‘ಕರ್ನಾಟಕ’ಕ್ಕೆ ಸುವರ್ಣ ಸಂಭ್ರಮದ ಕ್ಷಣ. ಇಡೀ ಕನ್ನಡ ನಾಡನ್ನು ಪ್ರತಿನಿಧಿಸುವಂತಹ ಹೆಸರಿಡಲು ನಿರ್ಧರಿಸಿದಾಗ 1973ರ ನವೆಂಬರ್ 1ರಂದು, ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಕರ್ನಾಟಕ ನಾಮಫಲಕವನ್ನು ಸಾಂಕೇತಿಕವಾಗಿ ಅನಾವರಣ ಮಾಡಿದ ಅಪೂರ್ವ ಚಿತ್ರವಿದು. ಆ ವೇಳೆ, ರಾಜ್ಯಪಾಲರಾಗಿದ್ದ ಮೋಹನ್‌ಲಾಲ್ ಸುಖಾಡಿಯಾ, ಶಿಕ್ಷಣ ಸಚಿವರಾಗಿದ್ದ ಎ.ಆರ್. ಬದರಿನಾರಾಯಣ, ಬೆಂಗಳೂರಿನ ಮೇಯರ್ ಆಗಿದ್ದ ಅನಂತ ನಾರಾಯಣ ಅವರಿದ್ದರು. ಸುವರ್ಣ ಸಂಭ್ರಮದ ತಿಟ್ಹತ್ತಿ ತಿರುಗಿ ನೋಡಿದಾಗ ಕಂಡ ಐವತ್ತು ಮೈಲಿಗಲ್ಲುಗಳ ನೋಟವನ್ನು ‘ಪ್ರಜಾವಾಣಿ’ ಇಂದಿನ ಸಂಚಿಕೆಯಲ್ಲಿ ದಾಖಲಿಸಿದೆ
1. ಹೆಸರಾಯಿತು ಕರ್ನಾಟಕ : ‘ಕರ್ನಾಟಕದ ಪ್ರಾಣೋಪಾಸಕರು’ ಕಂಡರಿಸಿದ ಕನಸು 1973ರ ನವೆಂಬರ್ 1ರಂದು ನನಸಾಗಿ ಮೈಸೂರು ರಾಜ್ಯ, ಕರ್ನಾಟಕವೆಂಬ ನಾಮಧೇಯವನ್ನು ಪಡೆಯಿತು. ಮದ್ರಾಸ್, ಬಾಂಬೆ, ಹೈದರಾಬಾದ್ ಪ್ರಾಂತ್ಯಗಳ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ 1956ರ ನವೆಂಬರ್ 1ರಂದೇ ಉದಯವಾದರೂ ಇಡೀ ನಾಡನ್ನು ಪ್ರತಿನಿಧಿಸುವಂತಹ ಹೆಸರು ಪಡೆಯಲು ಮತ್ತೆ 17 ವರ್ಷ ಕಾಯಬೇಕಾಯಿತು. ಕನ್ನಡ ನಾಡಿಗೆ ಕರ್ನಾಟಕ ಎಂಬುದಾಗಿ ನಾಮಕರಣ ಮಾಡಿದ್ದು ದೇವರಾಜ ಅರಸು ನೇತೃತ್ವದ ಸರ್ಕಾರ. ಅಂದಾನಪ್ಪ ದೊಡ್ಡಮೇಟಿ, ಕೆ.ಎಚ್.ಪಾಟೀಲ, ಶಾಂತವೇರಿ ಗೋಪಾಲಗೌಡ ಅವರಂತಹ ನಾಯಕರ ಒತ್ತಾಸೆಯೂ ನಮ್ಮ ನಾಡು ಕರ್ನಾಟಕ ಎಂಬ ಹೆಸರು ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಆಲೂರು ವೆಂಕಟರಾಯರಂತಹ ಹಿರಿಯರು ಬದುಕಿನುದ್ದಕ್ಕೂ ‘ಕರ್ನಾಟಕ’ಕ್ಕಾಗಿ ಅವಿರತ ಹೋರಾಟ ನಡೆಸಿದ್ದೂ ಸ್ಮರಣೀಯ
2. ಹುಲಿ ಸಂರಕ್ಷಣೆಗೆ ಮಾದರಿ: ಅಳಿವಿನಂಚಿಗೆ ಸಾಗಿದ್ದ ಹುಲಿಗಳ ಸಂತತಿ ರಕ್ಷಣೆಯಲ್ಲಿ ಹೊಸ ಭಾಷ್ಯ ಬರೆದಿದ್ದು 1973ರ ನ.16ರಂದು ಉದ್ಘಾಟನೆಯಾದ ಬಂಡೀಪುರ ಹುಲಿ ಯೋಜನೆ
3. ಜಾಗತಿಕ ಮಟ್ಟದ ಬಿ–ಸ್ಕೂಲ್ : 1973ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ (ಐಐಎಂಬಿ) ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿದ ಬಿ–ಸ್ಕೂಲ್
4. ರಾಷ್ಟ್ರದ ಕ್ರಿಕೆಟ್ ಸಾರ್ವಭೌಮ: 15 ಸಲ ರಣಜಿ ಟ್ರೋಫಿ ಜಯಿಸಿದ್ದ ಮುಂಬೈ ತಂಡವನ್ನು 1973-74ರಲ್ಲಿ ಸೆಮಿ ಫೈನಲ್‌ನಲ್ಲಿ ಮಣಿಸಿ ಫೈನಲ್‌ನಲ್ಲಿ ರಾಜಸ್ಥಾನವನ್ನು ಸೋಲಿಸಿ ಕರ್ನಾಟಕ ಮೊದಲ ಬಾರಿ ರಣಜಿ ಟ್ರೋಫಿ ತನ್ನದಾಗಿಸಿತು
5. ಸಿನಿಮಾದ ಹೊಸ ಅಲೆ: ಎನ್. ಲಕ್ಷ್ಮೀನಾರಾಯಣ್ ನಿರ್ದೇಶನದ ‘ನಾಂದಿ’ (1964) ‘ಹೊಸ ಅಲೆ’ಗೆ ಮುನ್ನುಡಿ ಬರೆಯಿತು. ಆ ಅಲೆ ಸ್ಪಷ್ಟವಾಗಿ ಪ್ರಕಟಗೊಂಡ ಸಿನಿಮಾ ಯು.ಆರ್. ಅನಂತಮೂರ್ತಿ ಕಥೆ ಆಧರಿಸಿ ಪಟ್ಟಾಭಿರಾಮ ರೆಡ್ಡಿ ನಿರ್ದೇಶಿಸಿದ ‘ಸಂಸ್ಕಾರ’ (1970). ಕನ್ನಡದ ಮೊದಲ ಸ್ವರ್ಣಕಮಲ ಪುರಸ್ಕೃತ ಚಿತ್ರವಿದು
6. ಕನ್ನಡ ಚಳವಳಿ: ಅರವತ್ತು ಎಪ್ಪತ್ತರ ದಶಕದ ಕನ್ನಡ ಚಳವಳಿ ಕರ್ನಾಟಕ–ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಬಲಪಡಿಸಿತು. ಡಬ್ಬಿಂಗ್ ವಿರೋಧಿ ಚಳವಳಿ ಕನ್ನಡ ಸಿನಿಮಾದ ಬೆನ್ನುಮೂಳೆ ಗಟ್ಟಿಗೊಳಿಸಿತು. ಬೆಂಗಳೂರು ಕನ್ನಡಿಗರ ಅಳುಕು ಆತ್ಮವಿಶ್ವಾಸವಾಗಿ ಬದಲಾಗಿ, ಕಾರ್ಖಾನೆಗಳಲ್ಲಿ ಕನ್ನಡಿಗರ ಸೊಲ್ಲು ಕೇಳುವಂತಾಯಿತು. ಅನಕೃ, ಮ. ರಾಮಮೂರ್ತಿ, ಎಂ.ಚಿದಾನಂದಮೂರ್ತಿ, ವಾಟಾಳ್ ನಾಗರಾಜ್, ಜಿ.ನಾರಾಯಣಕುಮಾರ್ ಮತ್ತಿತರ ನಾಯಕರು ಕನ್ನಡ ಚಳವಳಿಗೆ ಜೀವ ತುಂಬಿದರು
7. ನವ್ಯ, ದಲಿತ, ಬಂಡಾಯ ಸಾಹಿತ್ಯ: ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ, ದಲಿತ, ಬಂಡಾಯ ಎಂದು 20ನೆಯ ಶತಮಾನದ ಸಾಹಿತ್ಯ ಚಳವಳಿಗಳನ್ನು ವಿಮರ್ಶಕರು ಗುರುತಿಸಿದ್ದಾರೆ. ಇವೆಲ್ಲವೂ ಒಂದಕ್ಕೊಂದು ಪ್ರತಿಕ್ರಿಯಾತ್ಮಕವಾಗಿ ಹುಟ್ಟಿದ ಪ್ರಕಾರಗಳು. ಬಿ.ಎಂ.ಶ್ರೀಕಂಠಯ್ಯನವರು ರಚಿಸಿದ ಕಾವ್ಯದಿಂದ ‘ನವೋದಯ’ ರಚನೆ ಆರಂಭವಾಯಿತು. ಕುವೆಂಪು, ದ.ರಾ. ಬೇಂದ್ರೆ ಅವರೂ ಅದೇ ಮಾರ್ಗದಲ್ಲಿ ಸಾಹಿತ್ಯ ರಚಿಸಿದರು. ನವ್ಯಕಾವ್ಯವು ಈ ಕಟ್ಟನ್ನು ಒಡೆದು, ಹಾಡುವಂತಹ ಕಾವ್ಯವೇ ಬೇಕಿಲ್ಲ ಎನ್ನುವುದನ್ನು ಪ್ರತಿಪಾದಿಸಿತು. ದೇವನೂರ ಮಹಾದೇವ, ಸಿದ್ದಲಿಂಗಯ್ಯ ಅವರಂತಹವರು ರಚಿಸಿದ ಸಾಮಾಜಿಕ ಹೊಣೆಗಾರಿಕೆಯ ಸಾಹಿತ್ಯವು ದಲಿತ ಹಾಗೂ ದಲಿತ ಬಂಡಾಯ ಪ್ರಕಾರಕ್ಕೆ ಕೆಲವು ಉದಾಹರಣೆಗಳು
8. ಜಯದೇವ ಆಸ್ಪತ್ರೆ–ಆರೋಗ್ಯ ಕ್ಷೇತ್ರದ ಹೆಗ್ಗುರುತು: ‘ಚಿಕಿತ್ಸೆ ಮೊದಲು–ಪಾವತಿ ನಂತರ’ ಎಂಬ ಪರಿಕಲ್ಪನೆಯ ಅಡಿಯಲ್ಲಿ 1972ರಲ್ಲಿ ಸ್ಥಾಪನೆಯಾದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ರಾಜ್ಯಕ್ಕೊಂದು ಮುಕುಟಮಣಿ
9. ಬಂಗಾರದ ಮನುಷ್ಯ: ಸಿದ್ದಲಿಂಗಯ್ಯ ನಿರ್ದೇಶನದ ‘ಬಂಗಾರದ ಮನುಷ್ಯ’ ಆಧುನಿಕ ಕರ್ನಾಟಕದ ಆಶೋತ್ತರಗಳ್ನು ಪ್ರತಿನಿಧಿಸಿದ ಹಾಗೂ ನಾಡಿನ ಮೇಲೆ ಗಾಢ ಪರಿಣಾಮ ಬೀರಿದ ಮುಖ್ಯವಾಹಿನಿಯ ಪ್ರಮುಖ ಸಿನಿಮಾ. 1972–1973ರಲ್ಲಿ, ಒಟ್ಟು 104 ವಾರಗಳ ದಾಖಲೆ ಪ್ರದರ್ಶನದ ಮೂಲಕ ಚಿತ್ರೋದ್ಯಮದ ಸ್ಥಿರತೆಗೆ ಕಾರಣವಾಯಿತು
10. ಗಟ್ಟಿ ಚಿಂತನೆಗೆ ದಾರಿಯಾದ ‘ಬೂಸಾ’ ಹೇಳಿಕೆ: ಅರಸು ಸಂಪುಟದಲ್ಲಿ (1974) ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಕನ್ನಡ ಸಾಹಿತ್ಯದ ಬಗ್ಗೆ ಹೇಳಿದ ಮಾತು ತೀವ್ರ ಪರ–ವಿರೋಧದ ಪ್ರತಿಭಟನೆಗಳಿಗೆ ಕಾರಣವಾಗಿ ಅವರು ಸಚಿವ ಪದವಿಗೆ ರಾಜೀನಾಮೆ ನೀಡಬೇಕಾಗಿ ಬಂತು. ಈ ಹೇಳಿಕೆ ಮತ್ತು ಅದರ ನಂತರದ ಪರಿಣಾಮಗಳು ಕನ್ನಡ ಸಾಹಿತ್ಯ–ಸಂಸ್ಕೃತಿಯ ಮೌಲ್ಯನಿರ್ಣಯಕ್ಕೆ ಹೊಸ ಆಯಾಮ ನೀಡಿದವು
11. ಹಾಲಿನ ಹೊಳೆ ಹರಿಸಿದ ಕೆಎಂಎಫ್: ಗುಜರಾತ್‌ನ ಅಮುಲ್ ಮಾದರಿಯಲ್ಲಿ ಆರಂಭವಾದ ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್) ರಾಜ್ಯದಲ್ಲಿ ಕ್ಷೀರ ಕ್ರಾಂತಿಯನ್ನೇ ಮಾಡಿದೆ. ಸಹಕಾರ ತತ್ವದ ಆಧಾರದಲ್ಲಿ ಹಳ್ಳಿ ಮಟ್ಟದಲ್ಲಿ ಕಾರ್ಯಾರಂಭ ಮಾಡಿದ ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರ ಜೀವನಾಡಿಯಾದವು. 15 ಒಕ್ಕೂಟಗಳೊಂದಿಗೆ, ಹಾಲಿನ ಸಂಗ್ರಹ ಮತ್ತು ಮಾರಾಟದಲ್ಲಿ ಭಾರತದಲ್ಲಿ ಎರಡನೇ ಸ್ಥಾನ, ದಕ್ಷಿಣದಲ್ಲಿ ಮೊದಲ ಸ್ಥಾನ ಪಡೆದಿರುವ ಕೆಎಂಎಫ್, ರೈತರ ಉಪಕಸುಬನ್ನೇ ಒಂದು ಉದ್ಯಮವನ್ನಾಗಿ ಪರಿವರ್ತಿಸಿದೆ
12. ಹಾವನೂರು ವರದಿ ಜಾರಿ: ‘ಹಿಂದುಳಿದ ವರ್ಗಗಳ ಬೈಬಲ್’. ದೇವರಾಜ ಅರಸು ಈ ವರದಿಯನ್ನು ಹಾಗಂತ ಬಣ್ಣಿಸಿದ್ದರು. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ 1972ರ ಆಗಸ್ಟ್‌ನಲ್ಲಿ ಎಲ್.ಜಿ. ಹಾವನೂರು ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಆಳವಾಗಿ ಅಧ್ಯಯನ ನಡೆಸಿ, ಸೂಕ್ತ ಶಿಫಾರಸುಗಳೊಂದಿಗೆ 1975ರ ನವೆಂಬರ್‌ನಲ್ಲಿ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿತು. ಕೆಲವು ಮಾರ್ಪಾಡುಗಳೊಂದಿಗೆ 1977ರ ಫೆಬ್ರುವರಿಯಲ್ಲಿ ಅರಸು ನೇತೃತ್ವದ ಸರ್ಕಾರ ಈ ವರದಿಯನ್ನು ಜಾರಿಗೆ ತಂದಿತು
13. ತುಳಿತಕ್ಕೊಳಗಾದವರ ಧ್ವನಿ ದಸಂಸ: ಶತಮಾನಗಳಿಂದ ತುಳಿತಕ್ಕೆ ಒಳಗಾದವರ ಕೊರಳ ದನಿಯಾಗಿ, ಎದೆಯುಬ್ಬಿಸಿ ನಿಲ್ಲುವ ಕಾಲಿಗೆ ಬಲವಾಗಿ ರೂಪುಗೊಂಡಿದ್ದೇ ಕರ್ನಾಟಕ ದಲಿತ ಸಂಘರ್ಷ ಸಮಿತಿ. ಶಾಸಕರಾಗಿದ್ದ ಬಸವಲಿಂಗಪ್ಪ, ಬಿ.ಎಂ.ತಿಪ್ಪೇಸ್ವಾಮಿ, ಪ್ರೊ.ಬಿ. ಕೃಷ್ಣಪ್ಪ, ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಕೋಟಗಾನಹಳ್ಳಿ ರಾಮಯ್ಯ, ಎನ್. ವೆಂಕಟೇಶ್ ಅವರ ಪ್ರೇರಣೆ ಇದರ ಹಿಂದಿತ್ತು. ನಾಡಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ವಲಯದಲ್ಲಿ ಸಂಚಲನ ಮೂಡಿಸಿದ ಈ ಚಳವಳಿ, ದಲಿತರಲ್ಲಿ ಸ್ವಾಭಿಮಾನದ ಕಿಚ್ಚು ಹತ್ತಿಸಿ ಬದಲಾವಣೆಯ ಹರಿಕಾರನಾಯಿತು
14. ಭೂ ಕ್ರಾಂತಿಗೆ ದಿಟ್ಟ ಹೆಜ್ಜೆ: ಕಾಗೋಡು ಚಳವಳಿಯ ಪರಿಣಾಮವಾಗಿ ಉಳುವವನೆ ಹೊಲದೊಡೆಯ ಆಶಯದ ಮೇರೆಗೆ ಜಾರಿಗೊಳಿಸಿದ ಈ ಶಾಸನ ಗೇಣಿದಾರರಿಗೆ ಭೂಮಿ, ಕೃಷಿ ಭೂಮಿಗೆ ಮಿತಿ ಹಾಕಿದ ಕ್ರಾಂತಿಕಾರಕ ಹೆಜ್ಜೆ. 1961ರ ಕಾಯ್ದೆಗೆ ಬಲವಾದ ತಿದ್ದುಪಡಿ ತಂದಿದ್ದು ದೇವರಾಜ ಅರಸರು. ಭೂಮಾಲೀಕರ ಬಳಿ ಇದ್ದ ಜಮೀನು, ಉಳುಮೆ ಮಾಡುತ್ತಿದ್ದವರಿಗೆ ದಕ್ಕುವಂತಾಗಿ ಕೃಷಿ ಕ್ಷೇತ್ರದಲ್ಲಿ ದೊಡ್ಡಮಟ್ಟದ ಬದಲಾವಣೆ ತಂದ ಕಾಯ್ದೆ ಇದು. ಬಳಿಕ ದೇಶವ್ಯಾಪಿ ಜಾರಿಗೊಳಿಸಲಾಯಿತು
15. ದೇವದಾಸಿ ಪದ್ಧತಿ ನಿಷೇಧ: ದೇವರ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ದೇವದಾಸಿಯರನ್ನಾಗಿ ಮಾಡಿ, ಬಳಿಕ ಅವರನ್ನು ಮೇಲ್ವರ್ಗದ ಪುರುಷರು ತಮ್ಮ ಕಾಮತೃಷೆಗಾಗಿ ಶೋಷಿಸುತ್ತಿದ್ದರು. ಶೇ 96.1ರಷ್ಟು ಎಸ್‌ಸಿ ಎಸ್‌ಟಿ ಮಹಿಳೆಯರೇ ಈ ಅನಿಷ್ಟ ಪದ್ಧತಿಗೆ ಬಲಿಯಾಗಿದ್ದಾರೆ. ಇಂಥ ಕೆಟ್ಟ ಪದ್ಧತಿ ತಡೆಗಟ್ಟಲು ಕರ್ನಾಟಕ ಸರ್ಕಾರ, ‘ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ ) ಕಾಯ್ದೆ– 1982ರಲ್ಲಿ ಜಾರಿಗೆ ತಂದಿತು
16. ಹಸಿರು ಉಳಿಸಿದ ‘ಅಪ್ಪಿಕೋ ಚಳವಳಿ’: 1983ರ ಸೆ.8 ರಂದು ಶಿರಸಿ ತಾಲ್ಲೂಕಿನ ಕೆಳಾಸೆ ಕುದ್ರಗೋಡ ಅರಣ್ಯದಲ್ಲಿ ಆರಂಭಗೊಂಡ ಅಪ್ಪಿಕೋ ಚಳವಳಿ ಮಲೆನಾಡು ಪೂರ್ತಿ ವ್ಯಾಪಿಸಿತು. ಸರ್ಕಾರ ಈ ಹೋರಾಟಕ್ಕೆ ಮಣಿದು ಅರಣ್ಯ ನೀತಿಯಲ್ಲಿ ಪರಿವರ್ತನೆ ಮಾಡಿದ್ದಲ್ಲದೇ, ಮರ ಕಡಿಯುವುದನ್ನು ನಿಷೇಧಿಸಿತು
17. ಬಡವರಿಗೆ ಬ್ಯಾಂಕ್ ಬಾಗಿಲು ತೆರೆದ ಸಾಲಮೇಳ: ರಾಷ್ಟ್ರೀಕರಣದ ಬಳಿಕವೂ ಬಡವರು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಆಗುತ್ತಿರಲಿಲ್ಲ. ಕೇಂದ್ರದಲ್ಲಿ ಹಣಕಾಸು ರಾಜ್ಯ ಸಚಿವರಾಗಿದ್ದ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ 1983ರಲ್ಲಿ ದೇಶದಾದ್ಯಂತ ಸಾಲ ಮೇಳ ಆರಂಭಿಸಲಾಯಿತು
18. ವಿಶ್ವ ಕನ್ನಡ ಸಮ್ಮೇಳನ: ಜಗತ್ತಿನಾದ್ಯಂತ ಹರಡಿರುವ ಕನ್ನಡಿಗರನ್ನು ಒಂದೇ ವೇದಿಕೆಗೆ ತಂದು, ಕನ್ನಡ ನಾಡು ನುಡಿಯ ಬಗ್ಗೆ ಚರ್ಚಿಸುವ ಆಶಯದೊಂದಿಗೆ ಆರಂಭಗೊಂಡಿದ್ದು ವಿಶ್ವ ಕನ್ನಡ ಸಮ್ಮೇಳನ. 1985ರಲ್ಲಿ ಮೊದಲ ಸಮ್ಮೇಳನ ಮೈಸೂರಿನಲ್ಲಿ ನಡೆಯಿತು
19. ಕಾಂಗ್ರೆಸ್ಸೇತರ ಮೊದಲ ಸರ್ಕಾರ ಗುಂಡೂರಾವ್ ನೇತೃತ್ವದ ಸರ್ಕಾರದ ಜನ ವಿರೋಧಿ ನೀತಿಯಿಂದಾಗಿ ರಾಜ್ಯದಲ್ಲಿ ಹರಳುಗಟ್ಟಿದ್ದ ಕಾಂಗ್ರೆಸ್ ವಿರುದ್ಧದ ಆಕ್ರೋಶ, ಎಚ್.ಡಿ. ದೇವೇಗೌಡ–ಎಸ್.ಆರ್. ಬೊಮ್ಮಾಯಿಯವರ ಜನತಾಪಕ್ಷ ಹಾಗೂ ಎಸ್.ಬಂಗಾರಪ್ಪನವರ ಕ್ರಾಂತಿರಂಗದ ಸಂಘಟಿತ ಹೋರಾಟದ ಫಲವಾಗಿ 1983ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂತು
20. ಕಂಪ್ಯೂಟರ್‌ನಲ್ಲಿ ಕನ್ನಡ ಕಂಪ್ಯೂಟರ್ ಪ್ರವರ್ಧಮಾನಕ್ಕೆ ಬರುವ ಹೊತ್ತಿನಲ್ಲೇ ತಂತ್ರಜ್ಞ ಕೆ.ಪಿ.ರಾವ್ 1981ರಲ್ಲಿ ಸೇಡಿಯಾಪು ಕನ್ನಡ ತಂತ್ರಾಂಶ ಅಭಿವೃದ್ಧಿ ಪಡಿಸಿದರು. ಕನ್ನಡಕ್ಕೆ ಸಂಬಂಧಿಸಿದ ಮೊದಲ ತಂತ್ರಾಂಶ. 1998ರಲ್ಲಿ ಬರಹ ಕನ್ನಡ, 2001ರಲ್ಲಿ ಸರ್ಕಾರದ ನುಡಿ ತಂತ್ರಾಂಶ ಬಳಕೆಗೆ ಬಂತು
21. ರೈತರ ಕಸುವಿಗೆ ವೇದಿಕೆ: ಅನ್ನದಾತರಿಗೂ ಸ್ವಾಭಿಮಾನದ ಬದುಕು ಇದೆ ಎಂದು ತೋರಿಸಿಕೊಟ್ಟಿದ್ದೇ ಕರ್ನಾಟಕ ರಾಜ್ಯ ರೈತ ಸಂಘ. ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಎಚ್.ಎಸ್.ರುದ್ರಪ್ಪ ಹಾಗೂ ಎನ್.ಡಿ. ಸುಂದರೇಶ್ ಅವರು ಮುಂಚೂಣಿಯಲ್ಲಿದ್ದು ಸ್ಥಾಪಿಸಿದ್ದ ರೈತಸಂಘ, ದೇಶ–ವಿದೇಶದಲ್ಲೂ ರೈತ ಹೋರಾಟವನ್ನು ಹರಡಿತ್ತು. ಮಾನ್ಸೆಂಟೋ, ಕಾರ್ಗಿಲ್ ಹಾಗೂ ಕೆಂಟುಕಿ ಫ್ರೈಡ್ ಚಿಕನ್ ಕಂಪನಿ ಮೇಲೆ ದಾಳಿ ನಡೆಸಿದ್ದರಿಂದಾಗಿ ಸಂಘ ಇಡೀ ಜಗತ್ತಿನಲ್ಲಿ ಸುದ್ದಿಯಾಗಿತ್ತು
22. ಪ್ರಕಾಶಿಸಿದ ಪಡುಕೋಣೆ : ಭಾರತದ ಬ್ಯಾಡ್ಮಿಂ ಟನ್ ಕ್ಷೇತ್ರದ ದಿಗ್ಗಜ ಪ್ರಕಾಶ್ ಪಡುಕೋಣೆ. 1980ರಲ್ಲಿ ವಿಶ್ವದ ಅಗ್ರ ಕ್ರಮಾಂಕಕ್ಕೆ ಏರಿದ ದೇಶದ ಮೊದಲ ಆಟಗಾರ ಅವರು. ಅದೇ ವರ್ಷ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಗೆದ್ದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಅವರದಾಯಿತು
23. ಕನ್ನಡ ಪ್ರಜ್ಞೆ ಬಡಿದೆಬ್ಬಿಸಿದ ಚಳವಳಿ :ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನ ಹೇಗಿರಬೇಕು ಎನ್ನುವುದನ್ನು ಅಧ್ಯಯನ ಮಾಡಿ ವಿ.ಕೃ.ಗೋಕಾಕ್ ನೇತೃತ್ವದ ಸಮಿತಿ ನೀಡಿದ್ದ ವರದಿ ಜಾರಿಗಾಗಿ ನಡೆದ ಹೋರಾಟ ಐತಿಹಾಸಿಕ. ಸಾಹಿತಿಗಳು, ಹೋರಾಟಗಾರರು ಆರಂಭಿಸಿದ ಈ ಚಳವಳಿ ವರನಟ ರಾಜ್‌ಕುಮಾರ್ ಪ್ರವೇಶದಿಂದ ಬಿರುಸು ಪಡೆದಿತ್ತು. ಸರ್ಕಾರ ಕನ್ನಡಿಗರ ಒಕ್ಕೊರಲ ಧ್ವನಿಗೆ ಮಣಿಯಲೇಬೇಕಾಯಿತು. ಭಾಷೆಯ ಉಳಿವಿಗಾಗಿ ಹೋರಾಡಬೇಕಾದ ಪ್ರಜ್ಞೆಯನ್ನು ಕನ್ನಡಿಗರಲ್ಲಿ ರೂಪಿಸಿದ್ದು ಗೋಕಾಕ್ ಚಳವಳಿ
24. ಲೋಕಾಯುಕ್ತ ಸ್ಥಾಪನೆ :ಭ್ರಷ್ಟಾಚಾರ ಮತ್ತು ದುರಾಡಳಿತದ ನಿಯಂತ್ರಣಕ್ಕಾಗಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ ಕರ್ನಾಟಕ ಲೋಕಾ ಯುಕ್ತ ಕಾಯ್ದೆ 1984 ರಲ್ಲಿ ಸಿದ್ಧವಾ ದರೂ, 1986 ರಲ್ಲಿ ಲೋಕಾಯುಕ್ತ ಅಸ್ತಿತ್ವಕ್ಕೆ ಬಂತು
25. ರಂಗಾಯಣ : 1989ರಲ್ಲಿ ಸ್ಥಾಪನೆಯಾದ, ಬಿ.ವಿ.ಕಾರಂತರ ಕನಸಿನ ಕೂಸಾದ ‘ರಂಗಾಯಣ’ವು ದಕ್ಷಿಣ ಭಾರತದ ಮೊದಲ ರಂಗತರಬೇತಿ ಶಾಲೆಯಾಗಿ ನೂರಾರು ನಾಟಕ ಪ್ರಯೋಗಗಳನ್ನು ಮಾಡಿದೆ
26. ಬೆತ್ತಲೆ ಸೇವೆ ನಿಷೇಧ : ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಚಂದ್ರಗುತ್ತಿಯಲ್ಲಿ ಗ್ರಾಮದೇವತೆ ರೇಣುಕಾ ಎಲ್ಲಮ್ಮನ ಹೆಸರಿನಲ್ಲಿ ಹೆಣ್ಣು, ಗಂಡು ಇಬ್ಬರೂ ಮಾಡುತ್ತಿದ್ದ ‘ಬೆತ್ತಲೆ ಸೇವೆ’ ಎಂಬ ಅನಿಷ್ಟ ಪದ್ಧತಿ ವಿರುದ್ಧದ ಹೋರಾಟದ ಫಲವಾಗಿ ಜೆ.ಎಚ್.ಪಟೇಲ್ ಸರ್ಕಾರವು ಚನ್ನವೀರಪ್ಪ ಆಯೋಗವನ್ನು ರಚಿಸಿ, 1987ರ ಫೆ. 27ರಂದು ಬೆತ್ತಲೆ ಸೇವೆಯನ್ನು ನಿಷೇಧಿಸಿತು. ‘ಕರ್ನಾಟಕ ಮೌಢ್ಯ ನಿಷೇಧ ಕಾಯ್ದೆ- 2017’ ಕೂಡಾ ಬೆತ್ತಲೆ ಸೇವೆ ನಿಷೇಧವನ್ನು ಪುನರುಚ್ಚರಿಸಿದೆ
27. ಜಿಲ್ಲೆಗಳ ವಿಭಜನೆ : ರಾಜ್ಯ ಉದಯವಾದ ನಂತರ ಮೊದಲ ಬಾರಿಗೆ 1986ರಲ್ಲಿ ಬೆಂಗಳೂರು ಜಿಲ್ಲೆಯನ್ನು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಾಗಿ ವಿಭಾಗಿಸಲಾಗಿತ್ತು. ನಂತರ 1997ರಲ್ಲಿ ಬಾಗಲಕೋಟೆ, ದಾವಣಗೆರೆ, ಕೊಪ್ಪಳ, ಗದಗ, ಹಾವೇರಿ, ಚಾಮರಾಜನಗರ ಜಿಲ್ಲೆಗಳು ರಚನೆಯಾದವು
28. ಕನ್ನಡ ವಿ.ವಿ.: ಕನ್ನಡ ಭಾಷೆಯ ಸಂಶೋಧನೆಗೆಂದೇ ವಿಶ್ವವಿದ್ಯಾಲಯ ಬೇಕು ಎಂಬ ಪರಿಕಲ್ಪನೆಯಲ್ಲಿ 1991ರಲ್ಲಿ ಸ್ಥಾಪನೆಗೊಂಡಿದ್ದು ಹಂಪಿ ಕನ್ನಡ
ವಿಶ್ವವಿದ್ಯಾಲಯ
29. ಬೊಮ್ಮಾಯಿ ಪ್ರಕರಣದ ಚಾರಿತ್ರಿಕ ತೀರ್ಪು : ಸಂವಿಧಾನ 356ನೇ ವಿಧಿಯ ದುರ್ಬಳಕೆ ವ್ಯಾಪಕವಾಗಿದ್ದ ಕಾಲಘಟ್ಟದಲ್ಲಿ, ಅದಕ್ಕೆ ಮೂಗುದಾರ ಹಾಕಿದ್ದು ಸುಪ್ರೀಂ ಕೋರ್ಟ್. ಜನರ ಆಯ್ಕೆಯ ಸರ್ಕಾರಕ್ಕೆ ಬಹುಮತ ಇದೆಯೇ ಇಲ್ಲವೇ ಎಂಬ ತೀರ್ಮಾನವು ವಿಧಾನಸಭೆಯಲ್ಲೇ ಆಗಬೇಕು; ಇನ್ನೆಲ್ಲೂ ಅಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ. ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ತೀರ್ಪು ಚರಿತ್ರಾರ್ಹ. ಸುಪ್ರೀಂ ಕೋರ್ಟ್ ನೀಡಿರುವ ಅತ್ಯಂತ ಮಹತ್ವದ ತೀರ್ಪುಗಳ ಪೈಕಿ ಇದೂ ಒಂದು. ಈ ತೀರ್ಪು ಬರುವುದಕ್ಕೆ ಕಾರಣವಾದ ಅರ್ಜಿಯನ್ನು ಸಲ್ಲಿಸಿದ್ದು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್.ಆರ್.ಬೊಮ್ಮಾಯಿ
30. ತಾಂತ್ರಿಕ ಶಿಕ್ಷಣಕ್ಕೊಂದು ವಿವಿ ಉನ್ನತ ತಾಂತ್ರಿಕ ಶಿಕ್ಷಣಕ್ಕಾಗಿಯೇ ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು 1998ರ ಏಪ್ರಿಲ್ 1ರಂದು ಉದ್ಘಾಟಿಸಲಾಯಿತು. ರಾಜ್ಯದೆಲ್ಲೆಡೆ 200ಕ್ಕೂ ಹೆಚ್ಚು ತಾಂತ್ರಿಕ ಶಿಕ್ಷಣ ಕಾಲೇಜು, ನಾಲ್ಕು ಅಧ್ಯಯನ ಕೇಂದ್ರಗಳು, ಎರಡು ಕೌಶಲ ಅಭಿವೃದ್ಧಿ ಕೇಂದ್ರಗಳು ಇದರ ವ್ಯಾಪ್ತಿಗೆ ಬರುತ್ತವೆ
31. ಸಿಲಿಕಾನ್ ವ್ಯಾಲಿ ಮುಕುಟ: 90ರ ದಶಕದಲ್ಲಿ ಇಡೀ ದೇಶಕ್ಕೆ ಮಾದರಿಯಾದ ಐ.ಟಿ ಮತ್ತು ಬಿ.ಟಿ ನೀತಿ ರೂಪಿಸಿದ್ದು ರಾಜ್ಯದ ಹಿರಿಮೆ. ಸಾಫ್ಟ್ ವೇರ್ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ 42ರಷ್ಟಿದೆ. ಪ್ರಮುಖ ಐ.ಟಿ ಕಂಪನಿಗಳಾದ ವಿಪ್ರೊ ಮತ್ತು ಇನ್ಫೊಸಿಸ್ ನಾಡಿನ ಸಾಫ್ಟ್ ವೇರ್ ಉದ್ಯಮದ ದ್ಯೋತಕಗಳಾಗಿವೆ. ಬೆಂಗಳೂರಿಗೆ 'ಸಿಲಿಕಾನ್ ವ್ಯಾಲಿ' ಪಟ್ಟ ದಕ್ಕಿಸಿಕೊಡುವಲ್ಲಿ ಇವುಗಳ ಕೊಡುಗೆ ಹೆಚ್ಚಿದೆ
32. ಕರ್ನಾಟಕ ರತ್ನ ಪುರಸ್ಕಾರ : ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿದವರು, ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಎಸ್.ಬಂಗಾರಪ್ಪ ನೇತೃತ್ವದ ಸರ್ಕಾರ 1992ರಲ್ಲಿ ‘ಕರ್ನಾಟಕ ರತ್ನ’ ಎಂಬ ರಾಜ್ಯದ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡುವ ನಿರ್ಧಾರ ಕೈಗೊಂಡಿತು
33. ಗ್ರಾಮ ಸ್ವರಾಜ್ಯದತ್ತ ದಿಟ್ಟ ಹೆಜ್ಜೆ : ಪ್ರಬಲವಾದ ಗ್ರಾಮ ಸ್ವರಾಜ್ ಕಾಯ್ದೆಯೊಂದಿಗೆ 3 ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು 1993ರಲ್ಲಿ ಅಸ್ತಿತ್ವಕ್ಕೆ ತರಲಾಯಿತು
34. ದೇಶಕ್ಕೇ ಮಾದರಿಯಾಗಿದ್ದ ಸಿಇಟಿ : ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಪ್ರವೇಶದ ವಿಚಾರದಲ್ಲಿನ ಗೊಂದಲ ನಿವಾರಿಸಿ, ಪಾರದರ್ಶಕ ವ್ಯವಸ್ಥೆ ರೂಪಿಸುವ ಸಲುವಾಗಿ ವೀರಪ್ಪ ಮೊಯಿಲಿ ಅವರ ಸರ್ಕಾರ ಸಿಇಟಿ ಜಾರಿಗೊಳಿಸಿತು. ಇದು ದೇಶದಲ್ಲೇ ಮಾದರಿ ವ್ಯವಸ್ಥೆ ಎಂದು ಮೆಚ್ಚುಗೆ ಪಡೆಯಿತು
35. ನಂಜುಂಡಪ್ಪ ವರದಿ: ಪ್ರಾದೇಶಿಕ ಅಸಮತೋಲನ ನಿವಾರಿಸುವ ಉದ್ದೇಶದಿಂದ ಅರ್ಥಶಾಸ್ತ್ರಜ್ಞ ಡಿ.ಎಂ.ನಂಜುಂಡಪ್ಪ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿಯನ್ನು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 2000ದಲ್ಲಿ ರಚಿಸಲಾಯಿತು. ರಾಜ್ಯದಲ್ಲಿನ ಆಗಿನ 175 ತಾಲ್ಲೂಕುಗಳ ಪೈಕಿ 114 ತಾಲ್ಲೂಕುಗಳು ಹಿಂದುಳಿದಿವೆ ಎಂದು ಸಮಿತಿ ಗುರುತಿಸಿತು. ಈ ತಾಲ್ಲೂಕುಗಳ ಅಭಿವೃದ್ಧಿಗೆ ನಿರ್ದಿಷ್ಟ ಅವಧಿಗೆ ವಿಶೇಷ ಅನುದಾನ ಒದಗಿಸಬೇಕು ಎಂದೂ ಶಿಫಾರಸು ಮಾಡಿತು
36. ಪೌಷ್ಟಿಕಾಂಶಯುಕ್ತ ಬಿಸಿಯೂಟ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ 2002–03ರಲ್ಲಿ ಅನುಷ್ಠಾನಕ್ಕೆ ಬಂದಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆ, ಬಡ ಕುಟುಂಬಗಳ ಮಕ್ಕಳ ಪಾಲಿಗೆ ವರವಾಗಿದೆ. ಸದ್ಯ 58 ಲಕ್ಷ ಮಕ್ಕಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ
37.ಮಹಿಳೆಯರಿಗಾಗಿಯೇ ವಿ.ವಿ.: ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಡಾ.ನಂಜುಂಡಪ್ಪ ವರದಿ ಆಧರಿಸಿ, ಉತ್ತರ ಕರ್ನಾಟಕ ಭಾಗದ ಮಹಿಳೆಯರಿಗೆ ಉನ್ನತ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ವಿಜಯಪುರದಲ್ಲಿ 2003ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲು
38. ವಿಧಾನಸೌಧದ ‘ಹೊರೆ’ ಇಳಿಸಿದ ವಿಕಾಸಸೌಧ : ವಿಧಾನಸೌಧ ಕೆಂಗಲ್ ಹನುಮಂತಯ್ಯ ಅವರ ಕಾಲದಲ್ಲಿ ನಿರ್ಮಾಣವಾದರೆ, ಅದನ್ನೇ ಹೋಲುವ ವಿಕಾಸಸೌಧ ನಿರ್ಮಾಣವಾಗಿದ್ದು ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ. ಇದರಲ್ಲಿ ಕೆಲವು ಸಚಿವರು ಹಾಗೂ ಶಾಸನಸಭೆಯ ಅಧಿಕಾರಿಗಳ ಕಚೇರಿಗಳಿವೆ. ರಾಜ್ಯದ ‘ಶಕ್ತಿಕೇಂದ್ರ’ವಾದ ವಿಧಾನಸೌಧವು ತನ್ನ ಹಿರಿಮೆಗೆ ತಕ್ಕಂತೆ ಭವ್ಯ ವಾಸ್ತುಶಿಲ್ಪ ಹೊಂದಿದ್ದರೆ, ವಿಕಾಸಸೌಧವು ಅದರ ತದ್ರೂಪಿಯಂತಿದೆ
39. ಬೆಳಗಾವಿಯಲ್ಲಿ ಅಧಿವೇಶನ ಬೆಳಗಾವಿ ತನ್ನದು ಎಂಬ ಮಹಾರಾಷ್ಟ್ರದ ಪ್ರತಿಪಾದನೆಯ ವಿರುದ್ಧ ಪ್ರಬಲವಾದ ಸಂದೇಶ ರವಾನಿಸುವುದಕ್ಕಾಗಿ 2006ರಲ್ಲಿ ಜೆಡಿಎಸ್– ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಸಿತು. ಆರಂಭದ ಕೆಲವು ವರ್ಷಗಳಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಅಧಿವೇಶನ ನಡೆಸಲಾಯಿತು. ನಂತರ ಭವ್ಯವಾದ ಸುವರ್ಣ ವಿಧಾನಸೌಧ ನಿರ್ಮಾಣ ಕಾಮಗಾರಿ ಆರಂಭಿಸಲಾಯಿತು. 2012ರಲ್ಲಿ ಸುವರ್ಣ ವಿಧಾನಸೌಧ ಉದ್ಘಾಟನೆಯಾಯಿತು
40. ಬಿಬಿಎಂಪಿ ರಚನೆ : ಅಭಿವೃದ್ಧಿಯ ನಾಗಾಲೋಟ ದಲ್ಲಿರುವ ಬೆಂಗಳೂರಿನ ಆಡಳಿತ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ದೃಷ್ಟಿಯಿಂದ ನಗರದ ವ್ಯಾಪ್ತಿಯನ್ನು ವಿಸ್ತರಿಸಿ, ಬೆಂಗಳೂರು ನಗರ ಪಾಲಿಕೆಯನ್ನು ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ (ಬಿಬಿಎಂಪಿ) ಎಂದು 2007ರಲ್ಲಿ ಮರುನಾಮಕರಣ ಮಾಡಲಾಯಿತು. ದೇಶದಲ್ಲೇ 4ನೇ ಅತಿ ದೊಡ್ಡ ಮಹಾ ನಗರ ಪಾಲಿಕೆ ಎಂಬ ಹೆಗ್ಗಳಿಕೆ ಬಿಬಿಎಂಪಿಯದ್ದು
41. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ : ಮೂರು ವರ್ಷಗಳ ನಿರಂತರ ಹೋರಾಟದಿಂದಾಗಿ ಕನ್ನಡ ಭಾಷೆಗೆ 2008ರ ನ.1ರಂದು ಶಾಸ್ತ್ರೀಯ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಪ್ರಕಟಿಸಿತು.
42. ಜಾಗತಿಕ ಸಂಪರ್ಕದ ಕೊಂಡಿ : ಬೆಂಗಳೂರಿನ ಬಳಿಯ ದೇವನಹಳ್ಳಿಯಲ್ಲಿ ಸರ್ಕಾರಿ –ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಐಟಿ–ಬಿಟಿ, ಸ್ಟಾರ್ಟ್‌ಅಪ್ ನಗರ ಮತ್ತು ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ನೇರವಾಗಿ ಸಂಪರ್ಕ ಬೆಸೆಯುವ ಕೊಂಡಿ. 2008ರಲ್ಲಿ ಬಳಕೆಗೆ ಮುಕ್ತವಾದ ಈ ವಿಮಾನ ನಿಲ್ದಾಣ, ಅತಿ ಹೆಚ್ಚು ವಿಮಾನಗಳು ಕಾರ್ಯಾಚರಿಸುವ ದೇಶದ ಮೂರನೇ ವಿಮಾನ ನಿಲ್ದಾಣ. ಇದರ ಟರ್ಮಿನಲ್–2ರ ವಿನ್ಯಾಸ ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದೆ
43. ಗ್ರಾಮೀಣ ಮಹಿಳೆಯರ ‘ಬಲ’: ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆ, ಸ್ವಂ ಉದ್ಯೋಗಕ್ಕೆ ಪ್ರೋತ್ಸಾಹಿಸಲು ರೂಪುಗೊಂಡ ‘ಸ್ವಸಹಾಯ ಸಂಘ’ದ ಪರಿಕಲ್ಪನೆ ರಾಜ್ಯದ ಗ್ರಾಮೀಣ ಪ್ರದೇಶದ ಬಡವರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಮಹತ್ವದ್ದು. 2011ರಲ್ಲಿ ‘ಸಂಜೀವಿನಿ’ ಸೊಸೈಟಿ ಅಡಿಯಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ. ಸದ್ಯ 2.50 ಲಕ್ಷಕ್ಕೂ ಹೆಚ್ಚು ಸಂಘಗಳು ಕಾರ್ಯಾಚರಿಸುತ್ತಿದ್ದು 55 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ
44. ಮೆಟ್ರೊ ಸಾರಿಗೆ ಕ್ರಾಂತಿ : ‘ನಮ್ಮ ಮೆಟ್ರೊ’ ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದೆ. ಸಂಚಾರ ದಟ್ಟಣೆಯ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಅಪಖ್ಯಾತಿ ಗಳಿಸಿರುವ ಉದ್ಯಾನ ನಗರಿಯ ಜನರ ಮಟ್ಟಿಗೆ ಮೆಟ್ರೊ ರೈಲು ಒಂದು ಆಶಾಕಿರಣವಾಗಿದೆ
45. ನ್ಯಾಯದಾನ ಇನ್ನಷ್ಟು ಹತ್ತಿರ : ಕೋರ್ಟ್ ಕೆಲಸಕ್ಕೆ ದೂರದ ರಾಜಧಾನಿಗೆ ಅಲೆದಾಡುವುದನ್ನು ತಪ್ಪಿಸಲು ಉತ್ತರ ಕರ್ನಾಟಕ ಮತ್ತು ಈಶಾನ್ಯ ಕರ್ನಾಟಕ ಭಾಗದಲ್ಲಿ ಪ್ರತ್ಯೇಕ ಪೀಠ ಸ್ಥಾಪನೆಯಾಗಬೇಕೆಂಬ ಕೂಗು 2000ದ ದಶಕದಲ್ಲಿ ಬಲವಾಗಿತ್ತು. ಕೊನೆಗೂ 2013ರ ಆಗಸ್ಟ್ 24ರಂದು ಧಾರವಾಡದಲ್ಲಿ ಮತ್ತು ಕಲಬುರಗಿಯಲ್ಲಿ ಹೈಕೋರ್ಟ್ ಕಾಯಂ ಪೀಠಗಳ ಸ್ಥಾಪನೆಯಾಯಿತು
46. ‘ಕಲ್ಯಾಣ’ದ ಬಾಳು ಬೆಳಗಿದ 371 (ಜೆ): ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದ ಕಲ್ಯಾಣ ಕರ್ನಾಟಕದ ಜನತೆಯ ‘ಶಾಪ’ ವಿಮೋಚನೆಯಂತೆ ಒದಗಿ ಬಂದಿದ್ದು 371 (ಜೆ) ವಿಧಿ ಕಾಯ್ದೆಯ ಜಾರಿ. 2013ರಲ್ಲಿ ಯುಪಿಎ ಸರ್ಕಾರವು ಕಾಯ್ದೆ ಜಾರಿ ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಶಿಕ್ಷಣ ಹಾಗೂ ನೇಮಕಾತಿಯಲ್ಲಿ ವಿಶೇಷ ಮೀಸಲಾತಿ ಕೊಡಲು ಸಾಧ್ಯವಾಗಿದೆ
47. ನವೋದ್ಯಮದ ತವರು : ನಾವೀನ್ಯ ವಲಯಕ್ಕೆ ನವೋದ್ಯಮಗಳೇ ಜೀವನಾಡಿ. ಅವುಗಳಿಗೆ ಪೂರಕ ವಾತಾವರಣ ಸೃಷ್ಟಿಸಿರುವುದು ಕರುನಾಡಿನ ಹೆಗ್ಗಳಿಕೆ. ಹಾಗಾಗಿಯೇ, ಇಡೀ ದೇಶದಲ್ಲಿಯೇ ನವೋದ್ಯಮಗಳ ಶ್ರೇಯಾಂಕದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ದಕ್ಕಿದೆ. 15 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ಇಲ್ಲಿವೆ. ದೇಶದಲ್ಲಿರುವ ಯೂನಿಕಾರ್ನ್‌ಗಳ ಸಂಖ್ಯೆ 112. ಈ ಪೈಕಿ 45 ಇಲ್ಲಿರುವುದೇ ರಾಜ್ಯದ ಅಗ್ಗಳಿಕೆ
48. ಧಾರವಾಡದ ಐಐಐಟಿ : ಶಿಕ್ಷಣ ಕಾಶಿ ಧಾರವಾಡದ ಹೊಸ ಹೆಗ್ಗರುತು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಟಿ). ರಾಜ್ಯದ ಮೊದಲ ಐಐಐಟಿಯೂ ಹೌದು. 2016ರಲ್ಲಿ ಆರಂಭಗೊಂಡಿರುವ ಸಂಸ್ಥೆ 470 ಎಕರೆ ಪ್ರದೇಶದಲ್ಲಿ ಹರಡಿದೆ
49. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ: ‘ಹೈದರಾಬಾದ್ ಕರ್ನಾಟಕ’ ಎಂದು ಕರೆಯಲಾಗುತ್ತಿದ್ದ ಈಶಾನ್ಯ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳನ್ನೊಳಗೊಂಡ ಪ್ರದೇಶಕ್ಕೆ 2019ರ ಸೆ.7ರಂದು ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಇದೇ ಮಾದರಿಯಲ್ಲಿ, ‘ಮುಂಬೈ ಕರ್ನಾಟಕ’ ಎಂದು ಕರೆಯಲಾಗುತ್ತಿದ್ದ ಪ್ರದೇಶಕ್ಕೆ 2021ರ ಅ.23ರಂದು ಕಿತ್ತೂರು ಕರ್ನಾಟಕ ಎಂದು ನಾಮಕಾರಣ ಮಾಡಲಾಯಿತು
50. ಬಿಕ್ಕಟ್ಟಿನ ಕಾಲದ ಸಮಾನತೆಯ ‘ರಾಯಭಾರಿ’: 12ನೇ ಶತಮಾನದಲ್ಲಿಯೇ ಸಮಾನತೆಯ ಸಂದೇಶದೊಂದಿಗೆ ವಿವಿಧ ಜಾತಿ, ವೃತ್ತಿಗಳ ಜನರನ್ನು ಸಂಘಟಿಸಿ ಶರಣ ಚಳವಳಿ ರೂಪಿಸಿದವರು ಬಸವಣ್ಣ; ಸಾಮಾಜಿಕ ನ್ಯಾಯದ ಆಶಯಗಳನ್ನು ತಮ್ಮ ವಚನ ಹಾಗೂ ಕ್ರಿಯೆಗಳ ಮೂಲಕ ನಾಡಿನಲ್ಲಿ ಹರಡಿದವರು. ಜಾಗತಿಕ ಮಹತ್ವದ ಸಾಂಸ್ಕೃತಿಕ ಚಳವಳಿಯ ಮುಂದಾಳಾಗಿದ್ದ ಬಸವಣ್ಣ ಅವರನ್ನು ಹಾಲಿ ರಾಜ್ಯ ಸರ್ಕಾರ ಈ ವರ್ಷ(2024) ‘ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ’ ಎಂದು ಘೋಷಿಸಿರುವುದು ಬಿಕ್ಕಟ್ಟಿನ ಕಾಲದಲ್ಲಿ ಸಂವಿಧಾನದ ಮೌಲ್ಯಗಳ ಪ್ರಸಾರಕ್ಕೆ ಸೂಕ್ತ ಕಾರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.