ಕರ್ನಾಟಕದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ನಿಂತು ನೋಡಿದರೆ ಕಾಣಿಸುವ ಸಾಹಿತ್ಯದ ಬಿಂಬಗಳು ಸಶಕ್ತವಾಗಿ ಆಕರ್ಷಕವಾಗಿ ಕಾಣಿಸಿದರೂ, ಆ ಬಿಂಬಗಳ ಜೊತೆಯಲ್ಲಿನ ಒಡಕು ಗೆರೆಗಳನ್ನೂ ಗಮನಿಸಬೇಕು. ಜೀವಪರ ಸಾಹಿತ್ಯ ಎನ್ನುವುದು ಒಂದು ಗುಂಪಿಗಷ್ಟೇ ಸಾಧ್ಯವಾದರೆ, ಜೀವಪರವಲ್ಲದ ಸಾಹಿತ್ಯವೂ ಇದೆ ಎನ್ನುವುದಾದರೆ, ‘ಎಲ್ಲರನ್ನೂ ಒಳಗೊಳ್ಳುವುದು ಸಾಹಿತ್ಯದ ಶಕ್ತಿ–ಗುಣ’ ಎನ್ನುವ ಪರಿಕಲ್ಪನೆಯನ್ನೇ ನಾವು ಮರಳಿ ಒರೆಗೆ ಹಚ್ಚಬೇಕೇನೊ?
‘ನಾನೆಂಬ ಪರಕೀಯ ಮತ್ತು ದಲಿತ ರಾಜಕೀಯ’ ಎನ್ನುವುದನ್ನು ಈ ಹೊತ್ತಿನ ಕನ್ನಡ ಸಾಹಿತ್ಯದ ಪ್ರಮುಖ ಲಕ್ಷಣವಾಗಿ ಗುರ್ತಿಸಬಹುದೆ?
ಸಣ್ಣಕಥೆಯನ್ನು ಹಿಂದಿಕ್ಕಿ ಕಾದಂಬರಿ ಪ್ರಕಾರ ಮುನ್ನೆಲೆಗೆ; ಕನ್ನಡದ ಕ್ಲಾಸಿಕ್ ಹಾಗೂ ಕ್ಲಾಸಿಕಲ್ ಸಾಹಿತ್ಯ ಕೃತಿಗಳು ಇಂಗ್ಲಿಷ್‌ಗೆ; ಪ್ರಕಟಣೆಯ ಅವಕಾಶಗಳು ಹೆಚ್ಚಳಗೊಂಡಿರುವುದು ಹಾಗೂ ಸುಲಭಗೊಂಡಿರುವುದು; ಸಾಹಿತ್ಯ ಸಂವಾದಗಳಿಗೆ ವೇದಿಕೆಯಾಗಿ ಜಾಲತಾಣಗಳು ಒದಗಿಬಂದಿರುವುದು; ಪುಸ್ತಕ ಪರಿಚಾರಿಕೆ ಉದ್ಯಮವಾಗಿ ಬದಲಾಗಿ ಪುಸ್ತಕ ಸರಕಾಗಿಯೂ ಬರಹಗಾರ ವ್ಯಾಪಾರಿಯ ರೂಪದಲ್ಲೂ ಕಂಗೊಳಿಸುತ್ತ, ಓದುಗ ಸಹೃದಯಿಯನ್ನು ಗ್ರಾಹಕನ ರೂಪದಲ್ಲಿ ನೋಡುತ್ತಿರುವುದು; ಸಾಮಾಜಿಕ ಜಾಲತಾಣಗಳು ಹೊಸ ಬರಹಗಾರರಿಗೆ ಅಭಿವ್ಯಕ್ತಿಯ ವೇದಿಕೆಯಾಗಿ ಪರಿಣಮಿಸಿರುವುದು; ಬರಹಗಾರರು ಹಾಗೂ ಓದುಗರು ಗುಂಪುಗಳಾಗಿ ಒಡೆದುಹೋಗಿರುವುದು; ಕನ್ನಡ ಸಾಹಿತ್ಯ ಸ್ತ್ರೀವಾದಕ್ಕೆ ತೆರೆದುಕೊಂಡಿರುವುದರ ನಡುವೆಯೂ ಕೆಲವು ಬರಹಗಾರರು ಲಿಂಗಸಂವೇದನೆಯ ಜಡತ್ವ ಹೊಂದಿರುವುದು; ರಾಜಕೀಯಪ್ರಜ್ಞೆಯ ರೂಪದಲ್ಲಿ ಪ್ರತಿಪಕ್ಷಗಳ ಪಾತ್ರ ವಹಿಸುತ್ತಿದ್ದ ಸಾಹಿತಿಗಳು ಆಡಳಿತ ಪಕ್ಷಗಳೊಂದಿಗೂ ಗುರ್ತಿಸಿಕೊಳ್ಳುತ್ತಿರುವುದು– ವರ್ತಮಾನದ ಕನ್ನಡ ಸಾಹಿತ್ಯದ ಕೆಲವು ಪ್ರಮುಖ ಚಲನೆಗಳ ರೂಪದಲ್ಲಿ ನೋಡಬಹುದಾದ ಈ ಎಲ್ಲ ಸಂಗತಿಗಳ ನಡುವೆಯೂ, ಹೊಸ ತಲೆಮಾರಿನ ದಲಿತ ಲೇಖಕರು ಹಾಗೂ ಮುಸ್ಲಿಂ ಬರಹಗಾರರು ಕನ್ನಡ ಸಾಹಿತ್ಯದ ಕೇಂದ್ರದಲ್ಲಿ ನಿಂತಿರುವುದು ಎದ್ದುಕಾಣಿಸುವಂತಿದೆ.
ಸುವರ್ಣ ಕರ್ನಾಟಕ ಸಂದರ್ಭದಲ್ಲಿ ನಿಂತು ಐವತ್ತು ವರ್ಷಗಳ ಕನ್ನಡ ಸಾಹಿತ್ಯವನ್ನು ಬೀಸು ನೋಟದಲ್ಲಿ ಗಮನಿಸಿದಾಗ, ದಲಿತ–ಮುಸ್ಲಿಂ ಬರಹಗಾರರು ಸಾಹಿತ್ಯದ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಚ್ಚರಿಯ ಸಂಗತಿಯಾಗಿಯೇನೂ ಕಾಣಿಸುವುದಿಲ್ಲ. ಈ ವಿಶಿಷ್ಟ ನಡಿಗೆಯ ಮುನ್ನುಡಿ ರೂಪದಲ್ಲಿ, 1979ರ ಮಾರ್ಚ್ 11ರಂದು ಆರಂಭವಾದ ‘ಬಂಡಾಯ ಸಂಘಟನೆ’ಯನ್ನು ಗಮನಿಸಬಹುದು. ಸಾಮಾಜಿಕ ಹಾಗೂ ಸಾಹಿತ್ಯಿಕ ವಲಯದಲ್ಲಿ ಸೃಜನಶೀಲ ಸಂಚಲನೆ ಹುಟ್ಟಿಸುವ ಹಂಬಲದಲ್ಲಿ ರೂಪುಗೊಂಡ ಬಂಡಾಯ ಸಂಘಟನೆ, ಸಾಹಿತ್ಯದಲ್ಲಿ ದಲಿತ ಪ್ರಜ್ಞೆಯ ಮಹತ್ವ ಹಾಗೂ ಅಗತ್ಯವನ್ನು ಪ್ರತಿಪಾದಿಸಿತು. ನವೋದಯದ ನರುಗಂಪು ಹಾಗೂ ನವ್ಯದ ಕಡು ಘಾಟಿನ ಸಂದರ್ಭದಲ್ಲಿ, ಅವರೆಡಕ್ಕೂ ಭಿನ್ನ ಧ್ವನಿಯಲ್ಲಿ ದಲಿತ–ಬಂಡಾಯದ ಲೇಖಕರು ಬರೆಯತೊಡಗಿದರು. ಈ ಬಳಗದಲ್ಲಿ ದಲಿತ ಸಮುದಾಯದ ಬರಹಗಾರರು ಇದ್ದಂತೆಯೇ ಮುಸ್ಲಿಂ ಸಮುದಾಯದ ಲೇಖಕರೂ ಇದ್ದರು. ಕನ್ನಡ ಸಾಹಿತ್ಯದ ಆ ವಿಶಿಷ್ಟ ಸಮೀಕರಣ, ‘ಬಂಡಾಯ ಸಂಘಟನೆ’ಗೆ ನಲವತ್ತೈದು ವರ್ಷಗಳು ತುಂಬಿರುವ ಹಾಗೂ ಕವಿ ಸಿದ್ಧಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ (1975) ಸಂಕಲನಕ್ಕೆ ಐವತ್ತು ವರ್ಷಗಳಾಗಿರುವ ಸಂದರ್ಭದಲ್ಲಿ ಹೊಸ ಹೊಳಪು ಪಡೆದುಕೊಂಡಿದೆ.
ಅವಜ್ಞೆಯೂ ‘ಭೀಮಪ್ರಜ್ಞೆ’ಯೂ...
ನವೋದಯ ಹಾಗೂ ನವ್ಯ ಮಾತ್ರವಲ್ಲದೆ, ದಲಿತ–ಬಂಡಾಯ ಸಂದರ್ಭದಲ್ಲೂ, ಜನಪರ ಸಾಹಿತ್ಯ ರಚನೆಯ ಬಗ್ಗೆ ಯೋಚಿಸುತ್ತಿದ್ದ ಬರಹಗಾರರಿಗೆ ದ್ರವ್ಯವಾಗಿ ಒದಗಿಬರುತ್ತಿದ್ದವರು ಗಾಂಧೀಜಿ. ನಂತರದ ವರ್ಷಗಳಲ್ಲಿ ಜೇಪಿ ಹಾಗೂ ಲೋಹಿಯಾ ಕೂಡ ಕನ್ನಡ ಸಾಹಿತ್ಯ ಕ್ಷಿತಿಜದಲ್ಲಿ ಮಿನುಗತೊಡಗಿದರು. ಈಗ ಆ ಜಾಗದಲ್ಲಿ ಕಂಗೊಳಿಸುತ್ತಿರುವುದು ಅಂಬೇಡ್ಕರ್. ಈ ಹೊತ್ತಿನ ಬಿಕ್ಕಟ್ಟುಗಳಿಗೆ ಉತ್ತರ ಕಂಡುಕೊಳ್ಳಲು ಹೊಸ ತಲೆಮಾರಿನ ಬರಹಗಾರರು ನೆಚ್ಚಿಕೊಂಡಿರುವುದು ಅಂಬೇಡ್ಕರ್ ಚಿಂತನೆಗಳನ್ನು. ಶೋಷಿತ ವರ್ಗಗಳ ಎಚ್ಚರದ ರೂಪದಲ್ಲಿ ಹಾಗೂ ಪ್ರಬಲಗೊಳ್ಳುತ್ತಿರುವ ಕೋಮುವಾದಕ್ಕೆ ಉತ್ತರ ರೂಪದಲ್ಲಿ ‘ಭೀಮಪ್ರಜ್ಞೆ’ ಒದಗಿಬರುತ್ತಿದೆ. ಕನ್ನಡ ಕಾವ್ಯ, ಕಥೆ, ಕಾದಂಬರಿ ಮಾತ್ರವಲ್ಲದೆ ವೈಚಾರಿಕ ಕೃತಿಗಳಲ್ಲಿ ಕೂಡ ಅಂಬೇಡ್ಕರ್ ಅಭಿವ್ಯಕ್ತಗೊಳ್ಳುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ವ್ಯಕ್ತಿ–ವಿಚಾರದ ರೂಪದಲ್ಲಿ ಅರಿಯಲು ಸಹಾಯಕವಾದ ಪಠ್ಯಗಳು ಕನ್ನಡಕ್ಕೆ ಅನುವಾದಗೊಳ್ಳುತ್ತಿವೆ. ಹೀಗೆ, ಕನ್ನಡ ಸಾಹಿತ್ಯದ ಕೇಂದ್ರದಲ್ಲಿ ಅಂಬೇಡ್ಕರ್ ಪ್ರಕಾಶಿಸುತ್ತಿರುವ ಸಂದರ್ಭದಲ್ಲಿ, ಗಾಂಧಿ–ಲೋಹಿಯಾ ಕೂಡ ಹೊಸ ಚರ್ಚೆಗಳ ಮೂಲಕ ಮರುಹುಟ್ಟುಗಳನ್ನು ಕಂಡುಕೊಳ್ಳುತ್ತಿರುವುದು ಕುತೂಹಲಕರ.
ಯುವ ದಲಿತ ಬರಹಗಾರರು–ಕಲಾವಿದರು ಅಂಬೇಡ್ಕರ್ ಚಿಂತನೆಗಳೊಂದಿಗೆ ಪ್ರಜ್ಞಾಪೂರ್ವಕ ಅನುಸಂಧಾನ ನಡೆಸುತ್ತಿರುವ ಸಂದರ್ಭದಲ್ಲೇ, ಮುಸ್ಲಿಂ ಸಮುದಾಯದ ತರುಣ ತರುಣಿಯರು ಬರವಣಿಗೆಯಲ್ಲಿ ಗುರ್ತಿಸಿಕೊಂಡಿರುವುದು ವಿಶೇಷ. ಕೆ.ಎಸ್. ನಿಸಾರ್ ಅಹಮದ್, ಸಾರಾ ಅಬೂಬಕ್ಕರ್, ಬೊಳುವಾರು, ಕಟ್ಪಾಡಿ, ಬಾನು ಮುಷ್ತಾಕ್, ರಹಮತ್ ತರೀಕೆರೆ, ಅಬ್ದುಲ್ ರಶೀದ್– ಹೀಗೆ, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಬರಹಗಾರರ ದೊಡ್ಡ ಪಟ್ಟಿಯೇ ಇದ್ದರೂ, ಆ ಬರಹಗಾರರು ಬರವಣಿಗೆಯಲ್ಲಿ ತೊಡಗಿಕೊಂಡದ್ದರ ಪ್ರೇರಣೆಗಳಿಗೂ ಈ ಹೊತ್ತಿನ ಬರಹಗಾರರ ಸಾಹಿತ್ಯಿಕ ಒತ್ತಾಸೆಗಳಿಗೂ ವ್ಯತ್ಯಾಸಗಳಿವೆ. ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಎಂದು ‘ನಿತ್ಯೋತ್ಸವ’ದ ಕವಿ ನಿಸಾರ್ ಅಹಮದ್ ಅಳಲು ತೋಡಿಕೊಂಡರೂ, ಅವರನ್ನು ಕನ್ನಡ ಓದುಗವಲಯ ಪರಕೀಯನೆಂದು ಕಂಡಿಲ್ಲ. ಉಳಿದ ಮುಸ್ಲಿಂ ಬರಹಗಾರರನ್ನೂ ಸಾಹಿತ್ಯಲೋಕ ಪ್ರೀತಿಯಿಂದಲೇ ಕಂಡಿದೆ. ಆ ಪ್ರೀತಿಯಲ್ಲಿ ಈಗಲೂ ಎದ್ದುಕಾಣುವ ಬದಲಾವಣೆಗಳೇನೂ ಆಗಿಲ್ಲ. ಸ್ಥಿತ್ಯಂತರ ಆಗಿರುವುದು, ರಾಜಕೀಯ ಹಾಗೂ ಸಾಮಾಜಿಕ ಸಂದರ್ಭಗಳಲ್ಲಿ. ಸಮುದಾಯಗಳ ವಿಭಜನೆಯ ಪಕ್ಷ ರಾಜಕಾರಣ ಸಾಮಾಜಿಕ ಸ್ವರೂಪದಲ್ಲೂ ಕಾಣಿಸಿಕೊಂಡಿರುವುದು ಕಳೆದೊಂದು ದಶಕದಲ್ಲಿ ಮುಸ್ಲಿಂ ಸಮುದಾಯದ ಕಳವಳಕ್ಕೆ ಕಾರಣವಾಗಿದೆ. ಹಿಜಾಬ್ ಧರಿಸಿದ ಹೆಣ್ಣುಮಕ್ಕಳನ್ನು ಶಾಲೆಯಿಂದ ಹೊರಗಿಟ್ಟಿದ್ದು, ಜಾತ್ರೆ–ಉತ್ಸವಗಳಿಂದ ಮುಸ್ಲಿಂ ವ್ಯಾಪಾರಿಗಳನ್ನು ದೂರವಿಡುವ ಪ್ರಯತ್ನಗಳು, ಆಹಾರ ಸಂಸ್ಕೃತಿಯನ್ನು ಕೀಳಾಗಿ ಕಾಣುವುದು, ಆಚಾರ ವಿಚಾರಗಳನ್ನು ನಿರಂತರವಾಗಿ ಪ್ರಶ್ನಿಸುತ್ತ ಅಲ್ಪಸಂಖ್ಯಾತರು ಹಾಗೂ ಅನ್ಯರೆಂಬ ಅಳುಕನ್ನು ಪ್ರಜ್ಞಾಪೂರ್ವಕವಾಗಿ ಮೂಡಿಸುವುದು– ಇವೆಲ್ಲವೂ ‘ಸರ್ವ ಜನಾಂಗದ ಶಾಂತಿಯ ತೋಟ’
ದಲ್ಲಿ ಘಟಿಸಿದ ಸಂಗತಿಗಳೇ ಆಗಿವೆ. ಈ ಬದಲಾವಣೆಗಳೇ ಹೊಸ ತಲೆಮಾರಿನ ಮುಸ್ಲಿಂ ತರುಣ ತರುಣಿಯರು ಬರವಣಿಗೆಗೆ ಆತುಕೊಳ್ಳುವಂತೆ ಮಾಡಿವೆ. ಇಂದಿನ ಮುಸ್ಲಿಂ ಬರಹಗಾರರಿಗೆ ಕನ್ನಡದಲ್ಲಿ ಬರೆಯುವುದು ಸಾಹಿತ್ಯದ ಅಭಿವ್ಯಕ್ತಿಯಷ್ಟೇ ಆಗಿಲ್ಲ, ಅದು ಈ ಮಣ್ಣಿನೊಂದಿಗಿನ ತಮ್ಮ ನಂಟನ್ನು ದೃಢೀಕರಿಸುವ ಪ್ರಯತ್ನವೂ ಆಗಿರುವಂತಿದೆ.
ದಲಿತ–ಮುಸ್ಲಿಂ ಬರಹಗಾರರ ಯಶಸ್ವಿ ಸಹಪಯಣಕ್ಕೆ ನಿದರ್ಶನದ ರೂಪದಲ್ಲಿ, ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿಯನ್ನು ಪಡೆದ ಕನ್ನಡ ಬರಹಗಾರರ ಪಟ್ಟಿಯನ್ನು ಗಮನಿಸಬಹುದು. ಅಕಾಡೆಮಿಯ ಯುವ ಪುರಸ್ಕಾರಕ್ಕೆ ಪಾತ್ರವಾದ ಮೊದಲ ಮೂವರು ಬರಹಗಾರರು (ವೀರಣ್ಣ ಮಡಿವಾಳರ, ಆರಿಫ್ ರಾಜಾ ಹಾಗೂ ಲಕ್ಕೂರು ಆನಂದ) ಈ ಹೊತ್ತಿನ ಸಾಹಿತ್ಯ ಚಲನೆಯನ್ನು ಸೂಚಿಸುವಂತಿದ್ದಾರೆ. ಈವರೆಗೆ ಯುವ ಪುರಸ್ಕಾರಕ್ಕೆ ಪಾತ್ರರಾದ ಹದಿಮೂರು ಬರಹಗಾರರಲ್ಲಿ ಹೆಚ್ಚಿನವರು ಸಾಮಾಜಿಕವಾಗಿ ಹಿಂದುಳಿದ–ಶೋಷಿತ ಸಮುದಾಯಗಳಿಗೆ ಸೇರಿದವರು.
ಅಂಬೇಡ್ಕರ್ ಅರಿವಿನ ಜನಪರ ಸಾಹಿತ್ಯದ ಮತ್ತೊಂದು ತುದಿಯಲ್ಲಿ ಬಲಪಂಥೀಯ ಧೋರಣೆಯ ಸಾಹಿತ್ಯವೂ ಗಣನೀಯ ಪ್ರಮಾಣದಲ್ಲಿ ರೂಪುಗೊಳ್ಳುತ್ತಿರುವುದಕ್ಕೆ ‘ಸುವರ್ಣ ಕರ್ನಾಟಕ’ ಸಾಕ್ಷಿಯಾಗಿದೆ. ನವ್ಯ ಲೇಖಕರಿಂದ ಟೀಕೆಗೊಳಗಾಗಿದ್ದ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಬಲಪಂಥೀಯರ ಕಣ್ಮಣಿಯಾದರು. ಗಾಂಧಿಯನ್ನು ಶಿಲುಬೆಗೇರಿಸಿ ಸಾವರ್ಕರ್ ಅವರನ್ನು ಮೆರೆಸುವ ಪ್ರಯತ್ನಗಳು ನಡೆದವು, ನಡೆದಿವೆ.
ಪರಧರ್ಮ ಮತ್ತು ಪರವಿಚಾರದ ಸೈರಣೆಯನ್ನು ಪ್ರತಿಪಾದಿಸಿದ ‘ಕನ್ನಡ ವಿವೇಕ ಪರಂಪರೆ’ಗೆ ರಕ್ತದ ಕಲೆಗಳನ್ನು ಸಿಂಪಡಿಸಿದ ಘಟನೆಗಳನ್ನೂ ‘ಸುವರ್ಣ ಕರ್ನಾಟಕ’ ಸಾಹಿತ್ಯ ಸಮೀಕ್ಷೆಯ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ವೈಚಾರಿಕ ಅಸಹನೆ ಗುಂಡಿನ ರೂಪದಲ್ಲಿ ಕನ್ನಡದ ಅತ್ಯುತ್ತಮ ವಿದ್ವಾಂಸರಲ್ಲೊಬ್ಬರಾದ ಎಂ.ಎಂ. ಕಲಬುರ್ಗಿ ಅವರನ್ನು ಬಲಿ ತೆಗೆದುಕೊಂಡಿತು (ಆ. 30, 2015). ಕಲಬುರ್ಗಿ ಅವರ ಕೊಲೆಯ ಎರಡು ವರ್ಷಗಳ ನಂತರ (ಸೆ. 5, 2017ರಂದು) ಪತ್ರಕರ್ತೆ ಗೌರಿ ಲಂಕೇಶ್ ಕೋಮುಶಕ್ತಿಗಳಿಗೆ ಬಲಿಯಾದರು. ಜಾಮೀನು ಪಡೆದು ಹೊರಬಂದಿರುವ ಗೌರಿ ಲಂಕೇಶ್ ಕೊಲೆ ಆರೋಪಿಗಳಿಗೆ ಸ್ವಾಗತ–ಸನ್ಮಾನಗಳೂ ನಡೆದವು. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದೀಗ ದುಬಾರಿಯೂ ಹೌದು, ಅಪಾಯಕಾರಿಯೂ ಹೌದು. ಸಾಹಿತ್ಯದ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿರುವ ಸಂದರ್ಭದಲ್ಲೂ ನಾಡಿನ ವೈಚಾರಿಕತೆಯ ಸಂಕೇತಗಳಾಗಿ ದೇವನೂರ ಮಹಾದೇವ, ಬರಗೂರು ರಾಮಚಂದ್ರಪ್ಪ ಅವರನ್ನು ದೊಡ್ಡದೊಂದು ಜನಸಮುದಾಯ ನಂಬಿಕೊಂಡಿದೆ.
ಆಕರ್ಷಕ ಜಿಗಿತ, ವಿಷಾದಕರ ಕುಸಿತ
ಸಣ್ಣಕಥೆ ಹಾಗೂ ಕಾದಂಬರಿ ಸದ್ಯ ಮುನ್ನೆಲೆಯಲ್ಲಿರುವ ಆಕರ್ಷಕ ಸಾಹಿತ್ಯ ಪ್ರಕಾರಗಳು. ಮಾಸ್ತಿ, ಚಿತ್ತಾಲ, ತೇಜಸ್ವಿ, ಅನಂತಮೂರ್ತಿ, ದೇವನೂರ ಮಹಾದೇವ, ಬೆಸಗರಹಳ್ಳಿ, ಲಂಕೇಶ್‌ರ ಕಥನ ಪರಂಪರೆ – ಮೊಗಳ್ಳಿ ಗಣೇಶ್, ಅಮರೇಶ ನುಗಡೋಣಿ, ಎಸ್. ದಿವಾಕರ್, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಅಬ್ದುಲ್ ರಶೀದ್‌ರಂಥ ಶಕ್ತ ಕಥೆಗಾರರೊಂದಿಗೆ ಮುಂದುವರೆದು, ಈ ಹೊತ್ತಿನ ಮೌನೇಶ್ ಬಡಿಗೇರ್, ಗುರುಪ್ರಸಾದ್ ಕಂಟಲಗೆರೆ, ಅನುಪಮಾ ಪ್ರಸಾದ್, ಕಾವ್ಯಾ ಕಡಮೆ ಸೇರಿದಂತೆ ನೂರಾರು ಧ್ವನಿಗಳಲ್ಲಿ ವಿಸ್ತರಿಸಿಕೊಂಡಿದೆ. ಕಥಾ ಪ್ರಕಾರದಲ್ಲಿನ ಹೊಸ ಪ್ರಯೋಗಗಳಿಗೆ ‘ಹೊನ್ನ ಕಣಜ’ದ ರೂಪದಲ್ಲಿ ಸಾಹಿತ್ಯ ಸ್ಪರ್ಧೆಗಳು– ವಿಶೇಷವಾಗಿ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ಗಳು– ಒದಗಿಬಂದಿವೆ.
ಕಥೆಯ ಜೊತೆ ಜೊತೆಗೆ ಕಾದಂಬರಿ ಪ್ರಕಾರವೂ ನಿರಂತರ ಪ್ರಯೋಗಶೀಲತೆಗೆ ತನ್ನನ್ನೊಡ್ಡಿಕೊಂಡಿದೆ. ಕುವೆಂಪು ಅವರ ‘ಕಾನೂರು ಹೆಗ್ಗಡಿತಿ’ (1936) ಹಾಗೂ ‘ಮಲೆಗಳಲ್ಲಿ ಮದುಮಗಳು’ (1967) ಕನ್ನಡ ಸಾಹಿತ್ಯದ ‘ಮಹಾ ಕಾದಂಬರಿ’ಗಳು. ಅನಂತಮೂರ್ತಿಯವರ ‘ಸಂಸ್ಕಾರ’ ವಿಶ್ವದ ವಿವಿಧ ಭಾಷೆಗಳಿಗೆ ಅನುವಾದಗೊಂಡು ಜಾಗತಿಕ ಮನ್ನಣೆ ಪಡೆದ ಕಾದಂಬರಿ. ಶಿವರಾಮ ಕಾರಂತ, ಚಿತ್ತಾಲ, ತೇಜಸ್ವಿ, ಲಂಕೇಶ್, ವ್ಯಾಸರಾಯ ಬಲ್ಲಾಳ, ಶ್ರೀನಿವಾಸ ವೈದ್ಯರಿಂದ ಇಂದಿನ ವಿವೇಕ ಶಾನಭಾಗ, ಗುರುಪ್ರಸಾದ್ ಕಾಗಿನೆಲೆ, ವಸುಧೇಂದ್ರ, ಚೀಮನಹಳ್ಳಿ ರಮೇಶಬಾಬುರವರೆಗೆ ‘ಕನ್ನಡ ಕಾದಂಬರಿ’ ಆಲದ ಬಿಳಲುಗಳು ಹಬ್ಬಿಕೊಂಡಿವೆ. ಕಳೆದೊಂದು ದಶಕದ ಅವಧಿಯಲ್ಲಿ ಕಥೆಗಾರರು ಕಾದಂಬರಿ ಬರೆಯಲು ಉತ್ಸಾಹ ತೋರಿಸುತ್ತಿರುವುದನ್ನು ಹಾಗೂ ಕಾದಂಬರಿ ಮೂಲಕವೇ ಬರವಣಿಗೆ ಆರಂಭಿಸುತ್ತಿರುವ ಹೊಸ ಬರಹಗಾರರನ್ನು ನೋಡಿದರೆ, ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರ ಮುನ್ನೆಲೆಗೆ ಬರುತ್ತಿರುವ ಸೂಚನೆಗಳು ಕಾಣಿಸುತ್ತಿವೆ.
ಕಥೆ–ಕಾದಂಬರಿಗೆ ಹೋಲಿಸಿದರೆ ಕಾವ್ಯ ಹಾಗೂ ನಾಟಕ ಪ್ರಕಾರಗಳ ಬೆಳೆ ಅಷ್ಟೇನೂ ಆಕರ್ಷಕವಾಗಿಲ್ಲ. ಬೇಂದ್ರೆಯವರ ‘ನಾದಲೀಲೆ’ಯೂ ಈಗಿಲ್ಲ, ಅಡಿಗರ ‘ಚಂಡೆಮದ್ದಳೆ’ಯೂ ಮೊಳಗುತ್ತಿಲ್ಲ. ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ನಿಸಾರ್ ಅಹಮದ್, ಕೆ.ವಿ. ತಿರುಮಲೇಶ್, ಎಚ್.ಎಸ್. ಶಿವಪ್ರಕಾಶ್, ಎಚ್.ಎಸ್. ವೆಂಕಟೇಶಮೂರ್ತಿ ಅವರ ಮೂಲಕ ಪುಷ್ಟಿಗೊಂಡ ಕನ್ನಡ ಕಾವ್ಯನದಿ ಈ ಹೊತ್ತಿನ ಲಲಿತಾ ಸಿದ್ಧಬಸವಯ್ಯ, ಲಕ್ಷ್ಮೀಪತಿ ಕೋಲಾರ, ಸುಬ್ಬು ಹೊಲೆಯಾರ್, ಜ.ನಾ. ತೇಜಶ್ರೀ, ಆರಿಫ್ ರಾಜ, ವಿಲ್ಸನ್ ಕಟೀಲ್, ಮುಂತಾದವರ ಮೂಲಕ ನಿಗಿನಿಗಿ ಎನ್ನುತ್ತಿದೆಯಾದರೂ, ಹೊಸ ತಲೆಮಾರಿನ ಕನ್ನಡ ಕಾವ್ಯದಲ್ಲಿ ಬಿಸುಪು ಹೊಳಪು ನಿರೀಕ್ಷೆಯಷ್ಟಿಲ್ಲ.
ಕಾವ್ಯದಂತೆಯೇ ನಾಟಕವೂ ಹೊಸ ತಿರುವಿಗಾಗಿ ಹಂಬಲಿಸುತ್ತಿರುವ ಸಂದರ್ಭವಿದು. ಕಲ್ಯಾಣ ಕ್ರಾಂತಿಯನ್ನು ಕೇಂದ್ರವಾಗಿಟ್ಟುಕೊಂಡು ನಡೆಸಿದ ರಂಗಪ್ರಯೋಗಗಳಿಗೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಚಾರಿತ್ರಿಕ ಮಹತ್ವವಿದೆ. ಲಂಕೇಶರ ‘ಸಂಕ್ರಾಂತಿ’ (1973), ಎಚ್.ಎಸ್. ಶಿವಪ್ರಕಾಶರ ‘ಮಹಾಚೈತ್ರ’ (1986), ಗಿರೀಶ ಕಾರ್ನಾಡರ ‘ತಲೆದಂಡ’ (1990), ಎಂ.ಎಂ. ಕಲಬುರ್ಗಿ ಅವರ ‘ಕೆಟ್ಟೀತು ಕಲ್ಯಾಣ’ (1995) ಮತ್ತು ಚಂದ್ರಶೇಖರ ಕಂಬಾರರ ‘ಶಿವರಾತ್ರಿ’ (2011), ಕನ್ನಡ ನಾಡು–ನುಡಿಯ ಉನ್ನತಿ ಅವನತಿಗಳನ್ನು ರಂಗಪಠ್ಯಗಳ ಮೂಲಕ ಶೋಧಿಸುವ ಕಲಾಕೃತಿಗಳಾಗಿವೆ. ಸದ್ಯದ ಕನ್ನಡ ನಾಟಕ ಹೊಸ ಹರಿವು ಹೊಳಹುಗಳ ಹಂಬಲದಲ್ಲಿದೆ.
ಸಾಹಿತ್ಯ ಪತ್ರಿಕೆಗಳಿಗಿದು ಕಾಲವಲ್ಲ ಎನ್ನುವ ಸಂದರ್ಭದಲ್ಲೂ ‘ಅಕ್ಷರ ಸಂಗಾತ’ ಐದು ವರ್ಷಗಳನ್ನು ಪೂರೈಸಿ ಮುನ್ನಡೆದಿದೆ. ಅನುವಾದಗಳಿಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯದಲ್ಲೀಗ ಉತ್ಸಾಹದ ವಾತಾವರಣ. ಅನುವಾದ ಚಟುವಟಿಕೆಗಳಿಗೆಂದೇ ಮೀಸಲಾಗಿರುವ ‘ಕುವೆಂಪು ಭಾಷಾ ಭಾರತಿ’ (2009ರಲ್ಲಿ ಆರಂಭ) ದೇಶಕ್ಕೇ ಮಾದರಿಯೆನ್ನಿಸುವ ಸಂಸ್ಥೆ. ಹಳಗನ್ನಡ ಹಾಗೂ ಹೊಸಗನ್ನಡದ ಉತ್ತಮ ಕೃತಿಗಳು ಇಂಗ್ಲಿಷ್‌ಗೆ ಭಾಷಾಂತರಗೊಳ್ಳುತ್ತಿರುವ ಮೂಲಕ, ಕನ್ನಡಪ್ರಜ್ಞೆ ವಿಶ್ವವಿವೇಕದೊಂದಿಗೆ ಮುಖಾಮುಖಿ ನಡೆಸುವ ಪ್ರಯತ್ನದಲ್ಲಿದೆ.
ಕರ್ನಾಟಕದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ನಿಂತು ನೋಡಿದರೆ ಕಾಣಿಸುವ ಸಾಹಿತ್ಯದ ಬಿಂಬಗಳು ಸಶಕ್ತವಾಗಿ ಆಕರ್ಷಕವಾಗಿ ಕಾಣಿಸಿದರೂ, ಆ ಬಿಂಬಗಳ ಜೊತೆಯಲ್ಲಿನ ಒಡಕು ಗೆರೆಗಳನ್ನೂ ಗಮನಿಸಬೇಕು. ಜೀವಪರ ಸಾಹಿತ್ಯ ಎನ್ನುವುದು ಒಂದು ಗುಂಪಿಗಷ್ಟೇ ಸಾಧ್ಯವಾದರೆ, ಜೀವಪರವಲ್ಲದ ಸಾಹಿತ್ಯವೂ ಇದೆ ಎನ್ನುವುದಾದರೆ, ‘ಎಲ್ಲರನ್ನೂ ಒಳಗೊಳ್ಳುವುದು ಸಾಹಿತ್ಯದ ಶಕ್ತಿ–ಗುಣ’ ಎನ್ನುವ ಪರಿಕಲ್ಪನೆಯನ್ನೇ ನಾವು ಮರಳಿ ಒರೆಗೆ ಹಚ್ಚಬೇಕೇನೊ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.