ADVERTISEMENT

ಕರುನಾಡ ವೈಭವ | ಕನ್ನಡ ಭಾಷೆಯ ಹಿರಿಮೆ-ಗರಿಮೆ

ಶ್ರೀ ಶ್ರೀ ರವಿಶಂಕರ್
Published 30 ಅಕ್ಟೋಬರ್ 2024, 23:30 IST
Last Updated 30 ಅಕ್ಟೋಬರ್ 2024, 23:30 IST
ಕನ್ನಡ ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ   

ಕನ್ನಡ ಭಾಷೆಯು ಆಳವಾದ ಸಿದ್ಧಾಂತಗಳಿಂದ ಕೂಡಿದೆ ಹಾಗೂ ಇದರಲ್ಲಿ ಅಗಾಧವಾದ ಜ್ಞಾನ ಸಂಪತ್ತು ಅಡಗಿದೆ. ಕನ್ನಡ ಭಾಷೆಯನ್ನು ತಿಳಿಯದವರು ಈ ಜ್ಞಾನದಿಂದ ವಂಚಿತರಾಗುತ್ತಿದ್ದಾರಲ್ಲಾ ಎಂದು ನಮಗೆ ಮೊದಲಿನಿಂದಲೂ ಅನ್ನಿಸುತ್ತಿತ್ತು. ನಮ್ಮ ವಚನ ಸಾಹಿತ್ಯ, ಡಿವಿಜಿಯವರ ಮಂಕುತಿಮ್ಮನ ಕಗ್ಗ, ಗೋಪಾಲಕೃಷ್ಣ ಅಡಿಗರ ಸಾಹಿತ್ಯ, ಹೀಗೆ ಇವರೆಲ್ಲರ ಕೊಡುಗೆ ಅಮೂಲ್ಯ. ನಮಗೆ ಬಾಲ್ಯದಿಂದಲೂ ಗೋಪಾಲಕೃಷ್ಣ ಅಡಿಗರ ಸಂಪರ್ಕವಿತ್ತು. ಇವರ ಪ್ರೇರಣೆಯಿಂದಲೇ ನಮಗೆ ಕಾವ್ಯ ಹಾಗೂ ಸಾಹಿತ್ಯದಲ್ಲಿ ಅಭಿರುಚಿ ಮೂಡಿತು.

ನಾವು ಓದಿದ್ದೆಲ್ಲವೂ ಕನ್ನಡ ಮಾಧ್ಯಮದಲ್ಲೇ. ನಮ್ಮ ಕನ್ನಡ ಭಾಷೆಯಲ್ಲಿ, ಮಾತನಾಡುವುದು ಹಾಗೂ ಬರೆಯುವುದು ಒಂದೇ ರೀತಿ ಆಗಿರುತ್ತದೆ. ಆದರೆ ಆಂಗ್ಲ ಭಾಷೆಯಲ್ಲಿ ಬರೆಯುವುದೊಂದು ಹಾಗೂ ಹೇಳುವುದು ಇನ್ನೊಂದು. ಆಂಗ್ಲ ಭಾಷೆಯಲ್ಲಿ ಕ್ನಾಲೆಡ್ಜ್ ಎಂದು ಬರೆಯುತ್ತೇವೆ, ಆದರೆ ಅದನ್ನು ನಾಲೆಜ್ ಎಂದು ಓದುತ್ತೇವೆ. ಬರೆಯುವ ಅಕ್ಷರಗಳಿಗೆ ಹಾಗೂ ಅದನ್ನು ಉಚ್ಛರಿಸುವುದಕ್ಕೆ ಸಂಬಂಧ ಇರುವುದಿಲ್ಲ. ಹಿಂದೆ, ನಾವು ಓದುತ್ತಿದ್ದ ಸಮಯದಲ್ಲಿ, ಆಂಗ್ಲ ಭಾಷೆಯನ್ನು ಕಲಿತುಕೊಳ್ಳಲು ವಿದ್ಯಾರ್ಥಿಗಳಿಗೆ ಬಹಳ ಕಷ್ಟವಾಗುತ್ತಿತ್ತು. ಆದ್ದರಿಂದ, ನಾವು ಆಂಗ್ಲ ಪದಗಳನ್ನು ಉಚ್ಛಾರಣೆ ಮಾಡಲು ಕನ್ನಡದಲ್ಲಿ ಪುಸ್ತಕದ ಮೇಲೆ ಬರೆದುಕೊಳ್ಳುತ್ತಿದ್ದೆವು! ಈ ವಿಷಯ ನಮ್ಮ ಆಂಗ್ಲ ಭಾಷೆಯ ಶಿಕ್ಷಕರಿಗೆ ತಿಳಿದು ನನ್ನನ್ನು ಒಂದು ಬಾರಿ ಬೈದಿದ್ದರು.

ನುಡಿದಂತೆ ನಡೆ ಎನ್ನುವ ಮಾತಿದೆ. ಹಾಗೆಯೇ ಕನ್ನಡ ಭಾಷೆಯೂ ಸಹ ನುಡಿದಂತೆಯೇ ಬರೆಯುವಂತಹ ಭಾಷೆ. ಶಬ್ದಕ್ಕೂ ಹಾಗೂ ಅದರ ಅಭಿವ್ಯಕ್ತಿಗೂ ಸಂಬಂಧವಿರುವಂತಹ ಶ್ರೀಮಂತವಾದ ಭಾಷೆಯು ಕನ್ನಡ ಭಾಷೆ. ಆದ್ದರಿಂದಲೇ "ಸಿರಿಗನ್ನಡಂ ಗೆಲ್ಗೆ" ಎಂದು ಹೇಳುತ್ತಾರೆ. ಇದು ಬರೀ ಕನ್ನಡವಲ್ಲ, ಸಿರಿಗನ್ನಡ. ಏಕೆಂದರೆ ಇದರಲ್ಲಿ ಎಲ್ಲಾ ತರಹದ ಸಿರಿಯೂ ತುಂಬಿದೆ. ಇದು ನಮ್ಮ ದೊಡ್ಡ ಸಂಪತ್ತು. ಆದರೆ ಕನ್ನಡಿಗರಾದ ನಾವೇ ಇದನ್ನೆಲ್ಲಾ ಮರೆತು ಹೋಗುತ್ತಿದ್ದೇವೆ. ಮನೆಯಲ್ಲೂ "ಅಮ್ಮ, ಅಪ್ಪ" ಎನ್ನದೆ, "ಮಮ್ಮಿ, ಡ್ಯಾಡಿ" ಎನ್ನಲು ಪ್ರಾರಂಭಿಸಿದ್ದೇವೆ. ಭಾಷೆಯ ಮೇಲಿನ ಪ್ರೀತಿಯನ್ನು ಶ್ರೀಲಂಕಾದಲ್ಲಿರುವ ತಮಿಳರನ್ನು ನೋಡಿ ಕಲಿಯಬೇಕು. ಭಾರತದಿಂದ ಶ್ರೀಲಂಕಾಗೆ ಹೋದ ತಮಿಳರು ಎಷ್ಟು ಶುದ್ಧವಾದ ತಮಿಳನ್ನು ಮಾತನಾಡುತ್ತಾರೆಂದರೆ, ತಮಿಳುನಾಡಿನಲ್ಲೂ ಅಷ್ಟು ಶುದ್ಧವಾದ ತಮಿಳನ್ನು ಮಾತನಾಡುವುದಿಲ್ಲ. ಐಸ್ ಕ್ರೀಂಗೂ ಒಂದು ಹೆಸರನ್ನು ಅವರು ಇಟ್ಟಿದ್ದಾರೆ, "ಕುಳಿರ್ ನೀರ್ ಕಳಿ" ಎಂದು! ಈ ರೀತಿಯ ಅಭಿಮಾನ ಇರಬೇಕು.

ADVERTISEMENT

ಹಾಗೆಯೇ, ಫ್ರೆಂಚ್ ಜನರಿಂದಲೂ ನಾವು ಭಾಷಾಭಿಮಾನವನ್ನು ಕಲಿಯಬೇಕು. ಒಂದು ಕಲ್ಲೆಸೆದರೆ ಇಂಗ್ಲೆಂಡಿನಲ್ಲಿ ಬೀಳುವಷ್ಟು ಹತ್ತಿರವಿದ್ದರೂ ಸಹ ಫ್ರಾನ್ಸ್ ದೇಶದ ಜನ ಆಂಗ್ಲ ಭಾಷೆಯಿಂದ ಪ್ರಭಾವಿತರಾಗದೆ, ತಮ್ಮ ಭಾಷೆಯನ್ನು ಉಳಿಸಿಕೊಂಡಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಅವರ ದೇಶದೊಳಗೆ ಬರುವ ಆಸ್ಪದವನ್ನೇ ಕೊಡಲಿಲ್ಲ. ತಮ್ಮ ಭಾಷೆಯ ಮೇಲೆ ಅವರಿಗೆ ಎಷ್ಟು ಅಭಿಮಾನವಿದೆಯೆಂದರೆ, ಆಂಗ್ಲದವರು ಫ್ರಾನ್ಸ್ ದೇಶಕ್ಕೆ ಬಂದು ಫ್ರೆಂಚ್ ಭಾಷೆಯನ್ನು ಕಲಿಯಲು ಆರಂಭಿಸಿದರು. ಆಂಗ್ಲ ಭಾಷೆಯು ಪ್ರಪಂಚದ ಎಲ್ಲಾ ಕಡೆ ಇದ್ದರೂ ಸಹ, ಫ್ರಾನ್ಸ್ ದೇಶದೊಳಗೆ ಆಂಗ್ಲ ಭಾಷೆ ಬರಲು ಅವರು ಬಿಡಲಿಲ್ಲ. ಜನರಲ್ಲಿ ಅವರ ಭಾಷೆಯ ಬಗ್ಗೆ ಆಷ್ಟೊಂದು ಅಭಿಮಾನ. ಬೇರೆ ಭಾಷೆಯನ್ನು ನಾವು ಕಲಿಯಬಾರದು ಎಂಬುದು ನಮ್ಮ ಉದ್ದೇಶವಲ್ಲ. ನಮ್ಮ ಭಾಷೆಯ ಬಗ್ಗೆ ನಮಗೆ ಅಭಿಮಾನವಿರಬೇಕು ಎಂಬುದಕ್ಕೆ ಇದೊಂದು ನಿದರ್ಶನ ಅಷ್ಟೇ. ಭಾಷೆಯ ಬಗ್ಗೆ ನಮಗೆ ಅಭಿಮಾನವಿದ್ದಾಗ, ಮುಂದೆ ಬರುವ ಹಲವಾರು ತಲೆಮಾರುಗಳಿಗೆ ನಾವು ಆ ಭಾಷೆಯಲ್ಲಿರುವ ಸಿರಿಯನ್ನು ತಿಳಿಸಿ, ಭಾಷೆಯನ್ನು ಬೆಳೆಸಬಹುದು. ಇತರರ ಭಾಷೆಗಿಂತಲೂ ನಮ್ಮ ಭಾಷೆಯೇ ದೊಡ್ಡದು ಎನ್ನುವ ಭಾವನೆಯಲ್ಲ. ಹಾಗೆ ಅಂದುಕೊಂಡರೆ ಅದು ದುರಹಂಕಾರವಾಗುತ್ತದೆ.

ಎಲ್ಲಾ ಭಾಷೆಗಳಿಗೂ ತನ್ನದೇ ಆದ ಸ್ಥಾನಮಾನ ಇದೆ. ನಮ್ಮ ಭಾಷೆಯನ್ನು ಬೆಳೆಸಲು ನಾವು ನೀರೆರೆಯಬೇಕು. ಆ ನೀರು ಯಾವುದೆಂದರೆ, ಶ್ರದ್ಧೆ. ಶ್ರದ್ಧೆಯೆಂಬ ನೀರೆರೆದು ಭಾಷೆಯೆಂಬ ಮರವನ್ನು ಬೆಳೆಸಬೇಕು. ಅದರ ಫಲವಾಗಿ ನಮ್ಮಲ್ಲಿ ಜ್ಞಾನವು ಮೂಡುತ್ತದೆ. ಆ ಜ್ಞಾನದ ಉಪಯೋಗವೇನು? ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ, ಜೀವನದಲ್ಲಿ ಸುಖ ಹಾಗೂ ಶಾಂತಿ ಸಿಗುತ್ತದೆ. ನೀವು ಜೀವನದಲ್ಲಿ ನೆಮ್ಮದಿ ಮತ್ತು ಆನಂದವನ್ನು ಅನುಭವಿಸುತ್ತೀರಿ. ಆನಂದವೇ ಅದರ ಫಲ.

ಭಾರತದ ಎಲ್ಲಾ ರಾಜ್ಯಗಳಲ್ಲೂ ಪ್ರತ್ಯೇಕವಾಗಿ ಒಂದು ನಾಡಗೀತೆ ಇರುತ್ತದೆ. ಅವುಗಳಲ್ಲಿ ನಮ್ಮ ಕರ್ನಾಟಕದ ನಾಡಗೀತೆಯು ಬಹಳ ವಿಶಿಷ್ಟವಾದದ್ದು. "ಭಾರತ ಜನನಿಯ ತನುಜಾತೆ" ಎಂದು ನಮ್ಮ ನಾಡಗೀತೆ ಆರಂಭವಾಗುತ್ತದೆ. ದೇಶಭಕ್ತಿಯೊಡನೆ ನಮ್ಮ ರಾಜ್ಯದ ಮೇಲಿನ ಪ್ರೀತಿಯನ್ನು ನಾಡಗೀತೆಯಲ್ಲಿ ಹಾಸುಹೊಕ್ಕಾಗಿ ಹೆಣೆಯಲಾಗಿದೆ. ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಹೀಗೆ ಎಲ್ಲಾ ಪ್ರಾಂತ್ಯಗಳಲ್ಲೂ ಕೂಡ ಅವರವರ ನಾಡಗೀತೆಯನ್ನು ಹಾಡುತ್ತಾರೆ. ಆದರೆ ಪ್ರಾಂತ್ಯದ ಗುಣಗಾನದೊಡನೆ ನಮ್ಮ ದೇಶದ ಗುಣಗಾನವನ್ನೂ ಸೇರಿಸಿ, ಅಖಂಡ ಭಾರತದ ಕಲ್ಪನೆಯನ್ನು ಮಾಡಿಕೊಂಡಿರುವಂತಹ ಶ್ರೇಯಸ್ಸು ನಮ್ಮ ಕರ್ನಾಟಕದ ಕವಿಗಳಿಗೇ ಸಲ್ಲುತ್ತದೆ. ಇದೊಂದು ಬಹಳ ಸುಂದರವಾದ ವಿಷಯ. ಕರ್ನಾಟಕದ ನಾಡಗೀತೆಯಲ್ಲಿ ಪಂಪ, ಹರಿಹರ, ರನ್ನ, ಜನ್ನ, ಹೀಗೆ ಈ ಹೆಸರುಗಳ ಜೊತೆಯಲ್ಲಿ ವಾಲ್ಮೀಕಿ, ವ್ಯಾಸರನ್ನೂ ಕೂಡಾ ಸೇರಿಸಿದ್ದಾರೆ. ಭಾರತದ ಎಲ್ಲಾ ಸಂತರನ್ನೂ ಇದರಲ್ಲಿ ಸ್ಮರಿಸುತ್ತೇವೆ. ಇದು ನಮ್ಮ ವಿಶಾಲ ಮನೋಭಾವ ಹಾಗೂ ವಿಶಾಲ ಹೃದಯದ ಒಂದು ಸೂಚನೆ.

ಕನ್ನಡಿಗರಿಗೆ ಸದಾ ಎಲ್ಲರೂ ನಮ್ಮವರೇ ಎಂಬ ವಿಶಾಲ ಮನೋಭಾವನೆ ಇದೆ. ಆದ್ದರಿಂದ ನೋಡಿ, ನಮ್ಮ ಬೆಂಗಳೂರಿನಲ್ಲಿ ಎಲ್ಲಾ ಭಾಷೆಗಳನ್ನು ಮಾತನಾಡುವವರಿಗೂ ಸ್ಥಾನವನ್ನು ಕೊಟ್ಟಿದ್ದೇವೆ. ಇಲ್ಲಿ ಮೂವತ್ತು - ನಲವತ್ತು ವರ್ಷ ಇದ್ದರೂ ಕೆಲವರು ಕನ್ನಡ ಕಲಿಯದೆಯೇ, ಆರಾಮವಾಗಿ ಜೀವನವನ್ನು ನಡೆಸುತ್ತಿದ್ದಾರೆ. ಇಲ್ಲೇ ಕೆಲಸ ಮಾಡಿ, ಉದ್ಯೋಗ ಮಾಡಿ, ವ್ಯಾಪಾರವನ್ನೂ ನಡೆಸುತ್ತಿರುತ್ತಾರೆ. ಏಕೆಂದರೆ ನಮ್ಮಲ್ಲಿ ಅಷ್ಟೊಂದು ಸಹನ ಶಕ್ತಿಯಿದೆ, ತಾಳ್ಮೆಯಿದೆ, ಅಖಂಡ ಭಾರತದ ಒಂದು ಕಲ್ಪನೆಯಿದೆ ಮತ್ತು ಚಿಕ್ಕಂದಿನಿಂದಲೂ ನಮ್ಮಲ್ಲಿ ಇದು ಬೆಳೆದು ಬಂದಿದೆ. ಕರ್ನಾಟಕದವರು ಶಾಂತಿ ಪ್ರಿಯರು.

ಹಾಗೆಯೇ ಕರ್ನಾಟಕದಲ್ಲಿ ಆಧ್ಯಾತ್ಮಿಕತೆಗೆ ವಿಶೇಷವಾದ ಪ್ರೋತ್ಸಾಹವನ್ನು ನೀಡಲಾಗಿದೆ. ಈ ಭೂಮಿ ಇರುವುದೇ ಹಾಗೆ. ಆದಿಶಂಕರರು ಸ್ಥಾಪನೆ ಮಾಡಿದಂತಹ ಕರ್ನಾಟಕದ ಶೃಂಗೇರಿ ಮಠವೂ ಇಲ್ಲೇ ಇದೆ. ಇಂದಿಗೂ ಸಹ ದಕ್ಷಿಣ ಭಾರತದ ಸಂಗೀತವನ್ನು ಕರ್ನಾಟಕ ಸಂಗೀತ ಎಂದೇ ಕರೆಯುತ್ತಾರೆ. ಸಂಗೀತದಲ್ಲಾಗಲಿ, ಶಾಸ್ತ್ರದಲ್ಲಾಗಲಿ, ಅತೀ ಉನ್ನತವಾದ ಸ್ಥಾನವನ್ನು ನಮ್ಮ ಕರ್ನಾಟಕದ ಸಂಸ್ಕೃತಿಯು ಹೊಂದಿದೆ. ಅದನ್ನು ನಾವು ಮರೆತು ಬೇರೆ ಕಡೆ ಒಲವನ್ನು ಇಟ್ಟುಕೊಂಡರೆ, ಅದು ನಮಗೆ ಸೂಕ್ತವಲ್ಲ. ಇದನ್ನು ನೆನಪಿಸುವ ಸಲುವಾಗಿಯೇ ಪ್ರತಿವರ್ಷವೂ ಮತ್ತೆ ಮತ್ತೆ ನಾವು ರಾಜ್ಯೋತ್ಸವವನ್ನು ಆಚರಿಸುತ್ತೇವೆ.

ಕನ್ನಡ ಭಾಷೆ ಕಲಿಯದವರನ್ನು, ಕನ್ನಡದಲ್ಲಿ ಮಾತನಾಡಲು ಪ್ರೋತ್ಸಾಹಿಸಿ. ನಮ್ಮ ರಾಜ್ಯದಿಂದ ವಿದೇಶಕ್ಕೆ ಹೋಗಿರುವವರಿಗೂ ಕನ್ನಡದಲ್ಲಿ ಮಾತನಾಡಲು ಪ್ರೋತ್ಸಾಹಿಸಿ. ಇಲ್ಲಿಂದ ಸಮುದ್ರ ದಾಟಿ ಆ ಕಡೆ ಹೋದ ತಕ್ಷಣವೇ ಭಾಷೆಯನ್ನೂ ಕೂಡ ಮರೆತುಬಿಡುತ್ತಾರೆ. ಹಾಗೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಭಾಷೆಯನ್ನು ಮರೆತರೆ ಅದರೊಡನೆ ಇರುವ ಸಂಸ್ಕಾರ, ಸಂಸ್ಕೃತಿಯನ್ನೂ ಕೂಡ ನಾವು ಮರೆತುಬಿಡುತ್ತೇವೆ. ಜೀವನದಲ್ಲಿ ಗಾನ, ಧ್ಯಾನ, ಜ್ಞಾನ, ಈ ಮೂರೂ ಅವಶ್ಯಕ. ಇವುಗಳ ಮೂಲ ಭಾಷೆ. ಧ್ಯಾನವು ಭಾಷಾತೀತವಾದರೂ ಸಹ ಮಾತಿನ ಮೂಲಕವೇ ಧ್ಯಾನಕ್ಕೆ ಹೋಗುತ್ತೇವೆ. ಗಾನ, ಧ್ಯಾನ, ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಇರಲು ಸಾಧ್ಯವೇ ಇಲ್ಲ. ಶಾಂತಿ ಇಲ್ಲದ ಕಡೆ ಆನಂದವಿರುವುದಿಲ್ಲ. ಜೊತೆಗೆ ಸಿರಿ ಸಂಪತ್ತೂ ಕೂಡ ದೂರವಾಗುತ್ತದೆ. ನಾಡು, ನುಡಿ, ನೆಲ, ಜಲ, ಇವೆಲ್ಲದರಲ್ಲೂ ಅಭಿಮಾನವನ್ನು ಇಟ್ಟುಕೊಳ್ಳೋಣ. ಎಷ್ಟೋ ನಮ್ಮ ಕನ್ನಡದ ಜನರಿಗೆ ಕನ್ನಡ ಬರೆಯಲೂ ಬರುವುದಿಲ್ಲ. ನಮ್ಮ ರಾಜಧಾನಿಯಲ್ಲೇ ಇದ್ದರೂ, ಮಾತೃಭಾಷೆ ಕನ್ನಡವೇ ಆಗಿದ್ದರೂ ಸಹ, ಅವರಿಗೆ ಕನ್ನಡ ಬರೆಯಲು ಬರುವುದಿಲ್ಲ. ವಿದೇಶದಲ್ಲಿರುವ ಕನ್ನಡ ಸಂಘಗಳಿಗೂ ಇದೇ ವಿನಂತಿ, "ನಿಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಿ; ಕನ್ನಡ ಬರೆಯುವುದನ್ನು, ಓದುವುದನ್ನು ಕಲಿಸಿ."

ನಮ್ಮ ಆಧ್ಯಾತ್ಮಿಕ ಕೇಂದ್ರ ಕರ್ನಾಟಕದ ಶಿವಮೊಗ್ಗದಲ್ಲಿ ಹುಟ್ಟಿ ಇಡೀ ವಿಶ್ವದಲ್ಲೆಲ್ಲಾ ಹಬ್ಬಿದ್ದರೆ, ಅದರ ಮೂಲದಲ್ಲಿ ನಮ್ಮ ಅದ್ಭುತವಾದ ಆಧ್ಯಾತ್ಮಿಕ ಸಂಪತ್ತಿದೆ. ಅದು ನಮ್ಮ ದೇಶದ ಸಂಪತ್ತು ಹಾಗೂ ವಿಶ್ವಕ್ಕೂ ಕೂಡ ಸಂಪತ್ತು. ಯೋಗವಾಗಲಿ, ವೇದಾಂತವಾಗಲಿ, ಇವು ನಮಗೆ ಸಾವಿರಾರು ವರ್ಷಗಳ ಹಿಂದಿನಿಂದ ಬಂದಂತಹ ಸಂಪತ್ತು. ಇದನ್ನು ನಾವು ಸನ್ಮಾನ ಮಾಡೋಣ. ನಮ್ಮ ಹಾಡು, ನೃತ್ಯ, ಕಲೆಯನ್ನು ಎಲ್ಲರೂ ಕಲಿಯಬೇಕು.

ನಮ್ಮ ದಾವಣಗೆರೆ ಬೆಣ್ಣೆದೋಸೆಯು ಈಗ ಬೆಂಗಳೂರಿನಲ್ಲೂ ಬಹಳ ಪ್ರಸಿದ್ಧವಾಗಿದೆ. ಗೋಕಾಕದ ಕರದಂಟು, ಧಾರವಾಡದ ಪೇಡ, ಚನ್ನಪಟ್ಟಣದ ಬೊಂಬೆಗಳು, ಮೈಸೂರಿನ ರೇಷ್ಮೆ, ಮೈಸೂರು ಪಾಕು, ಹೀಗೆ ಆಹಾರದಲ್ಲೂ ಕೂಡ ಕರ್ನಾಟಕದ ಕೊಡುಗೆ ಅಪಾರ. ಮಸಾಲೆ ದೋಸೆ ಕೂಡ ಇಲ್ಲಿಂದಲೇ ಪ್ರಾರಂಭವಾಗಿದೆ! ರಾಗಿಮುದ್ದೆಯ ಬಗ್ಗೆ ಇನ್ನೂ ಎಲ್ಲರಿಗೂ ಗೊತ್ತಾಗಿಲ್ಲ. ರಾಗಿಮುದ್ದೆ ತಿನ್ನುವ ಕಲೆಯೂ ಜನರಿಗೆ ಗೊತ್ತಿಲ್ಲ. ಬಾಯಿಯೊಳಗೆ ಹಾಕಿಕೊಂಡು ಕಚ್ಚಿಬಿಡುತ್ತಾರೆ ಮತ್ತು ಅದು ಬಾಯಿಯಲ್ಲೆಲ್ಲಾ ಅಂಟಾಗಿ ಕಚ್ಚಿಕೊಳ್ಳುತ್ತದೆ. ರಾಗಿ ಮುದ್ದೆಯನ್ನು ತಿನ್ನುವುದೂ ಒಂದು ಕಲೆ! ಮಸಾಲೆ ದೋಸೆ ಈಗ ಎಲ್ಲಾ ಕಡೆಯೂ ಸಿಗುತ್ತದೆ. ನೀವು ಉತ್ತರಾಖಂಡಕ್ಕೆ ಹೋದರೂ ಮಸಾಲೆ ದೋಸೆ ಸಿಗುತ್ತದೆ. ಗೊಜ್ಜವಲಕ್ಕಿ ಕರ್ನಾಟಕದಲ್ಲಿ ಬಿಟ್ಟರೆ ಬೇರೆ ಯಾವ ಪ್ರಾಂತ್ಯದಲ್ಲೂ ಸಿಗುವುದಿಲ್ಲ. ಪ್ರತಿ ಭಾನುವಾರವೂ ನಮ್ಮಲ್ಲಿ ಗೊಜ್ಜವಲಕ್ಕಿಯನ್ನೇ ಪ್ರಸಾದವಾಗಿ ಕೊಡಲು ಹೇಳಿದ್ದೇವೆ. ಮಂಗಳೂರಿನ ಊಟವೇ ಬೇರೆ. ಇಡ್ಲಿಯನ್ನು ಕೊಟ್ಟೆ ಕಡುಬು ಎನ್ನುತ್ತಾರೆ. ಹಲಸಿನ ಹಪ್ಪಳ, ಹೀಗೆ ನಮ್ಮಲ್ಲಿ ಬೇರೆ ಬೇರೆ ಪ್ರಾಂತ್ಯಗಳ ಆಹಾರವನ್ನು ಉಳಿಸಿ ಬೆಳೆಸಬೇಕು.

ಮಳೆ ಬರದೆ ರೈತರು ಬಹಳ ಕಷ್ಟ ಪಡುತ್ತಾರೆ. ಆದಕ್ಕಾಗಿ ನಮ್ಮ ಅಂತರ್ಜಲದ ಮಟ್ಟವನ್ನು ಹೆಚ್ಚು ಮಾಡಿಕೊಳ್ಳಬೇಕು. ಮಳೆ ಬಂದಾಗ ನೀರನ್ನು ಶೇಖರಣೆ ಮಾಡಲು ಅಂತರ್ಜಲ ಮಟ್ಟವನ್ನು ವೃದ್ಧಿ ಮಾಡಿಕೊಳ್ಳಬೇಕು. ಅಂತರ್ಜಲ ಹೆಚ್ಚಾಗಿದ್ದರೆ ಮಳೆ ನೀರಿನ ಮೇಲೆ ನಾವು ತುಂಬಾ ಆವಲಂಬಿಸಬೇಕಿಲ್ಲ. ಮಳೆಗಾಲದಲ್ಲಿ ಸಾಕಷ್ಟು ಮಳೆಯಾದರೂ ಸಹ, ಎಲ್ಲಾ ನೀರು ಹರಿದು ಹೋಗಿಬಿಡುತ್ತದೆ.

ಒಂದು ಎಕರೆ ನೆಲದಲ್ಲಿ ಐದು ರೀತಿಯ ಬೆಳೆಗಳನ್ನು ಒಮ್ಮೆಲೇ ಬೆಳೆಸಬೇಕು, ಹಳದಿ, ಮೆಂತೆಸೊಪ್ಪು, ಸೋರೆಕಾಯಿ, ಹಾಗಲಕಾಯಿ, ಕುಂಬಳಕಾಯಿ, ಹೀಗೆ. ಇಷ್ಟನ್ನೂ ಒಮ್ಮೆಲೇ ಬೆಳೆಸಿ ಇದರಿಂದ ಐದರಷ್ಟು ಹೆಚ್ಚು ಲಾಭ ಗಳಿಸಬಹುದು. ಮಳೆಯಾಗದೆ ಇದ್ದರೂ ಕೂಡ ಬೆಳೆಗೆ ಯಾವ ಕೊರತೆಯೂ ಬರದಂತೆ ನೋಡಿಕೊಳ್ಳಬಹುದು.

"ಲೋಕಾ ಸಮಸ್ತಾ ಸುಖಿನೋ ಭವಂತು", ಎಂದರೆ ಎಲ್ಲರೂ ಸುಖವಾಗಿರಲಿ ಎಂದು ಹಾರೈಸುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.