ADVERTISEMENT

ಸಮಾಧಿಯೊಳು ಮರೆಯಾದ ಸಿರಿಯಜ್ಜಿ ನೆನಪು!

ಚೌಳೂರು ಲೋಕೇಶ್
Published 5 ಮೇ 2014, 19:30 IST
Last Updated 5 ಮೇ 2014, 19:30 IST
ಸಿರಿಯಜ್ಜಿ
ಸಿರಿಯಜ್ಜಿ   

ಚಿತ್ರದುರ್ಗ ಜಿಲ್ಲೆ ಜಾನಪದ ಸಂಸ್ಕೃತಿಗಳ ಖನಿ. ಇಲ್ಲಿನ ಆಚರಣೆ ಗಳು, ಹಬ್ಬ ಹರಿದಿನಗಳು ಭಿನ್ನ. ಇಂತಹ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸಲು ಹಲವು ಮಹನೀಯರು ಶ್ರಮಿಸಿದ್ದಾರೆ. ಅವರ ಸಾಧನೆಗಳು ನಾಡಿನಾದ್ಯಂತ ಮನೆ ಮಾತಾಗಿವೆ. ಇಂತಹ ಮಹನೀಯರೊಬ್ಬರು ನಮ್ಮಿಂದ ಮರೆಯಾಗಿ ಸುಮಾರು ನಾಲ್ಕು ವರ್ಷಗಳಾಗಿವೆ. ಅವರೇ ಜಿಲ್ಲೆಯ ಜಾನಪದ ಕೋಗಿಲೆ ನಾಡೋಜ ಪುರಸ್ಕೃತೆ, ನಾಡೋಜ ಪುರಸ್ಕೃತೆ ಸಿರಿಯಜ್ಜಿ.

ಚಳ್ಳಕೆರೆ ತಾಲ್ಲೂಕಿನ ಯಲಗಟ್ಟೆ ಗೊಲ್ಲರಹಟ್ಟಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಸಿರಿಯಜ್ಜಿ ಬದುಕಿನುದ್ದಕ್ಕೂ ಜನಪದಕ್ಕಾಗಿ ದುಡಿದವಳು. ಓದು ಬರಹ ಕಲಿಯದ ಅನಕ್ಷರಸ್ಥೆಯಾದರೂ ನಾಡೇ ಗುರುತಿಸುವಂತಹ ಸಾಧನೆಯನ್ನು ಮಾಡಿ ನಮ್ಮಿಂದ ಮರೆಯಾಗಿ ಕಳೆದ ಏಪ್ರಿಲ್‌ 3ಕ್ಕೆ ನಾಲ್ಕು ವರ್ಷಗಳಾಗಿವೆ. ಅಂದು ಜನಪ್ರತಿನಿಧಿಗಳು ಕೊಟ್ಟಂತಹ ಆಶ್ವಾಸನೆಗಳು ಬರೀ ಭರವಸೆಗಳಾಗಿ ಉಳಿದಿವೆಯೇ ವಿನಃ ಸಿರಿಯಜ್ಜಿಯ ಕೊನೆಯ ಆಸೆ ಈಡೇರದಿರುವುದು ವಿಷಾದನೀಯ.

ಸಿರಿಯಜ್ಜಿಯ ಜಾನಪದ ಕೋಶದಿಂದ ಅನೇಕರು ಕನ್ನಡ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಹತ್ತು ಸಾವಿರ ಹಾಡುಗಳನ್ನು ಹೇಳುವಂತಹ ಅದ್ಭುತ ಪ್ರತಿಭೆ ಸಿರಿಯಜ್ಜಿ. ಜಾನಪದ ಕೋಗಿಲೆಯ ಕಂಠದಿಂದ ಮೂಡಿಬಂದಂತಹ ಹಾಡುಗಳನ್ನು ಸಂಗ್ರಹಿಸಿ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು ‘ಸಾವಿರದ ಸಿರಿ ಬೆಳಗು’ ಕೃತಿಯನ್ನು ಹೊರತಂದಿದ್ದಾರೆ. ಅಲ್ಲದೇ ಅಜ್ಜಿಯ ಹಾಡುಗಳನ್ನು ಡಾ.ಮೀರಾಸಾಬಿ ಹಳ್ಳಿ ಶಿವಣ್ಣ ಸಾರಸ್ವತ ಲೋಕಕ್ಕೆ ಪರಿಚಯಿಸಿದ್ದಾರೆ.

ಈಡೇರದ ಆಸೆಗಳು
ಕುಗ್ರಾಮವಾದ ಯಲಗಟ್ಟೆ ಗೊಲ್ಲರಹಟ್ಟಿಗೆ ಹೆರಿಗೆ ಆಸ್ಪತ್ರೆಯನ್ನು ಕಟ್ಟಿಸು ವುದು ಸಿರಿಯಜ್ಜಿ ದೊಡ್ಡ ಆಸೆಯಾಗಿತ್ತು. ಇದನ್ನವರು ಕೆಲವರ ಬಳಿ ಹೇಳಿಕೊಂಡಿದ್ದರು. ತಮ್ಮ ತಾಯ್ತನದ ದಿನಗಳ ಕಷ್ಟಗಳನ್ನು ಸುತ್ತಮುತ್ತಲಿನ ಹೆಣ್ಣು ಮಕ್ಕಳು ಅನುಭವಿಸಬಾರದೆಂದು ಆಸೆ ಪಟ್ಟಿದ್ದರು. ಅಂತೆಯೇ ಗೊಲ್ಲರಹಟ್ಟಿಯಲ್ಲಿ ಹೆತ್ತಪ್ಪ ದೇವರ ಮಂಟಪವನ್ನು ನಿರ್ಮಿಸಬೇಕೆಂಬುದು ಅಜ್ಜಿಯ ಬಯಕೆಯಾಗಿತ್ತು. ಇವೆರಡೂ ಕನಸುಗಳು ಹಾಗೇ ಉಳಿದಿವೆ. ಸಿರಿಯಜ್ಜಿ ನಿಧನದ ನಂತರ ಜರುಗಿದ ಸಂತಾಪ ಸಭೆಯಲ್ಲಿ ಜನಪ್ರತಿನಿಧಿಗಳು ಚಳ್ಳಕೆರೆಯಲ್ಲಿ ಜಾನಪದ ಸಾಂಸ್ಕೃತಿಕ ಭವನವನ್ನು ಸಿರಿಯಜ್ಜಿ ಹೆಸರಿನಲ್ಲಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದರು.


ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಪ್ರೊ.ಉಪ್ಪಾರಹಟ್ಟಿ ಚಿತ್ತಯ್ಯ ಮುಂತಾದ ಪ್ರಜ್ಞಾವಂತರು ಸೇರಿಕೊಂಡು ಅಜ್ಜಿಯ ಸಾಂಸ್ಕೃತಿಕ ಸಾಧನೆಗಳನ್ನು ನಾಡಿಗೆ ಪರಿಚಯಿಸಲು ರಾಜ್ಯಮಟ್ಟದ ಸಾಂಸ್ಕೃತಿಕ ಪ್ರತಿಷ್ಠಾನ ರಚಿಸಬೇಕೆಂದು ತೀರ್ಮಾನಿಸಿದ್ದರು. ಅಜ್ಜಿ ನಿಧನವಾಗಿ ನಾಲ್ಕು ವರ್ಷ ಕಳೆದರೂ ಒಂದು ಕೆಲಸವು ಕಾರ್ಯರೂಪಕ್ಕೆ ಬರದಿರುವುದು ವಿಷಾದನೀಯ.


ಅಜ್ಜಿಗೆ ಅರಸಿ ಬಂದ ಪ್ರಶಸ್ತಿಗಳು
1982 ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 1985 ರಾಜ್ಯ ಜನಪದ ಸಮ್ಮೇಳನ ಪ್ರಶಸ್ತಿ, 1998 ಕನ್ನಡ ರಾಜ್ಯೋತ್ಸವ, 50ನೇ ಗಣರಾಜ್ಯೋತ್ಸವ, 2004ರಲ್ಲಿ ದುರ್ಗದ ಸಿರಿ ಕಲಾ ಸಂಘದ ಪ್ರಶಸ್ತಿ, 2005ರಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರತಿಷ್ಠಿತ ‘ನಾಡೋಜ’ ಸನ್ಮಾನ ಈ ಅಜ್ಜಿಯನ್ನು ಹುಡುಕಿ ಬಂದಿವೆ.

ಇಂತಹ ಮಹಾನ್ ಸಾಧನೆ ಗೈದು ಜಾನಪದ ಲೋಕವೇ ನಿಬ್ಬೆರಗಾಗುವಂತೆ ಮಾಡಿದ ಸಿರಿಯಜ್ಜಿಯ ಸಮಾಧಿ ಸ್ಥಳ ಅನಾಥವಾಗಿ ಬಿದ್ದಿದೆ. ಸಿರಿಯಜ್ಜಿಯ ಕೊನೆಯ ದಿನದ ಆಸೆಗಳು ಆದಷ್ಟು ಬೇಗನೆ ಈಡೇರಲಿ. ಹಾಳು ಬಿದ್ದಿರುವ ಸಮಾಧಿ ಸ್ಥಳ ಜಾನಪದ ಆಸಕ್ತರು ನೋಡುವಂತಾಗಲಿ ಎಂಬುದು ಅಜ್ಜಿಯ ಅಭಿಮಾನಿಗಳ ಬಯಕೆ. ಸರ್ಕಾರ, ಸಂಬಂಧಿಸಿದ ಇಲಾಖೆ, ಬುದ್ಧಿಜೀವಿಗಳು ಈ ಬಗ್ಗೆ ಗಮನ ಹರಿಸುವಂತಾಗಲಿ.

‘ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿನ ದೇವಸ್ಥಾನದ ಬಳಿ ಸಿರಿಯಜ್ಜಿಗೆ ಬಂದಂತಹ ಪ್ರಶಸ್ತಿಗಳನ್ನು ಸಂಗ್ರಹಿಸಿ ಸರ್ಕಾರ ಚಿಕ್ಕ ವಸ್ತುಸಂಗ್ರಹಾಲಯ ಮಾಡಲಿ. ಈ ಕುರಿತು ಜಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಲಿ’ ಎನ್ನುತ್ತಾರೆ ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ.

‘ಕಾಲೇಜು, ಜಿಲ್ಲಾಡಳಿತ ಜಾನಪದ ಕಲಾವಿದರಿಗೆ ಪ್ರತಿ ವರ್ಷ ಅಜ್ಜಿಯ ಹೆಸರಲ್ಲಿ ಪ್ರಶಸ್ತಿಯನ್ನು ನೀಡಿದರೆ ನಮ್ಮ ಮನದಲ್ಲಿ ಸಿರಿಯಜ್ಜಿ ಚಿರಾಯುವಾಗಿರುತ್ತಾಳೆ’ ಎನ್ನುವುದು ಜಾನಪದ ವಿದ್ವಾಂಸ ಡಾ.ಕೃಷ್ಣಮೂರ್ತಿ ಹನೂರು ಅಭಿಮತ.

‘ಅಜ್ಜಿಯ ಹೆಸರಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು. ಚಿತ್ರದುರ್ಗ ಜಿಲ್ಲಾಡಳಿತ ಪ್ರತೀ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ ಸಾಹಿತ್ಯ ಕ್ಷೇತ್ರದ ಗಣ್ಯರಿಗೆ ತರಾಸು ಹೆಸರಲ್ಲಿ, ಜಾನಪದ ಕ್ಷೇತ್ರದವರಿಗೆ ಸಿರಿಯಜ್ಜಿ ಹೆಸರಲ್ಲೂ ಪ್ರಶಸ್ತಿ ನೀಡಲಿ’ ಎಂಬುದು ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ನಿಲುವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.