳಿದಿವೆ. ‘ಉದ್ಯಮ ಸ್ನೇಹಿ’ ಕ್ರಮಗಳನ್ನು ಜಾರಿಗೆ ತಂದವರು ಮಾತ್ರ ಈ ಸ್ಪರ್ಧೆಯಲ್ಲಿ ಗೆಲುವಿನ ನಗೆ ಬೀರುತ್ತಾರೆ. ಉತ್ತಮ ವಾತಾವರಣ, ಮೂಲಸೌಲಭ್ಯ ಮತ್ತು ಉದ್ಯಮ ಆರಂಭಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವವರತ್ತ ಮಾತ್ರ ಹೂಡಿಕೆದಾರರ ಒಲವು ಹರಿಯುತ್ತದೆ ಎನ್ನುವುದನ್ನು ಯಾರೊಬ್ಬರೂ ನಿರ್ಲಕ್ಷಿಸುವಂತಿಲ್ಲ.
2017ರಲ್ಲಿ ಜಾಗತಿಕ ಆರ್ಥಿಕತೆ ಶೇ 3.5ರಷ್ಟು ಮಾತ್ರ ಪ್ರಗತಿ ಸಾಧಿಸಬಹುದು ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಅಂದರೆ, ಆರ್ಥಿಕ ಹಿಂಜರಿತ ಪರಿಸ್ಥಿತಿಯು ಮುಂದೆಯೂ ಮುಂದುವರಿಯಲಿದೆ ಎಂಬುದನ್ನು ಅದು ಸೂಚ್ಯವಾಗಿಯೇ ತಿಳಿಸಿದೆ. 2008ರಿಂದ ಆರಂಭವಾದ ಆರ್ಥಿಕ ಹಿಂಜರಿತ ಈಗಲೂ ಇದೆ ಎಂಬುದನ್ನೂ ಇದು ತೋರಿಸುತ್ತದೆ. ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲೂ ಭಾರತ ಮತ್ತು ಚೀನಾ ದೇಶಗಳು ಮಾತ್ರ ಆಶಾವಾದದ ಬೆಳ್ಳಿ ಕಿರಣಗಳಂತೆ ಇಡೀ ವಿಶ್ವದ ಗಮನ ಸೆಳೆಯುತ್ತಿವೆ. ಹಾಗಂತ ಭಾರತದಲ್ಲಿ ಹೂಡಿಕೆ ಅವಕಾಶಗಳೇನೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಲ್ಲ.
ಈ ಮೊದಲು ಸೃಷ್ಟಿಸಿದ ಅಧಿಕ ಸಾಮರ್ಥ್ಯಗಳ ಬಳಕೆಯಿಂದಷ್ಟೇ ಈಗಿನ ಪ್ರಗತಿ ಸಾಧ್ಯವಾಗಿದೆ. ಆದಾಗ್ಯೂ, ಸೇವಾ ಕ್ಷೇತ್ರ ಇಂದು ಆರೋಗ್ಯಕರ ಬೆಳವಣಿಗೆಯ ಗತಿಯನ್ನು ಕಾಯ್ದುಕೊಂಡಿದೆ. ನಿಜಕ್ಕೂ ಭಾರತವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿರುವುದೇ ಈ ಕ್ಷೇತ್ರ ಎಂದರೆ ಉತ್ಪ್ರೇಕ್ಷೆ ಆಗಲಾರದು. ಈ ಪರಿಸ್ಥಿತಿ ಇನ್ನೆಷ್ಟು ದಿನ ಮುಂದುವರಿಯುತ್ತದೋ ಗೊತ್ತಿಲ್ಲ.
ಕಳೆದ ಆರು ತ್ರೈಮಾಸಿಕಗಳಿಗೆ ಹೋಲಿಸಿದರೆ ಕೊನೆಯ ತ್ರೈಮಾಸಿಕದಲ್ಲಿ ಉದ್ದಿಮೆ ವಹಿವಾಟಿನ ಆತ್ಮವಿಶ್ವಾಸವು ಗರಿಷ್ಠ ಪ್ರಮಾಣಕ್ಕೆ ತಲುಪಿದೆ ಎಂಬುದನ್ನು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಒಕ್ಕೂಟದ (ಫಿಕ್ಕಿ) ಅಧ್ಯಯನ ಕಂಡುಕೊಂಡಿದೆ. ಇದೊಂದು ಆಶಾದಾಯಕ ಬೆಳವಣಿಗೆ ಎಂದೇ ಹೇಳಬೇಕು.
ಹೊಸ ಉದ್ಯಮ ಸ್ಥಾಪನೆಗೆ ಪ್ರಮುಖ ಅಡಚಣೆಗಳೆಂದರೆ ಭೂಮಿಯ ದರ, ಮೂಲಸೌಲಭ್ಯ ವೆಚ್ಚ, ತೆರಿಗೆಯ ಹೊರೆ, ಅನುಮತಿ ಪಡೆಯಲು ಕಿರಿಕಿರಿ ಮೊದಲಾದವುಗಳು. ಈ ಸಮಸ್ಯೆಗಳು ನಿಯಮಿತವಾಗಿ ಮಾಧ್ಯಮಗಳು ಮತ್ತು ವಿವಿಧ ವೇದಿಕೆಗಳಲ್ಲಿ ಬಿಂಬಿತವಾಗುತ್ತಿದ್ದರೂ ಅದು ಅಲ್ಲಿಗೇ ಮರೆತುಹೋಗಿ ಯಥಾಸ್ಥಿತಿ ಮುಂದುವರಿಯುತ್ತಿದೆ. ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಅಧಿಕಾರಸ್ಥರು ತಮ್ಮ ಲಾಭಕ್ಕಷ್ಟೇ ಗಮನ ನೀಡುತ್ತಾರೆ. ಹೀಗಾಗಿಯೇ ಈ ಸಮಸ್ಯೆಗಳೆಲ್ಲವೂ ಮುಂದುವರಿಯುತ್ತಲೇ ಇವೆ.
ಉದ್ದಿಮೆ ವ್ಯವಹಾರ ನಡೆಸುವಲ್ಲಿ ಮಾನವನ ಹಸ್ತಕ್ಷೇಪವನ್ನು ತಡೆಗಟ್ಟುವ ನಿಟ್ಟಿನಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ವ್ಯಾಪಕ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇದೆ. ಇಂದು ಆಗಿರುವುದು ಅರೆ ಮನಸ್ಸಿನ ತಾಂತ್ರಿಕ ಸುಧಾರಣೆ. ಇದರಿಂದ ಗೊಂದಲ ಹೆಚ್ಚಿ ಇನ್ನೊಂದು ಬಗೆಯಲ್ಲಿ ಲಾಭ ಪಡೆಯುವ ಪರಿಪಾಠ ನಡೆಯುತ್ತಿದೆ. ಮಾನವ ಹಿತಾಸಕ್ತಿಯಿಂದ ನಡೆಯುವ ಎಲ್ಲ ಚಟುವಟಿಕೆಗಳನ್ನೂ ಹೊರಗುತ್ತಿಗೆ ಕೊಡುವ ಮೂಲಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದರಷ್ಟೇ ಈಗಿನ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆ ತರಲು ಸಾಧ್ಯ.
ಕರ್ನಾಟಕವು ದೇಶದಲ್ಲೇ ‘ಜ್ಞಾನದ ರಾಜಧಾನಿ’ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಈ ಕ್ಷೇತ್ರದಲ್ಲಿ ಹೂಡಿಕೆ ನಡೆಸುವುದಕ್ಕೆ ಜಗತ್ತಿನ ಗಮನವನ್ನು ರಾಜ್ಯವು ನಿರಂತರವಾಗಿ ಸೆಳೆಯುತ್ತಲೇ ಇದೆ. ಆದರೆ, ದೇಶದ ಇತರ ರಾಜ್ಯಗಳೂ ಈ ಹೂಡಿಕೆಯ ಅವಕಾಶವನ್ನೂ ನಿಧಾನವಾಗಿ ಮತ್ತು ವ್ಯವಸ್ಥಿತವಾಗಿ ಕಸಿದುಕೊಳ್ಳತೊಡಗಿವೆ. ಸರ್ಕಾರ ಇನ್ನಾದರೂ ರಚನಾತ್ಮಕವಾಗಿ ಸ್ಪಂದಿಸದೆ ಹೋದರೆ ತಯಾರಿಕಾ ಕ್ಷೇತ್ರದಲ್ಲಿನ ಹಿನ್ನಡೆಯ ಗತಿ ಜ್ಞಾನಾಧಾರಿತ ಉದ್ದಿಮೆ ಕ್ಷೇತ್ರಕ್ಕೂ ಆಗುವ ಅಪಾಯ ಇದೆ.
ರಾಜ್ಯೋತ್ಸವದ ವಜ್ರಮಹೋತ್ಸವವು ರಾಜ್ಯದ ಕೈಗಾರಿಕಾ ಚಿತ್ರಣವನ್ನೇ ಆಮೂಲಾಗ್ರವಾಗಿ ಬದಲಿಸಲು ಹೊಸ ತಿರುವು ನೀಡುವಂತಾಗಲಿ ಎಂದು ಆಶಿಸೋಣ.
ಮುಖ್ಯಮಂತ್ರಿ ಮುಂದಾಳತ್ವ ಬೇಕು
ಖಾಸಗಿ ಬಂಡವಾಳ ಹೂಡಿಕೆಯನ್ನು ರಾಜ್ಯದತ್ತ ಹರಿಯುವಂತೆ ಮಾಡುವುದೇ ರಾಜ್ಯ ಸರ್ಕಾರದ ಮುಂದಿರುವ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಕಂಡುಕೊಳ್ಳಬಹುದಾದ ಪರಿಹಾರವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ನೇತೃತ್ವದ ಅತ್ಯುನ್ನತ ಮಟ್ಟದ ತಂಡವೊಂದನ್ನು ರಚಿಸಬೇಕು. ಇದರಲ್ಲಿ ಯಾವುದೇ ಕೊರತೆಯಾದರೂ ತಂಡ ರಚಿಸಿರುವುದರ ಮೂಲ ಉದ್ದೇಶವೇ ಈಡೇರಲಾರದು.
ವಿವಿಧ ರಾಜ್ಯಗಳ ಅಭಿವೃದ್ಧಿಯ ಇತಿಹಾಸದ ಪುಟ ತೆರೆದು ನೋಡಿದಾಗ, ಹಲವಾರು ಸಂಗತಿಗಳು ಗಮನಕ್ಕೆ ಬರುತ್ತವೆ. ಆರ್ಥಿಕವಾಗಿ ಯಶಸ್ವಿಯಾಗಿರುವ ರಾಜ್ಯಗಳು ಕ್ರಿಯಾಶೀಲ ಮುಖ್ಯಮಂತ್ರಿಗಳನ್ನು ಹೊಂದಿದ್ದವು. ಅಭಿವೃದ್ಧಿ ಕುರಿತ ಅವರ ಕಾಳಜಿಯಿಂದಾಗಿಯೇ ಅವರ ರಾಜ್ಯಗಳು ಎರಡಂಕಿಯ ಆರ್ಥಿಕ ಪ್ರಗತಿ ಪಥದಲ್ಲಿ ಮುನ್ನಡೆದಿವೆ.
ಬಿಹಾರದಲ್ಲಿ ನಿತೀಶ್ ಕುಮಾರ್, ಒಡಿಶಾದಲ್ಲಿ ನವೀನ್ ಪಟ್ನಾಯಕ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದಾಗ ತಮ್ಮ, ತಮ್ಮ ರಾಜ್ಯಗಳ ಆರ್ಥಿಕ ಅಭಿವೃದ್ಧಿಯ ರೂವಾರಿಗಳಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ನಮ್ಮ ನೆರೆಹೊರೆಯನ್ನೇ ನೋಡುವುದಾದರೆ ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ರಾಜ್ಯಗಳು ಉದ್ಯಮ ಕ್ಷೇತ್ರದಲ್ಲಿ ರಾಜ್ಯವನ್ನು ಮುಂದೆ ತರಲು ಶಕ್ತಿಮೀರಿ ಪ್ರಯತ್ನಿಸಿರುವುದು ಕಂಡುಬರುತ್ತದೆ.
ಈ ನಿಟ್ಟಿನಲ್ಲಿ ಕರ್ನಾಟಕದ ಮುಖ್ಯಮಂತ್ರಿ ವೈಯಕ್ತಿಕವಾಗಿ ಮುಂದಾಳತ್ವ ವಹಿಸಿಕೊಂಡು, ರಾಜ್ಯದ ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ವಿಶೇಷವಾಗಿ ತೊಡಗಿಸಿಕೊಳ್ಳಬೇಕಾಗಿದೆ.
ಮುಖ್ಯಮಂತ್ರಿ ಅವರ ನೇತೃತ್ವದಲ್ಲೇ ಬಂಡವಾಳ ಹೂಡಿಕೆ ಸಚಿವಾಲಯವೊಂದನ್ನು ರಚಿಸಬೇಕಿರುವುದು ಎರಡನೇ ಮುಖ್ಯ ಕ್ರಮವಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ನಿರ್ದಿಷ್ಟ ಉದ್ದೇಶವಿಟ್ಟುಕೊಂಡು ರಚಿಸುವ ಇಂತಹ ಸಚಿವಾಲಯ ದೇಶದಲ್ಲೇ ಮೊದಲ ಪ್ರಯತ್ನ ಎಂಬಂತೆ ಬಿಂಬಿತಗೊಳ್ಳಲಿದೆ. ಈಗಾಗಲೇ ಕೈಗಾರಿಕಾ ರಂಗದ ನೆಚ್ಚಿನ ರಾಜ್ಯಗಳು ಅಳವಡಿಸಿಕೊಂಡಿರುವ ಕ್ರಮಗಳನ್ನು ನಮ್ಮಲ್ಲೂ ಅಳವಡಿಸಿಕೊಳ್ಳಲೂ ಇದು ಸಹಕಾರಿಯಾಗಲಿದೆ.
ಅಲ್ಪಾವಧಿ, ದೀರ್ಘಾವಧಿ ಕಾರ್ಯಕ್ರಮ
* ಖಾಸಗಿ ಬಂಡವಾಳ ಆಕರ್ಷಿಸಲು ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ತಂಡ ರಚನೆ
* ಮುಖ್ಯಮಂತ್ರಿ ನೇತೃತ್ವದಲ್ಲೇ ಹೂಡಿಕೆ ಸಚಿವಾಲಯ ರಚನೆ
* ಕೈಗಾರಿಕಾ ಪ್ರಗತಿಯಲ್ಲಿ ಮುಂಚೂಣಿಯಲ್ಲಿ ಇರುವ ರಾಜ್ಯಗಳು ಅಳವಡಿಸಿಕೊಂಡಿರುವ ನೀತಿಯ ಪಾಲನೆ
* ಡಿಜಿಟಲ್ ತಂತ್ರಜ್ಞಾನದ ವ್ಯಾಪಕ ಬಳಕೆಯ ಪ್ರಯೋಜನ ಪಡೆದುಕೊಳ್ಳುವುದು
* ಉತ್ಪಾದನಾ ಕ್ಷೇತ್ರಕ್ಕಾಗಿರುವ ಗತಿ ಜ್ಞಾನಾಧಾರಿತ ಕ್ಷೇತ್ರಕ್ಕೂ ವಿಸ್ತರಣೆ ಆಗದಂತೆ ಎಚ್ಚರ ತಳೆಯುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.