ಲಕ್ಷ್ಮೇಶ್ವರ: ಪುರಾತನ ದೇವಸ್ಥಾನಗಳಲ್ಲಿನ ಆರಾಧನಾ ಮೂರ್ತಿಗಳು ದೊಡ್ಡ ಇತಿಹಾಸವನ್ನು ಅಡಗಿಸಿಟ್ಟು
ಕೊಂಡಿರುತ್ತವೆ. ಶಿಲ್ಪಿಗಳು ಕಲ್ಲಿನಲ್ಲಿ ಕೆತ್ತಿರುವ ಮೂರ್ತಿಗಳು ನೂರಾರು ವರ್ಷಗಳೇ ಉರುಳಿದರೂ ತಮ್ಮ ಸೌಂದರ್ಯ, ವಿಶಿಷ್ಟ ಹಾವಭಾವ, ಭಂಗಿಗಳಿಂದಾಗಿ ಕಲಾರಸಿಕರನ್ನು ಸೆಳೆಯುತ್ತಲೇ ಇರುತ್ತವೆ.
10ನೇ ಶತಮಾನದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣವಾದ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ನೇಮಿನಾಥ ಅಥವಾ ಶಂಖ ಬಸದಿ, ಪ್ರಸಿದ್ಧ ಸಹಸ್ರಲಿಂಗ ದೇವಸ್ಥಾನದಲ್ಲಿನ ಸಹಸ್ರಲಿಂಗನ ಮೂರ್ತಿ ಮತ್ತು ಅಗಸ್ತ್ಯತೀರ್ಥದಲ್ಲಿನ ಅಕ್ಕ-ತಮ್ಮರ ಮೂರ್ತಿಗಳು ಅತ್ಯಾಕರ್ಷಕವಾಗಿದ್ದು ಒಂದೊಂದು ಮೂರ್ತಿಗಳು ಒಂದೊಂದು ಕಥೆ ಹೇಳುತ್ತವೆ.
ಸೋಮೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿನ 4 ಅಡಿ ಎತ್ತರ, 3 ಅಡಿ ಅಗಲದ ಶಿವ-ಪಾರ್ವತಿಯರ ಶಿಲಾಮೂರ್ತಿ ಅಪರೂಪದ ಕಲಾಕೃತಿಯಾಗಿದೆ. ಸರ್ವಾಲಂಕೃತನಾದ ಶಿವನ ಹಿಂದೆ ಪಾರ್ವತಿಯೂ ಸಹ ಅಲಂಕಾರ ಭೂಷಿತಳಾಗಿ ವೃಷಭವನ್ನೇರಿ ಕುಳಿತಿರುವ ಭಂಗಿ ಮನಮೋಹಕವಾಗಿದೆ. ಶಿವಶರಣ ಆದಯ್ಯ ಸೌರಾಷ್ಟ್ರದಿಂದ ತಂದು ಈ ಮೂರ್ತಿಯನ್ನು ಸ್ಥಾಪಿಸಿದ್ದಾನೆಂಬ ಉಲ್ಲೇಖವಿದೆ.
ಇದೇ ದೇವಸ್ಥಾನದ ಆವರಣದಲ್ಲಿನ ವೈಜ್ಞಾನಿಕ ಹಿನ್ನೆಲೆ ಹೊಂದಿರುವ ಲಜ್ಜಾಗೌರಿ ಮೂರ್ತಿ ಅಪರೂಪದಲ್ಲಿ ಅಪರೂಪದ್ದು ಎನ್ನಲಾಗುತ್ತದೆ. ಲಜ್ಜಾಗೌರಿ ಮೂರ್ತಿಗಳು ಭಾರತದಲ್ಲಿ ಇರುವುದು ಬಹಳ ಕಡಿಮೆ. ಅಶ್ಲೀಲ ಭಂಗಿಯಲ್ಲಿದೆ ಎಂಬ ಕಾರಣಕ್ಕೆ ಮೂರ್ತಿಯನ್ನು ದೇವಸ್ಥಾನದ ಹಿಂಭಾಗದ ಬಾವಿಯಲ್ಲಿ ಬಿಸಾಡಲಾಗಿತ್ತು.
ಐದು ವರ್ಷಗಳ ಹಿಂದೆ ಇನ್ಫೊಸಿಸ್‍ನ ಸುಧಾಮೂರ್ತಿ ಅವರು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸುವಾಗ ಬಾವಿಯಲ್ಲಿ ಬಿದ್ದಿದ್ದ ಲಜ್ಜಾಗೌರಿ ಮೂರ್ತಿ ಸಿಕ್ಕಿದೆ. ಇತಿಹಾಸವನ್ನೇ ಒಡಲಲ್ಲಿ ತುಂಬಿಕೊಂಡಿರುವ ಇದರ ಮಹತ್ವ ಅರಿತ ಸುಧಾಮೂರ್ತಿ ಅದನ್ನು ಜತನದಿಂದ ಹೊರತೆಗೆಸಿ ಗುಡಿಯೊಂದರಲ್ಲಿ ಪ್ರತಿಷ್ಠಾಪಿಸಿದ್ದಾರೆ.
ಕಿವುಡ ಮತ್ತು ಮೂಕ ಮಕ್ಕಳ ಶಾಲಾ ಆವರಣದಲ್ಲಿನ ಸಹಸ್ರಲಿಂಗ ದೇವಸ್ಥಾನದೊಳಗಿನ ಸಹಸ್ರಲಿಂಗ ಮೂರ್ತಿಯೂ ಅಷ್ಟೇ ಪ್ರಸಿದ್ಧ. ಮೂರಡಿ ಎತ್ತರದ ದೊಡ್ಡ ಶಿವಲಿಂಗದಲ್ಲಿ ಚಿಕ್ಕ ಚಿಕ್ಕ ಶಿವಲಿಂಗಗಳನ್ನು ಕೆತ್ತಲಾಗಿದೆ. ಇನ್ನೂ ಒಂದು ಸಣ್ಣ ಲಿಂಗವನ್ನು ಕೆತ್ತಿದ್ದರೆ ಸಹಸ್ರಲಿಂಗಗಳು ಪೂರ್ಣಗೊಳ್ಳುತ್ತಿದ್ದವಂತೆ. ಆದರೆ ಅಷ್ಟರೊಗಳಗಾಗಿ ಬೆಳಗಾಗಿದ್ದರಿಂದ ಕೇವಲ 999 ಲಿಂಗಗಳನ್ನು ಕೆತ್ತಲು ಕಲಾವಿದನಿಗೆ ಸಾಧ್ಯವಾಯಿತು ಎಂಬ ಕಥೆ ಈಗಲೂ ಹಿರಿಯರ ಬಾಯಿಂದ ಕೇಳಿ ಬರುತ್ತದೆ.
ಇನ್ನು ಅಗಸ್ತ್ಯತೀರ್ಥದಲ್ಲಿನ ಅಕ್ಕ-ತಮ್ಮನ ಮೂರ್ತಿಯಂತೂ ಬಹಳ ಸುಂದರ. ಒಮ್ಮೆ ಅಕ್ಕನಿಗೆ ತಮ್ಮ ಒದೆಯುತ್ತಾನೆ. ಇದರಿಂದಾಗಿ ತಮ್ಮನ ಕಾಲಿನಲ್ಲಿ ಹುಳು ಬೀಳುತ್ತವೆ. ಇದನ್ನು ನೋಡಲಾಗದೆ ಒಡಹುಟ್ಟಿದ ಅಕ್ಕನೇ ತಮ್ಮನ ಕಾಲಿನಲ್ಲಿ ಹುಳುಗಳನ್ನು ತೆಗೆಯುತ್ತಾಳೆ. ಇದೇ ಚಿತ್ರಣವನ್ನು ಕಲಾವಿದ ಕಲ್ಲಿನಲ್ಲಿ ಅರಳಿಸಿದ್ದಾನೆ. ಆದರೆ ಸೂಕ್ತ ರಕ್ಷಣೆ ಇಲ್ಲದ ಕಾರಣ ಈ ಮೂರ್ತಿ ಭಗ್ನಗೊಂಡಿದೆ.
ನಮ್ಮ ದೇವಸ್ಥಾನಗಳಲ್ಲಿನ ಮೂರ್ತಿಗಳು ನಮ್ಮ ನಾಡಿನ ಪರಂಪರೆ, ಸಂಸ್ಕೃತಿಯನ್ನು ಪ್ರತಿನಿಧಿಸುವುದರ ಜತೆಗೆ ಇತಿಹಾಸವನ್ನೂ ಬಿಡಿಸುತ್ತವೆ. ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಸ್ಥಳೀಯರು ಹೇಳುತ್ತಾರೆ.
ಶಬ್ದಗಳಿಗೆ ನಿಲುಕದ ‘ಜಿನ’ ಚೆಲುವು
ನೇಮಿನಾಥ ಅಥವಾ ಶಂಖ ಬಸದಿಯಲ್ಲಿನ ಸಹಸ್ರಕೂಟ ಜಿನಬಿಂಬದ ವರ್ಣನೆ ಶಬ್ದಗಳಿಗೆ ನಿಲುಕದ್ದು. ನೂರಾರು ವರ್ಷಗಳಿಂದ ಅದು ತನ್ನ ವೈಭವವನ್ನು ಉಳಿಸಿಕೊಂಡು ಬಂದಿದೆ. ನುಣುಪಾದ ಕಪ್ಪು ವರ್ಣದ ಏಕಶಿಲೆಯಲ್ಲಿ ಸಾವಿರ ಜಿನಬಿಂಬಗಳನ್ನು ಸೂಕ್ಷ್ಮವಾಗಿ ಕೆತ್ತಿರುವುದು ಇದರ ವಿಶೇಷ. ಹೀಗಾಗಿ ಇದಕ್ಕೆ ‘ಸಹಸ್ರಕೂಟ ಜಿನಬಿಂಬ’ ಎಂಬ ಹೆಸರುಂಟು.
ಐದು ಅಡಿ ಎತ್ತರದ ಒಂದೇ ಕಲ್ಲಿನಲ್ಲಿ ನಾಲ್ಕೂ ಬದಿಗೆ ಜಿನನ ದೊಡ್ಡ ಮೂರ್ತಿ ಮತ್ತು ಗೋಪುರದವರೆಗೆ ಸಣ್ಣ ಸಣ್ಣ ಆಕಾರದ ಬಿಂಬಗಳನ್ನು ಬಿಡಿಸಿರುವಲ್ಲಿ ಕಲಾವಿದನ ಕೈಚಳಕ ಎದ್ದು ಕಾಣುತ್ತದೆ. ಅಲ್ಲದೆ ಮೇಲ್ಭಾಗದಲ್ಲಿ ಸ್ವಲ್ಪ ಸಣ್ಣ ಆಕಾರದಲ್ಲಿ ಬಿಂಬಗಳನ್ನು ಕೆತ್ತಿದ್ದು ನೋಡಿಯೇ ಆನಂದಿಸಬೇಕು. ಇದೇ ಬಸದಿಯ ಕಂಬವೊಂದನ್ನು ಆಶ್ರಯವನ್ನಾಗಿ ಮಾಡಿಕೊಂಡು ಕನ್ನಡದ ಆದಿಕವಿ ಪಂಪನು ತನ್ನ ಕೃತಿಗಳನ್ನು ರಚಿಸಿದ್ದಾನೆ ಎಂದು ಇತಿಹಾಸ ಪುಟಗಳು ಬಿಂಬಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.