ಬೆಂಗಳೂರು ನಗರದ ಹೃದಯ ಭಾಗ. ಸದಾ ಗಿಜಿಗಿಜಿಗುಡುವ ಟ್ರಾಫಿಕ್. ಕಿರಿದಾಗಿರುವ ರಸ್ತೆಯಲ್ಲಿ ಎರಡೂ ಕಡೆಗಳಿಂದ ವಾಹನಗಳ ಓಡಾಟ. ವಾಹನಗಳ ನಡುವೆ ನುಸುಳಿ ಈ ದೇಗುಲದ ದ್ವಾರದೊಳಕ್ಕೆ ಕಾಲಿಡುತ್ತಲೇ ಬೇರೆಯದ್ದೇ ಲೋಕ, ಅದು ಭಕ್ತಿಯ ಲೋಕ, ವಾಹನಗಳ ಗಲಾಟೆಯಿಂದ ಮನಸ್ಸಿಗೆ ಆದ ಕಿರಿಕಿರಿಯೆಲ್ಲ ಮಾಯ. ದ್ವಾರದ ಅನತಿ ದೂರ ಸಾಗುತ್ತಿದ್ದಂತೆ ಹೆಬ್ಬಾಗಿಲು, ಒಳಭಾಗದಲ್ಲಿ ದೇವಾನುದೇವತೆಗಳ ಅನಾವರಣ.
ಇದು ಜಯಮಹಲ್ ಬಳಿ ಇರುವ ಸತ್ಯ ಬಂಡೆ ಆಂಜನೇಯ ದೇವಾಲಯ. ಹೆಸರಿಗೆ ಇದು ಆಂಜನೇಯ ದೇವಸ್ಥಾನ. ಆದರೆ ಇಲ್ಲಿ ವಿವಿಧ ದೇವತೆಗಳ ದರ್ಶನವಾಗುತ್ತದೆ. ತಮ್ಮ ಇಷ್ಟ ದೈವದ ದರ್ಶನ ಮಾಡಿಕೊಳ್ಳುವ ಭಾಗ್ಯ ಭಕ್ತಾದಿಗಳಿಗೆ ಇಲ್ಲಿದೆ. ಒಂದೆಡೆ ಗಣೇಶ, ಇನ್ನೊಂದೆಡೆ ರಾಮ, ಲಕ್ಷ್ಮಣ, ಸೀತೆ, ಹನುಮ, ಮತ್ತೊಂದೆಡೆ ಶ್ರೀಕೃಷ್ಣ, ಮಗದೊಂದೆಡೆ ತಿರುಪತಿ- ಪದ್ಮಾವತಿ, ನವಗ್ರಹ... ಹೀಗೆ ದೇವಾನುದೇವತೆಗಳೇ ಇಲ್ಲಿ ಧರೆಗಿಳಿದು ಬಂದಂತಿದೆ. ಇದೇ ಕಾರಣಕ್ಕೆ ಬೇರೆಬೇರೆ ಹಬ್ಬಗಳಿಗೆ ಆಯಾ ದೇಗುಲ ಹುಡುಕಿ ಹೋಗುವ ಪ್ರಮೇಯವೇ ಇಲ್ಲಿಲ್ಲ.
ಶತಮಾನದ ಇತಿಹಾಸ
ಈ ದೇವಾಲಯ ಶತ- ಶತಮಾನದಷ್ಟು ಹಳೆಯದ್ದು. ಇದರ ಮಹಿಮೆಯ ಬಗ್ಗೆ ಭಕ್ತಾದಿಗಳಿಂದ ವಿವಿಧ ಕಥಾನಕಗಳೇ ಹರಿದು ಬರುತ್ತವೆ. ‘ಒಳ್ಳೆಯ ಉದ್ಯೋಗ ಸಿಗಬೇಕು ಎಂದು ಕೋರಿ ಇಲ್ಲಿಗೆ ಬರುವವರು ಹೆಚ್ಚು. ಅಂಥವರಿಗೆ ವಿದೇಶಗಳಲ್ಲಿ ಒಳ್ಳೊಳ್ಳೆ ಉದ್ಯೋಗ ಸಿಕ್ಕಿವೆ. ಆದ್ದರಿಂದ ವಿದೇಶದಿಂದಲೇ ಇಲ್ಲಿಗೆ ಬಂದು ಪೂಜೆ ಸಲ್ಲಿಸುವವರೇ ಹೆಚ್ಚು’ ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ ಭಟ್. ವಿವಾಹವಾಗದವರು ಇಲ್ಲಿ ಒಡೆಮಾಲೆ, ಬೆಣ್ಣೆ, ವೀಳ್ಯದೆಲೆ ಇತ್ಯಾದಿ ಅಲಂಕಾರ ಮಾಡಿಸುವ ಹರಕೆ ಹೊತ್ತುಕೊಂಡರೆ ಶೀಘ್ರ ವಿವಾಹ ನೆರವೇರುತ್ತದೆ. ದಾಂಪತ್ಯ ಕಲಹ ಇತ್ಯಾದಿ ದೋಷಗಳಿಗೂ ಇಲ್ಲಿ ಪರಿಹಾರ ಸಿಗುತ್ತದೆ ಎನ್ನುತ್ತಾರೆ ಅವರು.
ಹನುಮಂತನ ವಿವಿಧ ರೂಪಗಳ ದರ್ಶನ ಇಲ್ಲಿದೆ. 2-3 ಶತಮಾನಗಳ ಹಿಂದೆ ಬಂಡೆಯಲ್ಲಿಯೇ ಉದ್ಭವಗೊಂಡ ಆಂಜನೇಯನ ಮೂರ್ತಿಯನ್ನು ನೋಡುವುದೇ ಅಂದ. ಆ ಮೂಲ ಮೂರ್ತಿ ಅದೇ ತೇಜಸ್ಸಿನಿಂದ ಕೂಡಿದೆ. ಅದರ ಜೊತೆಗೆ ಐದು ದಶಕಗಳ ಹಿಂದೆ ವಿವಿಧ ದೇವತೆಗಳನ್ನುಇಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಭವ್ಯ ಗುಡಿಯನ್ನು ನಿರ್ಮಿಸಲಾಗಿದೆ. ಬಂಡೆಯಲ್ಲಿ ಆಂಜನೇಯನ ಉದ್ಭವದ ಕಥೆ ಕೂಡ ರೋಚಕವೇ. ‘ಸುತ್ತಲೂ ಭಯಂಕರ ಕಾಡಾಗಿದ್ದ ಪ್ರದೇಶ ಇದು. ಪ್ರಸಿದ್ಧ ನಂದಿಬೆಟ್ಟಕ್ಕೆ ಹೋಗಲು ಇದ್ದದ್ದು ಇದೊಂದೇ ದಾರಿ.
ಅದೂ ಕಾಡುದಾರಿ. ಈ ಕಾಡಿನ ನಡುವೆಯೇ ಬೃಹತ್ ಬಂಡೆಯೊಂದು ಇತ್ತು. ಅದು ಬಿನ್ನಿಮಿಲ್‌ಗೆ ಸೇರಿದ ಬಂಡೆ. ಅದಾವ ಪವಾಡವೋ ಏನೋ. ಈ ಬಂಡೆಯೊಳಗೆ ಆಂಜನೇಯ ಸ್ವಾಮಿ ತಂತಾನೇ ಉದ್ಭವಿಸಿತು. ಇದನ್ನು ನೋಡಿದ ಭಕ್ತಾದಿಗಳು ಇಲ್ಲಿ ದೇವಾಲಯ ನಿರ್ಮಾಣ ಮಾಡುವಂತೆ ಮಿಲ್ ಮಾಲೀಕರನ್ನು ಕೋರಿದ್ದರು. ಆದರೆ ಎಷ್ಟೇ ಕೋರಿಕೊಂಡರೂ ಬಂಡೆ ಒಡೆಯಲು ಮುಂದಾದರು ಮಾಲೀಕರು. ಬಂಡೆ ಒಡೆಯಲು ನಿಗದಿಯಾಗಿದ್ದ ದಿನದಂದು ಮಾಲೀಕರ ಮಕ್ಕಳು ವಿಮಾನ ಅಪಘಾತದಲ್ಲಿ ಮೃತಪಟ್ಟರು. ಈ ಅವಘಡಕ್ಕೆ ಬಂಡೆ ಒಡೆಯುವ ನಿರ್ಧಾರ ತೆಗೆದುಕೊಂಡಿರುವುದೇ ಕಾರಣ ಎಂದು ಅರಿತ ಮಾಲೀಕರು ಇದರ ಸುದ್ದಿಗೆ ಹೋಗಲಿಲ್ಲ. ತಮ್ಮ ಕುಟುಂಬದ ಜೊತೆ ದೇಶವನ್ನೇ ಬಿಟ್ಟು ಹೋದರು. ಭಕ್ತರೆಲ್ಲ ಸೇರಿ ಕಾಡಿನ ನಡುವೆ ದೇಗುಲ ನಿರ್ಮಾಣ ಮಾಡಿದರು’ ಎನ್ನುತ್ತಾರೆ ಇನ್ನೊಬ್ಬ ಅರ್ಚಕ ರಾಜು ಭಟ್.
ಹಬ್ಬ ಹರಿದಿನಗಳ ವೇಳೆ ವಿದ್ಯುದ್ದೀಪಗಳಿಂದ ಅಲಂಕಾರಗೊಳ್ಳುವ ದೇವಾಲಯದ ಒಂದೊಂದು ದೇವತೆಗಳನ್ನು ನೋಡುವುದೇ ಒಂದು ಹಬ್ಬ. ಇದೀಗ ಇಲ್ಲಿ ದೀಪಗಳ ಸಂಭ್ರಮ. ವಿಶೇಷ ಅಲಂಕಾರ, ಪೂಜೆಗಳಿಗೆ ದೇಗುಲ ಸನ್ನದ್ಧಗೊಳ್ಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.