ADVERTISEMENT

ವೀರಪ್ಪನ್ ಉರಿದ ಮೇಲೆ ಉಳಿದ ನೆರಳು

ಚ.ಹ.ರಘುನಾಥ
Published 24 ಆಗಸ್ಟ್ 2015, 19:36 IST
Last Updated 24 ಆಗಸ್ಟ್ 2015, 19:36 IST

ಕಾಡುಗಳ್ಳ, ನರಹಂತಕ, ದಂತಚೋರ– ಹೀಗೆ, ಸಿನಿಮಾ ತಾರೆಗಳ ಬಿರುದುಗಳಂತೆ ಹಲವು ಬಣ್ಣನೆಗಳಿಗೆ ಒಳಗಾಗಿದ್ದ ವೀರಪ್ಪನ್‌ ತಾನು ಬದುಕಿದ್ದಾಗಲೇ ದಂತಕಥೆ ಆಗಿದ್ದವನು. ಕರ್ನಾಟಕ – ತಮಿಳುನಾಡು ಅರಣ್ಯಪ್ರದೇಶಗಳನ್ನು ನೆಲೆ ಮಾಡಿಕೊಂಡಿದ್ದ ವೀರಪ್ಪನ್‌, ಸುಮಾರು ಮೂರೂವರೆ ದಶಕಗಳ ಕಾಲ ತನ್ನದೇ ಆದ ವರ್ಚಸ್ಸು, ಕುಖ್ಯಾತಿ ಸೃಷ್ಟಿಸಿಕೊಂಡಿದ್ದ. ಜನಸಾಮಾನ್ಯರನ್ನೂ ಪೊಲೀಸರನ್ನೂ ಹಾಗೂ ಆನೆಗಳನ್ನು ಕೊಲ್ಲುವ ಮೂಲಕ ತನ್ನ ಕ್ರೌರ್ಯವನ್ನು ಪ್ರದರ್ಶಿಸಿದ ವೀರಪ್ಪನ್‌, ಎರಡೂ ರಾಜ್ಯಗಳ ಪ್ರಭುತ್ವಗಳಿಗೆ ಸವಾಲು ಎಸೆಯುವ ಮೂಲಕ ದೇಶದ ಗಮನಸೆಳೆದಿದ್ದ. ಕನ್ನಡದ ಪ್ರಖ್ಯಾತ ನಟ ರಾಜಕುಮಾರ್‌ ಅವರನ್ನು ಅಪಹರಿಸುವ ಮೂಲಕ ವಿಶ್ವದ ಗಮನವನ್ನೂ ಸೆಳೆದ. ಇಂಥ ವೀರಪ್ಪನ್‌ 2004ರ ಅ. 18ರಂದು ಪೊಲೀಸರ ಕಾರ್ಯಾಚರಣೆಯಲ್ಲಿ ಬಲಿಯಾದ. ವೀರಪ್ಪನ್‌ ಕರಾಳ ಅಧ್ಯಾಯ ಕೊನೆಗೊಂಡು ಒಂದು ದಶಕವೇ ಕಳೆದಿದೆ. ಈ ಹತ್ತು ವರ್ಷಗಳ ಅವಧಿಯಲ್ಲಿ ಆತನ ನೆನಪು ಜನರ ಮನಸ್ಸಿನಲ್ಲಿ ಯಾವ ರೀತಿ ಉಳಿದಿರಬಹುದು? ವೀರಪ್ಪನ್‌ ಪ್ರಭಾವವಿದ್ದ ಕಾಡಿನ ಅಂಚಿನ ಊರುಗಳಲ್ಲಿ ಆತನ ಕಾರಣದಿಂದಾಗಿಯೇ ಸ್ಥಗಿತಗೊಂಡಿದ್ದ ಅಭಿವೃದ್ಧಿ ಚಟುವಟಿಕೆಗಳು, ಕಳೆದ ಹತ್ತು ವರ್ಷಗಳಲ್ಲಿ ಯಾವ ರೀತಿ ನಡೆದಿರಬಹುದು? ಈ ಪ್ರಶ್ನೆಗಳನ್ನು ಇಟ್ಟುಕೊಂಡು ಕಾವೇರಿ ಮತ್ತು ಮಲೆಮಹದೇಶ್ವರ ವನ್ಯಜೀವಿಧಾಮಗಳ ಪರಿಸರದಲ್ಲಿ ಸಂಚರಿಸಿದಾಗ ಕಂಡ ಚಿತ್ರಗಳನ್ನು ರಘುನಾಥ ಚ.ಹ. ಇಲ್ಲಿ ದಾಖಲಿಸಿದ್ದಾರೆ.

‘ನಾವೀಗ ಕುಳಿತಿದ್ದೇವಲ್ಲ ಸರ್, ಇದೇ ಸ್ಥಳದಲ್ಲಿ ಐವರು ಪೊಲೀಸರ ಬಾಡಿಗಳನ್ನು ಸಾಲಾಗಿ ಮಲಗಿಸಲಾಗಿತ್ತು. ವಿಷಯ ತಿಳಿದು ನಾವು ಕೊಳ್ಳೇಗಾಲದಿಂದ ಇಲ್ಲಿಗೆ ಬರುವ ವೇಳೆಗೆ ರಾತ್ರಿ ಎರಡೂವರೆ ಗಂಟೆಯಾಗಿತ್ತು’.
ಎಂ. ಶ್ರೀಧರಮೂರ್ತಿ ಅವರ ಮಾತುಗಳಲ್ಲಿ ಇಪ್ಪತ್ತಮೂರು ವರ್ಷಗಳ ಹಿಂದಿನ ಘಟನೆಯ ಕಂಪನ ಇನ್ನೂ ಇದ್ದಂತಿತ್ತು. ಅವರು ಹೇಳುತ್ತಿದ್ದುದು 1992ರಲ್ಲಿ ರಾಮಾಪುರ ಪೊಲೀಸ್ ಠಾಣೆಯ ಮೇಲೆ ವೀರಪ್ಪನ್ ನಡೆಸಿದ ದಾಳಿಯ ಬಗ್ಗೆ. ಆ ದಾಳಿಯಲ್ಲಿ ಐವರು ಪೊಲೀಸರು ಮೃತರಾಗಿದ್ದರು. ಈಗ ಅದೇ ಠಾಣೆಯಲ್ಲಿ ಶ್ರೀಧರಮೂರ್ತಿ ಸಹಾಯಕ ಸಬ್ ಇನ್‌ಸ್ಪೆಕ್ಟರ್. ಶಂಕರ ಬಿದರಿ ವಿಶೇಷ ಕಾರ್ಯಾಚರಣೆ ಪಡೆಯ ಮುಖ್ಯಸ್ಥರಾಗಿದ್ದ ಕಾಲದಲ್ಲಿ ‘ವಿಶೇಷ ಕಾರ್ಯಪಡೆ’ (ಎಸ್‌ಟಿಎಫ್) ಸೇರಿದ ಶ್ರೀಧರಮೂರ್ತಿ, ಅಲ್ಲಿಂದ ಕಾರ್ಯಾಚರಣೆ ಮುಗಿಯುವವರೆಗೂ ತಂಡದಲ್ಲಿದ್ದರು. ಆ ಕಾರಣದಿಂದಾಗಿ 3 ಲಕ್ಷ ರೂಪಾಯಿ ಇನಾಮು ಕೂಡ ಅವರಿಗೆ ದೊರೆತಿದೆ.

‘ಈಗ ರಾಮಾಪುರ ಪೊಲೀಸ್ ಠಾಣೆಗೆ ಹೊಸ ಕಟ್ಟಡ ಸಿದ್ಧವಾಗಿದೆ. ಉದ್ಘಾಟನೆ ಸಂದರ್ಭದಲ್ಲಿ, ಠಾಣೆಯ ಹೊಸ ಕಟ್ಟಡದಲ್ಲಿ ಐವರು ಹುತಾತ್ಮರ ಭಾವಚಿತ್ರ ಹಾಕಬೇಕೆಂದು ನಿರ್ಧರಿಸಲಾಗಿದೆ. ಅವರ ಫೋಟೊಗಳನ್ನು ಹುಡುಕುವ ಕೆಲಸ ನನ್ನ ಪಾಲಿಗೆ ಬಂದಿದೆ. ಅವರ ಕುಟುಂಬಗಳಿಗೆ ಸೇರಿದವರು ಎಲ್ಲೆಲ್ಲಿದ್ದಾರೋ ಹುಡುಕಬೇಕು’ ಎಂದು ಶ್ರೀಧರಮೂರ್ತಿ ತಮ್ಮ ಕಷ್ಟ ತೋಡಿಕೊಂಡರು.

‘ಜನ ಈಗ ಗ್ರಾಮೀಣ ಪ್ರದೇಶಗಳಲ್ಲಿ ನಿರಾಳವಾಗಿದ್ದಾರೆ ಸರ್. ಪೊಲೀಸರ ಒತ್ತಡ ಇಲ್ಲ, ವೀರಪ್ಪನ್ ಭಯವೂ ಇಲ್ಲ. ಆಗ, ವೀರಪ್ಪನ್ ಹೆದರಿಕೆ ಎಷ್ಟಿತ್ತೆಂದರೆ, ಬಸ್‌ನಲ್ಲಿ ಪ್ರಯಾಣಿಸುವಾಗ ನಾವೆಲ್ಲ ನಮ್ಮ ಐಡೆಂಟಿಟಿ ಕಾರ್ಡ್‌ಗಳನ್ನು ಸೀಟ್ ಕೆಳಗೆ ಬಚ್ಚಿಡುತ್ತಿದ್ದೆವು’ ಎಂದು ಗುಟ್ಟೊಂದನ್ನು ಬಿಟ್ಟುಕೊಡುವಂತೆ ಅವರು ಹೇಳಿದರು. ‘ಹೊರಟು ಹೋಯ್ತು ಸಾರ್. ವೀರಪ್ಪನ್ ಸಾವಿನೊಂದಿಗೆ ಪಡಿಯಚ್ಚು ಗೌಂಡರ್ ಸಮುದಾಯದ ವರ್ಚಸ್ಸು ಹೊರಟುಹೋಯ್ತು’ ಎಂದೂ ಹೇಳಿದರು. ಅವರ ಮಾತು, ಕಾಲಚಕ್ರದ ಉರುಳಿನಲ್ಲಿ ಒಂದು ಸಮುದಾಯ ಪಡೆದುಕೊಂಡ ಏಳುಬೀಳುಗಳನ್ನು ಹಿಡಿದಿಡುವ ಪ್ರಯತ್ನದಂತಿದ್ದವು.

ಚೆಲ್ಲಾಪಿಲ್ಲಿ ಚಿತ್ರಗಳು
ಒಂದಕ್ಕೊಂದು ನೇರ ಸಂಬಂಧ ಇಲ್ಲದಂತೆ ತೋರುವ ಶ್ರೀಧರಮೂರ್ತಿ ಅವರ ಮಾತುಗಳು ಮೇಲ್ನೋಟಕ್ಕೆ ಚದುರಿದಂತೆ ಕಾಣಿಸುತ್ತವೆ. ಆದರೆ, ಕಾವೇರಿ ಮತ್ತು ಮಲೆಮಹದೇಶ್ವರ ವನ್ಯಜೀವಿಧಾಮಗಳ ಅರಣ್ಯ ಪ್ರದೇಶದಲ್ಲಿ ಓಡಾಡಿದರೆ, ಅಲ್ಲಿನ ಜನಜೀವನದಲ್ಲೂ ಇಂಥದೊಂದು ವಿರೋಧಾಭಾಸ ಎದ್ದುಕಾಣುತ್ತದೆ. ವೀರಪ್ಪನ್‌ ಹತನಾಗಿ ಹತ್ತು ವರ್ಷಗಳು ಕಳೆದವು. ಈ ಅವಧಿಯಲ್ಲಿ ಅಲ್ಲಿ ಆಗಿರುವ ಬದಲಾವಣೆಗಳು, ಅಭಿವೃದ್ಧಿ ಕಾರ್ಯಗಳ ಸ್ವರೂಪ ಯಾವ ಬಗೆಯದು? ಜನರ ಮನಸ್ಸಿನಲ್ಲಿ ವೀರಪ್ಪನ್‌ ಇನ್ನೂ ಉಳಿದುಕೊಂಡಿದ್ದಾನಾ? ವೀರಪ್ಪನ್‌ನ ಜಾತಿಯಾದ ಪಡಿಯಚ್ಚು ಗೌಂಡರ್‌ ಸಮುದಾಯದ ಸ್ಥಿತಿಗತಿ ಈಗ ಹೇಗಿದೆ?

ಈ ಪ್ರಶ್ನೆಗಳನ್ನು ಇಟ್ಟುಕೊಂಡು ಹಿಂದೊಮ್ಮೆ ವೀರಪ್ಪನ್‌ ಪ್ರಭಾವವಿದ್ದ ಊರುಗಳಲ್ಲಿ ಸುತ್ತಾಡಿದರೆ, ಎದುರಾಗುವುದೆಲ್ಲ ತುಣುಕು ತುಣುಕು ಚಿತ್ರಗಳೇ. ಆ ಚಿತ್ರಗಳನ್ನು ಕೂಡಿಸುತ್ತಾ ಹೋದರೆ, ಎಂದೂ ಬದಲಾಗದಂತೆ ಕಾಣಿಸುವ ಕಾಡಿನ ಅಂಚಿನ ಜನರ ಬದುಕಿನ ವರ್ತಮಾನ ಇಣುಕುತ್ತದೆ. ಜನರ ಮನಸ್ಸಿನ ಮರೆಯೊಳಗೆ ಹುದುಗಿರಬಹುದಾದ ವೀರಪ್ಪನ್ ಕುರಿತಾದ ಅಭಿಮಾನ–ವಿಷಾದದ ಮಬ್ಬು ಮಬ್ಬು ಚಿತ್ರ ಕಾಣಿಸುತ್ತವೆ.

ಮುಖಕ್ಷೌರ ಮಾಡಿಸಿಕೊಳ್ಳಲು ಸೈಕಲ್‌ನಲ್ಲಿ ರಾಮಾಪುರದತ್ತ ಹೊರಟಿದ್ದ ಮುತ್ತುಗೌಂಡರ್‌ ಮಾತನಾಡಿದ್ದು ಕೂಡ ಮೋಟು ಗೋಡೆಯ ಮೇಲೆ ದೀಪ ಇಟ್ಟ ರೀತಿಯಲ್ಲೇ. ವೀರಪ್ಪನ್ ಬಗ್ಗೆ ಅವರು ಹೇಳಿದ್ದು– ‘ನಾವು ಅವನನ್ನು ನೋಡಿಲ್ಲ. ಅವ ಪರದೇಸಿ. ಅವನನ್ನು ಪೊಲೀಸರು ಹುಡುಕಿ  ನಮ್ಮೂರಿಗೆ ಬರುತ್ತಿದ್ದರು. ನಮ್ಮ ಹೊಲದಲ್ಲೇ ಎಸ್‌ಟಿಎಫ್ ಕ್ಯಾಂಪ್ ಇತ್ತು’.

ಮುತ್ತುಗೌಂಡರ್ ರಾಮಾಪುರಕ್ಕೆ ಸಮೀಪದ ಅಪ್ಪಿಗುಳಿಯವರು. ಅವರ ಹೆಸರಿನಲ್ಲಿದ್ದ ‘ಗೌಂಡರ್’ ಪದ ನೋಡಿ, ‘ವೀರಪ್ಪನ್ ನಿಮ್ಮವನಲ್ಲವೇ?’ ಎಂದು ಪ್ರಶ್ನಿಸಿದರೆ, ಅವರು ನಕ್ಕರು. ‘ಅವನು ನಮ್ಮವನೇ. ಅಲ್ಲ ಅಂದರೆ ತಪ್ಪುತ್ತದೆಯೇ?’ ಎಂದು ಮರುಪ್ರಶ್ನೆಯಿತ್ತರು. ಅವರ ನಗು, ಪ್ರಶ್ನೆ ಇಡೀ ಸಮುದಾಯದ ಮಾರ್ಮಿಕ ಉತ್ತರದಂತಿತ್ತು.

ತುಳಸಿನಾಯ್ಕರದು ಬೇರೆಯದೇ ವ್ಯಥೆ. ಅವರು ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ದುಡಿದವರು. ‘ವೀರಪ್ಪನ್ ಸತ್ತ ಕಳೆದ ಹತ್ತು ವರ್ಷಗಳಲ್ಲಿ ಈ ಪರಿಸರದಲ್ಲಿ ಏನಾದರೂ ವ್ಯತ್ಯಾಸ ಆಗಿದೆಯೇ?’ ಎಂದು ಕೇಳಿದರೆ, ಅವರು ಸಿದ್ಧಪಡಿಸಿಕೊಂಡಿದ್ದ ಉತ್ತರ ಒಪ್ಪಿಸಿದಂತೆ ಹೇಳಿದರು– ‘ಆಗ ಪೊಲೀಸ್‌ನವರು ವೀರಪ್ಪನ್ ಆಗಿದ್ದರು. ಈಗ ಫಾರೆಸ್ಟ್‌ನವರು ವೀರಪ್ಪನ್ ಆಗಿದ್ದಾರೆ’. ಫಾರೆಸ್ಟ್‌ನವರ ಮೇಲೆ ಯಾಕಿಷ್ಟು ಸಿಟ್ಟು? ಎನ್ನುವ ಪ್ರಶ್ನೆಗವರು ಆ ಭಾಗದ ಜನರ ಬದುಕನ್ನು ಕಥೆಯ ರೂಪದಲ್ಲಿ ನಿರೂಪಿಸುವಂತೆ ಹೇಳಿದರು.

‘ನೋಡಿ ಸ್ವಾಮಿ, ಈ ಭಾಗದಲ್ಲಿ ಸರಿಯಾಗಿ ಮಳೆ ಬಿದ್ದು ಮೂರ್ನಾಲ್ಕು ವರ್ಷಗಳಾದವು. ಬರ ಬಂತು. ಜನ ಊರು ಬಿಟ್ಟಿದ್ದಾರೆ. ಗಾರೆ ಕೆಲಸಕ್ಕೆಂದು ಕೇರಳಕ್ಕೆ, ಬೆಂಗಳೂರಿಗೆ ಹೋಗುತ್ತಿದ್ದಾರೆ. ಇರುವ ಜನ ದನಕರು ಕಟ್ಟಿಕೊಂಡು, ಅವುಗಳ ಗೊಬ್ಬರ ಮಾರಾಟ ಮಾಡಿಕೊಂಡು ಜೀವನ ಮಾಡುವವರು. ಆದರೆ, ಈ ಫಾರೆಸ್ಟ್‌ನೋರು ದನಕರುಗಳನ್ನು ಕಾಡಿನ ಒಳಗೆ ಬಿಡೊಲ್ಲ. ವೀರಪ್ಪನ್ ಬದುಕಿದ್ದಾಗ ಅವನ ಭಯ ಇತ್ತು. ಈಗ ಅವನ ಜಾಗದಲ್ಲಿ ಫಾರೆಸ್ಟ್‌ನೋರ ಭಯ ಶುರುವಾಗಿದೆ. ದನಗಳನ್ನು ಕಾಡಿಗೆ ಬಿಡುವವರಿಗೆ ಬೆದರಿಕೆ ಹಾಕ್ತಾರೆ, ಜನರ ಹೊಟ್ಟೆ ಮೇಲೆ ಹೊಡೀತಿದ್ದಾರೆ’.

ತುಳಸಿನಾಯ್ಕ ಹೇಳುತ್ತಿದ್ದುದು ಕಾಡಿನ ಅಂಚಿನ ಜನರು ನೆಚ್ಚಿಕೊಂಡಿದ್ದ ಗೊಬ್ಬರ ವ್ಯಾಪಾರದ ಕುರಿತು. ಇಲ್ಲಿನ ಕೆಲವರು ಹಿಂಡು ಹಿಂಡು ದನಗಳನ್ನು ಸಾಕಿದ್ದಾರೆ. ಈ ಸಾಕಣೆ ಹೈನುಗಾರಿಕೆಯ ಉದ್ದೇಶದ್ದಲ್ಲ, ಗೊಬ್ಬರಕ್ಕಾಗಿ. ದಿನವಿಡೀ ಕಾಡಿನಲ್ಲಿ ಮೇದು ಕತ್ತಲಾಗುತ್ತಲೇ ದೊಡ್ಡಿಗೆ ಬರುವುದು ದನಗಳಿಗೆ ಅಭ್ಯಾಸವಾಗಿದೆ. ಅವುಗಳ ಸಗಣಿ ತಿಪ್ಪೆ ಸೇರುತ್ತದೆ. ಅಲ್ಲಿ ಸಂಗ್ರಹವಾಗುವ ಕೊಟ್ಟಿಗೆ ಗೊಬ್ಬರಕ್ಕೆ ಕೇರಳದ ಕಾಫಿ ತೋಟಗಳಲ್ಲಿ ಬೇಡಿಕೆ ಇದೆಯಂತೆ. ಆದರೆ, ಈ ದನಗಳಿಗೆ ಮೇವಿನದೇ ಸಮಸ್ಯೆ. ಅಡಿ ಮುಂದಿಟ್ಟರೆ ಕಾಡು ಎನ್ನುವಂತಿದ್ದರೂ ಅವುಗಳಿಗೆ ಫಾರೆಸ್ಟ್‌ನವರ ಭಯದ ಕಾವಲು. ಸಮುದ್ರದ ನಂಟು, ಉಪ್ಪಿಗೆ ಬಡತನ ಎನ್ನುವ ಪರಿಸ್ಥಿತಿ ಅಲ್ಲಿಯದು.

ವೀರಪ್ಪನ್ ಬದುಕಿದ್ದಾಗ ಯಾವ ಅಭಿವೃದ್ಧಿ ಕೆಲಸಗಳೂ ಇಲ್ಲಿ ಆಗಲಿಲ್ಲ. ಏನು ಕೇಳಿದರೂ ಅವನನ್ನು ಬೆದರುಗೊಂಬೆಯಂತೆ ತೋರಿಸುತ್ತಿದ್ದರು. ಈಗ ಯಾರನ್ನು ತೋರಿಸುವುದು ಎಂದು ತಮ್ಮಷ್ಟಕ್ಕೆ ತಾವೇ ಹೇಳಿಕೊಂಡರು ತುಳಸಿನಾಯ್ಕರು. ದನ ಮೇಯಿಸಲಿಕ್ಕೆ ಜನರನ್ನು ಕಾಡಿಗೆ ಬಿಟ್ಟರೆ ಒಂದಷ್ಟು ಮಂದಿ ಊರಲ್ಲೇ ಉಳಿದಾರು ಎಂದರು. ಅವರ ಮಾತಿಗೆ ಹೂಂಗುಡುತ್ತಾ ಮುಂದೆ ಹೋದರೆ, ತೆರೆದುಕೊಂಡಿದ್ದು ಮೀಣ್ಯಂ ಎನ್ನುವ ಊರಿನ ಹಾದಿ.

ಕಾಡಿನಂಚಿನ ಜ್ಞಾಪಕ ಚಿತ್ರಶಾಲೆ
ಮೀಣ್ಯಂಗೆ ಇನ್ನೂ 6 ಕಿ.ಮೀ. ದೂರವಿದೆ ಎನ್ನುವಾಗಲೇ ಅಲ್ಲೊಂದು ಸೇತುವೆಯ ತಿರುವು ತಡೆದು ನಿಲ್ಲಿಸುತ್ತದೆ. ಕಾಡಿನಿಂದ ಸುಳಿದುಬರುವ ಗಾಳಿ ಸೂತಕದ ಕಥೆಯೊಂದನ್ನು ಹೇಳುವಂತೆ ನಿಧಾನವಾಗುತ್ತದೆ. ಅದು, ವೀರಪ್ಪನ್ ಗುಂಪಿನ ಮರೆಮೋಸದ ದಾಳಿಗೆ ಆರು ಪೊಲೀಸರು ಬಲಿಯಾದ ಸ್ಥಳ. 1992ನೇ ಇಸವಿಯ ಆಗಸ್ಟ್ 14ರ ದಿನ– ಸ್ವಾತಂತ್ರ್ಯ ದಿನಾಚರಣೆಗೆ ಇನ್ನೊಂದೇ ದಿನ ಬಾಕಿಯಿದೆ ಎನ್ನುವಾಗ್ಗೆ, ಐಪಿಎಸ್ ಅಧಿಕಾರಿ ಟಿ. ಹರಿಕೃಷ್ಣ ನೇತೃತ್ವದಲ್ಲಿ ಪೊಲೀಸ್ ವಾಹನವೊಂದು ಈ ದಾರಿಯಲ್ಲಿ ಹೋಗುವಾಗ, ಸೇತುವೆಯ ತಿರುವಿನಲ್ಲಿ ವಾಹನ ನಿಧಾನವಾಯಿತು.

ಒಮ್ಮೆಗೇ ಗುಂಡಿನ ಸುರಿಮಳೆ. ಎತ್ತರದ ಮರೆಯಲ್ಲಿ ಹೊಂಚುಹಾಕುತ್ತಿದ್ದ ವೀರಪ್ಪನ್ ಗುಂಪು ಪೊಲೀಸರ ಮೇಲೆ ಮುಗಿಬಿದ್ದಿತ್ತು. ಕೆಲ ಕ್ಷಣಗಳಲ್ಲೇ– ಹರಿಕೃಷ್ಣ ಸೇರಿದಂತೆ ಶಕೀಲ್ ಅಹಮದ್ (ಪಿಎಸ್‌ಐ), ಎಸ್.ಬಿ. ಪೆನಗೊಂಡ (ಎಎಸ್‌ಐ), ಕೆ.ಎಂ. ಅಪ್ಪಚ್ಚು (ಪೇದೆ), ಬಿ.ಎ. ಸುಂದರ್ (ಪೇದೆ), ಸಿ.ಎಂ. ಕಾಳಪ್ಪ (ಪೇದೆ) ಜೀವ ಕಳೆದುಕೊಂಡಿದ್ದರು. ದುರಂತ ನಡೆದ ಸ್ಥಳಕ್ಕೆ ಸ್ವಲ್ಪ ದೂರದಲ್ಲೇ ಹುತಾತ್ಮರ ನೆನಪಿಗೊಂದು ಸ್ಮಾರಕ ನಿಲ್ಲಿಸಲಾಗಿದೆ. ಅದರ ಮೇಲೆ ಘಟನೆಯ ವಿವರ ಹಾಗೂ ಸಾವಿಗೀಡಾದವರ ಹೆಸರುಗಳನ್ನು ಬರೆಯಲಾಗಿದೆ.

ಕೆ.ಎಸ್. ದೊಡ್ಡಿಯಲ್ಲಿ ಮಾತಿಗೆ ಸಿಕ್ಕ ಭೈರಲಿಂಗಪ್ಪನವರು ಶಕೀಲ್ ಅಹಮದ್ ಹಾಗೂ ಹರಿಕೃಷ್ಣ ಸಾಹೇಬರನ್ನು ನೆನಪಿಸಿಕೊಂಡರು. ‘ಘಟನೆ ನಡೆದಾಗ ಗುಂಡಿನ ಸದ್ದು ನಮ್ಮ ಊರಿನವರೆಗೂ ಕೇಳಿಸಿತು. ನಾವೆಲ್ಲ ಅಲ್ಲಿಗೆ ಹೋಗುವ ಹೊತ್ತಿಗೆ ಎಲ್ಲವೂ ಮುಗಿದಿತ್ತು’ ಎಂದವರು ಸುಮಾರು 23 ವರ್ಷಗಳ ಹಿಂದಿನ ಘಟನೆ ನೆನಪಿಸಿಕೊಂಡರು. ಹಳೆಯ ಕಥೆ ಬಿಡಿ. ಈಗ ಊರು ಹೇಗಿದೆ? ವೀರಪ್ಪನ್ ಇದ್ದ ಕಾಲಕ್ಕೂ ಇವತ್ತಿಗೂ ಎದ್ದುಕಾಣುವಂಥ ಬದಲಾವಣೆ ಏನಾದರೂ ಆಗಿದೆಯೇ ಎನ್ನುವ ಪ್ರಶ್ನೆಗಳಿಗೆ ಭೈರಲಿಂಗಪ್ಪನವರು ಉತ್ಸಾಹದ ಪ್ರತಿಕ್ರಿಯೆ ನೀಡಲಿಲ್ಲ. ‘ರಸ್ತೆ ಸರಿ ಇಲ್ಲ. ಅಕ್ಕಿ, ಪಿಂಚಣಿ, ನೀರು– ಎಲ್ಲ ಬರ್ತಿದೆ. ಆದರೆ ಫಾರೆಸ್ಟ್‌ನೋರ ಕಾಟ ಮಿತಿಮೀರಿದೆ’ ಎಂದರು.

ಭೈರಲಿಂಗಪ್ಪನವರ ಜೊತೆಯಲ್ಲೇ ಇದ್ದ ಬೊಮ್ಮಪ್ಪ ಎನ್ನುವವರು, ‘ವೀರಪ್ಪನ್ ಸತ್ತ ನಂತರದ ವರ್ಷಗಳಲ್ಲಿ ಆಗಿರೋದು ಅರಣ್ಯ ಇಲಾಖೆ ಅಭಿವೃದ್ಧಿ ಮಾತ್ರ ಸ್ವಾಮಿ’ ಎಂದು ಖಾರವಾಗಿ ಹೇಳಿದರು. ‘ವೀರಪ್ಪನ್ ಇದ್ದ ದಿನಗಳನ್ನು ನೆನಪಿಸಿಕೊಳ್ಳಿ’ ಎಂದರೆ ಬೊಮ್ಮಪ್ಪನವರು ರಾಮಾಯಣದ ಕಥೆ ನೆನಪಿಸಿಕೊಂಡರು. ‘ರಾವಳೇಶ್ವರ – ರಾಮ, ಯಾರ ಕಡೆ ವಾಲಿದರೂ ಕಷ್ಟ ಎನ್ನುವಂತೆ ತಮ್ಮ ಪರಿಸ್ಥಿತಿ ಇತ್ತು’ ಎಂದು ರೂಪಕಭಾಷೆಯಲ್ಲಿ ವೀರಪ್ಪನ್ ಮತ್ತು ಪೊಲೀಸರ ನಡುವೆ ಜನರು ನಲುಗಿದ್ದನ್ನು ಹೇಳಿದರು. ಮಾತು ಊರಿನ ಬಗ್ಗೆ, ಕೃಷಿಯ ಬಗ್ಗೆ ಹೊರಳಿತು.

‘ನಮ್ಮೂರಿನಲ್ಲಿ 70–80 ಮನೆಗಳಿವೆ. ವ್ಯವಸಾಯ ನೆಚ್ಚಿಕೊಂಡವರೇ ಹೆಚ್ಚು. ಜೋಳ, ರಾಗಿ ಹೆಚ್ಚು ಬೆಳೀತೇವೆ. ಈ ಮಣ್ಣಲ್ಲಿ ಅರಿಶಿಣವೂ ಚೆನ್ನಾಗಿ ಬೆಳೀತದೆ. ಆದರೆ, ನೀರಿಗೇ ತತ್ವಾರ. ಊರವರ ಪರಿಸ್ಥಿತಿ ದೇವರಿಗೇ ಪ್ರೀತಿ. ಇಲ್ಲಿ ಆಸ್ಪತ್ರೆ ಇದೆ. ಡಾಕ್ಟ್ರು ಇಲ್ಲ. ಹುಷಾರಿಲ್ಲ ಅಂದ್ರೆ ರಾಮಾಪುರಕ್ಕೆ ಇಲ್ಲವೇ ಹನೂರಿಗೆ ಹೋಗಬೇಕು. ಸರಿ, ಅಲ್ಲಿಗೇ ಹೋಗೋಣ ಅಂದ್ರೆ ಬಸ್ಸುಗಳಾದರೂ ನೆಟ್ಟಗಿವೆಯಾ? ಎರಡು ಗವರ್ನಮೆಂಟ್ ಬಸ್ಸು ಈ ದಾರಿಯಲ್ಲಿ ಓಡಾಡ್ತವೆ. ಬಂದ್ರೆ ಬಂತು ಇಲ್ಲ ಅಂದ್ರೆ ಇಲ್ಲ ಎನ್ನುವ ಸ್ಥಿತಿ. ಒಂದು ಪ್ರೈವೇಟ್ ಬಸ್ಸೂ ಓಡಾಡ್ತದೆ...’ – ಬೊಮ್ಮಪ್ಪನವರ ಮಾತು ಮುಗಿಯುವ ಮೊದಲೇ ‘ಡಿ.ಆರ್.ಎಸ್’ ಹೆಸರಿನ ಬಸ್ಸು ಹಾರ್ನ್ ಹೊಡೆದುಕೊಂಡು ಕೆ.ಎಸ್. ದೊಡ್ಡಿಯಲ್ಲಿ ನಿಂತುಕೊಂಡಿತು. ಊರಿನ ಕಷ್ಟಸುಖದ ಮಾತುಕತೆ ನಡೆಯುತ್ತಿದ್ದುದನ್ನು ನೋಡಿದ ಬಸ್‌ ಕಂಡಕ್ಟರ್– ‘ಈ ರಸ್ತೇಲಿ ಬಂದು ನಾಲ್ಕು ನಾಲ್ಕು ಟೈರು ಹೋಗ್ತವೆ’ ಎಂದು ಕೂಗಿ ಹೇಳಿದರು.

ಕೆ.ಎಸ್. ದೊಡ್ಡಿಯಲ್ಲಿ ಸರ್ಕಾರಿ ಪ್ರೌಢಶಾಲೆ ಇದೆ. ಮೀಣ್ಯಂಗೆ ಹೊಂದಿಕೊಂಡಿರುವ ಈ ಶಾಲೆಯಲ್ಲಿ ಸುಮಾರು 150 ವಿದ್ಯಾರ್ಥಿಗಳಿದ್ದಾರಂತೆ. ಕೆ.ಎಸ್. ದೊಡ್ಡಿಯ ವಿದ್ಯಾರ್ಥಿಗಳು ಮಾತ್ರವಲ್ಲದೆ ಯರಂಬಾಡಿ, ಕೊಪ್ಪಂ, ಗಾಜನೂರು, ಸೂಳೆಕೋಬೆ, ನಕ್ಕುಂದಿ ಗ್ರಾಮಗಳಿಂದಲೂ ಹುಡುಗ ಹುಡುಗಿಯರು ಈ ಸ್ಕೂಲಿಗೆ ಬರುತ್ತಾರೆ. ಪ್ರಾಥಮಿಕ ಶಾಲೆಯೊಂದು ಮೀಣ್ಯಂನಲ್ಲಿಯೇ ಇದೆ. ಈ ಶಾಲೆಗಳಲ್ಲಿ ಕಲಿತವರು ಸರ್ಕಾರಿ ಹುದ್ದೆಗಳಿಗೆ ಹೋಗಿರುವುದೂ ಇದೆ. ಕೆ.ಎಸ್. ದೊಡ್ಡಿಯಲ್ಲಿ ಮೂವರು ಪೊಲೀಸರಾಗಿದ್ದಾರೆ.

‘ಈ ಸ್ಕೂಲ್‌ಗೆ ನಮ್ಮದೇ ಒಂದೆಕರೆ ಭೂಮಿ ಕೊಟ್ಟಿದ್ದೇವೆ’ ಎಂದರು ಭೈರಲಿಂಗಪ್ಪ. ಶಾಲೆ ವಿಷಯವೇನೋ ಸರಿ, ಆಸ್ಪತ್ರೆ ವಿಷಯವೇನು ಎಂದರೆ ‘ಅದೋ ಅಲ್ಲಿ ಕಾಣಿಸುತ್ತಿರುವುದೇ ಆಸ್ಪತ್ರೆ!’ ಎಂದರು ಯಜಮಾನರು. ಅಲ್ಲಿಗೆ ಹೋಗಿ ನೋಡಿದರೆ ಆಸ್ಪತ್ರೆ ಬಾಗಿಲು ಮುಚ್ಚಿತ್ತು. ‘ಡಾಕುಟ್ರು ಇಲ್ಲ’ ಎಂದ ರಸ್ತೆಯ ಬದಿಗೆ ಆಡಿಕೊಂಡಿದ್ದ ಹುಡುಗ. ಆಸ್ಪತ್ರೆ ಅಂಗಳದಲ್ಲಿ ದನಗಳು ಮೇದುಕೊಂಡಿದ್ದವು. ಕಳೆದ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಇದು.

ಪತ್ರಿಕೆಗಳಲ್ಲಿ ಸುದ್ದಿಯಾದ ಈ ಆಸ್ಪತ್ರೆ ಇದೀಗ ದೊಡ್ಡಿಯ ವೇಷ ತೊಟ್ಟುಕೊಳ್ಳಲು ತವಕಿಸುತ್ತಿರುವಂತಿತ್ತು. ಮಾತು ಮತ್ತೆ ವೀರಪ್ಪನ್ ವಿಷಯಕ್ಕೆ ಬಂತು. ‘ಅವನ ಬಗ್ಗೆ ಏನು ಹೇಳೋದು. ವೀರಪ್ಪನ್ ಅನುಚರರು ಆಗಾಗ ಕಾಣಿಸ್ತಿದ್ದರು. ವೈರಿಗಳಿಗಷ್ಟೇ ಅವರು ತೊಂದರೆ ಮಾಡುತ್ತಿದ್ದರು. ನಮ್ಮ ತಂಟೆಗೇನೂ ಬರುತ್ತಿರಲಿಲ್ಲ’ ಎಂದು ಮಾತು ಮುಗಿಸುವಂತೆ ಹೇಳಿದರು ಭೈರಲಿಂಗಪ್ಪ.

ಕೆ.ಎಸ್. ದೊಡ್ಡಿಯ ಭೈರಲಿಂಗಪ್ಪ, ಬೊಮ್ಮಪ್ಪನವರು ಮಾತ್ರವಲ್ಲ- ಕಾಡಿನ ಅಂಚಿನ ಯಾವ ಗ್ರಾಮದವರೂ ವೀರಪ್ಪನ್ ಬಗ್ಗೆ ಉತ್ಸಾಹದಿಂದ ಮಾತನಾಡುವುದಿಲ್ಲ. ಅವರ ಮಾತಿನ ಧಾಟಿ ಅದೊಂದು ಮರೆತ ಕಥೆ ಎನ್ನುವಂತಿದೆ. ವೀರಪ್ಪನ್‌ಗಿಂತಲೂ ಫಾರೆಸ್ಟ್‌ನವರ ಬಗ್ಗೆ ಮಾತನಾಡುವ ಆಸಕ್ತಿ ಹೆಚ್ಚಿನವರಿಗೆ. ಹೀಗೆ ಫಾರೆಸ್ಟ್‌ನವರ ಕುರಿತ ದೂರುಗಳನ್ನು ಕೇಳುತ್ತ, ಮೀಣ್ಯಂ–ಹೂಗ್ಯಂ ದಾಟಿಕೊಂಡು, ಹೂಗ್ಯಂ ಜಲಾಶಯದ ಮೋಹಕತೆಯನ್ನೂ ದಾಟಿಕೊಂಡು ಮುಂದೆ ಬಂದರೆ ನಾಲ್ ರೋಡ್ ಎದುರಾಗುತ್ತದೆ. ನಾಲ್ಕು ರಸ್ತೆಗಳು ಕಲೆಯುವ ಈ ಪ್ರದೇಶ ವನ್ಯಜೀವಿ ವ್ಯಾಪಾರಕ್ಕೆ  ಕುಖ್ಯಾತಿ ಇದೆ. ಈ ನಾಲ್ ರೋಡ್ ಹಾದುಕೊಂಡು ಸ್ವಲ್ಪದೂರ ಹೋದರೆ ಸಂದನಪಾಳ್ಯ ಎನ್ನುವ ಪುಟ್ಟ ಊರು ತೆರೆದುಕೊಳ್ಳುತ್ತದೆ.

ಶ್ರುತಿ ತಪ್ಪಿದ ಬದುಕುಗಳು
ವೀರಪ್ಪನ್ ಅನುಚರ ಎಂದು ಗುರ್ತಿಸಿಕೊಂಡು, ಈಗ ಗಲ್ಲುಶಿಕ್ಷೆಗೆ ಗುರಿಯಾಗಿ, ಮೈಸೂರು ಜೈಲಿನಲ್ಲಿ ದಿನಕಳೆಯುತ್ತಿರುವ ಜ್ಞಾನಪ್ರಕಾಶ್ ಅವರ ಊರು ಈ ಸಂದನಪಾಳ್ಯ. ವಿಳಾಸ ಕೇಳಿ ಅಲ್ಲಿಗೆ ಹೋದರೆ, ಹಿತ್ತಲಲ್ಲಿ ನಿಂತಿದ್ದ ತರುಣನೊಬ್ಬ ಕಾಣಿಸಿದ. ಅವನನ್ನು ವಿಚಾರಿಸಿದರೆ, ‘ಆ ಹೆಸರಿನವರು ಇಲ್ಲಿ ಯಾರೂ ಇಲ್ಲವಲ್ಲ’ ಎಂದು ಮುಖ ತಿರುಗಿಸಿಕೊಂಡ. ಹೀಗೆ ಕೇಳಿಕೊಂಡು ಬರುವವರ ಬಗ್ಗೆ ತಿರಸ್ಕಾರದ ಭಾವವೊಂದು ಆ ತರುಣನ ವರ್ತನೆಯಲ್ಲಿ ಇದ್ದಂತಿತ್ತು. ಮತ್ತೂ ಮುಂದಕ್ಕೆ ಹೋದಾಗ, ಯಾರೋ ದೂರದ ಮನೆಯತ್ತ ಬೆಟ್ಟು ಮಾಡಿದರು.

ಅಲ್ಲಿಂದ ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲಿ– ‘ಇದೋ, ಇವರೇ ಆ ಮನೆಯವರು’ ಎಂದು ನಮ್ಮನ್ನು ಕೂಗಿ, ನಮ್ಮ ಹಿಂದೆ ಬರುತ್ತಿದ್ದ ಹೆಣ್ಣುಮಗಳನ್ನು ತೋರಿಸಿದರು. ನಮಸ್ಕಾರವೊಂದನ್ನು ಹೇಳಿ, ‘ನಿಮ್ಮ ಮನೆಗೇ ಹೊರಟೆವು’ ಎಂದು ಅವರನ್ನು ಹಿಂಬಾಲಿಸಿದೆವು. ಮೊದಲಿಗೆ ಮನೆ ತಲುಪಿದ ಹೆಣ್ಣುಮಗಳು, ಒಳಗಿನಿಂದ ಕುರ್ಚಿ ತಂದು ಅಂಗಳದಲ್ಲಿ ಹಾಕಿ ಎದುರಿಗೆ ನಿಂತಳು. ಹನಿ ಒಡೆಯಲಿಕ್ಕೆ ಬಂದಂಥ ಮೋಡ ಗಾಳಿಯ ನೆವಕ್ಕೆ ತಡೆದುಕೊಂಡ ಬಿಗುಭಾವ ಆಕೆಯ ಮುಖದಲ್ಲಿತ್ತು. ಸೆಲ್ವಿ ಮೇರಿ ಎನ್ನುವ ಆ ಹೆಣ್ಣುಮಗಳಿಗೆ ಕನ್ನಡ ಬಾರದು. ಮೇರಿಯಮ್ಮನ ತಂಗಿಯ ಮಗ, ಹತ್ತನೇ ತರಗತಿಯ ಜಾನ್ ಬಿಟೊ ದುಭಾಷಿಯಾದ.

ಜೈಲಿನಲ್ಲಿರುವ ಜ್ಞಾನಪ್ರಕಾಶ್ ಕಳೆದ (2014ರ) ಡಿಸೆಂಬರ್ 25ರಂದು ತನ್ನ ಅಪ್ಪನ ಅಂತ್ಯಸಂಸ್ಕಾರಕ್ಕೆಂದು ಊರಿಗೆ ಬಂದಿದ್ದರಂತೆ. ‘ಅವರೊಂದಿಗೆ ಮಾತನಾಡಲಿಲ್ಲ. ತುಂಬಾ ಜನ, ಪೊಲೀಸ್. ಅಂತ್ಯಸಂಸ್ಕಾರದ ಜಾಗಕ್ಕೆ ಬಂದವರು ಹಾಗೆಯೇ ಹೊರಟುಹೋದರು. ಮನೆಗೆ ಬರಲಿಲ್ಲ’ ಎಂದರು ಸೆಲ್ವಿ ಮೇರಿ. ‘ಜೈಲಿಗಾದರೂ ಹೋಗಿ ಮಾತನಾಡಿಸಿಕೊಂಡು ಬಂದಿರಾ?’ ಎಂದರೆ, ಆಕೆ ತಲೆ ಅಲ್ಲಾಡಿಸಿದರು. ‘ಆಡಲಿಕ್ಕೆ ಏನು ಉಳಿದಿದೆ. ನಾನು ಹೋಗಿ ಮಾತನಾಡಿದರೆ ಅವರು ಮನಸ್ಸು ಚಿಕ್ಕದು ಮಾಡಿಕೊಳ್ಳುತ್ತಾರೆ’ ಎನ್ನುವ ಸೂಕ್ಷ್ಮ ಅವರದು.

ಮೇರಿ ಅವರಿಗೆ ನಾಲ್ವರು ಮಕ್ಕಳು. ದೊಡ್ಡ ಮಗಳು ಬದುಕಿಲ್ಲ. ಮಗ ಅರುಳ್ ರಾಜ್ 6ನೇ ತರಗತಿಗೆ ಶಾಲೆ ಬಿಟ್ಟು ಗಾರೆ ಕೆಲಸ ಹುಡುಕಿಕೊಂಡಿದ್ದಾನೆ. ಹತ್ತನೇ ತರಗತಿ ಓದಿದ ಪೆನಿಟಿ ಮೇರಿ ಹೆಸರಿನ ಮಗಳು ಗಂಡನ ಮನೆಯಲ್ಲಿದ್ದಾಳೆ. ಪರಿಮಳಾ ರೋಸಿ ಕೊನೆಯ ಮಗಳು. ನರ್ಸಿಂಗ್ ಓದಿರುವ ಪರಿಮಳಾ, ಕಾಮಗೆರೆ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿ ಎರಡು ವಾರಗಳಾದವಂತೆ. ಈ ಪರಿಮಳಾ ನಲವತ್ತೈದು ದಿನಗಳ ಕೂಸಾಗಿದ್ದಾಗ ಜ್ಞಾನಪ್ರಕಾಶ್ ಅವರನ್ನು ಪೊಲೀಸರು ಕರೆದುಕೊಂಡು ಹೋದರಂತೆ. ‘ಯಾವ ತಪ್ಪೂ ಮಾಡಿರಲಿಲ್ಲ. ವಿಚಾರಣೆಗೆ ಎಂದು ಕತ್ತಲಲ್ಲಿ ಕರೆದೊಯ್ದರು’ ಎನ್ನುವ ಮೇರಿ ಅವರ ಅಳಲಲ್ಲಿ, ಅವರ ಮನೆಯ ಬೆಳಕು ಸೂರೆಹೋದ ಭಾವವಿತ್ತು.

‘ಆರು ಎಕರೆ ಜಮೀನಿದೆ. ಮಳೆ ಇಲ್ಲ. ಬೆಳೆಯೂ ಇಲ್ಲ. ಕೂಲಿ ಮಾಡ್ತೀವಿ. ಚರ್ಚ್‌ನವರು (ಪೀಪಲ್ ವಾಚ್ ಸಂಸ್ಥೆ) ಹಸು ಕೊಟ್ಟಿದ್ದಾರೆ. ಅಲ್ಲಿನ ಸಿಸ್ಟರ್‌ಗಳೇ ಪರಿಮಳಾ ಓದಲಿಕ್ಕೆ ಸಹಾಯ ಮಾಡಿದ್ದು’ ಎಂದರು ಸೆಲ್ವಿ ಮೇರಿ. ‘ನಮ್ಮ ಕಷ್ಟ ಯಾರಿಗೂ ಬರಕೂಡದು. ಮಗನ ಹೆಂಡತಿಗೆ ಹಾರ್ಟ್ ಆಪರೇಷನ್ ಆಯ್ತು. ಅವರ ಮಗುವಿಗೆ ಹುಷಾರಿಲ್ಲ’ ಎಂದು ದುಃಖಿಸಿದರು.

‘ಜ್ಞಾನಪ್ರಕಾಶ್ ಫೋಟೊ ಇದೆಯಾ’ ಎಂದರೆ, ಜಾನ್ ಬಿಟೊ ತಂದು ತೋರಿಸಿದ್ದು ‘ಆಧಾರ್ ಕಾರ್ಡ್’. ಗುರುತಿನ ಚೀಟಿಯಲ್ಲಿನ ಜ್ಞಾನಪ್ರಕಾಶ್, ಹೆಸರಿಗೆ ತಕ್ಕಂತೆ ನೀಳ ಬಿಳಿಯ ಗಡ್ಡದಲ್ಲಿದ್ದರು. ಜೈಲಿನಲ್ಲಿರುವಾಗಲೇ ರೂಪುಗೊಂಡಿರುವ ಆಧಾರ್ ಕಾರ್ಡ್, ಮನೆಯ ವಿಳಾಸ ಹುಡುಕಿಕೊಂಡು ಬಂದಿದೆ. ಕೆಲವೊಮ್ಮೆ ನಮ್ಮ ವ್ಯವಸ್ಥೆ ಎಷ್ಟು ಕರಾರುವಾಕ್ಕು ಅನ್ನಿಸುವುದು ಇಂಥ ಸಂದರ್ಭಗಳಲ್ಲೇ.

ಸಂಕಟದ ಮಾತುಗಳನ್ನು ಆಡುವಾಗಲೂ ಸೆಲ್ವಿ ಮೇರಿ ಆತಿಥ್ಯವನ್ನು ಮರೆಯಲಿಲ್ಲ. ಅಂಗಳದಲ್ಲಿನ ನಿಂಬೆ ಗಿಡದಿಂದ ಕಸುಗಾಯಿಗಳನ್ನು ಕಿತ್ತು ಷರಬತ್ತು ಮಾಡಿಕೊಟ್ಟರು. ಗಂಡ ಜೈಲುಪಾಲಾಗಿ, ಆತನ ಕೊರಳು ಕುಣಿಕೆಯತ್ತ ಹೊರಳಿದ್ದರೂ, ಮೂವರು ಮಕ್ಕಳನ್ನು ಎದೆಗವುಚಿಕೊಂಡು ಬದುಕು ಕಟ್ಟಿಕೊಂಡ ಆಕೆಯ ಸಾಹಸವನ್ನು ಊಹಿಸಿಕೊಳ್ಳುವುದೂ ಕಷ್ಟ. ಆ ಕುಟುಂಬದ ನೋವುಗಳನ್ನು ನೋಡಿ ನೋಡಿ ಕರಗಿದಂತೆ, ಮನೆಗೆ ಹೊಂದಿಕೊಂಡಂತೆ ಇರುವ ಧೂಪದ ಮರವೊಂದು ಒಣಗಿನಿಂತಿದೆ.

ಸೆಲ್ವಿ ಮೇರಿ ಅವರ ಮನೆಯಿಂದ ಮತ್ತೆ ರಸ್ತೆಗೆ ಬಂದು ಊರನ್ನು ನೋಡಿದರೆ, ಚದುರಿದಂತೆ ಕಾಣಿಸುವ ಪುಟ್ಟ ಪುಟ್ಟ ಮನೆಗಳು ಕಾಣಿಸಿದವು. ನೆತ್ತಿಗೆ ಶಿಲುಬೆಯನ್ನು ಸಿಲುಕಿಸಿಕೊಳ್ಳದ ಮನೆಗಳು ಅಲ್ಲಿದ್ದಂತಿರಲಿಲ್ಲ. ಸಂದನಪಾಳ್ಯ ಮಾತ್ರವಲ್ಲ– ಮಲೆಮಹದೇಶ್ವರ ಅರಣ್ಯಪ್ರದೇಶದ ಬಹುತೇಕ ಊರುಕೇರಿಗಳಲ್ಲಿ ಜನರ ನೋವಿಗೆ ಮಿಡಿದಿರುವುದು ಕ್ರಿಸ್ತಪ್ರಭುವೇ. ‘ಘರ್‌ವಾಪಸಿ’ಯ ಶ್ರದ್ಧಾವಂತರೇಕೊ ಕಾಡಿನತ್ತ ಮುಖ ಮಾಡಿದಂತಿಲ್ಲ. ಸಂದನಪಾಳ್ಯದ ಅವಳಿಯಂತೆ ಕಾಣಿಸುವ ಊರು ಮಾರ್ಟಳ್ಳಿ. ವೀರಪ್ಪನ್ ಸಹಚರ ಎನ್ನುವ ಕಾರಣಕ್ಕಾಗಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಬಿಲವೇಂದ್ರನ್ ಅವರ ಮನೆ ಇರುವುದು ಅಲ್ಲಿಯೇ. ಮನೆಯವರು ಯಾರೂ ಮಾತಿಗೆ ಸಿಗಲಿಲ್ಲ.

ವೀರಪ್ಪನ್ ದೆಸೆಯಿಂದಾಗಿ ಉರಿಗಂಬದ ಹಾದಿಯಲ್ಲಿರುವ ಮತ್ತೊಬ್ಬ ವ್ಯಕ್ತಿ ಸೈಮನ್. ವಡ್ಡರದೊಡ್ಡಿಯಲ್ಲಿ ಸೈಮನ್ ಮನೆಯಿದೆ. ಹುಡುಗನೊಬ್ಬನನ್ನು ಹಿಂಬಾಲಿಸಿಕೊಂಡು ಸೈಮನ್ ಮನೆ ತಲುಪಿದಾಗ, ಅಲ್ಲಿ ಎದುರುಗೊಂಡಿದ್ದು ಜಯಮೇರಿ. ಆಕೆ ಸೈಮನ್‌ನ ಅಕ್ಕ. ‘ಅಮ್ಮ ಸತ್ತ ಮೇಲೆ ತಮ್ಮ ನಮ್ಮೊಂದಿಗೇ ಇದ್ದ. ಪೊಲೀಸರು ಎಳೆದುಕೊಂಡು ಹೋದಾಗ ಅವನಿಗೆ 24 ವಯಸ್ಸಿರಬೇಕು. ಆಡು ಮೇಯಿಸಿಕೊಂಡಿದ್ದವನನ್ನು ವಿಚಾರಣೆ ಎಂದು ಪೊಲೀಸರು ಕರೆದುಕೊಂಡು ಹೋದರು’. ಜಯಮೇರಿ ತಮಿಳುಗನ್ನಡದಲ್ಲೇ ದುಃಖ ತೋಡಿಕೊಂಡರು. ‘ಮುಕ್ಕಾಲು ಎಕರೆ ಜಮೀನಿದೆ. ಐದು ಮೇಕೆಗಳಿವೆ. ಅವುಗಳನ್ನು ನೋಡಿಕೊಂಡು ದಿನ ಕಳೆಯುತ್ತಿರುವೆ’ ಎಂದರು. ಬೆಳಗಾವಿ ಜೈಲಿನಲ್ಲಿದ್ದಾಗ ಜಯಮೇರಿ ತಮ್ಮನನ್ನು ನೋಡಿಕೊಂಡು ಬಂದಿದ್ದಾರೆ. ಮೈಸೂರು ಜೈಲಿಗೆ ಬಂದ ಮೇಲೆ ನೋಡಿ ಬರಲು ಅವರಿಗೆ ಆಗಿಲ್ಲ.

‘ನನ್ನ ಮಗಳು ಮಾವನನ್ನು ನೋಡಿಯೇ ಇಲ್ಲ’ ಎಂದು ಆಕಳ ಹಾಲು ಕರೆಯುತ್ತಿದ್ದ ಹುಡುಗಿಯನ್ನು ತೋರಿಸಿದರು. ‘ಹಾಲು ಕುಡಿದುಕೊಂಡು ಹೋಗಿ’ ಎಂದು ಒತ್ತಾಯಿಸಿದರು. ಯಾವುದೇ ಕ್ಷಣದಲ್ಲಿ ಮಳೆ ಸುರಿಸುವಂತಿದ್ದ ಮೋಡಗಳ ಮಬ್ಬು ಮನೆಯೊಳಗೂ ಹೊರಗೂ ಆವರಿಸಿದಂತಿತ್ತು. ಜಯಮೇರಿ ಅವರಿಂದ ಬೀಳ್ಕೊಟ್ಟಾಗ ಅವರ ಮನೆಯಲ್ಲೂ ಶಿಲುಬೆ ಕಾಣಿಸಿತು.

ದಿನ್ನೆಹಳ್ಳಗಳ ದಾರಿ ನೋಡಿ ನಡೆಯುವಾಗ, ಮನೆಯೊಂದರ ಅಂಗಳದಲ್ಲಿ ಉಣ್ಣುತ್ತಾ ಕೂತ ಅಜ್ಜಿಯೊಬ್ಬರು ಕಾಣಿಸಿದರು. ‘ಊಟ ಮಾಡಿಕೊಂಡು ಹೋಗುವಿರಂತೆ ಬನ್ನಿ’ ಎಂದು ಅಜ್ಜಿ ತಮಿಳಿನಲ್ಲಿ ಕರೆದರು. ಅವರ ಕರೆಯನ್ನು ನಗುತ್ತಲೇ ನಿರಾಕರಿಸಿ ಮುಂದೆಹೋದರೆ, ಕ್ರಿಕೆಟ್ ಬ್ಯಾಟ್ ಹಿಡಿದ ಹುಡುಗರು ಎದುರುಬಂದರು. ‘ನಿಮಗೆ ಕೊಹ್ಲಿ ಇಷ್ಟವಾ, ಧೋನಿ ಇಷ್ಟವಾ’ ಎಂದರೆ, ‘ನಂಗೆ ನಮ್ಮಮ್ಮ ಇಷ್ಟ’ ಎಂದನೊಬ್ಬ ಹುಡುಗ. ಹಾಂ, ಉದ್ದಕ್ಕೂ ಎಡತಾಕಿದ ಈ ಪರಿಸರದ ಹಿರಿಯರಿಗೆಲ್ಲ ಕನ್ನಡ ಕಬ್ಬಿಣದ ಕಡಲೆ. ಮಕ್ಕಳಿಗೆ ಮಾತ್ರ ‘ಕನ್ನಡಮ್ಮ’ ಒಲಿದಿದ್ದಾಳೆ. ಎಲ್ಲವೂ ಕನ್ನಡ ಶಾಲೆಗಳ ಪ್ರಭಾವ!

ಕಾಡ ನಡುವಣ ತವಕ–ತಲ್ಲಣ
ವಡ್ಡರದೊಡ್ಡಿಯಿಂದ ಮುಂದೆ ಹೋದಾಗ, ಎದುರಾದುದು ‘ಆಲದಮರ’ ಹೆಸರಿನ ಊರು. ಆ ಊರಿನ ಉತ್ಸಾಹಿಯೊಬ್ಬರು ಮಾತಿಗೆ ಸಿಕ್ಕರು. ‘ಈ ಪ್ರದೇಶದಲ್ಲಿ ಅಂತರ್ಜಲ ಕ್ಷೀಣಿಸಿದೆ. ಸಾವಿರ ಅಡಿ ಬೋರ್‌ವೆಲ್ ಕೊರೆದರೂ ನೀರು ಕಾಣಿಸುವುದು ಕಷ್ಟ. ನೀರಿನ ಮೂಲದ ಬಗ್ಗೆ ನಾವೊಂದಷ್ಟು ಜನ ಅಧ್ಯಯನ ನಡೆಸಿದ್ದೇವೆ. ಇಲ್ಲಿಗೆ ಸಮೀಪದ ಹಾಲೇರಿ ಬಳಿ ಕೆರೆಯೊಂದಿದೆ. ಅದನ್ನು ಜೀರ್ಣೋದ್ಧಾರ ಮಾಡಿದರೆ ಸುತ್ತಮುತ್ತಲ ಪ್ರದೇಶಗಳಿಗೆ ನೀರು ದೊರೆಯುತ್ತದೆ. ‘ಮಾರ್ಟಳ್ಳಿ ಪೀಪಲ್ ವೆಲ್‌ಫೇರ್ ಸೊಸೈಟಿ’ ಮೂಲಕ ಈ ಪರಿಸರದ ಹಿತಕ್ಕೆ ಹೋರಾಟ ನಡೆಸಿದ್ದೇವೆ’ ಎಂದರು.

‘ಜನ ಪ್ರತಿನಿಧಿಗಳು ನಮ್ಮೂರುಗಳ ಕಡೆ ತಲೆ ಹಾಕುವುದಿಲ್ಲ. ಓಟು ಕೇಳಲು ಬರುವಾಗಷ್ಟೇ ಅವರಿಗೆ ನಮ್ಮ ಬಗ್ಗೆ ಕಾಳಜಿ. ಈ ಪ್ರದೇಶಗಳಲ್ಲಿ ಇರುವ ನೂರಕ್ಕೆ ಎಪ್ಪತ್ತರಷ್ಟು ಜನ ತಮಿಳರು. ಚುನಾವಣೆಯ ಫಲಿತಾಂಶ ನಿರ್ಣಯಿಸುವವರು ಈ ಜನರೇ. ಜನ ಪ್ರತಿನಿಧಿಗಳು ನಮ್ಮ ವೋಟು ಬಯಸುತ್ತಾರೆ. ಆದರೆ, ನಮ್ಮವರನ್ನು ಈ ನೆಲದವರೆಂದು ಭಾವಿಸುವುದಿಲ್ಲ. ಈ ಕಡೆಗಣನೆಯೇ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಹಾಗೆ ನೋಡಿದರೆ, ಬದುಕಿನಿಂದ ನಾವೆಲ್ಲ ಕನ್ನಡನೆಲದವರೇ ಆಗಿದ್ದೇವೆ. ತಮಿಳುನಾಡಿಗೆ ಕಾವೇರಿ ಹರಿಸಲು ನಾವೆಲ್ಲ ವಿರೋಧ ವ್ಯಕ್ತಪಡಿಸಿದ್ದೇವೆ.

ಹದಿನೈದು ವರ್ಷಗಳ ಹಿಂದೆ ನಮ್ಮ ಪ್ರದೇಶಕ್ಕೆ ಇದ್ದುದು ಒಂದೇ ಬಸ್ಸು. ಹೆಚ್ಚು ಬಸ್ಸು ಬಾರದಂತೆ ಅಧಿಕಾರಿಗಳು ನೋಡಿಕೊಂಡಿದ್ದರು. ಇದ್ದ ಒಂದು ಬಸ್ಸಿನಲ್ಲೇ ಅನೇಕ ಹೆರಿಗೆಗಳಾಗಿವೆ, ಕೆಲವರು ಸಾವನ್ನಪ್ಪಿರುವುದೂ ಇದೆ. ಬೈಕ್ ಇರುವವರು, ರಸ್ತೆಯಲ್ಲಿ ಹೋಗುವಾಗ ಜೋರಾಗಿ ಹಾರ್ನ್ ಮಾಡಿದರೆ ಎಸ್‌ಟಿಎಫ್ ಪೊಲೀಸರು ಹೊಡೆದಿರುವ ಪ್ರಸಂಗಗಳೂ ಇವೆ. ಆಗ ನಾವೆಲ್ಲ ಕಳ್ಳರಂತೆ ಓಡಾಡುತ್ತಿದ್ದೆವು’ ಎಂದು ಆ ಚಳವಳಿಕಾರರು ಹೇಳಿಕೊಂಡರು.

ವೀರಪ್ಪನ್ ಬಗ್ಗೆ ಮತ್ತಷ್ಟು ಹೇಳಿ ಎಂದರೆ, ‘ಅವನಿಂದ ನಮಗೆ ನಷ್ಟವೂ ಇಲ್ಲ. ಪ್ರಯೋಜನವೂ ಇಲ್ಲ’ ಎನ್ನುವುದು ಅವರ ಸ್ಪಷ್ಟ ಉತ್ತರ. ಮತ್ತೂ ಕೆದಕಿದಾಗ– ‘ವೀರಪ್ಪನ್ ಇದ್ದಾಗ ಜನಸಾಮಾನ್ಯರು ಕಾಡಿಗೆ ಸುಲಭವಾಗಿ ಹೋಗುತ್ತಿದ್ದರು. ಆಗ ಜನರಿಗೆ ಮನೆ ಕಟ್ಟಿಕೊಳ್ಳಲು ಮರಳು ಸಲೀಸಾಗಿ ದೊರೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ವೀರಪ್ಪನ್‌ನಿಂದ ಅನುಕೂಲವೇ ಆಗಿದೆ’ ಎಂದರು. ಮತ್ತೂ ಮಾತು ಮುಂದುವರಿಸಿ– ‘ಬಿಲವೇಂದ್ರನ್ ನನ್ನ ಸೋದರಮಾವ. ಪೊಲೀಸರು ಸಿಕ್ಕವರನ್ನೆಲ್ಲ ಎಳೆದುಕೊಂಡು ಹೋಗಿ ಜೈಲಿಗೆ ದಬ್ಬಿದರು’ ಎಂದು ಸುಮ್ಮನಾದರು.

ಅಲೆಮಾರಿಯ ಕೊನೆಯ ನಿಲ್ದಾಣ
‘ಮೂಲಕ್ಕಾಡ್’ ವೀರಪ್ಪನ್ ಕುಟುಂಬದ ಮೂಲನೆಲೆ. ಪಾಲಾರ್‌ನಿಂದ ಮೆಟ್ಟೂರು ರಸ್ತೆಯಲ್ಲಿ ಬರುವ ಕೊಳತ್ತೂರಿನಿಂದ 5 ಕಿ.ಮೀ. ದೂರದಲ್ಲಿರುವ ಊರಿದು. ವೀರಪ್ಪನ್ ಅಂತ್ಯಸಂಸ್ಕಾರ ನಡೆದಿರುವುದು ಅಲ್ಲಿಯೇ. ಮೂಲಕ್ಕಾಡ್‌ನ ಸರ್ಕಾರಿ ಸ್ಮಶಾನದಲ್ಲಿ ವೀರಪ್ಪನ್ ಹಾಗೂ ಅವನ ತಮ್ಮ ಅರ್ಜುನ್ ಅಂತ್ಯಸಂಸ್ಕಾರ ಮಾಡಲಾಗಿದೆ. ಆಸುಪಾಸಿನಲ್ಲಿ ಸಣ್ಣ ಕಲ್ಲುಗುಂಡುಗಳಿರುವ ಪ್ರದೇಶ ಅದು. ‘ಇನ್ನು ಹೋರಾಟದ ಕಣ್ಣಾಮುಚ್ಚಾಲೆ ಸಾಕು’ ಎನ್ನುವಂತೆ ನೆಲಕ್ಕುರುಳಿದ ವೀರಪ್ಪನ್‌ ಹಾಗೂ ಅರ್ಜುನ್, ಮೆಟ್ಟೂರು ಜಲಾಶಯದ ಹಿನ್ನೀರಿನಿಂದ ಬೀಸಿ ಬರುವ ಗಾಳಿಗೆ ಮೈಯೊಡ್ಡಿ ಮಲಗಿರುವಂತಿದೆ. ಸಮೀಪದಲ್ಲೇ ಹರಕಲು ನೆರಳು ಚೆಲ್ಲುವ ಪುಟ್ಟದೊಂದು ಬೇವಿನ ಮರವಿದೆ.

ವೀರಪ್ಪನ್ ಮಣ್ಣಗುಡ್ಡೆಯ ಮೇಲೆ ಯಾವುದೋ ಚಿತ್ತಾರವಿದ್ದ ಹಳದಿ ಬಣ್ಣದ ವಸ್ತ್ರವೊಂದನ್ನು ಹೊದಿಸಲಾಗಿತ್ತು. ತಲೆಯ ಭಾಗದಲ್ಲಿ ಸಣ್ಣದೊಂದು ಕಲ್ಲಫಲಕ. ಅದರ ಮೇಲೆ ಇಂಗ್ಲಿಷ್ ಅಕ್ಷರಗಳಲ್ಲಿ ‘ವೀರ’ (Veera) ಎನ್ನುವ ಬರಹ ಹಾಗೂ ಬಂದೂಕಿನಿಂದ ಗುಂಡು ಹಾರುತ್ತಿರುವ ಚಿತ್ರ. ಕಾಲಿನ ಭಾಗಕ್ಕೆ ಮಾರು ದೂರದಲ್ಲಿರುವ ಕಲ್ಲುಗುಂಡಿನ ಮೇಲೆ, ‘ಈ ಮಣ್ಣಿನ ವೀರ ಮಣ್ಣಾದ ಸ್ಥಳ’ ಎನ್ನುವ ಅರ್ಥವನ್ನು ಧ್ವನಿಸುವ ‘ವೀರಂ ವಿದೈಕಪಟ್ಟುಳುದು’ ಎನ್ನುವ, ಯಾರೋ ಅಭಿಮಾನಿ ತಮಿಳಿನಲ್ಲಿ ಬರೆದಿರುವ ಬರಹ.

ಈ ಸ್ಥಳ ಆ ದಾರಿಯಲ್ಲಿ ಹೋಗಿಬರುವವರ ಪಾಲಿಗೆ ಆಕರ್ಷಣೆಯ ಕೇಂದ್ರವಾಗಿ ಬೆಳೆಯುತ್ತಿರುವಂತಿದೆ. ವ್ಯಕ್ತಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಅಲ್ಲಿಗೆ ಬಂದಿದ್ದರು. ಸ್ವಲ್ಪ ಸಮಯದಲ್ಲೇ ಎಂಟು ಜನರ ಗುಂಪೊಂದು ಅಲ್ಲಿಗೆ ಬಂದು ಸಮಾಧಿಯನ್ನು ಕುತೂಹಲದಿಂದ ವೀಕ್ಷಿಸಿತು. ಆ ತಂಡದಲ್ಲಿದ್ದ ಮುರುಗೇಶ್ ಎನ್ನುವವರು–‘ನನ್ನ ಗೆಳೆಯರು ಇಲ್ಲಿಗೆ ಬಂದಿರಲಿಲ್ಲ. ಅವರಿಗೆ ಈ ಸ್ಥಳ ತೋರಿಸಲೆಂದು ಇಲ್ಲಿಗೆ ಕರೆದುಕೊಂಡು ಬಂದೆ’ ಎಂದರು. ‘ಯಾವೂರು?’ ಎಂದರೆ, ‘ಸೇಲಂ’ ಎಂದರು.

ವೀರಪ್ಪನ್‌ನ ವಾರ್ಷಿಕ ತಿಥಿಯ ಸಂದರ್ಭದಲ್ಲಿ ಆತನ ಕುಟುಂಬದವರು ಇಲ್ಲಿಗೆ ಬಂದು ಪೂಜೆ ಮಾಡುತ್ತಾರಂತೆ. ಆ ಸಂದರ್ಭದಲ್ಲಿ ಒಂದು ಸಣ್ಣ ಗುಂಪು ಅಲ್ಲಿ ಸಹಜವಾಗಿ ಸೇರುತ್ತದೆ. ಹಾಗೆ ಸೇರಿದವರಲ್ಲಿ ಕೆಲವರು ಆ ನೆಲದ ಮಣ್ಣನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡುತ್ತಾರಂತೆ. ಸ್ಮಶಾನದ ಮಣ್ಣನ್ನು ಯಾರಾದರೂ ಮನೆಗೆ ಒಯ್ಯುತ್ತಾರೆಯೇ? ಕಥೆಗಳಿಗೆ, ಭಾವನೆಗಳಿಗೆ ಇಂಥ ತರ್ಕಗಳು ಇರುವುದಿಲ್ಲವೇನೊ?

ಆ ಊರು ಗೋಪಿನಾಥಂ!
ಗೋಪಿನಾಥಂ ಒಂದು ಸುಂದರ ಊರು. ಊರಿನ ಪ್ರವೇಶದಲ್ಲಿ ನಿಂತು ನೋಡಿದರೆ ಅಲ್ಲಲ್ಲಿ ತೆಂಗಿನ ಮರಗಳ ಸಾಲುಗಳು ಕಾಣಿಸುತ್ತವೆ. ಗ್ರಾಮದ ದೈವ ಮುನೇಶ್ವರನ ದೇವಸ್ಥಾನ ಆಕರ್ಷಕವಾಗಿದೆ, ವಿಶಾಲವಾಗಿದೆ. ಊರಿನ ನಡುವೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಮಾರಮ್ಮನ ಗುಡಿ ತನ್ನೊಳಗೊಂದು ದುರಂತದ ಛಾಯೆಯನ್ನು ಅಡಗಿಸಿಕೊಂಡಂತಿದೆ. ಅದು ಐಎಫ್‌ಎಸ್ ಅಧಿಕಾರಿ ಶ್ರೀನಿವಾಸ್ ಅವರು ಮುಂದೆ ನಿಂತು ಕಟ್ಟಿಸಿದ ದೇವಸ್ಥಾನ. ಈ ದೇಗುಲ ನಿರ್ಮಾಣದ ಹಿಂದೆ ಊರಿನ ಜನರ ವಿಶ್ವಾಸ  ಗಳಿಸಿಕೊಳ್ಳುವ ಉದ್ದೇಶ ಇತ್ತು. ಇದೇ ಶ್ರೀನಿವಾಸ್ ವೀರಪ್ಪನ್ ಸಂಚಿಗೆ ಬಲಿಯಾಗಿ, ತಲೆ ಕಡಿಸಿಕೊಂಡರು. ಹೀಗೆ ಅನೇಕ ಕಥೆಗಳನ್ನು ಉಸಿರಾಡುವಂತೆ ಗೋಪಿನಾಥಂ ಕಾಣಿಸುತ್ತದೆ.

ಊರು ಇನ್ನೊಂದು ಫರ್ಲಾಂಗು ದೂರದಲ್ಲಿದೆ ಎನ್ನುವಾಗ ಬಂದೂಕು, ಮಚ್ಚು, ಕೋಲು ಹಿಡಿದುಕೊಂಡ ಮೂವರು ಅರಣ್ಯ ವೀಕ್ಷಕರು (ಫಾರೆಸ್ಟ್ ವಾಚರ್ಸ್‌) ಎದುರಾದರು. ವೀರಪ್ಪನ್ ಆಗಾಗ ಗೋಪಿನಾಥಂಗೆ ಬರುತ್ತಿದ್ದುದನ್ನೂ ಬೇಟೆಯಾಡಿದ ಜಿಂಕೆ ಮಾಂಸ ಕೊಡುತ್ತಿದ್ದುದನ್ನೂ ಅವರು ನೆನಪಿಸಿಕೊಂಡರು. ಮುಂದೆ ಎದುರಾದುದು ಧನರಾಜ್. ‘ವೀರಪ್ಪನ್ ಇದ್ದಾಗ ಊರು ಊರಿನಂತೆ ಇರಲಿಲ್ಲ. ಅವನು ಎಲ್ಲೋ ಏನೋ ತಪ್ಪು ಮಾಡಿದರೆ, ನಮಗಿಲ್ಲಿ ಭಯ! ಅವನು ತನ್ನ ಕಮ್ಯುನಿಟಿ ಜೊತೆ ಒಳ್ಳೆಯ ಸಂಬಂಧ ಇರಿಸಿಕೊಂಡಿದ್ದ.

ಈಗಲೂ ತಮಿಳುನಾಡಿನಲ್ಲಿ ಅವನ ಬಗ್ಗೆ ಜನರಿಗೆ ಪ್ರೀತಿಯಿದೆ. ನಮ್ಮ ಊರಿನವರಿಗೆ ವೀರಪ್ಪನ್‌ ಬಗ್ಗೆ ಪ್ರೀತಿ ಏನಿಲ್ಲ’ ಎಂದರು ಧನರಾಜ್. ಅವರ ಮಾತಿನಲ್ಲಿ ವೀರಪ್ಪನ್ ಬಗ್ಗೆ ಅಸಹನೆ ಸ್ಪಷ್ಟವಾಗಿತ್ತು. ‘ನಾವು ನಾಯಕ ಸಮುದಾಯದವರು. ನಮ್ಮ ಪಾಡಿಗೆ ನಾವು; ಅವರ ಜೊತೆ ನಾವು ಹೋಗುವುದಿಲ್ಲ’ ಎಂದರು. ‘ಹೋಗುವುದಿಲ್ಲ’ ಎಂದವರು ಹೇಳಿದ್ದು ಪಡಿಯಚ್ಚು ಗೌಂಡರ್ ಸಮುದಾಯದ ಜೊತೆಗೆ. ‘ಅವನು ಒಳ್ಳೆಯವನು. ಸಮಯ ಸಂದರ್ಭದಿಂದ ಹಾಗಾದ ಎಂದು ನಮ್ಮಪ್ಪ ಹೇಳುತ್ತಿದ್ದರು’ ಎಂದು ವೀರಪ್ಪನ್ ನೆನಪು ಮಾಡಿಕೊಂಡಿದ್ದು ಗಾರೆ ಕೆಲಸ ಮಾಡುವ ಸುರೇಶ್. ಆತನ ಇಬ್ಬರು ಚಿಕ್ಕಪ್ಪಂದಿರು ವೀರಪ್ಪನ್ ಗುಂಪಿನಲ್ಲಿ ಇದ್ದವರು. ಅವರಲ್ಲಿ ಒಬ್ಬರಾದ ಮಾರಿಯಪ್ಪನ್ ಪೊಲೀಸರ ಗುಂಡಿಗೆ ಬಲಿಯಾಗಿದ್ದರೆ, ಪೆರುಮಾಳ್ ಕೊಯಮತ್ತೂರು ಜೈಲಿನಲ್ಲಿದ್ದಾರೆ.

‘ವೀರಪ್ಪನ್‌ನಿಂದ ನಮಗೇನೂ ತೊಂದರೆ ಆಗಿಲ್ಲ. ಚಿಕ್ಕಪ್ಪಂದಿರೇ ಅವನ ಜೊತೆ ಹೋದರು. ಅವರ ಹಣೆಬರಹ ಹಾಗಿತ್ತು’ ಎನ್ನುವುದು ಸುರೇಶ್‌ ವಿಶ್ಲೇಷಣೆ. ಅವರು ಕಳೆದ ವಾರವಷ್ಟೇ ಜೈಲಿಗೆ ಹೋಗಿ ಚಿಕ್ಕಪ್ಪನನ್ನು ಮಾತನಾಡಿಸಿಕೊಂಡು ಬಂದರಂತೆ. ಗೋಪಿನಾಥಂನಲ್ಲಿ ಕೊನೆಯದಾಗಿ ಮಾತಿಗೆ ಸಿಕ್ಕಿದ್ದು ಹಣ್ಣಿನ ವ್ಯಾಪಾರಿ ಗೋವಿಂದು. ಅವರಿಗೀಗ ಎಪ್ಪತ್ತೈದು ವರ್ಷ. ‘ವೀರಪ್ಪನ್ ಊರಿಗೇನೂ ತೊಂದರೆ ಮಾಡಲಿಲ್ಲ’ ಎಂದ ಅವರು, ‘ಅವನ ಬಗ್ಗೆ ನನಗೆ ಏನೂ ಗೊತ್ತಿಲ್ಲ’ ಎಂದರು. 

*
ಕಾಡಿನ ಹೊರಗೆ ನಿಂತು...
ವೀರಪ್ಪನ್‌ ಸತ್ತು ಹತ್ತು ವರ್ಷಗಳಾದರೂ ಆತನ ಪ್ರಭಾವವಿದ್ದ ಕಾಡಿನ ಅಂಚಿನ ಊರುಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ಕುಂಟುತ್ತಲೇ ಇವೆ. ಜನರ ಅನುಭವಗಳ ಹಿನ್ನೆಲೆಯಲ್ಲಿ ಹೇಳುವುದಾದರೆ, ವೀರಪ್ಪನ್‌ ಬೇರೆ ಬೇರೆ ರೂಪದಲ್ಲಿ ಅವರನ್ನು ಕಾಡುತ್ತಿದ್ದಾನೆ. ಕಾಡುಗಳ್ಳನ ಕಾರಣದಿಂದಾಗಿ ವಿನಾ ಕಾರಣ ಅನುಮಾನದ ಕಣ್ಣುಗಳಿಗೆ ಗುರಿಯಾದ ಪಡಿಯಚ್ಚು ಗೌಂಡರ್‌ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಹಾಗೂ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ನಡೆಸುವ ಕೆಲಸಗಳು ಪರಿಣಾಮಕಾರಿಯಾಗಿ ನಡೆದಿಲ್ಲ. ಸರ್ಕಾರ ಮಾಡಬೇಕಾದ ಈ ಕೆಲಸಗಳನ್ನು ಕ್ರೈಸ್ತ ಮಿಷನರಿಗಳು ತಮ್ಮ ಚೌಕಟ್ಟಿನಲ್ಲಿ ಮಾಡುತ್ತಿದ್ದಾರೆ. ವ್ಯಕ್ತಿಯಾಗಿದ್ದ ವೀರಪ್ಪನ್‌ ಈಗ ವ್ಯವಸ್ಥೆಯ ಜಡತೆಯ ರೂಪದಲ್ಲಿ ಜೀವಂತವಾಗಿರುವಂತಿದೆ. ಮಾನವೀಯತೆಗೆ ಅಂಟಿದ ಈ ಜಡತ್ವ ನೀಗಲು ಯಾವ ಕಾರ್ಯಾಚರಣೆ ಮಾಡುವುದು?

*
ಸತ್ಯ ಹೂತು ಬಿಟ್ಟರು!
‘ನಮ್ಮ ಯಜಮಾನರು ಇರೋವರೆಗೆ ಜನರಿಗೆ ಫಾರೆಸ್ಟ್‌ನೋರ ತೊಂದರೆ ಇರಲಿಲ್ಲ. ಕಾಡಿಗೆ ರಕ್ಷಣೆಯಿತ್ತು. ಈಗ ಆ ರಕ್ಷಣೆ ಇಲ್ಲವಾಗಿದೆ’ ಎನ್ನುವುದು ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮಿ ಅವರ ಅನಿಸಿಕೆ. ‘ಈಗ ಹೇಗಿದ್ದೀರಿ?’ ಎಂದರೆ ಮುತ್ತುಲಕ್ಷ್ಮಿ ದೀರ್ಘವಾದ ನಿಟ್ಟುಸಿರು ಬಿಟ್ಟರು. ‘ಹೇಗೋ ಇದ್ದೇನೆ. ಗೋಪಿನಾಥಂನಲ್ಲಿ ಜಮೀನಿದೆ. ಅದನ್ನು ಗುತ್ತಿಗೆಗೆ ಕೊಟ್ಟಿದ್ದೇನೆ. ದೊಡ್ಡ ಮಗಳು ಬಿ.ಇ ಮಾಡಿದ್ದಾಳೆ. ಇನ್ನೊಬ್ಬ ಮಗಳು ಬಿ.ಎ ಓದ್ತಿದ್ದಾಳೆ. ಅವಳ ಓದಿನ ಕಾರಣದಿಂದಾಗಿ ಮೆಟ್ಟೂರಿನಲ್ಲಿದ್ದೇನೆ’ ಎಂದು ಹೇಳಿದರು.

ಕನ್ನಡವೂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿರುವ ‘ಕಿಲ್ಲಿಂಗ್‌ ವೀರಪ್ಪನ್‌’ ಸಿನಿಮಾ ಬಗ್ಗೆ ಕೇಳಿದರೆ, ‘ಆ ಬಗ್ಗೆ ಏನೂ ಗೊತ್ತಿಲ್ಲ?’ ಎನ್ನುವ ಉತ್ತರ ಮುತ್ತುಲಕ್ಷ್ಮಿ ಅವರದು. ರಾಮಗೋಪಾಲ ವರ್ಮಾ ನಿರ್ದೇಶಿಸಲಿರುವ ಈ ಚಿತ್ರದಲ್ಲಿ, ರಾಜಕುಮಾರ್‌ ಕುಟುಂಬದ ಶಿವರಾಜ್‌ಕುಮಾರ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದಾಗ, ಮುತ್ತುಲಕ್ಷ್ಮಿ ಕೇಳಿದ ಒಂದೇ ಪ್ರಶ್ನೆ– ‘ಇದಕ್ಕೆ ರಾಜ್‌ಕುಮಾರ್‌ ಮಗ ಒಪ್ಪಿಕೊಂಡಿದ್ದಾರಾ?’.

ಮಾತು ಎ.ಎಂ.ಆರ್‌. ರಮೇಶ್‌ ನಿರ್ದೇಶನದ ‘ಅಟ್ಟಹಾಸ’ ಚಿತ್ರದತ್ತ ಹೊರಳಿತು. ‘ಪೊಲೀಸರ ಕಥೆ ಕೇಳಿ ಆ ಸಿನಿಮಾ ಮಾಡಿದ್ದಾರೆ. ಸಿನಿಮಾ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋದೆ. ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ಕೊಡಿಸಿದರು. ಲಾಯರ್‌ ಖರ್ಚು ಹೋಗಿ ಇಪ್ಪತ್ತು ಲಕ್ಷ ರೂಪಾಯಿಯಷ್ಟೇ ಬಂತು’ ಎಂದರು ಮುತ್ತುಲಕ್ಷ್ಮಿ. ‘ಮಲೆಮಹದೇಶ್ವರ ಪರಿಸರದ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಯೋಜನೆಗಳ ಹಣವೆಲ್ಲ ಮಧ್ಯವರ್ತಿಗಳ ಪಾಲಾಗುತ್ತಿದೆ’ ಎನ್ನುವ ಆರೋಪ ಅವರದು. ‘ಎಲೆಕ್ಷನ್‌ಗೆ ನಿಲ್ಲುತ್ತೀರಂತಲ್ಲ, ನಿಜವೇ?’ ಎನ್ನುವ ಪ್ರಶ್ನೆಗೆ ಅವರು ಸ್ಪಷ್ಟವಾಗಿ ಹೇಳಿದರು– ‘ಇಲ್ಲ. ಆ ಸುದ್ದಿಗಳೆಲ್ಲ ಸುಳ್ಳು’.

*
ಹೊರಳು ದಾರಿಯಲ್ಲಿ ‘ಪಡಿಯಚ್ಚು ಗೌಂಡರ್‌’
ಚಾಮರಾಜನಗರ ಜಿಲ್ಲೆಯಲ್ಲಿ ಪಡಿಯಚ್ಚು ಗೌಂಡರ್‌ ಸಮುದಾಯಕ್ಕೆ ಸೇರಿದ ಸುಮಾರು 60 ಸಾವಿರ ಮಂದಿ ಇದ್ದಾರೆ. ಹನೂರು ವಿಧಾನಸಭಾ ಕ್ಷೇತ್ರ ಒಂದರಲ್ಲೇ 17 ಸಾವಿರ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಫಲಿತಾಂಶವನ್ನು ನಿರ್ಣಯಿಸುವುದು ಪಡಿಯಚ್ಚು ಗೌಂಡರ್‌ ಮತದಾರರ ಓಟುಗಳೇ. ಪಡಿಯಚ್ಚು ಗೌಂಡರ್‌ರದ್ದು ಮೂಲತಃ ತಮಿಳುನಾಡು. ಮೆಟ್ಟೂರು ಜಲಾಶಯ ನಿರ್ಮಾಣ ಸಮಯದಲ್ಲಿ ಕೆಲವು ಹಳ್ಳಿಗಳು ಮುಳುಗಡೆಯಾದವು. ಆ ಹಳ್ಳಿಗಳ ಜನ ಬದುಕು ಅರಸಿ ಮಲೆಮಹದೇಶ್ವರ ಅರಣ್ಯ ಪ್ರದೇಶಕ್ಕೆ ಬಂದರು. ಆಗ ಕೊಳ್ಳೇಗಾಲ ಪ್ರದೇಶ ಕೂಡ ಮೈಸೂರು ರಾಜ್ಯಕ್ಕೆ ಸೇರಿರಲಿಲ್ಲ. ಕೊಯಮತ್ತೂರು ಜಿಲ್ಲೆಗೆ ಸೇರಿದ್ದ ಅದು ಮದರಾಸ್ ಪ್ರೆಸಿಡೆನ್ಸಿಗೆ ಸೇರಿತ್ತು.

ಪಡಿಯಚ್ಚು ಗೌಂಡರ್ ಮೂಲತಃ ಕೃಷಿಕರು. ಅವರಲ್ಲಿ ಸಾಕ್ಷರತೆ ಕಡಿಮೆ. ಈ ತಲೆಮಾರಿನ ಹುಡುಗ ಹುಡುಗಿಯರು ಶಾಲೆಗೆ ಹೋಗುತ್ತಿದ್ದಾರೆ. ಈ ಪರಿವರ್ತನೆಯನ್ನು ಸಮುದಾಯದ ಮುಖಂಡ ಹಾಗೂ ಚಾಮರಾಜನಗರ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಈಶ್ವರ್‌ ಹೇಳುವುದು ಹೀಗೆ– ‘ಚಾಮರಾಜನಗರ ಜಿಲ್ಲೆಯಲ್ಲಿ ಶಾಲಾಕಾಲೇಜು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ತೆಗೆಯುತ್ತಿರುವುದು ನಮ್ಮ ಹುಡುಗರೇ. ನಮ್ಮ ಸಮಾಜದಲ್ಲಿ 3000 ಶಿಕ್ಷಕರಿದ್ದಾರೆ. ಇದಿಷ್ಟು ಸಾಲದು. ಉನ್ನತ ಅಧಿಕಾರಿಗಳ ಹುದ್ದೆಗೆ ನಮ್ಮ ಹುಡುಗರು ಹೋಗಬೇಕು. ಒಂದಂತೂ ನಿಜ. ಸಮುದಾಯದ ಹೊಸ ತಲೆಮಾರಿನ ಭವಿಷ್ಯ ಉಜ್ವಲವಾಗಿದೆ’.

ವೀರಪ್ಪನ್‌ ಕಾರಣದಿಂದಾಗಿ ಪಡಿಯಚ್ಚು ಗೌಂಡರ್‌ ಸಮುದಾಯಕ್ಕೆ ತೊಂದರೆ ಆಗಿದೆ ಎನ್ನುವುದನ್ನು ಈಶ್ವರ್‌ ಪೂರ್ಣವಾಗಿ ಒಪ್ಪುವುದಿಲ್ಲ. ‘ವೀರಪ್ಪನ್‌ ಪರವಾಗಿ ನಮ್ಮ ಜನ ಯಾವತ್ತಿಗೂ ನಿಂತಿಲ್ಲ. ಆತ ಬದುಕಿದ್ದಾಗ ಕಾಡಂಚಿನ ಜನ ಭಯದ ವಾತಾವರಣದಲ್ಲಿ ಬದುಕುತ್ತಿದ್ದರು. ಆಗ ಸುಮ್ಮನೆ ಓಡಾಡುವಾಗ ಕೂಡ ಪೊಲೀಸರ ಪ್ರಶ್ನೆಗಳಿಗೆ ಉತ್ತರ ಹೇಳಬೇಕಾಗಿತ್ತು. ಮಲೆಮಹದೇಶ್ವರ ಬೆಟ್ಟದ ಪರಿಸ್ಥಿತಿಯನ್ನೇ ನೋಡಿ: ಈಚಿನ ವರ್ಷಗಳಲ್ಲಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಆದಾಯವೂ ಹಲವು ಪಟ್ಟು ಹೆಚ್ಚಾಗಿದೆ.

ವೀರಪ್ಪನ್‌ ಕಾಲದಲ್ಲಿ ಪೂರ್ಣ ನಾಶವಾಗಿದ್ದ ನೆಲ್ಲೂರು ಗ್ರಾಮ ಈಗ ನಳನಳಿಸುತ್ತಿದೆ’ ಎನ್ನುತ್ತಾರೆ. ಆದರೆ, ಈಗಲೂ ಕೆಲವರ ಮನಸ್ಸಿನಲ್ಲಿ ವೀರಪ್ಪನ್‌ ಬಗ್ಗೆ ಅಭಿಮಾನ ಇರುವುದನ್ನು ಅವರು ಅಲ್ಲಗಳೆಯುವುದಿಲ್ಲ. ‘ವೀರಪ್ಪನ್‌ ಬಗ್ಗೆ ಕೆಲವರ ಮನಸ್ಸಿನಲ್ಲಿ ಅಭಿಮಾನ ಇರಬಹುದು. ಗೋಪಿನಾಥಂನಲ್ಲಿ ಈಚೆಗೆ ನಡೆದ ಮಾರಿಹಬ್ಬದ ಸಂದರ್ಭದಲ್ಲಿ ಪೋಸ್ಟರ್‌ ಒಂದರಲ್ಲಿ ವೀರಪ್ಪನ್‌ ಹೆಸರಿತ್ತು. ಆದರೆ, ಅವನ ಬಗ್ಗೆ ಮಾತನಾಡಿದರೆ ತೊಂದರೆ ಆಗಬಹುದು ಎನ್ನುವ ಕಾರಣಕ್ಕಾಗಿ ಬಹಿರಂಗವಾಗಿ ಯಾರೂ ನೆನಪಿಸಿಕೊಳ್ಳುವುದಿಲ್ಲ. ತಮಿಳುನಾಡಿನಲ್ಲಿ ಮಾತ್ರ ಅವನ ಅಭಿಮಾನಿಗಳಿದ್ದಾರೆ’ ಎನ್ನುವುದು ಅವರ ಅನಿಸಿಕೆ.

‘ವೀರಪ್ಪನ್‌ ಸಾವಿನ ನಂತರ ಆತನ ಕುಟುಂಬ ಹೆಚ್ಚೂ ಕಡಿಮೆ ಬೀದಿಪಾಲಾಗಿದೆ. ಆತನ ದುಡ್ಡು ಕೂಡ ಬೀದಿಪಾಲಾಯಿತು. ಇತ್ತೀಚೆಗಷ್ಟೇ ಮುತ್ತುಲಕ್ಷ್ಮಿ ಸಿಕ್ಕಿದ್ದರು. ರೇಷನ್‌ ಕಾರ್ಡ್‌ ಮಾಡಿಸಿಕೊಡುವಂತೆ ಕೇಳಿಕೊಂಡರು’ ಎಂದು ಈಶ್ವರ್‌ ಹೇಳುತ್ತಾರೆ. ಅಂದಹಾಗೆ, ಪಡಿಯಚ್ಚು ಗೌಂಡರ್ ಅವರಲ್ಲಿ– ಮೂಲತಃ ಪಡಿಯಚ್ಚು ಗೌಂಡರ್ ಸಮುದಾಯಕ್ಕೆ ಸೇರಿದವರು ಹಾಗೂ ಕ್ರಿಶ್ಚಿಯನ್ ಪರಿವರ್ತಿತರು ಎನ್ನುವ ಎರಡು ಪಂಗಡಗಳಿವೆ. ಈಶ್ವರ್‌ ಅವರು ಗಮನಿಸಿರುವಂತೆ– ಆರ್ಥಿಕ ಸಬಲತೆ, ಉದ್ಯೋಗದಲ್ಲಿ ಇರುವವರು ಹಾಗೂ ಸಾಕ್ಷರರ ಸಂಖ್ಯೆ ಕ್ರಿಶ್ಚಿಯನ್ನರಾದ ಪಡಿಯಚ್ಚುಗಳಲ್ಲೇ ಹೆಚ್ಚು. ‘ಧರ್ಮ ಯಾವುದಾದರೇನು, ಸುಖವಾಗಿದ್ದರೆ ಸಾಕು’ ಎನ್ನುವ ಆಶಯ ಅವರದು.

*
ಸ್ಥಳೀಯರ ಹಕ್ಕುಗಳಿಗೆ ಗೌರವ
‘ಸ್ಥಳೀಯರ ಬದುಕುವ ಹಕ್ಕುಗಳನ್ನು ನಾವು ಗೌರವಿಸುತ್ತೇವೆ. ಜೀವನೋಪಾಯಕ್ಕಾಗಿ ದನಕರುಗಳನ್ನು ಸಾಕಿಕೊಂಡವರಿಗೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಜಾನುವಾರುಗಳ ಸಾಕಣೆ ವ್ಯಾಪಾರವಾಗಿ ಬದಲಾದರೆ ಅದನ್ನು ಪ್ರೋತ್ಸಾಹಿಸುವುದು ಕಷ್ಟ’– ‘ದನಕರುಗಳನ್ನು ಕಾಡಿಗೆ ಬಿಡುತ್ತಿಲ್ಲ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ದೂರುವ ಕಾಡಿನ ಅಂಚಿನ ಗ್ರಾಮಗಳ ಜನರ ದೂರಿಗೆ ಜಾವೀದ್‌ ಮುಮ್ತಾಜ್‌ ಅವರು ಪ್ರತಿಕ್ರಿಯಿಸಿದ್ದು ಹೀಗೆ. ‘ಮಲೆಮಹದೇಶ್ವರ ವನ್ಯಜೀವಿಧಾಮ’ದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಜಾವೀದ್‌ ಅವರು, ಜಾನುವಾರು ಸಾಕಣೆ ಹೆಸರಿನಲ್ಲಿ ಲಾಭ ದೊರೆಯುತ್ತಿರುವುದು ವ್ಯಾಪಾರಿಗಳಿಗೇ ಹೊರತು ಸ್ಥಳೀಯರಿಗೆ ಅಥವಾ ಗುಡ್ಡಗಾಡು ಜನರಿಗೆ ಅಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ.

‘ಈ ವರ್ಷ ಮಳೆ ಸರಿಯಾಗಿ ಆಗಿಲ್ಲ. ಆನೆಗಳಿಗೆ ಕುಡಿಯಲಿಕ್ಕೆ ನೀರಿಲ್ಲ. ಹೀಗಿರುವಾಗ ಊರಿನ ಸಾವಿರಾರು ದನಕರುಗಳು ಕಾಡಿಗೆ ನುಗ್ಗಿದರೆ ಗತಿಯೇನು?’ ಎನ್ನುವ ಆತಂಕ ಅವರದು. ‘ನಮ್ಮ ಸಿಬ್ಬಂದಿ ಮತ್ತು ಕಾಡಿನ ಅಂಚಿನ ಊರುಗಳ ಜನರ ನಡುವೆ ಭಾಷೆಯ ಸಮಸ್ಯೆಯಿದೆ. ಇದರ ನಡುವೆಯೂ ಕಾಡಿನ ಸಂರಕ್ಷಣೆ ಕುರಿತಂತೆ ಸ್ಥಳೀಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ’ ಎಂದು ‘ಕಾವೇರಿ ವನ್ಯಜೀವಿಧಾಮ’ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತರೆಡ್ಡಿ ಹೇಳುತ್ತಾರೆ. ‘ದೊಡ್ಡಿಗಳನ್ನು ನಾವು ಪ್ರೋತ್ಸಾಹಿಸುವುದಿಲ್ಲ’ ಎನ್ನುವ ಅವರು ಅಡಿಗೆರೆ ಎಳೆದಂತೆ ಹೇಳುವ ಮಾತು– ‘ಕಾಡಿನ ಅಂಚಿನಲ್ಲಿ ದನಗಳ ಸಂಖ್ಯೆ ಕಡಿಮೆ ಆದಷ್ಟೂ ವನ್ಯಜೀವಿಗಳಿಗೆ ಒಳಿತು’.

ವೀರಪ್ಪನ್‌ ಜೀವಂತನಿದ್ದಾಗ ಅರಣ್ಯ ಇಲಾಖೆಯ ಸಿಬ್ಬಂದಿ, ವಿಶೇಷವಾಗಿ ಅರಣ್ಯ ಸಂರಕ್ಷಕರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡಬೇಕಿತ್ತು. ಈಗ ಹಾಗಿಲ್ಲ. ‘ಮೀನುಗಾರರು ಮತ್ತು ಮೇಕೆಗಳನ್ನು ಸಾಕುವವರ ಸಂಖ್ಯೆ ಈ ಪ್ರದೇಶದಲ್ಲಿ ಹೆಚ್ಚಾಗಿದೆ. ಕೆಲವರು ಕಾಡಿನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಅವರನ್ನು ತೆರವುಗೊಳಿಸುವ ಕೆಲಸವೂ ನಡೆಯುತ್ತಿದೆ. ಇದರ ಹೊರತಾಗಿ ನಮ್ಮ ಕಾನೂನಾತ್ಮಕ ಸಮಸ್ಯೆಗಳೇನೂ ಇಲ್ಲ’ ಎನ್ನುತ್ತಾರೆ ವಸಂತರೆಡ್ಡಿ. ವನ್ಯಜೀವಿಧಾಮವಾಗಿ ಪರಿವರ್ತನೆಗೊಂಡ ನಂತರ ಕಾಡಿನ ಸಂರಕ್ಷಣೆಗೆ ಹೊಸ ಆಯಾಮ ದೊರೆತಿದೆ’ ಎನ್ನುವುದು ಜಾವೀದ್‌ ಮುಮ್ತಾಜ್‌ರ ಅನಿಸಿಕೆ.

ಪೂರಕ ಮಾಹಿತಿ: ಕೆ.ಎಚ್.ಓಬಳೇಶ್, ಬಸವರಾಜ್ ಬಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT