ADVERTISEMENT

ಕರುನಾಡಿನ ಕರಕುಶಲ ಕಲೆಯ ಸಿರಿ ‘ಕಾವೇರಿ’

ಕುಶಲಕರ್ಮಿಗಳಿಗೆ ಬೆನ್ನೆಲುಬಾಗಿ ನಿಂತ ಕಾವೇರಿ ಎಂಪೋರಿಯಂ l ಸಾವಿರಾರು ಕಲಾಕೃತಿಗಳ ಮಾರಾಟ

ಮನೋಹರ್ ಎಂ.
Published 1 ಜನವರಿ 2022, 20:01 IST
Last Updated 1 ಜನವರಿ 2022, 20:01 IST
ಮಹಾತ್ಮ ಗಾಂಧಿ ರಸ್ತೆ‌ ಬಳಿಯ ಕಾವೇರಿ ಎಂಪೋರಿಯಂ (ಎಡಚಿತ್ರ) ಕಾವೇರಿ ಎಂಪೋರಿಯಂನಲ್ಲಿ ಕಲಾಕೃತಿಗಳನ್ನು ವೀಕ್ಷಿಸುತ್ತಿರುವ ಗ್ರಾಹಕರು–ಪ್ರಜಾವಾಣಿ ಚಿತ್ರಗಳು/ಪ್ರಶಾಂತ್ ಎಚ್.ಜಿ.
ಮಹಾತ್ಮ ಗಾಂಧಿ ರಸ್ತೆ‌ ಬಳಿಯ ಕಾವೇರಿ ಎಂಪೋರಿಯಂ (ಎಡಚಿತ್ರ) ಕಾವೇರಿ ಎಂಪೋರಿಯಂನಲ್ಲಿ ಕಲಾಕೃತಿಗಳನ್ನು ವೀಕ್ಷಿಸುತ್ತಿರುವ ಗ್ರಾಹಕರು–ಪ್ರಜಾವಾಣಿ ಚಿತ್ರಗಳು/ಪ್ರಶಾಂತ್ ಎಚ್.ಜಿ.   

ಬೆಂಗಳೂರು:ಕರ್ನಾಟಕದ ಶ್ರೀಗಂಧದ ಕಲಾಕೃತಿಗಳ ಕಂಪನ್ನು ‘ಕಾವೇರಿ ಎಂಪೋರಿಯಂ’ ಜಗತ್ತಿನಾದ್ಯಂತ ಪಸರಿಸುತ್ತಿದೆ. ಕರುನಾಡಿನ ಕರ ಕುಶಲ ಕಲೆಯನ್ನು ಕಲಾಪ್ರೇಮಿಗಳ ಮಡಿಲಿಗೆ ತಲುಪಿಸುವ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದೆ ನಗರದ ಮಹಾತ್ಮ ಗಾಂಧಿ ರಸ್ತೆಯಂಚಿನಲ್ಲಿರುವ ಈ ಮಳಿಗೆ. 58 ವರ್ಷಗಳ ಇತಿಹಾಸ ಈ ಮಳಿಗೆಗೆ ಇದೆ.

1964ರಲ್ಲಿ ಜನ್ಮತಾಳಿದ ಕಾವೇರಿ ಎಂಪೋರಿಯಂನಲ್ಲಿ ‘ಕಾವೇರಿ’ ಬ್ರ್ಯಾಂಡ್‌ನಡಿ ನಿತ್ಯವೂ ಸಾವಿರಾರು ಕರಕುಶಲ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ (ಕೆಎಸ್‌ಎಚ್‌ಡಿಸಿಎಲ್‌) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಕಾವೇರಿ ಎಂಪೋರಿಯಂ’ ಶ್ರೀಗಂಧದ ಕಲಾಕೃತಿಗಳ ಮಾರಾಟಕ್ಕೆ ಅದ್ವಿತೀಯ ತಾಣ.

ಕರುನಾಡಿನ ಕುಶಲಕರ್ಮಿಗಳು ತಯಾರಿಸುವ ಶ್ರೀಗಂಧದ ವಿಗ್ರಹಗಳು, ಪೀಠೋಪಕರಣಗಳು, ಮಂಟಪಗಳು, ಚನ್ನಪಟ್ಟಣದ ಗೊಂಬೆಗಳು, ಶಿವಾನಿ ಮರದಿಂದ ತಯಾರಿಸುವ ಕಲಾಕೃತಿಗಳು, ಮರದ ಉಯ್ಯಾಲೆಗಳು, ಮನೆ ಬಳಕೆ ವಸ್ತುಗಳು, ಅಗರಬತ್ತಿ, ಮಣಿ ಪುಷ್ಪಹಾರ, ಕಂಚಿನ ಮತ್ತು ಲೋಹದ ಕಲಾಕೃತಿಗಳು, ಸುಗಂಧ ದ್ರವ್ಯ, ಸಾಬೂನು,ಗಂಧದ ಮತ್ತು ಬೀಟೆ ಮರದ (ರೋಸ್‌ ವುಡ್) ಕೆತ್ತನೆಗಳು, ಚನ್ನಪಟ್ಟಣದ ಆಟಿಕೆಗಳು, ಮೈಸೂರು ಸಾಂಪ್ರದಾಯಿಕ ಚಿತ್ರಕಲೆಗಳು, ಬಿದರಿ ಕಲ್ಲಿನ ಕೆತ್ತನೆಗಳು, ಮರದ ಕೆತ್ತನೆಗಳು, ಸಾಂಪ್ರದಾಯಿಕ ಆಭರಣಗಳು, ಕನ್ನಡಿ ಮತ್ತು ಕಸೂತಿ,ಕಿನ್ನಾಳ ಆಟಿಕೆಗಳು, ಕದಂಬ ಮರದಿಂದ ತಯಾರಿಸಲಾದ ಕಲಾಕೃತಿಗಳು, ಜವಳಿ ವಸ್ತುಗಳು ಸೇರಿದಂತೆ ಸಾವಿರಾರು ಉತ್ನನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುತ್ತಿದೆ. ಕುಶಲಕರ್ಮಿಗಳ ಪರಿಶ್ರಮಕ್ಕೆ ಪ್ರತಿಫಲ ಒದಗಿಸುವ ಮೂಲಕ ಅವರ ಬೆನ್ನೆಲುಬಾಗಿಯೂ ನಿಂತಿದೆ.

ADVERTISEMENT

ಬೆಂಗಳೂರಿಗೆ ಬರುವ ವಿದೇಶಿ ಪ್ರವಾಸಿಗರು, ಹೊರರಾಜ್ಯಗಳ ಪ್ರವಾಸಿಗರು ತಪ್ಪದೇ ಈ ಮಳಿಗೆಗೆ ಭೇಟಿ ನೀಡುತ್ತಾರೆ. ಇಲ್ಲಿನ ಉತ್ಪನ್ನಗಳ ಕಲಾವಂತಿಕೆಗೆ ಮಾರು ಹೋಗಿ, ಪ್ರವಾಸದ ನೆನಪಿನಾರ್ಥ ಅವುಗಳನ್ನು ಖರೀದಿಸುವುದು ವಾಡಿಕೆಯಾಗಿದೆ. ಅಷ್ಟರಮಟ್ಟಿಗೆ ಈ ಮಳಿಗೆ ಬೆಂಗಳೂರು, ಕರ್ನಾಟಕ ಹಾಗೂ ಇಲ್ಲಿನ ಕಲೆಯ ಪ್ರತೀಕವಾಗಿ ವಿದೇಶಗಳಲ್ಲೂ ಜನಮನ್ನಣೆ ಗಳಿಸಿದೆ.

‘ರಾಜ್ಯದ ಕುಶಲಕರ್ಮಿಗಳು ಉತ್ಪನ್ನಗಳಿಗೆ ನೀಡುವ ಅಂತಿಮ ಸ್ಪರ್ಶ‌ ಹಾಗೂ ವಿನ್ಯಾಸ ಬೇರೆ ಕಡೆ ನೋಡಲು ಸಾಧ್ಯವಿಲ್ಲ. ಅಷ್ಟು ಅಚ್ಚುಕಟ್ಟಾಗಿ ವಿಗ್ರಹಗಳು ಹಾಗೂ ಕಲಾಕೃತಿಗಳಿಗೆ ನೈಜ ರೂಪ ನೀಡುತ್ತಾರೆ. ಈ ಕಾರಣದಿಂದಲೇ ಉತ್ಪನ್ನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ’ ಎಂದು
ಕೆಎಸ್‌ಎಚ್‌ಡಿಸಿಎಲ್ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಸಮಯದಲ್ಲಿ ವಿದೇಶಿಗರು ಹೆಚ್ಚಾಗಿ ಎಂ.ಜಿ.ರಸ್ತೆಯ ಕಾವೇರಿ ಮಳಿಗೆಗೆ ಭೇಟಿ ನೀಡುತ್ತಾರೆ. ಈ ಎರಡೂ ತಿಂಗಳಲ್ಲಿ ಹೆಚ್ಚು ವಹಿವಾಟು ನಡೆಯುತ್ತದೆ. ಮಳಿಗೆಯು ಪ್ರತಿದಿನವೂ ಗ್ರಾಹಕರಿಂದ ತುಂಬಿರುತ್ತದೆ. ಕಾರ್ಯಕ್ರಮದ ಆಯೋಜಕ ಸಂಸ್ಥೆಗಳು ಉತ್ಪನ್ನಗಳನ್ನು ನಮ್ಮಿಂದಲೇ ಖರೀದಿಸುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಾಜಕೀಯ ಗಣ್ಯರಿಗೆ ನೀಡುವ ಬಹುತೇಕ ಉಡುಗೊರೆಗಳು, ಸರ್ಕಾರಿ ಕಾರ್ಯಕ್ರಮಗಳಲ್ಲಿ ನೀಡುವ ಬಹುತೇಕ ಉಡುಗೊರೆಗಳು ಇಲ್ಲಿಂದಲೇ ಪೂರೈಕೆಯಾಗುತ್ತವೆ’ ಎಂದು ವಿವರಿಸಿದರು.

‘ಕಾವೇರಿ’ ಬ್ರ್ಯಾಂಡ್‌ನ ಹೆಸರಿನಲ್ಲೇ ವಾಹನದ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವ ಯೋಜನೆ ರೂಪಿಸಿದ್ದೇವೆ. ಗ್ರಾಹಕರ ಸ್ಥಳಗಳಿಗೆ ಕಾವೇರಿ ಉತ್ಪನ್ನಗಳನ್ನು ತಲುಪಿಸುವುದು ಇದರ ಉದ್ದೇಶ. ಶ್ರೇಷ್ಠ ಕುಶಲಕರ್ಮಿಗಳಿಗೆ ನಿಗಮದಿಂದ ಪ್ರಶಸ್ತಿ ನೀಡುವ ಚಿಂತನೆಯೂ ಇದೆ’ ಎಂದು ಮಾಹಿತಿ ನೀಡಿದರು.

ವ್ಯಾಪಾರಶೇ 30ರಷ್ಟು ಹೆಚ್ಚಳ

‘ಕೋವಿಡ್‌ನಿಂದ ಮಳಿಗೆಯಲ್ಲಿ ವ್ಯಾಪಾರ ತುಸು ಕ್ಷೀಣಿಸಿತ್ತು. 2020ರಲ್ಲಿ ಕಾವೇರಿ ಮಳಿಗೆಯ ವಾರ್ಷಿಕ ₹7 ಕೋಟಿಯಷ್ಟು ವಹಿವಾಟು ನಡೆದಿತ್ತು. 2021ರಲ್ಲಿ ವಹಿವಾಟು ಶೇ 30ರಷ್ಟು ಹೆಚ್ಚಳ ಕಂಡಿದೆ’ ಎಂದು ಕೆಎಸ್‌ಎಚ್‌ಡಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕಿಡಿ.ರೂಪಾ (ಐಪಿಎಸ್) ಮಾಹಿತಿ ನೀಡಿದರು.

ಸ್ವಂತ ಕಟ್ಟಡಕ್ಕೆ ಶೀಘ್ರವೇ ಸ್ಥಳಾಂತರ

‘ಕಾವೇರಿ ಎಂಪೋರಿಯಂ’ ಸದ್ಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಿಗಮದ ಕೇಂದ್ರ ಕಚೇರಿಯೂ ಬಾಡಿಗೆ ಕಟ್ಟಡದಲ್ಲಿದೆ. ಈ ಎರಡೂ ಕಟ್ಟಡಗಳಿಗೆ ತಿಂಗಳಿಗೆ ಸುಮಾರು ₹30 ಲಕ್ಷ ಬಾಡಿಗೆ ಪಾವತಿಸಲಾಗುತ್ತಿದೆ. ಇದೇ ರಸ್ತೆಯಲ್ಲಿ ನಿಗಮದ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಂಡ ನಂತರ ಮಳಿಗೆಯು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ನಿಗಮದ ಕೇಂದ್ರ ಕಚೇರಿಯೂ ಅದೇ ಕಟ್ಟಡದಲ್ಲಿ ಇರಲಿದೆ. ಇದರಿಂದ ನಿಗಮಕ್ಕೆ ವರ್ಷಕ್ಕೆ ₹3.75 ಕೋಟಿ ಉಳಿತಾಯವಾಗಲಿದೆ’ ಎಂದು ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದರು.

ಆನ್‌ಲೈನಲ್ಲೂ ಕಂಪು

‘ಕಾವೇರಿ ಬ್ರ್ಯಾಂಡ್ ಆನ್‌ಲೈನಲ್ಲೂ ಲಭ್ಯ. ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಇ–ಕಾಮರ್ಸ್‌ ಸಂಸ್ಥೆಗಳ ಜೊತೆ ಕಾವೇರಿ ಕೈ ಜೋಡಿಸಿದೆ. ಎಂ.ಜಿ.ರಸ್ತೆಯ ಮಳಿಗೆ ಸೇರಿದಂತೆ ಬೆಂಗಳೂರಿನಲ್ಲಿ 3 ಮಳಿಗೆಗಳು, ಮೈಸೂರಿನಲ್ಲಿ 3, ಮಂಗಳೂರು, ಹುಬ್ಬಳ್ಳಿ, ನವದೆಹಲಿ, ಸಿಕಂದರಾಬಾದ್, ಕೋಲ್ಕತ್ತದಲ್ಲಿ ತಲಾ ಒಂದು ಮಳಿಗೆ ಇದೆ. ಗುಜರಾತ್‌ ರಾಜ್ಯನಲ್ಲೂ ಕಾವೇರಿ ಮಳಿಗೆ ಆರಂಭಿಸಲಾಗಿದೆ. ಚೆನ್ನೈನಲ್ಲಿ ಕಾರಣಾಂತರಗಳಿಂದ ಮುಚ್ಚಿದ್ದ ಮಳಿಗೆಯನ್ನು ಶೀಘ್ರದಲ್ಲೇ ಮತ್ತೆ ಆರಂಭಿಸಲಿದ್ದೇವೆ. ದುಬೈನಲ್ಲೂ ಒಂದು ಮಳಿಗೆ ತೆರೆಯಲು ಸಿದ್ಧತೆ ನಡೆಸಿದ್ದೇವೆ’ ಎಂದು ವಿವರಿಸಿದರು.


ಅಂಕಿ ಅಂಶ

20 ಸಾವಿರ: ಕಾವೇರಿ ಎಂಪೋರಿಯಂ ಮಳಿಗೆಯಲ್ಲಿ ಲಭ್ಯವಿರುವ ಉತ್ಪನ್ನಗಳು

₹10 ಕೋಟಿ: 2021ರಲ್ಲಿ ನಡೆದಿರುವ ವಹಿವಾಟು

2,800 : ಕೆಎಸ್‌ಎಚ್‌ಡಿಸಿಎಲ್‌ನ ನೋಂದಾಯಿತ ಕುಶಲಕರ್ಮಿಗಳು

***

ಕಾವೇರಿ ಎಂಪೋರಿಯಂ ಕರ್ನಾಟಕದಹೆಗ್ಗುರುತು ಹಾಗೂ ‘ಕಾವೇರಿ’ ಬ್ರ್ಯಾಂಡ್‌ಗೆ ಆನೆಬಲವಿದ್ದಂತೆ. ₹20ರಿಂದ ₹80 ಲಕ್ಷದವರೆಗಿನ ಉತ್ಪನ್ನಗಳು ಲಭ್ಯ.
ಡಿ.ರೂಪಾ, ಕೆಎಸ್‌ಎಚ್‌ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.