ADVERTISEMENT

ಮಂಡ್ಯ ಜಿಲ್ಲೆಯಲ್ಲಿ ಜಲಧಾರೆಯ ವೈಭವ: ಧುಮ್ಮಿಕ್ಕುತ್ತಿದೆ ಗಗನಚುಕ್ಕಿ ಜಲಪಾತ

ಪ್ರವಾಸಿಗರ ದಂಡು

ಟಿ.ಕೆ.ಲಿಂಗರಾಜು
Published 24 ನವೆಂಬರ್ 2021, 4:54 IST
Last Updated 24 ನವೆಂಬರ್ 2021, 4:54 IST
ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿ ಮೈದುಂಬಿ ಹರಿಯುತ್ತಿರುವ ಕಾವೇರಿಯ ವೈಭವವನ್ನು ಗಗನಚುಕ್ಕಿ ಜಲಪಾತದಲ್ಲಿ ಕಣ್ತುಂಬಿಕೊಂಡ ಪ್ರವಾಸಿಗರು
ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿ ಮೈದುಂಬಿ ಹರಿಯುತ್ತಿರುವ ಕಾವೇರಿಯ ವೈಭವವನ್ನು ಗಗನಚುಕ್ಕಿ ಜಲಪಾತದಲ್ಲಿ ಕಣ್ತುಂಬಿಕೊಂಡ ಪ್ರವಾಸಿಗರು   

ಮಳವಳ್ಳಿ: ತಾಲ್ಲೂಕಿನ ಬ್ಲಫ್ ಬಳಿಯ ಶಿವನಸಮುದ್ರದ ಗಗನಚುಕ್ಕಿ ಜಲಪಾತದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದುಬರುತ್ತಿದೆ.

ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗು ತ್ತಿರುವುದರಿಂದ, ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿ ರುವುದರಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾ ಗುತ್ತಿದೆ. ಇದರಿಂದಾಗಿ ಗಗನಚುಕ್ಕಿ ಜಲಪಾತ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ.

ಕೊಡಗಿನ ತಲಕಾವೇರಿಯಲ್ಲಿ ಉಗಮವಾಗುವ ಕಾವೇರಿ ನದಿ ಉಪ ನದಿಗಳೊಂದಿಗೆ ಸಂಗಮಗೊಂಡು ಕೆಆರ್‌ಎಸ್‌ ಜಲಾಶಯ ತಲುಪಿ ಬಳಿಕ ತಿ.ನರಸೀಪುರ ಬಳಿ ಕಬಿನಿ ಮೊದಲಾದ ಉಪನದಿಗಳ ಜತೆಯಾಗುತ್ತದೆ. ನದಿಯು ಬೆಟ್ಟಗುಡ್ಡ, ಕಾಡುಮೇಡುಗಳ ಮೂಲಕ ಸಾಗಿ ಶಿವನಸಮುದ್ರ ತಲುಪುತ್ತಿದ್ದಂತೆಯೇ ಧುಮುಕಿ ಗಗನಚುಕ್ಕಿಯಾಗಿ, ಬಳಿಕ ಭರಚುಕ್ಕಿಯಾಗಿ ಹರಿಯುತ್ತದೆ. ಈ ದೃಶ್ಯ ವೈಭವ ನೋಡುಗರನ್ನು ರೋಮಾಂಚನಗೊಳಿಸುತ್ತದೆ.

ADVERTISEMENT

ಕೊಡಗಿನಲ್ಲಿ ಭರ್ಜರಿ ಮಳೆಯಾಗಿ ಶಿವನಸಮುದ್ರದಲ್ಲಿ ಕಾವೇರಿಯ ಜಲನರ್ತನವನ್ನು ನೋಡುವ ತವಕ ನಿಸರ್ಗ ಪ್ರೇಮಿಗಳಲ್ಲಿ ಮನೆಮಾಡು ವುದು ಸಹಜ. ಶಿವನ ಸಮುದ್ರದಲ್ಲಿ ಕಾವೇರಿ ನದಿ ಸುಮಾರು 419 ಅಡಿ ಎತ್ತರದಿಂದ ಕಂದಕಕ್ಕೆ ಧುಮುಕುತ್ತದೆ.

ಬಂಡೆಯ ಮೇಲಿಂದ ಭೋರ್ಗರೆಯುವ ಕಾವೇರಿಯ ಸೊಬಗನ್ನು ಹಿನ್ನೆಲೆಯಾಗಿರಿಸಿಕೊಂಡು ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಕೊರೊನಾ ಕಾರಣದಿಂದ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ನಂತರ ಕೆಲವು ದಿನಗಳಿಂದ ಪ್ರವಾಸಿಗರಿಗೆ ಮುಕ್ತ ಪ್ರವೇಶ ನೀಡಲಾಗಿದೆ. ಮೈಸೂರು, ಬೆಂಗಳೂರು, ಚಾಮರಾಜನಗರ ಹಾಗೂ ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.