ವಿಶಾಲವಾದ ಅಂಗಣ. ಸುತ್ತಲೂ ಹಸಿರು ಹೊದಿಸಿರುವಂತೆ ನಿಂತಿರುವ ಮರಗಳು. ಮಕ್ಕಳಿಗೆ ಹನಿ-ನೀರಾವರಿ ಜತೆಗೆ ಕೃಷಿ ಪಾಠ. ಕಂಪ್ಯೂಟರ್ ಕಲಿಕೆ, ಸ್ಮಾರ್ಟ್ ಕ್ಲಾಸ್‌ನೊಂದಿಗೆ ಗುಣಮಟ್ಟದ ಬೋಧನೆ. ಪಠ್ಯದ ಜತೆಗೆ ಯೋಗ, ಸಾಮೂಹಿಕ ಕವಾಯತ್‌ನಂತಹ ಪಠ್ಯೇತರ ಚಟುವಟಿಕೆಗಳು.
ಇದು ಕೊಪ್ಪಳ ತಾಲ್ಲೂಕಿನ ಪುಟ್ಟ ಗ್ರಾಮ ಹೊಸಕನಕಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಶಾಲೆ ಒಳ ಹೊಕ್ಕರೆ, ಮರಗಳು, ತರಕಾರಿ ತೋಟ ನಿಮ್ಮನ್ನು ಸ್ವಾಗತಿಸುತ್ತದೆ. ಮಾತ್ರವಲ್ಲ, ‘ಸರ್ಕಾರಿ ಶಾಲೆ ಎಂದರೆ ಹಿಂಗೂ ಇದೆಯಾ’ ಎಂದು ಹುಬ್ಬೇರಿಸುವಂತಹ ಸೌಲಭ್ಯಗಳು ತೆರೆದುಕೊಳ್ಳುತ್ತವೆ. ಇದಕ್ಕೆಲ್ಲ ಮುಖ್ಯ ಕಾರಣ ಇಲ್ಲಿನ ಶಾಲೆಯ ಶಿಕ್ಷಕರು, ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳ ಪರಿಶ್ರಮ. ಅವರೆಲ್ಲ ಸೇರಿ ರೂಪಿಸಿರುವ ಈ ಮಾದರಿ ಸರ್ಕಾರಿ ಶಾಲೆಯಲ್ಲಿ ಇನ್ನೂ ಏನೆಲ್ಲ ವಿಶೇಷವಿದೆ ಗೊತ್ತಾ? ಬನ್ನಿ ಒಂದು ಸುತ್ತು ಹಾಕಿ ಬರೋಣ.
ಕೈಮುಗಿದು ಒಳ ಬನ್ನಿ
ಶಾಲೆ ಪ್ರವೇಶಿಸುತ್ತಿದ್ದಂತೆ, ‘ಕೈ ಮುಗಿದು ಒಳಗೆ ಬಾ’ ಎನ್ನುತ್ತದೆ ಅಂಗಳದಲ್ಲಿರುವ ಗಿಡ ಮರಗಳು, ಅಲಂಕಾರಿಕ ಹೂವುಗಳು. ಶಾಲೆಯ ಸುತ್ತಲೂ ಕಾಂಪೌಂಡ್ ಶ್ರೀರಕ್ಷೆಯಾಗಿದೆ. ಎಡಬದಿಯಲ್ಲಿ ಮಿತ ನೀರಿನ ಬಳಕೆಯಿಂದ (ಹನಿ ನೀರಾವರಿ) ನಿರ್ಮಾಣ ಮಾಡಿರುವ ಕೈತೋಟವಿದೆ. ಈ ತೋಟದಲ್ಲಿ ಹುಣಸಿಕ್ಕ, ಪಾಲಕ್ಕ, ಕೊತಂಬ್ರಿ, ಬದನೆ, ಟೊಮೆಟೊ, ಪುದಿನದಂತಹ ತರಕಾರಿಗಳನ್ನು ಮಕ್ಕಳೇ ಬೆಳೆಸಿದ್ದಾರೆ. ಶಿಕ್ಷಕರು ಇದೇ ಕೈತೋಟದಲ್ಲಿ ಮಕ್ಕಳಿಗೆ ಕೃಷಿ ಪಾಠವನ್ನು ಹೇಳಿಕೊಡುತ್ತಾರೆ.
ತೋಟದ ಪಾಠ ಹೇಳಿ ಕೊಡುತ್ತಾ, ಹನಿ ಹನಿ ನೀರಿನ ರಕ್ಷಣೆಯ ಕಹಾನಿಯನ್ನೂ ವಿವರಿಸುತ್ತಾರೆ. ಶಾಲೆಯ ಕಟ್ಟಡಕ್ಕೆ ಮಳೆ ನೀರು ಸಂಗ್ರಹ ವಿಧಾನವನ್ನು ಅಳವಡಿಸಿದ್ದಾರೆ.
‘ಸರ್, ತೋಟಕ್ಕೆ ಹನಿ ನೀರಾವರಿ ಅಳವಡಿಸಿರುವುದರಿಂದ, ನೀರಿನ ಬಳಕೆಗೆ ಕಡಿವಾಣ ಹಾಕಿದಂತಾಗಿದೆ. ಅನವಶ್ಯಕ ನೀರು ಪೋಲಾಗುವುದಿಲ್ಲ. ಭೂಮಿ ಸದಾ ತೇವಾಂಶದಿಂದ ಕೂಡಿರುತ್ತೆ. ನಮ್ಮ ಶಾಲಾ ಕೈ ತೋಟದಲ್ಲಿ ಬೆಳೆದ ಪಲ್ಯದಿಂದ ಬಿಸಿಯೂಟಕ್ಕೆ ಅನುಕೂಲ ಆಗಿದೆ. ಬಿಡುವಿನ ವೇಳ್ಯಾದಾಗ ತೋಟಗಾರಿಕೆ ಕೆಲಸ ಮಾಡೋದು ಖುಷಿ ಅನ್ಸತದರಿ’ – ಕೈತೋಟದ ಉಸ್ತುವಾರಿ ನೋಡಿಕೊಳ್ಳುವ ಏಳನೇ ತರಗತಿಯ ವಿದ್ಯಾರ್ಥಿ ರಾಮಚಂದ್ರ, ‘ಕಲಿತ ಪಾಠ’ ವನ್ನು ಒಪ್ಪಿಸಿದಂತೆ ವಿವರಿಸುತ್ತಾನೆ.
ಬಿಸಿಲೂರಿನ ಕೊಪ್ಪಳ ಜಿಲ್ಲೆಯ ಹವಾಮಾನದಲ್ಲೂ 20 ತೆಂಗಿನ ಮರಗಳು ಶಾಲೆಯ ಅಂಗಳದಲ್ಲಿ ಸೊಂಪಾಗಿ ಬೆಳೆದಿವೆ. ಈ ಮರದ ಎಳನೀರನ್ನು ಮಾರಾಟ ಮಾಡುತ್ತಾರೆ. ಇದರಿಂದ ಶಾಲೆಗೆ ವಾರ್ಷಿಕ ₹5 ಸಾವಿರ ಲಾಭ ಬರುತ್ತದೆ. ಈ ಹಣವನ್ನು ಶಾಲಾಭಿವೃದ್ಧಿಗೆ ಬಳಸುತ್ತಿದ್ದಾರೆ. ತೆಂಗಿನ ಮರದ ಜತೆಗೆ, ಬಿದಿರು, ಅರಳಿ, ಸುಬಾಬುಲ್, ಮಾವು, ಬೇವು ಬೆಳೆಸಿದ್ದಾರೆ. ಶಾಲೆಯ ಸುತ್ತಲಿರುವ ಈ ಕಾಡು–ಹಣ್ಣಿನ ಮರಗಳು, ಶಾಲೆಯ ಅಂದವನ್ನು ಹೆಚ್ಚಿಸಿವೆ.
ಸ್ಮಾರ್ಟ್‌ಕ್ಲಾಸ್ ಪಾಠ
ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಿಗೆ ಕೇವಲ ಪಠ್ಯವಿಷಯ ಬೋಧಿಸಿದರಷ್ಟೇ ಸಾಲದು. ಜಗತ್ತಿನ ಆಗುಹೋಗುಗಳು ಪ್ರಚಲಿತ ವಿದ್ಯಾಮಾನಗಳು, ವಿಜ್ಞಾನ ತಂತ್ರಜ್ಞಾನ, ಸಂಶೋಧನೆ ಬಗ್ಗೆ ಆಸಕ್ತಿ ಅಭಿರುಚಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಇಲ್ಲಿನ ಶಿಕ್ಷಣ ಪ್ರೇಮಿ ರವಿ ಮೇಟಿಯವರು ಶಾಲೆಗೆ ‘ಸ್ಮಾರ್ಟ್ ಕ್ಲಾಸ್ ಕಿಟ್’ ಕೊಟ್ಟಿದ್ದಾರೆ. ಶಿಕ್ಷಕರು ಈ ಕಿಟ್ ಬಳಸಿಕೊಂಡು ದೃಶ್ಯ–ಶ್ರವ್ಯ ಮಾಧ್ಯಮದ ಮೂಲಕ ಗಣಿತ, ವಿಜ್ಞಾನ, ಇಂಗ್ಲಿಷ್‌ನಂತಹ ವಿಷಯಗಳನ್ನು ಬೋಧಿಸುತ್ತಿದ್ದಾರೆ. ಜತೆಗೆ ಕಂಪ್ಯೂಟರ್ ತರಬೇತಿ, ಯೋಗ, ಸಾಮೂಹಿಕ ಕವಾಯತ್, ಜನಪದ ನೃತ್ಯ ಕಲೆಗಳ ತರಬೇತಿಯನ್ನು ನೀಡಲಾಗುತ್ತಿದೆ. ಪ್ರಾರ್ಥನೆ ಸಮಯದಲ್ಲಿ ದಿನಕ್ಕೊಂದು ವಚನ, ‘ನಾ ಓದಿದ ಪುಸ್ತಕ’ ಪರಿಚಯ, ‘ದಿನದ ವಿಶೇಷ’ವನ್ನು ಮಕ್ಕಳು ಹೇಳುತ್ತಾರೆ.
ಶಾಲಾಭಿವೃದ್ಧಿಗೆ ಗೌರವ ಧನ
ಶಾಲೆಯ ಅಭಿವೃದ್ಧಿಗೆ ಊರಿನ ಪಕ್ಕದಲ್ಲಿರುವ ಹೊಸಪೇಟೆ ಸ್ಟೀಲ್ ಕಂಪನಿಯವರು ₹6 ಲಕ್ಷದ ವೆಚ್ಚದಲ್ಲಿ ಸುಸಜ್ಜಿತ ಕೊಠಡಿಯನ್ನು ಕಟ್ಟಿಸಿಕೊಟ್ಟಿದ್ದಾರೆ.
ಈ ಊರಿನ ಗ್ರಾಮ ಪಂಚಾಯ್ತಿ ಸದಸ್ಯ ನಾಗರಾಜ ಕುರಟ್ಟಿ, ಸರ್ಕಾರದಿಂದ ಪಡೆಯುವ ಗೌರವ ಧನವನ್ನು ಸಂಪೂರ್ಣವಾಗಿ ಶಾಲಾಭಿವೃದ್ಧಿಗೆ ನೀಡುತ್ತಾ ಬಂದಿದ್ದಾರೆ. ‘ನಮ್ಮೂರ ಶಾಲೆ ಬ್ಹಾಳ ಚಂದೈತ್ರಿ. ಗುರುಗಳೆಲ್ಲಾ ನಮ್ಮ ಮಕ್ಕಳ ಏಳ್ಗೆಗಾಗಿ ಶ್ರಮಿಸ್ತಾ ಇದಾರ. ನಾನು ಗ್ರಾಮ ಪಂಚಾಯ್ತಿ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ನಂಗ ಸರ್ಕಾರ ಕೊಡೊ ಗೌರವ ಧನವನ್ನ ಈ ಶಾಲೆಯ ಅಭಿವೃದ್ಧಿಗೆ ಕೊಟ್ಟೀನಿ,, ಮುಂದೆ ಕೊಡ್ತಾನು ಇರ್ತಿನಿ’ ಎನ್ನುತ್ತಾರೆ ನಾಗರಾಜ.
ಪರಿಸರ ಮಿತ್ರ ಶಾಲೆ
ಶೌಚಾಲಯ, ಶುಚಿತ್ವ, ನೀರಿನ ಮಿತಬಳಕೆ, ಮಳೆನೀರು ಕೊಯ್ಲು, ಅಂತರ್ಜಲವೃದ್ಧಿಗೆ ಜಾಗೃತಿ ಅಭಿಯಾನ, ಹಸಿರೀಕರಣದಂತಹ ಪರಿಸರ ಚಟುವಟಿಕೆಯನ್ನು ಅಳವಡಿಸಿಕೊಂಡಿರುವ ಈ ಸರ್ಕಾರಿ ಶಾಲೆಗೆ ಎರಡು ಬಾರಿ ಜಿಲ್ಲಾಮಟ್ಟದ ‘ಪರಿಸರ ಮಿತ್ರ’ ಶಾಲಾ ಪ್ರಶಸ್ತಿ ಸಂದಿದೆ. ಪ್ರಶಸ್ತಿಯ ಭಾಗವಾಗಿ ₹20 ಸಾವಿರ ರೂಪಾಯಿ ಬಹುಮಾನ ಪಡೆದುಕೊಂಡಿದೆ.
‘ಚನ್ನಬಸಪ್ಪ ಮೇಟಿ, ಮರಿತಿಮ್ಮಪ್ಪ, ಬೆಳ್ಳೆಪ್ಪ, ಪ್ರಭು, ರಾಜಾರಾಂ, ನೀಲನಗೌಡ್ರು, ಸುರೇಶರಂತಹ ಶಿಕ್ಷಕರು ಬಹಳ ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮಪ್ಪ ಹರಿಜನ ಮತ್ತು ಗ್ರಾಮಸ್ಥರು ಸ್ಮರಿಸುತ್ತಾರೆ.
ಸಮುದಾಯದ ಸಹಭಾಗಿತ್ವ
‘ಸರ್ಕಾರಿ ಶಾಲೆಗಳ ಸಬಲೀಕರಣ ಆಗಬೇಕಾದರೆ, ಸಮುದಾಯದ ಸಹಭಾಗಿತ್ವ ತುಂಬಾ ಅಗತ್ಯ. ಈ ಊರಿನಲ್ಲಿ ಸಾರ್ವಜನಿಕರು ಶಾಲೆಯ ಬಗ್ಗೆ ಅಭಿಮಾನ, ಪ್ರೀತಿ ಇಟ್ಕೊಂಡಿದ್ದಾರೆ. ಶೈಕ್ಷಣಿಕ ಪ್ರಗತಿಗೆ ಸದಾ ಕೈ ಜೋಡಿಸುತ್ತಾರೆ’ ಎನ್ನುವುದು ಈ ಶಾಲೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುರೇಶ ಚಿನ್ನೂರ ಅಭಿಪ್ರಾಯ.
ಸದ್ಯ ಶಾಲೆಯಲ್ಲಿ 163 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕ ಭರಮಪ್ಪ ಗೋರಿ, ಸಹ ಶಿಕ್ಷಕರಾದ ಪ್ರಭು ಕಿಡದಾಳ, ಶಿವನಗೌಡ, ವೀರಮ್ಮ, ರಾಕೇಶ ಮತು ವಿಜಯಲಕ್ಷ್ಮಿ ಅವರು ಶಾಲಾಭಿವೃದ್ಧಿಗೆ ಒಂದು ತಂಡದ ರೀತಿ ಸದಾ ಶ್ರಮಿಸುತ್ತಿದ್ದಾರೆ.
ಶಾಲೆಯ ಸಂಪರ್ಕ: 7829641684\ 9964445199.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.