ADVERTISEMENT

ಸ್ವರ್ಗ ಮಾಡುವವರ ಬದುಕು ನರಕ...!

ಪ್ರತೀಕ ಪ್ರಶಾಂತ
Published 29 ಏಪ್ರಿಲ್ 2013, 19:59 IST
Last Updated 29 ಏಪ್ರಿಲ್ 2013, 19:59 IST
ರಸ್ತೆಯೇನೋ ಶುಚಿಯಾಯಿತು, ಬದುಕು...?
ರಸ್ತೆಯೇನೋ ಶುಚಿಯಾಯಿತು, ಬದುಕು...?   

`ಮಹಾನಗರಗಳನ್ನೆಲ್ಲ ಸಿಂಗಪುರ ಮಾಡ್ತೇವೆ ಅಂತ ಕಂಡ್‌ಕಂಡಲ್ಲಿ ಒದರ‌್ತಾರಲ್ಲ, ವೇದಿಕೆ ಮ್ಯಾಲೇರಿ ಬಾಸಣ ಬಿಗೀತಾರಲ್ಲ, ಬೆಂಗ್ಳೂರು ಸ್ವಚ್ ಮಾಡಿಸಿದ್ದೀವಿ ಅಂತ ಜಂಭ ಕೊಚ್‌ಕೊಳ್ತಾರಲ್ಲ, ಒಂದ್ ದಿನ ನಾವ್ ಕೆಲ್ಸ ಮಾಡೋದು ನಿಲ್ಸಿದ್ರೆ ಗೊತ್ತಾಗತ್ತೆ ಇವ್ರ ಬಂಡ್ವಾಳ, ಸಿಂಗಪುರ ಅಲ್ಲ, ಕೊಳಕ್‌ಪುರ, ಕೊಳಕುಪುರ ಆಗ್ತೈತಿ, ಈಗ್ಲೇ ಗೊತ್ತಾಗೈತಲ್ಲ ನಾಚ್ಕೆ ಆಗಬೇಕು ಇವ್ರಿಗೆ, ಮರ್ವಾದೆ ಬಿಟ್ಟು ಓಟು ಕೇಳಾಕ ಬರ‌್ತಾವೆ...'!

ಹೀಗೆ ಸಾಗಿತ್ತು ಸುನಂದಮ್ಮಳ ಆಕ್ರೋಶ. ಈಕೆ ಬೆಂಗಳೂರಿನ ಪೌರ ಕಾರ್ಮಿಕರಲ್ಲಿ ಒಬ್ಬಾಕೆ. ಕೆಲಸ ಕಾಯಮಾತಿ, ಸಂಬಳ ಹೆಚ್ಚಳ ಮುಂತಾದ ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎನ್ನುವ ಕೋಪ ಇವರದ್ದು. ಇದು ಸುನಂದಮ್ಮರೊಬ್ಬರ ಕಥೆ ಅಲ್ಲ. ರಾಜ್ಯದಲ್ಲಿನ 70ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಪ್ರತಿಯೊಬ್ಬ ಪೌರ ಕಾರ್ಮಿಕರ ವ್ಯಥೆ ಕೂಡ. ಮಲಮೂತ್ರವಿರುವ, ಕೊಳೆತು ನಾರುವ ಸ್ಥಳಗಳಲ್ಲೇ ಇವರ ಬದುಕು. ಉಸಿರುಗಟ್ಟುವಂಥ, ಅಪಾಯದ ವಾತಾವರಣದಲ್ಲಿ ಇವರ ಸೇವೆ.

ಕ್ಷಣ ಮಾತ್ರದ ದುರ್ವಾಸನೆಗೆ ನಾವು ಮೂಗು ಮುಚ್ಚಿಕೊಂಡು ನಡೆಯುತ್ತಿದ್ದರೆ, ಗಂಟೆಗಟ್ಟಲೆ ಅವರದ್ದು ಅಲ್ಲಿಯದ್ದೇ ಕೆಲಸ. ಸರ್ಕಾರದಿಂದ ಇವರಿಗೆ ದೊರೆತಿರುವುದು ಕೇವಲ ಸಮವಸ್ತ್ರ. ಆರೋಗ್ಯ ರಕ್ಷಣೆಯ ಸಲಕರಣೆ ಮರೀಚಿಕೆ. ಉಸಿರಾಟಕ್ಕೆ ಮಾಸ್ಕ್, ಕೈಗವಸು, ಪ್ಲಾಸ್ಟಿಕ್ ಕಾಲು ಚೀಲ, ರಕ್ಷಾ ಬೂಟ್‌ಗಳು ಎಲ್ಲವೂ ಸರ್ಕಾರದ ಕಾಗದದಲ್ಲಿ! ಇನ್ನೂ ವಿಷಾದ ಎಂದರೆ, ಕಾನೂನು ಇವರಿಗೆ ಎಲ್ಲ ನೀಡಿದರೂ ಅದನ್ನು ತಮಗೆ ಕೊಡಿ ಎಂದು ಕೇಳುವಂತೆಯೂ ಇಲ್ಲ. ನಗರವನ್ನು `ಸ್ವರ್ಗ' ಮಾಡುವ ಇವರ ಬದುಕು ಮಾತ್ರ ಅಕ್ಷರಶಃ ನರಕ.

ಪುಡಿಗಾಸು ಸಂಬಳ
ಇಷ್ಟೆಲ್ಲ ಮಾಡಿದರೂ ಇವರಿಗೆ ಸಿಗುತ್ತಿರುವ ಸಂಬಳ ಎಷ್ಟು ಗೊತ್ತೆ? ತಿಂಗಳಿಗೆ ಎರಡೋ, ಎರಡೂವರೆ ಸಾವಿರ ರೂಪಾಯಿ. ಮಹಾನಗರಗಳಲ್ಲಿ ಇಷ್ಟರಲ್ಲೇ ಜೀವನ ನಡೆಸುವ ಪರಿಸ್ಥಿತಿ. ಮಳೆ ಇರಲಿ, ಬಿಸಿಲು ಇರಲಿ, ಚುಮುಚುಮು ಚಳಿಯೇ ಇರಲಿ ಕೆಲಸ ಮಾತ್ರ ಮಾಡಲೇಬೇಕು. ಅನಾರೋಗ್ಯದ ವಾತಾವರಣದ ನಡುವೆ ಕೆಲಸ ಮಾಡಿ ಕಾಯಿಲೆ ಬಿದ್ದರೆ ಮುಗಿದೇ ಹೋಯ್ತು. ಜೀವನ ದುಸ್ತರ. ಹಾಗೆಂದು ಕೆಲಸವೂ ಬಿಡುವಂತಿಲ್ಲ. ಕೊಳೆಗೇರಿ, ರಸ್ತೆ ಬದಿಗಳಲ್ಲಿ ಶೆಡ್ ಅಥವಾ ಗುಡಿಸಲಿನಲ್ಲಿ ವಾಸ ಮಾಡುವುದೇ ಇವರ ಪಾಲಿಗಿರುವುದು.

ಅವರಿವರ ಮನೆಯಲ್ಲಿ ಕೊಟ್ಟ ತಿಂಡಿಗಳನ್ನು (ಎಷ್ಟೋ ಬಾರಿ ಸಿಗುವುದು ಹಳಸಲು ಆಹಾರ!) ತಿನ್ನುವುದೇ ಇವರ ಜೀವನ. ಮನೆಯೊಡತಿ ಹತ್ತೋ ಇಪ್ಪತ್ತು ಕೈಗಿತ್ತರೆ ಅದುವೇ ಇವರ ಸ್ವರ್ಗ. ಕೆಲವರೋ ದುಡ್ಡಿ ಕೇಳಿದರೆ ನೇರವಾಗಿ ನಗರಪಾಲಿಕೆಗೆ ದೂರು ದಾಖಲಿಸುವವರೂ ಇದ್ದಾರೆ!

ಶಿಕ್ಷಣ ಮರೀಚಿಕೆ
ತಮ್ಮ ಮಕ್ಕಳು ತಮ್ಮಂತೆ ನಿರಕ್ಷರಕುಕ್ಷಿಗಳು ಆಗಬಾರದು ಎನ್ನುವ ಕಳಕಳಿ ಎಷ್ಟೋ ಪೌರ ಕಾರ್ಮಿಕದ್ದು. ಆದರೆ ಶಿಕ್ಷಣ ಮಕ್ಕಳಿಗೆ ಮರೀಚಿಕೆ. ಬರುವ ಆದಾಯದಲ್ಲಿ ಹೊತ್ತು ತುತ್ತಿಗೂ ಪರದಾಡುವ ಸ್ಥಿತಿಯಲ್ಲಿ ಶಿಕ್ಷಣ ಕೊಡಿಸುವುದಾದರೂ ಹೇಗೆ. ಇದರಿಂದ ಪೌರ ಕಾರ್ಮಿಕರ ಮಕ್ಕಳೂ ಅದೇ ವೃತ್ತಿಯಲ್ಲಿಯೇ ಮುಂದುವರಿಯುವುದು ಅನಿವಾರ್ಯ. ಎಲ್ಲರೂ ಶಿಕ್ಷಿತರಾಗಿ ಬಿಟ್ಟರೆ ನಗರವನ್ನು ಶುಚಿಯಾಗಿ ಇಡುವವರು ಯಾರು ಎಂಬ ಆತಂಕವೂ ಸರ್ಕಾರಕ್ಕೆ ಇದ್ದಂತಿದೆ!

ಇಷ್ಟೆಲ್ಲ ಹೇಳುವ ನಾವು ಸುಮ್ಮನೆ ಇರುತ್ತೇವೆಯೇ? ರಸ್ತೆಯಲ್ಲಿ ಸಂಚರಿಸುವಾಗ ರಸ್ತೆ ಶುಚಿಯಾಗಿದ್ದರೆ `ವಾವ್' ಅನ್ನುತ್ತೇವೆ. ಇಲ್ಲದಿದ್ದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸುಮ್ಮನೆ ಸಾಗುತ್ತೇವೆ. ಅದೇ ದುರ್ನಾತ ಬೀರುತ್ತಿದ್ದರೆ ಅಥವಾ ಗಲೀಜು ಆಗಿದ್ದರೆ? ರಸ್ತೆ ಗುಡಿಸುವವರನ್ನು ಬೈಯುವುದು ಸಾಮಾನ್ಯ ಅಲ್ಲವೆ?  ಆದರೆ, ಪೊರಕೆ ಹಿಡಿದು ತಳ್ಳುಗಾಡಿಗಳಲ್ಲಿ ಕಸವನ್ನು ತುಂಬಿ ರಸ್ತೆಗೆ ಅಂದ ತರುವ ಪೌರಕಾರ್ಮಿಕರ ಬಗ್ಗೆ ಆ ಕ್ಷಣದಲ್ಲಿ ಕಿಂಚಿತ್ತೂ ಯೋಚನೆ ಮಾಡುವುದಿಲ್ಲ!

ಇವರದ್ದೇ ಬದುಕಿನ ಚಿತ್ರಣ ಒಳಗೊಂಡ ತುಳು ಚಿತ್ರ `ದೇವೆರ್' ನೋಡಿದ್ದೀರಾ. ಸುಂದರ ನಾಳೆಗಳ ಕನಸು ಕಾಣುವ ನಿರಕ್ಷರಿ, ಪ್ರಾಮಾಣಿಕ ಪೌರಕಾರ್ಮಿಕನೊಬ್ಬ ಪ್ರತಿಕ್ಷಣ ಅನುಭವಿಸುವ ಅಪಮಾನಗಳು, ನಾಯಕ ತನ್ನ ಮಗನನ್ನು ಕಾನ್ವೆಂಟಿಗೆ ಸೇರಿಸುವಾಗ ಅವನಿಗೆ ಎದುರಾಗುವ ಸಮಸ್ಯೆಗಳು, ಕ್ಯಾನ್ಸರ್ ಪೀಡಿತ ಪತ್ನಿಯನ್ನು ಉಳಿಸಿಕೊಳ್ಳಲು ಅವನು ನಡೆಸುವ ಕಷ್ಟ ಕಾರ್ಪಣ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ ಈ ಚಿತ್ರ.
ಕಾನೂನು ಎಲ್ಲಿದೆ?

ಅಷ್ಟಕ್ಕೂ ನಿಮಗೆ ಗೊತ್ತಾ? ಕಾರ್ಮಿಕರಿಗಾಗಿಯೇ 1970ರಲ್ಲಿ ಜಾರಿಗೊಳಿಸಲಾದ `ಗುತ್ತಿಗೆ ಕಾರ್ಮಿಕ ರದ್ದತಿ ಮತ್ತು ನಿಯಂತ್ರಣ ಕಾಯ್ದೆ' ಪ್ರಕಾರ ವರ್ಷಪೂರ್ತಿ ಎಲ್ಲಿ ಕೆಲಸವಿರುತ್ತದೋ ಅಂಥ ಸ್ಥಳಗಳಲ್ಲಿ ಗುತ್ತಿಗೆ ಆಧಾರಿತ ಕಾರ್ಮಿಕರು ಇರುವಂತಿಲ್ಲ. ತಾತ್ಕಾಲಿಕ ಮತ್ತು ಮಧ್ಯಂತರ ಕಾರ್ಯಗಳಿಗೆ ಎಲ್ಲಿ ಜನರ ಅಗತ್ಯವಿರುತ್ತದೊ ಅಂಥ ಸಂದರ್ಭದಲ್ಲಿ ಮಾತ್ರ, ಮಧ್ಯಂತರ ಗುತ್ತಿಗೆ ಕಾರ್ಮಿಕರ ಪದ್ಧತಿ ಪ್ರಕಾರ ಅರೆಕಾಲಿಕ ಕಾರ್ಮಿಕರ ನೇಮಕವಾಗಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ, ಕ್ಯಾಂಟೀನ್ ವ್ಯವಸ್ಥೆ, ಅವರು ತಮ್ಮ ಊರುಗಳಿಗೆ ಮರಳಲು ಹಣ ಪಾವತಿ ಸೇರಿದಂತೆ ಎಲ್ಲ ಸವಲತ್ತು ಕಲ್ಪಿಸಬೇಕು. ಆದರೆ ಫಲಿತಾಂಶ ಶೂನ್ಯ. ವೇತನವೂ ಸರಿಯಾಗಿಲ್ಲ, ಆರೋಗ್ಯಕರ ಪರಿಸರವೂ ಇಲ್ಲ. ಸಾಯುವವರೆಗೆ ದುಡಿದರೂ ಸರಿಯಾದ ಸವತ್ತುಗಳಿಲ್ಲ. ಎಂಥ ದುಃಸ್ಥಿತಿ.

ಇವೆಲ್ಲ ತೊಂದರೆ ಸಾಲದು ಎಂಬಂತೆ ಪೌರಕಾರ್ಮಿಕರ ವಲಯದಲ್ಲಿ ದಲ್ಲಾಳಿ ಹಾವಳಿ ಬೇರೆ. ಇವರ ಮಧ್ಯಪ್ರವೇಶ ಕಾನೂನು ಬಾಹಿರ ಎಂದೂ ತಿಳಿದಿದ್ದರೂ ಪಾಲಿಕೆಗಳು ಮೌನ ಮೌನ. ಪೌರಕಾರ್ಮಿಕರು ಮಾಡಬೇಕಾದ ಕೆಲಸವನ್ನು ಟೆಂಡರ್ ಕರೆದು ಗುತ್ತಿಗೆ ನೀಡುತ್ತಲೇ ಇದೆ. ಇದರಿಂದ ದಲ್ಲಾಳಿಗಳು ಹೊರಗಡೆಯಿಂದ ಅಮಾಯಕ, ಅನಕ್ಷರಸ್ಥರನ್ನು ಕರೆತಂದು ಹೆಚ್ಚು ಹೆಚ್ಚು ದುಡಿಸಿಕೊಳ್ಳುತ್ತಿದ್ದಾರೆ. ಪೌರ ಕಾರ್ಮಿಕರಿಗೆ ಮೀಸಲಿಟ್ಟಿರುವ ವೇತನದ ಹೆಚ್ಚಿನ ಪಾಲು ಇವರ ಪಾಲಾಗುತ್ತಿದೆ. ಅಲ್ಲದೆ ಇವರು ಹೊರ ಗುತ್ತಿಗೆದಾರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಇದರಿಂದ ಇರುವ ಕಾರ್ಮಿಕರ ಹೊಟ್ಟೆಗೆ ತಣ್ಣೀರೇ ಗತಿ. ಮತಕ್ಕಾಗಿ ಬೇಡುವ ಸರ್ಕಾರ ಇವರತ್ತ ಒಮ್ಮೆ ಗಮನ ಹರಿಸಬಾರದೆ...?
-ಪ್ರತೀಕ ಪ್ರಶಾಂತ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT