ADVERTISEMENT

ಮಕ್ಕಳಿಗೆ ಬೇಕು ಮಣ್ಣಿನ ಗುಣ

ಮನು ಎಚ್‌.ಎಸ್‌.ಹೆಗ್ಗೋಡು
Published 10 ನವೆಂಬರ್ 2014, 19:30 IST
Last Updated 10 ನವೆಂಬರ್ 2014, 19:30 IST

​ಮೊನ್ನೆ ರಾತ್ರಿ ಹೀಗೆ ನಾವು ಕೆಲವರು ಜ್ಯೂಸ್ ಅಂಗಡಿಯಲ್ಲಿ ಜ್ಯೂಸ್ ಕುಡಿಯುತ್ತಾ ನಿಂತಿದ್ದೆವು. ಬೈಕ್‌ನಲ್ಲಿ ​ಬಂದ ಇಬ್ಬರು ಹುಡುಗರು ಗಾಬರಿಯಲ್ಲಿ (ಮೂರ್ನಾಲ್ಕು ಹೆಸರು ಹೇಳಿ) ‘ಈ ಸಾಫ್ಟ್ ಡ್ರಿಂಕ್ಸ್ ಇದ್ಯಾ?’ ಎಂದು ಕೇಳಿದರು. ಆದರೆ ಅಲ್ಲಿ ಕಿತ್ತಳೆ, ಸೇಬು, ದ್ರಾಕ್ಷಿ ಮುಂತಾದ ಹಣ್ಣಿನ ರಸಗಳನ್ನು ಬಿಟ್ಟರೆ ಅವರು ಕೇಳಿದ ‘ಸಾಫ್ಟ್‌ ಡ್ರಿಂಕ್ಸ್‌’ ಇರಲಿಲ್ಲ. ಪಾಪ, ಆ ಇಬ್ಬರು ಹುಡುಗರು ಮತ್ತೆ ತಮ್ಮ ಪೇಯ ವನ್ನು ಮುಂದೆಲ್ಲೋ ಹುಡುಕುತ್ತಾ ಹೊರಟೇ ಬಿಟ್ಟರು!

​​ಇದೆಲ್ಲಾ ಅವರವರ ಆಸಕ್ತಿಗೆ, ರುಚಿಗೆ ಸಂಬಂಧಿಸಿದ ವಿಷಯ ಅನ್ನಿಸಬಹುದು. ಆದರೆ ಇತ್ತೀಚೆಗೆ ಕಣ್ಣು ಬಿಟ್ಟಿರುವ ನಮ್ಮ ಮಕ್ಕಳಿಗೆ ನಮ್ಮ ಮಣ್ಣಿನ ಗಂಧದ ರುಚಿಯನ್ನು ತೋರಿಸದಿರುವಲ್ಲಿ ನಮ್ಮ ತಪ್ಪು ಇದ್ದೇ ಇದೆ. ಆಧುನಿಕ ಪೇಯಗಳು, ಜಂಕ್ ಫುಡ್‌ಗಳು ನಮ್ಮ ಪಾರಂಪರಿಕ ಆರೋಗ್ಯದಾಯಕ ಆಹಾರದ ಸಂಸ್ಕೃತಿಯನ್ನು ಮಕ್ಕಳಿಂದ ದೂರವಾಗಿಸುತ್ತಾ ಮುಂದಿನ ಪೀಳಿಗೆಯೊಂದಿಗಿನ ಕೊಂಡಿಯನ್ನೇ ಕಡಿದುಕೊಳ್ಳುತ್ತಿದೆ. ಹಾಗೆಯೇ ನಮ್ಮ ಹಲವು ಕಲಾ ಪ್ರಕಾರಗಳು ಕೂಡ.

ನಮ್ಮ ತಾತ ಮಾಡಿಟ್ಟ ಜಮೀನನ್ನೋ ಇಲ್ಲಾ ನಮ್ಮ ಅಜ್ಜಿ ಮುತ್ತಜ್ಜಿಯರು ಕೂಡಿಟ್ಟ ಬೆಲೆಬಾಳುವ ಆಭರಣಗಳನ್ನೋ ನಾವೆಂದೂ ಉಪೇಕ್ಷಿಸಿದ್ದೇ ಇಲ್ಲ. ಆದರೆ ಕಲೆಗಳನ್ನು, ಅದರಲ್ಲೂ ಜನಪದ ಕಲೆಗಳನ್ನು ಹೆಚ್ಚಿನ ಕಡೆಗಳಲ್ಲಿ ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನವೇ ನಡೆಯುತ್ತಿಲ್ಲ. ಹೆಚ್ಚಿನ ಕಡೆಗಳಲ್ಲಿ ಸ್ವತಃ ಕಲಾವಿದರೇ ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ತಮ್ಮ ಕಲೆಯ ಬಗ್ಗೆ ಹೆಮ್ಮೆ ಯಿಂದ ಹೇಳಿದ್ದು, ಮಾತಾಡಿದ್ದು ಕಮ್ಮಿ ಎಂದೇ ಹೇಳಬೇಕು.

ಮನರಂಜನೆಯನ್ನೂ ಮೀರಿದ ಜ್ಞಾನ ಪ್ರಸಾರ ಮಾಡಿದ ಜನಪದ ಕಲೆಗಳ ದೊಡ್ಡ ಮೌಖಿಕ ಪರಂಪರೆಯೇ ನಮ್ಮ ನಾಡಿನಲ್ಲಿದೆ. ಅಂಥ ಮೌಖಿಕ ಪ್ರವಾಹವನ್ನು ಶಾಲಾ ರೀತಿಯ ಪಠ್ಯಕ್ರಮದಿಂದ ಮುಂದುವರೆಸಲು ಸಾಧ್ಯವಿಲ್ಲ. ಇದು ಸಹಜವಾಗಿ ಶಾಲೆಯ ಹೊರಗೆ ಅಥವಾ ಶಾಲಾ ಸಮಯದ ನಂತರವೇ ಆಗಬೇಕಾದದ್ದು. ಅಂದರೆ ಸಮುದಾಯದ ಮಧ್ಯವೇ ನಡೆಯಬೇಕಾದದ್ದು. ಸಮುದಾಯ ಅಂದರೆ ಸ್ಥಳೀಯ ಕಲಾವಿದರು, ಕಲಾ ಪೋಷಕರು ಹಾಗೂ ಮಕ್ಕಳ ಪೋಷಕರು ಮುಂತಾದವರು.

ಮಕ್ಕಳ ಮನೋವಿಕಾಸಕ್ಕೆ ಕಲೆ ತುಂಬಾ ಮಹತ್ವದ ಶಿಕ್ಷಣವೆನ್ನುವುದು ಪ್ರಪಂಚದಾದ್ಯಂತ ಸಾಬೀತಾದ ಸತ್ಯ. ನಮ್ಮ ಮಕ್ಕಳು ಪುಸ್ತಕದ ಹುಳುಗಳಾಗಲಿ ಎಂದು ಯಾರೂ ಬಯಸಿದ್ದಿಲ್ಲ. ಆದರೆ ಪರೀಕ್ಷೆ, ‘ಮಾರ್ಕ್ಸ್ ಭವಿಷ್ಯ’ ಎನ್ನುವ ತೂಗುಯ್ಯಾಲೆಯಲ್ಲಿ ಬೇರೆಯದನ್ನು ನೋಡುವ ವ್ಯವಧಾನ ನಮ್ಮ ಮಕ್ಕಳಿಗಾಗಲೀ, ಪೋಷಕರಿಗಾಗಲೀ ಇಲ್ಲ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಂಥ ಮೌಖಿಕ ಶಿಕ್ಷಣವೂ ಅವಶ್ಯ ಅನ್ನುವುದನ್ನು ನಾವು ಮನಗಾಣಬೇಕಿದೆ ಅಷ್ಟೇ.

ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದ ಹಲವು ದೇಶಗಳಲ್ಲಿ ಗೊಂಬೆಯಾಟದಂಥ ಪ್ರದರ್ಶನ ಕಲೆಗಳು ಬಳಕೆ ಯಲ್ಲಿವೆ. ಇಂಥ ಪ್ರದರ್ಶನ ಕಲೆಗಳ ಮೂಲಕ ಮಕ್ಕಳು ತಮ್ಮ ಕಲ್ಪನಾ ಶಕ್ತಿಯನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಸಂಘಟಿಸುವ, ನಿರ್ವಹಿಸುವ ಮುಂತಾದ ಕೌಶಲಗಳನ್ನು ಕಲಿತುಕೊಳ್ಳುತ್ತಾರೆ.

ನಾವು ಪೋಷಕರು ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಕೇವಲ ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆದು ಪಾಸ್ ಆದರೆ ಮಾತ್ರ ಸಾಲದು, ಮುಂದೆ ಭವಿಷ್ಯದಲ್ಲಿ ಅವಶ್ಯವಾಗಿ ಬೇಕಾದ ಜೀವನ ಕೌಶಲಗಳನ್ನು ಚಿಕ್ಕ ವಯಸ್ಸಿನಿಂದಲೇ ಕಲಿತುಕೊಳ್ಳಲು ಅವಕಾಶ ಕಲ್ಪಿಸುವ ಜವಾಬ್ದಾರಿ ಕೂಡ ನಮ್ಮದೇ.

ನಮ್ಮ ಮಣ್ಣಿನ ಕಲೆಗಳನ್ನು ಆಸ್ವಾದಿಸುವ ಸೂಕ್ಷ್ಮತೆಯನ್ನು ಮಕ್ಕಳು ಗಳಿಸಿಕೊಳ್ಳದಿದ್ದಲ್ಲಿ ಬೆರಳೆಣಿಕೆಯಲ್ಲಿ ಇರುವ ಕಲಾವಿದರಿಗೂ ಪ್ರೇಕ್ಷಕ ವರ್ಗವೇ ಇಲ್ಲದಾಗಬಹುದು.

ಕರ್ನಾಟಕದ ಪ್ರದರ್ಶನ ಕಲೆಗಳಲ್ಲೇ ಮುಖ್ಯವಾದ ಯಕ್ಷಗಾನಕ್ಕೆ ದೊಡ್ಡ ಪ್ರೇಕ್ಷಕವರ್ಗ ಬೆಂಗಳೂರಿನಂತಹ ಮಹಾನಗರಗಳಲ್ಲೂ ಇರುವುದಕ್ಕೆ ಮುಖ್ಯವಾದ ಕಾರಣ ಅಲ್ಲಲ್ಲಿ ಕಟ್ಟಿ ಬೆಳೆಸಿದ ಮಕ್ಕಳ ಯಕ್ಷಗಾನ ಮೇಳಗಳು. ಹಲವು ವರ್ಷಗಳ ಹಿಂದೆ ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ ಬೆಳೆಸಿದ ಶ್ರೀಧರ್ ಹಂದೆಯವರ ಪ್ರಯತ್ನದಿಂದಾಗಿ ಈ ಕಲೆ ದೇಶದ ಗಡಿಗಳನ್ನು ದಾಟಿ ಪ್ರಖ್ಯಾತವಾಗಿದೆ.

ಹಾಗೆ ಕಡತೋಕ ಮಂಜುನಾಥ ಭಾಗವತರ ನಿರಂತರವಾದ ಪ್ರಯತ್ನದಿಂದ ಕರಾವಳಿ ಮಲೆನಾಡುಗಳ ಉದ್ದಗಲಕ್ಕೂ  ದೊಡ್ಡ ಒಂದು ಕಲಾವಿದರ ದಂಡೇ ನಿರ್ಮಾಣವಾಗಿದೆ. ಬೆಂಗಳೂರಿನಲ್ಲೂ ಮೋಹನ್ ಆಳ್ವಾ ಹಾಗೂ ಶ್ರೀನಿವಾಸ ಸಾಸ್ತಾನ್ ಮುಂತಾದವರು ಹಲವು ವರ್ಷಗಳಿಂದ ಮಕ್ಕಳ ತರಬೇತಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.

ಹೀಗೆ ಚಿಕ್ಕಂದಿನಲ್ಲಿ ಯಕ್ಷಗಾನವನ್ನು ಅಭ್ಯಾಸ ಮಾಡಿದ ಎಲ್ಲರೂ ಜೀವನ ಪೂರ್ತಿ ಯಕ್ಷಗಾನವನ್ನೇ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಅಂತೇನೂ ಅಲ್ಲ. ಆದರೆ ಯಕ್ಷಗಾನದಿಂದ ರೂಢಿಸಿಕೊಂಡ ಸ್ಥಿರ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಜೀವನದ ಹಲವು ರಂಗಗಳಲ್ಲಿ ಯಶಸ್ವಿಗಳಾಗಿದ್ದಾರೆ.

ಹೇಗೆ ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಯಕ್ಷಗಾನದ ತರಬೇತಿಗಳು ಅಲ್ಲಲ್ಲಿ ಸಮುದಾಯದ ಕಲಾವಿದರಿಂದ ನಡೆಯುತ್ತಿರುವ ಹಾಗೆ ಬೇರೆ ಕಲಾ ಪ್ರಕಾರಗಳಾದ ಗೀಗಿ ಪದವೋ ಇಲ್ಲ, ಅಂಟಿಕೆ ಪಿಂಟಿಕೆಗಳು ಸಮುದಾಯದ ಮಕ್ಕಳನ್ನು ತಲುಪುತ್ತಿಲ್ಲ.

ಕೋಲಾಟದಂತಹ ಕೆಲವು ಕಲೆಗಳು ಅಲ್ಲಲ್ಲಿ ಇಣುಕು ಹಾಕುತ್ತಾ ಇರಬಹುದಾದರೂ ಅದು ಹೆಚ್ಚಿನ ಸಂದರ್ಭಗಳಲ್ಲಿ ಶಾಲೆಯ ವಾರ್ಷಿಕೋತ್ಸವದ ಪಟ್ಟಿಯನ್ನು ತುಂಬುವುದಕ್ಕಷ್ಟೇ ಬಳಕೆಯಾಗಿದ್ದು ಹೆಚ್ಚು.

ಕರ್ನಾಟಕದ ಇತರ ಜನಪದ ಕಲೆಗಳಾದ ವೀರಗಾಸೆಯೋ ಇಲ್ಲ, ಲಾವಣಿ ಹಾಡುಗಳು ಮುಂತಾದ ಪ್ರಕಾರಗಳ ಕಲಾವಿದರು ಅಲ್ಲಲ್ಲಿ ಇದ್ದರೂ, ಮಕ್ಕಳಿಗೆ ನೇರವಾಗಿ ಕಲಿಸಿ ಶಾಲೆಯ ಅಂಗಳದಲ್ಲಿ ಪ್ರದರ್ಶಿಸುವ ಪ್ರಯತ್ನಗಳು ನಡೆಯುತ್ತಿರುವುದು ಬಹಳ ಕಮ್ಮಿ.

ಯಕ್ಷಗಾನ ಮಕ್ಕಳ ಮೇಳಗಳ ಹಾಗೆ ಮತ್ತುಳಿದ ಅಮೂಲ್ಯ ಕಲಾಪ್ರಕಾರಗಳ ಕಲಾವಿದರು ಹಾಗೂ ಸಮುದಾಯ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ. ಮುಖ್ಯವಾಗಿ ಪೋಷಕರು ನಮ್ಮ ಪ್ರದೇಶದ ಜನಪದ ಕಲೆಗಳು ನಮ್ಮ ಮಕ್ಕಳಿಗೂ ಬೇಕೆಂದು ಅಪೇಕ್ಷಿಸಬೇಕು. ಪಠ್ಯದ ಹೊರತಾದ ಇಂತಹ ಶಕ್ತಿಗಳು ಮಕ್ಕಳ ಭವಿಷ್ಯಕ್ಕೆ ಅಥವಾ ಮುಂದಿನ ಪೀಳಿಗೆಗೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳ ಹಾಗೆ ಜೀವನಕ್ಕೆ ಬೇಕಾದ ಪೋಷಕಾಂಶಗಳು ಅನ್ನೋದನ್ನ ಅರ್ಥಮಾಡಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.