‘ಕೃಷಿ ಪರಿಕರಗಳೆಲ್ಲ ಪ್ಲಾಸ್ಟಿಕ್‍ಮಯವಾದ ಇಂದಿನ ದಿನಗಳಲ್ಲಿ ಬಿದಿರು ಬುಟ್ಟಿ, ಮೊರ, ಚಾಪೆಗಳೆಲ್ಲ ಎಲ್ಲಿವೆ. ಅವುಗಳನ್ನು ತಯಾರಿಸುವವರ ಬದುಕು ಹೇಗಿದೆ’ ಎಂದು ತಿಳಿಯುವ ಆಸಕ್ತಿ ಇತ್ತು. ಈ ಕುತೂಹಲ ತಣಿಸಿಕೊಳ್ಳಲು ನಾನು ಭೇಟಿ ನೀಡಿದ್ದು ಧಾರವಾಡಜಿಲ್ಲೆಯ ಮುಗದ ಗ್ರಾಮಕ್ಕೆ.
ಮೂರು ದಶಕಗಳ ಹಿಂದೆ ಈ ಗ್ರಾಮ ಕುಂಬಾರಿಕೆ, ಮೇದಾರಿಕೆಯಂತಹ ಗುಡಿ ಕೈಗಾರಿಕೆಗಳಿಗೆ ಖ್ಯಾತಿ ಪಡೆದಿತ್ತು. ಊರಿನ ಒಂದು ಇಡೀ ಓಣಿ ‘ಮೇದಾರರ ಓಣಿ’ ಎಂದೇ ಗುರುತಿಸಿಕೊಳ್ಳುತ್ತಿತ್ತು. ಓಣಿಯಲ್ಲಿ ನಡೆಯುತ್ತಿದ್ದರೆ ಮನೆಯ ಮುಂದೆ ಬಿದಿರ ಬುಟ್ಟಿ ಹೆಣೆಯುತ್ತಿದ್ದದು ಕಾಣುತ್ತಿತ್ತು.
ಈಗ ಪ್ಲಾಸ್ಟಿಕ್ ವಸ್ತುಗಳ ಅಬ್ಬರದಿಂದಾಗಿ ಓಣಿಯಲ್ಲಿ ಬಿದಿರು ಹೆಣೆಯುವ ದೃಶ್ಯ ಮಸುಕಾಗಿದೆ. ಈಗ ಅಲ್ಲೊಬ್ಬರು, ಇಲ್ಲೊಬ್ಬರು, ವಯಸ್ಸಾದವರು, ಪರ್ಯಾಯ ಉದ್ಯೋಗವಿಲ್ಲದವರು ಮಾತ್ರ ಇಲ್ಲಿ ಬಿದಿರು ವಸ್ತುಗಳನ್ನು ತಯಾರಿಸುತ್ತಿದ್ದಾರೆ ಎನ್ನಿಸಿತು.
ಇಂಥ ಮೇದಾರ ಓಣಿಯಲ್ಲಿ ಬಿದಿರು ಬುಟ್ಟಿ ಹೆಣ್ಣೆಯುವವರ ಸ್ಥಿತಿ ಅರಿಯಲು ಹೋಗುತ್ತಿದ್ದಾಗ ಮನೆಯ ಎದುರು ನಾಜೂಕಾಗಿ ಬುಟ್ಟಿ ಹೆಣೆಯುತ್ತ ಕುಳಿತಿದ್ದ ಗದಿಗೇಶ್ವರಿ ಕಂಡರು. ಅವರ ಎದುರು ಕುಳಿತು, ಬುಟ್ಟಿ ಹೆಣೆಯುವವರ ಬದುಕಿನ ಕಥೆ ಕೇಳಲು ಸಿದ್ಧಳಾದೆ. ಅವರು, ಬುಟ್ಟಿ ಹೆಣೆಯುವಿಕೆ, ಪರಿಸರಸ್ನೇಹಿ ಕಿರುಉದ್ಯಮ ಹಾಗೂ ಅದರೊಂದಿಗೆ ಹೆಣೆದುಕೊಂಡ ತಮ್ಮ ಬದುಕಿನ ನೋವು, ನಲಿವಿನ ಕಥೆಯನ್ಮು ಹೇಳಲಾರಂಭಿಸಿದರು.
ಗದಿಗೇಶ್ವರಿ ಹುಟ್ಟಿ ಬೆಳೆದಿದ್ದು ಮುಗದದಲ್ಲಿ. ಹೆತ್ತವರು ಜೀವನೋಪಾಯಕ್ಕಾಗಿ ನಂಬಿದ ವೃತ್ತಿ ಕೌಶಲವನ್ನೇ ಇವರೂ ಕಲಿತರು. ಶಾಲಾ ಶಿಕ್ಷಣ ಕಲಿತಿದ್ದು ಕಡಿಮೆಯೇ. ಹದಿನಾರು ವರ್ಷಕ್ಕೇ ವೈವಾಹಿಕ ಜೀವನ ಆರಂಭ. ಗಂಡನ ಮನೆಯಲ್ಲಿಯೂ ಜೀವನೋಪಾಯಕ್ಕೆ ಬಿದಿರಿನ ಅವಲಂಬನೆಯೇ ಆಗಿತ್ತು. ಗದಿಗೇಶ್ವರಿಯವರ ಮಾವ ಮತ್ತು ಗಂಡ ಹನುಮಂತಪ್ಪನವರು ಸಮೀಪದ ಕಲಕೇರಿಕಾಡಿನಿಂದ ಬಿದಿರನ್ನು ಕಡಿದುಕೊಂಡು ತಂದು ಹಾಕುತ್ತಿದ್ದರು. ಅವನ್ನು ಸಮೀಪದ ಊರಿನಕೆರೆಯಲ್ಲಿ ನಾಲ್ಕು ದಿನ ಮುಳುಗಿಸಿಟ್ಟು ಮನೆಗೆ ತಂದು ಒಣಗಿಸಿ ಶೇಖರಿಸಿಡುತ್ತಿದ್ದರು. ಗಂಡಸರು ಬಿದಿರನ್ನು ತೆಳ್ಳಗೆ ಸೀಳಿ ಕೊಟ್ಟರೆ, ಅತ್ತೆ ಫಕೀರವ್ವ ಹಾಗೂ ಗದಿಗೇಶ್ವರಿ ಬುಟ್ಟಿ ತಯಾರಿಸುತ್ತಿದ್ದರು.
ಆಗ ಕಾಲ ಹೇಗಿತ್ತೆಂದರೆ, ರೈತರು ಇವರ ಮನೆ ಬಾಗಿಲಿಗೆ ಬಂದು ತಮಗೆ ಬೇಕಾದ ಪರಿಕರಗಳಿಗೆ ಆರ್ಡರ್ ಕೊಟ್ಟು ಹೋಗುತ್ತಿದ್ದರು. ಇವರಿಂದ ಬುಟ್ಟಿಗಳನ್ನೋ, ಮೊರಗಳನ್ನು ಖರೀದಿಸಿದರೆ, ಅವುಗಳಿಗೆ ಪ್ರತಿಯಾಗಿ ಹಣ ಕೊಡುತ್ತಿರಲಿಲ್ಲ. ಬದಲಿಗೆ ತಾವು ಬೆಳೆದ ದವಸ ಧಾನ್ಯಗಳನ್ನು ಕೊಟ್ಟು ಹೋಗುತ್ತಿದ್ದರು. ಗದಿಗೇಶ್ವರಿ ಕುಟುಂಬದವರು ತಮಗೆ ಅಗತ್ಯವಾದಷ್ಟು ಧಾನ್ಯಗಳನ್ನು ಇಟ್ಟುಕೊಂಡು ಉಳಿದವುಗಳನ್ನು ಮಾರಿ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದರು.
ಒಮ್ಮೆ ಹೀಗಾಯ್ತು; ಇಪ್ಪತ್ತು ವರ್ಷಗಳ ಹಿಂದೆ, ಮೇದಾರರ ಹೆಸರಿನಲ್ಲಿ ಕೆಲವು ದುಷ್ಟರು ಅರಣ್ಯವನ್ನು ಲೂಟಿ ಹೊಡೆಯಲಾರಂಭಿಸಿದಾಗ ಎಚ್ಚೆತ್ತ ಸರ್ಕಾರ ಬಿದಿರನ್ನು ಟಿಂಬರ್ ಎಂದು ಪರಿಗಣಿಸಿತು. ‘ಬಿದಿರು ಕತ್ತರಿಸುವುದಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಇಲ್ಲವೇ ಅರಣ್ಯ ಇಲಾಖೆಯಿಂದಲೇ ಖರೀದಿಸಬೇಕು’ ಎಂದು ಕಾನೂನನ್ನು ತಿದ್ದುಪಡಿ ಮಾಡಿತು. ಕೆಲವರ ಸ್ವಾರ್ಥದ ನಡವಳಿಕೆಯಿಂದಾಗಿ ಪ್ರಾಮಾಣಿಕವಾಗಿ ವೃತ್ತಿ ನಡೆಸುವವರಿಗೂ ಕುಶಲಕರ್ಮಿಗಳಿಗೂ ಸಂಕಷ್ಟವನ್ನು ತಂದಿತ್ತಿತು.
ಇದೇ ವೇಳೆ, ಬುಟ್ಟಿ ನೇಯುವಿಕೆಗೆ ಬೇಕಾದ ಕಚ್ಚಾವಸ್ತು ಬಿದಿರು ದುಬಾರಿಯಾಯಿತು. ಮೇದಾರರು ಸಂಕಷ್ಟಕ್ಕೆ ಸಿಲುಕಿದರು. ಅದೇ ವೇಳೆ ಅಗ್ಗದ ಬೆಲೆಯಲ್ಲಿ ಪ್ಲಾಸ್ಟಿಕ್ ಪರಿಕರಗಳು ಮಾರುಕಟ್ಟೆ ದಾಂಗುಡಿ ಇಟ್ಟವು. ಈ ಬೆಳವಣಿಗೆಯಿಂದ ಬೇಸತ್ತ ಹಲವು ಮೇದಾರರು ಈ ವೃತ್ತಿಯನ್ನೇ ತ್ಯಜಿಸಿ ಕೂಲಿ ಕೆಲಸ ಗೌಂಡಿ ಕೆಲಸಕ್ಕೆ ಹೋದರು.
ಆದರೆ, ಇಂಥ ಸಮಯದಲ್ಲಿಯೂ ಗದಿಗೇಶ್ವರಿಯವರು ಮಾಡುತ್ತಿದ್ದ ನಾಜೂಕಿನ ಬುಟ್ಟಿಗಳಿಗೆ ಸ್ವಲ್ಪವೂ ಬೇಡಿಕೆ ಕುಸಿಯಲಿಲ್ಲ. ಇಂದಿಗೂ ರೈತರು ಇವರನ್ನರಸಿ ಬಂದು ಆರ್ಡರ್ ಕೊಟ್ಟು ಹೋಗುತ್ತಾರೆ. ಆದರೆ ಮೊದಲಿನಂತೆ ದವಸ ಧಾನ್ಯಗಳನ್ನು ಕೊಡುವುದಿಲ್ಲ. ಬದಲಿಗೆ, ಹಣ ಕೊಟ್ಟು ಖರೀದಿಸುತ್ತಾರೆ. ತರಕಾರಿಗಳನ್ನು ತುಂಬುವ ಉದ್ದನೆಯ ಬುಟ್ಟಿಗಳು, ಸಾಣಿಗೆ, ಮೊರ, ನಾಲ್ಕು ಮೂಲೆಯ ದವಸ ಧಾನ್ಯಗಳನ್ನು ತುಂಬುವ ಬುಟ್ಟಿ, ಚಾಪೆಗಳನ್ನು ಹೆಣೆಯುತ್ತಾರೆ. ಇವರು ನೇಯುವ ಬುಟ್ಟಿಗಳು ಧಾರವಾಡದಲ್ಲಿ, ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿಯೂ ಬಿಕರಿಯಾಗುತ್ತವೆ.
ಅತ್ತೆ ಫಕೀರವ್ವ ಅರವತ್ತು ವರ್ಷಗಳಿಂದ ಬಿದಿರ ಬುಟ್ಟಿ ಹೆಣೆಯುವುದರಲ್ಲಿಯೇ ಮುಪ್ಪಾದವರು. ಮೂವತ್ತು ವರ್ಷಗಳ ಹಿಂದಿನ ಬಿದಿರ ಸಾಣಿಗೆ ತೋರಿಸುತ್ತ ‘ನೋಡ್ರೀ ಇದನ್ನು ಹೆಣೆದ ಮೇಲೆ ಗೇರೆಣ್ಣೆ ಬಳಿದು ಗಟ್ಟಿ ಮಾಡಿದ್ದು ಎಲ್ಲಿಯಾದರೂ ಚೂರು ಮುಕ್ಕಾದರೆ ತೋರಿಸಿ’ ಎಂದರು. ನಿಜ ಅದು ಕಪ್ಪಗೆ ಅತ್ಯಂತ ಗಟ್ಟಿಮುಟ್ಟಾಗಿತ್ತು. ಈಗ ಹೀಗೆ ನಾಜೂಕಾಗಿ ಬುಟ್ಟಿ ಸಾಣಿಗೆ ನೇಯುವವರು, ಸಂಸ್ಕರಣೆಗೊಳಿಸುವವರು ತೀರಾ ಅಪರೂಪ. ಬೇಡಿಕೆ ಇದ್ದರೂ ಬಿದಿರನ್ನು ಖರೀದಿಸಲಾರಂಭಿಸಿದ ಮೇಲೆ ಬುಟ್ಟಿಗಳಿಗೆ ಸಿಗುವ ಲಾಭಾಂಶ ತೀರಾ ಕಡಿಮೆ. ಮೊದಲಿನಂತೆ ತಮ್ಮನ್ನು ಗೌರವಿಸುವವರೂ ಕಡಿಮೆ ಎಂಬ ಬೇಸರ ಇವರದ್ದು.
ಬರಿಯ ಬುಟ್ಟಿಯನ್ನು ಹೆಣೆದು ಜೀವನ ನಿರ್ವಹಣೆ ಕಷ್ಟ ಎನಿಸಲಾರಂಭಿಸಿದ ಮೇಲೆ ಗದಿಗೇಶ್ವರಿ ಎರಡು ಹಸುಗಳನ್ನು ಖರೀದಿಸಿ ನಾಲ್ಕು ವರ್ಷಗಳಿಂದ ಹೈನುಗಾರಿಕೆಯನ್ನೂ ನಡೆಸುತ್ತಿದ್ದಾರೆ. ಹಾಲಿಗೆ ಊರಿನಲ್ಲಿಯೇ ಬೇಡಿಕೆ ಇದೆ. ಮನೆಯ ಚಿಕ್ಕ ಪುಟ್ಟ ಅಗತ್ಯ ನೀಗಿಸಲು ಹೈನುಗಾರಿಕೆಯಿಂದ ಬಂದ ಹಣ ಉಪಯುಕ್ತವಾಗಿದೆ ಎನ್ನುತ್ತಾರೆ ಅವರು.
ದಿನವಿಡೀ ಒಂದೇ ರೀತಿ ಕುಳಿತು ಬುಟ್ಟಿ ನೇಯುವುದರಿಂದ ಬೆನ್ನುನೋವು ಸೊಂಟನೋವು ಬರುತ್ತದೆ. ಕೈಗಳಿಗೂ ಸಿಬಿರುಗಳು ಚುಚ್ಚುತ್ತವೆ. ‘ಕಷ್ಟವಾಗಲಿ ನಷ್ಟವಾಗಲಿ ಬಿದಿರಿಲ್ಲದೇ ನಮಗೆ ಬದುಕಿಲ್ಲ. ಆದರೆ ನಮ್ಮ ಮುಂದಿನ ತಲೆಮಾರಿನವರಿಗೆ ಇದೇ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಿ ಎನ್ನುವ ಧೈರ್ಯ ನನಗಿಲ್ಲ. ಮಕ್ಕಳನ್ನು ಓದಿಸುತ್ತಿದ್ದೇನೆ’ ಎಂದು ಗದಿಗೇಶ್ವರಿ ಹೇಳಿದರು.
ವರ್ಷಕ್ಕೆ ಸಾವಿರಾರು ಬುಟ್ಟಿಗಳನ್ನು ಹೆಣೆಯುವ ಗದಿಗೇಶ್ವರಿಯವರ ಪರಿಸರಸ್ನೇಹಿಯಾದ ಕೌಶಲ ಸದ್ದಿಲ್ಲದೇ ಕರಗಿ ಹೋಗುತ್ತದೆಯೇನೋ ಎಂಬ ವಿಷಾದ ಮನಸ್ಸನ್ನಾವರಿಸಿತು.
ಕಳೆದ ವರ್ಷ ‘ಬಿದಿರು ಹುಲ್ಲಿನ ವರ್ಗಕ್ಕೆ ಸೇರಿದ್ದು’ ಎಂದು ತೀರ್ಮಾನಿಸಿ, ಸರ್ಕಾರ ಮೇದಾರರಿಗೆ ಅನುಕೂಲವಾಗುವಂತೆ ಕಾನೂನಿನ ತಿದ್ದುಪಡಿ ಮಾಡಿದೆ. ಆದರೆ ಈ ವಿಷಯ ಹೆಚ್ಚಿನ ಮೇದಾರರಿಗೆ ತಿಳಿದಿಲ್ಲವೆನಿಸುತ್ತದೆ.
***
ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಅರಣ್ಯ ಸಮಿತಿಗಳ ರಚನೆಯಾದರೆ ಸಮುದಾಯದ ಸಹಭಾಗಿತ್ವದಲ್ಲಿ ಅರಣ್ಯಗಳ ಸಂರಕ್ಷಣೆಯಾಗುತ್ತದೆ. ಎಲ್ಲ ರೀತಿಯ ಹವಾಮಾನಕ್ಕೆ ಹೊಂದಿ ಬೆಳೆಯಬಲ್ಲ ಬಿದಿರನ್ನು ನೆಡುವ ಹೊಣೆಗಾರಿಕೆಯನ್ನು ಮೇದಾರರಿಗೆ ಒಪ್ಪಿಸಿದರೆ, ಅಗತ್ಯವಿರುವಷ್ಟು ಬಿದಿರನ್ನು ಕುಶಲಕರ್ಮಿಗಳಿಗೆ ಕಡಿದುಕೊಳ್ಳಬಹುದಾದ ಸ್ವಾತಂತ್ರ್ಯ ಸಿಕ್ಕರೆ ಮೇದಾರರ ಬದುಕೂ ಹಸನಾಗುತ್ತದೆ. ಜೊತೆ ಜೊತೆಗೆ ಅತ್ಯುತ್ತಮ ಗೊಬ್ಬರವಾಗಬಲ್ಲ ಬಿದಿರಿನ ಎಲೆಗಳು ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತವೆ. ಅರಣ್ಯಗಳಲ್ಲಿ ಮೇಲ್ಮಣ್ಣು ಕೊಚ್ಚಿ ಹೋಗದಂತೆಯೂ ವ್ಯವಸ್ಥೆಯಾಗುತ್ತದೆ.
ಚಿತ್ರ: ಲೇಖಕರದ್ದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.