ADVERTISEMENT

ರಾಸಾಯನಿಕ ಇಲ್ಲಿಲ್ಲ ಸಾವಯವವೇ ಎಲ್ಲ...

ರಮೇಶ ಎಸ್.ಕತ್ತಿ
Published 28 ಜನವರಿ 2013, 19:59 IST
Last Updated 28 ಜನವರಿ 2013, 19:59 IST

ಸುಮಾರು ಹತ್ತು ವರ್ಷಗಳ ಹಿಂದೆ ಈ ಜಮೀನು ಸಂಪೂರ್ಣ ಬಂಜರು ಭೂಮಿ. ಈಗ ಇಲ್ಲಿ ಬೆಳೆಗಳು ನಳನಳಿಸುತ್ತಿವೆ, ಅದೂ ರಾಸಾಯನಿಕಗಳ ಬಳಕೆಯೇ ಇಲ್ಲದೆ!ಇದು ವಿಜಾಪುರ ಜಿಲ್ಲೆ ಇಂಡಿ ತಾಲ್ಲೂಕಿನ ನಾಗರಹಳ್ಳಿ ನಾನಾಗೌಡ ಪಾಟೀಲರ ಜಮೀನಿನ ಕಥೆ. ಒಣ ಭೂಮಿಯನ್ನು ಹದ ಮಾಡುವಲ್ಲಿ ಸಾಕಷ್ಟು ಶ್ರಮ ವಹಿಸಿರುವ ಇವರು ಈಗ ಸಾವಯವ ಕೃಷಿ ವಿಧಾನದ ಮೂಲಕ ಯಶಸ್ವಿ ಕೃಷಿಕರಾಗಿದ್ದಾರೆ.  ಇದೇ ಕಾರಣಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ 2010ರ ಶ್ರೇಷ್ಠ ಕೃಷಿಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಕಬ್ಬು ಬೆಳೆದು ಅದರ ಸಿಪ್ಪೆಯನ್ನು ಗದ್ದೆಯಲ್ಲಿ ಒಟ್ಟು ಹಾಕಿ ಸುಡುವುದಿಲ್ಲ, ಬದಲಿಗೆ ಅದನ್ನು ಅಲ್ಲಿಯೇ ಬಿಡುತ್ತಾರೆ. ಅದು ಇದ್ದಲ್ಲಿಯೇ ಕೊಳೆತು ಸಹಜ ತಿಪ್ಪೆಗೊಬ್ಬರವಾಗಿ ಬೆಳೆಗೆ ಆಧಾರವಾಗುತ್ತದೆ. ಹೀಗೆ ಮಾಡುವುದರಿಂದ ಸ್ಥಳದಲ್ಲಿಯೇ ಗೊಬ್ಬರ ತಯಾರಾಗಿ ಅದು ತಂತಾನೆ ಜೀವ ರಸವಾಗಿ ಬೆಳೆಯ ಬೇರಿಗೆ ಕೂಡುತ್ತದೆ. ಇದರಿಂದ ಉತ್ತಮ ಗುಣಮಟ್ಟದ ಬೆಳೆ ಸಾಧ್ಯ ಎನ್ನುವುದು ಪಾಟೀಲ ಅವರ ಮಾತು.

ತಮ್ಮ ತೋಟದಲ್ಲಿ ಒಂದು ಎಕರೆಯಷ್ಟು ಭೂಮಿಯನ್ನು ಬಳಸಿಕೊಂಡು, ಅಲ್ಲಿ ದೇಸಿ ದನದ ಕೊಟ್ಟಿಗೆ  ನಿರ್ಮಾಣ ಮಾಡಿದ್ದಾರೆ. ಜೀವರಸಾಯನಿಕ ಘಟಕ (ಬಯೋಡೈಜಿಸ್ಟಿಕ್), ಗೋಬರ್‌ಗ್ಯಾಸ್ ಇತ್ಯಾದಿ ನಿರ್ಮಿಸಿಕೊಂಡಿದ್ದಾರೆ. 15/50 ಅಳತೆ 8ಅಡಿ ಆಳದ ಬೃಹತ್ ಗುಂಡಿ ತೆಗೆದು ಅಲ್ಲಿ ಸಗಣಿ, ಮೂತ್ರ ಇವುಗಳನ್ನು ಸಂಗ್ರಹಿಸಿದ ತಿಪ್ಪೆಯನ್ನು ರಚನೆ ಮಾಡಿದ್ದಾರೆ. ಅಲ್ಲಿ ಸದಾ ಗೊಬ್ಬರ ರೆಡಿಯಾಗುತ್ತಿರುತ್ತದೆ.

ದೇಸಿ ಕೊಟ್ಟಿಗೆ
20ಕ್ಕೂ ಹೆಚ್ಚು ದೇಸಿ ಆಕಳು ಇವರ ಬಳಿ ಇವೆ. ಇದಕ್ಕೂ ಮೊದಲು ಅವರು ವಿದೇಶಿ ಜರ್ಸಿ ಎಮ್ಮೆಗಳನ್ನು  ತಂದು ಹೈನುಗಾರಿಕೆ ಮಾಡಿದ್ದರು. ಅವುಗಳ ಪೋಷಣೆ ಅನಗತ್ಯ ಎನಿಸಿ ಈಗ ದೇಸಿ ಆಕಳುಗಳನ್ನು ಮಾತ್ರ ಉಳಿಸಿಕೊಂಡು ಅವುಗಳ ಪಾಲನೆ ಮಾಡುತ್ತಿದ್ದಾರೆ.ಅವುಗಳಿಗಾಗಿಯೇ ವಿಶಾಲವಾದ ಶೆಡ್ ನಿರ್ಮಿಸಿ, ಅವುಗಳ ಮೂತ್ರ ಹರಿದು ಬಯೋಗ್ಯಾಸ್ ಘಟಕಕ್ಕೆ ಹೋಗುವಂತೆ ಪೈಪಲೇನ್ ಅಳವಡಿಸಿದ್ದಾರೆ.

ಸಗಣಿ ಮತ್ತು ಗೋಮೂತ್ರ ಗುಂಡಿಯನ್ನು ಬಳಸಿಕೊಂಡು ಗೋಬರ್‌ಗ್ಯಾಸ್ ಘಟಕವನ್ನು ನಿರ್ಮಿಸಿದ್ದಾರೆ. ಅದರಿಂದ ನಿತ್ಯ ತೋಟದಲ್ಲಿನ ಮನೆಗೆ ಬೇಕಾಗುವ ಗ್ಯಾಸ್ ತಯಾರಾಗುತ್ತದೆ. ಇಲ್ಲಿ ಎರಡು ವರ್ಷಗಳಿಂದ ಈ ಘಟಕ ಆರಂಭವಾದ ಮೇಲೆ ಗ್ಯಾಸ್ ಕೊರತೆಯೇ ಆಗಿಲ್ಲವೆಂದು ನಾನಾಗೌಡರು ಹೇಳುತ್ತಾರೆ. `ಯಾವುದೇ ವಿಷಕಾರಿ ರಾಸಾಯನಿಕ ಗೊಬ್ಬರವನ್ನು ಭೂಮಿಗೆ ಹಾಕದೆ, ನಮ್ಮಲ್ಲಿಯೇ ತಯಾರಾದ ಸಾವಯವ ಗೊಬ್ಬರ ಬಳಸುವುದರಿಂದ ಉತ್ತಮ ಆಹಾರಧಾನ್ಯ ಬೆಳೆಯಬಹುದು. ನಮ್ಮ ಗದ್ದೆಯಲ್ಲಿ ನಮ್ಮ ಮನೆಗೆ ಬೇಕಾದ ತರಕಾರಿ ಬೆಳೆಯುತ್ತೇವೆ. ಇದರಿಂದ ಶುದ್ಧ ತರಕಾರಿ, ಧಾನ್ಯ ಸೇವಿಸುವ ತೃಪ್ತಿ ನಮಗಿದೆ' ಎನ್ನುತ್ತಾರೆ ಅವರು.

ಸಾವಯವ ಕೃಷಿಯ ಆರಂಭದಲ್ಲಿ ಕಡಿಮೆ ಇಳುವರಿ ಬರುತ್ತದೆ. ಬರಬರುತ್ತ ನಮ್ಮ ಭೂಮಿ ಸಹಜಗುಣಕ್ಕೆ ತಿರುಗಿ ಉತ್ತಮ ಫಲ ನೀಡುತ್ತದೆ. ವಿಷಮುಕ್ತ ಭೂಮಿ ನಮ್ಮದಾಗತ್ತದೆ' ಎನ್ನುವುದು ಅವರ ಮಾತು. ಇದೇ ಗ್ರಾಮದಲ್ಲಿ `ಅನ್ನದಾತ ಸಾವಯುವ ಪರಿವಾರ ಟ್ರಸ್ಟ್' ಸ್ಥಾಪಿಸಿರುವ ರೈತ ಷಣ್ಮುಖ ಶಾಬಾದಿ ಅವರು ಗ್ರಾಮದಲ್ಲಿ ಎಲ್ಲ ರೈತರಿಗೆ ಇದೇ ರೀತಿಯ ಕೃಷಿ ಪದ್ಧತಿ ಕುರಿತು ಹೇಳಿಕೊಡುತ್ತಿದ್ದಾರೆ. ಮಾಹಿತಿಗೆ: 87229 08755
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.