ಬೇಳೆ ಕಾಳುಗಳನ್ನು ನೆಲದಡಿಯಲ್ಲಿ ಸಂರಕ್ಷಿಸಿ, ಸಂಗ್ರಹಿಸಿಡುವ ಹಳೆಯ ಸಂಪ್ರದಾಯವೇ ಹಗೇವು. ಹಳ್ಳಿ ಬೀದಿಗಳೂ ಡಾಂಬರೀಕರಣಗೊಳ್ಳುತ್ತಿರುವುದು, ಮಳೆ ಪ್ರವಾಹಗಳ ಭೀತಿ ಹಾಗೂ ಬೆಳೆಗಳನ್ನು ಕೊಯ್ಲು ಮಾಡಿದ ತಕ್ಷಣ ಮಾರುಕಟ್ಟೆಗೆ ಸಾಗಿಸುತ್ತಿರುವುದು... ಈ ಎಲ್ಲ ಕಾರಣಗಳಿಂದ ಹಗೇವು ಈಗ ಅಪ್ರಸ್ತುತ. ಆದರೆ ಗ್ರಾಮೀಣ ಭಾಗದ ಕೂಡು ಕುಟುಂಬಗಳಿಗೆ ಇದರ ಅವಶ್ಯಕತೆ ಇದ್ದೇ ಇದೆ. ಕೂಡು ಕುಟುಂಬಗಳು, ದೊಡ್ಡ ದೊಡ್ಡ ರೈತ ಕುಟುಂಬಗಳು ಇನ್ನೂ ಗ್ರಾಮೀಣ ಭಾಗಗಳಲ್ಲಿ ಜೀವಂತಿಕೆ ಪಡೆದಿರುವ ಕಾರಣ ಹಗೇವನ್ನು ಉಳಿಸಿಕೊಳ್ಳಲು ಹೊಸ ಪ್ರಯೋಗ ನಡೆಯುತ್ತಿವೆ.
ಅಂಥ ಕುಟುಂಬಗಳ ಪೈಕಿ ಗದಗ ಜಿಲ್ಲೆ, ಮುಂಡರಗಿ ತಾಲ್ಲೂಕಿನ ಬಿದರಳ್ಳಿಯಲ್ಲಿ ಚೌಡ್ಯಾಳರದ್ದು. ಇವರ ಮನೆಯಲ್ಲಿ ಹತ್ತಲ್ಲ, ಇಪ್ಪತ್ತಲ್ಲ ಬರೋಬ್ಬರಿ ಎಂಬತ್ತು ಸದಸ್ಯರು! ಇವರ ಮನೆಯಲ್ಲೂ ಹಿಂದಿನವರು ಬಳಕೆ ಮಾಡುತ್ತಿದ್ದಂತೆ ನೆಲದಡಿಯ ಹಗೇವು ಇದ್ದವು. ಆದರೆ ಅವುಗಳಲ್ಲಿ ನೀರು ಹೊಕ್ಕು ಅಪಾರ ಪ್ರಮಾಣದ ನಷ್ಟವಾಯಿತು. ಇದನ್ನು ಮನಗಂಡು ಮನೆಯ ಸದಸ್ಯರಲ್ಲಿ ಒಬ್ಬರಾದ ಎಂಜನಿಯರ್ ಶಂಕ್ರಪ್ಪ ಚೌಡ್ಯಾಳ ತಾವೇ ಸರಳ ವಿನ್ಯಾಸದ ಒಂದು ಆಧುನಿಕ ಹಗೇವು ನಿರ್ಮಿಸಲು ಮುಂದಾಗಿ ಈಗ ಎಲ್ಲ ಸಮಸ್ಯೆಗಳನ್ನು ಮೀರಿ ನಿಂತ ಹೊಸ ಹಗೇವಿನ ಆವಿಷ್ಕಾರ ಮಾಡಿದ್ದಾರೆ.
ಹೀಗಿದೆ ಹೊಸ ಹಗೇವು
13 ಅಡಿ ಉದ್ದಗಲದ ಮತ್ತು 10 ಅಡಿ ಎತ್ತರದ ಕೋಣೆಗೆ 1.5 ಅಡಿ ದಪ್ಪದ ಕಲ್ಲಿನ ಹೊರಗೋಡೆ ಯನ್ನು ಕಟ್ಟಬೇಕು. ಬೇಸ್‌ಮೆಂಟ್ ಹಂತದಲ್ಲಿ ವಿಭಾಗಕ್ಕೆ ಒಂದರಂತೆ 4 ಇಂಚು ವ್ಯಾಸದ ಕಬ್ಬಿಣ ಪೈಪುಗಳನ್ನು ಕಟ್ಟಡದಿಂದ 6 ಇಂಚು ಹೊರ ಚಾಚುವಂತೆ ಇಟ್ಟುಕೊಳ್ಳಬೇಕು. ಇದರ ಬಾಯಿ ಯನ್ನು ಮುಚ್ಚಿ ಕೀಲಿ ಹಾಕುವ ವ್ಯವಸ್ಥೆ ಮಾಡಿಕೊಳ್ಳಬೇಕು. ವಿಭಾಗ ಗೋಡೆಗಳನ್ನು ಸುಟ್ಟ ಇಟ್ಟಿಗೆಗಳಿಂದ ಕಟ್ಟಿ ಒಳಗೆ ಹೊರಗೆ ಸಿಮೆಂಟ್ ಪ್ಲಾಸ್ಟರ್ ಮಾಡಿ ನಂತರ ಎರಡೂ ಕಡೆ ಈಗಿನ ಹೊರಗೋಡೆಗೆ ಬಳಸುವ ತೇವಾಂಶ ಹಿಡಿದುಕೊಳ್ಳದ ಬಿಳಿ ಬಣ್ಣ ಬಳಿಯುವುದು ಸೂಕ್ತ. ನಂತರ ಹಳೇ ಕಾಲದ ಹಗೇವುಗಳಿಗೆ ಬಳಸುವಂತೆ ವಿಭಾಗ ಗೋಡೆಗಳ ಸುತ್ತ ಒಣಗಿದ ಜೋಳದ ದಂಟನ್ನು ಪೇರಿಸಬೇಕು. ಗೋಡೆಗಳಿಗೆ ಯಾವುದೇ ತರಹದ ಕಿಂಡಿ ಬಿಡುವಂತಿಲ್ಲ.
ಮೇಲೆ ಆರ್.ಸಿ.ಸಿ. ಛತ್ತು ಹಾಕಿ, ವಿಭಾಗ ಗೋಡೆಗಳಿಗೊಂದರಂತೆ ಬೀಡು ಕಬ್ಬಿಣದ 2 ಅಡಿ ಉದ್ದಗಲದ ಮುಚ್ಚಳ ಹಾಕಬೇಕು. ಒಟ್ಟಿನ ಮೇಲೆ ಕೋಣೆಗಳು ಸಂಪೂರ್ಣ ನಿರ್ವಾತವಾಗಿರಬೇಕು. ಮೇಲೆ ಹತ್ತಲು ಒಂದು ಕಡೆ ಪಾವಟಿಗೆಗಳನ್ನು ನಿರ್ಮಿಸಿ ಇದರ ಮೇಲುಗಡೆ ಕೋಣೆಯೊಂದನ್ನು ಕಟ್ಟಿ ವಿಶ್ರಾಂತಿ ಕೋಣೆಯಾಗಿ ಬಳಸಬಹುದು. ಛತ್ತಿನ ಅನುಕೂಲಕ್ಕೆ ತಕ್ಕಂತೆ ಆರ್.ಸಿ.ಸಿ. ಅಥವಾ ತಗಡುಗಳನ್ನು ಹಾಕಿಕೊಳ್ಳಬಹುದು.
ಹೀಗೆ ಮಾಡಿದರೆ 6 ಅಡಿ ಉದ್ದಗಲದ, ಹತ್ತು ಅಡಿ ಎತ್ತರದ ನಾಲ್ಕು ವಿಭಾಗ ಕೋಣೆಗಳು ಸಿದ್ಧವಾಗುತ್ತವೆ. ಒಟ್ಟು 360.00 ಘನ ಅಡಿಯ ಒಂದು ಕೋಣೆಯಲ್ಲಿ ಸುಮಾರು ಅರವತ್ತು ಚೀಲ ಕಾಳುಗಳ ಸಂಗ್ರಹ ಸಾಧ್ಯವಾಗುತ್ತದೆ.
ಮೇಲಿನ ಮುಚ್ಚಳ ತೆಗೆದು ಅದರಿಂದ ಧಾನ್ಯ ಗಳನ್ನು ಸುರುವಿ ಒಂದೊಂದರಲ್ಲಿ ಒಂದೊಂದು ತರಹದ ಧಾನ್ಯ ಸಂಗ್ರಹಿಸಿಟ್ಟುಕೊಳ್ಳಬಹುದು. ಇದು ಒಂದು ಮಾದರಿ ಅಳತೆ. ನಮಗೆ ಬೇಕಾದ ಸಂಗ್ರಹ ಸಾಮರ್ಥ್ಯವನ್ನು ಗಮನಿಸಿ ಅನುಕೂಲಕ್ಕೆ ತಕ್ಕಂತೆ ದೊಡ್ಡ ಸಂಗ್ರಹ ಕೋಣೆಗಳನ್ನು ನಿರ್ಮಿಸಿಕೊಳ್ಳಬಹುದು.
ಇದರ ಇನ್ನೊಂದು ಪ್ರಯೋಜನ ಎಂದರೆ ಧಾನ್ಯಗಳನ್ನು ನುಸಿ, ಹುಳುಗಳಿಂದ ಇದು ರಕ್ಷಿಸುತ್ತದೆ. ಅಷ್ಟೇ ಅಲ್ಲದೇ, ತೇವಾಂಶರಹಿತವಾಗಿ ಧಾನ್ಯಗಳನ್ನು ದೀರ್ಘ ಅವಧಿಗೆ ರಕ್ಷಿಸಿ ಇಡುತ್ತದೆ. ಹೆಚ್ಚಿನ ಮಾಹಿತಿಗೆ 9972593893.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.