ADVERTISEMENT

ಮೊಗೆದಷ್ಟೂ ಆಳ ಅಗಲ ದೊಡ್ಡಶೆಟ್ಟಿಕೆರೆ ದೊಡ್ಡಸ್ತಿಕೆ

ತುರುವೇಕೆರೆ ಪ್ರಸಾದ್
Published 16 ಡಿಸೆಂಬರ್ 2019, 19:30 IST
Last Updated 16 ಡಿಸೆಂಬರ್ 2019, 19:30 IST
ದೊಡ್ಡಶೆಟ್ಟಿಕೆರೆ ಹಳ್ಳಿ
ದೊಡ್ಡಶೆಟ್ಟಿಕೆರೆ ಹಳ್ಳಿ   

ಜಾಗತೀಕರಣ ಹಾಗೂ ಆಧುನಿಕ ಜೀವನ ಶೈಲಿಗಳ ಹೊಡೆತವನ್ನು ತಾಳಿಕೊಂಡು, ಜನಪದ ಸಂಸ್ಕೃತಿ ಉಳಿಸಿಕೊಂಡಿರುವ ಒಂದಿಷ್ಟು ಗ್ರಾಮಗಳು ತುಮಕೂರು ಜಿಲ್ಲೆಯಲ್ಲಿವೆ. ಅಂಥ ಗ್ರಾಮಗಳಲ್ಲಿ ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದೊಡ್ಡಶೆಟ್ಟಿಕೆರೆಯೂ ಒಂದು.

ಈ ಗ್ರಾಮದ ಇತಿಹಾಸದ ಕುರುಹು 12 ಶತಮಾನದ ಶಾಸನದಿಂದ ಸಿಗುತ್ತದೆ.ಹೊಯ್ಸಳ ರಾಜ ವೀರನಾರಸಿಂಹನ ಕಾಲದಲ್ಲಿ ರಾಮಯ್ಯ ನಾಯಕ ಈ ಪ್ರಾಂತ್ಯವನ್ನು ಆಳುತ್ತಿದ್ದ. ಯುದ್ಧವೊಂದರಲ್ಲಿ ಅವನು ಅಸುನೀಗಿದಾಗ ಅವನ ರಾಣಿ ಮತ್ತು ಗರುಡರಾದ (ಅಂಗರಕ್ಷಕರು) ಗಣಪಿ ಹಾಗೂ ಬಲ್ಲ ಎಂಬುವರೂ ಆತ್ಮಾರ್ಪಣಗೈದರು ಎಂಬ ಉಲ್ಲೇಖ ಆ ಶಾಸನದಲ್ಲಿದೆ.

ಮುಂದಿನ ದಿನಗಳಲ್ಲಿ ಮೈಸೂರು ಪ್ರಾಂತ್ಯದಿಂದ ದೊಡ್ಡಶೆಟ್ಟಿ, ಚಿಕ್ಕಶೆಟ್ಟಿ ಎಂಬಿಬ್ಬರು ಅಣ್ಣತಮ್ಮಂದಿರು ಈ ಊರಿಗೆ ಬಂದು ನೆಲೆಸಿದರು. ಇಬ್ಬರ ಮಧ್ಯೆ ಮನಸ್ತಾಪ ಬಂದು ಇಬ್ಬರೂ ಬೇರೆ ಬೇರೆಯಾದರು. ದೊಡ್ಡಶೆಟ್ಟಿ ಇದ್ದ ಊರು ದೊಡ್ಡಶೆಟ್ಟಿಕೆರೆ, ಚಿಕ್ಕಶೆಟ್ಟಿ ಇದ್ದ ಊರು ಚಿಕ್ಕಶೆಟ್ಟಿಕೆರೆ ಎಂದಾಯಿತು ಎಂದು ಐತಿಹ್ಯ ಹೇಳುತ್ತದೆ.

ADVERTISEMENT

ಹಿಂದೊಂದು ಕಾಲದಲ್ಲಿ ಇಡೀ ಗ್ರಾಮವೇ ಕಲ್ಲುಹಾಸಿನಿಂದ ಆವೃತವಾಗಿತ್ತು. ಊರಿನ ಸುತ್ತಲೂ ಶ್ರೀರಂಗಪಟ್ಟಣ ಮಾದರಿ ಯಲ್ಲಿ ಎತ್ತರದ ಕೋಟೆ ಮತ್ತು 10 ಅಡಿ ಎತ್ತರದ ಹೆಬ್ಬಾಗಿಲು, 8 ಅಡಿಯ ಕಿರುಬಾಗಿಲುಗಳಿದ್ದವು. ಪ್ಲೇಗ್ ಕಾಯಿಲೆ ಬಂದಾಗ ಊರು ಖಾಲಿಬಿದ್ದು, ಬಾಗಿಲು ಶಿಥಿಲವಾಗಿ ಮುರಿದು ಹೋಯಿತು ಎಂದು ಊರ ಹಿರಿಯರು ಹೇಳುತ್ತಾರೆ.

ಗುಂಬಳಿಗೌಡ ಎಂಬಾತನನ್ನು ಈ ಊರಿನ ಪೂರ್ವಜ ಎಂದು ಹೇಳುತ್ತಾರೆ. ಊರಿನಲ್ಲಿ ಕುಂಬಾರಗುಡಿ, ಬೀರದೇವರ ಗುಡಿ, ಅಂಕನಾಥನ ಗುಡಿಗಳಿರುವುದರಿಂದ ಕುಂಬಾರರು, ಕುರುಬರು ಅಧಿಕ ಸಂಖ್ಯೆಯಲ್ಲಿದ್ದಿರಬಹುದು.

ಗುಂಬಳಿಗೌಡನ ಕನಸಿನಲ್ಲಿ ರಂಗನಾಥಸ್ವಾಮಿ ಬಂದು ತನ್ನನ್ನು ಪ್ರತಿಷ್ಠಾಪಿಸುವಂತೆ ಆಜ್ಞಾಪಿಸಿದ. ಅದರಂತೆ ಗುಂಬಳಿಗೌಡ ಬಾವಿಯಲ್ಲಿದ್ದ ರಂಗನಾಥಸ್ವಾಮಿ ವಿಗ್ರಹವನ್ನು ಮೇಲೆತ್ತಿ ಬೆಟ್ಟದ ಮೇಲೆ ಪ್ರತಿಷ್ಠಾಪಿಸಿದ ಎಂಬ ದಂತಕತೆಯಿದೆ. ಆದರೆ ಊರಿನ ಹಿರಿಯ ಮುಖಂಡ ಡಿ.ತಿಪ್ಪಣ್ಣ ಬೇರೆ ವಿವರ ನೀಡುತ್ತಾರೆ. ‘ತಮಿಳುನಾಡಿನ ಚೋಳರ ಆಶ್ರಯ ತಪ್ಪಿ ಕರ್ನಾಟಕಕ್ಕೆ ಬಂದರಾಮಾನುಜಾಚಾರ್ಯರು, ಈ ಪ್ರಾಂತ್ಯದಲ್ಲಿ ಹಲವಾರು ಕಡೆ ರಂಗನಾಥಸ್ವಾಮಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ. ಅವುಗಳಲ್ಲಿ ಇಲ್ಲಿನ ಬೆಟ್ಟದ ರಂಗಸ್ವಾಮಿಯೂ ಒಂದು. ರಾಮಾನುಜರ ಹಾಗೂ ಆಳ್ವಾರ್‌ರ ಪ್ರತಿಮೆಗಳು ಇಂದಿಗೂ ಇಲ್ಲಿರುವುದೇ ಇದಕ್ಕೆ ಸಾಕ್ಷಿ’ ಎನ್ನುತ್ತಾರೆ ಅವರು.

ದೊಡ್ಡಶೆಟ್ಟಿಕೆರೆ ಒಂದು ಕಾಲದಲ್ಲಿ ಹಲವು ಜನಪದ ಕಲೆಗಳ ತವರೂರಾಗಿತ್ತು ಎಂಬುದು ಹೆಮ್ಮೆಯ ಸಂಗತಿ. ಊರಿನ ಬಹುತೇಕ ಎಲ್ಲ ಮನೆಗಳಲ್ಲೂ ಒಂದಿಲ್ಲೊಂದು ಪುರಾತನ ವಸ್ತಗಳು ಜನಪದ ಸಂಸ್ಕೃತಿಯ ಅಭಿಜ್ಞಾನವಾಗಿ ದೊರಕುತ್ತವೆ. ನಾವು ಕಂಡು ಕೇಳರಿಯದ ವಿಶಿಷ್ಟ ವಸ್ತುಗಳು ಇಂದಿಗೂ ಇಲ್ಲಿನ ಮನೆಗಳಲ್ಲಿವೆ. ಹಾವೇರಿ ಜನಪದ ವಿಶ್ವವಿದ್ಯಾನಿಲಯದ ತಜ್ಞರು ಈಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದಾಗಹಲವು ಅಪರೂಪದ ವಸ್ತುಗಳನ್ನು ಗ್ರಾಮಸ್ಥರು ದೂಳು ಕೊಡವಿ ಹೊರ ತೆಗೆದಾಗಲೇ ದೊಡ್ಡಶೆಟ್ಟಿಕೆರೆಯ ದೊಡ್ಡತನ ಬೆಳಕಿಗೆ ಬಂದದ್ದು.

ನಾಗವಾಸ (ವಿಶಿಷ್ಟ ಶೈಲಿಯ ದೀಪ), ಬಾಗ್ಲಾ (ಗವಾಕ್ಷಿ), ದೋಣಿ, ಬೀಸೋಕಲ್ಲು, ಹರವಿ, ವಾಡೆ, ಮಡಕೆ, ಕುಡಿಕೆ, ನರಿಕೆಕೋಲು, ಕನ್ನಡಿ, ಮೊರ ಸೇರಿದಂತೆ ಹಲವು ದಿನಬಳಕೆ ವಸ್ತುಗಳು. ತಂಬೂರಿ, ಏಕತಾರಿ, ತಬಲಾ ಮೊದಲಾದ ಹಲವು ವಾದ್ಯ ಪರಿಕರಗಳು ಬೆಳಕಿಗೆ ಬಂದವು. ಊರಿನಲ್ಲಿ ನಶಿಸಿಹೋಗಿದ್ದ ಭಾಗವಂತಿಕೆ ಮೇಳವನ್ನು ಇದೀಗ ಪುನರಾರಂಭಿಸಲಾಗಿದೆ.

ಗ್ರಾಮದ ಹಿರಿಯರಾದ ತಿಪ್ಪಣ್ಣ, ರಾಮಚಂದ್ರ, ಪಡಿಯಪ್ಪ ಮೊದಲಾದವರು 10 ಜನರ ಒಂದು ತಂಡ ಕಟ್ಟಿ ಕೋಟು, ಪೇಟ, ಅಂಗವಸ್ತ್ರ, ತಾಳ, ಕನಕ ತಮಟೆ ಮೊದಲಾದ ಪರಿಕರಗಳನ್ನು ಒದಗಿಸಿಕೊಟ್ಟು ಭಾಗವಂತಿಕೆ ಮೇಳಕ್ಕೆ ಜೀವ ತುಂಬಿದ್ದಾರೆ. ಈ ತಂಡ ಮೈಸೂರಿನ ದಸರಾ ಉತ್ಸವದಲ್ಲಿ ಪಾಲ್ಗೊಂಡು ಬಹುಮಾನವನ್ನೂ ಪಡೆದಿದೆ. ವೀರಭದ್ರಕುಣಿತಕ್ಕೂ ವೇಷಭೂಷಣಗಳನ್ನು ಒದಗಿಸಿಕೊಡಲಾಗಿದೆ. ಕೀಲುಕುದುರೆ, ತಮಟೆ ವಾದ್ಯ, ಡೊಳ್ಳು ಕುಣಿತ, ಕರಡಿ ಕುಣಿತ, ಸೋಬಾನೆ ಗಾಯನ ಮೊದಲ 6 ಜನಪದ ತಂಡಗಳಿಗೆ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಗ್ರಾಮವೇ ಹಿಂದಿನ ಜನಪದ ಗ್ರಾಮವಾಗಿ ಮರುಹುಟ್ಟು ಪಡೆಯುವತ್ತ ದಾಪುಗಾಲು ಹಾಕುತ್ತಿದೆ.

ಶಿಕ್ಷಣ ಕ್ರಾಂತಿ

ರಾಜ್ಯದ ಅದೆಷ್ಟೋ ಕನ್ನಡ ಶಾಲೆಗಳ ದುಃಸ್ಥಿತಿಯೇ ಈ ಊರಿನ ಪ್ರಾಥಮಿಕ ಶಾಲೆಗೂ ಬಂದಿತ್ತು. ಒಂದು ಕಾಲದಲ್ಲಿ ನೂರಾರು ಮಕ್ಕಳು ಕಲಿಯುತ್ತಿದ್ದ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಏಕಾಏಕಿ ಕುಸಿದು ಶಾಲೆ ಮುಚ್ಚುವ ಸ್ಥಿತಿ ನಿರ್ಮಾಣವಾಯಿತು. ಆಗ ಊರಿನ ‘ಸೇವ್’ ಟ್ರಸ್ಟ್ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ನಿರ್ಧಾರ ಮಾಡಿತು. ಊರಿನ ಮುಖಂಡ, ಖ್ಯಾತ ರಂಗಕರ್ಮಿ ತಿಪ್ಪಣ್ಣ ಶಾಲೆಗಾಗಿ ತಮ್ಮ 17 ಗುಂಟೆ ಜಮೀನನ್ನು ದಾನ ಕೊಟ್ಟಿದ್ದಾರೆ. ಇಲ್ಲಿ ಕಾನ್ವೆಂಟ್‌ಗಳಿಗೆ ಸೆಡ್ಡು ಹೊಡೆಯುವಂತೆ ಪ್ರತ್ಯೇಕವಾಗಿ ನರ್ಸರಿ, ಎಲ್‌ಕೆಜಿ ತರಗತಿಗಳು ನಡೆಯುತ್ತಿವೆ.

ಇಲ್ಲಿನ ಮಹಿಳೆಯರು ತಿಪ್ಪಣ್ಣನವರ ಮಾರ್ಗದರ್ಶನದಲ್ಲಿ ರಂಗತಂಡವೊಂದನ್ನು ಕಟ್ಟಿಕೊಂಡು ಜಾನಪದ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ನಾಟಕ ಪ್ರದರ್ಶನ ಪ್ರಾರಂಭಿಸಿದ್ದಾರೆ. ಈಚೆಗೆ ಕುವೆಂಪುವರ ರಾಮಾಯಣ ದರ್ಶನಂ ಆಧಾರಿತ ‘ಶಬರಿಗಾದನು ಅತಿಥಿ ದಾಶರಥಿ’ ಮತ್ತು ‘ಏಳು ಸಮುದ್ರದಾಚೆ’ ನಾಟಕಗಳನ್ನು ಈ ವನಿತಾ ವೇದಿಕೆ ಯಶಸ್ವಿಯಾಗಿ ಪ್ರಯೋಗಿಸಿದ್ದು ಇಡೀ ಜಿಲ್ಲೆಯಲ್ಲೇ ವಿಶಿಷ್ಟ ಎನಿಸಿತ್ತು.

ಮದ್ಯಕ್ಕೆ ಗುಡ್ ಬೈ

ಗ್ರಾಮದಲ್ಲಿ ಸಾಮಾಜಿಕ ಕ್ರಾಂತಿಯೂ ನಡೆದಿದೆ. ಸಾರ್ವಜನಿಕ ಶೌಚಾಲಯ, ಸಮುದಾಯ ಭವನ ತಲೆ ಎತ್ತಿವೆ. ಗ್ರಾಮದ ಅಭಿವೃದ್ದಿಗೆಂದೇ ಟ್ರಸ್ಟ್ ಒಂದನ್ನು ನೋಂದಾಯಿಸಲಾಗಿದೆ. ಹಿಂದೆ ಗ್ರಾಮದಲ್ಲಿ ಹಲವು ಯುವಕರು ವೇಳೆ, ಅವೇಳೆ ಎನ್ನದೆ ಜೂಜಾಡುತ್ತಿದ್ದರಂತೆ. ಈಗ ಅದನ್ನು ನಿರ್ಬಂಧಿಸಲಾಗಿದೆ. ಗ್ರಾಮದ ಹಲವು ಮನೆಗಳಲ್ಲಿ ಹಗಲು ಹೊತ್ತಿನಲ್ಲೇ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಮಹಿಳೆಯರೂ ಮದ್ಯ ಮಾರಾಟದಲ್ಲಿ ತೊಡಗುತ್ತಿದ್ದರು. ಈಗ ಅದಕ್ಕೂ ಕಡಿವಾಣ ಬಿದ್ದಿದೆ.

ಎಲ್ಲಿ ನೋಡಿದರಲ್ಲಿ ರಂಗ

ರಂಗನಾಥಸ್ವಾಮಿಯ ಮೇಲಿನ ಭಕ್ತಿಯಿಂದ ಗ್ರಾಮದಲ್ಲಿರುವ ಬಹುತೇಕ ಜನರ ಹೆಸರು ರಂಗಪ್ಪ, ರಂಗಣ್ಣ, ರಂಗಸ್ವಾಮಿ, ರಂಗಜ್ಜ, ರಂಗನಾಥ, ರಂಗ ಎಂದೇ ಆರಂಭವಾಗುತ್ತದೆ. ಇಲ್ಲಿನ ಬಹುತೇಕ ಸೋದರ ಕುಟುಂಬಗಳು ದೊಡ್ಡ ಒಕ್ಕಲು, ಚಿಕ್ಕ ಒಕ್ಕಲು, ಸಣ್ಣ ಒಕ್ಕಲು ಎಂದು ವರ್ಗೀಕರಣಗೊಂಡಿವೆ. ಈ ಕುಟುಂಬಗಳ ಮಧ್ಯೆ ಮದುವೆ ನಿಷಿದ್ಧ. ಆದರೆ ಹೊರಗಿನಿಂದ ಬಂದವರು (ಅಳಿಯ ಒಕ್ಕಲು)ಮಾತ್ರ ಸಂಬಂಧ ಬೆಳೆಸಬಹುದು.

ಸೊಪ್ಪಿನ ನಂಟು ಸಾವಿಗೂ ಉಂಟು

ಊರಿನ ಬಾವಿಯ ಪಕ್ಕದ ಒಂದೂವರೆ ಎಕರೆ ಪ್ರದೇಶವನ್ನು ಇಡೀ ಗ್ರಾಮಸ್ಥರೆಲ್ಲಾ ಹಂಚಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಸೊಪ್ಪು ಬೆಳೆಯಲಾಗುತ್ತದೆ. ಯುಗಾದಿಯ ಮರುದಿನ ವರ್ಷ ತೊಡಕಿನಂದು ಒಟ್ಟಿಗೆ ಬೀಜ ಬಿತ್ತುತ್ತಾರೆ. ಅಕ್ಟೋಬರ್ ಕೊನೆಯವರೆಗೆ ಗ್ರಾಮಸ್ಥರು ಇದೇ ಸೊಪ್ಪಿನ ಸವಿ ಸವಿಯುತ್ತಾರೆ. ತಮ್ಮ ಹಿತ್ತಿಲಲ್ಲಿ ಯಾರೂ ಏನೂ ಬೆಳೆಯುವುದಿಲ್ಲ. ಬದುಕಿನಲ್ಲಿನ ಈ ಸೌಹಾರ್ದತೆಯನ್ನು ಜನ ಸಾವಿನಲ್ಲೂ ಉಳಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಸಂಸ್ಕಾರ ಆಗುವ ತನಕ ಎಲ್ಲರೂ ಉಪವಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.