ವಿಜಾಪುರ ಎಂದ ತಕ್ಷಣ ಎಲ್ಲರ ಕಣ್ಣ ಮುಂದೆ ಬರುವುದು ವಿವಿಧ ಗುಮ್ಮಟಗಳು. ಆದರೆ ದೇಶದಲ್ಲೇ ಅತ್ಯಂತ ಎತ್ತರದ ಶಿವನ ಮೂರ್ತಿಗಳ ಪೈಕಿ ಎರಡನೆಯದೆಂಬ ಕೀರ್ತಿಯನ್ನು ಪಡೆದಿರುವ ಆಕರ್ಷಕ ಶಿವಗಿರಿಯೂ ಇಲ್ಲಿದೆ ಎಂಬುದು ಎಷ್ಟೋ ಮಂದಿಗೆ ತಿಳಿದೇ ಇಲ್ಲ.
ಇದು ವಿಶೇಷ ಶಿವನ ದೇಗುಲ ಇರುವ ಶಿವಗಿರಿ. ವಿಜಾಪುರ ನಗರದ ಪೂರ್ವ ದಿಕ್ಕಿನಲ್ಲಿರುವ ಉಕ್ಕಲಿ ರಸ್ತೆಗೆ ಇರುವ ೨೩ ಎಕರೆ ವಿಸ್ತಾರವಾದ ಜಮೀನಿನಲ್ಲಿ ಶಿವನನ್ನು ಪ್ರತಿಷ್ಠಾಪಿಸಲಾಗಿದೆ. ಶಿವಗಿರಿಯೆಂದೇ ಖ್ಯಾತಿ ಹೊಂದಿರುವ ಶಿವನಮೂರ್ತಿಯ ಎತ್ತರ ೮೫ ಅಡಿ.
ತಳಪಾಯ ಮೂರು ಸಾವಿರ ಟನ್ ಭಾರದ ಸಾಮರ್ಥ್ಯ ಹೊಂದಿದ್ದು ಒಂದೂವರೆ ಸಾವಿರ ಟನ್ ಶಿವನ ಭಾರವನ್ನು ಹೊತ್ತು ಪೂರ್ವಕ್ಕೆ ಮುಖಮಾಡಿರುವ ಧ್ಯಾನಾಸಕ್ತ ಶಿವನನ್ನು ನೋಡಿದಾಗ ಎಂಥಹವರೂ ಭಾವ ಪರವಶರಾಗುತ್ತಾರೆ. ಇಲ್ಲಿ ಗಣೇಶನ ಮೂರ್ತಿಯ ವಿಗ್ರಹವಿದೆ. ನಾಗ ದೇವತೆ ಹಾಗೂ ಮಂದಿರದ ಅವರಣದಲ್ಲಿ ನವಗ್ರಹ ವಿಗ್ರಹಗಳಿವೆ ಮತ್ತು ಇಲ್ಲಿ ಹರಕೆ ಹೊತ್ತು ಕಾಯಿಯನ್ನು ಕಟ್ಟಿ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡಿದ್ದು ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ.
ಯಾತ್ರಾಸ್ಥಳದ ಅನುಭವ
ಈ ಒಂದು ಸ್ಥಳಕ್ಕೆ ಬಂದರೆ ಪವಿತ್ರ ಯಾತ್ರಾ ಸ್ಥಳಕ್ಕೆ ಹೋದ ಅನುಭವವಾಗುತ್ತದೆ. ಉದ್ಯಾನದಲ್ಲಿ ಸಿಮೆಂಟ್‌ನಿಂದ ಕೆತ್ತಲಾದ ಜಿರಾಫೆಗಳು, ಗೋವುಗಳು ಹಾಗೂ ಸುಂದರ ಮಂಟಪ ಶಿವನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಗೋಳಗುಮ್ಮಟದ ಮೇಲೆ ನಿಂತು ನೋಡಿದರೆ ಈ ಬೃಹತ್ ಶಿವನ ಮೂರ್ತಿ ಮನೋಹರವಾಗಿ ಕಾಣುವುದು.
ಬಹುಕಾಲ ಬಾಳಿಕೆ ಬರುವ ಉದ್ದೇಶದಿಂದ ಪಿರಾಮಿಡ್ ಮಾದರಿಯಲ್ಲಿ ಶಿವನಮೂರ್ತಿ ನಿಲ್ಲಿಸಲಾಗಿದೆ. ಸಿಡಿಲು, ಗುಡುಗು, ಮಿಂಚು, ಭೂಕಂಪದಿಂದ ರಕ್ಷಿಸಲು ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ಶಿವನಮೂರ್ತಿ ಮುಂಭಾಗದಲ್ಲಿ ಕೂಡಲಸಂಗಮದಲ್ಲಿ ನಿರ್ಮಿಸಿದ ಬಸವಣ್ಣನ ಐಕ್ಯಮಂಟಪ ಹೋಲುವ ಮಾದರಿಯಲ್ಲಿ ಫೈಬರ್ ಮಂಟಪ ನಿರ್ಮಿಸಲಾಗಿದೆ. ನೋಡುಗರಿಗೆ ಕಲ್ಲಿನಿಂದ ಕೆತ್ತಿರುವುದು ಎನಿಸುತ್ತದೆ.
ಪ್ರತಿನಿತ್ಯ ವಿವಿಧ ಪೂಜೆಯ ವಿಧಿವಿಧಾನಗಳು ಇಲ್ಲಿ ಜರುಗುತ್ತವೆ. ಇದೀಗ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ. ಶಿವನ ಮೂರ್ತಿಯ ಎರಡೂ ಬದಿಗೆ ಗೋಲಾಕಾರದ ಕುಂಡದ ಕಾರಂಜಿಗಳಿವೆ. ಮನಮೋಹಕ ವಿಶಾಲ ಉದ್ಯಾನ ಈಗಾಗಲೇ ಮೈತಳೆದು ನಿಂತಿವೆ. ಮಕ್ಕಳಿಗೆ ಮನರಂಜನೆ ನೀಡಲು ಅನೇಕ ಆಟಿಕೆಗಳಿವೆ.
ಇಲ್ಲಿನ ಶಿವಗಿರಿಯನ್ನು ನಿರ್ಮಿಸಿದವರು ಬೆಂಗಳೂರಿನಲ್ಲಿ ನೆಲೆಸಿರುವ ವಿಜಾಪುರದ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಬಸಂತಕುಮಾರ ಪಾಟೀಲ. ಶಿವನಮೂರ್ತಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ವಿಜಾಪುರದಿಂದ ಸಿಟಿ ಬಸ್ ಸೌಲಭ್ಯವಿದೆ. ಸಾಕಷ್ಟು ಆಟೊ, ಕಾರ್, ಟಾಂಗಾ ಮುಂತಾದ ವಾಹನಗಳಲ್ಲೂ ಕ್ಷಣಾರ್ಧದಲ್ಲಿ ಶಿವಗಿರಿಯನ್ನು ತಲುಪುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.