ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಾದ್ಯಂತ 21 ದಿನಗಳ ‘ದಿಗ್ಬಂಧನ’ ಘೋಷಿಸಿದರು. ಆದರೆ, ಈ ಘೋಷಣೆಗೆ ಮೊದಲೇ ರಾಜ್ಯದ ಗಡಿ ಭಾಗದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಎಂ.ಗೊಲ್ಲಹಳ್ಳಿ ಎಂಬ ಪುಟ್ಟ ಗ್ರಾಮ ಸ್ವಯಂ ಪ್ರೇರಿತವಾಗಿ ಹಳ್ಳಿಗೇ ದಿಗ್ಬಂಧನ ವಿಧಿಸಿತ್ತು.
ದೇಶ ಲಾಕ್‌ಡೌನ್ ಆಗುವ 24 ಗಂಟೆ ಮೊದಲೇ ಗ್ರಾಮಸ್ಥರು ತಮ್ಮ ಹಳ್ಳಿಯನ್ನು ಹೊರಗಿನವರಿಗೆ ಲಾಕ್ ಮಾಡಿಬಿಟ್ಟರು. ಪ್ರಾಯಶಃ ತನ್ನನ್ನು ತಾನೇ ಹೊರಗಿನಿಂದ ಬರಬಹುದಾದ ವೈರಸ್‍ನಿಂದ ಈ ರೀತಿಯಲ್ಲಿ ರಕ್ಷಣೆ ಮಾಡಿಕೊಂಡ ರಾಜ್ಯದ ಪ್ರಥಮ ಗ್ರಾಮ ಗೊಲ್ಲಹಳ್ಳಿಯೇ ಇರಬೇಕು. ಲಾಕ್‌ಡೌನ್ ಆದ ನಂತರದ ದಿನಗಳಲ್ಲಿ ರಾಜ್ಯದ ಅನೇಕ ಗ್ರಾಮಗಳಲ್ಲಿ ‘ಎಂ.ಗೊಲ್ಲಹಳ್ಳಿಯಮಾದರಿ’ಯನ್ನು ವಿವಿಧ ರೀತಿಯಲ್ಲಿ ಅಳವಡಿಸಿಕೊಳ್ಳಲಾಯಿತು.
ಸುಮಾರು 871 ಜನಸಂಖ್ಯೆಯ ಈ ಗ್ರಾಮ ಭೌಗೋಳಿಕ ದೃಷ್ಟಿಯಿಂದ ನಿರ್ಣಾಯಕವಾಗಿದೆ. ಇದು ರಾಜ್ಯದ ಗಡಿಯನ್ನು ಆಂಧ್ರಪ್ರದೇಶದೊಂದಿಗೆ ಹಂಚಿಕೊಳ್ಳುತ್ತದೆ. ಆಂಧ್ರದ ಪುಂಗನೂರು, ಪಲಮನೇರು ಹಾಗೂ ಗುಂಡಿಗಲ್ಲು ಪ್ರದೇಶಗಳಿಗೆ ಹೋಗುವವರು ಈ ಊರಿನ ಮೂಲಕ ಹೋಗಬೇಕು. ಹೀಗಾಗಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನಿಂದ ಬರುವ ವಿದೇಶಿ ಪ್ರಯಾಣಿಕರು,ಎಂ.ಗೊಲ್ಲಹಳ್ಳಿಯಮೂಲಕವೇ ಹಾದು ಹೋಗುತ್ತಾರೆ.
ಮಾರ್ಚ್ ಮೂರನೆಯ ವಾರ ‘ಕೋವಿಡ್-19’ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆಲ್ಲ ಈ ಗ್ರಾಮಸ್ಥರಲ್ಲಿ ಒಂದು ರೀತಿಯ ಭಯ ಆವರಿಸತೊಡಗಿತು. ‘ಈ ರೋಗಕ್ಕೆ ಮದ್ದಿಲ್ಲ. ಮನೆಯಲ್ಲಿಯೇ ಇದ್ದುಬಿಡುವುದು; ಹೊರಗಿನ ಸಂಪರ್ಕ ಕಡಿತ ಮಾಡಿಕೊಳ್ಳುವುದು ಮಾತ್ರವೇ ಏಕೈಕ ಮಾರ್ಗ’ ಎಂದು ಗೊತ್ತಾಗುತ್ತಿದ್ದಂತೆಯೇ ‘ಯಾರೂ ಹಳ್ಳಿಗೆ ಬರದಂತೆ, ಹಳ್ಳಿಯಿಂದ ಯಾರೂ ಹೊರ ಹೋಗದಂತೆ ದಿಗ್ಬಂಧನ ಹಾಕಲು ತೀರ್ಮಾನಿಸಿದೆವು’ ಎನ್ನುತ್ತಾರೆ ಅಖಿಲ ಭಾರತ ಕಿಸಾನ್ ಮಂಚ್ ರಾಜ್ಯ ಉಪಾಧ್ಯಕ್ಷ ಎಂ ಗೋಪಾಲ್.
ತಮಗೆ ಹೊಳೆದ ವಿಚಾರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ. ಎನ್. ರಡ್ಡೆಪ್ಪ ಹಾಗೂ ಇತರ ಸದಸ್ಯರೊಂದಿಗೆ ಚರ್ಚಿಸಿದರು. ಅವರೆಲ್ಲರೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಹಳ್ಳಿಗೇ ದಿಗ್ಬಂಧನ ವಿಧಿಸಲು ನಿರ್ಧರಿಸಿದರು.
ಮೊದಲ ಹಂತದಲ್ಲಿ ಎರಡು ತಿಂಗಳುಗಳಿಗೆ ಬೇಕಾಗುವಷ್ಟು ದಿನಸಿ ಹಾಗೂ ಇತರೆ ಪದಾರ್ಥಗಳನ್ನು ಶೇಖರಿಸಿಟ್ಟುಕೊಂಡರು. ಎರಡನೆಯ ಹಂತದಲ್ಲಿ ಊರಿಗೆ ಸಂಪರ್ಕ ಕಲ್ಪಿಸುವ ನಾಲ್ಕೂ ಬದಿಯಲ್ಲಿ ಚೆಕ್‍ಪಾಯಿಂಟ್ ನಿರ್ಮಾಣ ಮಾಡಿದರು. ಮೂರನೆಯ ಹಂತದಲ್ಲಿ ನೂರು ಜನರ ಸ್ವಯಂಸೇವಕರ ತಂಡ ರಚಿಸಿ, ಹೊರ ಹೋಗುವವರನ್ನು ಹಾಗೂ ಒಳ ಬರುವವರನ್ನು ನಿರ್ಬಂಧಿಸಲು ಸೂಚಿಸಿದರು. ಈ ಸ್ವಯಂ ಸೇವಕರಿಗೆ, ಊರಿನ ಮೂಲಕ ಹಾದು ಹೋಗುವ ಪ್ರತಿಯೊಬ್ಬರ ವಿಳಾಸ ಹಾಗೂ ಹಿನ್ನೆಲೆ ಬರೆದುಕೊಳ್ಳುವುದು ಹಾಗೂ ಪರಿಶೀಲನೆಯ ನಂತರವೇ ಅಗತ್ಯವೆಂದು ಕಂಡುಬಂದರೇ ಮಾತ್ರವೇ ಚೆಕ್‍ಪಾಯಿಂಟ್ ಮೂಲಕ ಸಂಚರಿಸಲು ಅವಕಾಶ ನೀಡುವಂತೆ ಸೂಚಿಸಿದರು.
ಸಿದ್ಧತೆ ಮುಗಿದ ನಂತರ ಮಾರ್ಚ್ 24 ರಂದು ನಾಲ್ಕೂ ಚೆಕ್‍ಪಾಯಿಂಟ್ ಆರಂಭಗೊಂಡು ಎಂ. ಗೊಲ್ಲಹಳ್ಳಿಯಲ್ಲಿ ತನ್ನನ್ನು ತಾನೇ ಸ್ವಯಂ ಲಾಕ್ ಮಾಡಿಕೊಂಡಿತು. ‘ನಾವು ಮೂರು ಜನರ ತಂಡಗಳನ್ನು ರಚಿಸಿದ್ದೇವೆ. ಪ್ರತಿ ತಂಡ ನಾಲ್ಕು ಗಂಟೆಗಳ ಕಾಲ ಚೆಕ್‍ಪಾಯಿಂಟ್‍ಗಳಲ್ಲಿ ಕಾವಲು ಕಾಯುತ್ತಾರೆ. ದಿನದ 24 ಗಂಟೆಗಳ ಕಾಲ ಕಾವಲಿದೆ’ ಎನ್ನುತ್ತಾರೆ ಸ್ವಯಂಸೇವಕರ ನಾಯಕತ್ವ ವಹಿಸಿದ ಎಂ. ಗೊಲ್ಲಹಳ್ಳಿ ಪ್ರಭಾಕರ.
ಹೀಗೆ ಹಳ್ಳಿಗೆ ದಿಗ್ಬಂಧನ ಹಾಕಿರುವ ವಿಷಯ ತಿಳಿದೊಡನೆ ಮುಳಬಾಗಿಲು ತಾಲ್ಲೂಕು ಅಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಪರಿಶೀಲಿಸಿತು, ಮೆಚ್ಚುಗೆಯನ್ನೂ ವ್ಯಕ್ತಪಡಿಸಿತು.
ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ಅವರು ‘ಎಂ.ಗೊಲ್ಲಹಳ್ಳಿಯಮಾದರಿಕೋವಿಡ್-19ವಿರುದ್ಧದ ಹೋರಾಟಕ್ಕಾಗಿ ಅತ್ಯಂತ ಸೂಕ್ತ’ ಎಂದರು. ‘ಈ ಗ್ರಾಮದ ಮೂಲಕ ಹಾದು ಹೋಗುವ ಪ್ರತಿಯೊಬ್ಬರ ವಿವರ ಸಂಗ್ರಹಣೆ ಅತ್ಯಂತ ವೈಜ್ಞಾನಿಕಮಾದರಿ. ಅದು ವೈರಸ್ ಹರಡುವುದನ್ನು ತಡೆಯಲು ಅತ್ಯಂತ ಉಪಯುಕ್ತ’ ಎನ್ನುವುದು ತಾಲ್ಲೂಕು ಪಂಚಾಯಿತಿ ಸದಸ್ಯೆ ಉಷಾ ಶಂಕರ್ ರೆಡ್ಡಿ ಅವರ ಅಭಿಪ್ರಾಯ.
ಹೀಗೆ ಸ್ವಯಂ ಪ್ರೇರಿತವಾಗಿ ದಿಗ್ಬಂಧನ ವಿಧಿಸಿಕೊಂಡ ಗೊಲ್ಲಹಳ್ಳಿಯ ಕ್ರಮ, ಹಲವು ಗ್ರಾಮಗಳಿಗೆ ಮಾದರಿಯಾಯಿತು. ಅನೇಕ ಹಳ್ಳಿಗಳಲ್ಲಿ ಇದೇ ಮಾದರಿಯನ್ನು ಅನುಸರಿಸಿದರು. ಅಷ್ಟರಮಟ್ಟಿಗೆ ಗೊಲ್ಲಹಳ್ಳಿಯ ಕಾರ್ಯ ಅನುಕರಣೀಯವಾಯಿತು.
ಚಿತ್ರಗಳು: ತ್ಯಾಗರಾಜು ಕೆ.ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.