ಬಟ್ಟೆ ಹೊಲಿಯುವುದನ್ನು ಕಲಿಯಲು ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯ ನೆಟ್ಟಗಾರ ಬಿಟ್ಟು ಉರಿಬಿಸಿಲಿನ ಗದಗ ಸೇರಿದವರು ಮಂಜುನಾಥ ವೆಂಕಟರಮಣ ಹೆಗಡೆ. ನಿಜಕ್ಕೂ ಮನಸ್ಸಿನಲ್ಲಿ ಇದ್ದುದು ಸಂಗೀತ ಕಲಿಯಬೇಕು ಎನ್ನುವ ಆಸೆ. ಗದಗದಲ್ಲಿ ಸಂಗೀತ ಒಲಿಯದಿದ್ದರೂ ಕೊಳಲು ತಯಾರಿಸುವ ಕೌಶಲ ಒಲಿಯಿತು.
ಆಗಿನ್ನೂ 26ರ ಹರೆಯದ ಹೆಗಡೆ ಅವರಿಗೆ ಚಂದದ ಕೊಳಲು ಸಿದ್ಧಪಡಿಸುವ ಹಂಬಲ ಮೂಡಿದ್ದೇ ತಡ ಕಾರ್ಯ ಆರಂಭಿಸಿಯೇಬಿಟ್ಟರು. ಸ್ವರ, ರಾಗ, ತಾಳಗಳ ಅರಿವಿದ್ದ ಇವರಿಗೆ ಬಿದಿರನ್ನು ಕೊಳಲಾಗಿಸುವ ಪ್ರಕ್ರಿಯೆ ಸುಲಭವಾಯಿತು. ಎರಡೇ ದಿನಗಳಲ್ಲಿ ಒಂದು ಅಂದವಾದ ಕೊಳಲನ್ನು ನಿರ್ಮಿಸಿ ಪಂಡಿತ್ ವೆಂಕಟೇಶ ಗೋಡ್ಖಿಂಡಿಯವರ ಕೈಗಿತ್ತರು. ಅದನ್ನು ನುಡಿಸುತ್ತಿದ್ದಂತೆಯೇ ಗೋಡ್ಖಿಂಡಿಯವರಿಗೆ ಆನಂದವಾಯಿತು. ‘ನೀನು ಮಾಡಿದ ಕೊಳಲು ನುಡಿಸುವುದಕ್ಕೆ ಲಾಯಕ್ಕಾಗಿದೆ ಹೆಗಡೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೊಂದಷ್ಟು ಕೊಳಲುಗಳನ್ನು ಮಾಡಲು ಹೇಳಿದರು. ಹೆಗಡೆಯವರು ತಯಾರಿಸಿದ ಕೊಳಲು ಹೈದರಾಬಾದಿನ ಆಕಾಶವಾಣಿ ಕೇಂದ್ರ ತಲುಪಿತು. ಅಲ್ಲಿನ ಕಲಾವಿದರೂ ‘ಏನ್ ಚಂದ ಐತಿ ಕೊಳಲು’ ಎಂದರು. ನಂತರ ಸಾಲು ಸಾಲು ಬೇಡಿಕೆಗಳು ಬಂದವು.
ಮುಂಬೈ ಮತ್ತಿತರ ಊರುಗಳಿಂದ ತಂದ ಕೊಳಲು ಸರಿಹೊಂದದ ಕಾರಣ ಹೆಗಡೆ ತಾವೇ ಕೊಳಲು ತಯಾರಿಸಲು ಮುಂದಾದದ್ದು. ಗೋಡ್ಖಿಂಡಿ ಅವರು ಸಹ ‘ಹೆಗಡೆ ನಿನ್ನಿಂದ ಆಗ್ತದೆ, ನೀನೇ ಕೊಳಲು ಮಾಡೋ’ ಎಂದು ಆರಂಭದಲ್ಲಿ ಹುರಿದುಂಬಿಸಿದರು.
ಗೋಡ್ಖಿಂಡಿಯವರ ಮಗ ಪ್ರವೀಣ್ ಸಹ ಚಿಕ್ಕಂದಿನಿಂದ ಹೆಗಡೆ ಅವರ ಕೈಚಳಕದಲ್ಲಿ ತಯಾರಾಗುವ ಕೊಳಲನ್ನೇ ಬಳಸುತ್ತಿದ್ದಾರೆ. ‘ನನ್ನ ಬಳಿ ಇರುವ ಬಹುತೇಕ ಕೊಳಲುಗಳನ್ನು ಹೆಗಡೆ ಅವರು ತಯಾರಿಸಿದ್ದಾರೆ. ಅವರು ವಿಶಿಷ್ಟ ಬಗೆಯ ಬಿದಿರನ್ನು ಬಳಸುತ್ತಾರೆ. ಅಸ್ಸಾಂ ಭಾಗದ ಬಿದಿರಿನಿಂದ ತಯಾರಿಸಿದ ಕೊಳಲಿಗೆ ಹೋಲಿಸಿದರೆ, ಇವರು ತಯಾರಿಸಿದ ಕೊಳಲಿನಲ್ಲಿ ಸ್ವರಗಳು ಸರಾಗವಾಗಿ ಹೊಮ್ಮುತ್ತವೆ. ಬೇಗ ಆಯಾಸ ಆಗುವುದಿಲ್ಲ. ಇವರು ಮಾಡುವ ಕೊಳಲು ಗುಣಮಟ್ಟದಿಂದ ಕೂಡಿರುತ್ತದೆ. ಈ ಬಗೆಯ ಕೊಳಲು ನನಗೆ ಬೇರೆಲ್ಲೂ ಸಿಕ್ಕಿಲ್ಲ’ ಎನ್ನುತ್ತಾರೆ ಪ್ರವೀಣ್ ಗೋಡ್ಖಿಂಡಿ.
ರಾಗ ರಂಗ್ ರೆಕಾರ್ಡಿಂಗ್: ‘ರಾಗ ರಂಗ್’ ಇದು ವಿದ್ವಾನ್ ಕದ್ರಿ ಗೋಪಾಲನಾಥ್ ಹಾಗೂ ಪ್ರವೀಣ್ ಗೋಡ್ಖಿಂಡಿ ಅವರಿಬ್ಬರೂ ಸೇರಿ ಮಾಡಿದ ಆಲ್ಬಂ ಧ್ವನಿ ಸುರುಳಿ. ಇದರ ಧ್ವನಿ ಸುರುಳಿ ರೆಕಾರ್ಡ್ ಆಗುತ್ತಿರುವಾಗ, ಇದ್ದಕ್ಕಿದ್ದಂತೆ ಸ್ವರ ತಪ್ಪಿತು. ಕೊಳಲಿನ ಸ್ವರ ಪರೀಕ್ಷಿಸುವಂತೆ ಪ್ರವೀಣ್ ಅವರಿಗೆ ಕದ್ರಿ ಅವರು ಹೇಳಿದರು. ಪರೀಕ್ಷಿಸಿ ನೋಡಿದಾಗ ಪ್ರವೀಣ್ ಅವರ ಕೊಳಲಿನಲ್ಲಿ ಯಾವುದೇ ತೊಂದರೆ ಇರಲಿಲ್ಲ. ಕೊನೆಗೆ, ಉಳಿದರ್ಧ ಆಲ್ಬಂ ಅನ್ನು ಪ್ರವೀಣ್ ಅವರೇ ಪೂರ್ಣಗೊಳಿಸಿದರು. ಆಗ ಅವರು ನುಡಿಸುತ್ತಿದ್ದುದು ಹೆಗಡೆ ಅವರು ತಯಾರಿಸಿದ ಕೊಳಲನ್ನೇ.
ಕೊಳಲು ತಯಾರಿ ನಿರತ ಮಂಜುರ್ಥ ವಂಕಟರಮಣ ಹೆಗಡೆ
ಕರ್ನಾಟಕದ ಕಲಾವಿದರು ಮಾತ್ರವಲ್ಲದೆ, ದಕ್ಷಿಣದ ಇತರ ರಾಜ್ಯಗಳ ಮತ್ತು ಉತ್ತರ ಭಾರತದ ಕಲಾವಿದರು ಸಹ ಇವರು ಮಾಡಿದ ಕೊಳಲೇ ಸೈ ಎನ್ನುತ್ತಾರೆ. ಸತತ 45 ವರ್ಷಗಳಿಂದ ಹೆಗಡೆ ಅವರು ಕೊಳಲು ತಯಾರಿಸುತ್ತಿದ್ದಾರೆ. ಇಂದಿಗೂ ಇವರ ತಯಾರಿಸುವ ಕೊಳಲಿಗೆ ತೀರದ ಬೇಡಿಕೆ. 68 ವರ್ಷ ವಯಸ್ಸಿನ ಹೆಗಡೆ ಅವರು ಮಾಗಿದಷ್ಟೂ ಕೊಳಲು ಹದವಾಗುತ್ತಿದೆ.
ಊರಿನ ಪಕ್ಕದಲ್ಲೇ ಇರುವ ಉಂಚಳ್ಳಿ ಜಲಪಾತದ ಪರಿಸರದಿಂದ ಸೂಕ್ತ ಬಿದಿರನ್ನು ಹೆಕ್ಕಿ ತರುತ್ತಾರೆ. ಕುಟ್ಟೆ ಹುಳು ಹಿಡಿಯದಂತೆ ದೇಸಿ ಔಷಧಿಯಲ್ಲಿ ಅದ್ದಿ ಇಡುತ್ತಾರೆ. ಈ ಔಷಧಿ ಬಳಸುವುದರಿಂದ ಕೊಳಲು ನುಡಿಸುವವರಿಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ರಾಸಾಯನಿಕಗಳಿಂದ ಮುಕ್ತವಾಗಿರುವುದರಿಂದ ಯಾವುದೇ ಅಂಜಿಕೆ ಇಲ್ಲದೇ ಬಳಸಬಹುದು. ಹಾಗೆ ಕಾಡಿನಿಂದ ತಂದ ಬಿದಿರನ್ನು ಮೂರು ತಿಂಗಳು ಒಣಗಿಸಿ ಹದಗೊಳಿಸುತ್ತಾರೆ. ಕೊಳಲು ತಯಾರಿಕಾ ಕಾಯಕದಲ್ಲಿ ಮಗ ಗುರುಪ್ರಸಾದ್ ಕೈಜೋಡಿಸಿದ್ದಾರೆ.
ಕೊಳಲು ಮಾಡುವುದೆಂದರೆ, ನಾಲ್ಕಾರು ತೂತು ಕೊರೆಯುವುದಲ್ಲ ಎನ್ನುವ ಹೆಗಡೆಯವರು, ಕೊಳಲು ತಯಾರಿಕೆಗೆ ಅದರದೇ ಆದ ಲೆಕ್ಕಾಚಾರ ಇರಬೇಕು ಎನ್ನುತ್ತಾರೆ.
ಬಿದಿರಿನ ಆಯ್ಕೆ ಇಲ್ಲಿ ಬಹಳ ಮುಖ್ಯ. ‘ಮಂದ್ರ ನುಡಿಸಲು ದಪ್ಪ ಬಿದಿರು, ತಾರಕ ನುಡಿಸಲು ಸಣ್ಣ ಬಿದಿರು ಬಳಸುತ್ತೇನೆ. ಬಿದಿರುಗಳು ಸ್ವರವನ್ನು ತಮ್ಮೊಳಗೇ ಇಟ್ಟುಕೊಂಡು ಹುಟ್ಟಿರುತ್ತವೆ. ಯಾವ ಬಿದಿರಿನಿಂದ ಯಾವ ಸ್ವರ ಹೊಮ್ಮುತ್ತದೆ ಎಂಬುದನ್ನು ಗುರುತಿಸುವ ಕಲೆ ತಿಳಿದಿರಬೇಕು. ಕೊಳಲಿನಲ್ಲಿ ಕೊರೆಯುವ ಒಂದೊಂದು ರಂಧ್ರವೂ ಒಂದೊಂದು ಸ್ವರ ಹೊಮ್ಮಿಸುತ್ತದೆ. ಸ್ವರ, ರಾಗಗಳು ರಂಧ್ರದ ಗಾತ್ರವನ್ನು ಅವಲಂಬಿಸಿರುತ್ತವೆ. ಜತೆಗೆ 440 ಹರ್ಟ್ಸ್‌ಗೆ ಟ್ಯೂನ್ ಮಾಡಿರಬೇಕು. ಒಂದೇ ಕೋನದಲ್ಲಿ ಎರಡೂ ಸಪ್ತಕ ಬಾರಿಸುವಂತೆ ಇರಬೇಕು. ಜತೆಗೆ ಸರಾಗವಾಗಿ ಸ್ವರ ಹೊಮ್ಮಬೇಕು. ನುಡಿಸಲು ಕೊಳಲು ಹಿಡಿದರೆ, ಬೆರಳುಗಳಿಗೆ ನಿಲುಕುವಂತಿರಬೇಕು’ ಎಂದು ತನ್ಮಯತೆಯಿಂದ ಅವರು ವಿವರಿಸುತ್ತಾರೆ.
‘ಪ್ರತಿಯೊಂದು ವಸ್ತುವಿಗೂ ಸಹಜ ಕಂಪನ ಇರುತ್ತದೆ. ಹಾಗೆಯೇ ಕೊಳಲಿನ ಸಹಜ ಕಂಪನಕ್ಕೆ ಬಾಹ್ಯ ಒತ್ತಡ ಹಾಕಿದಾಗ, ಎರಡೂ ಹದವಾಗಿ ಬೆರೆತರೆ ಉಂಟಾಗುವುದೇ ಅನುರಣನ. ವಾತಾವರಣ ಸಹ ಕೊಳಲಿನಿಂದ ಉದಿಸುವ ಸ್ವರ-ರಾಗಗಳ ಮೇಲೆ ಪ್ರಭಾವ ಬೀರುತ್ತದೆ ನೋಡಿ. ನಮ್ಮ ಹಾಗೇ ಅದೂ ಚಳಿಗೆ ಕುಗ್ಗುತ್ತದೆ. ಬಿಸಿಲು ಇದ್ದರೆ ಹಿಗ್ಗುತ್ತದೆ. ವಾತಾವರಣ ತಂಪಿದ್ದರೆ ಕಡಿಮೆ ಪಿಚ್‌ನಲ್ಲಿ ಸ್ವರ ಕೇಳಿಸುತ್ತದೆ. ಅದೇ ಉಷ್ಣಾಂಶ ಹೆಚ್ಚಿದ್ದರೆ, ಎತ್ತರದ ಪಿಚ್‌ನಲ್ಲಿ ಕೇಳುತ್ತದೆ. ಜತೆಗೆ ಕೊಳಲನ್ನು ಒಬ್ಬರಿಗಿಂತ ಮತ್ತೊಬ್ಬರು ಭಿನ್ನವಾಗಿ ನುಡಿಸುತ್ತಾರೆ. ತುಟಿಯ ಮೇಲೆ ಕೊಳಲನ್ನು ಇರಿಸುವುದು, ಊದುವುದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯೇ ಆಗಿರುತ್ತದೆ’ ಎನ್ನುತ್ತಾರೆ ಹೆಗಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.