ಅಜಾನುಬಾಹು ಬಂಡೆ. ಅದಕ್ಕೆ ಮುತ್ತಿಕ್ಕಿ ನಿಂತ ಚಿಕ್ಕಪುಟ್ಟ ಕಲ್ಲುಗಳ ರಾಶಿ. ಒಂದಕ್ಕೊಂದು ಒತ್ತಿನಿಂದ ಪರ್ವತಗಳು. ಮಾವಿನ ಕಂಪು. ಕುರುಚಲು ಗಿಡಗಂಟಿಗಳ ರಾಶಿ. ಇದಕ್ಕೆ ಕಳಶ ಪ್ರಾಯ ಎನ್ನುವಂತೆ ತಲೆ ಎತ್ತಿ ನಿಂತಿದೆ ಶಿಲಾಂದರ.
ರಾಮನಗರ ಪಟ್ಟಣದಿಂದ ಏಳು ಕಿ.ಮೀ ದೂರದಲ್ಲಿ ಇರುವ ಪಾದರಹಳ್ಳಿಗೆ ಹೋದವರಿಗೆ ಅದ್ಭುತಲೋಕ ಎದುರಾಗುತ್ತದೆ. ಸುಮಾರು 3 ಎಕರೆ ಪ್ರದೇಶದಲ್ಲಿ ಮೈದಳೆದಿರುವ ಈ ಪ್ರವಾಸಿ ತಾಣ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳ. ಮಾವು, ರೇಷ್ಮೆ, ಜಾನಪದ ಲೋಕಕ್ಕೆ ಹೆಸರಾದ ರಾಮನಗರ ಬಂಡೆಕಲ್ಲುಗಳಿಂದಲೂ ಅಷ್ಟೇ ಖ್ಯಾತಿ. ಇಲ್ಲಿನ ಶಿಲಾ ಸಂಪತ್ತನ್ನು ಶೋಲೆ ಸಿನಿಮಾದಲ್ಲಿ ಕ್ಯಾಮೆರಾ ಕಣ್ಣಿನಿಂದ ಹಿಡಿದಿರುವ ರೀತಿ ಬೆರಗು ಮೂಡಿಸುತ್ತದೆ.
ಈ ತಾಣಕ್ಕೆ ಈಗ ಇನ್ನಷ್ಟು ಬಣ್ಣ ತುಂಬಿರುವುದು ಚಿಕ್ಕಮಗಳೂರಿನ ಎಂಜಿನಿಯರ್ ಎಸ್.ಎನ್.ರಮೇಶ್. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸದಾ ಹೊಸ ಕನಸುಗಳನ್ನು ಕಾಣುತ್ತಿರುವ ರಮೇಶ್ ಅವರು ಒಂದು ವರ್ಷದಲ್ಲಿಯೇ ಈ ಜಾಗವನ್ನು ಪ್ರವಾಸಿತಾಣವನ್ನಾಗಿ ರೂಪಿಸಿದ್ದಾರೆ. ಬೃಹಾದಾಕಾರವಾಗಿ ನಿಂತಿರುವ ಹೆಬ್ಬಂಡೆಯ ತಪ್ಪಲಿನಲ್ಲಿ ನಿರ್ಮಾಣವಾಗಿರುವ ಶಿಲಾಂದರ ರಮೇಶರ್ ಅವರ ಹೊಸತನ, ಕ್ರಿಯಾಶೀಲತೆಗೆ ಹಿಡಿದ ಕನ್ನಡಿ.
ರಾಮನಗರ ಮುಖ್ಯರಸ್ತೆಯ ಸಿಗ್ನಲ್ ಬಳಿ ಬಲಕ್ಕೆ ತಿರುಗಿ ಏಳು ಕಿ.ಮೀ ಹಳ್ಳಿಗಾಡಿನ ರಸ್ತೆ, ವಾತಾವರಣದಲ್ಲಿ ಸಾಗಿದರೆ ಶಿಲಾಂದರ ಸಿಗುತ್ತದೆ. ಪ್ರವೇಶ ದ್ವಾರ, ಅಲ್ಲಿಂದ ಸಾಗುವ ದಾರಿ ಕೋಟೆಯೊಂದರ ಒಳ ಹೊಕ್ಕ ಅನುಭವ ನೀಡುತ್ತದೆ. ಅಕ್ಕಪಕ್ಕದಲ್ಲಿ ಇರುವ ಬೆಟ್ಟಗುಡ್ಡಗಳನ್ನು ಕಣ್ತುಂಬಿಕೊಳ್ಳುತ್ತಾ ನಡೆದಾಡಿದರೆ ಇಲ್ಲಿನ ಸೌಂದರ್ಯದ ಪರಿಚಯವಾಗುತ್ತದೆ.
ಕದಂಬರ ಕಾಲದ ವಾಸ್ತುಶಿಲ್ಪವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಿರ್ಮಿಸಿರುವ ವಿಶಾಲ ಹಜಾರ ಬೆರಗು ಮೂಡಿಸುತ್ತದೆ, ಬಂಡೆಗಳಿಂದಲೇ ಮೂಡಿದ ನೈಜ ಕಲಾಕೃತಿ ಎನಿಸುತ್ತದೆ. ಇಲ್ಲಿ ಕುಳಿತು ಕಾಫಿ ಹೀರುತ್ತಾ ಮುಂಭಾಗದಲ್ಲಿ ಇರುವ ಬೃಹತ್ ಬಂಡೆಯನ್ನು ನೋಡುತ್ತಿದ್ದರೆ ಹೊತ್ತು ಜಾರುವುದೇ ತಿಳಿಯದು.
ಬಂಡೆಯ ಕೆಳಗೆ ವೇದಿಕೆ ರೂಪದ ವಿಶಾಲ ಮಂಟಪ, ಅದಕ್ಕೆ ಹೊಂದಿಕೊಂಡಂತೆ ಹಸಿರು ಹಾಸಿನ ಮೈದಾನ. ಪಕ್ಕದಲ್ಲೇ ಹೊರಾಂಗಣ ಕ್ರೀಡಾ ಮೈದಾನ. ಇನ್ನೊಂದೆಡೆ ಒಳಾಂಗಣ ಕ್ರೀಡಾಂಗಣ, ವಿಶ್ರಾಂತಿ ಕೊಠಡಿ. ಮತ್ತೊಂದೆಡೆ ಮಳೆಯ ಬದಲು ಮಂಜಿನ ಹನಿಗಳ ಅನುಭವ ನೀಡುವ ರೈನಿಂಗ್ ಡ್ಯಾನ್ಸ್ ಹಾಲ್. ಅಲ್ಲಿನ ಹತ್ತಾರು ಬಣ್ಣಗಳ ಚಿತ್ತಾರ ಹೊಸಲೋಕವನ್ನು ಅನಾವರಣಗೊಳಿಸುತ್ತದೆ.
ನೈಸರ್ಗಿಕವಾಗಿ ಬೆಳೆದಿರುವ ಮಾವು, ಬೇವು ಇನ್ನಿತರೆ ಕುರುಚಲು ಗಿಡ ಮರಗಳನ್ನು ಉಳಿಸಿಕೊಂಡು ಎಲ್ಲೂ ನೈಜ ಪರಿಸರಕ್ಕೆ ಹಾನಿ ಬಾರದ ರೀತಿಯಲ್ಲಿ ವಿಶಾಲ ಈಜುಕೊಳ, ಆಟವಾಡಲು ಮಕ್ಕಳಿಗೆಂದೇ ಪ್ರತ್ಯೇಕ ಸ್ಥಳ ಗೊತ್ತು ಮಾಡಿದ್ದಾರೆ. ಸೂರ್ಯ ಬಾನಂಗಳಕ್ಕೆ ಜಾರಿದಂತೆ ಬೆಳಗುವ ವಿದ್ಯುತ್ ದೀಪಗಳು ಇಲ್ಲಿನ ಕಲಾಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ.
ಸಾಹಸ ಕ್ರೀಡೆಗೆ ಒತ್ತು ನೀಡಲು ಹೆಬ್ಬಂಡೆಯ ಕೆಳಭಾಗದಿಂದ ಇನ್ನೊಂದು ಬಂಡೆಗೆ ಬರಲು ಸುಮಾರು 250 ಮೀಟರ್ ದೂರದ ರೋಪ್‌ವೇ ನಿರ್ಮಿಸಿದ್ದು ಇದರಲ್ಲಿ ಹೋಗಿ ಬರುವುದು ರೋಮಾಂಚನ. ಆದರೆ ಗಂಡೆದೆ ಬೇಕಷ್ಟೇ. ಆಳ ಕಂದಕದ ಮೇಲ್ಭಾಗದಲ್ಲಿ ತೂಗು ಸೇತುವೆ ಮಾದರಿಯಲ್ಲಿ ಹಗ್ಗವನ್ನು ಕಟ್ಟಿದ್ದು, ಅದರಲ್ಲಿ ಹೆಜ್ಜೆ ಹಾಕಿದರೆ ಮೈ ಜುಂ ಅನ್ನುತ್ತದೆ. ಕೈಕಾಲು ನಡುಗುತ್ತವೆ.
8/8 ಅಡಿ ವಿಸ್ತೀರ್ಣದಲ್ಲಿ ಎಲ್ಲಾ ಸೌಲಭ್ಯ ಒಳಗೊಂಡು ಕಟ್ಟಿರುವ ಮರದ ಮನೆ ಕೌಶಲ್ಯ-ಕಲ್ಪನೆಗೆ ಹಿಡಿದ ಕನ್ನಡಿ. ಪ್ರವಾಸಿಗರಿಗೆ ರಾತ್ರಿ ಉಳಿದುಕೊಳ್ಳಲು ಅನುಕೂಲ ಆಗುವಂತೆ ಪರಿಸರ ಸ್ನೇಹಿ 20 ಕೊಠಡಿಗಳನ್ನು ಕಟ್ಟುವ ಕೆಲಸವೂ ಸಾಗಿದೆ. ಶಿಲಾಂದರದ ಪೂರ್ಣ ಚಿತ್ರಣವನ್ನು ಬೆಳದಿಂಗಳ ರಾತ್ರಿಯಲ್ಲಿ ಸವಿದರೆ ಸಿಗುವ ಆನಂದ - ಅನುಭವ ವಿಭಿನ್ನ. ಒಂದು ದಿನದ ಪ್ರವಾಸಕ್ಕೆ ಇದು ಪ್ರಶಾಂತ ಸ್ಥಳ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಣ್ಣ ಪ್ರಮಾಣದ ಸಭೆ, ಸಮಾರಂಭ ನಡೆಸಲೂ ಅಡ್ಡಿಯಿಲ್ಲ.
ಹೊಸ, ಹೊಸ ಆಲೋಚನೆಗಳ ಮೂಲಕ ರಾಶಿ ಎಕೋ ಟೂರಿಸಂ ಲಿಮಿಟೆಡ್ ಹೆಸರಿನಲ್ಲಿ ಎನ್.ಎಸ್.ರಮೇಶ್ ಮತ್ತು ಸಿ.ಎಚ್.ರಮೇಶ್ ಕನಕಪುರ ರಸ್ತೆಯಲ್ಲಿ ಗುಹಾಂತರ, ಚಿಕ್ಕಮಗಳೂರಿನ ಹೊನ್ನಮ್ಮನಹಳ್ಳ ಬಳಿ ಝರಿ ರೆಸಾರ್ಟ್ ನಿರ್ಮಿಸಿದ್ದು, ಶಿಲಾಂದರ ಇನ್ನೊಂದು ಮೈಲಿಗಲ್ಲು ಎನ್ನಬಹುದು. ಅವರ ಸಂಪರ್ಕ ಸಂಖ್ಯೆ 9591991001
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.