ADVERTISEMENT

ಹುಲ್ಲು ಹಾಸಿನ ನಡುವೆ ಚಾಲುಕ್ಯ ವೈಭವ

ಪ್ರಜಾವಾಣಿ ವಿಶೇಷ
Published 15 ಸೆಪ್ಟೆಂಬರ್ 2014, 19:30 IST
Last Updated 15 ಸೆಪ್ಟೆಂಬರ್ 2014, 19:30 IST
ಹಾವೇರಿಯ ಸಿದ್ಧೇಶ್ವರ ದೇವಾಲಯ
ಹಾವೇರಿಯ ಸಿದ್ಧೇಶ್ವರ ದೇವಾಲಯ   

ಚಾಲುಕ್ಯರ ಕಾಲದ ವಾಸ್ತು ಶಿಲ್ಪದ ಸೌಂದರ್ಯದ ಗಣಿಯನ್ನೇ ಹೊದ್ದು ನಿಂತಿದೆ ಹಾವೇರಿಯ ಸಿದ್ಧೇಶ್ವರ ದೇವಾಲಯ. 11ನೇ ಶತಮಾನದಲ್ಲಿ ನಿರ್ಮಿತಗೊಂಡಿರುವ ಈ ದೇಗುಲದ ಪ್ರತಿಯೊಂದು ಕಲಾಕೃತಿ, ಚಾಲುಕ್ಯ ಶಿಲ್ಪಿಗಳ ಕೈಚಳಕ ತೋರಿಸುವಂತಿದೆ.
ಈ ದೇವಸ್ಥಾನವನ್ನು ಪುರ ಸಿದ್ಧೇಶ್ವರ ದೇವಸ್ಥಾನ ಎಂತಲೂ ಕರೆಯಲಾಗುತ್ತದೆ.

ಸಾಮಾನ್ಯವಾಗಿ ಚಾಲುಕ್ಯ ವಾಸ್ತುಶಿಲ್ಪದಲ್ಲಿ ನಿರ್ಮಿಸಿದ ದೇವಸ್ಥಾನಗಳು ಪೂರ್ವಕ್ಕೆ ಮುಖ ಮಾಡಿರುತ್ತವೆ, ಆದರೆ ಈ ಸಿದ್ಧೇಶ್ವರ ದೇವಸ್ಥಾನ ಮಾತ್ರ ಪಶ್ಚಿಮಕ್ಕೆ ಮುಖ ಮಾಡಿದೆ. ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣವಾದ ಈ ದೇವಾಲಯ ಎಂಥಾ ಬೇಸಿಗೆಯಲ್ಲೂ ಪ್ರವಾಸಿಗರಿಗೆ ತಂಪನ್ನು ನೀಡುತ್ತದೆ. ಸಾಕಷ್ಟು ಜನ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಈ ದೇವಸ್ಥಾನದ ಆಶ್ರಯ ಪಡೆಯುತ್ತಿದ್ದಾರೆ.

ಅತ್ಯಂತ ವಿಶಿಷ್ಟ ಶೈಲಿಯ ಗೋಪುರ ಹೊಂದಿದ ಈ ದೇವಾಲಯಕ್ಕೆ ಸುತ್ತಲೂ ಹಸಿರು ಹುಲ್ಲಿನ ರಕ್ಷಣೆ. ಕಣ್ಮನ ಸೆಳೆಯುವ ಈ ದೇಗುಲಕ್ಕೆ ಮೂರು ಪ್ರವೇಶ ದ್ವಾರಗಳು. ಎಲ್ಲೆಡೆಯಿಂದಲೂ ಭವ್ಯ ಸ್ವಾಗತ. ಆರಂಭದಲ್ಲಿ ಈ ದೇವಾಲಯ ವಿಷ್ಣುವಿಗೆ ಸಮರ್ಪಿತವಾಗಿತ್ತು. ಇದೇ ಕಾರಣದಿಂದ ಇಲ್ಲಿ ಹಲವೆಡೆ ವಿಷ್ಣುವಿನ ವಿಗ್ರಹ ಕಾಣಬಹುದು. 13 ನೇ ಶತಮಾನದಲ್ಲಿ ಜೈನ ಪಂಥದವರ ಆಳ್ವಿಕೆಯಲ್ಲಿ ಬಂದ ನಂತರ ಸ್ವಲ್ಪ ಬದಲಾವಣೆ ಕಂಡಿತು.

ಚಾಲುಕ್ಯರ ಶೈಲಿಯ ಜೊತೆಗೆ ದ್ರಾವಿಡರ ವಾಸ್ತುಶಿಲ್ಪವನ್ನೂ  ಜೋಡಣೆ ಮಾಡಿ ಕಂಬಗಳ ಮೇಲೆ ಆಲಂಕಾರಿಕ ಗೋಪುರ ನಿರ್ಮಿಸಲಾಯಿತು. ನಂತರ, ಶಿವನ ಆರಾಧಕರು ಇಲ್ಲಿಯ ಕೆಲವು ವಿಗ್ರಹಗಳನ್ನು ತೆಗೆದು ಶಿವ ಲಿಂಗವನ್ನು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ದೇವಸ್ಥಾನದ ಪ್ರಾಂಗಣ ದೊಡ್ಡದಾಗಿದ್ದು, ಒಳಗಡೆ ಉಮಾ ಮಹೇಶ್ವರನ ಸುಂದರವಾದ ನಾಲ್ಕು ಕೈಗಳಿರುವ ವಿಗ್ರಹವನ್ನು ಕೆತ್ತನೆ ಮಾಡಲಾಗಿದೆ.

ಮಹೇಶ್ವರನ ಒಂದು ಕೈಯಲ್ಲಿ ಡಮರುಗ,  ಇನ್ನೊಂದರಲ್ಲಿ ತ್ರಿಶೂಲ, ಮತ್ತೊಂದರಲ್ಲಿ ಮುತ್ತಿನಮಾಲೆ ಹಾಗೂ ನಾಲ್ಕನೇ ಕೈಯನ್ನು ತೊಡೆಯ ಮೇಲೆ ಕುಳಿತಿರುವ ಉಮಾದೇವಿಯ  ಹೆಗಲ ಮೇಲಿದೆ. ಉಮಾ ದೇವಿಯ ವಿಗ್ರಹದ ಕಿವಿಯಲ್ಲಿ ದೊಡ್ಡದಾದ ಕಿವಿಯೋಲೆ, ಕತ್ತಿನಲ್ಲಿ ವಿವಿಧ ಬಗೆಯ ಸರಗಳು ಹಾಗೂ ಗುಂಗುರು ಕೂದಲು ಹೀಗೆ ಸಾಕಷ್ಟು ಅಲಂಕಾರಗಳನ್ನೂ ಮಾಡಲಾಗಿದೆ. ಅದರ ಪಕ್ಕದಲ್ಲಿ ವಿಷ್ಣು ಮತ್ತು ಲಕ್ಷ್ಮಿ ವಿಗ್ರಹಗಳು, ಶಿವ ಪಾರ್ವತಿ ಜೊತೆಗೆ ಗಣೇಶ ಮತ್ತು ಕಾರ್ತಿಕೇಯನ ವಿಗ್ರಹಗಳು ಹಾಗೂ ನಾಗ, ನಾಗಿಣಿಯ ಶಿಲ್ಪಗಳೂ ಇವೆ. 

ಕಲ್ಲಿನಿಂದಲೇ ನಿರ್ಮಾಣವಾದ ಈ ದೇವಾಲಯದ ಒಂದೊಂದು ಕಂಬಗಳ ಮೇಲೂ ವಿಭಿನ್ನ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ. ಗರ್ಭಗೃಹದ ಮೇಲ್ಭಾಗದಲ್ಲಿ ಅತ್ಯಂತ ದೊಡ್ಡದಾದ ಕಮಲದ ಹೂವನ್ನು  ಮತ್ತು ಶಿವನ ಸುಂದರವಾದ ಲಿಂಗವನ್ನೂ ನಿರ್ಮಿಸಲಾಗಿದೆ. ಪಕ್ಕದ ಗೋಡೆಗಳ ಮೇಲೆ ಶಿವನ ವಾಹನ ನಂದಿ, ಗಣೇಶನ ವಾಹನ ಇಲಿ,  ಕಾರ್ತಿಕೇಯನ ವಾಹನ ನವಿಲು ಮತ್ತು ಇನ್ನೂ ಅನೇಕ ನಾಗ ನಾಗಿಣಿಯರ ವಿಗ್ರಹಗಳನ್ನು  ನಿರ್ಮಿಸಲಾಗಿದೆ.  ದೇವಸ್ಥಾನದ ಇನ್ನೊಂದು ಭಾಗದಲ್ಲಿ ಉಗ್ರ ನರಸಿಂಹನ ಸುಂದರವಾದ ವಿಗ್ರಹವಿದೆ. ಈ ದೇವಸ್ಥಾನದ ಒಂದು ಭಾಗದಲ್ಲಿ ದೇವಸ್ಥಾನದ ಬಗ್ಗೆ ಮಾಹಿತಿ ಒದಗಿಸುವ ಶಿಲಾಶಾಸನಗಳನ್ನು  ಕೆತ್ತನೆ ಮಾಡಲಾಗಿದೆ.

ಹನುಮಪ್ಪ ದೇಗುಲದ ಮೊರೆ
ಪ್ರಾಚೀನ ಕರ್ನಾಟಕದ ಇತಿಹಾಸದಲ್ಲಿ ಕೊಪ್ಪಳ ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ.  ಕನ್ನಡನಾಡಿನ ಪ್ರವಾಸಿ ಜಿಲ್ಲೆಗಳಲ್ಲಿ ಒಂದಾಗಿದ್ದು, ಪ್ರಕೃತಿದತ್ತ ಸೊಬಗಿನ ಹತ್ತು ಹಲವು ತಾಣಗಳು ಜಿಲ್ಲಾದ್ಯಂತ ಇಂದಿಗೂ ಕಂಡು ಬರುತ್ತಿದೆ. ಅವುಗಳಲ್ಲಿ ಜಿಲ್ಲೆಯ ಯಲಬುರ್ಗಾ ತಾಲ್ಲೂಕು ಒಂದು. ಇಲ್ಲಿರುವ ತೊಪ್ಪಿನ ಹನುಮಪ್ಪನ ದೇಗುಲ ಅಪರೂಪದ ಕೆತ್ತನೆಗಳಿಂದ ಮನಸೂರೆಗೊಳ್ಳುತ್ತದೆ. ಎರಡೂವರೆ ಶತಮಾನ ಕಂಡಿರುವ ಈ ದೇಗುಲದ ವಿಶೇಷತೆ ಎಂದರೆ ಇದು ನೆಲ ಅಂತಸ್ತಿನಲ್ಲಿ ನಿರ್ಮಾಣಗೊಂಡಿರುವುದು. ಶಿಲ್ಪಕಲೆಯ ಸವಿಯನ್ನು ಸವಿಯಬೇಕೆಂದರೆ ದೇವಾಲಯದಲ್ಲಿ ಇರುವ ಮೆಟ್ಟಿಲುಗಳನ್ನು ಇಳಿಯಲೇಬೇಕು.

ಇಲ್ಲೊಂದು ಗಮನಸೆಳೆಯುವ ತಿಮ್ಮಪ್ಪನ ತೋಪಿದೆ. ಈ ದೇವಸ್ಥಾನಕ್ಕೂ, ತೋಟಕ್ಕೂ ಇರುವ ಸಂಬಂಧದ ಬಗ್ಗೆ ಕಥೆಯೂ ಹುಟ್ಟಿಕೊಂಡಿದೆ. ಅದೇನೆಂದರೆ ಯಲಬುರ್ಗಿಯ ಕುಲಕರ್ಣಿ ವಂಶದ ಮೂಲ ಪುರುಷ ರಾಯಪ್ಪನ ಮಗ ತಿಮ್ಮಪ್ಪ ಹೊಲದಲ್ಲಿ ಕೆಲಸ ಮಾಡಿ ಆಯಾಸಗೊಂಡು ಆಲದ ಗಿಡದ ಕೆಳಗೆ ಮಲಗಿದ್ದ. ಆತನ ಕನಸಿನಲ್ಲಿ ಸರ್ಪ ಬಂದು ದೇಗುಲ ನಿರ್ಮಿಸಲು ಹೇಳಿತು. ಅದರಂತೆ ಆತ 1662ನೇ ಉದ್ರಿನಾಮ ಸಂವತ್ಸರ ದಂದು ಈ ದೇಗುಲ ನಿರ್ಮಿಸಿ ಮುಖ್ಯ ಪ್ರಾಣ ದೇವರ ಮೂರ್ತಿ  ಪ್ರತಿಷ್ಠಾಪಿ ಸಿದ.

ಇಲ್ಲಿ ಮಾವು, ಹುಣಸೆ ಮತ್ತು ಆಲದ ಮರಗಳು ಹೆಚ್ಚಾಗಿ ಬೆಳೆದ ಪರಿಣಾಮ ಇದು ತಿಮ್ಮಪ್ಪನ ತೋಪಾಗಿತು. ಇಂಥ ಸುಂದರ ದೇಗುಲ ಕಿಡಿಗೇಡಿಗಳಿಂದ ಈಗ ವಿನಾಶಕ್ಕೆ ಸರಿಯುತ್ತಿದೆ. ಇದು ಅನೈತಿಕ ಚಟುವಟಿಕೆ ತಾಣವಾಗಿದೆ. ಅಲ್ಲದೇ ದೇವಸ್ಥಾನಕ್ಕೆ ಬರುವವರು ಅಂದವಾಗಿ ಕೆತ್ತಿರುವ ಕಲೆಯಲ್ಲಿ ತಮ್ಮ ‘ಕಲೆ’ಯನ್ನೂ ಸೇರಿಸಿ ಅದನ್ನು ಹಾಳು ಮಾಡುತ್ತಿದ್ದಾರೆ. 

ಇಲ್ಲೊಂದು ವಿಶಾಲವಾದ ಬಾವಿ ಇದೆ. ಆದರೆ ಅದು ಸಂಪೂರ್ಣವಾಗಿ ಹೂಳು ತುಂಬಿ ಮುಚ್ಚಿ ಹೋಗಿದೆ. ಹೂಳು ತೆಗೆಸಲು ಸರ್ಕಾರ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ. ಇದರ ಹೊರತಾಗಿಯೂ ಇಲ್ಲಿ ಪ್ರತಿ ವರ್ಷ ಹನುಮಪ್ಪ ದೇಗುಲದ ಜಾತ್ರೆ ಚಂದ್ರಮಾನ ಯುಗಾದಿಯಂದು ನಡೆಯುತ್ತದೆ. ಒಂದೇ ದಿನದ ಈ ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರಗುತ್ತದೆ. ಇತ್ತ ಸಂಬಂಧಪಟ್ಟವರು ಇನ್ನೊಂದಿಷ್ಟು ಗಮನ ಹರಿಸಿದರೆ ಐತಿಹಾಸಿಕ ಮಹತ್ವವುಳ್ಳ ದೇಗುಲದ ರಕ್ಷಣೆಯಾದಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT